ಗಾಂಧಿಯ ಹಾದಿ

ಈ ಶೀರ್ಷಿಕೆಯಲ್ಲಿ ಡಾ.ಎಸ್.ಬಿ.ಬಸೆಟ್ಟಿ,(ಕರ್ನಾಟಕವಿ.ವಿ.ಧಾರವಾಡ) ಇವರು ಬಿಡುವು ಸಿಕ್ಕಾಗಲೆಲ್ಲಈ ಸರಣಿಯಲ್ಲಿ ಗಾಂಧಿಯವರ ಚಿಂತನೆಗಳ ಬಗ್ಗೆ ಬರೆಯುತ್ತ ಹೋಗುತ್ತಾರೆ

ಮಹಿಳೆಯರ ಸ್ವಾತಂತ್ರ್ಯ ಕುರಿತು ಗಾಂಧೀ

ಸಮಾಜದಲ್ಲಿ ಮಹಿಳೆಯ ಪಾತ್ರಕ್ಕೆ ಒತ್ತು ಕೊಡುವುದು ಸ್ತ್ರೀ ಮತ್ತು ಪುರುಷ ಸಮಾಜ ಕಾರ್ಯಕರ್ತರ ಕರ್ತವ್ಯ.  ಅವರ ವ್ಯಕ್ತಿತ್ವ ವಿಕಸನಕ್ಕೆ ಅನುಕೂಲವಾಗುವಂತೆ ಕಾರ್ಯಕ್ರಮಗಳನ್ನು ನರ‍್ಧರಿಸಬೇಕು. ಮಹಿಳೆಯರಿಗೆ ಸಂಬಂಧಿಸಿದಂತೆ ವಿವಿಧ ಸಮಸ್ಯೆಗಳನ್ನು ಗಾಂಧೀಜಿಯವರು ಎದುರಿಸಿದ ರೀತಿ, ಪರಿಹಾರ ಕಂಡುಕೊಂಡ ಬಗ್ಗೆ, ಪರಿಶೀಲಿಸಿದ ವಿಧಾನಗಳು ನಮಗೆ ಇಂದಿಗೂ ಮಾದರಿಯಾಗಬಲ್ಲವು. ದೇಶದ ಬಹುದೊಡ್ಡ ಸ್ತ್ರೀವಾದಿ ಚಿಂತಕರೂ, ಸ್ತ್ರೀವಾದಿ ಬರಹಗಾರರೂ ಆಗಿದ್ದ ಗಾಂಧೀಜಿಯವರು ತಮ್ಮ ಅಧ್ಯಯನ, ಅನುಭವ ಸುತ್ತಾಟಗಳಿಂದ ಸ್ತ್ರೀಯರ ಸಂವೇದನೆಗಳನ್ನು ಒಬ್ಬ ಸಾಮಾನ್ಯ ಸೂಕ್ಷ್ಮ ಸಂವೇದನಾಶೀಲ ಹೆಣ್ಣಿನಂತೆಯೆ ಅರಿಯಬಲ್ಲವರಾಗಿದ್ದರು. ಗಾಂಧೀಜಿಯವರು ಮಹಿಳೆಯರ ರಕ್ಷಣೆ ಕರ‍್ಯ ಬಗ್ಗೆ ಹೀಗೆ “ಮಹಿಳೆಯರನ್ನು ಅವರ ಮನಸ್ಸನ್ನು ನಾನು ಸಾಕಷ್ಟು ಚೆನ್ನಾಗಿ ಅರಿತಿದ್ದೇನೆಂದು ಹೇಳಿಕೊಳ್ಳಬಲ್ಲೆ. ನಾನು ದಕ್ಷಿಣ ಆಫ್ರಿಕಾದಲ್ಲಿದ್ದಾಗ ಸುಮಾರು ಅರವತ್ತು ಮಂದಿ ಮಹಿಳೆಯರ ರಕ್ಷಣಾ ಭಾರವನ್ನು ಹೊಂದಿದ್ದ ಕಾಲವೊಂದಿತ್ತು. ಆಗ ಅವರ ಕುಟುಂಬಗಳ ಪುರುಷರೆಲ್ಲ ಸತ್ಯಾಗ್ರಹದಲ್ಲಿ ಭಾಗವಹಿಸಿ ಸೆರೆಮನೆ ಸೇರಿದರು.  ಆದುದರಿಂದ ಎಲ್ಲ ಹುಡುಗಿಯರಿಗೂ, ಸ್ತ್ರೀಯರಿಗೂ ನಾನೇ ಸಹೋದರನಂತೆಯೂ ತಂದೆಯಂತೆಯೂ ಇದ್ದೆನು”  ಎಂದು ಹೇಳಿಕೊಂಡಿದ್ದಾರೆ.

ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯ ಪ್ರತಿರೂಪದಂತಿದ್ದ ಗಾಂಧೀಜಿಯವರಿಗೆ ಪ್ರಾಚೀನ ಪರಂಪರೆಯ ಬಗ್ಗೆ, ವೇದ ಉಪನಿಷತ್ತುಗಳ ಅಧ್ಯಯನದಿಂದ, ಸ್ತ್ರೀಪರ ದೃಷ್ಟಿಕೋನ ತಮ್ಮ ಸಮಕಾಲೀನರೆಲ್ಲರಿಗಿಂತ ಹೆಚ್ಚು ಕಾಳಜಿಪರ‍್ಣವಾಗಿದ್ದಿತು. ‘ಭಾರತೀಯ ಸಂಸ್ಕೃತಿಯ ಪ್ರಾತಿನಿಧಿಕವೆನ್ನಿಸುವ ಗಾರಗೀ , ಮೈತ್ರೇಯ, ಪುರಾಣಕಾಲದ ಕುಂತಿ, ದ್ರೌಪದಿ, ಸೀತೆಯಂತಹವರ ಮಾದರಿ ಸ್ತ್ರೀ ಪಾತ್ರಗಳ ಬಗ್ಗೆ ಅಪಾರ ಗೌರವ ಹೊಂದಿದ್ದರು. ಅಲ್ಲದೇ ಪಾಶ್ಚಾತ್ಯ ಸಂಸ್ಕೃತಿಯ ಪ್ರಸಿದ್ಧ ಮಾದರಿ ಮಹಿಳೆಯರಾಗಿದ್ದ ಆನಿಬೆಸೆಂಟ್, ಫ್ಲಾರೆನ್ಸ್ ನೈಟಿಂಗೇಲ್ ಇನ್ನೂ ಮುಂತಾದವರನ್ನು ಗೌರವಾದರಗಳಿಂದ ಕಂಡಿದ್ದರು. ಸ್ತ್ರೀಯರಿಗೆ ಹೆಚ್ಚಿನ ಸಮಾನತೆ ಸ್ವಾತಂತ್ರ್ಯವಿರಬೇಕೆಂದು ಪ್ರತಿಪಾದಿಸುತ್ತಿದ್ದರು.

ಸಮಾಜದಲ್ಲಿ ಮಹಿಳೆಯರಿಗೂ ಪ್ರಾಮುಖ್ಯತೆ, ಗೌರವ ಇರಬೇಕೆಂದು ಬಯಸಿದ್ದರಲ್ಲದೇ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಅವರು ಹೆಚ್ಚಾಗಿ ಭಾಗವಹಿಸಬೇಕೆಂದು ಒತ್ತಾಸೆಯಿಂದಾಗಿ ಅನೇಕ ಮಹಿಳೆಯರು ಮುಂಚೂಣಿಗೆ ಬರಲು ಸಾಧ್ಯವಾಯಿತು. ಸರೋಜಿನಿ ನಾಯುಡು, ಅಮೃತ ಕೌರ್, ಸುಚೇತಾ ಕೃಪಲಾನಿ, ಮೃದುಲಾ, ಕಮಲಾದೇವಿ, ವಿಜಯಲಕ್ಷ್ಮೀ, ಯಶೋಧರಮ್ಮ, ಮೀರಾಬೆಹನ್ ಇನ್ನೂ ಮುಂತಾದವರಿಗೆ ಗಾಂಧೀಜಿಯವರೇ ಸ್ಫೂರ್ತಿದಾಯಕರಾಗಿದ್ದರು.

