ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಸ್ನೇಹ ಸಂಕೋಲೆ

ಸ್ನೇಹ ಒಂದು ಪವಿತ್ರವಾದ ಮುಕ್ತ ಭಾವಗಳ ಅನಾವರಣ. ಮನದ ಸುಖ ದುಃಖಗಳ ವಿನಿಮಯದ ಆತ್ಮೀಯ ಸಂಚಲನ ಇಂತಹ ಮಧುರವಾದ ಬಂಧನವೇ ಸ್ನೇಹ. ನಮ್ಮ ಹೆತ್ತವರಿಗೂ ಹೇಳಲಾರದ ಮನದ ತುಮುಲಗಳನ್ನು ನಮ್ಮ ಆತ್ಮೀಯ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೇವೆ. ಸ್ನೇಹ ಅಥವಾ ಗೆಳೆತನ ಎಂದಾಗ ನಮಗೆ ನೆನಪಾಗುವದು ಕೃಷ್ಣ ಸುಧಾಮರ ಅಮರ ಸ್ನೇಹ.ಇದು ಅಂತಸ್ತುಗಳ ಮೀರಿದ ಋಣಾನುಬಂಧ. ಆತ್ಮ ಚೈತನ್ಯ.ಈ ಸ್ನೇಹ ಸಿಂಚನ ಎಂಬುದು ಭಾವಬಂಧನವಾದ ಅಮೃತ ಘಳಿಗೆ ಎಂದರೆ ನಮ್ಮ ಬಾಲ್ಯದ ದಿನಗಳು. ಮರಳಿ ಬರಲಾರದ ಆ ಸವಿನೆನಪುಗಳ ಮೇಲುಕೇ ನಮ್ಮ ಬಾಳ ಪುಳಕವಾಗಿದೆ.
“ಯಾಕೆ ಏನಾಯ್ತು ಮುಖ ಬಾಡಿದೆ ಏನು ನಡೆಯಿತು ಹೇಳೇ?”ಎಂಬ ಅಪಾರ ಕಾಳಜಿಯಲ್ಲೂ ಪರಿಹಾರದ ಸೆಲೆಯ ಮನವದು ಕಣ್ಣೀರಧಾರೆಯಲಿ ಮಿಂದು ಗೆಳತಿಯ ಸಾಂತ್ವನದೊಂದಿಗೆ ಮತ್ತೆ ಮನದಲಿ ಬದುಕುವ ಭಾವದ ಅಲೆ ನವಿಲೊಂದು ಗರಿಬಿಚ್ಚಿ ಕುಣಿದಂತ ಸಂತಸ ಮನದಿ ಮನೆ ಮಾಡಿ ಯಥಾವತ್ತಾಗಿ ಅನಿವಾರ್ಯದ ಬದುಕು ಆಶಾವಾದದಿ ಮುನ್ನಡೆವ ಹರಿವ ನೀರಂತೆ ಶುಭ್ರವಾಗುತಿತ್ತು.ಈ ಸ್ನೇಹ ಎನ್ನುವ ಬಾಂಧವ್ಯ ಜಾತಿ, ಧರ್ಮಗಳನ್ನು ಮೀರಿ ಸ್ವಚ್ಛ ಆತ್ಮಗಳ ಅನುಬಂಧವಾಗಿದೆ. ಬಾಲ್ಯದಲ್ಲಿ ತೊದಲು ಮಾತಿನಿಂದ ಕೈ ಹಿಡಿದು ಬಿದ್ದರೂ ಮತ್ತೆ ಹೆಜ್ಜೆ ಹಾಕಿವದರಿಂದ ಹಿಡಿದು ಅವರು ಸಂಸಾರಸ್ಥರಾಗಿ ತಾಸುಗತ್ತಲೇ ಮಾತನಾಡುವುದರ ಮೂಲಕ ಮುಂದುವರೆದು

ತಮ್ಮ ಇಳಿ ಸಂಜೆಯ ದಿನಗಳಲ್ಲಿ ನೆನಪ ಬುತ್ತಿಯ ಸವೆದು ಭೇಟಿಯಾಗುವ ಆತ್ಮೀಯತೆ ಸ್ನೇಹದ ಎಲ್ಲೆ ಮೀರಿದ ಪರಿಧಿಯಾಗಿದೆ. ಒಬ್ಬ ನಿಜವಾದ ಸ್ನೇಹಿತ ತನ್ನ ಗೆಳೆಯರ ಬಗ್ಗೆ ನಂಬಿಕೆ, ಪ್ರೀತಿ, ಆದರಗಳನ್ನು ಸದಾ ಹೃದಯದಲಿಟ್ಟುಕೊಂಡು ಸುಖದಲ್ಲಿ ಸಂತೋಷದಲ್ಲಿ ಭಾಗಿಯಾಗುವ ಕಷ್ಟದಲ್ಲೂ ಸ್ಪಂದಿಸಿ ಸಮಾಧಾನಪಡಿಸುವ ಕರುಣಾಮೃತವನ್ನು ಹರಿಸಿ ಅವರ ದುಃಖವನ್ನು ಮರೆಸುವಂತಿರಬೇಕೆ ವಿನಃ ನೋವನ್ನು ಕೆದಕಿ ಗಾಯದ ಮೇಲೆ ಬರೆ ಎಳೆವಂತಿರಬಾರದು. ಆದರೆ ಕೆಲವೊಮ್ಮೆ ಸ್ನೇಹ ಮಾಡುವ ಮೊದಲು ಅವರ ಸ್ವಭಾವ, ಹವ್ಯಾಸ, ಅವರ ನಡೆ ನುಡಿ ಇವುಗಳ ಬಗ್ಗೆ ನಿಗಾ ಇಡುವದು ಅವಶ್ಯ. ಕೆಲವರು ಪರಿಸ್ಥಿತಿಯ ಕೈಗೊಂಬೆಗಳಾಗಿ ವಿಶ್ವಾಸ ಘಾತುಕರಾಗುತ್ತಾರೆ. ಒಬ್ಬ ಒಳ್ಳೆಯ ಸ್ನೇಹಿತ ಗೆಳೆಯರ ತಪ್ಪುಗಳನ್ನು ಮನ್ನಿಸಿ ತಿದ್ದಿ ಸರಿ ದಾರಿಗೂ ತರುವ ಆತ್ಮೀಯತೆಯನ್ನು ತನ್ನ ಕರ್ತವ್ಯ ಎಂಬುದಾಗಿ ಪ್ರೀತಿಯಿಂದ ತಿಳಿಸಿ ಹೇಳಿ ಮನಸ್ಸನ್ನು ಪರಿವರ್ತನೆ ಮಾಡಬಹುದು. ಆದರೆ ಇದಕ್ಕೆ ಅವರ ಸ್ನೇಹಿತ ಧನಾತ್ಮಕವಾಗಿ ಪ್ರತಿಕ್ರಿಯಿಸಿದಾಗ ಮಾತ್ರ ಸುಧಾರಣೆ ಸಾಧ್ಯ. ಅದರಂತೆ ಸಮಯ ಸಾಧಕರಂತೆ ನಟಿಸಿ ನಮ್ಮಿಂದ ಸಹಾಯ ಪಡೆದು ನಮ್ಮ ಮೇಲೆಯೇ ತಿರುಗಿ ಬೀಳುವರು ಕೂಡ ಇರುತ್ತಾರೆ. ಬೆನ್ನಿಗೆ ಚೂರಿ ಹಾಕುವ ಮಿತ್ರ ದ್ರೋಹಿಗಳು ಯಾರದೋ ಪ್ರಭಾವಕ್ಕೆ ಒಳಗಾಗಿ ತಮ್ಮ ಬೇಳೆ ಬೇಯಿಸಿಕೊಂಡು ಸದಾ ದ್ವೇಷ ಅಸೂಯೆಗಳ ಬೇಗೆಯಲ್ಲಿ ಬೆಂದು ತಮ್ಮ ಅವನತಿಗೆ ತಾವೇ ಇತಿಶ್ರೀ ಹಾಡುತ್ತಾರೆ. ಕೊನೆಗೊಮ್ಮೆ ಪ್ರಾಯಶ್ಚಿತದಿ ಶರಣಾಗುವ ವೇಳೆಗೆ ಅರ್ಧ ಜೀವನ ಕಳೆದಿರುತ್ತದೆ. “ಆಪತ್ಕಾಲದಲ್ಲಿ ನೇರವಾಗುವನೇ ನಿಜವಾದ ಗೆಳೆಯ “ಎಂಬಂತೆ ಕೇವಲ ಅವರಲ್ಲಿ ಹಣ ಇರುವಾಗ ಮೋಜು ಮಸ್ತಿಗಾಗಿ ಗೆಳೆತನ ಮಾಡಿ ಅವನು ಹಣವಿಲ್ಲದೆ ಪರಿತಪಿಸುವಾಗ ಅವನ ಪರಿಚಯವೇ ಇಲ್ಲ ಎಂಬಂತೆ ನಟಿಸುವ ಜಾಯಮಾನವನ್ನು ತ್ಯಜಿಸಬೇಕು. ಈ ಒಳ್ಳೆಯ ಸ್ನೇಹವನ್ನು ಮಾಡುವ ಬಗ್ಗೆ ಹೆತ್ತವರು ಕುಟುಂಬದಲ್ಲಿ ತಮ್ಮ ಮಕ್ಕಳಿಗೆ ಸಂಸ್ಕಾರ ನೀಡಬೇಕಿದೆ. ಅದರೊಟ್ಟಿಗೆ ಹಬ್ಬ, ಹುಟ್ಟುಹಬ್ಬದ ಆಚರಣೆ ಇದ್ದಾಗ ತಮ್ಮ ಗೆಳೆಯರನ್ನು ಆಮಂತ್ರಿಸುವ ಪದ್ಧತಿಯನ್ನು ಮಕ್ಕಳಲ್ಲಿ ಬೆಳೆಸಬೇಕು. ಕೆಟ್ಟವರ ಸಂಗ ಮಾಡದಂತೆ ಅವರ ಬಾಲ್ಯದಿಂದಲೇ ಅವರಿಗೆ ಮನವರಿಕೆ ಮಾಡುತ್ತಿದ್ದರೆ ಅವರೆಂದಿಗೂ ದಾರಿ ತಪ್ಪಾಲಾರರು.”ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ “ಎಂಬ ಗಾದೆ ಮಾತಿನಂತೆ ಬೆಳ್ಳಗಿರುವದೆಲ್ಲ ಹಾಲಲ್ಲ ಹೊಳೆಯುವದೆಲ್ಲ ಬಂಗಾರವಲ್ಲ ಎಂಬ ಮಾತಿನ ಮರ್ಮದ ಅರಿವು ಮೂಡಿಸುವದು ಅಗತ್ಯ ಮತ್ತು ಅನಿವಾರ್ಯ. ಸಾಮಾಜಿಕ ಜಾಲ ತಾಣಗಳಲ್ಲಿ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ಗಳಲ್ಲಿ ತಮ್ಮ ಗೆಳೆಯರ ಖಾಸಗಿ ವಿಚಾರಗಳನ್ನು ಹಂಚುವ ಮೂಲಕ ಅವರನ್ನು ನಂಬಿಕೆಯ ಖೆಡ್ಡಾದಲ್ಲಿ ಬೀಳಿಸಿ ಅವರ ಮಾನ ಪ್ರಾಣ ದೋಚುವ ಪ್ರಕರಣಗಳು ಹೆಚ್ಚಾಗಿ ಆತ್ಮಹತ್ಯೆಯಲ್ಲಿ ಕೊನೆಯಾಗುತ್ತಿವೆ. ಪ್ರತಿಯೊಂದಕ್ಕೂ ಇತಿಮಿತಿ ಎಂಬುದಿದೆ. ಎಷ್ಟೇ ಪ್ರಾಣ ಸ್ನೇಹಿತರಾಗಿದ್ದರೂ ಅವಶ್ಯವಿದ್ದಷ್ಟೇ ಸಲುಗೆಯನ್ನಿಟ್ಟುಕೊಂಡಾಗ ಆ ಬಾಂಧವ್ಯ ಚಿರವಾಗಿರಲು ಸಾಧ್ಯ.ಗೆಳೆತನಕ್ಕೆ ಸ್ವಲ್ಪವೂ ಸ್ವಾರ್ಥದ ಲವಲೇಶವಿರಬಾರದು. ಜೀವನದ ಎಲ್ಲ ರಹಸ್ಯಗಳನ್ನು ಹೆತ್ತವರೆದರು ಬಾಯಿಬಿಡದೆ ಮುಜುಗರದಿಂದ ಅದುಮಿಟ್ಟು ಗೆಳೆಯರೆದುರು ವ್ಯಕ್ತಪಡಿಸುವ ಆನಂದ, ಪರಿಹಾರ ಸಿಗುವ ಅಮಿತಾವಕಾಶಕ್ಕೆ ಕಾಯುವ, ಭಾವ ಕರಿಮುಗಿಲ ನೋಡಿ ನರ್ತನಕೆ ಕಾಯುವ ಗಿರಿನವಿಲಿಂನಂತೆ ಮಂಗಳ ಹಾಡುವ ಮಿಂಚು ಗುