“ನೀಲಾಂಬಿಕೆ” ಡಾ. ಪುಷ್ಪಾ ಶಲವಡಿಮಠ

ಲೇಖನ ಸಂಗಾತಿ

ಡಾ. ಪುಷ್ಪಾ ಶಲವಡಿಮಠ

“ನೀಲಾಂಬಿಕೆ”

 “ನೀಲಾಂಬರದಲ್ಲಿ ನೀಲಾಂಜನದಂತೆ ತೊಳಗಿ ಬೆಳಗಿದವಳು ನೀಲಾಂಬಿಕೆ. ತನ್ನ ಘನ ವ್ಯಕ್ತಿತ್ವದಿಂದ ಅರಿವಿನ ದೀಪವಾಗಿ ಬೆಳಗಿದವಳು ನೀಲಾಂಬಿಕೆ. ಸದುವಿನಯದಲಿ ಸಮತೆಯ_ಮಮತೆಯ ತೋರುದೀಪದಂತೆ ಬಾಳಿ ಬೆಳಗಿದವಳಿವಳು. ಪೃಥ್ವಿಗೆ ಅಗ್ಗಳದ ಚಲುವೆಯಾಗಿ, ವೈಚಾರಿಕ ನಿಲುವಿನ ಜಗಜ್ಯೋತಿ ವಿಶ್ವಗುರು ಬಸವಣ್ಣನವರ ಅಂತರಂಗದ ಪ್ರೇಮದ ಸತಿಯಾದವಳು ಇವಳು. ಬಸವಣ್ಣನವರ ವಿಚಾರಪತ್ನಿ ಎಂದು ಕರೆಯಿಸಿಕೊಂಡಾಕೆ ಈಕೆ.
ಕರ್ನಾಟಕದಲ್ಲಿ ೧೨ನೇ ಶತಮಾನ ಒಂದು ತೇಜೋಮಯವಾದ ಕಾಲಘಟ್ಟ. ಮಹಾ ಮಾನವತಾವಾದಿ ಬಸವಣ್ಣನವರು ಉದಯಿಸಿದ ಕಾಲವದು. ಅವರ ಪ್ರಖರ ವಿಚಾರಗಳು ಅನುಷ್ಠಾನಕ್ಕೆ ಬಂದ ಕಾಲವದು ಸಮಸಮಾಜ ಕಟ್ಟಲು ಬಯಸಿದ ಬಸವಣ್ಣನವರು ಜನರ ಮನದಲ್ಲಿ ವಿಶಾಲವಾದ ಭಾವನೆಗಳನ್ನು ಬಿತ್ತಬೇಕಿತ್ತು. ಅದಕ್ಕಿಂತ ಮೊದಲು ಜನರ ಹೃದಯವೆಂಬ ಭೂಮಿಯಲ್ಲಿನ ಕಸ, ಕಳೆಯನ್ನು ಹರಗಬೇಕಿತ್ತು. ಅವರ ಮನವನ್ನು ಉಳುಮೆ ಮಾಡಿ ಹದ ಮಾಡಬೇಕಿತ್ತು. ಪ್ರತಿಯೊಬ್ಬರಲ್ಲೂ ಉದಾತ್ತವಾದ ಭಾವನೆಗಳನ್ನು ಬೆಳೆಸಲು ಶ್ರಮಿಸಬೇಕಿತ್ತು. ಅವರೊಳಗೆ ಬೇರೊರಿದ್ದ ಅಂಧಶ್ರದ್ಧೆ, ಮೌಢ್ಯ, ಅಜ್ಞಾನ, ಸಂಕುಚಿತತೆ, ಜಾತಿಯತೆ, ಅನಿಷ್ಟ ಪದ್ದತಿ, ಮೂಢನಂಬಿಕೆ ಮುಂತಾದವುಗಳನ್ನು ಬೇರು ಸಹಿತ ಕಿತ್ತೆಸೆಯಬೇಕಿತ್ತು, ನಿಜಕ್ಕೂ ಅದೊಂದು ಮಾಹಾಮಣಿಹವೇ ಆಗಿತ್ತು. ಅಂತಹ ಮಹಾಮಣಿಹದಲ್ಲಿ ಬಸವಣ್ಣನವರು ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ದಣಿವರಿಯದಂತೆ ಕೆಲಸ ಮಾಡಿದರು. ಮಾನವೀಯತೆಯ ತಳಹದಿಯ ಮೇಲೆ ಒಂದು ಸರಳ ಸುಂದರ ಧರ್ಮವನ್ನು ಕಟ್ಟಲು ಬಯಸಿದರು. ಮಹಾಮನೆ, ಅನುಭವ ಮಂಟಪ, ಕಾಯಕ ದಾಸೋಹ, ಇಷ್ಟಲಿಂಗ ಪೂಜೆ ಮುಂತಾದ ಬಹು ವಿಶಿಷ್ಟ ಪರಿಕಲ್ಪನೆಯಿಂದ ಜಾಗತಿಕ ಇತಿಹಾಸದಲ್ಲಿಯೇ ಬಸವಣ್ಣನವರು ’ಯುಗಪುರುಷ’ ’ಯುಗಪ್ರವರ್ತಕ’ ಎಂದು ಕರೆಯಿಸಿಕೊಂಡರು.
ಜ್ಯೋತಿ ಬೆಳಗುವಲ್ಲಿ ತಮಂಧಕ್ಕೆ ಜಾಗವೆಲ್ಲಿಯದು? ಎಂಬಂತೆ ಜಗಜ್ಯೋತಿ ಬಸವಣ್ಣನವರ ನೇತೃತ್ವದಲ್ಲಿ ನಡೆದ ಮಹಾ ಆಂದೋಲನದಲ್ಲಿ ಕ್ರಮೇಣ ಅಜ್ಞಾನದ ತಿಮಿರು ಕರಗತೊಡಗಿತ್ತು. ಜ್ಞಾನದ ಬೆಳಕು ಮನೆಯನ್ನು ಮನವನ್ನು ಬೆಳಗಿತ್ತು. ಇಂತಹ ದಿವ್ಯ ಪ್ರಭೆಯಲ್ಲಿ ಅರಳಿದ ಶ್ರೇಷ್ಠ ಕುಸುಮ ನೀಲಾಂಬಿಕೆ. ಬಸವಣ್ಣನವರ ಧರ್ಮಪತ್ನಿಯಾಗಿ ಸಹ ಧರ್ಮಿಣಿಯಾಗಿ ಇಡೀ ತನ್ನ ಬದುಕನ್ನು ಬಸವಣ್ಣನವರ ಸಂಕಲ್ಪ ಜ್ಯೋತಿಗೆ ತೈಲದಂತೆ ಧಾರೆ ಎರೆದವಳು. ಪರುಷದ ಸಂಪರ್ಕದಿಂದ ಶಿಲೆಯೂ ಹೊನ್ನಾಗುವಂತೆ ಬಸವಣ್ಣನವರ ಸಂಪರ್ಕಕ್ಕೆ ಬಂದವರೆಲ್ಲಾ ಮಾನವರಾಗಿ ಪರಿವರ್ತಿತರಾದರು.
ನೀಲಾಂಬಿಕೆಯೂ ಸಹ ಬಸವಣ್ಣನವರ ಸಂಪರ್ಕಕ್ಕೆ ಬಂದು ಅವರ ಅನುಭಾವಹೊದ್ದು ವಿಚಾರಪತ್ನಿ ಎನಿಸಿಕೊಂಡಳು. ನಡೆ-ನುಡಿಗಳಲ್ಲಿ ಸಂಗಮನಾಥನನ್ನು ಬಸವಣ್ಣನವರು ದರ್ಶಿಸಿದರೇ, ನೀಲಾಂಬಿಕೆ ತನ್ನ ತನು-ಮನ-ಪ್ರಾಣಗಳಲ್ಲಿ ಬಸವಣ್ಣನವರನ್ನೇ ದರ್ಶಿಸಿ ಪ್ರತಿಷ್ಠಾಪಿಸಿ ಧರೆಯ ಮೇಲೆ ಬಸವಧರ್ಮ ಪ್ರಭೆ ಬೆಳಗುವಂತೆ ಶ್ರಮಿಸಿದಳು. ತನ್ನ ಇಡಿ ಬದುಕನ್ನೇ ಬಸವಣ್ಣನವರ ತತ್ವ ಸಿದ್ಧಾಂತಕ್ಕೆ ಸಮರ್ಪಿಸಿಕೊಂಡಳು. ಇವಳೊಬ್ಬ ಅನುಭಾವಿ ಶರಣೆ, ಮಹಾಮನೆಯ ಅನ್ನಪೂರ್ಣೆ, ಶರಣ ಸಂಕುಲಕ್ಕೆ ತಾಯಿ, ಶ್ರೇಷ್ಠ ಚಿಂತಕಿ ಮತ್ತು ಉತ್ತಮ ವಚನಕಾರ್ತಿಯೂ ಹೌದು.
ಶರಣೆ ನೀಲಮ್ಮ, ಅಕ್ಕ ನೀಲಮ್ಮ, ನೀಲಲೋಚನೆ, ನೀಲಾಂಬಿಕೆ, ನಿಜ ಭಕುತಿಯ ನೀಲಮ್ಮ, ನಿಜದ ನಿಲುವಿನ ನೀಲಾಂಬಿಕೆ ಮುಂತಾದ ಹೆಸರುಗಳಿಂದ ’ನೀಲಾಂಬಿಕೆ’ಯನ್ನು ಗುರುತಿಸಲಾಗಿದೆ. ಹರಿಹರನ ’ರಗಳೆ’ ಮತ್ತು ಭೀಮಕವಿಯ ’ಬಸವ ಪುರಾಣ’ದಿಂದ ನೀಲಾಂಬಿಕೆ “ಮಾಯಿದೇವಿ” ಎಂಬ ಹೆಸರಿನಿಂದ ಕಾಣಿಸಿಕೊಳ್ಳುವುದು ಕಂಡುಬರುತ್ತದೆ. ತನ್ನ ವ್ಯಕ್ತಿತ್ವದ ವಿರಚನದಿಂದ ಎಲ್ಲರನ್ನೂ ಗೆದ್ದ ನೀಲಾಂಬಿಕೆ ಮಹಾಮಾನವತಾವಾದಿ ಬಸವಣ್ಣನವರ ಬದುಕಿನಲ್ಲಿ ಅರಿವಿನ ಹಣತೆಯಂತೆ, ಅವರ ಬದುಕಿನಂಗಳದಲ್ಲಿ ಚಲುವಿನ ಚಿತ್ತಾರದ ರಂಗವಲ್ಲಿಯಂತೆ ತೊಳಗಿ-ಬೆಳಗಿದವಳು ಬಸವಣ್ಣನವರ ತುಂಬು ಕುಟುಂಬದಲ್ಲಿ ತುಂಬಾ ನಾಜೂಕಿನ ನಡೆ-ನುಡಿಗಳಿಂದ ಹೊಂದಾಣಿಕೆಯ ಮನೋಭಾದಿಂದ ಒಂದು ಸೌಹಾರ್ದಯುತ ಬಾಂದವ್ಯ ಹುಟ್ಟು ಹಾಕಿದವಳು. ಕೂಡು ಕುಟುಂಬದ ಕೊಂಡಿಯಾಗಿ ಬದುಕಿದ ಇವಳು ಆದರ್ಶ ಸತಿಯಾಗಿ, ಸದ್ಗುಹಿಣಿಯಾಗಿ ನಿಂತವಳು. ಶರಣ ಸಂಕುಲಕ್ಕೆ ಮಾತೃತ್ವದ ಅಮೃತತ್ವವನ್ನು ಧಾರೆಯೆರೆದವಳು. ಅಕ್ಕನಂತಿದ್ದ ಗಂಗಾಂಬಿಕೆ, ತಾಯಿಯ ಸ್ವರೂಪದಂತಿದ್ದ ಅಕ್ಕನಾಗಮ್ಮ ಇವರಿಬ್ಬರ ಒಡನಾಟದಲ್ಲಿ ತನ್ನದೇ ವಿಶಿಷ್ಟವಾದ ವ್ಯಕ್ತಿತ್ವ ರೂಪಿಸಿಕೊಂಡವಳು ನೀಲಾಂಬಿಕೆ.
ನೀಲಾಂಬಿಕೆಯದು ಅಪರೂಪವಾದ ವ್ಯಕ್ತಿತ್ವ. ಬಸವಣ್ಣನವರ ಜೀವನದಲ್ಲಿ ಇವಳದು ಮಹತ್ವದ ಪಾತ್ರವಾಗಿದೆ. ಬಸವಣ್ಣನವರ ಪೂರ್ವಾರ್ಧ ಜೀವನವನ್ನು ಅಕ್ಕನಾಗಮ್ಮ ರೂಪಿಸಿದರೆ, ಉತ್ತರಾರ್ಧದ ಜೀವನವನ್ನು ನೀಲಾಂಬಿಕೆ ರೂಪಿಸಿದ್ದಾಳೆ. ಹರಿಹರ ತನ್ನ ರಗಳೆಯಲ್ಲಿ ಮಾಯಿದೇವಿಯ ಪ್ರಸ್ತಾಪ ಮಾಡಿರುವನು. ಆದರೆ ಅವಳು ಯಾರ ಮಗಳು ಎಂದು ಸ್ಪಷ್ಟವಾಗಿ ಹೇಳಿಲ್ಲ. ಭೀಮಕವಿಯ ಬಸವಪುರಾಣದಲ್ಲೂ ಸ್ಪಷ್ಟತೆಯಿಲ್ಲ. ಲಕ್ಕಣದಂಡೇಶನು ಮಾಯಿದೇವಿ ಬಿಜ್ಜಳನ ತಂಗಿ ಎಂದು ಹೇಳಿದರೆ, ವೀರಶೈವಾಮೃತ ಪುರಾಣದಲ್ಲಿ ಸಿದ್ಧರಸನ ಮಗಳು ಎಂದು ಉಲ್ಲೇಖಿತವಾಗಿದೆ. ಲಕ್ಕಣದಂಡೇಶನನ್ನು ಮತ್ತು ವೀರಶೈವ ಪುರಾಣವನ್ನು ಸಮೀಕರಿಸಿದಂತೆ ಸಿಂಗಿರಾಜನು ’ನೀಲಲೋಚನೆ” ಸಿದ್ಧರಸನ ಮಗಳು, ಬಿಜ್ಜಳನ ಸಾಕು ತಂಗಿ ಎಂದು ಸೂಚಿಸಿದ್ದಾನೆ. ನೀಲಲೋಚನೆಯ (ನೀಲಾಂಬಿಕೆ) ಜನ್ಮಸ್ಥಳ ಮತ್ತು ತಂದೆ-ತಾಯಿಯ ವಿಚಾರದಲ್ಲಿ ವಿದ್ವಾಂಸರಲ್ಲಿ ಒಮ್ಮತದ ಅಭಿಪ್ರಾಯ ಇಲ್ಲ. ಆದಾಗ್ಯೂ ಚರಿತ್ರೆ ಮತ್ತು ಕೆಲವು ಮಾಹಿತಿಗಳನ್ನಾಧರಿಸಿ ನೀಲಾಂಬಿಕೆಯು ’ಸಿದ್ಧರಸ’ ಮತ್ತು ’ಪದ್ಮಗಂಧಿ’ ದಂಪತಿಗಳ ಪುಣ್ಯ ಉದರಲ್ಲಿ ಜನಿಸಿದವಳು. ಸಿದ್ಧರಸರು ಬಲದೇವಮಂತ್ರಿಯ ತಮ್ಮ. ಈ ಸಿದ್ಧರಸರ ಜನ್ಮಸ್ಥಳ ಇಂಗಳೇಶ್ವರವಾದರೂ ಕಾರ್ಯಕ್ಷೇತ್ರ ಮಂಗಳವೇಡಿಯಾಗಿತ್ತು. ಇವರು ತಮ್ಮ ಕಾರ್ಯ ನಿಮಿತ್ತ ಮಂಗಳವೇಡಿಯಲ್ಲಿಯೇ ಉಳಿದರು. ಹೀಗಾಗಿ ನೀಲಾಂಬಿಕೆಯು ಮಂಗಳವೇಡಿಯಲ್ಲಿ ಜನಿಸಿರಬಹುದು ಎಂಬುದಕ್ಕೆ ಇದು ಸ್ಪಷ್ಟ ಆಧಾರವಾಗಿ ನಿಲ್ಲುತ್ತದೆ.
ನೀಲಾಂಬಿಕೆಯವರ ಜನನ, ಜನ್ಮಸ್ಥಳ. ಬಾಲ್ಯ, ಯೌವನಗಳ ಕುರಿತು. ಅವರ ಜೀವನಕ್ಕೆ ಹತ್ತಿರದ ಪ್ರದೇಶಗಳಾದ ಬಾಗೇವಾಡಿ, ಸೊಲ್ಲಾಪುರ, ತಂಗಡಗಿ, ಕೂಡಲಸಂಗಮ ಮುಂತಾದ ಕ್ಷೇತ್ರಗಳಲ್ಲೂ ಸ್ಪಷ್ಟ ಮಾಹಿತಿ ದೊರೆಯುವುದಿಲ್ಲ. ನೀಲಾಂಬಿಕೆಯ ಜೀವನದ ಮೇಲೆ “ಗುರುರಾಜ ಚಾರಿತ್ರೆ”, “ಸಿಂಗಿರಾಜ ಪುರಾಣ”, “ಗಣಭಾಷ್ಯ ರತ್ನಮಾಲೆ”, “ಹರಿಹರನ ಬಸವರಾಜ ದೇವರ ರಗಳೆ”, “ಶೂನ್ಯ ಸಂಪಾದನೆ”, “ವಚನಶಾಸ್ತ್ರ ಸಾರ”, ಮರೇಗುದ್ದಿಯ ಪೂಜ್ಯ ಶ್ರೀ ನಿರುಪಾಧೀಶ್ವರರ “ನೀಲಾಂಬಿಕೆ” ಕೃತಿ ಡಾ.ಮ.ನಿ.ಪ್ರ. ಹಿರಿಯ ಶಾಂತವೀರ ಮಹಾಸ್ವಾಮಿಗಳ ಗಂಗಾಬಿಕೆ-ನೀಲಾಂಬಿಕೆ ’ಒಂದು ಅಧ್ಯಯನ’, ಶ್ರೀ ಸಿದ್ಧಣ್ಣ ಲಂಗೋಟಿಯವರ ನೀಲಾಂಬಿಕೆ ಮುಂತಾದ ಕೃತಿಗಳು ಬೆಳಕು ಬೀರುತ್ತವೆ.
ನೀಲಾಂಬಿಕೆ ಮತ್ತು ಗಂಗಾಂಬಿಕೆ ಇಬ್ಬರೂ ಬಸವಣ್ಣನವರ ಸತಿಯರು. ’ಗಂಗಾಂಬಿಕೆ’ ಬಲದೇವ ಮಂತ್ರಿಯ ಮಗಳು. ’ನೀಲಾಂಬಿಕೆ’ ಬಲದೇವ ಮಂತ್ರಿಯ ತಮ್ಮ ’ಸಿದ್ಧರಸ’ರ ಮಗಳು, ಹೀಗಿರುವಾಗ ನೀಲಾಂಬಿಕೆ ಬಿಜ್ಜಳನ ಸಾಕು ತಂಗಿ ಹೇಗಾದಳು.? ಎಂಬುದು ವಿಶೇಷವಾಗಿ ಗಮನ ಸೆಳೆಯುವ ಸಂಗತಿ.
ಬಿಜ್ಜಳ ರಾಜನಿಗೆ ’ಕರ್ಣದೇವ’ ಎಂಬ ಹೆಸರಿನ ಒಬ್ಬ ತಮ್ಮನಿದ್ದಾನೆ. ಈ ಕರ್ಣದೇವ ಹಸುಗೂಸು ಇದ್ದಾಗ ಬಿಜ್ಜಳನ ತಾಯಿ ಸತಿಸಹಗಮನ ಮಾಡುತ್ತಾಳೆ. ಆ ಸಂದರ್ಭದಲ್ಲಿ ಆ ತಾಯಿ ತನ್ನ ಮಗು ಕರ್ಣದೇವನನ್ನು ನೀಲಾಂಬಿಕೆಯ ತಾಯಿ ’ಪದ್ಮಗಂಧಿ’ಗೆ ಒಪ್ಪಿಸಿ ಸಹಗಮನ ಮಾಡುತ್ತಾಳೆ. ಪದ್ಮಗಂಧಿ ನೀಲಾಂಬಿಕೆಗೂ ಮತ್ತು ಕರ್ಣದೇವನಿಗೂ ತನ್ನ ಎದೆಹಾಲನ್ನು ಉಣಿಸಿ ಬೆಳೆಸುತ್ತಾಳೆ. ಹೀಗೆ ಒಂದೇ ತಾಯಿಯ ಎದೆ ಹಾಲು ಉಂಡ ನೀಲಾಂಬಿಕೆಗೂ, ಕರ್ಣದೇವನಿಗೂ ಸಹೋದರ-ಸಹೋದರಿ ಸಂಬಂಧ ಏರ್ಪಡುತ್ತದೆ. ಈ ಕಾರಣದಿಂದ ಬಿಜ್ಜಳದೇವನು ನೀಲಾಂಬಿಕೆಯನ್ನು ತನ್ನ ತಂಗಿಯಂದೆ ಪ್ರೀತಿಸಿ ತಮ್ಮ ಕರ್ಣದೇವನಿಗೆ ನೀಡಿದ ಸಮಾನ ಮಮತೆ-ಪ್ರೀತಿಯನ್ನು ನೀಲಾಂಬಿಕೆಗೂ ಧಾರೆ ಎರೆಯುತ್ತಾನೆ. ಕಾಲನಂತರದಲ್ಲಿ ಸಿದ್ಧರಸ-ಪದ್ಮಗಂಥಿಯರು ಮರಣ ಹೊಂದಿದಾಗ ಬಿಜ್ಜಳದೇವನು ನೀಲಾಂಬಿಕೆಯನ್ನು ಅರಮನೆಗೆ ಕರೆತಂದು ಅವಳಿಗೆ ಅರಮನೆಯಲ್ಲಿ ಲಭ್ಯವಾಗುವ ಎಲ್ಲ ವಿದ್ಯೆಯನ್ನು ಕಲಿಸುತ್ತಾನೆ. ನೀಲಾಂಬಿಕೆಯೂ ಅರಮನೆಯ ಶಾಸ್ತ್ರಾಭ್ಯಾಸವನ್ನು ಕೈಗೊಳ್ಳುತ್ತಾಳೆ. ಹಾಡು-ನೃತ್ಯ ಮುಂತಾದ ಕಲೆಗಳನ್ನು ಕಲಿತುಕೊಳ್ಳುತ್ತಾಳೆ. ಕ್ಷತ್ರೀಯ ಕನ್ಯೆಯಂತೆ ಬೆಳೆಯುತ್ತಾಳೆ. ಈ ಕಾರಣದಿಂದ ಅವಳಲ್ಲಿ ವೈಚಾರಿಕತೆ ಮೊದಲಿನಿಂದಲೇ ಮೈಗೂಡಿತ್ತು. ಇವೆಲ್ಲ ಕಾರಣದಿಂದಲೇ ವಿದ್ವಾಂಸರು, ಸಂಶೋಧಕರು ನೀಲಾಂಬಿಕೆ ಬಿಜ್ಜಳನ ಸಾಕು ತಂಗಿ ಎಂದು ಅಭಿಪ್ರಾಯ ಪಡುತ್ತಾರೆ. ಒಟ್ಟಿನಲ್ಲಿ ನೀಲಾಂಬಿಕೆ ಬಾಲ್ಯದಿಂದಲೇ ವಿದ್ಯೆ-ವಿನಯ-ಕಲೆ-ಗುಣಸಂಪನ್ನಳಾಗಿ ಬೆಳೆಯುತ್ತಾಳೆ.
ಕ್ಷತ್ರೀಯರೊಂದಿಗೆ ಬೆಳೆದ ನೀಲಾಂಬಿಕೆ ಸಹಜವಾಗಿ ಕ್ಷತ್ರೀಯರ ವೀರಧೀರೋದಾತ್ತ ಗುಣಗಳನ್ನು ಪಡೆದುಕೊಂಡಿದ್ದಾಳೆ. ಕಲ್ಯಾಣಕ್ರಾಂತಿಯ ಸಂದರ್ಭದಲ್ಲಿ ವಚನ ಸಂರಕ್ಷಣೆಯ ಜೊತೆ ಜೊತೆಗೆ ಆ ಸಂದರ್ಭದ ಅತ್ಯಂತ ಕಠಿಣ ಪ್ರಸಂಗಗಳನ್ನು ಎದೆಗಾರಿಕೆಯಿಂದ ಎದುರಿಸುತ್ತಾಳೆ.
ನೀಲಾಂಬಿಕೆಯ ವಿವಾಹ :
೧೨ನೇ ಶತಮಾನದ ಶರಣೆರೆಂದೂ ವಿವಾಹ ಸಂಸ್ಥೆಯನ್ನು ಅಲ್ಲಗೆಳೆಯಲಿಲ್ಲ. ಅವರ ದೃಷ್ಟಿಯಲ್ಲಿ ವಿವಾಹವೆಂದರೆ ಅದೊಂದು ಆತ್ಮನುಸಂಧಾನ. ಪರಸ್ಪರ ಸತಿ-ಪತಿಗಳಿಬ್ಬರೂ ಒಬ್ಬರ ವ್ಯಕ್ತಿತ್ವವನ್ನು ಮತ್ತೊಬ್ಬರು ಗೌರವಿಸುವ, ಎತ್ತರಿಸುವ ಪ್ರಕ್ರಿಯೆ. ಅವರು ಮೋಕ್ಷವನ್ನು ಹುಡುಕುತ್ತ ಕಾಡು-ಮೇಡು ಅಲೆಯಲಿಲ್ಲ. ಸಂನ್ಯಾಸಿಗಳಂತೆ ಏಕಾಂಗಿಯಾಗಿ ಬದುಕಲಿಲ್ಲ. ಪರಸ್ಪರ ಹೊಂದಾಣಿಕೆಯಿಂದ ಸಂಸಾರದ ಏಳು-ಬೀಳುಗಳನ್ನು ದಾಟಿ ಕೆಸರಿನಲ್ಲಿದ್ದರೂ ಕಮಲ ಕೆಸರನ್ನು ಮೈಗಂಟಿಸಿಕೊಳ್ಳದಂತೆ ಸಂಸಾರದಲ್ಲಿದ್ದೂ ಅದರಲ್ಲೇ ಮುಳುಗದೇ ಸಮಚಿತ್ತದಿಂದ ಲಿಂಗವನ್ನು ಪೂಜಿಸಿ ಲಿಂಗಾನುರಾಗಿಗಳಾಗಿ ಲಿಂಗದಲ್ಲೇ ಲೀನವಾಗಿ ಮುಕ್ತಿಯನ್ನು ಕಂಡವರು. “ಸತಿ-ಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ” ಎನ್ನುವಂತೆ ಸತಿ-ಪತಿಗಳು ಒಮ್ಮನದಿಂದ ಒಂದಾಗುವ ಕ್ರಿಯೆ ಇದಾಗಿತ್ತು. ಇದು ಕೇವಲ ದೇಹಗಳು ಒಂದಾಗುವದಲ್ಲ ಇದು ಆತ್ಮಗಳ ಮಿಲನ. ವಿಚಾರಗಳ ಮಿಲನ. ಪರಸ್ಪರ ಒಬ್ಬರೊಬ್ಬರ ತಪ್ಪು ದೋಷಗಳನ್ನು ತಿದ್ದಿಕೊಳ್ಳುತ್ತಾ ಬದುಕನ್ನು ಹಸನುಗೊಳಿಸಿಕೊಳ್ಳುವ ಶ್ರೇಷ್ಠತೆಯ ಒಪ್ಪಂದವಾಗಿತ್ತು. ಈ ಸತಿ-ಪತಿಭಾವ ಲೌಕಿಕದಿಂದ ಅಲೌಕಿಕಗೂ ಹರಿದು ಬಂದಿತು. ಲಿಂಗಪೂಜೆಯಲ್ಲೂ ಇದೇ ಭಾವ ಅಂಕುರವಾಯಿತು. ಲಿಂಗವೇ ಪತಿಯಾಗಿ ಶರಣರೆಲ್ಲ ಸತಿಯಾಗಿ ಸತಿತ್ವ ಭಾವದಿಂದ, ಕಿಂಕರತ್ವಭಾವದಿಂದ, ಸೇವಾನುಭಾವದಿಂದ ಲಿಂಗಪತಿಯೊಂದಿಗೆ ಒಂದಾದರು. ಹೀಗಾಗಿ ಶರಣರು ವಿವಾಹ ಸಂಸ್ಥೆಯನ್ನು ಪುರಸ್ಕರಿಸಿದರೇ ಹೊರತು ಅದನ್ನು ತಿರಸ್ಕರಿಸಲಿಲ್ಲ. ಮೋಕ್ಷವೆಂಬುದು ಕಟ್ಟಿಕೊಂಡ ಹೆಂಡತಿಯನ್ನು ಪಡೆದ ಮಕ್ಕಳನ್ನು ಸಂಸಾರವನ್ನು ತೊರೆದು ಕಾಡಿಗೆ ಹೋಗಿ ತಪಸ್ಸು ಮಾಡುವುದರಿಂದ ದೊರೆಯುವುದಲ್ಲ. ಮೋಕ್ಷ ಸಾಧನೆಗೆ ಹೆಣ್ಣು-ಹೊನ್ನು-ಮಣ್ಣು ಎಂದೂ ಆಡ್ಡಿಯಗುವುದಿಲ್ಲ. ಸಂಸಾರದಲ್ಲಿ ಇದ್ದುಕೊಂಡೆ ಸುಖ-ದುಃಖ ಅನುಭವಿಸಿ ಬದುಕಿನ ಮೌಲ್ಯ-ಸಾರ್ಥಕತೆಯನ್ನು ಕಂಡುಕೊಳ್ಳುವುದರಲ್ಲೇ ಮೋಕ್ಷ ಸಾಧ್ಯ ಎಂದು ಶರಣರು ಪರಿಭಾವಿಸಿದ್ದರು. ಸದಾ ತಮ್ಮನ್ನು ಪ್ರಯೋಗಶೀಲತೆಗೆ ತೆರೆದುಕೊಂಡಿದ್ದರು.
ಭಾರತೀಯರ ದೃಷ್ಟಿಯಲ್ಲಿ ’ವಿವಾಹ’ಕ್ಕೆ ತುಂಬಾ ಗೌರವವಿದೆ. ಸಮಾಜದಲ್ಲಿ ’ವಿವಾಹ ಸಂಸ್ಥೆ’ ಕೂಡಿ ಬದುಕುವುದನ್ನು ಕಲಿಸುವ ಒಂದು ಬಹುದೊಡ್ಡ ಪಾಠಶಾಲೆ. ಈ ಸಂಸ್ಥೆಯಲ್ಲಿ ಪರಸ್ಪರ ಸಹಕಾರ, ಹೊಂದಾಣಿಕೆ, ಸಹನೆ, ತ್ಯಾಗ, ಪ್ರೀತಿ, ಪ್ರೇಮ, ಸಹಬಾಳ್ವೆ ಇರುತ್ತದೆ. ಎರಡು ಕುಟುಂಬಗಳನ್ನು ಬೆಸೆಯುವ, ನೂರಾರು ಸಂಬಂದಗಳನ್ನು ನಿಭಾಯಿಸುವ ಒಂದು ವಿಶಿಷ್ಟ ಸಂಸ್ಥೆ ಇದು. ದಾಂಪತ್ಯ ಜೀವನ ನಿಜಕ್ಕೂ ಒಂದು ತಪಸ್ಸು ಇದ್ದಂತೆ, ಇಂತಹ ದಾಂಪತ್ಯ ಜೀವನ ನೀಲಾಂಬಿಕೆಯ ಜೀವನದಲ್ಲಿ ಮಹತ್ವಪೂರ್ಣವಾದುದಾಗಿತ್ತು. ಬಸವಣ್ಣನವರ ಕೈಹಿಡಿದು ದಾಂಪತ್ಯಕ್ಕೆ ಕಾಲಿಟ್ಟ ನೀಲಾಂಬಿಕೆ ಕೊನೆಯವರೆಗೂ ತಪಸ್ವಿನಿಯಂತೆ ದಾಂಪತ್ಯ ಧರ್ಮ ನಿಭಾಯಿಸಿದ ನಿಜ ಶರಣೆಯಾಗಿದ್ದಾಳೆ. ಬಸವಣ್ಣನವರ ಸತಿಯಾಗಿ ಬರುವುದಕ್ಕಿಂತ ಪೂರ್ವದಲ್ಲೇ ಗಂಗಾಂಬಿಕೆ ಮೊದಲ ಪತ್ನಿಯಾಗಿ ಬಸವಣ್ಣನವರ ಜೀವನದಲ್ಲಿ ಪಾದಾರ್ಪಣೆ ಮಾಡಿದ್ದಳು. ಮೊದಲ ಪತ್ನಿ ಇರುವಾಗಲೇ ಎರಡನೇಯ ಪತ್ನಿಯಾಗಿ ಬಸವಣ್ಣನವರ ಜೀವನದಲ್ಲಿ ಪ್ರವೇಶ ಪಡೆಯುವ “ನೀಲಾಂಬಿಕೆ” ತನ್ನ ಸತಿಧರ್ಮ ನಿಭಾಯಿಸಿದ ರೀತಿ ತುಂಬಾ ಅನನ್ಯವಾದುದಾಗಿದೆ.
ನೀಲಾಂಬಿಕೆ ಸ್ತ್ರೀ ಸಹಜವಾದ ಭಾವನೆಗಳನ್ನು ಹೊದ್ದು ಬಸವಣ್ಣನವರ ಕೈ ಹಿಡಿಯುತ್ತಾಳೆ. ಬಸವಣ್ಣನವರ ದಿವ್ಯ ವ್ಯಕ್ತಿತ್ವಕ್ಕೆ ಮಾರುಹೋಗುತ್ತಾಳೆ. ಬಸವಣ್ಣನವರ ವ್ಯಕ್ತಿತ್ವದ ಪ್ರಭಾವ ಮಂಗಳವೇಡಿಯಲ್ಲಿದ್ದಾಗಲೇ ನೀಲಾಂಬಿಕೆಗೆ ಆಗುತ್ತದೆ. ಮಂಗಳವೇಡಿಯಲ್ಲಿ ಬಸವಣ್ಣನವರು ಅನುಭವಗೋಷ್ಠಿಯನ್ನು ನಿತ್ಯವೂ ಮಾಡುತ್ತಿದ್ದರು. ಮಂಗಳವೆಡಿಯಲ್ಲಿ ಪ್ರತಿದಿನ ಸಂಜೆ ನಡೆಯುತ್ತಿದ್ದ ಈ ಅನುಭವ ಗೋಷ್ಠಿಯಲ್ಲಿ ಶರಣದಂಪತಿಗಳಾದ ಅಪ್ಪಣ್ಣ-ಲಿಂಗಮ್ಮನವರು ಭಾಗವಹಿಸುತ್ತಿದ್ದರು. ಆಗ ಅನುಭವಗೋಷ್ಠಿಯಲ್ಲಿ ಸೇರಿದ ಶರಣರಿಗೆ ಪ್ರಸಾಧ ದಾಸೋಹದ ಸೇವೆಯನ್ನು ಅಕ್ಕನಾಗಮ್ಮನವರು ನೆರವೇರಿಸುತ್ತಿದ್ದರು. ಅಲ್ಲದೇ ಅಕ್ಕನಾಗಮ್ಮನವರು ಸರಳಗನ್ನಡದಲ್ಲಿ ತಾಡೋಲೆಯಲ್ಲಿ ತಮ್ಮ ಅನುಭವಗಳನ್ನು ವಚನ ರಚನೆಯ ಮೂಲಕ ಬರೆದಿಡುತ್ತಿದ್ದರು. ಬಸವಣ್ಣನವರ ಮನೆಗಳಲ್ಲಿ ನಡೆಯುತ್ತಿದ್ದ ಅನುಭಾವಗೋಷ್ಠಿಯ ವಿಚಾರ ಮಂಗಳವೇಡಿಯಲ್ಲಿ ಎಲ್ಲರ ಮನೆ-ಮನೆಗಳಿಗೂ ತಲುಪಿತ್ತು. ನೀಲಾಂಬಿಕೆಗೂ ಈ ವಿಷಯ ತಲುಪಿತು.
ನೀಲಾಂಬಿಕೆಯೂ ಕೂಡಾ ನಿತ್ಯ ಸಂಜೆ ಈ ಅನುಭಾವ ಗೋಷ್ಠಿಯಲ್ಲಿ ಪಾಲ್ಗೊಳ್ಳುತ್ತಿದ್ದಳು. ಅಲ್ಲದೇ ಇವಳು ಅರಮನೆಯಲ್ಲಿದ್ದಾಗಲೇ ಸಂಗೀತಾಭ್ಯಾಸ ಮಾಡಿದವಳಾಗಿದ್ದರಿಂದ ಬಸವಣ್ಣನವರು, ಅಕ್ಕನಾಗಮ್ಮ ಇವರು ಬರೆದ ವಚನಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದಳು. ನೀಲಾಂಬಿಕೆ ಈ ಕಾರಣದಿಂದ ಮತ್ತು ಅವರ ಸದ್ಗುಣಗಳಿಂದ ಅಕ್ಕ ನಾಗಮ್ಮನವರಿಗೆ ಇಷ್ಟುವಾಗಿರಲು, ಹತ್ತಿರವಾಗಿರಲು ಸಾಧ್ಯವಿದೆ. ಅನುಭಾವ ಗೋಷ್ಠಿಯಲ್ಲಿ ಬಸವಣ್ಣನವರು ತಮ್ಮ ಅಮೃತಮಯ ವಾಣಿಯಿಂದ ಅಮೃತಮಹವಾದ ನುಡಿಗಳನ್ನು ಹೇಳುತ್ತಿದ್ದರು. ಅವು ನೀಲಾಂಬಿಕೆಯ ಘನವನ್ನು ಎಚ್ಚರಿಸಿದವು. ಅವರ ತತ್ವ-ಸಿದ್ಧಾಂತಗಳು ಅವಳ ಮೇಲೆ ಅಂದೇ ಪ್ರಭಾವ ಬೀರಿರಬಹುದು. ಅವರ ಪ್ರಭಾವಲಯಕ್ಕೆ ಮಾರುಹೋಗಿ ಎಂತೆಂಥಹ ಮಹಾನುಭಾವರೇ ದೇಶ, ಕೋಶ, ರಾಜ್ಯ ಬಿಟ್ಟುಬಂದಿರುವಾಗ ನೀಲಾಂಬಿಕೆ ಬಸವಣ್ಣನವರ ವ್ಯಕ್ತಿತ್ವಕ್ಕೆ ಪ್ರಭಾವಿತಳಾದದ್ದು ಅತಿಶಯೋಕ್ತಿಯೆನಲ್ಲ. ಬಹುಶಃ ಈ ಕಾರಣದಿಂದಲೇ ನೀಲಾಂಬಿಕೆ ತನ್ನಂತರಂಗದಲ್ಲಿ ಬಸವಣ್ಣನವರನ್ನು ಆರಾಧಿಸಿರಬಹುದು. ಮುಂದೆ ಅವಳೂ ಸ್ವತಃ ವಚನ ರಚನೆಗೆ ಮುಂದಾಗುತ್ತಾಳೆ.


