ಅಂಕಣ ಸಂಗಾತಿ
ಸುಜಾತಾ ರವೀಶ್
ಹೊತ್ತಿಗೆಯೊಂದಿಗೆ ಒಂದಿಷ್ಟು ಹೊತ್ತು
ನಡುವೆ ಅಂತರವಿರಲಿ
ಕೃತಿ: ಭಾವಲಹರಿ ಕವನ ಸಂಕಲನ
ಕವಿ: ಡಿ ಪದ್ಮನಾಭ
ಮೊದಲ ಮುದ್ರಣ ೨೦೧೮
ಪ್ರಕಾಶಕರು ಹೆಚ್ ಎಸ್ ಆರ್ ಎ ಪ್ರಕಾಶನ ಬೆಂಗಳೂರು.
ಆಟೋಗಳ ಹಿಂಭಾಗದಲ್ಲಿರುವ ಬರಹಗಳನ್ನು ಗಮನಿಸುವುದು ನನ್ನ ಅಭ್ಯಾಸ. “ತಾಯಿಯೇ ದೇವರು” “ಪ್ರೀತಿ ನೀನಿರದೇ ಹೇಗಿರಲಿ” “ಸ್ವೀಟಿ ನೀ ಬಲು ಘಾಟಿ” ಇಂಥವುಗಳ ಮಧ್ಯೆ ಜೊತೆ ಜೊತೆಯಲ್ಲೇ ಇರುವ ಘೋಷಣಾ ವಾಕ್ಯ “ನಡುವೆ ಅಂತರ ಇರಲಿ”. ನನ್ನ ಹಿಂದೆಯೇ ಅಂಟಿದ ಹಾಗೇ ನಿಲ್ಲಬೇಡ ಕೀಪ್ ಡಿಸ್ಟನ್ಸ್ ಎಂದು ಆಟೋ ಹೇಳುತ್ತಿದ್ದರೂ ಮನುಷ್ಯರ ನಡುವಣ ಸಂಬಂಧಗಳಿಗೂ ಅದು ಎಷ್ಟು ಚೆನ್ನಾಗಿ ಅನ್ವಯಿಸುತ್ತದೆ ಅಲ್ಲವೆ?
ಮೊದಲಿಗೆ ಈ ಅಂತರ ಎಂದರೇನು ? ಎರಡು ಭೌತಿಕ ಚರ ಅಚರ ವಸ್ತುಗಳ ಮಧ್ಯದಲ್ಲಿನ ದೂರ. ಅಚರ ವಸ್ತುಗಳ ಮಧ್ಯೆ ಇದು constant.ಆದರೆ ಚರ ವಸ್ತುಗಳ ನಡುವಣ ದೂರ ಬದಲಾಗುತ್ತಿರುತ್ತದೆ. ಕರೋನ ಬಂದ ಮೇಲೆ ಸಾಮಾಜಿಕ ಅಂತರದ ಪರಿಕಲ್ಪನೆಯೂ ಬಂದು ಆರೋಗ್ಯದ ಹಿತದೃಷ್ಟಿಯಿಂದ ಮನುಷ್ಯರ ನಡುವಿನ ಭೌತಿಕ ಅಂತರ ಹೆಚ್ಚಾಗುತ್ತ ನಡೆದಿವೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ವೈಜ್ಞಾನಿಕ ಆಧುನಿಕ ವಿಧಾನಗಳು ಜಗತ್ತನ್ನು ಜಾಗತಿಕ ಹಳ್ಳಿ ಮಾಡಿ ಅಂಗೈಯಲ್ಲಿ ಪ್ರಪಂಚ ತೋರಿಸುತ್ತಿದ್ದರೆ ಬಾಂಧವ್ಯ ಸ್ನೇಹಗಳ ಅಂಟು ಮಾಸಿ ನಂಟು ಕಡಿದು ಮನುಷ್ಯ ಏಕಾಂಗಿ ಆಗಲು ಹುನ್ನಾರ ಹೂಡುತ್ತಿವೆ .
