ಕಥಾ ಸಂಗಾತಿ
ಬಿ.ಟಿ.ನಾಯಕ್ ರವರ ಕಥೆ-
ಬಂಗಾರದ ಮಾವಿನಕಾಯಿ
ಅಜ್ಜಿ ಆನಂದಮ್ಮಗೆ ವಯಸ್ಸು ಎಂಬತ್ಮೂರು ತುಂಬಿತ್ತು. ಆಗಷ್ಟೇ, ಆಕೆಯ ಜನ್ಮದ
ವಾರ್ಷಿಕೋತ್ಸವವನ್ನು ಕುಟುಂಬದವರು ವಿಜೃಂಭಣೆಯಿಂದ ಮಾಡಿದ್ದರು. ಅಜ್ಜಿಗೆ ಬಣ್ಣ ಬಣ್ಣದ ಸೀರೆ ಉಡಿಸಿ ಆರತಿ ಮಾಡಿ, ತಲೆ ಮೇಲೆ ಬಣ್ಣ ಬಣ್ಣದ ರಾಶಿ ರಾಶಿ ಹೂವುಗಳನ್ನು ಸುರಿದು ಕುಟುಂಬದವರು ಸಂಭ್ರಮ ಪಟ್ಟಿದ್ದರು. ಆ ಸಂಭ್ರಮದಲ್ಲಿ ಮುಂಚೂಣಿಯಲ್ಲಿದ್ದವರು ಮೇಘರಾಜ, ರಘುರಾಮರಾಜ ಮತ್ತು ನಂದರಾಜ. ಏಕೆಂದರೇ ಈ ಮೂವರೂ ಅಜ್ಜಿಯಿಂದ ಒಂದೊಂದು ಕೊಡುಗೆಯನ್ನು ಬಯಸಿದ್ದರು. ಅದೇಕೋ ಒಂದು ದಿನ ಅಜ್ಜಿ ಆ ಮೂವರಿಗೆ
ಹೀಗೆ ಹೇಳಿದ್ದಳು;
‘ಮಕ್ಕಳಾ, ನೀವು ಮೂವರಿಗೂ ನನ್ನ ಕಡೆಯಿಂದ ಸಮನಾಗಿ ಮೂರು ವಸ್ತುಗಳನ್ನು ಕೊಡುಗೆ ನೀಡ ಬೇಕೆಂದಿದ್ದೇನೆ. ಆ ವಸ್ತುಗಳು ಎಲ್ಲಿವೆ ಎಂದು ನನ್ನ ಜನ್ಮ ದಿನದಂದು ತಿಳಿಸುತ್ತೇನೆ ‘ ಎಂದು
ಹೇಳಿದ್ದಳು. ಅದರಂತೆ ಆ ಮೂವರು ಅಣ್ಣ ತಮ್ಮಂದಿರು ಸೇರಿ ಅಜ್ಜಿಯ ಜನ್ಮ ದಿನಾಚರಣೆಯನ್ನು ಬಹಳೇ ಮುತುವರ್ಜಿಯಿಂದ ಮಾಡಿದರು. ಆಗ ಆಕೆ ಹೀಗೆಯೂ ಕೂಡ ಹೇಳಿದ್ದಳು;
‘ಮಕ್ಕಳಾ, ನಾನು ನೀವು ಮೂವರಿಗೆ ಮೂರು ಬಂಗಾರದ ಮಾವಿನ ಕಾಯಿಗಳನ್ನು ಕೊಡುತ್ತೇನೆ,
ಅವುಗಳನ್ನು ನನ್ನಿಂದ ಪಡೆಯುವೀರಂತೆ.’ ಹಾಗಾಗಿ ಅವರು ಕೊಡುಗೆಗಾಗಿ ಕಾಯುತ್ತಿದ್ದರು.
