ಕನ್ನಡ ರಂಗಭೂಮಿಗೆ ನವಚೇತನವಿತ್ತ ಗರುಡ. ಸದಾಶಿವರಾಯರು ಜನ್ಮದಿನದ ನೆನಪು

ನೆನಪಿನ ಸಂಗಾತಿ

ಕನ್ನಡ ರಂಗಭೂಮಿಗೆ ನವಚೇತನವಿತ್ತ

ಗರುಡ. ಸದಾಶಿವರಾಯರು

ಜನ್ಮದಿನದ ನೆನಪು

ಕರ್ನಾಟಕದ ವೃತ್ತಿ ರಂಗಭೂಮಿಯ ಶತಮಾನ ಕಾಲದ  ಚರಿತ್ರೆಯಲ್ಲಿ ಗರುಡ ಸದಾಶಿವರಾಯರ ಹೆಸರು  ಅಚ್ಚಳಿಯದಂತೆ ಉಳಿದುಕೊಂಡಿದೆ. ಅವರು ಕೇವಲ ಒಬ್ಬ ಕಲಾವಿದರಲ್ಲ, ಅಪೂರ್ವ ಪ್ರತಿಭೆಯ  ಅಸಾಧಾರಣ ಪ್ರಯೋಗಶೀಲರು. ರಂಗಭೂಮಿಯಲ್ಲಿ ಹೊಸದೊಂದು ಪರಂಪರೆಯನ್ನೇ ನಿರ್ಮಿಸಿದವರು. ಸ್ವತಃ ನಾಟಕಗಳನ್ನು ಬರೆದು ನಿರ್ದೇಶಿಸಿ ರಂಗಕ್ಕೆ ತಂದವರು. ದೇಶಪ್ರೇಮವನ್ನು ಜನರಲ್ಲಿ ಹುಟ್ಟಿಸಿದ ಧೀಮಂತ ಕಲಾವಿದ. ನೂರಾರು ಕಲಾವಿದರನ್ನು ಬೆಳೆಸಿದವರು.
            ಗುರುನಾಥ ಭಟ್ಟ- ಸುಭದ್ರಾಬಾಯಿಯವರ ಹಿರಿಯ ಮಗನಾಗಿ ೧೮೮೨ ಅಗಸ್ಟ್ ೧೮ ರಂದು ಗಿಣಿಗೇರಿಯಲ್ಲಿ ಜನಿಸಿದ ಸದಾಶಿವರಾಯರು ಅಂದಿನ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಲೋಕಮಾನ್ಯ ಬಾಲಗಂಗಾಧರ ಟಿಳಕರ ಪ್ರಭಾವಕ್ಕೊಳಗಾಗಿ ದೇಶಪ್ರೇಮವನ್ನು ಮೈಮನಗಳಲ್ಲಿ ತುಂಬಿಕೊಂಡರು. ಶಾಲಾ ಶಿಕ್ಷಣದೊಂದಿಗೆ ಮನೆತನದ ವೈದಿಕ ಶಿಕ್ಷಣವನ್ನೂ ಪಡೆದುಕೊಂಡ ಅವರು ಮುಂದೆ ನಾಟಕ ರಂಗಭೂಮಿಯ ಸಂಪರ್ಕಕ್ಕೆ ಬಂದು ಅಭಿನಯದಲ್ಲಿ ಪಳಗಿದರು. ಪಾಂಡುರಂಗ ಕೃಷ್ಣ ಮಂಡಳಿಯ ಬಂಧವಿಮೋಚನೆ ಎಂಬ ನಾಟಕದಲ್ಲಿ ಅವರು ಟಿಳಕರ ಬೆಂಬಲಿಗನ ಪಾತ್ರ ಮಾಡಿದ್ದರು. ಆಗಲೇ ಬ್ರಿಟಿಷ್ ಸರಕಾರದ ನೌಕರಿ ಮಾಡಬಾರದೆಂಬ ನಿಯಮಕ್ಕೆ ಅವರು ಒಳಗಾಗಿದ್ದರು. ಮುಂದೆ ಕೆಲಕಾಲ ಹೈದರಾಬಾದಿನ  ಕಾರಖಾನೆಯೊಂದರಲ್ಲಿ ತಾಂತ್ರಿಕ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡಿದರು.
         ೧೯೦೯ ರಲ್ಲಿ ಪ್ರಾರಂಭವಾದ ಶಿವಸುತ ಮಂಡಳಿಯಲ್ಲಿ ರಾಯರು ಸ್ವತಃ ಶರಣಬಸವೇಶ್ವರನ ಜೀವನ ಕುರಿತು ನಾಟಕ ಬರೆದರು. ಅಲ್ಲಿಂದ ಮುಂದೆ ರಾಯರಿಗೆ ರಂಗಭೂಮಿಯ ನಂಟು ಶಾಶ್ವತವಾಯಿತು.   ಬೇರೆ ಬೇರೆ ನಾಟಕ ಕಂಪನಿಗಳಲ್ಲಿ ನಟನೆ , ನಾಟಕ ತರಬೇತಿ, ನಾಟಕ ರಚನೆಗಳನ್ನೆಲ್ಲ ಮಾಡಿದ ಅವರು ೧೯೧೯ ರಲ್ಲಿ ಅಂದರೆ ತಮ್ಮ ೩೭ ನೆಯ ವಯಸ್ಸಿನಲ್ಲಿ ಸ್ವಂತದ ಶ್ರೀ ದತ್ತಾತ್ರೇಯ ನಾಟಕ ಮಂಡಳಿಯನ್ನು ಸ್ಥಾಪಿಸಿದರು. ಸುಮಾರು ಐದು ದಶಕಗಳ ಕಾಲ ರಂಗಭೂಮಿಯಲ್ಲಿ  ತಮ್ಮ ಅಮೋಘ ಸೇವೆ ಸಲ್ಲಿಸಿದ ಸದಾಶಿವರಾಯರು ೯೪ ವರ್ಷಗಳ ದೀರ್ಘ ಕಾಲ ಬದುಕಿ ೧೯೮೫ ರ ಸೆಪ್ಟೆಂಬರ್ ೨೩ ರಂದು ನಿಧನರಾದರು.
                       ಸದಾಶಿವರಾಯರು ವೃತ್ತಿ ನಾಟಕ ರಂಗಭೂಮಿಯಲ್ಲಿ ಅನೇಕ ಕ್ರಾಂತಿಕಾರಕ ಬದಲಾವಣೆಗಳನ್ನು ತಂದರು. ಅವರ ಕಂಪನಿ ಕಲಾವಿದರ ತರಬೇತಿ ಕೇಂದ್ರದಂತಿತ್ತು. ಗದಗಿನಲ್ಲಿ ಹುಟ್ಟಿಬಂದ ದತ್ತಾತ್ರೇಯ ನಾಟಕ ಮಂಡಳಿ ಕರ್ನಾಟಕ ಮಹಾರಾಷ್ಟ್ರಗಳಲ್ಲಿ  ಕಲಾರಸಿಕರ ಮನಸೂರೆಗೊಂಡು ಅಪಾರ ಖ್ಯಾತಿ ಗಳಿಸಿತು. ರಾಷ್ಟ್ರೀಯ ಭಾವನೆಗಳನ್ನು ಪ್ರೇರೇಪಿಸುವ ನಾಟಕಗಳನ್ನು ಬರೆದು ಆಡುತ್ತಿದ್ದ ರಾಯರು ತಮ್ಮದೇ ಆದ ರೀತಿಯಲ್ಲಿ ದೇಶಸೇವೆ ಮಾಡಿದರು. ಒಂದು ಹಂತದಲ್ಲಿ ಗರುಡರ ನಾಟಕ ಕಂಪನಿ ಸಾಂಪತ್ತಿಕವಾಗಿಯೂ ಸಮೃದ್ಧಿ ಪಡೆಯಿತು.ರಂಗಭೂಮಿಯಲ್ಲಿ ಹಲವು ಬಗೆಯ ಹೊಸ ಪ್ರಯೋಗಗಳನ್ನು ನಡೆಸಿದ ಗರುಡರಿಗೆ ಬೆಳಗಾವಿಯಲ್ಲಿ ಕರ್ನಾಟಕ ನಾಟಕಾಲಂಕಾರ ಎಂಬ ಬಿರುದಿತ್ತು ಸನ್ಮಾನಿಸಲಾಯಿತು. ೧೯೨೫ ರಿಂದ ೧೯೪೯ ರತನಕ ಅವರ ಮಂಡಳಿಯು ಸುವರ್ಣಯುಗವನ್ನೇ ಕಂಡಿತು. ಮೊದಲ ಸಲ ಪುಣೆ  ಮುಂಬಯಿಯಲ್ಲಿಯೂ ಅವರು ಕನ್ನಡ ನಾಟಕಗಳನ್ನಾಡಿ ಮೆಚ್ಚುಗೆ ಪಡೆದುಕೊಂಡರು. ಗರುಡರು ತಮ್ಮ ಮಂಡಳಿಯನ್ನು ಕಲಾವೈಭವದ ಉತ್ತುಂಗ ಸ್ಥಿತಿಗೆ ಕೊಂಡೊಯ್ದರು. ಗರುಡರ ಗರಡಿಯಲ್ಲಿ ನೂರಾರು ಕಲಾವಿದರು , ಹಾಡುಗಾರರು ತಯಾರಾದರು. ವಿವಿಧ ಕಂಪನಿಗಳು ಅವರ ಮಾರ್ಗದರ್ಶನ ಪಡೆದವು. ಅವರ ಕಂಪನಿಯಲ್ಲಿ ಶಿಸ್ತು ಬಹಳ ಮುಖ್ಯವಾಗಿತ್ತು. ಕಲಾವಿದರಲ್ಲಿ ತಮ್ಮ ಕಲೆಯ ಕುರಿತು ಶ್ರದ್ಧೆ ಇರಬೇಕೆಂದು ಅವರು ಬಯಸುತ್ತಿದ್ದರು. ಸಾಮಾಜಿಕ ಮತ್ತು ರಾಷ್ಟ್ರೀಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಗರುಡರು ಬರೆದ ನಾಟಕಗಳು ಬಹಳ ಜನಪ್ರಿಯತೆ ಪಡೆದವು. ಗರುಡರ ಜೀವನವೆಂದರೆ ವಾಸ್ತವವಾಗಿ ಕನ್ನಡ ರಂಗಭೂಮಿಯ ಬೆಳವಣಿಗೆಯ ಇತಿಹಾಸವೇ ಆಗಿದೆ.
( ಬೆಳಗಾವಿಯ ಹಿರಿಯ ವಿದ್ವಾಂಸ ಡಾ. ಬಸವರಾಜ ಜಗಜಂಪಿಯವರು ಗರುಡರ ಕುರಿತಾಗಿಯೇ ಮಹಾಪ್ರಬಂಧ ಬರೆದು ಪಿ.ಎಚ್.ಡಿ. ಪದವಿ ಪಡೆದಿದ್ದಾರೆಂಬುದನ್ನಿಲ್ಲಿ ಸ್ಮರಿಸಬಹುದು)

——————————————————-

ಎಲ್. ಎಸ್. ಶಾಸ್ತ್ರಿ

Leave a Reply

Back To Top