” ಎನಗೆ ಲಿಂಗವು ನೀನೆ ಬಸವಯ್ಯ
  ಎನಗೆ ಸಂಗವು ನೀನೆ ಬಸವಯ್ಯ
  ಎನಗೆ ಪ್ರಾಣವು ನೀನೆ ಬಸವಯ್ಯ
  ಎನಗೆ ಪ್ರಸಾದವು ನೀನೆ ಬಸವಯ್ಯ
  ಎನಗೆ ಪ್ರಭೆಯ ಮೂರ್ತಿಯು ನೀವೆ ಬಸವಯ್ಯ
  ಎನಗೆ ಸಂಗಯ್ಯನು ನೀವೇ ಬಸವಯ್ಯ”

ಎಂಬ ನೀಲಾಂಬಿಕೆಯ ವಚನ ಅವಳೊಳಗಿನ ಭಾವನೆಗಳನ್ನು ಅಭಿವ್ಯಕ್ತಿಸಿದೆ. ಬಸವನ ಸಂಗಯ್ಯ ಬಸವನಿಗಾದರೇ ಬಸವನೇ ನೀನೆ ನನಗೆ ಸಂಗಯ್ಯ ಎಂಬ ಭಾವವನ್ನು  ನೀಲಾಂಬಿಕೆ ಹೊದ್ದಿದ್ದಳು. ಸಹಜವಾಗಿ ಅವಳ ಅಂತರಂಗ ಬಿಜ್ಜಳ ರಾಜನಿಗೂ, ಅಕ್ಕನಾಗಮ್ಮನಿಗೂ ತಿಳಿದಿರಲಿಕ್ಕೆ ಸಾಕು. ಅವಳ ಮನದ ಇಂಗಿತ ಅರಿತು ನೀಲಾಂಬಿಕೆಯನ್ನು  ಬಸವಣ್ಣನವರಿಗೆ ಮಡದಿಯಾಗಿಸುವ ವಿಚಾರ ಇವರೆಲ್ಲ ಕೂಡಿ ಮಾಡುವುದರ ಮೂಲಕ ನೀಲಾಂಬಿಕೆಗೂ-ಬಸವಣ್ಣವರಿಗೂ ವಿವಾಹ ಸಂಬಂಧ ಉಂಟಾಗಿರಬಹುದು. ಸಿದ್ಧರಸರೂ ಸಹ ತಮ್ಮ ಮಗಳು ನೀಲಾಂಬಿಕೆ ಸುಖವಾಗಿರುತ್ತಾಳೆ ಎಂದು ಒಪ್ಪಿಗೆ ಸೂಚಿಸಿರಬಹುದು. ಡಾ. ಚಿಂದಾನಂದ ಮೂರ್ತಿಯವರು ಬರೆದ “ಬಸವಣ್ಣನವರು” ಜೀವನ ಚರಿತ್ರೆಯಲ್ಲಿ ಇದಕ್ಕೆ ಪೂರಕವಾದ ಸ್ಪಷ್ಟ ವಿಚಾರಗಳು ಲಭ್ಯ ಇವೆ. “ಬಸವಣ್ಣ ಕರಣಿಕನಿದ್ದಾಗಲೇ ಮಂಗಳವೇಢೆಯಲ್ಲಿ ಗಂಗಾಂಬಿಕೆ ನೀಲಾಂಬಿಕೆಯರನ್ನು ಮದುವೆಯಾದರು” ಎಂದು ವಿಜಯಪುರ ಜಿಲ್ಲೆಯ ಗಿಝೆಟೆರಿಯನ್‌ನ ೧೦೧ನೇ ಪುಟದಲ್ಲಿ ಇದೆ. (ಸ್ಪಷ್ಟತೆಗೆ ನೋಡಿ ಚಾಲುಖ್ಯ ಉತ್ಸವ ೨೦೦೮ ತ್ರೈಲೋಕ್ಯ-ಪುಟ-೧೨೫). ಜನಪದರ ಕಾವ್ಯದಲ್ಲಿ ನೀಲಾಂಬಿಕೆಯ ವಿವಾಹದ ಕುರಿತು ಸ್ಪಷ್ಟ ಮಾಹಿತಿಗಳು ಸಿಗುತ್ತದೆ.


೧. ಸಂಗಮನೆ ನೀ ಗತಿ ಎಂದ ಬಸವನಿಗೆ
ತಂಗಿ ನೀಲಳ ಕೊಡುವೆ ! ತಂಗಿ
ಮದುವೆ ನಡೆದಾದೋ…” (ಬೆಳಗಲ್ಲ ವೀರಮ್ಮ)
೨. ಬಿಜ್ಜಳ ರಾಜಾನ ಹೆಣ್ಣು ಮಗಳು ಗುರುವೆ
ಶಕ್ತಿವಂತೇಯ ನೀಲಮ್ಮ ತಾಯಿ
ಬಶುವಣ್ಣನವರೀಗೆ ತಕ್ಕಾದ ಈಡು
ಮಾದರಸುನವರು ನೋಡುದಾರು
ಬಿಜ್ಜಳ್ಳರಾಜನ್ನು ಮಗಳನ್ನು ತಂದು
ಶಕ್ತಿವಂತೆಯ್ಯ ಶರಣೆಯ ತಂದು
ನನ್ನ ಮಗನಿಗೆ ಕಲ್ಯಾಣ ಮಾಡಬೇಕು….” (ಗೊರವರ ಕೆಂಚಮಲ್ಲಯ್ಯ)
೩. ಬಿಡದೆ ಲಿಂಗಾಂಗ ಸಂಗನ ಬಲ್ಲವರಾಲಿಸಿ
ಕಡುಮುದ್ದು ಬಸವ ನೀಲಮ್ಮನುರುಟಣೆಯ
ಆರು ಚಿತ್ರದ ಪೀಠ ಏರಿ ಬಸವನಿರಲು
ನಾರಿಯರು ತಂದು ನೀರೆರದಾಕ್ಷಣ…. (ನೀಲಮ್ಮನ ಊರುಟಣೆ ಹಾಡು)


ಈ ಎಲ್ಲ ಮಾಹಿತಿಗಳನ್ನಾಧರಿಸಿ ನೀಲಾಂಬಿಕೆ ಬಸವಣ್ಣನವರ ಧರ್ಮಪತ್ನಿಯಾಗಿ ಬಸವಣ್ಣನರವ ಉತ್ತರಾರ್ಧ ಬದುಕನ್ನು ರೂಪಿಸಿದವಳು. ಅಲ್ಲದೇ ಅವರು ಕೈಗೊಂಡ ಮಹಾಮಣಿಹದಲ್ಲಿ ಅವರ ಆತ್ಮಶಕ್ತಿಯನ್ನು ಸಂವರ್ಧಿಸಿದವಳು. ಆತ್ಮಸ್ಥೈರ್ಯದ ಪ್ರತಿರೂಪವಾಗಿ ಬಸವಣ್ಣನವರೊಂದಿಗೆ ಬದುಕಿದಳು. ’ಬಸವನ ಅನುಭಾವದಿಂದ ವಿವರವ ಕಂಡು ವಿಚಾರ ಪತ್ನಿಯಾದೆನಯ್ಯಾ’ ಎಂಬಲ್ಲಿ ತನ್ನ ಜೀವನದ ಸಾರ್ಥಕತೆ ಕಂಡುಕೊಂಡ ಸಾಧ್ವಿ ಶಿರೋಮಣಿ ನೀಲಾಂಬಿಕೆ.
ಬಸವಣ್ಣನವರಿಗೆ ತಾನು ’ವಿಚಾರಪತ್ನಿ’ ಎಂದು ಹೇಳಿಕೊಳ್ಳುವಲ್ಲಿ ನೀಲಾಂಬಿಕೆಗೆ ಹೆಮ್ಮೆ ಇದೆ. ನಿಜಕ್ಕೂ ವಚನ ಸಾಹಿತ್ಯದಲ್ಲಿಯೇ ಈ ಶಬ್ದ ಹೊಸ ಪರಿಭಾಷೆಯೊಂದಿಗೆ ಒಡಮೂಡಿದೆ. “ಬಸವನ ಅನುಭಾವದಿಂದ ವಿವರವ ಕಂಡು ವಿಚಾರ ಪತ್ನಿಯಾದೆನಯ್ಯ” ಎಂಬ ನೀಲಾಂಬಿಕೆಯ ವಿಚಾರವೇ ವಿಶಿಷ್ಟವಾದ ಸಂಗತಿಯಾಗಿದೆ. “ಹೆಂಡತಿ ಗಂಡನಿಗೆ ವಿಚರಪತ್ನಿಯಾಗಬೇಕು ಎಂಬುದು ಜಾಗತಿಕ ಸಾಹಿತ್ಯದಲ್ಲಿಯೇ ಒಂದು ಅಪರೂಪದ ಅಭಿಪ್ರಾಯವಾಗಿದೆ”. ಎಂದು ನಾಡಿನ ಖ್ಯಾತ ಸಂಶೋಧಕರಾದ ಡಾ. ಎಂ.ಎಂ. ಕಲಬುರ್ಗಿಯವರು ಸಹ ತಮ್ಮ ಸಮ್ಮತಿ ಸೂಚಿಸಿದ್ದಾರೆ. (ಮಹಾಸಂಪುಟ: ಒಂದು : ಬಸವಯುಗದ ವಚನ ಮಹಾಸಂಪುಟ ಪ್ರಧಾನ ಸಂಪಾದಕರು : ಡಾ. ಎಂ.ಎಂ. ಕಲಬುರ್ಗಿ, ಪು.ಸಂ. ೭೯೬) ನಿಜ ಸತಿ-ಪತಿಗಳ ಸಂಬಂಧ ದೈಹಿಕ ಆಕಾಂಕ್ಷೆಗಳನ್ನು ಮೀರಿ ವ್ಯಕ್ತಿತ್ವದ ನಿರ್ಮಾಣ ಮತ್ತು ಪರಸ್ಪರ ಗೌರವಿಸುವ ನೆಲೆಯಲ್ಲಿ ಅನುಸಂಧನಾಗೊಳ್ಳಬೇಕು. ಈ ಎಲ್ಲ ದೃಷ್ಠಿಯಿಂದ ನೀಲಾಂಬಿಕೆ ಬಸವಣ್ಣನವರ ಜೀವನದಲ್ಲಿ ಬಹಳ ಮಹತ್ವದ ಹೆಜ್ಜೆ ಇಟ್ಟಿದ್ದಾಳೆ.
ಜೇನುಗೂಡಿನಂತಹ ಬಸವಣ್ಣನವರ ತುಂಬು ಕುಟುಂಬಕ್ಕೆ ಅಕ್ಕರೆಯ ಸಕ್ಕರೆಯ ಗೊಂಬೆಯಂತೆ ಬಂದ ನೀಲಾಂಬಿಕೆ ಆತ್ಮಸಾಕ್ಷಿ ಇಟ್ಟುಕೊಂಡು ಯಾರ ಮನಸ್ಸಿಗೂ ನೋವಾಗದಂತೆ ನಡೆದುಕೊಂಡಳು. ಅಕ್ಕ ಗಂಗಾಂಬಿಕೆಯ ಪ್ರೀತಿಗೆ ಅರ್ಹಳಾದಳು. ಅಕ್ಕನಾಗಮ್ಮನ ಮಡಿಲ ಮಗಳಾದಳು. ಚನ್ನಬಸವಣ್ಣನಿಗೆ ತಾಯಿಯಾದಳು. ಬಸವಣ್ಣನಿಗೆ ಸಹದರ್ಮಿಣಿಯಾಗಿ ಅವರ ಸಮಾಜೋಧಾರ್ಮಿಕ ಕಾರ್ಯಗಳಿಗೆ ಪ್ರೇರಕಳಾಗಿ, ಪೂರಕಳಾಗಿ ನಿಂತಳು. ಬಸವಣ್ಣನವರು ರೂಪಿಸಿದ ಮಹಾಮನೆಯ ಯೋಜನೆಯಲ್ಲಿ ಸಕ್ರೀಯವಾಗಿ ತನ್ನನು ತೊಡಗಿಸಿಕೊಂಡಳು. ದಾಸೋಹ-ಪ್ರಸಾದದ ಎಲ್ಲ ವ್ಯವಸ್ಥೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಳು. ಜಂಗಮರಿಗೆ ಇಚ್ಛೆಗನುಗುಣವಾಗಿ ಪ್ರಸಾದ ಮಾಡಿನೀಡಿ ಉಣಿಸಿ ಕೃತಾರ್ತಳಾದಳು. ಬಸವಣ್ಣನವರೂ ನೀಲಾಂಬಿಕೆಯನ್ನು ತಮ್ಮ ಮೋಹದ ಮಡದಿ ಎಂದು, ವಿಚಾರಪತ್ನಿಯೆಂದು ಒಪ್ಪಿಕೊಂಡಿದ್ದರು. ಅವಳ ಮೇಲೆ ಸಂಪೂರ್ಣ ನಂಬಿಕೆ, ವಿಶ್ವಾಸವಿಟ್ಟಿದ್ದರು. ಪೃಥ್ವಿಗಗ್ಗಳದ ಚಲುವೆ ಎಂದು ನೀಲಾಂಬಿಕೆಯನ್ನು ಆರಾದಿಸಿದ್ದರು. ಬಸವಣ್ಣನವರದೇ ಒಂದು ವಚನದಲ್ಲಿ ಅದರ ಉಲ್ಲೇಖ ಬರುತ್ತದೆ.