ಸ್ತ್ರೀಯರ ಸ್ಥಾನ ಮತ್ತು ಹಕ್ಕುಗಳು– ಗಾಂಧೀಜಿಯವರ ಅಭಿಪ್ರಾಯ :


(೧) ಸಮಾನತೆ ಹಕ್ಕು :


ಸ್ತ್ರೀಯರ ಹಕ್ಕು ಬಾಧ್ಯತೆಗಳ ವಿಚಾರದಲ್ಲಿ ಗಾಂಧೀಜಿಯವರು “ಸ್ತ್ರೀಯರ ಹಕ್ಕು ಬಾಧ್ಯತೆಗಳ ವಿಷಯದಲ್ಲಿ ನಾನು ಸ್ವಲ್ಪವೂ ಸೋಲಲಾರೆ, ಪುರುಷ ನಿರ್ಮಿತವಾದ ಯಾವ ಬಗೆಯ ಶಾಸನಬದ್ಧ ಅಡ್ಡಿ, ಆತಂಕಗಳಿಂದಲೂ ಆಕೆ ತೊಳಲಬಾರದೆಂಬುದು ನನ್ನ ಅಭಿಪ್ರಾಯ. ಗಂಡು ಮಕ್ಕಳನ್ನು ಹೆಣ್ಣುಮಕ್ಕಳನ್ನು ನಾನು ಪೂರ್ಣ ಸರಿಸಮಾನತೆಯಿಂದ ಪರಿಭಾವಿಸಬೇಕು. ಇಬ್ಬರೂ ಬಾಳಲು ಸಮಾನ ಹಕ್ಕನ್ನು ಹೊಂದಿದ್ದಾರೆ. ಪ್ರಪಂಚ ಮುಂದುವರೆದು ಇಬ್ಬರೂ ಸಮಾನವಾಗಿ ಅವಶ್ಯಕ” ಎಂಬ ಅಭಿಪ್ರಾಯ ಹೊಂದಿದ್ದರು.

‘ಸ್ತ್ರೀಯರನ್ನು ಅಬಲೆ ಎನ್ನುವದು ಒಮದು ಅಪಮಾನಕರ ಮಾತೇ ಸರಿ; ಅದು ಮಹಿಳೆಯರಿಗೆ ಪುರುಷ ಎಸಗಿರುವ ಒಂದು ಅನ್ಯಾಯ” ಎಂಬ ಅಭಿಪ್ರಾಯ ಹೊಂದಿದ್ದರು.  ಹೆಣ್ಣುಮಕ್ಕಳಿಗೂ ಆಸ್ತಿಯಲ್ಲಿ ಸಮಾನ ಹಕ್ಕು ಸಿಗಬೇಕೆಂಬ ಆಶಯವುಳ್ಳವರಾಗಿದ್ದರು.

(೨) ಶಿಕ್ಷಣ ಹಕ್ಕು :


ಹೆಣ್ಣುಮಕ್ಕಳಿಗೆ ಶಿಕ್ಷಣದ ಅವಶ್ಯಕತೆಯನ್ನು ಬಲವಾಗಿ ಪ್ರತಿಪಾದಿಸುತ್ತಿದ್ದ ಗಾಂಧೀಜಿಯವರು – ಸ್ತ್ರೀಯರು ಅನಕ್ಷರಸ್ಥರೆಂಬ ಕಾರಣದಿಂದ ಪುರುಷರು ಅವರಿಗೆ ಸಮಾನ ಸ್ಥಾನಮಾನವನ್ನು ಕೊಡದಿರುವುದಾಗಲೀ, ನಿರಾಕರಿಸುವುದಾಗಲೀ ನ್ಯಾಯವಲ್ಲ ಎಂದು ಪದೇ ಪದೇ ಹೇಳುತ್ತಿದ್ದರು.  ಶಿಕ್ಷಣವು ಪುರುಷರಿಗೆ ಎಷ್ಟು ಅಗತ್ಯವೋ ಸ್ತ್ರೀಯರಿಗೂ ಅಷ್ಟೇ ಅಗತ್ಯವಿದೆ.  ಶಿಕ್ಷಣದಿಂದ ನಿಜವಾದ ಸಮಾಜ ಸುಧಾರಣೆಯೂ, ನರ‍್ಮಲ್ಯವೃದ್ಧಿಯೂ ಸರ‍್ವಜನಿಕ ಆರೋಗ್ಯವೃದ್ಧಿಯೂ ಆಗಬೇಕಾದರೆ ಅದು ನಮ್ಮ ಮಹಿಳೆಯರಿಂದ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ನಂಬಿದ್ದರು.


(೩) ಸ್ಮೃತಿ ಮತ್ತು ಧರ್ಮಶಾಸ್ತ್ರಗಳಲ್ಲಿ ಮಹಿಳೆಯ ನೈತಿಕ ಮೌಲ್ಯಗಳ ಸ್ಥಾನ :

‘ಸ್ಮೃತಿಗಳಲ್ಲಿ ಸ್ತ್ರೀಯರ ಸ್ಥಾನ’ ಎಂಬ ಲೇಖನವೊಂದರಲ್ಲಿ ಗಾಂಧೀಜಿಗೆ ಪತ್ರ ಬರೆದ ಗೆಳೆಯರೊಬ್ಬರು “ಮನುಸ್ಮೃತಿಗಳಲ್ಲಿ ಪತಿ ಗುಣಹೀನನಾಗಿದ್ದರೂ, ಕಾಮುಕನಾಗಿದ್ದರೂ, ಸದ್ಗುಣ ರಹಿತನಾಗಿದ್ದರೂ ಸತಿ ಅವನನ್ನು ಸದಾ ದೇವರೆಂದೇ ಭಾವಿಸಬೇಕು” “ಮಹಿಳೆಯರು ತಮ್ಮ ಪತಿಯ ವಚನವನ್ನೇ ಪಾಲಿಸಬೇಕು. ಇದು ಅವರ ಪರಮ ಧರ್ಮ” ಎಂಬಿತ್ಯಾದಿ ವಿಚಾರಗಳ ಬಗ್ಗೆ ಪ್ರಸ್ತಾಪಿಸಿ ಗಾಂಧೀಜಿಯವರ ಅಭಿಪ್ರಾಯ ಕೇಳಿದರಂತೆ. ಈ ಪತ್ರಕ್ಕೆ ಉತ್ತರಿಸುತ್ತ ಗಾಂಧೀಜಿಯವರು “ ಧರ್ಮಶಾಸ್ತ್ರಗಳ ಹೆಸರಿನಲ್ಲಿ ಅಚ್ಚಾಗಿರುವುದೆಲ್ಲವನ್ನೂ ದೇವವಾಣಿ ಎಂದಾಗಲೀ, ದಿವ್ಯ ಸ್ಪೂರ್ತಿಯಿಂದ ಬಂದ ವಾಕ್ಯಗಳೆಂದಾಗಲೀ ಭಾವಿಸಬೇಕಾದ ಅವಶ್ಯಕತೆವಿಲ್ಲವೆಂದು ಧರ್ಮಶಾಸ್ತ್ರಗಳ ಹೆಸರಿನಲ್ಲಿ ಇರುವುದನ್ನೆಲ್ಲ ಪರಿಶೀಲಿಸಿ ನೈತಿಕ ಮೌಲ್ಯವಿಲ್ಲದ ಅಥವಾ ಮೂಲ ಧರ್ಮಕ್ಕೂ ನೀತಿಗೂ ವಿರುದ್ಧವೆನಿಸುವ ಭಾಗಗಳನ್ನು ತೆಗೆದು ಹಾಕಬೇಕೆಂದು ಬಲವಾಗಿ ಖಂಡಿಸುತ್ತಿದ್ದರು.

(೪) ಬಾಲ್ಯವಿವಾಹ ಪದ್ಧತಿ ಖಂಡನೆ (ವಿರೋಧ) :

ಬಾಲ್ಯವಿವಾಹ ಪದ್ಧತಿಯನ್ನು ತಮ್ಮ ಕಟುಮಾತುಗಳಲ್ಲಿ ಖಂಡಿಸುತ್ತಿದ್ದ ಗಾಂಧೀಜಿಯವರು “ಬಾಲ್ಯವಿವಾಹ ಪದ್ಧತಿ ನೀತಿಯ ದೃಷ್ಟಿಯಿಂದಲೂ ಶರೀರದ ದೃಷ್ಟಿಯಿಂದಲೂ ಪಾಪವೇ ಸರಿ, ಏಕೆಂದರೆ ಅದು ನಮ್ಮ ನೀತಿಯನ್ನು ಕೆಡಿಸುವುದಲ್ಲದೇ ದೈಹಿಕ ಅವನತಿಗೂ ಕಾರಣವಾಗುತ್ತದೆ.  ಇಂಥ ಪದ್ಧತಿಗೆ ಪ್ರೋತ್ಸಾಹ ಕೊಡುವುದರಿಂದ ನಾವು ದೇವರಿಂದಲೂ ಸ್ವರಾಜ್ಯದಿಂದಲೂ ದೂರ ಸರಿಯುತ್ತೇವೆ.  ಹುಡುಗಿ ಮಾಸಿಕ ಬಹಿಷ್ಠೆಯಾಗುವ ವಯಸ್ಸಿಗಿಂತಲೂ ಮುಂಚೆ ವಿವಾಹ ಮಾಡದಿರುವುದು ಪಾಪವೆಂದು ಹೇಳುವ ವ್ಯಕ್ತಿ ಆತ್ಮ ಸಂಯಮ ಇಲ್ಲದವನು ಮತ್ತು ದುರ್ವ್ಯಸನದಲ್ಲಿ ಮುಳುಗಿದವನು ಎನ್ನಬೇಕು. ಆ ವಯಸ್ಸು ಪ್ರಾಪ್ತವಾದ ಮೇಲೂ ಕೆಲವು ವರುಷಗಳೊಳಗೆ ಹುಡಗಿಗೆ ವಿವಾಹ ಮಾಡುವುದು ಪಾಪವೆನ್ನಿಸಬೇಕು” ಅಲ್ಲದೇ “ಬಾಲ್ಯದಿಂದಲೇ ತಾಯಿಂದಿರಾಗುವ ಅನೇಕರ ಆರೋಗ್ಯ ನಾಶ್ಯವಾಗಿರುವುದನ್ನು, ಜೊತೆಗೆ ಬಲಾತ್ಕಾರದ ಬಾಲವೈಧವ್ಯವೂ ಬಂದಿರುವುದನ್ನು ನಾನು ಕಂಡಿದ್ದೇನೆ.  ಆದುದರಿಂದ ಹುಡುಗಿಯ ಮದುವೆಗೆ ಸಮ್ಮತಿಯ ವಯಸ್ಸೆಂದರೆ ೧೪ ರಿಂದ ೧೬ಕ್ಕೆ ಸಾಧ್ಯವಾದರೆ ೧೮ಕ್ಕೆ ಕಡಿಮೆ ವಯಸ್ಸಿನ ಹುಡುಗಿಯನ್ನು ಕೊಟ್ಟು ವಿವಾಹ ಮಾಡಬಾರದು. ಸಮ್ಮತಿಯ ವಯಸ್ಸನ್ನು ಹೆಚ್ಚಿಸುವುದಕ್ಕೆ ಸಹಾಯಕವಾಗುವ ಯಾವುದೇ ಬಗೆಯ ವಿವೇಕಯುಕ್ತ ಶಾಸನವನ್ನಾದರೂ ನಾನು ಖಂಡಿತವಾಗಿಯೂ ಒಪ್ಪುತ್ತೇನೆ. ಭಾರತೀಯ ಹೆಣ್ಣು ಮಕ್ಕಳನ್ನು ಅಕಾಲ ಮುಪ್ಪು ಮತ್ತು ಸಾವಿನಿಂದಲೂ, ಹಿಂದೂ ಧರ್ಮದ ನರಪೇತಲಗಳನ್ನು ಹುಟ್ಟಿಸಿ ಬೆಳೆಸಲು ಕಾರಣವಾಗಿದೆಯೆಂಬ ಅಪವಾದದಿಂದಲೂ ಪಾರು ಮಾಡುವಂಥ ಎಲ್ಲ ಘನ ಪ್ರಯತ್ನಗಳಿಗೂ ಯಶಸ್ಸು ದೊರೆಯಲೆಂದು ನಾನು ಅಪೇಕ್ಷಿಸುತ್ತೇನೆ.  ಭಾರತದ ಪ್ರತಿಯೊಬ್ಬ ಯುವಕನೂ ೧೬ ವಯಸ್ಸಿಗೆ ಕಡಿಮೆ ಇರುವ ಹುಡುಗಿಯನ್ನು ವಿವಾಹವಾಗುವುದಿಲ್ಲವೆಂಬ ಪ್ರತಿಜ್ಞೆ ಮಾಡುವನೆಂದೂ ಆಶಿಸುತ್ತೇನೆ” ಎಂದು ಬರೆದಿದ್ದಾರೆ.

ಬಾಲ್ಯವಿವಾಹವೆಂಬ ಕೆಟ್ಟ ಪದ್ಧತಿ ಪಟ್ಟಣಗಳಲ್ಲಿ ಹರಡಿರುವಷ್ಟೇ ಹಳ್ಳಿಗಳಲ್ಲಿಯೂ ಹರಡಿದೆ.  ಅಖಿಲ ಭಾರತ ಮಹಿಳಾ ಸಮ್ಮೇಳನ ತನ್ನ ಹೆಸರನ್ನು ಸಾರ್ಥಕ ಪಡಿಸಿಕೊಳ್ಳ ಬೇಕಾದರೆ ಗ್ರಾಮಾಂತರಕ್ಕೂ ಇಳಿಯಬೇಕೆಂದು ಹೇಳಿದ್ದಾರೆ.

(೫) ವಿಧವಾ ವಿವಾಹ ಪ್ರೋತ್ಸಾಹ :

ವಿಧವಾ ವಿವಾಹವನ್ನು ಪ್ರೋತ್ಸಾಹಿಸುತ್ತಿದ್ದ ಗಾಂಧೀಜಿಯವರು ‘ಬಾಲ್ಯವಿವಾಹಗಳಿಂದಾಗಿ ಹೆಸರಿಗೆ ಮಾತ್ರ ಇದ್ದ ಗಂಡನು ಕಾಲವಾದರೆ ಆ ಬಾಲೆಯ ಮೇಲೆ ವೈಧವ್ಯವನ್ನು ಹೊರಿಸುವುದು ದೇವರಿಗೂ ಮಾನವನಿಗೂ ಅಪಚಾರ ಮಾಡಿದಂತೆ. ಯಾವ ತಂದೆ-ತಾಯಿಗಳು ತಮ್ಮ ಎಳೆಯ ವಯಸ್ಸಿನ ಹುಡುಗಿಯರಿಗೆ ವಿವಾಹವನ್ನು ಮಾಡಿದ್ದಲ್ಲಿ, ೧೯ ವಯಸ್ಸಿಗಿಂತ ಕಡಿಮೆಯವರಾಗಿದ್ದು, ವಿಧವೆಯರಾಗಿದ್ದ ಸಂದರ್ಭದಲ್ಲಿ ಆ ತಂದೆ-ತಾಯಿಗಳು ಆ ಬಾಲ ವಿಧವೆಯರಿಗೆ ಪುರ‍್ವಿವಾಹ ಮಾಡಬೇಕು. ಒಪ್ಪಿ ವಿವಾಹ ಮಾಡಿಕೊಳ್ಳದ ಹತ್ತು ಹದಿನೈದು ವಯಸ್ಸಿನ ಬಾಲಕಿ ವಿವಾಹವಾದ ತರುವಾಯ ಗಂಡನೆನಿಸಿಕೊಂಡವನ ಜೊತೆ ಒಂದು ದಿನವೂ ಜೊತೆಗಿರದೇ ಆಕಸ್ಮಿಕವಾಗಿ ವಿಧವೆಯೆಂದು ಘೋಷಿಸಲ್ಪಟ್ಟವಳು ವಿಧವೆಯಲ್ಲ. ಒಂದು ವೇಳೆ ಅಂಥವಳನ್ನು ವಿಧವೆ ಎಂದು ಕರೆಯುವುದಾದರೆ ಅದು ಭಾಷೆಯ ದುರುಪಯೋಗ, ಶಬ್ದದ ದುರುಪಯೋಗ’ ಎಂದಿದ್ದಾರೆ.  ‘ಪುರುಷರಿಗೆ ಅನ್ವಯಿಸುವ ನಿಯಮವೇ ಮಹಿಳೆಯರಿಗೂ ಅನ್ವಯಿಸಬೇಕು. ೫೦ ವರ್ಷ ವಯಸ್ಸಿನ ವಿಧುರ ಆತಂಕವೂ ಇಲ್ಲದೆ ಪುನರ್ವಿವಾಹ ಮಾಡಿಕೊಳ್ಳಬಹುದಾದರೆ ಅದೇ ವಯಸ್ಸಿನ ವಿಧವೆಗೂ ಇದು ಅನ್ವಯಿಸಬೇಕು. ಆತ್ಮಸಂತೋಷದಿಂದ ಕೈಗೊಳ್ಳುವ ವೈಧವ್ಯ ಹಿಂದೂಧರ್ಮಕ್ಕೆ ಅನರ್ಘ್ಯ ವರ; ಬಲಾತ್ಕಾರದ ವೈಧವ್ಯ ಒಂದು ಅಭಿಶಾಪ’ವೆಂದು ಹೇಳಿದ್ದಾರೆ.

(೬) ವೇಶ್ಯಾವಾಟಿಕೆ ವೃತ್ತಿಯಲ್ಲಿ ಬದುಕು ಕಳೆಯುತ್ತಿದ್ದ ಮಹಿಳೆಗೆ ಆಸರೆ :

ಗಾಂಧೀಜಿಯವರ ಸುದೀರ್ಘವಾದ ಸುತ್ತಾಟದ ದಿನಗಳಲ್ಲಿ ಅವರನ್ನು ಬಹುವಾಗಿ ಕಾಡಿದ್ದು ವೇಶ್ಯಾವಾಟಿಕೆ ವೃತ್ತಿಯಲ್ಲಿ ಬದುಕು ಕಳೆಯುತ್ತಿದ್ದ ಹೆಣ್ಣು ಮಕ್ಕಳದು.  ಬಂಗಾಳದ ಕೆಲವು ಜಿಲ್ಲೆಗಳಲ್ಲಿ ಆಂದ್ರ ಪ್ರಾಂತ್ಯದ ಕಾರೆನಾಡ ಮುಂತಾದ ಕಡೆಗಳಲ್ಲಿ ಹಾಗೂ ದಕ್ಷಿಣ ಭಾರತದ ಹಲವು ಕಡೆ ಬಡ ಹೆಣ್ಣುಮಕ್ಕಳು ತಮ್ಮ ಬದುಕಿಗಾಗಿ ಬಲವಂತದಿಂದ ಆಯ್ದುಕೊಂಡ ವೃತ್ತಿ, ತಮ್ಮ ಮಾನವನ್ನು ಕಳೆದುಕೊಂಡ ವೃತ್ತಿ, ತಮ್ಮ ಮಾನವನ್ನು ಕಳೆದುಕೊಂಡು ಜೀವನ ಹೊರುವ ಈ ಮಹಿಳೆಯರನ್ನು ಕಂಡು ಗಾಂಧೀಜಿಯವರ ಮನ ಕಲಕಿತಂತೆ.
ಹಲವು ಘಂಟೆಗಳ ಕಾಲ ಅವರೊಡನೆ ಸಂಭಾಷಣೆ ನಡೆಸಿದ ಗಾಂಧೀಜಿಯವರಿಗೆ “ಆ ಮಹಿಳೆಯರು ನಾವು ಪುರುಷನ ಕಾಮವನ್ನು ತೃಪ್ತಿಪಡಿಸುವ ಈ ಕೆಲಸದಲ್ಲಿ ದಿನಕೆ ಎರಡು ರೂಪಾಯಿಗಳನ್ನು ಸಂಪಾದಿಸುತ್ತೇವೆಂದೂ, ನಮ್ಮಲ್ಲಿ ಯಾರಿಗೂ ಇದು ಇಷ್ಟವಾದ ಕೆಲಸವಲ್ಲವೆಂದೂ ಆದರೆ ನಮ್ಮ ಜೀವನವನ್ನು ನಡೆಸಲು ಬೇರೆ ದಾರಿ ಇಲ್ಲ”ವೆಂದು ನಿಸ್ಸಹಾಯಕರಾಗಿ ಹೇಳಿದರಂತೆ.  ಅದಕ್ಕೆ ಗಾಂಧೀಜಿಯವರು “ಒಂದು ವೇಳೆ ನಾನು ನಿಮ್ಮನ್ನೆಲ್ಲ ಕರೆದುಕೊಂಡು ಹೋಗಿ ನಿಮಗೆ ಸಾಕಷ್ಟು ಹೊಟ್ಟೆಗೂ ಬಟ್ಟೆಗೂ ಶಿಕ್ಷಣಕ್ಕೂ ಮತ್ತು ಶುದ್ಧ ವಾತಾವರಣಕ್ಕೂ ರ‍್ಪಾಡು ಮಾಡಿಕೊಟ್ಟರೆ ಈ ಅವಮಾನಕರ ಬಾಳನ್ನು ಬಿಟ್ಟು ನನ್ನೊಡನೆ ಬರುವಿರಾ?” ಎಂದು ಕೇಳಿದರಂತೆ. ಅದಕ್ಕೆ ಅವರೆಲ್ಲ ಏಕಕಂಠದಿಂದ “ಆಗಲಿ” ಎಂದು ಉತ್ತರವಿತ್ತರಂತೆ.  ಅಲ್ಲದೇ ನಿಮ್ಮ ಜೊತೆ ನೂಲುವ ಮತ್ತು ನೇಯುವ ಕರ‍್ಯದಲ್ಲಿ ತೊಡಗಿಕೊಳ್ಳುತ್ತೇವೆಂದು ಹೇಳಿದರಂತೆ.

(೭) ದೇವದಾಸಿ ಪದ್ಧತಿ ನಿರ‍್ಮೂಲನೆ :


          ದಕ್ಷಿಣ ಭಾರತದ ದೇವದಾಸಿಯರೊಂದಿಗೆ ಸಂಭಾಷಿಸುತ್ತಿದ್ದಾಗ ಗಾಂಧೀಜಿಯವರು “ ‘ದೇವದಾಸಿಯರೆಂದು ಕರೆದು ಧರ್ಮದ ಹೆಸರಿಲ್ಲಿ ದೇವರಿಗೆ ಅಪಮಾನ ಮಾಡುತ್ತಿದ್ದೇವೆ. ಇದು ಎರಡು ರೀತಿಯ ಪಾತಕ; ಒಂದನೆಯದಾಗಿ ಈ ಸಹೋದರಿಯರನ್ನು ನಮ್ಮ ಕಾಮತೃಪ್ತಿಗೆ ಉಪಯೋಗಿಸಿಕೊಳ್ಳುವುದು, ಇನ್ನೊಂದು ದೇವರ ಹೆಸರಿನಲ್ಲಿ ಈ ಕಾರ್ಯ ನಡೆಸುವುದು, ಈ ರೀತಿಯ ಅನೀತಿಯ ಸೇವೆ ಸಲ್ಲಿಸುವದಕ್ಕಾಗಿಯೇ ಒಂದು ಜನವರ್ಗವೂ ಈ ಕರಾಳ ನೀತಿಯನ್ನು ಸಹಿಸಿಕೊಂಡಿರುವ ಇನ್ನೊಂದು ಜನವರ್ಗವೂ ಇರುವುದನ್ನು ಯೋಚಿಸಿದರೆ ಬಾಳಿನ ಬಗೆಗೇ ನಿರಾಶೆ ಮೂಡುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಆ ಮಹಿಳೆಯರ ಜೊತೆ ಸಂಭಾಷಿಸುತ್ತಿರುವಾಗ ಅವರಿಗೂ ನಮ್ಮ ಸ್ವಂತ ಸಹೋದರಿಯರಿಗೂ ಯಾವ ವ್ಯತ್ಯಾಸವಿದ್ದೀತು? ನಮ್ಮ ಸ್ವಂತ ಸಹೋದರಿಯರನ್ನು ಇಂಥ ಅನೀತಿ ಕೃತ್ಯಗಳಿಗೆ ಬಿಡದಿರುವಾಗ ಇವರು ಈ ರೀತಿ ಉಪಯೋಗಿಸಲ್ಪಡಲು ಅವಕಾಶವೀಯಲು ನಮಗೆ ಹೇಗೆ ಧೈರ್ಯ ಬರುತ್ತದೆ? ಎಂದು ಚಿಂತಿಸುತ್ತಾ ಈ ಸಹೋದರಿಯರಿಗೆ ಸ್ನೇಹ ಹಸ್ತ ನೀಡುವುದು ನಮ್ಮ ರ‍್ತವ್ಯ ಎಂದು ಸಮಾಜವು ಈ ದುಷ್ಟ ಪದ್ಧತಿಯ ವಿರುದ್ಧ ಸೆಟೆದು ನಿಂತರೆ ಇದನ್ನು ಸಮಾಜದಿಂದ ತೊಡೆದು ಹಾಕಲು ಸುಲಭವಾಗುತ್ತದೆ’ ” ಎಂದು ವಿವರಿಸಿದ್ದಾರೆ.