ಸ್ನೇಹಸಂಬಂಧ, ರಕ್ತಸಂಬಂಧ, ವೃತ್ತಿ ಬಾಂಧವ್ಯ, ನೆರೆಹೊರೆಯವರ ವಿಶ್ವಾಸ ಕುಟುಂಬದ ಸಾಮರಸ್ಯ ಎಲ್ಲದಕ್ಕೂ ಮುಕ್ತಮನಸ್ಸಿನ ನಡವಳಿಕೆ ಬೇಕೆಬೇಕು. ನೀರಿನಂತೆ ಹಾಕಿದ ಪಾತ್ರೆಯ ಆಕಾರ ಪಡೆಯುವ ಮನಸಿರಬೇಕು. ಅದು ನಿಜ. ಸಹಕಾರ ಸಾಮರಸ್ಯ ಇರಬೇಕು ಒಪ್ಪಿಕೊಳ್ಳುವ. ಆದರೆ ಈಗೀಗ ಈ ಸ್ವಾರ್ಥ ಸಮಾಜದಲ್ಲಿ ಹೊಂದಾಣಿಕೆಯ ಮನೋಭಾವದವರು ಭಾವನಾತ್ಮಕವಾಗಿ “ಉಪಯೋಗಿಸಿಕೊಳ್ಳಲ್ಪಡುತ್ತಿದ್ದಾರೆ”. ಒಳ್ಳೆಯತನ ಅನ್ನುವುದು ದೌರ್ಬಲ್ಯ ಸೂಚಕವಾಗಿದೆ . ನಮ್ಮ ಒಳ್ಳೆಯತನವನ್ನು ಬಿಡಬಾರದು. ಅದರದು ದೌರ್ಬಲ್ಯ ಆಗದ ಹಾಗೆ ಎಚ್ಚರಿಕೆಯನ್ನು ವಹಿಸಬೇಕು . ಸರ್ಪಕ್ಕೆ ಸನ್ಯಾಸಿ ಕೊಟ್ಟ ಉಪದೇಶದ ಕಥೆ ನೆನಪಿನಲ್ಲಿಟ್ಟುಕೊಳ್ಳಬೇಕು. ಹಾಗೆ ಮಾಡಲು ಒಂದು ರೀತಿಯ ಆರೋಗ್ಯಕರವಾದ ಅಂತರ ಕಾಪಾಡಿಕೊಳ್ಳುವ ಅವಶ್ಯಕತೆ ಇರುತ್ತದೆ. ಬದುಕು ತೆರೆದ ಪುಸ್ತಕವಾಗಿ ಗೋಚರ ವಾಗಬಾರದು. ಆಗ ಭಾವನೆಗಳ ಬೆತ್ತಲೆತನ ಅಸಹ್ಯ ಉಂಟು ಮಾಡುತ್ತದೆ. ಅದಕ್ಕೆ ಸಂಬಂಧಗಳ ಮದ್ಯದ ಅಂತರದ ಬಟ್ಟೆ ತೊಡಿಸಬೇಕು. ಆಗ ಬಾಳೂ ರೋಚಕ, ಬೇರೆಯವರ ಕೈಯಲ್ಲಿನ ಪಗಡೆಯಾಟದ ಕಾಯಿಗಳಾಗುವುದೂ ತಪ್ಪುತ್ತದೆ. ನಮ್ಮ ಬಲಹೀನತೆಗಳ ಮೇಲೆ ಬೇರೆಯವರ ಆಧಿಪತ್ಯವೂ ತಪ್ಪುತ್ತದೆ.
ಸ್ನೇಹಿತರಾಗಲಿ ಬಂಧುಗಳಾಗಲೀ ಪತಿ ಸತಿ ಮಕ್ಕಳಾಗಲಿ ಸಂಬಂಧಗಳ ಮಧ್ಯೆ ಒಂದು ಸೂಕ್ಷ್ಮ ಲಕ್ಷ್ಮಣ ರೇಖೆ ಇರುತ್ತದೆ. ಅದನ್ನು ದಾಟಬಾರದು. ಕಟ್ಟಿರುವ ಬಂಧನದ ರೇಖೆಯ ಗಂಟನ್ನು ಬಿಚ್ಚಬಾರದು . ಇದು ಪಾಲಿಸಬೇಕಾದ ಅಂತರದ ರೀತಿ . Too much familiarity breeds contempt ಎಂಬುದೊಂದು ಆಂಗ್ಲ ನಾಣ್ಣುಡಿ ಹೇಳುವುದು ಇದನ್ನೇ. “ಸಂಬಂಧಗಳ ಮಧ್ಯೆ ಅಂತರ ಕಾಯ್ದುಕೊಳ್ಳುವವನಿಗೆ ದುಃಖವಿಲ್ಲ”. .
ಎಲ್ಲರಲ್ಲೂ ಬೆರೆತು ಸ್ನೇಹ ಪ್ರೀತಿ ತೋರಿಸುತ್ತಿರಬೇಕು. ಆದರೆ ಆಮೆ ಅಪಾಯ ಕಂಡಾಗ ಚಿಪ್ಪೊಳಗೆ ತಲೆತೂರಿಸುವಂತೆ ಬುದ್ಧಿ ಸಮತೆಯ ಜಾಗರೂಕತೆ ಬೇಕು. ಅದೇ ಅಂತರ ಕಾಪಾಡಿಕೊಳ್ಳುವ ಕಲೆ . The art of maintaining the distance . ಅದನ್ನು ಅರಿತ ಮನುಷ್ಯ ಯಾವುದನ್ನೂ ತಾಕಿಸಿಕೊಳ್ಳದೆ ಹಾಗೆಂದು ಯಾವುದನ್ನೂ ಬಿಟ್ಟುಕೊಡದೇ ಜಾಣ್ಮೆಯ ಜೀವನ ನಡೆಸಬಲ್ಲ .
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು