ಪುಸ್ತಕ ಸಂಗಾತಿ
ಗೊರೂರು ಅನಂತರಾಜುರವರ
‘ಮನ ಬಿಚ್ಚಿ ಹಾಡಿಬಿಡಲೇ’
ಪುಸ್ತಕ ವಿಮರ್ಶೆ
ಮಾಳೇಟಿರ ಸೀತಮ್ಮ ವಿವೇಕ್
“ಮನ ಬಿಚ್ಚಿ ಹಾಡಿ ಬಿಡಲೇ” ವಿಮರ್ಶಾತ್ಮಕ ಕೃತಿಯ ಬಗ್ಗೆ ನಾನು ಕೂಡ ವಿಮರ್ಶೆ ಬರೆಯಬೇಕೆಂದು ಶ್ರೀಯುತ ಅನಂತರಾಜು ಅವರು ಹೇಳಿದಾಗ ಸಂತೋಷವಾಗಿ ಒಪ್ಪಿಕೊಂಡು ಬಿಟ್ಟೆ. ಆ ನಂತರ ನೋಡಿ ಅವರ ಕೃತಿ ಒಳಗೆ ಅನೇಕ ಸಾಹಿತ್ಯ ದಿಗ್ಗಜರು ಒದಗಿಸಿದ ವಿಮರ್ಶೆ ಓದುತ್ತಾ ಹೋದಂತೆ ಅನಂತರಾಜು ಅವರ ಕೃತಿ, ಲೇಖನಗಳ ರಾಶಿ ಅವುಗಳನ್ನು ವಿಮರ್ಶೆ ಮಾಡಿದ ಪರಿ, ವಿಮರ್ಶೆ ಮಾಡಿದವರ ಜ್ಞಾನಭಂಡಾರ ನನ್ನಲ್ಲಿ ಹೊಸ ಕಂಪನವನ್ನೇ ಮೂಡಿಸಿತ್ತು… ಹೀಗೂ ಕೃತಿ ಹೊರತರಬಹುದೇ ಎಂದು ಆಶ್ಚರ್ಯವಾಯಿತಲ್ಲದೆ, ಇವರಿಗೆ ಇಷ್ಟೊಂದು ಕ್ರಿಯಾಶೀಲವಾಗಿ ಸುಲಲಿತವಾಗಿ ಬರೆಯಲು ಪ್ರೇರಣೆಯಾದ ರಹಸ್ಯ ಏನೆಂದು ಯೋಚಿಸುವಂತೆ ಮಾಡಿಸಿತ್ತು! ಇವರ ಅನೇಕ ಪತ್ರಿಕಾ ಲೇಖನ ಓದುತ್ತಾ ಬಂದಿದ್ದೇನೆ.
ಅವುಗಳನ್ನೋದುವಾಗ ಬರುವ ಭಾವ ಒಂದು ರೀತಿಯದಾದರೆ ನಾಟಕ ವಿಮರ್ಶೆ, ವಚನ ಸಾಹಿತ್ಯ ವಿಮರ್ಶೆ, ಸಾಧಕರ ಪರಿಚಯ, ಪ್ರಬಂಧಗಳ ವಿಮರ್ಶೆ ಹೀಗೆ ಒಟ್ಟಾರೆ ಅವರ ಸರಳ ಬರವಣಿಗೆಯ ಪುಸ್ತಕಗಳು ಮತ್ತೊಂದು ರೀತಿಯ ಗಂಭೀರ ಕೈಚಳಕ ಮೂಕವಿಸ್ಮಿತಗೊಳಿಸಿತ್ತು. ಇವರನ್ನು ಮೊದಲು ಭೇಟಿಯಾದಾಗ ಎಂಥಾ ಸರಳ ವ್ಯಕ್ತಿತ್ವ ಆದರೆ ಎಷ್ಟೊಂದು ಜನ ಸಂಪರ್ಕ ಹೊಂದಿರುವವರಲ್ಲವೇ ಅಂದುಕೊಂಡಿದ್ದೇ. ಅದು ತಪ್ಪಾಗಲಿಲ್ಲ ಕೂಡ. ಅವರಿಂದಾಗಿಯೇ ಅದೆಷ್ಟೋ ವೇದಿಕೆಗಳು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯ ಮಾಡಿಕೊಂಡಿದ್ದಾರೆ ಎಂಬುದನ್ನು ಸ್ವತಃ ಕಂಡುಕೊಂಡಿದ್ದೇನೆ… ಈ ಕೃತಿಯಲ್ಲಿ ಅನೇಕ ಕವಿ-ಕವಯತ್ರಿಯರು ತಮ್ಮ ವಿಮರ್ಶೆಯಲ್ಲಿ ಸಾಹಿತ್ಯ ಕ್ಷೇತ್ರವೆಂದೇ ಗುರುತಿಸಲ್ಪಡುವ ಗೊರೂರು ಹಾಗೂ ಅಲ್ಲಿನ ಅಗ್ರಮಾನ್ಯರ ಹೆಸರುಗಳೊಂದಿಗೆ ಅದೇ ಸಾಲಿನಲ್ಲಿ ನಿಲ್ಲುವ ಗೊರೂರು ಅನಂತರಾಜು ಅವರ ಸಾಹಿತ್ಯ ಕೃಷಿ ಬಗ್ಗೆ ತಿಳಿಸುತ್ತಲೇ ಅವರ ಹೆಸರಿನೊಂದಿಗೆ ಸೇರಿದ ಗೊರೂರು ಸಾಲುಗಳಲ್ಲಿ ಅವರಿಗಿರುವ ಹುಟ್ಟೂರು ಪ್ರೇಮವನ್ನೂ ಸಾರಿ ಹೇಳಿರುವುದು ಗೋಚರಿಸುತ್ತದೆ. ಮನಬಿಚ್ಚಿ ಹಾಡಿ ಬಿಡಲೆ ಕೃತಿಯ ಇನ್ನೊಂದು ವಿಶೇಷತೆ ಎಂದರೆ ವಿಮರ್ಶೆಯೊಳಗೆ ಅನೇಕರ ಹೊಸ ವಿಚಾರಗಳು ಒಂದೆಡೆ ಕ್ರೋಢೀಕರಣವಾಗಿರುವುದು. ಶ್ರೀ ಎಂ.ವಿ.ತ್ಯಾಗರಾಜ್ ಅವರ ಕಸ್ತೂರಿ ಬಾ ಜೀವನ ಚರಿತ್ರೆ ಉರಿಯುಂಡ ಕರ್ಪೂರದಲ್ಲಿ ಕಂಡು ಬರುವ “ಬಾಪೂ ನನ್ನ ಕೊನೆಯಾಸೆ ನೆರವೇರಿಸಿಕೊಡುವಿರಾ. ನಾನು ಸಾಯುವ ಮುನ್ನ ನನ್ನ ಮುದ್ದಿನ ಮಗ ಹರಿಲಾಲನನ್ನು ನೋಡಬೇಕು” ಎಂಬ ಮನಮುಟ್ಟುವ ಸಾಲುಗಳು, ಕಸ್ತೂರಿ ಬಾಯಿ ತನ್ನ ಪತಿಯ ಉದ್ದೇಶ ಹೋರಾಟಗಳಿಗಾಗಿ ತನ್ನ ಬದುಕನ್ನೇ ದಾರೆ ಎರೆದಾಕೆ ಎಂಬ ಸಾಲುಗಳು ಇಂದಿನ ಹೆಣ್ಣು ಮಕ್ಕಳಿಗೆ ಸ್ತ್ರೀ ಎಷ್ಟು ಪ್ರಭಾವಶಾಲಿ ಎಂಬುದನ್ನು ಮನವರಿಕೆ ಮಾಡಿಸುವಂತಿದೆ. ಹಾಗೇ ಶಿಲುಬೆ ಏರಿದ ನಂತರ ಯೇಸು ಪಾಲೆಸ್ತೈನ್ ಬಿಟ್ಟು ಕಾಶ್ಮೀರದಲ್ಲಿ ಕಾಣಿಸಿಕೊಂಡ ಅಜರತ್ ಅಬು ಹುಕ್ಕೆ ಅವರ ರಂಜ್ ಅಲ್ ಉಮ್ಮಲದಂತಹ ಪುಸ್ತಕ ಉಲ್ಲೇಖ ಮಾಡಿರುವಂತಹದೆಲ್ಲ ಈ ಕೃತಿಯಲ್ಲಿ ಗಮನ ಸೆಳೆಯುತ್ತದೆ. ಹಾಗೆಯೇ ಸಂವೇದನೆಗಳಿಂದ ಮೌಲ್ಯಯುತ ವಿಚಾರಗಳನ್ನು ಹೊರತರುವ ಪ್ರಯತ್ನದಲ್ಲಿ ಇವರು ಅಕ್ಷರದೊಳಗೆ ಅನ್ವೇಷಣೆ ಮಾಡುತ್ತಿರುವಂತೆಯೂ, ಏನೋ ಹುಡುಕಾಟ ನಡೆಸುತ್ತಿರುವ ಸಾಹಿತ್ಯ ವಿಜ್ಞಾನಿಯಾಗಿಯೂ ಕಾಣುತ್ತಾರೆ.
ಇವರ ಲೇಖನಗಳ ಬಗ್ಗೆ ಹರಿದಿರುವ ಅಭಿಪ್ರಾಯಗಳಲ್ಲೂ ಮಾತಿಗಿಂತ ಸರಾಗವಾಗಿ ಬರಹಗಳಲ್ಲಿ ಯಾರನ್ನೂ ನೋಯಿಸದ, ಹೃದಯಕ್ಕೆ ಹತ್ತಿರವಾಗಬೇಕೆಂಬ ಮುಂದಿನ ಪೀಳಿಗೆಗೆ ಇಂದು ನಡೆಯುವ ಹಬ್ಬ ಹರಿದಿನ ಜಾತ್ರೆ ಬಾಲ ಕಾರ್ಮಿಕ ಹಕ್ಕು ಮಹಿಳೆ ಕಲಾಕ್ಷೇತ್ರ ಹೀಗೆ ಪ್ರತಿಯೊಂದು ವಿಚಾರಗಳ ಬಗ್ಗೆ ತಿಳಿಸಬೇಕೆಂಬ ಮಿಡಿತವಿದೆ ಎಂಬುದು ಸೂಚ್ಯವಾಗಿ ಕಾಣುತ್ತದೆ. ಕೊನೆಯಲ್ಲಿ ಹೇಳುವುದೇನೆಂದರೆ ತಮ್ಮನ್ನು ತಾವು ಇಷ್ಟರ ಮಟ್ಟಿಗೆ ಕನ್ನಡ ಸೇವೆಗೆ ಇಳಿಸಿಕೊಂಡು, “ಮಾತನಾಡುವ ಕಲೆ ಸಿದ್ಧಿಸಿರುವ ಮಾನವನಿಗಿಂತ ಶ್ರೇಷ್ಠ ಜನ್ಮ ಯಾವುದು” ಎಂಬ ನಿತ್ಯಸತ್ಯವನ್ನು ಆತ್ಮದಿಂದ ಅರಿತು ನಡೆಯುತ್ತಿರುವಂತೆ ನನಗೆ ಭಾಸವಾಗುತ್ತಿದ್ದಾರೆ ಶ್ರೀ ಗೊರೂರು ಅನಂತರಾಜು ಅವರು ಇವರ ಬಗ್ಗೆ ಬರೆಯುವಷ್ಟು ಪ್ರಭುದ್ಧತೆ ಎನಗಿಲ್ಲ ಆದರೂ ಅವರ ವ್ಯಕ್ತಿತ್ವವನ್ನು ಹತ್ತಿರದಿಂದ ನೋಡಿರುವುದು ಈ ವಿಮರ್ಶೆ ಬರೆಯಲು ಸ್ಪೂರ್ತಿ ನೀಡಿದೆ, ಅಂತಹ ಸರಳ ಸ್ವಭಾವದ ಲೇಖನಿ ಪ್ರೇಮಿಯು ಇನ್ನಷ್ಟು ಎತ್ತರಕ್ಕೆ ಬೆಳೆದು ಕಲಾರಾಧಕರೆಲ್ಲರಿಗೂ ದಾರಿದೀಪವಾಗಲಿ ಎಂದು ಹಾರೈಸುತ್ತ ಶುಭ ಕೋರುತ್ತೇನೆ.
ಮಾಳೇಟರ ಸೀತಮ್ಮ ವಿವೇಕ್