(೮) ಅಪಹರಣ ಮತ್ತು ಅತ್ಯಾಚಾರಕ್ಕೆ ಒಳಗಾದ ಸ್ತ್ರೀಯರ ಬಗ್ಗೆಯೂ ಅನುಕಂಪ ಹಾಗೂ ಕಾಳಜಿ :

ಅಪಹರಣಕ್ಕೊಳಗಾದ, ಅತ್ಯಾಚಾರಕ್ಕೆ ಒಳಗಾದ ಸ್ತ್ರೀಯರ ಬಗ್ಗೆಯೂ ಗಾಂಧೀಜಿಯವರ ಅನುಕಂಪ ಹಾಗೂ ಕಾಳಜಿ ವಿಶೇಷ ಬಗೆಯದು. “ಈ ರೀತಿಯಾಗಿ ಅಪಹರಿಸಲ್ಪಟ್ಟ, ಅತ್ಯಂತ ಕ್ರೂರವಾಗಿ ಹಿಂಸಿಸಲ್ಪಟ್ಟ ಸ್ತ್ರೀಯರು ರಕ್ಷಿಸಲ್ಪಟ್ಟಾಗ ಅವರಿಗೆ ಅವಮಾನವಾಗಿರುವುದರ ಜೊತೆಗೆ ಸಮಾಜವೂ ಅವರನ್ನು ತಿರಸ್ಕಾರದಿಂದ ನೋಡುತ್ತದೆ. ಆದರೆ ಇವರು ಅಪರಾಧವನ್ನು ಗೈದವರಲ್ಲ. ಎಲ್ಲ ನ್ಯಾಯಪರ ಮನಸ್ಸುಳ್ಳವರ ದಯೆಗೂ ಮತ್ತು ಕ್ರಿಯಾತ್ಮಕ ಸಹಾಯಕ್ಕೂ ಇವರು ಪಾತ್ರರು. ಅಂತಹ ಬಾಲೆಯರು ವಿಶಾಲ ಮನಸ್ಸಿನಿಂದಲೂ, ಪ್ರೇಮದಿಂದಲೂ ತಮ್ಮ ಕುಟುಂಬಕ್ಕೆ ಸ್ವಾಗತಿಸಲ್ಪಟ್ಟು ಯೋಗ್ಯವಾದ ರೀತಿಯಲ್ಲಿ ವಿವಾಹ ಮಾಡಲ್ಪಡುವುದಕ್ಕೆ ಯಾವ ಆತಂಕವೂ ಇರಬಾರದು” ಎಂದು ಹೇಳಿದ್ದಾರೆ.

(೯) ಸತಿಪದ್ಧತಿಯ ವಿರೋಧ :

ಸತಿಪದ್ಧತಿಯ ವಿರೋಧವಿದ್ದ ಗಾಂಧೀಜಿಯವರು “ಪತಿ ಹೇಗೆ ತನ್ನ ಪತ್ನಿ ನಿಷ್ಠೆಯನ್ನು, ಅನನ್ಯತೆಯನ್ನು, ಭಕ್ತಿಯನ್ನು ತೋರಿಸಬೇಕು. ತನ್ನ ಪತ್ನಿ ಕಾಲವಾದಾಗ ದಹನ ಚಿತೆಯನ್ನು ಏರಿದ ಯಾವೊಬ್ಬ ಪತಿಯ ನಿದರ್ಶನವನ್ನು ನಾವು ಕೇಳಿಲ್ಲ. ಆದುದರಿಂದ ವಿಧವೆಯಾದವಳು ತನ್ನ ಕಾಲವಾದ ಪತಿಯ ಜೊತೆಗೆ ಬಲಿಯಾಗುವುದು ಅಂಧಶ್ರದ್ಧೆಯಿಂದ ಕೂಡಿದ ಅಜ್ಞಾನ ಮತ್ತು ಪುರುಷನ ಕುರಡು ಹೆಮ್ಮ. ಇವುಗಳಿಂದ ಹುಟ್ಟಿದ ಪದ್ಧತಿ”ಯೆಂದು ಕಟುವಾಗಿ ಟೀಕಿಸಿದ್ದಾರೆ.

(೧೦) ಸ್ತ್ರೀ ಪುರುಷರು ಸಮಾನರು :


ಸ್ತ್ರೀಯರು ತಾವು ಪುರುಷನ ಮೀಸಲಾದ ಬೊಂಬೆ ಎಂದು ಪರಿಗಣಿಸಿಕೊಳ್ಳುವುದನ್ನು ಬಿಡಬೇಕು.  ಆಕೆ ಪುರುಷನೊಂದಿಗೆ ಸರಿಸಮಳೆನ್ನಿಸಿಕೊಳ್ಳಬೇಕಾದರೆ ತನ್ನ ಗಂಡನನ್ನೊಳಗೊಂಡು ಇತರ ಎಲ್ಲ ಪುರುಷರಿಗೋಸ್ಕರವಾಗಿ ತನ್ನನ್ನು ಸಿಂಗರಿಸಿಕೊಳ್ಳಲು ನಿರಾಕರಿಸಬೇಕು. ಪುರುಷರನ್ನು ಹರ್ಷಗೊಳಿಸುವುದಕ್ಕೋಸ್ಕರ ನಿಮ್ಮನ್ನು ಶೃಂಗಾರ ಮಾಡಿಕೊಳ್ಳಲು ನೀವು ತಿರಸ್ಕರಿಸಬೇಕು.

ಅತಿ ಬೆಲೆ ಬಾಳುವ ಆಭರಣವನ್ನು ಧರಿಸುವುದು ದೇಶಕ್ಕೆ ನಿಜವಾದ ನಷ್ಟವೆಂದು ನನ್ನ ಅಭಿಪ್ರಾಯ. ಅಷ್ಟು ಬಂಡವಾಳ ಬಂದಿಸಿಟ್ಟಂತಲ್ಲದೇ ನಶಿಸಿ ಹೋದಂತೆ. ಸ್ತ್ರೀಯರು ಯಾವ ವಸ್ತುಗಳಿಂದ ದಾಸ್ಯತನ ಹೊಂದಿದ್ದಾರೋ ಅಂಥವುಗಳನ್ನು ನನಗೆ ಕೊಟ್ಟು ನನ್ನನ್ನು ಧನ್ಯನನ್ನಾಗಿ ಮಾಡಿದ್ದಾರೆ.  ಪ್ರತಿಯೊಬ್ಬ ಭಾರತೀಯ ಹುಡುಗಿ ವಿವಾಹ ಮಾಡಿಕೊಳ್ಳುವುದಕ್ಕಾಗಿಯೇ ಜನಿಸಿಲ್ಲ. ಹೆಣ್ಣು ತನ್ನ ಸಮಯವನ್ನು ಯಜಮಾನ, ಸ್ವಾಮಿಯ ಸ್ವರ‍್ಥ ಸುಖವನ್ನು ತೃಪ್ತಿಪಡಿಸುವುದರಲ್ಲಿಯೇ ಅಥವಾ ತನ್ನ ಆಡಂಬರದ ಪ್ರದರ್ಶನದಲ್ಲಿಯೇ ಕಾಲ ಕಳೆಯುವುದಕ್ಕಿಂತ  ಕೇವಲ ಒಬ್ಬ ಪುರುಷನ ಸೇವೆ ಮಾಡುವುದಕ್ಕೆ ಬದಲಾಗಿ ಲೋಕಸೇವೆಯಲ್ಲಿ ತೊಡಗಬೇಕೆಂದಿದ್ದಾರೆ.

(೧೧) ಮಹಿಳೆಯರ ನಿಜವಾದ ಆಭರಣ :

ಹರಿಜನ ಪ್ರವಾಸದಲ್ಲಿ ಮೈಸೂರಿನಲ್ಲಿ ಒಂದು ಮಹಿಳಾ ಸಭೆಯಲ್ಲಿ ಗಾಂಧೀಜಿ ಹೇಳಿದರು, “ಸ್ತ್ರೀಯ ನಿಜವಾದ ಆಭರಣ ಆಕೆಯ ಶೀಲ, ಪರಿಶುದ್ಧತೆ. ಲೋಹಗಳು, ಕಲ್ಲುಗಳು ಆಕೆಗೆ ಎಂದೂ ನಿಜವಾದ ಆಭರಣಗಳಾಗಲಾರವು. ಸೀತೆ ದಮಯಂತಿಯರಂತಹ ಹೆಸರುಗಳು ಇಂದು ನಮಗೆ ಪವಿತ್ರವಾಗಿರುವುದು ಅವರ ನಿಷ್ಕಲಂಕ ಚಾರಿತ್ರದಿಂದ ಏನಾದರೂ ಧರಿಸಿದ್ದರೊ ಇಲ್ಲವೋ ಅವರ ಆಭರಣಗಳಿಂದ ಅಲ್ಲ. ನಿಮ್ಮ ಆಭರಣ ನಾನು ಕೇಳುತ್ತಿರುವುದರಲ್ಲಿ ಒಂದು ವಿಶೇಷ ಅರ್ಥವಿದೆ.  ತಮ್ಮ ಒಡವೆಗಳನ್ನು ಕೊಟ್ಟ ಮೇಲೆ ತಮಗೆ ಎಷ್ಟೋ ಉತ್ತಮ ಕಂಡಿದೆ ಎಂದು ಎಷ್ಟೋ ಜನ ಸೋದರಿಯರು ಹೇಳಿದ್ದಾರೆ. ಅನೇಕ ಕಾರಣಗಳಿಂದ ಇದು ಒಂದು ಪುಣ್ಯದ ಕೆಲಸ ಎಂದು ಇನ್ನೊಂದು ಸಭೆಯಲ್ಲಿ ಹೇಳಿದೆ. ಬಡವರಿಗೆ, ನಿಸ್ಸಹಾಯಕರಿಗೆ ತನ್ನ ಆಸ್ತಿಯ ಉತ್ತಮ ಭಾಗ ದಾನ ಮಾಡದ ಧನ ಇಟ್ಟುಕೊಳ್ಳಲು ಸ್ತ್ರೀ ಪುರುಷರು ಯಾರಿಗೂ ಅಧಿಕಾರವಿಲ್ಲ. ಅದು ಒಂದು ಸಾಮಾಜಿಕ, ಧರ್ಮಿಕ ಕರ್ತವ್ಯ ಭಗವದ್ಗೀತೆ ಅದನ್ನು ಯಜ್ಞವೆನ್ನುತ್ತದೆ. ಈ ಯಜ್ಞ ಮಾಡದವರನ್ನು ಕಳ್ಳ ಎಂದಿದ್ದಾರೆ. ಗೀತೆ ಬೇರೆ ಬೇರೆ ಯಜ್ಞಗಳ ಸ್ವರೂಪ ತಿಳಿಸಿದೆ.  ಆದರೆ ಬಡವರ, ಹಸಿದವರ ಸೇವೆ ಮಾಡುವುದಕ್ಕಿಂತ ಉತ್ತಮ ಯಜ್ಞ ಮತ್ತೊಂದಿಲ್ಲ. ನಿಜವಾದ ಅಲಂಕಾರ ದೇಹವನ್ನು ಲೋಹಗಳಿಂದ, ಕಲ್ಲುಗಳಿಂದ, ಹೇರಿಕೊಳ್ಳುವುದರಲ್ಲಿ ಇಲ್ಲ. ಆದರೆ ಹೃದಯ ಶುದ್ದಿ ಪಡೆದು, ಆತ್ಮ ಸೌಂರ‍್ಯ ಹೆಚ್ಚಿಸಿಕೊಳ್ಳುವುದರಲ್ಲಿ ಎಂದು ಭಾರತದ ಮಹಿಳೆಯರಿಗೆ ಸಾರಿ ಸಾರಿ ಹೇಳುತ್ತೇನೆ.”

(೧೨) ಸ್ವಾತಂತ್ರ ಹೋರಾಟದಲ್ಲಿ ಪುರುಷರಿಗಿರುವಷ್ಟೆ ಭಾಗ ಸ್ತ್ರೀಯರದೂ :


ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪುರುಷರಿಗಿರುವಷ್ಟೇ ಭಾಗ ಸ್ತ್ರೀಯರದೂ ಇದೆ. ಸ್ತ್ರೀ ಆತ್ಮ ತ್ಯಾಗದ ಪ್ರತಿರೂಪ, ಅವತಾರ, ಆಕೆ ಒಂದು ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡಿದಾಗ ಪರ್ವತಗಳನ್ನು ಅಲುಗಿಸಬಲ್ಲಳು. ‘ಸ್ತ್ರೀಯರೂ ನಾಗರೀಕ ಕರ್ತವ್ಯಗಳನ್ನು ನರ್ವಹಿಸುವ ಅರ್ಹತೆಯುಳ್ಳವರಾಗಿದ್ದಾರೆ. ಇಂದಿನ ಎಷ್ಟೋ ಮಹಿಳೆಯರು ರಾಜಕೀಯದಲ್ಲಿ ಪಾತ್ರ ವಹಿಸಿದರೂ ಅವರು ಸ್ವತಂತ್ರವಾಗಿ ಚಿಂತನೆ ಮಾಡುವುದಿಲ್ಲ. ತಮ್ಮ ತಂದೆ-ತಾಯಿಗಳ ಅಲ್ಲವೇ ಗಂಡಂದಿರ ಆಜ್ಞೆಯನ್ನು ನಡೆಸುವುದರಲ್ಲಿ ತೃಪ್ತರಾಗುತ್ತಾರೆ. ಆದರೆ ಸ್ತ್ರೀಯರನ್ನು ಸ್ವತಂತ್ರ್ಯವಾಗಿ ಆಲೋಚಿಸುವಂತೆ ಮಾಡುವುದು ಅವರನ್ನು ಬಂಧಿಸಿರುವ ಜಾತಿಯ ಕಟ್ಟುಗಳಿಂದ ಸ್ವತಂತ್ರರಾಗುವಂತೆ ಮಾಡುವುದು ಮುಖ್ಯವೆಂದು ನಂಬಿದ್ದರು.

ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟದ ಜೊತೆ ಜೊತೆಯಲ್ಲಿಯೇ ಮಾಡಿದ ಬಹುಮುಖವಾದುದು.  ಹರಿಜನರ ಸೇವೆಯಲ್ಲಿ ನಿರತರಾಗಿದ್ದರೂ ಮಹಿಳೆಯರ ಉನ್ನತಿಯ ಬಗೆಗೂ ಅಷ್ಟೇ ಕಾತುರರಾಗಿದ್ದರು.  ಮಹಿಳೆಯರು ಯಾವ ವಿಧದಲ್ಲಿಯೂ ಹೀನರೆಂದು ಭಾವಿಸಿಕೊಳ್ಳಬಾರದು ಎಂಬುದನ್ನು ಒತ್ತಿ ಹೇಳುತ್ತಿದ್ದರು. ಮಹಿಳೆಯರ ಉನ್ನತಿಗೋಸ್ಕರ ತಾವೂ ‘ಮಹಿಳೆಯೇ’ ಆದರೆಂದು ಹೇಳಿದರೆ ಅದು ಅತಿಶಯೋಕ್ತಿಯಲ್ಲ. ಅವರು ತಮ್ಮಲ್ಲಿಯೇ ಸ್ತ್ರೀ ಹೃದಯವನ್ನೇ ಅದ್ಯಂತ ರೀತಿಯಲ್ಲಿ ಬೆಳೆಯಿಸಿಕೊಂಡಿದ್ದರು. ಇದ್ದರಿಂದ ಮಹಿಳೆಯರ ಹೃದಯವನ್ನು ಅರಿಯಲು ಅವರಿಗೆ ಸುಲಭವಾಗಿದ್ದಿತು.

(೧೩) ವಿಧವಾ ಕೇಶಮುಂಡನೆ ವಿರೋಧಿಸಿದ ಗಾಂಧೀಜಿ :


ಮಹಾದೇವಿ ತಾಯಿ ರಾಮಕೃಷ್ಣ ಹೆಗಡೆ ಅವರ ಅಕ್ಕ ಸಿದ್ದಾಪುರದ ದೊಡ್ಮನೆ ಹೆಗಡೆ ಅವರ ಮಗಳು. ಮಹಾತಾಯಿ ಅವರಿಗೆ ಬಾಲ್ಯವಿವಾಹವಾಗಿತ್ತು. ಅಪ್ರಾಪ್ತ ವಯಸ್ಸಿನಲ್ಲಿ ಆಕೆಯ ಗಂಡ ತೀರಿಹೋಗಿದ್ದರು. ಬ್ರಾಹ್ಮಣ ಸಂಪ್ರದಾಯದಂತೆ ಆಕೆಯ ತಲೆಯ ಕೇಶ ಮುಂಡನ ಮಾಡಿಸಲಾಗಿತ್ತು. ಇದನ್ನು ಸಿದ್ದಾಪುರಕ್ಕೆ (೧ನೇ ಮಾರ್ಚ್ ೧೯೩೪) ಗಾಂಧೀಜಿ ಬಂದಾಗ ಗಮನಿಸಿದರು. ಮಹಾದೇವಿ ಅವರ ತಂದೆಯ ಜೊತೆ ಗಾಂಧೀಜಿ ಮಾತನಾಡಿದರು. ಕೇಶ ಮುಂಡನಕ್ಕೆ ವಿರೋಧ ವ್ಯಕ್ತಪಡಿಸಿದರು.  ಇದು ಸಂಪ್ರದಾಯ ಎಂದು ಮಹಾದೇವಿ ತಂದೆ ಪ್ರತಿಕ್ರಿಯಿಸಿದಾಗ ‘ನಿಮ್ಮ ಮಗಳಿಂದಲೇ ಕೇಶ ಮುಂಡನಾ ಪದ್ಧತಿ ನಿಲ್ಲಲಿ. ಹೊಸ ಪದ್ಧತಿ ಆರಂಭವಾಗಲಿ. ಏಕೆ ಆಗಬಾರದು?’ ಎಂದು ಗಾಂಧೀಜಿ ಮರು ಪ್ರಶ್ನಿಸಿದರು. ‘ವಾರ್ದಾ ಆಶ್ರಮಕ್ಕೆ ತೆರಳಲು ಆಕೆ ಇಚ್ಛಿಸುತ್ತಾಳೆ. ನಿಮ್ಮ ಅನುಮತಿ ಇದೆಯೇ’ ಎಂದು ಗಾಂಧೀಜಿ ಮತ್ತೆ ಪ್ರಶ್ನಿಸಿದರು. ‘ಅವಳು ಪ್ರಬುದ್ಧಳು. ಮನಸ್ಸಿಗೆ ಬಂದಲ್ಲಿ ಹೋಗಲು ಸ್ವತಂತ್ರಳು’ ಎಂದರು ದೊಡ್ಮನೆ ಹೆಗಡೆ.

ಗಾಂಧೀಜಿಯವರ ಈ ಬಗೆಯ ಸ್ತ್ರೀ ಪರ ಕಾಳಜಿಯು ಮುಂದೆ ಗಾಂಧೀಯುಗದ ಜೊತೆಯಲ್ಲಿಯೇ ಮಹಿಳಾ ಜಾಗೃತಿಯ ಹೊಸಯುಗವೆಂದು ಆರಂಭವಾಗಲು ಕಾರಣವಾಯಿತೆಂಬುದು ಅಷ್ಟೇ ಸತ್ಯ.

ರಚನಾತ್ಮಕ ಕಾರ್ಯಕ್ರಮದ ವಿವರಣೆಯಲ್ಲಿ ಮಹಿಳೆಯರ ಸೇವೆಯ ಬಗ್ಗೆ ಗಾಂಧೀಜಿಯವರು ಹೀಗೆ ಹೇಳಿದ್ದಾರೆ, “ಸತ್ಯಾಗ್ರಹವು ಭಾರತೀಯ ಮಹಿಳೆಯರನ್ನು ಅವರ ಕತ್ತಲು ಗವಿಯಿಂದ ಹೊರಗೆಳೆದು ತಂದಿದೆ. ಇಷ್ಟು ಅಲ್ಪಕಾಲದಲ್ಲಿ ಮತ್ತಾವುದಕ್ಕೂ ಈ ಕರ‍್ಯ ಸಾಧ್ಯವಿರಲಿಲ್ಲ.  ಆದರೂ ಸ್ವರಾಜ್ಯ ಸಂಗ್ರಾಮದಲ್ಲಿ ಹೆಂಗಸರೂ ಸಮಾನ ಭಾಗವಹಿಸುವಂತೆ ಎಸಗಬೇಕೆಂದು ಕಾಂಗ್ರೆಸಿನವರಿಗೆ ಅನಿಸಿಲ್ಲ. ಆದ್ದರಿಂದಲೇ ನಾನು ಮಹಿಳೆಯರ ಸೇವೆಯನ್ನು ನಿರ್ಮಾಣ ಕಾರ್ಯಕ್ರಮದಲ್ಲಿ ಸೇರಿಸಿದ್ದೇನೆ. ಸೇವಾವ್ರತದಲ್ಲಿ ಹೆಣ್ಣು ನಿಜವಾದ ಸಹಚಾರಣಿ, ಜತೆಗಾತಿ ಆಗಬೇಕೆಂದು ಅವರಿಗಿನ್ನೂ ಬೋಧೆಯಾಗಿಲ್ಲ. ಗಂಡಸು ನಿರ್ಮಿಸಿದ ಶಾಸನ ಸಂಪ್ರದಾಯಗಳ ಭಾರತಕ್ಕೆ-ಅದರಲ್ಲಿ ಹೆಂಗಸಿನ ಕೈವಾಡವೇ ಇರಲಿಲ್ಲ. ಹೆಣ್ಣು ಕುಗ್ಗಿ ಹೋಗಿದ್ದಾಳೆ. ಅಹಿಂಸಾ ವಿಧಾನ ಜೀವನದಲ್ಲಿ ತನ್ನ ಬಾಳನ್ನು ತಾನು ರೂಪಿಸಿಕೊಳ್ಳಲು ಹೆಂಗಸಿಗೆ ಗಂಡಸಿನಷ್ಟೇ ಅಧಿಕಾರವಿದೆ.  ಆದರೆ ಅಹಿಂಸಕ ಸಮಾಜದಲ್ಲಿ ರ‍್ತವ್ಯ ಮೊದಲು, ಅಧಿಕಾರ ಆಮೇಲೆ; ಅದು ಬೀಜ, ಇದು ಫಲ. ಆದ್ದರಿಂದ ಪರಸ್ಪರ ಸಹಕಾರ, ಸಲಹೆಗಳಿಂದ ಸಾಮಾಜಿಕ ಸಂಪ್ರದಾಯಗಳನ್ನು, ಆಚರಣೆಗಳನ್ನು ಏರ್ಪಡಿಸಬೇಕು.  ಬಲವಂತ ಕೂಡಲೇ ಕೂಡದು. ಹೆಂಗಸರ ವಿಷಯದಲ್ಲಿ ಗಂಡಸರು ನಡೆದ ರೀತಿಯಲ್ಲಿ ಈ ಸತ್ಯ ಪೂರ್ಣ ಅರ್ಥವಾದಂತೆ ಕಾಣದು. ಹೆಂಗಸನ್ನು ಗೆಳತಿ, ಸಂಗಾತಿ ಎಂದು ಭಾವಿಸದೇ ತಾವು ಅವರ ಒಡೆಯರೆಂದು ಭಾವಿಸಿದ್ದಾರೆ.  ಭಾರತೀಯ ಮಹಿಳೆಯರನ್ನು ಕೈನೀಡಿ ಮೇಲೆಳೆಯುವುದು ಕಾಂಗ್ರೆಸ್ಸಿನವರಿಗೊಂದು ಹೆಮ್ಮೆ. ಹಿಂದಿನ ಕಾಲದ ಗುಲಾಮನಿಗೆ ತಾನು ಸ್ವತಂತ್ರನಾಗಬಲ್ಲೆನೆಂದಾಗಲಿ, ಆಗಬೇಕು ಎಂದಾಗಲಿ ಅನಿಸುತ್ತಿರಲಿಲ್ಲ.  ಹೆಂಗಸರೂ ಹಾಗೆಯೆ. ಸ್ವಾತಂತ್ರ್ಯ ಒಂದೇ ಹಾಗೂ ಅವರಿಗೆ ದಿಕ್ಕು ತೋಚಲಿಲ್ಲ.  ತಾವು ಗಂಡಸಿನ ದಾಸಿಯರೆಂದು ತಿಳಿಯುವಂತೆ ಹೆಂಗಸರಿಗೆ ನಾವು ಹೇಳಿಕೊಟ್ಟಿದ್ದೇವೆ. ಹೆಂಗಸರು ತಮ್ಮ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಂಡು, ಗಂಡಸರಿಗೆ ಸಮವಾಗಿ ನಿಂತು ತಮ್ಮ ಕೆಲಸ ಮಾಡುವಂತೆ ಕಾಂಗ್ರೆಸಿನವರು ಹೆಂಗಸರಿಗೆ ಬಲ ಕೊಡಬೇಕು. ಮನಸ್ಸು ಮಾಡಿದರೆ ಈ ಕ್ರಾಂತಿ ಬಹು ಸುಲಭ. ಕಾಂಗ್ರೆಸಿಗರು ಮೊದಲು ತಮ್ಮ ಮನೆಯಲ್ಲೇ ಪ್ರಾರಂಭಿಸಲಿ. ಹೆಂಡತಿ ಬರೀ ಬಣ್ಣದ ಬೀಸಣಿಗೆಯಾಗಿ, ವಿಲಾಸ ವಸ್ತುವಾಗಿ ಇರಬಾರದು; ಸೇವಾಪಥದಲ್ಲಿ ಗೌರವಾರ್ಹ ಸಹಚಾರಿಣಿಯಂತೆ ಆಕೆಯನ್ನು ಕಾಣಬೇಕು. ಇದಕ್ಕಾಗಿ ವಿದ್ಯಾವತಿಯರಲ್ಲದವರಿಗೆ ಅವರ ಗಂಡಂದಿರು ವಿದ್ಯೆ ಹೇಳಿಕೊಡಬೇಕು. ಇದೇ ಮಾತನ್ನೇ ತಾಯಂದಿರಿಗೂ ಹುಡುಗಿಯರಿಗೂ ಕೊಂಚ ಬದಲಿಸಿ ಅನ್ವಯಿಸಬಹುದು.  ಹಿಂದೂಸ್ತಾನದ ಹೆಂಗಸರ ಅಸಹಾಯ ಅಸ್ಥಿತಿಯ ಈ ಚಿತ್ರ ಏಕಪಕ್ಷೀಯವೆಂದು ನನಗೆ ಹೇಳಬೇಕಾಗಿಲ್ಲ. ಹಳ್ಳಿಗಳಲ್ಲಿ ನಮ್ಮ ಹೆಂಗಸರು ಗಂಡಸರಷ್ಟೇ ಸ್ವತಂತ್ರರು.  ಕೆಲವು ವೇಳೆ ಇವರದೇ ಮೇಲುಗೈ ಎಂಬುದನ್ನು ನಾನು ಬಲ್ಲೆ. ಆದರೂ ನಿಷ್ಪಕ್ಷಪಾತಿಯಾದ ಪರಕೀಯನಿಗೆ ನಮ್ಮ ಹೆಂಗಸರ ಸಾಂಪ್ರದಾಯಿಕ ಶಾಸನೋಕ್ತ ಸ್ಥಾನಹೀನವಾಗಿ ಕಾಣುತ್ತದೆ.  ಅದರಲ್ಲಿ ತೀವ್ರ ಸುಧಾರಣೆ ಬೇಕು.

ಹಿಂದೂಗಳಿಗೆ ಸ್ತ್ರೀಗೆ ಶಕ್ತಿ ಎಂದು ಹೆಸರು. ಆಕೆ ಎಲ್ಲಾ ಶಕ್ತಿಗೂ ಮೂಲ.  ಆಕೆಗೆ ಪುರುಷನ ಉತ್ತಮಾರ್ಧವೆಂದು ಹೆಸರು. ಆದರೆ ನಮ್ಮ ಇಂದಿನ ಸಮಾಜದಲ್ಲಿ ಆಕೆ ತಾನು ವಹಿಸಬಹುದಾದ ಮತ್ತು ವಹಿಸಬೇಕಾದ ಭಾಗವನ್ನು ವಹಿಸದಿರುವುದು ದುರದೃಷ್ಟ.  ಇದಕ್ಕೆ ಮುಖ್ಯ ಕಾರಣ ಕೆಲವು ಸಾಮಾಜಿಕ ನಿಯಮಗಳು ಪದ್ಧತಿಗಳೂ ಆಗಿವೆ. ಅರ್ಧಜನ ಅಜ್ಞಾನದಲ್ಲಿದ್ದರೆ ಯಾವ ಸಮಾಜವು ಉದ್ಧಾರವಾಗುವುದಿಲ್ಲ. ಸ್ತ್ರೀಯರು ಕೀಳು ಎಂಬ ಭಾವನೆಯನ್ನು ತೊಡೆದು ಹಾಕಿ ಅವರಿಗೆ ಸಮಾನತೆಯನ್ನು ಕೊಡಬೇಕು.  ಬಾಲ್ಯವಿವಾಹ ಪದ್ಧತಿ, ವಿಧವಾ ಪದ್ಧತಿ, ಬಹುಪತ್ನಿತ್ವವನ್ನೇ ಕಡಿಮೆ ಮಾಡಬೇಕು.  ಸರ‍್ವಜನಿಕ ಕರ‍್ಯಗಳಲ್ಲಿ ಸ್ತ್ರೀಯರಿಗೆ ಸಮಾನ ಸ್ಥಾನವನ್ನು ಕೊಡಬೇಕು. ಕಾನೂನಿನಿಂದಲೂ ಪದ್ಧತಿಯಿಂದಲೂ ಸ್ತ್ರೀಯರಿಗಿರುವ ಎಲ್ಲಾ ಅನ್ಯಾಯಗಳನ್ನು ತಪ್ಪಿಸಬೇಕು. ಅಂದಾಗ ಮಾತ್ರ ಪೂರ್ಣ ಸ್ವರಾಜ್ಯಕ್ಕೆ ಅರ್ಥಬರುತ್ತದೆ. ಗಾಂಧೀಜಿಯವರು ಈ ವಿಷಯದಲ್ಲಿ ಭಾರತೀಯ ಸಂಸ್ಕೃತಿಯ ಮೂಲತತ್ತ್ವಗಳನ್ನೇ ತಳಹದಿಯನ್ನಾಗಿಟ್ಟುಕೊಂಡಿದ್ದಾರೆ.  ಆದರೆ ಆರ್ಥಿಕ ಜೀವನ, ವ್ಯವಹಾರ, ರಾಜಕೀಯ ಕ್ಷೇತ್ರ ಇತ್ಯಾದಿಗಳಲ್ಲಿ ಸ್ತ್ರೀಯರಿಗೆ ಸ್ವಾತಂತ್ರ್ಯವಿರಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಇಲ್ಲಿ ಆಧುನಿಕ ಪಾಶ್ಚಾತ್ಯ ವಿಚಾರಗಳನ್ನು ಹಲವು ಮಟ್ಟಿಗೆ ಅವರು ಸ್ವೀಕರಿಸಿದ್ದಾರೆಂದು ಹೇಳಬಹುದು.


ಡಾ.ಎಸ್.ಬಿ. ಬಸೆಟ್ಟಿ


ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು ಮತ್ತು ಸಹಾಯಕ ಪ್ರಾಧ್ಯಾಪಕರು
ಗಾಂಧೀ ಅಧ್ಯಯನ ವಿಭಾಗ,
ಕ.ವಿ.ವಿ. ಧಾರವಾಡ
ಮೊ. ಸಂ. ೯೭೪೨೪೮೧೬೦೧
bashetti೩೪೮೫@gmail.com


Leave a Reply

Back To Top