“………. ಒಡವೆ ಭಂಡಾರ ಕಡವರ ದ್ರವ್ಯವ ಬಡ್ಡಿ ಬೆವಹಾರಕ್ಕೆ ಕೊಟ್ಟು
ಮನೆಯ ಗೋಂಟಿನಲ್ಲಿ ಹೊಯಿದುಕೊಂಡಿದ್ದೆನಾದಡೆ
ಅದು ಎನ್ನರ್ಥವಲ್ಲ, ಅನರ್ಥವೆಂದೆಂಬೆ.
ಸಂಗಮದೇವಾ, ನೀನು ಜಂಗಮರೂಪಾಗಿ ಬಂದು
ಆ ಧನವನು ನೀನು ಬಲ್ಲಂತೆ ಎನ್ನ ಮುಂದೆ ಸೂರೆಗೊಳುತಿರ್ದಡೆ
ನಾನು ಬೇಕು ಬೇಡೆಂದು ಮನದಲ್ಲಿ ಮರುಗಿದೆನಾದಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನದೊಡೆಯ ನೀನೆ ಬಲ್ಲದೆ
ಕಾಮನೇಮವೆಂಬ ಸಿಂಧು ಬಲ್ಲಾಳನ ವಧುವ
ಸರ್ವಭುವನದೊಡೆಯ ಸಂಗಮದೇವರು ಬೇಡುವಂತೆ
ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆಯ ಚಲುವೆ
ಆಕೆಯನು ಸಂಗಮದೇವಾ, ನೀನು ಜಂಗಮರೂಪಾಗಿ ಬಂದು
ಎನ್ನ ಮುಂದೆ ಸಂಗವ ಮಾಡುತ್ತಿರಲು
ಎನ್ನೊಡನಿರ್ದ ಸತಿಯೆಂದು ಮಾಯಕ್ಕೆ ಮರುಗಿದೆನಾದೊಡೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ, ಮನೆದೊಡೆಯ ನೀನೇ ಬಲ್ಲೆ….”


ಒಟ್ಟು ನಲವತ್ತು ಸಾಲುಗಳುಳ್ಳ ಈ ವಚನದಲ್ಲಿ ’ಸಂಗಮನಾಥ’ನ ಕುರಿತು ಅಪಾರವಾದ ಶ್ರದ್ಧಾಭಕ್ತಿಯ ಭಾವ ವ್ಯಕ್ತಿ ಮಾಡಿದ್ದಾರೆ. ಸಂಗಮ-ಜಂಗಮ, ಜಂಗಮ-ಸಂಗಮ ಎಂಬ ಈ ಭಾವ ಹೊದ್ದ ಬಸವಣ್ಣನವರಿಗೆ ಸಂಗಮದೇವ ಮಾಡಿದ್ದೆಲ್ಲವೂ ಸರಿಯೇ. ಈ ವಿಚಾರದಾಚೇ ಅವರು ನೀಲಾಂಬಿಕೆಯ ಕುರಿತು ಹೊದ್ದ ಭಾವವನ್ನು ಗಮನಿಸಿದಾಗ “ನನ್ನ ಸತಿ ನೀಲಲೋಚನೆ ಪೃಥ್ವಿಗೆ ಅಗ್ಗಳದ ಚಲುವೆ” ಎಂಬ ಭಾವವಿದೆ. ನೀಲಾಂಬಿಕೆಯ ಮೇಲಿರುವ ಪ್ರೀತಿ, ವಿಶ್ವಾಸಗಳನ್ನು ಅಪರೋಕ್ಷವಾಗಿ ಅವರು ವ್ಯಕ್ತ ಮಾಡಿದ್ದಾರೆ.
ಇತ್ತ ನೀಲಾಂಬಿಕೆಯೂ ಬಸವಣ್ಣನವರಿಗೆ ತಕ್ಕ ಸತಿಯಾಗಿ ಅತ್ಯಂತ ಜವಾಬ್ದಾರಿಯಿಂದ ತನ್ನ ’ಸತಿತ್ವ ಧರ್ಮ”ವನ್ನು ನಿಭಾಯಿಸಿರುವುದು ಕಂಡು ಬರುತ್ತದೆ. ಸತಿಯಾಗಿ ನೀಲಾಂಬಿಕೆ ಇಡೀ ಬದುಕನ್ನೇ ಬಸವಣ್ಣನವರ ತತ್ವಸಿದ್ಧಾಂತಕ್ಕೆ ಸಮರ್ಪಿಸಿಕೊಂಡವಳು. ವಿವಾಹ ಪೂರ್ವದಲ್ಲಿಯೇ ಬಸವಣ್ಣನವರ ಅನುಭಾವಗೋಷ್ಠಿಯಲ್ಲಿ ಅವರು ಮಂಡಿಸುತ್ತಿದ್ದ ವಿಚಾರಗಳು ಅವಳಿಗೆ ಮನದಟ್ಟಾಗಿತ್ತು. ಸಂಸಾರಕ್ಕಿಂತ ’ಧರ್ಮ” ಮತ್ತು ’ಸಮಾಜ’ ಬಸವಣ್ಣನವರ ಉಸಿರು ಎಂಬುದನ್ನು ನೀಲಾಂಬಿಕೆ ಅರ್ಥ ಮಾಡಿಕೊಂಡಿದ್ದಳು.
ಬಸವಣ್ಣನವರ ಅಗಾಧ ವೈಚಾರಿಕೆತೆಯ ನಿಲುವುಗಳು ಅವಳಿಗೆ ಗೋಚರಿಸಿದ್ದವು. ಹೀಗಾಗಿ ನೀಲಾಂಬಿಕೆ ಬಸವಣ್ಣನವರ ಸತಿಯಾಗಿ ಸುಖ ಅನುಭವಿಸಲು ಬಂದವಳಾಗಿರದೇ ಅವರ ಕೈಂಕರ್ಯದಲ್ಲಿ ಕೈಗೂಡಿಸಲು ಬಂದವಳಾಗಿದ್ದಳು. ಅವಳ ವಚನಗಳ ಅಧ್ಯಯನ ಕೈಗೊಂಡಾಗ ನೀಲಾಂಬಿಕೆಯ ’ಸತಿತ್ವ’ದ ಸುಂದರ ಪರಿಕಲ್ಪನೆಗಳು ಮನದಲ್ಲಿ ಅಚ್ಚೊತ್ತಿ ನಿಲ್ಲುತ್ತವೆ.


“ಅತೀತವಡಗಿ ನಿರಾಲಂಬದ ಮನದ ಮೂರ್ತಿಯ
ತಿಳಿದು ಮನೋವ್ಯಾಧಿಯಂ ಪರಿಹರಿಸಿಕೊಂಡು
ಭಾವದ ಸೂತಕವಳಿಯದು ಬ್ರಹ್ಮದ ನೆಮ್ಮುಗೆಯ ತಿಳಿದು,
ಮನ ವಿಶ್ರಾಂತಿಯನೆಯ್ದಿ ವಿಚಾರದ ಮನವನರಿದು
ವಿವೇಕದಿಂದಾನು ವಿಶೇಷ ಸುಖವ ಕಂಡೆನಯ್ಯ
ಸಂಗಯ್ಯ ಬಸವನಿಂದಲಿ.”


ಎಂಬುದು ನೀಲಾಂಬಿಕೆಯ ಭಾವ. ’ವಿವಾಹ’ದಿಂದ ಮನಃಶಾಂತಿ ಕದಡುತ್ತದೆ. ನೆಮ್ಮದಿ ಕೆಡುತ್ತದೆ ಎಂಬುವವರಿಗೆ ನೀಲಾಂಬಿಕೆ ಅಪವಾದಂತೆ ನಿಲ್ಲುತ್ತಾಳೆ. ಬಸವಣ್ಣನವರ ಸತಿಯಾಗಿದ್ದರಿಂದ ನನ್ನ ಮನೋವ್ಯಾಧಿಯ ಪರಿಹರಿಸಿಕೊಂಡೆ. ಭಾವದ ಸೂತಕ ಕಳೆದುಕೊಂಡೆ. ಜ್ಞಾನ ವಿಚಾರಗಳನ್ನು ತಿಳಿದುಕೊಂಡು, ಮನದ ವಿಶ್ರಾಂತಿ ಪಡೆದು, ವಿವೇಕದಿಂದ ವಿಶೇಷ ಸುಖವನ್ನು ಕಂಡೆನು, ಎಂದು ಹೇಳಿಕೊಳ್ಳುವಲ್ಲಿ ನೀಲಾಂಬಿಕೆಯ ಸತಿತ್ವದ ಸುಂದರ ಪರಿಕಲ್ಪನೆ ದೊರೆಯುತ್ತದೆ.
“ನೀಲಾಂಬಿಕೆ ಸಮಾಜದ ಗಣ್ಯ ಕುಟುಂಬದಿಂದ ಬಂದ ಬಸವಣ್ಣನ ಮಡದಿ. ಅಧಿಕಾರ, ಅಂತಸ್ತುಗಳನ್ನು ಹೊಂದಿದವಳಾಗಿದ್ದಳು. ಕಲೆ ಮತ್ತು ಶಾಸ್ತ್ರಾಭ್ಯಾಸಗಳಲ್ಲಿ ಪರಿಣತಿ ಹೊಂದಿದ್ದಳು. ವಚನಕಾರರ ಪ್ರಬುದ್ಧ ವಿಚಾರಗಳಿಂದ ಪ್ರಭಾವಿತಳಾದವಳು. ಸ್ವತಃ ವಚನಕಾರ್ತಿಯಾಗಿಯೂ ರೂಪಿತಗೊಂಡಿದ್ದಳು. ಹೀಗಾಗಿ ತನಗೆ ಬೇಕಾದಂತೆ ಸ್ವತಂತ್ರವಾದ ತನ್ನದೇಯಾದ ವ್ಯಕ್ತಿತ್ವ ರೂಪಿಸಿಕೊಳ್ಳುವ ಸಕಲ ಪರಿಸರವು ಅವಳಿಗೆ ಪೂರಕವಾಗಿದ್ದವು. ಆದರೆ ಅವಳೆಂದೂ ಬಸವಣ್ಣನವರನ್ನು ಹೊರತಾದ ವ್ಯಕ್ತಿತ್ವ ರೂಪಿಸಿಕೊಳ್ಳಲಿಲ್ಲ. ಅವಳು ಅವರ ನೆರಳಂತೆ ಅವರನ್ನೇ ಹಿಂಬಾಲಿಸಿದಳು. ಬಸವಣ್ಣನವರ ಸಿದ್ದಾಂತಗಳಿಗೆ ತನ್ನನ್ನು ಸಮರ್ಪಿಸಿಕೊಂಡಳು. ಅಹಂಮಿಕೆಯ ಒಂದೆಳೆಯೂ ಅವಳಂತರಂಗದಲ್ಲಿ ಮೂಡಲಿಲ್ಲ. ನಾವು ಕಂಡಂತೆ ಬಹುಪಾಲು ವಚನಕಾರ್ತಿಯರು ತಮ್ಮನ್ನು ತಾವು ರೂಪಿಸಿಕೊಂಡಂತೆಯೇ ತಮ್ಮ ಪತಿಯಂದಿರ ನಡುವಳಿಕೆಯನ್ನು ತಿದ್ದಿ ಚಲಾಯಿಸುವಷ್ಟರ ಮಟ್ಟಿಗೆ ಮುಂದಾಗುವುದನ್ನು ಗಮನಿಸುತ್ತೇವೆ. ಆದರೆ ಅಂಥ ಸಂದರ್ಭ ಬಂದಾಗಲೂ ನೀಲಮ್ಮ ಬಸವಣ್ಣನನ್ನೇ ಅನುಸರಿಸುವುದನ್ನು ಕಾಣುತ್ತೇವೆ. ಸಂಸಾರಿಕ ಗೊಡವೆಗಳ ಮಧ್ಯದಲ್ಲೂ ನೀಲಾಂಬಿಕೆ ಎಂದೂ ಸಂಘರ್ಷಕ್ಕೆ ಒಳಗಾಗದೆ ಮೌನವಾಗಿಯೇ ತನ್ನ ಸಾಧನೆಯನ್ನು ಮುಂದುವರೆಸಿದ ತಪಸ್ವಿನಿಯಾಗಿ ನೀಲಾಂಬಿಕೆ ಕಂಡು ಬರುತ್ತಾಳೆ. ನಿಜವಾಗಿಯೂ ನೀಲಾಂಬಿಕೆಯು ಸತಿ ಧರ್ಮದ ಪರಿಪಾಲನೆಯಲ್ಲಿ ತನ್ನದೇ ಆದ ಮಾರ್ಗವನ್ನು ತುಳಿದವಳು. ಬಸವಣ್ಣನವರು ಜಂಗಮ ಸೇವೆಯಲ್ಲಿ ತಮ್ಮನ್ನು ತಾವೇ ಮರೆತವರು. ಹೀಗಿರುವಾಗಿ ಅವರಿಗೆ ಪತ್ನಿಯರ ನೆನಪಾದರೂ ಎಲ್ಲಿದ್ದೀತು? ನೀಲಾಂಬಿಕೆ ಮಾತ್ರ ನಿರ್ಲಪ್ತಭಾವದಿಂದ, ಸಮಚಿತ್ತದಿಂದ ಬಸವಣ್ಣನವರು ತೋರಿದಂತೆ ಜಂಗಮ ಸೇವೆ ಮಾಡಿದವಳು. ಹೀಗಾಗಿ ನೀಲಾಂಬಿಕೆಗೆ ಬಸವಣ್ಣನವರು ಕೇವಲ ಪತಿಯಾಗಿ ಅಷ್ಟೇ ಅಲ್ಲ ಗುರುವಾಗಿ ಮಾರ್ಗದರ್ಶಕರಾಗಿದ್ದರು ಎಂದು ಒಮ್ಮನದಿಂದ ಹೇಳಿಕೊಳ್ಳುತ್ತಾಳೆ. ಹಾಗೇ ವಿಚಾರ ಮಾಡಿದರೆ ಲೋಕದ ಪತಿಯಾದ ಬಸವಣ್ಣನವರನ್ನು ಮತ್ತು ಲೌಕಿಕ ಸಂಸಾರವನ್ನು ಉತ್ಕಟ್ಟವಾಗಿ ಪ್ರೀತಿಸಿ, ಒಪ್ಪಿಕೊಂಡೇ ಸಾಧನೆಗೈದವಳು. ಅಕ್ಕಮಹಾದೇವಿಗಿಂತ ಭಿನ್ನ ನೆಲೆಯಲ್ಲಿ ನಿಂತವಳು ನೀಲಾಂಬಿಕೆ. ಅಕ್ಕಮಹಾದೇವಿ ಅಲೌಕಿಕ ಪತಿ ಮತ್ತು ಅಲೌಕಿಕ ಸಂಸಾರದಲ್ಲಿ ಸಾಧನೆ ಮಾಡಿದರೇ ನೀಲಾಂಬಿಕೆಯದು ಅವಳಿಗಿಂತ ಭಿನ್ನವಾದ ಮಾರ್ಗವಾಗಿತ್ತು.


“ಎನಗೆ ಇಲ್ಲಿ ಏನು ಬಸವ ಬಸವಾ ?
ಎನಗೆ ಅದರ ಕುರುಹೇನು ಬಸವಾ ?
ಎನಗೆ ಬಸವ ನಡೆದ ಭಕ್ತಿಸ್ಥಲದಲ್ಲಿ ನಿಂದು,
ಭಕ್ತಿಸ್ಥಲ ಬಸವನಲ್ಲಿ ಕುರುಹಳಿದು
ನಾನು ಬಸವನ ಶ್ರೀಪಾದದಲ್ಲಿ
ಉರಿಯುಂಡ ಕರ್ಪೂರದಂತಡಗಿದ ಬಳಿಕ ಸಂಗಯ್ಯ”


ಇಂತಹ ಸಮರ್ಪಣಾ ಭಾವವನ್ನು ನೀಲಮ್ಮಳಲ್ಲಿ ಗುರುತಿಸಬಹುದಾಗಿದೆ. ಬಸವಣ್ಣನವರು ನಡೆದ ಭಕ್ತಿ ಮಾರ್ಗದಲ್ಲಿ ಕ್ರಮಿಸುವ ಹಂಬಲವು ನೀಲಾಂಬಿಕೆಯ ಜೀವನದ ಪರಮೋದ್ದೇಶ. ಭಕ್ತಿಯ ಪ್ರತಿರೂಪವೇ ಬಸವಣ್ಣನವರು. ಅದನ್ನೇ ನೀಲಾಂಬಿಕೆ” ಭಕ್ತಿಸ್ಥಲ ಬಸವನಲ್ಲಿ  ಕರುಹಳಿದುದು” ಎಂದು ಪ್ರತಿಪಾದಿಸುತ್ತಾಳೆ. ಈ ಕಾರಣದಿಂದಲೇ ನಾನು ಬಸವನ ಭಕ್ತಿಮಾರ್ಗದಲ್ಲಿ ನಡೆದು ಬಸವನ ಶ್ರೀಪಾದದಲ್ಲಿ ಉರಿಯುಂಡ ಕರ್ಪೂರದಂತೆ ಅಡಗಿದೆನು ಎಂದು ತಾನೂ ಕುರುಹಿಲ್ಲದಂತೆ ಬಯಲಾದ ಸ್ಥಿತಿಯನ್ನು ತಿಳಿಸುತ್ತಾಳೆ. ಸತಿಯಾಗಿ ಬಸವಣ್ಣನವರ ಅನುಯಾಯಿ ಆದಂತೆ ನೀಲಾಂಬಿಕೆ ನಿಜದ ನೆಲೆಯಲ್ಲಿ ಸತಿತ್ವದ ಪರಿಪಾಕದಲ್ಲಿ ಕರಗಿ ಬಸವಣ್ಣನವರಿಗೆ ನೆರಳಾದವಳು.
ನೀಲಾಂಬಿಕೆ ಬಸವಣ್ಣನವರ ಆತ್ಮಸಂಗಾತಿಯಾಗಿ ಜ್ಞಾನ ಹುಟ್ಟುವ ಮೊದಲು, ಅಹಂಕಾರ ಅಳಿದ ಮೊದಲು ಆತ ಆಕೆಗೆ ಗುರು, ಅನುಭಾವದ ಮೊದಲ ಸ್ಥಿತಿಯಲ್ಲಿ ಆತ ಆಕೆಯ ಶಿಶು, ಇನ್ನೊಮ್ಮೆ ಆಕೆಯೇ ಆತನ ಶಿಶು, ಪರಮ ಸ್ಥಿತಿಯಲ್ಲಿ ಆಕೆ ಬೇರೆಯಲ್ಲ ಆತ ಬೇರೆಯಲ್ಲ. ಎಂಬಂಥ ಅರಿವೇ ನೀಲಾಂಬಿಕೆಯದು.


“ಮಡದಿ ಎನ್ನಲಾಗದು ಬಸವಂಗೆ ಎನ್ನನು
ಪುರುಷನೆನ್ನಲಾಗದು ಬಸವನ ಎನಗೆ
ಉಭಯದ ಕುಲವ ಹರಿದು ಬಸವಗೆ ಶಿಶುವಾದೆ
ಬಸವನೆನ್ನ ಶಿಶುವಾದ
ಪ್ರಮಥ ಪುರಾತನರು ಸಾಕ್ಷಿಯಾಗಿ ಸಂಗಯ್ಯನಿಕ್ಕಿದ
ದಿಬ್ಬವ ಮೀರದೆ ಬಸವನೊಳಗಾನಡಗಿದೆ.”


ಇಂತಹ ವೈಚಾರಿಕ, ತಾತ್ವಿಕ ನೆಲೆಯಲ್ಲಿ ಸತಿತ್ವದ ಪಾಲನೆಯಲ್ಲಿ ನೀಲಾಂಬಿಕೆ ಸಂತೃಪ್ತಳು. ಹೆಣ್ಣು-ಗಂಡೆಂಬ ಉಭಯವಳಿದು ಒಬ್ಬರಿಗೊಬ್ಬರು ಶಿಶುವಾದಾಗ ಅಹಂಕಾರದಿಂದ ದೂರಾಗುವ ಪರಮೋಚ್ಛ ಸ್ಥಿತಿಯಲ್ಲಿ ನಿಂತಾಕೆ ನೀಲಾಂಬಿಕೆ. ಬಸವಣ್ಣನವರಿಗೆ ಅನುಕೂಲೆಯಾದ ಪತ್ನಿಯಾಗಿಯೂ ನಿಂದವಳು ಇವಳು. ಸುಶೀಲೆ, ಸೌಜನ್ಯಶೀಲೆ ಗುಣಸಂಪನ್ನ, ವಿದ್ಯಾವಂತೆ, ರೂಪವಂತೆ ಆಗಿದ್ದ ನೀಲಾಂಬಿಕೆ ಉತ್ತಮ ಮನೆತನದ ಹೆಣ್ಣು ಮಗಳು. ತುಂಬಿದ ಮನೆಗೆ ಬೆಳಗುವ ನೀಲಾಂಜನವಾಗಿ ಬೆಳಗಿದವಳು. ಅಂತೆಯೇ ತುಂಬು ಕುಟುಂಬವನ್ನು ಪ್ರೀತಿದವಳು. ಅಲ್ಲದೇ ಕ್ರಿಯಾಶೀಲವಾಗಿ ಮಹಾಮನೆಯನ್ನು ಅದರ ಆಗು-ಹೋಗುಗಳನ್ನು ನಡೆಸಿಕೊಂಡು ಬಂದವಳು. ಶರಣರ ಪ್ರಸಾದಕ್ಕೆ ಯಾವ ಚ್ಯುತಿಯೂ ಬಾರದಂತೆ ನೋಡಿಕೊಂಡವಳು. ಬಸವಣ್ಣನವರು ಅನುಭಾವಕ್ಕೆ ನಿಂತರೆ ನೀಲಾಂಬಿಕೆ ಮಹಾಮನೆಯ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಿದ್ದಳು. ಇದರಿಂದ ಬಸವಣ್ಣನವರು ಅತ್ಯಂತ ಸಮಾದಾನ ಚಿತ್ತದಿಂದ ಕರಣಿಕ ವೃತ್ತಿಯನ್ನು, ಅನುಭಾವಗೋಷ್ಠಿಯನ್ನು, ಸಮಾಜ ಸೇವೆಯನ್ನು ಹಾಗೂ ವಚನ ರಚನೆಯನ್ನು ಮಾಡಲು ಸಾಧ್ಯವಾದದ್ದು.
ನೀಲಾಂಬಿಕೆ ವಿವಾಹ ಪೂರ್ವದಲೇ ಬಸವಣ್ಣನವರ ಸಮಾಜ್ಯೋ ಧಾರ್ಮಿಕ ಕಾರ್ಯಗಳಿಗೆ ಕೈಗೊಡಲೆಂದೇ ನಿರ್ಧರಿಸಿ ಸತಿಯಾದವಳು. ನೀಲಾಂಬಿಕೆ ಎಲ್ಲ ಸತಿಯರಂತಾಗದೇ ಅನುವರಿತು ಘನವ ಕೂಡಿಕೊಂಡವಳು. ಸ್ತ್ರೀತ್ವದ ಸಹಜ ಬಯಕೆಗಳನ್ನಲ್ಲಾ ಧೀರೋದಾತ್ತದಿಂದ ನೀಗಿ ಪ್ರಸನ್ನ ಮೂರ್ತಿಯಾಗಿ ಬಸವಣ್ಣನವರ ಮಹಾಮಣಿಹದಲ್ಲಿ ವೀರಕಂಕಣ ಕಟ್ಟಿ ತನ್ನ್ನನೇ ಸಮರ್ಪಣೆ ಮಾಡಿಕೊಂಡಳು. ಇದು ಸಾಮಾನ್ಯವಾದ ಹೋರಾಟವಲ್ಲ. ನಿತ್ಯದ ಹೋರಾಟ ಇಂತಹ ನಿತ್ಯವೂ ಎದುರುಗೊಳ್ಳುವ ಹಲವಾರು ಮನೋಕ್ಷೆಭೆಗೆ ನೀಲಾಂಬಿಕೆಯ ಸ್ಥಿರವಾದ ಮನಸ್ಸು, ತಂಗಾಳಿಯಂತಹ ಮುಗುಳ್ನಗು, ಪ್ರಖರಜ್ಞಾನ ಮತ್ತು ಇಚ್ಛಾಶಕ್ತಿಗಳು ಕಾರಣವಾಗಿದ್ದವು. ಅದರಲ್ಲೂ ಕೂಡಲ ಸಂಗಮದೇವನನ್ನು ಹುಚ್ಚನಂತೆ ಪ್ರೀತಿಸುವ ಪತಿಗೆ ಸದಾ ಬೆಂಗಾವಲಾಗಿ ಅವನ ಆಶೋತ್ತರಗಳಿಗೆ ಸ್ಪಂದಿಸುತ್ತ, ವಿರೋಧರಹಿತ ಭಾವದಲ್ಲಿ ಎಲ್ಲ ಕಾರ್ಯದಲ್ಲಿಯೂ ಸಹಕರಿಸುತ್ತ ಪಾಲ್ಗೊಳ್ಳುವ ನೀಲಾಂಬಿಕೆಯಿಂದಲೇ ಬಸವನ ಭಕ್ತಿಗೆ ಹೊಸ ಹೊಳಪು, ಕಾಂತಿ ಬಂದಿತ್ತು, ಆ ಕಾಂತಿಯ ಮುಂಬೆಳಕಲ್ಲಿ ಮಿಂದು ಬಂದವಳಾಗಿದ್ದಳು ನೀಲಾಂಬಿಕೆ.
ಬಸವಣ್ಣನವರ ನೇತೃತ್ವದಲ್ಲಿ ತಯಾರಾದ ಶರಣರ ದೊಡ್ಟಪಡೆ ಆ ಯುಗದ ಅಚ್ಚರಿಯೇ ಸರಿ. ಬಸವಣ್ಣನವರ ಇಂಗಿತವನರಿತು ಬಾಳುವೆಗೆ ಬಂದ ನೀಲಾಂಬಿಕೆ ಸಕಲ ಗಣಂಗಳಿಗೆ ತಾಯಿಯಂತಿದ್ದಳು. ಸಾಕ್ಷಾತ್ ಅನ್ನಪೂರ್ಣಯಂತೆ ಇದ್ದಳು, ಅವರಿಗೆ ಪ್ರಸಾದದ ವ್ಯವಸ್ಥೆಯ ಜೊತೆ ಜೊತೆಗೆ ತನ್ನ ಮಮತೆಯನ್ನೇ ಉಣಿಸಿ ತಣಿಸಿದ್ದಳು. ಹೀಗಾಗಿ ಅಂದಿನ ಶರಣರೆಲ್ಲಾ ನೀಲಾಂಬಿಕೆಯ ವ್ಯಕ್ತಿತ್ವವನ್ನು ದರ್ಶಿಸಿದ್ದರು, ತಮ್ಮ ತಮ್ಮ ಭಾವದಲ್ಲಿ ನೀಲಾಂಬಿಕೆಯನ್ನು ಕಂಡು ವಚನಗಳಲ್ಲಿ ನೆಲೆಗೊಳಿಸಿದ್ದರು. ಅವರ ವಚನಗಳಿಂದಲೇ ನೀಲಾಂಬಿಕೆಯ ವ್ಯಕ್ತಿತ್ವದ ಪರಿಚಯ ಮಾಡಿಕೊಳ್ಳಬಹುದು. ಮಹಾದಾಸೋಹದ ಒಡತಿಯಾದ ನೀಲಾಂಬಿಕೆಯನ್ನು ಅವಳಲ್ಲಿ ನೆಲೆಸಿದ್ಧ ತಾಳ್ಮೆ, ಪ್ರೀತಿಯ ವೈಭವಕ್ಕೆ ಬೆರಗಾದ ಶರಣರು ನೀಲಾಂಬಿಕೆಯ ವ್ಯಕ್ತಿತ್ವವನ್ನು ಗುಣಗಾನ ಮಾಡಿದ್ದಾರೆ.


೧. ತಾಯೆ, ಮಹಾಜ್ಞಾನಕಲ್ಪಿತದಲ್ಲಿ ನೀನೆಯಡಗಿದೆಯವ್ವಾ
ತಾಯೆ ನೀಲಮ್ಮನೆಂಬ ಸುಖವಾಸ ಮೂರ್ತಿ
ಕಪಿಲಸಿದ್ಧ ಮಲ್ಲಿನಾಥಯ್ಯ – ಶಿವಯೋಗಿ ಸಿದ್ಧರಾಮಯ್ಯ
೨. ಎನ್ನನ್ನು ಸಲುಹಿದರಯ್ಯ ಅಮ್ಮವ್ವೆ ಕೊಡುಗೂಸು
ಚೋಳಯಕ್ಕ, ನಿಂಬವ್ವ, ನೀಲಮ್ಮ, ಮಹಾದೇವಿ, ಮುಕ್ತಾಯಕ್ಕಗಳು”-ಕೋಲಶಾಂತಯ್ಯ
೩. “ಲಿಂಗವ ಪೂಜಿಸಿದ ಫಲ ನೀಲಲೋಚನೆಗಾಯಿತ್ತು”
“ಲಿಂಗದಲ್ಲಿ ನಿರವಯಲನೈದಿರು ನೀಲಲೋಚನೆಯಮ್ಮನವರು” – ಸಂಗಮೇಶ್ವರ ಅಪ್ಪಣ್ಣನವರು
೪. “ನೀಲಾಂಬಿಕೆಯಮ್ಮನವರ ಗರ್ಭದಲ್ಲಿ ಉದಯವಾದ ಮೋಹದ ಕಂದನಾದ ಕಾರಣ ಎನಗೆ ಘಟಸ್ಥಳ ಮಾರ್ಗದ ವಿರತಿ ನೆಲೆಗೊಂಡು ನಿಂದಿತಯ್ಯ” _ ಘನಲಿಂಗ ದೇವರು.
೫. “ಲಿಂಗಸಾಧ್ಯವಾಯಿತ್ತು ನೀಲಲೋಚನೆ ತಾಯಿಗೆ” – ಗಣದಾಸಿ ವೀರಣ್ಣ
೬. “ಜಂಗಮವೇ ಬಸವ, ಚನ್ನಬಸವ, ನೀಲಲೋಚನೆ, ಅಕ್ಕಮಹಾದೇವಿ ಮೊದಲಾದ ಪ್ರಮಥಗಣಂಗಳು ಪ್ರಾಣಲಿಂಗ ಮೂರ್ತಿ ನೋಡಯ್ಯಾ”
“ಜ್ಞಾನ ಗುರು ಪಾದೋದಕವೇ ನೀಲಲೋಚನೆ ತಾಯಿಗಳಯ್ಯ” – ಗುರುಸಿದ್ಧ ದೇವರು.
“ಷಡ್ಗುಣೈಶ್ವರ್ಯ ಸಂಪನ್ನ ನೀಲಲೋಚನೆ ತಾಯಿಗಳೆ” – ಗುರುಸಿದ್ಧದೇವರು.


ಇದಲ್ಲದೇ “ನಿಜಲಿಂಗ ಪ್ರೇಮಿ” ಎಂದು ಕರೆದಿರುವ ಡಾ. ರಾಜಶೇಖರ ಇಚ್ಛಂಗಿಯವರು “ಈಕೆ ಆತ್ಮಸಾಕ್ಷಾತ್ಕಾರದ ಪಥ ಹಾಗೂ ಸಿದ್ಧಾಂತ ಷಟಸ್ಥಳ, ಶರಣದಾಸೋಹ ಮತ್ತು ಶಿವಾನುಭವಗಳಲ್ಲಿ ವಹಿಸಿದ ಪಾತ್ರ ಗಮರ್ನಾಹವಾಗಿವೆ. ಪತಿಸೇವೆ, ಜಂಗಮ, ದಾಸೋಹ, ಲಿಂಗಾರ್ಚನೆ ಇವು ಈಕೆಯ ವ್ಯಕ್ತಿತ್ವವನ್ನು ಹಿರಿದಾಗಿಸಿವೆ” ಎಂದಿದ್ದಾರೆ.
“ನೀಲಲೋಚನೆಯವರ ನಿರ್ಮಲ ಪ್ರಸಾದವಕೊಂಡೆನಯ್ಯ” ಎನ್ನುವ ಉಪ್ಪರಗುಡಿಯ ಸೋಯಿದೇವರು ನೀಲಾಂಬಿಕೆಯು ನೀಡಿದ ಪ್ರಸಾದದ ಪರಿಯನ್ನು ಬಣ್ಣಿಸಿದ್ದಾರೆ.
ನೀಲಾಂಬಿಕೆಯ ಮಾರ್ಗದರ್ಶನ ಪಡೆದ ಕಲ್ಯಾಣಮ್ಮ, ಗೌರಮ್ಮ ಸೋಮವ್ವ, ವಿಮಲಾಮಯ, ಶಿವಮಾಯಿದೇವಿ, ಕಾಳವ್ವೆ ಮುಂತಾದವರು ನೀಲಾಂಬಿಕೆಯ ಲಿಂಗಪೂಜಾ ನಿಷ್ಠೆಯನ್ನು ಅರಿತು ಶಿವಯೋಗ ಸಾಧನೆಗೈದಿದ್ದರು ಎಂದು ತಿಳಿದುಬರುತ್ತದೆ.
“ನೀಲಲೋಚನೆಯಮ್ಮನ ಪ್ರಸಾದದಿಂದ ನಿಜಲಿಂಗೈಕ್ಯನಾದೆನಯ್ಯ” ಎಂದು ತೋಂಟದ ಸಿದ್ಧಲಿಂಗ ಶಿವಯೋಗಿಗಳು ಹೇಳಿದ್ದಾರೆ. ದಾಸೋಹ ಕಾರ್ಯದಲ್ಲಿ ತನ್ನನ್ನೇ ತೊಡಗಿಸಿಕೊಂಡ ನೀಲಾಂಬಿಕೆ ಅಸಂಖ್ಯಾತ ಗಣಂಗಳಿಗೆ ಯಾವುದೇ ತೊಂದರೆ ಆಡತಡೆ ಇಲ್ಲದಂತೆ ಪ್ರಸಾದದ ವ್ಯವಸ್ಥೆ ಮಾಡಿ ನೀಡುತ್ತಿದ್ದಳೆಂಬುದು ತಿಳಿದು ಬರುತ್ತದೆ, ಇದನ್ನೇ ’ಬಸವ ಪವಾಡ’ ಎಂಬ ಕೃತಿಯಲ್ಲಿ ಉಲ್ಲೇಖ ಮಾಡಿದ್ದನ್ನು ಗಮನಿಸಬಹುದು.


“ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗಣಂಗಳ ಪ್ರಸಾದ ಇಟ್ಟನು
ಶೂಲಪಾಣಿಯ ಪಾದಸ್ಮರಣೆಯೊಳಲೆ
ಚಲ್ವ ನೀಲಲೋಚನೆಯ ವಲ್ಲಭನು”


ಎಂದು ಹೇಳಿದ್ದು ನೋಡಿದರೆ, ಮೇಲ್ನೋಟಕ್ಕೆ ಬಸವಣ್ಣನವರನ್ನು ವರ್ಣಿಸುವ ಸಾಲುಗಳಂತಿದ್ದರೂ, ಆಂತರ್ಯದಲ್ಲಿ ಒಂದು ಲಕ್ಷ ತೋಂಬತ್ತಾರು ಸಾವಿರ ಗಣಂಗಳಿಗೆ ಮಹಾಮನೆಯಲ್ಲಿ ಪ್ರಸಾದದ ವ್ಯವಸ್ಥೆ ಮಾಡುತ್ತಿದ್ದವಳು ತಾಯಿ ನೀಲಾಂಬಿಕೆ ಎಂಬುದು ಸ್ಪಷ್ಟ. ಮಹಾಮನೆಯ ಅನ್ನಪೂರ್ಣೆಯಂತ್ತಿದ ನೀಲಾಂಬಿಕೆಯನ್ನು ಮನದಲ್ಲಿಟ್ಟುಕೊಂಡೇ “ಚಲ್ವ ನೀಲಲೋಚನೆಯ ವಲ್ಲಭ” ಎನ್ನಲಾಗಿದೆ. ಈ ಮಾತಿಗೆ ಸಾಕ್ಷಿ ನುಡಿಯುವಂತಿರುವ ಶಾಂತಾದೇವಿ ಮಾಳವಾಡರ ಮಾತುಗಳನ್ನು ಇಲ್ಲಿ ದಾಖಲಿಸಬಹುದು. “ಮಹಾಮನೆಯಲ್ಲಿ ದಿನಾಲೂ ಸಾವಿರಾರು ಜನರ ಪ್ರಸಾದ ಜರಗುತ್ತಲಿದ್ದರೂ, ಸದ್ದು ಗದ್ದಲವಾಗುತ್ತಿರಲಿಲ್ಲ. ಬೇಡಿದವರಿಗೆ ಬೇಡಿದ ಪ್ರಸಾದ ಎಡೆ ಮಾಡಲು ಸದಾ ಸಿದ್ಧತೆ ಇರುತ್ತಿತ್ತು. ದಾಸೋಹದ ಈ ಕಾರ್ಯವನ್ನು ವ್ಯವಸ್ಥಿತವಾಗಿಸುವ ಕಾರ್ಯಶಕ್ತಿಯಾಗಿದ್ದಳು ನೀಲಾಂಬಿಕೆ. ಅವಳು ತನ್ನ ಆತ್ಮಶಕ್ತಿಯ ಬಲದಿಂದ ಬಸವಣ್ಣನ ಜಂಗಮಪ್ರೇಮಕ್ಕೆ ಭಕ್ತಿಗೆ ಮೂಲಾಧಾರವಾಗಿದ್ದಳು. ಕಾಷಾಯಕ್ಕೆ ಶರಣೆಂಬ ಬಸವಣ್ಣ, ಬೇಡಿದವರಿಗೆ ಬೇಡಿದುದನೀವ ಬಸವಣ್ಣ, ಕಳ್ಳರಲ್ಲಿಯೂ ಸಂಗಮನಾಥನನ್ನು ಕಾಣಬಲ್ಲ ಅನುಭಾವಿ, ಬಸವಣ್ಣನಂಥ ಮಹಾಮಹಿಮನ ಪತ್ನಿಯಾಗಿ ಅವನಿಚ್ಛೆಯಂತೆ ಕಾರ್ಯಗೈವ ಕಾಯಕ ಸುಲಭದಾಗಿರಲಿಲ್ಲ. ಆದರೇ ನೀಲಾಂಬಿಕೆಯ ಪತಿಭಕ್ತಿ ದೇವಭಕ್ತಿಯ ಬಲದಿಂದ ಆದರ್ಶ ಪತ್ನಿಯಾದಳು. ನಿಜಭಕ್ತಿ ನೀಲಾಂಬಿಕೆ ಎಂದು ಪ್ರಸಿದ್ಧಳಾದಳು.” ಎಂಬ ಮಾತು ನಿಜಕ್ಕೂ ನೀಲಾಂಬಿಕೆಯವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಾಗಿದೆ.
ವರ್ತಮಾನದಲ್ಲಿ ಸಹಮಾನವರೊಂದಿಗಿನ ವರ್ತನೆಯು ಭವಿಷ್ಯತ್ವನಲ್ಲಿ ದಾಖಲಾಗುತ್ತದೆ, ಎಂಬಂತೆ ನೀಲಾಂಬಿಕೆಯ ಸನ್ನಡತೆ ಅಂದಿನ ಸಮಕಾಲೀನ ಶರಣ-ಶರಣೆಯರ ಮೇಲೆ ಬೀರಿದ ಪ್ರಭಾವ ಮತ್ತು ಅವರು ಕಂಡಂತೆ ನೀಲಾಂಬಿಕೆಯ ವ್ಯಕ್ತಿತ್ವ ಅವರ ವಚನಗಳಿಂದ ಅನುಭಾವದ ನುಡಿಗಳಿಂದ ತಿಳಿದುಬಂದಿದೆ. ನೀಲಾಂಬಿಕೆ ತನಗರಿವಿಲ್ಲದಂತೆ ಇಂತಹ ಅಪರೂಪದ ವ್ಯಕ್ತಿತ್ವ ಬೆಳಸಿಕೊಂಡು ಆದರಣೀಯಳಾದಳು ಇತಿಹಾಸದಲ್ಲಿ ಅಜರಾಮರಳಾಗಿದ್ದಾಳೆ.

ವಚನಕಾರ್ತಿಯಾಗಿ ನೀಲಮ್ಮ :
ವಚನಕಾರ್ತಿಯಾಗಿಯೂ ನೀಲಾಂಬಿಕೆ ಉತ್ತಮ ನೆಲೆಯಲ್ಲಿ ಗುರುತಿಸಿಕೊಂಡಿದ್ದಾಳೆ. ಬೌದ್ಧಿಕವಾದ ಅವಳ ಗಂಭೀರ ವಚನಗಳಲ್ಲಿ ಹೆಚ್ಚಾಗಿ ಲಿಂಗನಿಷ್ಠೆ, ಬಸವನಿಷ್ಠೆಯನ್ನು ಕಾಣಬಹುದು. ವೈಯಕ್ತಿಕ ನೆಲೆಯಲ್ಲಿ ಆತ್ಮನೀವೇದನೆ ಮಾಡಿಕೊಳ್ಳುವ ವಚನಗಳು ಗಮನ ಸೆಳೆಯುತ್ತವೆ. ಸಮಕಾಲೀನವಾದ ವಿಷಯಗಳ ಪ್ರಸ್ತಾಪ, ಸಮಕಾಲೀನ ಶರಣ-ಶರಣೆಯರ ವಿಚಾರಗಳನ್ನೊಳಗೊಂಡ ವಚನಗಳಿವೆ. ಸಾಕಷ್ಟು ವಿಚಾರಗಳು ನೀಲಾಂಬಿಕೆಯ ವಚನಗಳಲ್ಲಿ ಚಿಂತನೆಗೆ ಹಚ್ಚುತ್ತವೆ.
ನೀಲಾಂಬಿಕೆ “ಸಂಗಯ್ಯ’ ಎಂಬ ಅಂಕಿತದಲ್ಲಿ ೨೮೭ ವಚನಗಳನ್ನು ರಚಿಸಿದ್ದಾಳೆ. ವಚನಗಳೊಂದಿಗೆ ಸ್ವರವಚನ, ಕಾಲಜ್ಞಾನ ವಚನಗಳನ್ನು ಬರೆದಿದ್ದಾಳೆ. ನೀಲಾಂಬಿಕೆಯ ಸಮಗ್ರ ವಚನಗಳನ್ನು ಗಮನಿಸಲಾಗಿ ಒಂದು ಸಾಮಾನ್ಯವಾದ ಅಂಶಕಂಡು ಬರುತ್ತದೆ. ಅದೇನೆಂದರೆ ಬಸವಸ್ತುತಿ ಮತ್ತು ಬಸವನಿಷ್ಠೆ. ಅವಳಲ್ಲಿರುವ ಅಪಾರವಾದ ಬಸವನಿಷ್ಠೆಯೇ ಬಸವಧರ್ಮದ ವಿಶಾಲತೆಗೆ ಇವಳನ್ನು ಒಳಗೊಳ್ಳುವಂತೆ ಮಾಡಿದ್ದು ಎಂಬುದು ಸ್ಪಷ್ಟವಾಗುತ್ತದೆ, ಸಾಮಾಜಿಕ ಸುಧಾರಣೆಯ ಹರಿಕಾರರಾದ ಬಸವಣ್ಣನವರ ಜೀವನದಲ್ಲಿ ಪ್ರವೇಶಿಸಿ ಅವರ ಕಣ್ಣ ಮುಂದಿನ ಬೆಳಕಾಗಿ, ಬೆನ್ನ ಹಿಂದಿನ ಆತ್ಮಶಕ್ತಿಯಾಗಿ ನಿಂತವಳೇ ಈ ನೀಲಾಂಬಿಕೆ, ಇವಳ ವಚನಗಳ ಅಭ್ಯಾಸದಿಂದ ಇವಳ ವ್ಯಕ್ತಿತ್ವ ಮತ್ತು ವೈಯಕ್ತಿಕ ಬದುಕು ಎರಡನ್ನೂ ತಿಳಿದುಕೊಳ್ಳಬಹುದು. ೧೨ನೇ ಶತಮಾನದ ಸಾಮಾಜಿಕ ಧಾರ್ಮಿಕ ಮೌಲ್ಯಗಳ ಹಿನ್ನಲೆಯಲ್ಲಿ ವಚನ ಸಾಹಿತ್ಯದ ಪಾರಿಭಾಷಿಕತೆಯ ಹಿನ್ನೆಲೆಯಲ್ಲಿ, ಸತಿ-ಪತಿ ಭಾವದಲ್ಲಿ, ವ್ಯಕ್ತಿಗತ ಆತ್ಮ ನಿವೇದನೆಯಲ್ಲಿ ನೀಲಾಂಬಿಕೆಯ ವಚನಗಳು ದೊರೆಯುತ್ತವೆ.
ಸಮಕಾಲೀನ ಶರಣರ ಸ್ಮರಣೆಯೊಂದಿಗೆ ೧೨ನೇ ಶತಮಾನದಲ್ಲಿ ಶಿವಶರಣೆಯರು ಅನುಭವಿಸಿದ ವೈಚಾರಿಕ ಸಂಘರ್ಷದ ನೆಲೆಗಳು ನೀಲಾಂಬಿಕೆಯ ವಚನಗಳಲ್ಲಿವೆ. ಸ್ತ್ರೀತ್ವದ ಮಿತಿಯಿಂದ ಬಿಡಿಸಿಕೊಳ್ಳುವ ಹೋರಾಟವೂ ಇವಳ ವಚನಗಳಲ್ಲಿ ಕಾಣಬಹುದು. ಸತಿಪತಿ ಎಂಬ ಉಭಯತ್ವ ಅಳಿದು ಏಕತ್ವವಾಗುವ ಬಯಕೆಯೂ ನೀಲಮ್ಮನ ವಚನಗಳಲ್ಲಿ ಕಾಣಬಹುದು. ಅಕ್ಕಮಹಾದೇವಿಯ ವಚನಗಳಲ್ಲಿ ಅತ್ಯಂತ ಪ್ರಖರವಾದ ಭಾವತೀವ್ರತೆಯಲ್ಲಿ ಚನ್ನಮಲ್ಲಿಕಾರ್ಜುನನ ಹುಡುಕಾಟ ಮತ್ತು ಅವನಲ್ಲಿ ಒಂದಾಗುವ ಪರಿ ಅನನ್ಯವಾಗಿ ಕಂಡುಬಂದಂತೆ ನೀಲಾಂಬಿಕೆಯ ವಚನಗಳಲ್ಲಿ ಬಸವಣ್ಣನವರ ವ್ಯಕ್ತಿತ್ವವನ್ನು ಅವರ ತತ್ವ ಸಿದ್ಧಾಂತಗಳನ್ನು ಅತ್ಯಂತ ಪ್ರಕರವಾದ ಭಾವತೀರ್ವತೆಯಲ್ಲಿ ಹಿಡಿದಿರುವ ಅನನ್ಯತೆಯನ್ನು ಕಾಣಬಹುದು. ಅಕ್ಕಮಹಾದೇವಿಯ ಪತಿಗೆ ಕುರುಹಿಲ್ಲ. ನೀಲಮ್ಮನ ಪತಿಯೋ ಕುರುಹು ಇದ್ದರೂ ಕುರುಹಿಲ್ಲದಂತೆ ಬದುಕಿದವನು ಅಲೌಕಿಕ ಪತಿಯ ಹುಡುಕಾಟದಲ್ಲಿ ಬಳಲುವ ಅಕ್ಕಮಹಾದೇವಿ ಲೌಕಿಕ ಪತಿಯ ಮಾರ್ಗದಲ್ಲಿ ಸಾಗುವ ನೀಲಮ್ಮದೇವಿ ಸ್ತ್ರೀತ್ವದ ನೆಲೆಗಳನ್ನು ಕಳಚಿಕೊಂಡು ಅನುಭಾವದೆತ್ತರಕ್ಕೆ ಏರುವುದನ್ನು ಅವಳ ವಚನಗಳಿಂದ ಗುರುತಿಸಬಹುದಾಗಿದೆ. ಅಕ್ಕಮಹಾದೇವಿಯ ವಚನಗಳ ಪ್ರಭಾವ ನೀಲಮ್ಮನ ಮೇಲಾಗಿದ್ದರೂ ಇವಳು ಕಂಡುಕೊಂಡ ನೆಲೆ ಭಿನ್ನವಾಗಿತ್ತು, ಅಕ್ಕಮಹಾದೇವಿ ಚನ್ನಮಲ್ಲಿಕಾರ್ಜುನನ್ನು ಏಕಕಾಲಕ್ಕೆ ಪತಿ-ಗುರು ಎಂದು ಹೇಗೆ ಸ್ವೀಕರಿಸಿದ್ದಳೋ ಹಾಗೇ ನೀಲಾಂಬಿಕೆಯೂ ಬಸವಣ್ಣನವರನ್ನು ಪತಿ-ಗುರು ಎಂದು ಸ್ವೀಕರಿಸಿದ್ದಳು. ಬಸವಣ್ಣನವರು ಗುರುವಾಗಿ ತೋರಿದ ಮಾರ್ಗದಲ್ಲಿ ನೀಲಾಂಬಿಕೆ ನಡೆದು ಅರಿವಿನ ಬೆಳಕಾಗಿ ಅನುಭವದಿಂದ ಅನುಭಾವದತ್ತರಕ್ಕೆ ಏರಿ ಆ ನೆಲೆಯಲ್ಲಿ ನಿಂತು ವಚನ ರಚನೆ ಮಾಡಿದ್ದಾಳೆ. ವಿದ್ಯಾವಂತೆಯಾದ ನೀಲಾಂಬಿಕೆಯ ವಚನಗಳಲ್ಲಿ ವೈಚಾರಿಕತೆಯ ಭಾವಗಳನ್ನು ಗಮನಿಸಬಹುದು.
ಕಾಯಕ – ದಾಸೋಹ – ಅನುಭಾವ – ಅನುಭವ ಮಂಟಪ – ಮಹಾಮನೆ -ಅಸಂಖ್ಯಾತ ಗಣಂಗಳು ಇವೆಲ್ಲವುಗಳ ಮಧ್ಯದಲ್ಲಿ ತನ್ನ ಬದುಕನ್ನು ಸಾಗಿಸಿದ ನೀಲಮ್ಮ ತನ್ನ ಸ್ವಹಿತಾಸಕ್ತಿಯನ್ನು ಒಂದೊಂದಾಗಿ ಕಳಚಿಕೊಂಡು ಸಂಸಾರದಲ್ಲಿದ್ದುಕೊಂಡೇ ನಿಸ್ಸಂಗಿಯಾಗಿ ಬದುಕಿದವಳು. ಏನೂ ಇಲ್ಲದ ಸ್ಥಿತಿಯಲ್ಲಿ ವೈರಾಗ್ಯ ತಾಳುವುದು ಕಠಿಣವಲ್ಲ, ಎಲ್ಲವೂ ಇದ್ದೂ ಏನು ಬೇಡಾ ಎಂಬ ವೈರಾಗ್ಯ ಭಾವ ಬೆಳೆಸಿಕೊಳ್ಳುವುದು ಕಷ್ಟ. ಅದನ್ನು ನೀಲಾಂಬಿಕೆ ರೂಢಿಸಿಕೊಂಡಿದ್ದಳು. ಹೀಗಾಗಿ ಇವಳ ವಚನಗಳಲ್ಲಿ ಹೆಚ್ಚಾಗಿ ಅವಳ ವ್ಯಕ್ತಿತ್ವ ಅನುಭಾವದೆತ್ತರಕ್ಕೆ ಏರಿ ಬಯಲಲ್ಲಿ ಬಯಲಾಗುವ ಶೂನ್ಯತತ್ವಕ್ಕೆ ಒಳಗಾಗುವುದನ್ನು ಗಮನಿಸಬಹುದು. ಅರಿವಿನ ದಾಹಕ್ಕೆ ಬಡತನ ಬಾರದಂತೆ ಅದರ ವಿಸ್ತರಣೆಯಲ್ಲಿ ಅರಿವನ್ನು ಪಡೆದುಕೊಳ್ಳುವಲ್ಲಿ ಮತ್ತೇ ಮತ್ತೇ ಬಸವನ ಮೊರೆ ಹೋಗುವುದನ್ನು ಮತ್ತು ಬಸವಣ್ಣನವರ ಘನವ್ಯಕ್ತಿತ್ವದ ಅಗಾಧತೆಗೆ ನೀಲಾಂಬಿಕೆ ಮಾರುಹೋಗಿ ಭಾವಪರವಶತೆಗೆ ಒಳಗಾಗುವುದನ್ನು ಅವಳ ವಚನಗಳಲ್ಲಿ ಕಾಣಬಹುದು.
ನೀಲಾಂಬಿಕೆ ತನ್ನ ವಚನಗಳಲ್ಲಿ ಅತ್ಯಂತ ಪ್ರೀತಿಯಿಂದ ಬಂಧುಗಳಂತಿದ್ದ, ತಂದೆ-ತಾಯಿಗಳಂತಿದ್ದ ಸಮಕಾಲೀನ ಶರಣರನ್ನು ಸ್ಮರಿಸಿದ್ದಾಳೆ. ಅವರೊಳಗೆ ಒಂದಾಗಿ ಇದ್ದ ಅವಳು ಅವರನ್ನೆಲ್ಲಾ ತನ್ನ ಕುಲಬಾಂಧವರಂತೆ ಪ್ರೀತಿಸಿದವಳು. ಕಲ್ಯಾಣವೆಂಬುದು ಅಂದು ಅಸಂಖ್ಯಾತ ಶರಣರು ಬಂಧು ನೆಲೆಸಿದ ನಾಡಾಗಿತ್ತು. ಬೀಡಾಗಿತ್ತು. ಅವಿಮುಕ್ತ ಕ್ಷೇತ್ರವಾಗಿತ್ತು. ಕಲ್ಯಾಣ ಪಾವನವಾಗಿತ್ತು. ಕಲ್ಯಾಣವೆಂಬುದೊಂದು ಪ್ರಣತಿಯಾಗಿತ್ತು. ಅದರಲ್ಲಿ ಭಕ್ತಿರಸವೆಂಬ ತೈಲವಿತ್ತು. ಅದರಲ್ಲಿ ಆಚಾರವೆಂಬ ಬತ್ತಿ ಇತ್ತು. ಬಸವಣ್ಣನೆಂಬ ಜ್ಯೋತಿಮುಟ್ಟಲು ಶಿವನ ಪ್ರಕಾಶವೇ ಧರೆಗಿಳಿದಿತ್ತು. ಇಂತಹ ಶ್ರೇಷ್ಠ ಶರಣ, ಭಕ್ತ ಬಸವಣ್ಣನವರ ಸತಿಯಾದ ನೀಲಾಂಬಿಕೆ ಕಲ್ಯಾಣದ ಎಲ್ಲ ಶಾರಣರ ಸಂಪರ್ಕದಲ್ಲಿ ತನ್ನ ವ್ಯಕ್ತಿತ್ವ ವಿರಚಿಸಿಕೊಂಡವಳು. ತನ್ನ ಭಾವವನ್ನು ವಿಕಾಸಗೊಳಿಸಿಕೊಂಡವಳು. ಆ ಶರಣಚೇತನರನ್ನು ತನ್ನ ವಚನಗಳ ಮೂಲಕ ಹಾಡಿದಣಿದವಳು.


“ಎನಗೆ ಹಿತಕಾರಿಗಳಾಗಿ ಇದ್ದವರೀ ಶರಣರು,
ಎನಗೆ ಪ್ರಭೆದೋರಿ ಇದ್ದವರೀ ಶರಣರು,
ಎನಗೆ ಸಂಗ ನಿಸ್ಸಂಗ ಕೊಟ್ಟವರೀ ಶರಣರು,
ಆ ಶರಣಪಥವ ನೋಡ ಹೋದರೆ,
ಆನು ನೋಡದ ಬಲವು ಬಲವೇ ಆಯಿತಯ್ಯ
ಸಂಗಯ್ಯ ಸಂಗಯ್ಯ”


ಎಂಬ ವಚನವು ಅವಳಂತರಂಗಕ್ಕೆ ಹಿಡಿದ ಕನ್ನಡಿಯಂತಿದೆ.

೧) ಅಲ್ಲಮನ ವಂಶದವಳು ನಾನು,
ಅಜಾತ ಶರಣರ ವಂಶದವಳು ನಾನು,
ಅಪ್ರತಿಮ ಶರಣರ ವಂಶದವಳು ನಾನು.
———-
ಎಂಬಲ್ಲಿ ಜ್ಞಾನ ವೈರಾಗ್ಯ ನಿಧಿ ಅಲ್ಲಮಪ್ರಭುಗಳೊಂದಿಗೆ ಸಕಲ ಶರಣರನ್ನೂ ಸ್ಮರಿಸುತ್ತಾಳೆ.

೨) ಎನಗೆ ಹಾಲೂಟವನ್ನಿಕ್ಕುವ ತಾಯೆ,
ಎನಗೆ ಪರಿಣಾಮ ತೋರುವ ತಾಯೆ,
ಪರಮಸುಖದೊಳಿಪ್ಪ ತಾಯೆ,
ಪರವಸ್ತುವ ನಂಬಿದ ತಾಯೆ, ಬಸವನ ಗುರುತಾಯೆ,
ಸಂಗಯ್ಯನಲ್ಲಿ ಸ್ವಯಂಲಿಂಗಿಯಾದೆಯಾ,
ಅಕ್ಕನಾಗಮ್ಮ ತಾಯೆ


ಎಂದು ತಾಯಿಸ್ಥಾನವನ್ನು ಅಕ್ಕನಾಗಮ್ಮನಿಗೆ ನೀಡಿ, ಬಸವಣ್ಣನ ಗುರುತಾಯಿ ಎಂದು ಸಂಬೋಧಿಸಿ, ಅಕ್ಕನಾಗಮ್ಮನನ್ನು ನೀಲಾಂಬಿಕೆ ತನ್ನ ವಚನದಲ್ಲಿ ಸ್ಮರಿಸಿಕೊಳ್ಳುತ್ತಾಳೆ.


೩) ’ನಾನು ನಿಮ್ಮವಳಲ್ಲವಯ್ಯ ನಾನು ಅನಿಮಷನವರವಳು,
ನಾನು ನಿಮ್ಮವಳಲ್ಲವಯ್ಯ ನಾನು ಅಜಗಣ್ಣನವರವಳು,
ನಾನು ನಿಮ್ಮವಳಲ್ಲವಯ್ಯ ನಾನು ಮಾದಾರಚನ್ನಯ್ಯನ ಮೊಮ್ಮಗಳು,
ನಾನು ನಿಮ್ಮವಳಲ್ಲವಯ್ಯ ನಾನು ಪ್ರಸಾದಿಗಳ ಮನೆಯ ಕೀಳುದೊತ್ತು
ನಾನು ನಿಮ್ಮವಳಲ್ಲವಯ್ಯ, ಸಂಗಯ್ಯ
ನಾನು ಬಸವಯ್ಯನ ಮನೆಯ ತೊತ್ತಿನ ಮಗಳು”


ಎಂಬ ವಚನದಲ್ಲಿ ಅನಿಮಿಷದೇವರನ್ನು ಅಜಗಣ್ಣವನ್ನು ಮಾದಾರಚನ್ನಯ್ಯನನ್ನು ಮುಂತಾದ ಶರಣರನ್ನು ಸ್ಮರಿಸಿದ್ದಾಳೆ.


೪) “ಅಲ್ಲಮನ ಸಂಗ, ಅಜಗಣ್ಣನ ಸಂಗ,
ಕಕ್ಕಯ್ಯನ ಸಂಗ, ಚಿಕ್ಕಯ್ಯನ ಸಂಗ,
ಎಲ್ಲರ ಸಂಗ, ಮುಖ್ಯರ ಸಂಗ,
ಸಂಗಯ್ಯ, ಎನ್ನ ಸಂಗ, ಎನ್ನ ಬಸವಯ್ಯನ ಸಂಗ,”


ಹೀಗೆ ಎಲ್ಲ ಶರಣರನ್ನು ನೀಲಾಂಬಿಕೆ ಸ್ಮರಿಸಿಕೊಳ್ಳುವುದು ಔಚಿತ್ಯಪೂರ್ಣವೆನಿಸಿದೆ. ಸಮಕಾಲೀನ ಶರಣರನ್ನು ನೀಲಾಂಬಿಕೆ ತನ್ನ ವಚನದಲ್ಲಿ ನೆಲೆಗೊಳಿಸಿ ಧನ್ಯಳಾಗಿದ್ದಾಳೆ.
ನೀಲಾಂಬಿಕೆ ಒಂದು ನಿಷ್ಕಲ್ಮಶವಾದ ಜೀವ. ಅವಳದು ಪರಿಶುದ್ಧವಾದ ಬದುಕು. ಸಾರ್ಥಕತೆಗೆ ವ್ಯಾಖ್ಯಾನದಂತೆ ಬದುಕಿದ ನೀಲಾಂಬಿಕೆಯ ಕೊನೆಯ ದಿನಗಳು ಸಹ ಅರಿವಿನಿಂದ ಕೂಡಿದವು. ಅವಳು ಹೊಂದಿದ ಐಕ್ಯಸ್ಥಿತಿ ಬೆರಗುಗೊಳಿಸುವಂತಹದ್ದು. ಕಲ್ಯಾಣ ಕ್ರಾಂತಿಯ ಸಂದರ್ಭವು ಬಸವಣ್ಣನವರಂತಹವರನ್ನೇ ವಿಚಲಿತಗೊಳಿಸಿತು. ಆದರೆ ಆ ಸಂಧಿಗ್ದ ಸಮಯದಲ್ಲೂ ತನ್ನ ಸ್ಥಿರತರ ಕಾಪಿಟ್ಟುಕಕೊಂಡ ಪ್ರಬುದ್ಧ ಸ್ಥಿತಿ ನೀಲಮ್ಮಳದಾಗಿತ್ತು, ಅಂತಹ ಸಂದರ್ಭದಲ್ಲಿ ಕಲ್ಯಾಣ ತ್ಯೆಜಿಸಿದ ಬಸವಣ್ಣನವರ ನಡೆಯನ್ನೇ ಪ್ರಶ್ನಿಸಿದ ನೀಲಾಂಬಿಕೆಯದು ನಿಜಕ್ಕೂ ವೈಚಾರಿಕತೆಯ ನಡೆಯಾಗಿತ್ತು.
ನೀಲಮ್ಮನ ಕೊನೆಯ ದಿನಗಳು :
ಹೌದು ಕಲ್ಯಾಣಕ್ರಾಂತಿ ಕನ್ನಡ ನಾಡಿನ ಶಿವಶರಣರ ಇತಿಹಾಸದಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆ, ವರ್ಣಸಂಕರವನ್ನು ಮುಂದಿಟ್ಟುಕೊಂಡು ಮೂಲಭೂತವಾದಿಗಳ ನಡೆಸಿದ ವಿದ್ರೋಹದ ಕೃತ್ಯವಿದು, ಬಸವಣ್ಣನವರಂತಹ ಮಹಾಮಾನತಾವಾದಿಯ ವಿಚಾರಗಳನ್ನು ಅವಹೇಳನ ಮಾಡಿ, ಅವರ ಸಮಸಮಾಜದ ಕನಸನ್ನು ನುಚ್ಚುನೂರು ಮಾಡಿದ ಘಟನೆಯಿದು.
ಜೇನುಗೂಡಿನಂತಿದ್ದ ಶರಣರ ಸಮೂಹಕ್ಕೆ ಕಲ್ಯಾಣಕ್ರಾಂತಿ ಕಲ್ಲೇಟಿನಂತಾಗುತ್ತದೆ. ಇಡೀ ಶರಣ ಸಮೂಹವೇ ಚದುರಿ ಹೋಗುತ್ತದೆ. ಬಿಜ್ಜಳ ಮಹಾರಾಜ ಕಲ್ಯಾಣದಿಂದ ಬಸವಣ್ಣನವರನ್ನು ಹೊರ ಹೋಗುವಂತೆ ಬಹಿಷ್ಕಾರ ಹಾಕುತ್ತಾನೆ. ಈ ಕಾರಣದಿಂದ ಕಲ್ಯಾಣವನ್ನು ಬಿಡುವ ಮೊದಲು ಬಸವಣ್ಣನವರು ಅಕ್ಕನಾಗಮ್ಮ, ಚನ್ನಬಸವಣ್ಣ, ಅಪ್ಪಣ್ಣ, ಮಡಿವಾಳ ಮಾಚಿದೇವ, ಕಿನ್ನರ ಬೊಮ್ಮಯ್ಯ, ಅಂಬಿಗರ ಚೌಡಯ್ಯ ಮುಂತಾದ ಶರಣರನ್ನು ಕರೆಯಿಸಿ ಶಾಂತಿಯನ್ನು ಕಾಪಾಡಲು ಸೂಚಿಸಿ, ವಚನಗಳ ಸಂರಕ್ಷಣೆಗೆ ಮುನ್ಸೂಚನೆ ನೀಡಿ ಕೂಡಲಸಂಗಮಕ್ಕೆ ಹೋಗುತ್ತಾರೆ. ಈ ಘಟನೆಯ ತರುವಾಯ ಕಲ್ಯಾಣದಲ್ಲಿ ದಂಗೆ ಏಳುತ್ತದೆ. ಶರಣವನ್ನು ಕೊಲ್ಲುವ, ವಚನ ಕಟ್ಟುಗಳನ್ನು ಸುಟ್ಟು ಹಾಕುವ ಹುನ್ನಾರಗಳು ಪ್ರಾರಂಭವಾಗುತ್ತವೆ. ಆಗ ಶರಣರೆಲ್ಲರೂ ತಮ್ಮಿಂದ ಸಾಧ್ಯವಾದಷ್ಟು ವಚನಕಟ್ಟುಗಳನ್ನು ಬೆನ್ನಿಗೆ ಕಟ್ಟಿಕೊಂಡು ರಾತ್ರೋರಾತ್ರಿ ಕಲ್ಯಾಣವನ್ನು ತೊರೆಯುತ್ತಾರೆ. ಇತ್ತ ಬಸವಣ್ಣನವರು ಹಡಪದ ಅಪ್ಪಣ್ಣನವರನ್ನು ಕರೆಯಿಸಿಕೊಂಡು ಪತ್ನಿ ನೀಲಾಂಬಿಕೆಯನ್ನು ಕರೆತರಲು ಕಳುಹಿಸುತ್ತಾರೆ.
ಬಸವಣ್ಣನಿಲ್ಲದ ಕಲ್ಯಾಣ ಬರಿದಾಗುತ್ತದೆ. ಸಿರಿಯೇ ಹೋದ ಮೇಲೆ ಕಲ್ಯಾಣದ ವೈಭವವೆಲ್ಲ ಹಾಳು ಹಂಪೆಯಾಗುತ್ತದೆ. ಶರಣರೆಲ್ಲರೂ ಅನಾಥರಾಗುತ್ತಾರೆ. ನೀಲಾಂಬಿಕೆಯಂತೂ ಅತ್ಯಂತ ದುಃಖಭರಿತಳಾಗುತ್ತಾಳೆ. ಬಸವಣ್ಣನವರಿಂದ ನೀಲಮ್ಮ ಇದನ್ನು ನಿರೀಕ್ಷಿಸಿರಲಿಲ್ಲ. ಶರಣರ ಜೊತೆಗಿದ್ದು ಧೈರ್ಯ ತುಂಬುತ್ತಾರೆ. ಎಂದುಕೊಂಡವಳಗೀಗ ಬಸವಣ್ಣನವರು ಕೂಡಲಸಂಗಮಕ್ಕೆ ಹೋಗಿದ್ದು ದಿಗ್ರ್ಭಾಂತಿಗೊಳಿಸಿದೆ. “ಅಟ್ಟಡವಿಯಲ್ಲಿ ಬಿಟ್ಟು ಹೋದಿರಿ ಬಸವಯ್ಯಾ, ನಟ್ಟನಡು ಗ್ರಾಮವ ಕೆಡಿಸಿ ಹೋದಿರಿ ಬಸವಯ್ಯ” ಎಂದು ದೂರುತ್ತಾಳೆ. ಇಷ್ಟು ಹೊತ್ತಿಗೆ ಬಸವಣ್ಣನವರ ಅನುಭಾವದಿಂದ ನೀಲಮ್ಮ ಸ್ವತಂತ್ರ ವಿಚಾರವಾದಿಯಾಗಿಯೂ, ದೃಢಮನಸ್ಸಿನವಳಾಗಿ ರೂಪಿತಳಾಗಿರುತ್ತಾಳೆ. ಅದಕ್ಕಾಗಿ ಕರೆಯಲು ಬಂದ ಹಡಪದ ಅಪ್ಪಣ್ಣನವರಿಗೆ ತನ್ನದೊಂದು ಸ್ವರವಚನದಲ್ಲಿ ಹೀಗೆ ಪ್ರತಿಕ್ರಿಯಿಸುತ್ತಾಳೆ.


ನೋಡು ನೋಡು ನೋಡು ನೋಡು ಲಿಂಗವೆ
ನೋಡು ಬಸವಯ್ಯನು ಮಾಡಿದಾಟವಾ ||ಪ||
ಅಲ್ಲಿಗೆನ್ನನು ಬರಹೇಳಿದರಂತೆ
ಇಲ್ಲಿ ತಾವಿಲ್ಲವೆ ಸಂಗಯ್ಯನು
ಅಲ್ಲಿ ಇಲ್ಲಿ ಎಂಬ ಉಭಯ ಸಂದೇಹವು
ಬಲ್ಲ ಮಹಾತ್ಮರಿಗಿದು ಗುಣವೆ ||೧||


“ಅಲ್ಲಿರುವ ಸಂಗಯ್ಯ ಇಲ್ಲಿಲ್ಲವೇ ?” ಎಂದು ಪ್ರಶ್ನಿಸುತ್ತಾಳೆ.
ತಾತ್ವಿಕವಾಗಿ ಹೀಗೆ ಪ್ರಶ್ನಿಸಿದರೂ ಸತಿ ಸಹಜ ಭಾವ ಕಲ್ಯಾಣದಲ್ಲಿ ಅವಳನ್ನು ಇರಗೊಡುವುದಿಲ್ಲ. ಅಪ್ಪಣ್ಣನೊಂದಿಗೆ ಕೂಡಲಸಂಗಮ್ಮಕ್ಕೆ ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಬಸವಣ್ಣನವರು ಲಿಂಗದೊಳೆಗಾದ ಸುದ್ಧಿ ಬರುತ್ತದೆ. ಇಡೀ ಶರಣ ಸಂಕುಲವೇ ಸಿಡಿಲು ಬಡಿದಂತೆ ತತ್ತರಿಸಿ ಹೋಗುತ್ತದೆ. ನೀಲಾಂಬಿಕೆ ಕುಸಿದು ಬೀಳುತ್ತಾಳೆ. ಪ್ರಲಾಪಿಸುತ್ತಾಳೆ. ಬಸವಣ್ಣನಿರದ ಲೋಕವನ್ನು ನೀಲಾಂಬಿಕೆ ನಿರೀಕ್ಷಿಸಿರಲಿಲ್ಲ. ಅವಳಿಗೆ ತನ್ನ ಬದುಕು ಸಾಕೆನಿಸರಬಹುದು. ಬಸವಣ್ಣನವರು ಬಯಲಪ್ಪಿದಾಗ ತಾನೂ ಆ ಬಯಲಲ್ಲಿ ಬಯಲಾಗುವ ಹಂಬಲ ಅವಳಿಗಾಗಿರಬಹುದು ತಂದೆ-ತಾಯಿ ಇಲ್ಲದವಳು ನೀಲಾಂಬಿಕೆ. ಅಣ್ಣನಾದ ಬಿಜ್ಜಳನೇ ಪತಿಯನ್ನು ಬಹಿಷ್ಕಾರ ಹಾಕಿ ಅವನ ಐಕ್ಯಸ್ಥಿತಿಗೆ ಕಾರಣವಾದಾಗ ನೀಲಾಂಬಿಕೆ ಮತ್ತೆ ಕಲ್ಯಾಣಕ್ಕೆ ತಿರುಗಿ ಹೋಗಲು ಮನಸ್ಸು ಮಾಡಲಿಲ್ಲ. ಮನಸ್ಸಿನ ದೃಢತೆಗೆ ಲಿಂಗಪೂಜೆಗೆ ಕುಳಿತುಕೊಳ್ಳುತ್ತಾಳೆ. ಲಿಂಗಪೂಜಿಸುತ್ತಲೆ ದೇಹತ್ಯಾಗ ಮಾಡುತ್ತಾಳೆ. ಇಚ್ಛಾಮರಣ ಸ್ವೀಕರಿಸುತ್ತಾಳೆ ಹೀಗೆ ತಂಗಿ ಅಡಗಿದ ಸ್ಥಳ ಅದುವೇ ತಂಗಡಿಗಿ” ಎಂಬ ಊರಾಯಿತು. ಈ ತಂಗಡಿಗಿಯಲ್ಲಿ ನೀಲಮ್ಮನ ಸಮಾಧಿ ಇದೆ. ಅತ್ತ ತಂದೆಯಂತಿದ್ದ ಬಸವಣ್ಣ ಇತ್ತ ತಾಯಿಯಂತಿದ್ದ ನೀಲಮ್ಮ ಇಬ್ಬರೂ ತನ್ನ ಕಣ್ಣಮುಂದೆಯೇ ಲಿಂಗದೊಳಗಾದದ್ದು ಅಪ್ಪಣ್ಣನಿಗೆ ಅಪಾರ ನೋವು ಸಂಕಟ ಉಂಟುಮಾಡುತ್ತದೆ. ಅವನೂ ತಂಗಡಿಗಿಯಲ್ಲಿಯೇ ಲಿಂಗೈಕ್ಯನಾಗುತ್ತಾನೆ. ಇಂದಂತೂ ಇನ್ನೂ ನೋವಿನ ದುಃಖದ ಸಂಗತಿ. ಈ ತಂಗಡಿಗೆ ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿದೆ. ನೀಲಾಂಬಿಕೆಯ ಕುರಿತು ಅನೇಕ ತ್ರಿಪದಿಗಳೂ, ಸ್ತುತಿಪದ್ಯಗಳೂ ಇವೆ. ಸರ್ವಜ್ಞನೂ ಸಹ” ನೀಲಲೋಚನೆಯಮ್ಮನ ಬಾಲಶಿಶು ನಾನಯ್ಯ ಶೂಲಧರನೊಳಗೆ ಒಡವೆರದು ಕೈಲಾಸದಿ ಬಾಳಿ ಬದುಕೆಂದ ಸರ್ವಜ್ಞ” ಎಂದು ತ್ರಿಪದಿಯನ್ನೂ ಬರೆದಿದ್ದಾನೆ.
ಒಟ್ಟಿನಲ್ಲಿ ನೀಲಾಂಬಿಕೆ ಬಸವಣ್ಣನವರಂತೆ ಸಮಾಜ ಉದ್ಧಾರ ಮಾಡಿರಲಿಕ್ಕಿಲ್ಲ. ಅನುಭಾವ ಮಾಡಿರಲಿಕ್ಕೀಲ್ಲ ಅವರಷ್ಟು ಪ್ರಮಾಣದಲ್ಲಿ ವಚನ ರಚನೆ ಮಾಡಿರಲಿಕ್ಕೀಲ್ಲ ಆದರೆ ಬಸವಣ್ಣನವರಂತಹ ಅಗಾಗ ಶಕ್ತಿಯ ಅನುಪಮ ಕಾರ್ಯಗಳು ಸಾಂಗವಾಗಿ ನಡೆಯಲು ಸಹಕರಿಸಿದಳು. ಬಸವಣ್ಣನವರ ಹೋರಾಟದ ಹಾದಿಗೆ ಯಾವುದೇ ಚ್ಯುತಿ ಬಾರದಂತೆ ನೋಡಿಕೊಂಡಳು. ನಿಜದ ನೆಲೆಯಲ್ಲಿ ಅವರ ಧರ್ಮಪತ್ನಿಯಾಗಿ, ಆತ್ಮಸಂಗಾತಿಯಾಗಿ, ಮಹಾಮನೆಯ ಮಾತೆಯಾಗಿ, ಶರಣ ಸಮೂಹದ ಹೃದಯಮಂದಿರದಲ್ಲಿ ಅನ್ನಪೂರ್ಣೆಯಾಗಿ ನೆಲೆಸಿದಳು. ಅದಕ್ಕೆಂದು ಸಮನ್ವಯ ಕವಿ ಚನ್ನವೀರ ಕಣವಿಯವರು


“ಸದುವಿನಯದ ತುಂಬಿದ ಕೊಡ
ತಂದಳು ನೀಲಾಂಬಿಕೆ
ಕಲ್ಯಾಣದ ಅಂಗಳದಲಿ
ತಳೆ ಹೊಡೆದಳು ಛಂದಕೆ
ಸಮಚಿತ್ತದ ರಂಗೋಲಿಯು
ಒಳ-ಹೊರಗೂ ದೂಪವು
ಹಾದಾಡುವ ಹೊಸತಿಲಲ್ಲಿ
ಹೊಯ್ದಾಡದ ದೀಪವು

ಮಹಾಮನೆಯ ಮಹಾತಾಯಿ
ಮಾಸದ ಮಡಿ ಹಾಸಲು
ದಾಸೋಹಕೆ ಮೀಸಲಾದ
ತೃಪ್ತಿಯ ನಗೆ ಸೂಸಲು
ಎಲ್ಲೆಲ್ಲಿಯೂ ಗಣ ತಿಂಥಿಣಿ
ತಣಿದು ಹಾಡಿ ಹರಸಲು
ಭಕ್ತಿಭಂಡಾರ ತುಂಬಿ
ಹರಡಿತು ಬೆಳುದಿಂಗಳು” ಎಂದು ನೀಲಾಂಬಿಕೆಯ ಭವ್ಯಚಿತ್ರಣವನ್ನೇ ನೀಡಿದ್ದಾರೆ.


ನೀಲಾಂಬಿಕೆ ಬಸವೇಶ್ವರರ ಜೀವನದ ಅರ್ಥಪೂರ್ಣ ಸತಿಯಾಗಿದ್ದಳು. ಅವಳಿಗೆ ತಿಳುವಳಿಕೆ ಬಂದಾಗಿನಿಂದ ಅವಳು ಪ್ರಾಣತ್ಯಾಗ ಮಾಡುವವರೆಗೂ ’ಬಸವ’ ಎಂಬ ಹೆಸರಿನ ಉಸಿರನ್ನೇ ಉಸಿರಾಡಿದಳು. ಸಂಸಾರದೊಳಗೆ ನೂರೆಂಟು ತಾಪತ್ರಯಗಳು, ನೂರೆಂಟು ಭಾವ ಕದಡುವ ಪ್ರಸಂಗಗಳು. ಅವೆಲ್ಲವನ್ನೂ ಸಮಚಿತ್ತದಿಂದ ಸ್ವೀಕರಿಸಿ ಬಸವಣ್ಣನವರ ಕಾರ್ಯಗಳಿಗೆ ಜೀವಚೇತನವಾಗಿ ನಿಂತಳು. ಕಲ್ಯಾಣದ ಶರಣರ ಮನಗೆದ್ದು ಅನುಭಾವಗೋಷ್ಠಿಯಲ್ಲಿ ಭಾಗವಹಿಸಿ, ವಚನ, ಸ್ವರವಚನ, ಕಾಲಜ್ಞಾನ ವಚನಗಳ ರಚನೆ ಮಾಡಿ, ಶಿವಶರಣೆ, ಅನುಭಾವಿ ಮಹಿಳೆ, ವಚನಕಾರ್ತಿ ಎಂಬ ಕೀರ್ತಿಗೆ ಭಾಜನಳಾದಳು.
ನೀಲಾಂಬಿಕೆ ಚಲುವಿನ ಪುತ್ಥಳಿ, ಸಮಚಿತ್ತದ ಒಡತಿ, ಪ್ರೀತಿ, ಮಮತೆ, ವಾತ್ಸಲ್ಯ ತುಂಬಿದ ಮೂರ್ತಿ. ಸ್ವತಂತ್ರ ವಿಚಾರಗಳಿಂದ ಮುನ್ನೆಡೆದ ಧೀರೋದಾತ್ತ ಮಹಿಳೆ. ವೈಚಾರಿಕ ನಿಲುವುಗಳಿಂದ ಹೆಣ್ಣು-ಗಂಡೆಂಬ ಉಭಯವಳಿದು ಬಸವಣ್ಣನವರ ವಿಚಾರಪತ್ನಿಯಾಗಿ ನಿಂತ ಆದರ್ಶ ಸತಿ. ಒಟ್ಟಾರೆಯಾಗಿ ೧೨ನೇ ಶತಮಾನದ ಶಿವಶರಣೆಯರಲ್ಲಿ ನೀಲಾಂಬಿಕೆಯದು ಘನವ್ಯೆತ್ತ ವ್ಯಕ್ತಿತ್ವ. ಹಿರಿದು-ಕಿರಿದೆಂಬ ಭಾವವಡಗಿದ, ಬಯಲು ಬಯಲನಪ್ಪಿಕೊಂಡ ಮಹಾಬಯಲು ಇವಳು. ನೀಲಾಕಾಶದ ವಿಸ್ತಾರದಲಿ “ನೀಲಾಂಜನ”ವಾಗಿ ಬೆಳಗಿದವಳು ನೀಲಾಂಬಿಕೆ.

*******

ಪರಾಮರ್ಶನ ಕೃತಿಗಳು :
೧. ಬಸವ ಯುಗದ ವಚನ ಮಹಾಸಂಪುಟ
ಪ್ರಧಾನ ಸಂಪಾದಕರು : ಡಾ. ಎಂ.ಎಂ. ಕಲಬುರ್ಗಿ
ಕ.ಸ.ಕ.ಪು.ಪ್ರಾ. ಬೆಂಗಳೂರ – ೨೦೧೬
೨. ’ಅಕ್ಕಮಹಾದೇವಿ” : ಡಾ. ಬಿ.ಎಸ್. ಸುಮಿತ್ರಬಾಯಿ, ಅ.ಭಾ.ಶ,ಸಾ,ಪ. ಬೆಂಗಳೂರು.
೩. ಗಂಗಾಂಬಿಕೆ-ನೀಲಾಂಬಿಕೆ : ಒಂದು ಅಧ್ಯಯನ
ಡಾ. ಮ.ನಿ.ಪ್ರ. ಹಿರಿಯಶಾಂತವೀರ ಮಹಾಸ್ವಾಮಿಗಳು
ಪ್ರಭುದೇವ ಜನಕಲ್ಯಾಣ ಸಂಸ್ಥೆ, ಶ್ರೀ ಪ್ರ.ದೇ. ಸಂಸ್ಥಾನ ವಿರಕ್ತಮಠ, ಸಂಡೂರು.
೪. ಶಿವಶರಣೆಯರ ಜೀವನ ದರ್ಶನ
ಲೇ. : ಡಾ. ವೀರಣ್ಣ ರಾಜೂರ
೫. ಅನುಭಾವಿ ಮಹಿಳೆಯರು
ಸಂ. ಡಾ. ವಿಜಯಕುಮಾರ ಮಹಾನುಭಾವಿಗಳು
೬. ವಿಚಾರಪತ್ನಿ ಶರಣೆ ನೀಲಾಂಬಿಕೆಯವರು
ಡಾ. ಕಲ್ಯಾಣಮ್ಮ ಲಿಂಗೋಟಿ.
೭. ನೀಲಾಂಬಿಕೆ : ಡಾ. ಪುಷ್ಪಾವತಿ ಶಲವಡಿಮಠ – ಹಾವೇರಿ
೮. ಕರ್ನಾಟಕ ಶರಣಕಥಾಮೃತ
ಡಾ. ಎಸ್. ತಿಪ್ಪೇರುದ್ರಸ್ವಾಮಿ.


ಡಾ. ಪುಷ್ಪಾ ಶಲವಡಿಮಠ

One thought on ““ನೀಲಾಂಬಿಕೆ” ಡಾ. ಪುಷ್ಪಾ ಶಲವಡಿಮಠ

  1. ಇದನ್ನು ಓದಿದ ಮೇಲೆ ನೀಲಾಂಬಿಕೆಯನ್ನು ಹುಡುಕಿಕೊಂಡು ಮತ್ತೆಲ್ಲೂ ಹೋಗುವುದು ಬೇಡ ಎನಿಸುತ್ತದೆ.. ಸಾಕಷ್ಟು ಅಧ್ಯಯನ ಮಾಡಿ ಬರೆದಿದ್ದೀರಿ

Leave a Reply

Back To Top