ಆಗ ಜನ್ಮ ದಿನವೇನೋ ಆಯಿತು, ಆದರೇ, ಅಕಸ್ಮಾತ್ತಾಗಿ ಆಗ ಅಜ್ಜಿ ಒಮ್ಮಿದೊಮ್ಮೆಲೇ ಮೂರ್ಛೆ ಹೋಗಿ ಬಿದ್ದು ಬಿಟ್ಟಳು. ಆಮೇಲೆ ಅಜ್ಜಿಯನ್ನು ಒಂದು ವಿಶೇಷ ಕೊಠಡಿಗೆ ಕಳಿಸಿ ಆಕೆಯ ಆರೈಕೆಯನ್ನು ಮಾಡ ತೊಡಗಿದರು. ತಮ್ಮ ತಮ್ಮ ಹೆಂಡಂದಿರಿಗೆ ಅಜ್ಜಿಗೆ ಏನೂ ತೊಂದರೆಯಾಗದಂತೆ ನೋಡಿ ಕೊಳ್ಳಲು ಕೂಡ ಹೇಳಿದರು. ಅವರ ಅಪ್ಪಣೆಯನ್ನು ಅವರವರ ಶ್ರೀಮತಿಗಳು
ಪಾಲಿಸಲು ಮುಂದಾದರು.
ಏನೋ ದೇವರ ದಯದಿಂದ ಅಜ್ಜಿಗೆ ಎಚ್ಚರವಾಯಿತು. ಅಜ್ಜಿಗೆ ಎಚ್ಚರವಾಯಿತೆಂದು ತಿಳಿದ
ಕೂಡಲೇ ಕುಟುಂಬದವರೆಲ್ಲ ಹತ್ತಿರ ಬಂದು ಆಕೆಯನ್ನು ಸುತ್ತುವರಿದು ನಿಂತರು. ಆಗ ಆಕೆ ಮೆಲ್ಲಗೆ
ಹೇಳಿದಳು;
‘ಮಕ್ಕಳಾ ನನಗೇನಾಗಿದೆ ? ನೀವೆಲ್ಲಾ ಯಾಕೆ ನನ್ನನ್ನು ಸುತ್ತುವರಿದಿದ್ದೀರಾ ?’ ಎಂದಾಗ;
‘ಅಜ್ಜಿ ನೀನು ಒಮ್ಮಿದೊಮ್ಮೆಲೇ ಮೂರ್ಛೆ ಹೋಗಿ ಬಿಟ್ಟೆ. ನಿನಗೆ ಈಗ ತಾನೇ ಎಚ್ಚರವಾಗಿದೆ ಅಷ್ಟೇ’ ಎಂದ ನಂದರಾಜ. ಅಜ್ಜಿಗೆ ಸ್ವಲ್ಪ ನೀರು ಕುಡಿಸಿದರು.
ಆಕೆಗೆ ಸ್ವಲ್ಪ ಚೇತರಿಕೆ ಕಂಡು ಬಂತು. ಆಗ ಎದ್ದು ಕುಳಿತು ಹೀಗೆ ಹೇಳಿದಳು; ‘ಮಕ್ಕಳಾ, ನನಗೇನೂ ಆಗಿಲ್ಲ. ನೀವು ಗಾಬರಿಯಾಗಬೇಡಿ. ನನಗೆ ಸ್ವಲ್ಪ ವಿಶ್ರಾಂತಿ ಬೇಕು.
ನೀವು ಯಾರಾದರೊಬ್ಬರು ನನ್ನ ಜೊತೆಗೆ ಇದ್ದರೇ ಸಾಕು.’ ಎಂದಳು.
‘ಅಣ್ಣ ಮೇಘು ನೀನೆ ಅಜ್ಜಿ ಹತ್ತಿರ ಇದ್ದುಬಿಡು, ನಾವು ಹೋಗ್ತೇವೆ’ ಎಂದ ರಘುರಾಮ.
‘ಸರಿ …ನೀವೆಲ್ಲಾ ಹೊರಟು ಬಿಡಿ’ ಎಂದ ಮೇಘು. ಆಗ ನಂದು ಆತನ ಕಿವಿಯಲ್ಲಿ ಹೀಗೆ ಉಸುರಿದ;
‘ಬಂಗಾರದ ಮಾವಿನ ಕಾಯಿಗಳನ್ನು ಕೇಳಲು ಮರೆಯಬೇಡ’ ಎಂದು.
‘ಅಯಿತಾಯಿತು..ನೀನು ಮೊದಲು ಹೋಗು ‘ ಎಂದು ಆತನನ್ನು ಕಳಿಸಿಕೊಟ್ಟ. ಎಲ್ಲರೂ ಹೊರಗೆ ಹೋದಾಗ ಮೇಘು ಅಜ್ಜಿಗೆ ಕೇಳಿದ ;
‘ಅಜ್ಜಿ ಅದೇನೋ ನಮಗೆ ನೀಡುವ ಕೊಡುಗೆಗಳ ಬಗ್ಗೆ ನೀನು ಹೇಳಿದ್ದೆ ‘ ಎಂದ.
‘ಏನಪ್ಪಾ ಏನು ಕೊಡುಗೆ. ಸಿರಿವಂತರಾದ ನಿಮಗೆ ನಾನೇನು ಕೊಡಬಲ್ಲೆ ? ಆದೇನು ಹಾಸ್ಯ ಮಾಡ್ತೀಯ ?’ ಏಂದಳು ಅಜ್ಜಿ.
‘ಇಲ್ಲ ಅಜ್ಜಿ ನೀನೆ ಹೇಳಿದೆ. ನಾವು ಮೂವರಿಗೂ ಬಂಗಾರದ ಮಾವಿನ ಕಾಯಿಗಳನ್ನು ನಿನ್ನ ಜನ್ಮ ದಿನದಂದು ಕೊಡುಗೆ ನೀಡುತ್ತೇನೆಂದು ಹೇಳಿದ್ದೇ ಆಲ್ವಾ ?’
‘ಓ …ಅದಾ..ಆಯಿತು ಬಿಡು. ಮೂರು ಮಾವಿನ ಕಾಯಿ ಆಲ್ವಾ ? ‘
‘ಹೌದಜ್ಜಿ..ಬಂಗಾರದ ಮಾವಿನ ಕಾಯೀ ..ಅಂದ ಹಾಗೆ ಅವು ಈಗ ಎಲ್ಲಿವೆ ?’
‘ನನ್ನ ದುಡ್ಡಿನ ಚೀಲದಲ್ಲಿ ಇವೆ ” ಎಂದಳು.
‘ಅದೇನಜ್ಜಿ ಹಾಸ್ಯ, ದುಡ್ಡಿನ ಚೀಲ ಎಂದರೆ ಚಿಕ್ಕದೇ ಇರುತ್ತದಲ್ವಾ ? ಅದ್ಹೇಗೆ ಮೂರು ಮಾವಿನ ಕಾಯಿಗಳು ಅದರಲ್ಲಿ ಇಡಲಾಗುತ್ತೆ ? ತಮಾಷೆ ಬೇಡ ಅಜ್ಜಿ ಬೇಗ ಕೊಟ್ಟು ಬಿಡು ‘ ಎಂದ ಮೇಘು.
‘ಹುಚ್ಚಪ್ಪ..ನನ್ನ ಮೇಲೆ ನಿಮಗೆ ಪ್ರೀತಿ, ಭರವಸೆ ಇದೆಯೋ ಇಲ್ವೋ ?’
‘ಇದೆ..ಆದರೆ ನೀನು ನಮಗೆ ಸತಾಯಿಸುತ್ತಿದ್ದೀಯ ಅದೇಕೆ ?’
‘ನನ್ನವೇನಿದ್ದರೂ ನಿಮ್ಮವೇ ಅಲ್ವೇ ?’
‘ಹೌದಜ್ಜಿ ಅದರಲ್ಲಿ ಅನುಮಾನವೇ ಇಲ್ಲ ‘ ಅಷ್ಟರಲ್ಲಿ ನಂದು ಒಳಗೆ ಬಂದು ಮೇಘುಗೆ ಹೀಗೆ ಕೇಳಿದ
‘ಮೇಘು ಅಣ್ಣ ಅಜ್ಜಿ ಏನಾದ್ರೂ ಬಾಯಿ ಬಿಟ್ಟಳಾ ?’
‘ಏಯ್…ನೀನೇಕೆ ಒಳಗೆ ಬಂದೆ ?’ ಕೋಪದಿಂದಲೇ ಮೇಘು ಕೇಳಿದ.
‘ಕ್ಷಮಿಸಿಬಿಡು ಅಣ್ಣಾ, ನೀನು ಹೊರಗೆ ಬರುವುದು ತಡವಾಯಿತು, ಸಹಿಸದೇ ಒಳಗೆ ಬಂದೆ.’ ಎಂದ.
‘ಹೊರಗೆ ಹೋಗು ನೀನು ‘ ಎಂದ ಕೋಪದಿಂದ. ಆಗ ಆತ ತಲೆ ತಗ್ಗಿಸಿ ಹೊರಗೆ ಹೋಗಲು ಅಣಿಯಾದವನನ್ನು ಅಜ್ಜಿ ತಡೆದಳು. ಅಲ್ಲದೇ ಹೀಗೆ ಹೇಳಿದಳು.;
‘ನೀವಿಬ್ಬರೂ ಇಲ್ಲಿಯೇ ಇರೀ ಮತ್ತು ರಘು ರಾಮನೂ ಬರಲಿ’ ಎಂದಳು.
ನಂದು ಹೋಗಿ ರಘುರಾಮನನ್ನು ಕರೆದು ತಂದ.’ ಈಗ ಅವರು ಮೂವರೂ ಸೇರಿದರು.
ಆಗ ಅಜ್ಜಿ ನಂದೂನ ಹೆಂಡತಿ ಯಶೋಮತಿಯನ್ನು ಕರೆದು, ಅವಳ ಕಿವಿಯಲ್ಲಿ ಏನೋ ಉಸುರಿದಳು. ಆಗ ಯಶೋಮತಿ ಅಲ್ಲಿಂದ ಹೋಗಿ, ಸುಮಾರು
ಅರ್ಧ ಗಂಟೆಯಾದ ಮೇಲೆ ಒಂದು ಚಿಕ್ಕ ಡಬ್ಬಿಯನ್ನು ತಂದು ಅಜ್ಜಿಯ ಕೈಗೆ ಕೊಟ್ಟಳು. ಆಗ ಅಜ್ಜಿ ಅದರ ಮುಚ್ಚಳ ತೆರೆದು ಒಳಗಿದ್ದ ಮೂರು ಮಾವಿನ ಕಾಯಿಯಾಕಾರದ ಚಿಕ್ಕ ಚಿಕ್ಕ ಪದಕಗಳನ್ನು ಹೊರಗೆ ತೆಗೆದು,
ಆ ಮೂವರಿಗೆ ಒಂದೊಂದಾಗಿ ತೋರಿಸಿದಳು.
‘ಇದೇನಜ್ಜಿ ಇಷ್ಟು ಚಿಕ್ಕ ಉಡುಗರೆ ಕೊಡುವುದಕ್ಕಾಗಿ, ನಾವು ನಿನ್ನ ಜನ್ಮ ದಿನವನ್ನು ಲಕ್ಷಾಂತರ ರುಪಾಯೀಗಳನ್ನು ವ್ಯಯಿಸಿ ಮಾಡಬೇಕಾಯಿತಾ ಹೇಗೆ ?’ ಎಂದ ಮೇಘು ಬೇಜಾರಿನಿಂದ.
ಪಾಪ ಅಸೆ ಇಟ್ಟುಕೊಂಡ ರಘು ಮತ್ತು ನಂದು ಕೂಡಾ ಮುಖ ಚಿಕ್ಕದು ಮಾಡಿ ಕೊಂಡರು. ಆಗ ಅಜ್ಜಿ ನಕ್ಕಳು. ನಂದುನ ಹೆಂಡತಿಯನ್ನು ಹೊರಗೆ ಕಳಿಸಿ, ಆ ಮೂವರನ್ನು ಮಂಚದ ಮೇಲೆ ಕೂಡ್ರಿಸಿ ಕೊಂಡು ಆ ‘ಮೂರು ಮಾವಿನಕಾಯಿಯ ಕಥೆ’ ಯನ್ನು ಹೇಳಲು ಪ್ರಾರಂಭಿಸಿದಳು;
‘ಮಕ್ಕಳಾ, ನನ್ನ ತಂದೆ ಬಿರ್ಜು ಸೇಠ್ ನನ್ನ ಮದುವೆಯಲ್ಲಿ ಈ ಬಂಗಾರದ ಮಾವಿನಕಾಯಿ ಸರವನ್ನು ನನಗೆ ಮದುವೆಯ ಉಡುಗೊರೆ ಎಂದು ಕೊಟ್ಟಿದ್ದನು. ಆಗ ಆ ಸರದಲ್ಲಿ ಹನ್ನೆರಡು ಬಂಗಾರದ ಮಾವಿನ ಕಾಯಿಗಳಿದ್ದವು. ಮದುವೆಯಾದ ಮೇಲೆ ನಮ್ಮ ಬದುಕು ಸರಿಯಾಗಿ ಇರಲಿಲ್ಲ. ಪೂರ್ವಿಕರ ಮನೆ ಮತ್ತು ತಕ್ಕ ಮಟ್ಟಿಗೆ ಕೃಷಿ ಭೂಮಿಗಳಿದ್ದರೂ ಹೊಟ್ಟೆಗೆ ಸಾಕಾಗುತ್ತಿರಲಿಲ್ಲ.
ಏನಾದರೂ ಒಂದು ಸಣ್ಣ ಉದ್ಯೋಗ ಮಾಡುತ್ತೇನೆ ಎಂದು ಹೇಳಿದ ನಿನ್ನಜ್ಜನಿಗೆ ನಾನು ಹನ್ನೆರಡು ಬಂಗಾರದ ಮಾವಿನ ಕಾಯಿ ಸರವನ್ನು ಕೊಟ್ಟು, ಅದನ್ನು ಮಾರಿ ಬಂಡವಾಳ ಮಾಡಿಕೊಂಡು ವ್ಯಾಪಾರ ಉದ್ಯೋಗ ಆರಂಭಿಸಲು ತಿಳಿಸಿದೆ. ಆದರೇ, ನಿಮ್ಮಜ್ಜ ಏನು ಮಾಡಿದರು ಗೊತ್ತೇ ?
‘ಅದೇನು ಮಾಡಿದರು ನಮ್ಮಜ್ಜ ?’ ಎಂದು ಮೂವರೂ ಕೇಳಿದರು.
ಆ ಸರವನ್ನು ಎರಡು ಭಾಗವನ್ನಾಗಿ ಮಾಡಿದರು. ಒಂಬತ್ತು ಮಾವಿನ ಕಾಯಿಗಳನ್ನು
ತಾವು ತೆಗೆದು ಕೊಂಡು, ಮೂರು ಮಾವಿನ ಕಾಯಿಗಳನ್ನು ನನಗೆ ಮರಳಿಸಿದರು. ಹಾಗೆ ಕೊಡುವಾಗ ನನಗೆ ಏನು ಹೇಳಿದರು ಗೊತ್ತೇ ಮಕ್ಕಳಾ ?’
‘ಏನು ಹೇಳಿದರು ?’ ಎಲ್ಲರೂ ಆಶ್ಚರ್ಯದಿಂದ ಕೇಳಿದರು.
‘ನಿಮ್ಮಜ್ಜ ಹೀಗೆ ಹೇಳಿದರು; ಒಂಬತ್ತು ಮಾವಿನಕಾಯಿಗಳನ್ನು ಮಾರಿ ಬಂದ ಹಣದಿಂದ ವ್ಯಾಪಾರಕ್ಕಾಗಿ ಬಂಡವಾಳವಾಗಿ ಮಾಡಿಕೊಳ್ಳುತ್ತೇನೆ, ಹಾಗು ಬರುವ ವರ್ಷ ಅಥವಾ ಹೆಚ್ಚೆಂದರೇ ಅದರ ಮರು ವರ್ಷಕ್ಕೆ ಮತ್ತೇ ಆ ಒಂಬತ್ತು ಮಾವಿನ ಕಾಯಿಗಳನ್ನು ಖರೀದಿಸಿ ನಿನ್ನ ಕೊರಳಿಗೆ ತಂದು ಹಾಕುತ್ತೇನೆ. ಇನ್ನೇನು ಈ ಹನ್ನೆರಡು ಮಾವಿನ ಕಾಯಿಗಳಲ್ಲಿ ಮೂರನ್ನು ಮಾತ್ರ ತೆಗೆದು ಕೊಳ್ಳುವುದಿಲ್ಲ. ಏಕೆಂದರೇ, ಅವು ಎಲ್ಲವನ್ನು ಬಳಸಿ ಕೊಳ್ಳಲು ನನಗೆ ಅಧಿಕಾರವಿಲ್ಲ, ನನ್ನ ಮುಂದಿನ ಸಂತತಿಗೆ ಅವುಗಳನ್ನು ಹೊಂದಲು ಅಧಿಕಾರ ಕೊಡುತ್ತೇನೆ. ಹಾಗಾಗಿ ಅವುಗಳನ್ನು ನೀನೆ ಇಟ್ಟುಕೋ, ಆಮೇಲೆ ಅವರಿಗೆ ನೀನೆ ತಲುಪಿಸುವಿಯಂತೆ’ ಎಂದು ಹಸನ್ಮುಖಿಯಾಗಿ ಹೇಳಿದ್ದರು. ಆ ಒಂಬತ್ತು ಮಾವಿನಕಾಯಿ ಪಡೆದದ್ದು, ಅವರು ವಾಯಿದೆ ಕೊಟ್ಟ ಹಾಗೆ ಎರಡು ವರ್ಷಗಳ ನಂತರ ಒಂಬತ್ತು ಮಾವಿನ ಕಾಯಿಗಳನ್ನು ತಂದು ನನಗೆ ಮರಳಿಸಿದರು. ಆಮೇಲೆ, ಹಲವು ವರ್ಷಗಳಾದ ಮೇಲೆ ಅದೇ ತರಹ ಇನ್ನೆರಡು ಚಿನ್ನದ ಸರಗಳನ್ನು ಮಾಡಿಸಿ ಕೊಟ್ಟರು. ಅವೆಲ್ಲಾವನ್ನು ನನ್ನ ಸೊಸೆಯಂದಿರು, ಅಂದರೇ ನಿಮ್ಮ ತಾಯಂದಿರಿಗೆ ಕೊಟ್ಟು ಬಿಟ್ಟೆ. ಅವುಗಳನ್ನು ಅವರೂ ಕೂಡ ನಿಮ್ಮ ಮದುವೆಯ ಸಮಯದಲ್ಲಿ ನಿಮ್ಮ ಹೆಂಡತಿಯರಿಗೆ ಕೊಟ್ಟು ಬಿಟ್ಟರು. ಹೀಗಾಗಿ, ಒಂಬತ್ತು ಮಾವಿನಕಾಯಿಗೆ ಬದಲಾಗಿ ಇಪ್ಪತ್ತೇಳು ಮಾವಿನ ಕಾಯಿಗಳು ಬಂದಿದ್ದವು. ಇನ್ನು ಈ ಮೂರು ಮಾವಿನ ಕಾಯಿಗಳನ್ನು ನಿಮಗಾಗಿ ಕಾದಿರಿಸಿದ್ದೆ. ಆದರೇ, ಇವು ಸಣ್ಣ ಸಣ್ಣ ಕೊಡುಗೆ ನಿಮ್ಮ ಕಣ್ಣಿಗೆ ತೂಗುವದಿಲ್ಲ. ಇವುಗಳಲ್ಲಿ ನಿಮ್ಮ ಅಜ್ಜನ ಪ್ರೀತಿಯ ಧಾರೆ ಎರೆದು ನನಗೆ ಆವಾಗಲೇ ಕೊಟ್ಟಿದ್ದಾರೆ. ನಾನು ನಿಮ್ಮ ಹೆಂಡಂದಿರಿಗೆ ಇವು ಮೂರು ಮಾವಿನ ಕಾಯಿಗಳನ್ನು ಕೊಡಬಹುದಿತ್ತು, ಆದರೇ, ನಿಮ್ಮ ಅಜ್ಜನ ಅಣತಿಯಂತೆ ಅವರ ಸಂತತಿಗಳಾದ ನಿಮಗೆ ತಲುಪಿಸುವ ಕೆಲಸ ನನ್ನದಾಗಿತ್ತು. ಹಾಗಾಗಿ, ನಾನು ನಿಮ್ಮ ಸಲುವಾಗಿ ತೆಗೆದಿಟ್ಟುಕೊಂಡವುಗಳನ್ನು ಈಗ ನಿಮಗೆ ಕೊಡುತ್ತಲಿದ್ದೇನೆ.’ ಎಂದಳು ಅಜ್ಜಿ. ‘ಹಾಗಾದರೇ, ಅವುಗಳನ್ನು ನಮ್ಮ ಅಪ್ಪನಿಗೆ ಏಕೆ ಕೊಡಲಿಲ್ಲ ಅಜ್ಜಿ ?’ ಎಂದು ನಂದು ಕೇಳಿದ.
‘ಹುಚ್ಚ, ನಾನು ಹಾಗೆ ಮಾಡದೇ ಇರುತ್ತೇನೆಯೇ ? ಒಂದು ದಿನ ಅವುಗಳನ್ನು ನಿಮ್ಮ ಅಪ್ಪನಿಗೆ ಕೊಡಲು ಹೋದಾಗ, ಆತ ಹೀಗೆ ಹೇಳಿದ ;
‘ಅಮ್ಮ, ಅವು ತಲೆತಲಾಂತರದಿಂದ ಬಂದಿವೆ. ಅವು ನಿನ್ನಲ್ಲಿಯೇ ಇರಲಿ. ನನ್ನ ಮುಂದಿನ ಸಂತತಿಗೆ ನೀನು ಜೀವಿತವಾಗಿ ಇದ್ದು ಅವುಗಳನ್ನು ಅವರಿಗೆಯೇ ತಲುಪಿಸು ‘ ಎಂದು ಹೇಳಿ ನನ್ನಲ್ಲಿಯೇ ಬಿಟ್ಟು ಬಿಟ್ಟ. ಆಮೇಲೆ ಆತ ಬಹಳ ದಿನ ಬದುಕಲೇ ಇಲ್ಲ. ಈಗ ನನಗೆ ವಯಸ್ಸಾಯಿತು, ಅವುಗಳನ್ನು ನನ್ನ ಬಳಿ ಇಟ್ಟುಕೊಳ್ಳುವುದು ಬೇಡ ಎಂದನಿಸಿತು. ಹಾಗಾಗಿ ನಿಮಗೆ ಕೊಡಲು ನಿರ್ಧರಿಸಿದೆ. ಅದು ಹೇಗಿದೆ ನೋಡಿ, ನೀವು ಮೂವರು ನಿಮ್ಮಜ್ಜನ ಸಂತತಿ ಎಂದು ಬಹುಷಃ ನಿಮ್ಮಜ್ಜನು ಅದಾಗಲೇ ಅರಿತು ಮೂರು ಮಾವಿನಕಾಯಿಗಳನ್ನು ತೆಗೆದು ಇಟ್ಟರು. ಇದರಿಂದ ತಿಳಿದು ಬರುವುದೇನೆಂದರೇ, ಅವರಿಗೆ ದೂರದೃಷ್ಟಿಯು ಅಚ್ಚು ಕಟ್ಟಾಗಿ ಇತ್ತು ಎಂದೇ ಅರ್ಥ. ಏನೇ ಆಗಲಿ ನನ್ನ ಕೆಲಸ ಈಗ ಮುಗಿಯಿತು ಇವುಗಳನ್ನು ಪಡೆದು ನನಗೆ
ಮೇಲಕ್ಕೆ ಹೋಗಲು ಬಿಟ್ಟು ಬಿಡಿ’ ಎಂದಳು ಅಜ್ಜಿ. ಮರುಮಾತಾಡದೇ, ಅವುಗಳನ್ನು ಪಡೆದ ಮೂವರು ಸಹೋದರರರು ಆ ಬಂಗಾರದ ಮಾವಿನ ಕಾಯಿಗಳನ್ನು ಭದ್ರವಾಗಿ ಇಟ್ಟು ಕೊಂಡರು.
ಬಿ.ಟಿ.ನಾಯಕ್,
ಅಜ್ಜನ ದೂರದೃಷ್ಟಿ, ಅಜ್ಜಿಯ ಲೆಕ್ಕಾಚಾರ ಮೊಮ್ಮಕ್ಕಳ ಒಳಗಣ್ಣು ತೆರೆಸಿತು. ಬಿ.ಟಿ.ನಾಯಕರ ಈ ‘ಬಂಗಾರದ ಮಾವಿನಕಾಯಿ’ ಕಥೆ ಸಂಭಾಷಣೆ ಸುಂದರವಾಗಿ ಮೂಡಿದೆ. ಅಭಿನಂದನೆಗಳು. ಮ.ಮೋ.ರಾವ್, ರಾಯಚೂರು.
ಶ್ರೀಯುತ ಮ.ಮೋ.ರಾವ್ ನಿಮ್ಮ ವಿಮರ್ಶೆ ಹಿಡಿಸಿತು ಮತ್ತು ಆನಂದಿತನಾದೆ. ಧನ್ಯವಾದಗಳು.
ಕಥೆ, ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ನಾಯಕರಿಗೆ ಅಭಿನಂದನೆಗಳು.
ಧನ್ಯವಾದಗಳು ಜನಾರ್ಧನ್ ರಾವ್.
Nowadays there is dearth of moral stories.The narration of story to known the end is commendable.Hearty congratulations
N K Dalabanjan .
Thanks a lot Dhalbanjanji. You words made me happy so much.
ಕಥೆಯ ಪ್ರಾರಂಭದಿಂದ ಕೊನೆಯವರೆಗೂ ಕುತೂಹಲ ಮತ್ತು ನಗುವಿನಿಂದ ಕೂಡಿದೆ. ಯಾರಿಂದಲಾದರೂ ಏನಾದರೂ ಸಿಗುತ್ತದೆ ಎಂದರೆ, ಎಷ್ಟು ಕಾಳಜಿ ಮಾಡುತ್ತಾರೆ ನೋಡಿ.
ಕಥೆ ತುಂಬಾ ಚನ್ನಾಗಿದೆ ಸಾರ್.
ಅಭಿನಂದನೆಗಳು.
ಜಯರಾಮನ್ ಸರ್ ನಿಮ್ಮ ಧನಾತ್ಮಕ ಅನಿಸಿಕೆಗಳು ನನಗೆ ಖುಷಿ ತಂದಿದೆ. ನಿಮಗೆ ತುಂಬು ಹೃದಯದ ಧನ್ಯವಾದಗಳು.
Interesting read. Thanks.
Thanq very much for your supporting words.
ಕೊನೆಯವರೆಗೂ ಕುತೂಹಲವನ್ನು ಕೆರಳಿಸುವ ನೀತಿ ಬೋಧಕ ಕಥೆಯನ್ನು ತುಂಬಾ ಸೊಗಸಾಗಿ ಕಟ್ಟಿದ್ದೀರಿ. ಅಭಿನಂದನೆಗಳು.
ತಮ್ಮ ಪ್ರೋತ್ಸಾಹದ ಅನಿಸಿಕೆಗಳು ನನಗೆ ಖುಷಿ ತಂದಿದೆ. ಧನ್ಯವಾದಗಳು ಸರ್.
ನೀತಿಯುಕ್ತ ಕಥೆ ಸರಾಗವಾಗಿ ಓದಿಸಿಕೊಂಡು ಹೋಗುವ ಗುಣವನ್ನು ಜೊತೆಯಲ್ಲಿಯೇ ಇರಿಸಿಕೊಂಡು, ಕುತೂಹಲವನ್ನು ಬಿಟ್ಟುಕೊಡದೆ ಸಾಗಿದೆ. ಆಸೆಗೊಂದು ಮಿತಿ ಇರಬೇಕೆನ್ನುವ ಸೂಕ್ಷ್ಮವೂ ಕಥೆಯಲ್ಲಿ ಅಡಗಿದೆ.
ಅಭಿನಂದನೆಗಳು ನಾಯಕರೆ.
ನಿಮ್ಮ ಮೆಚ್ಚುಗೆ ನನಗೆ ಸ್ಫೂರ್ತಿ. ಧನ್ಯವಾದಗಳು.
Story is very curious about to Read till end.
Namaste. Thanks for you compliment and encouragement.
Namaste. Thanks for your compliment and encouragement.
Tumbane channagide kathe kutuhala hagu neeti katheyagide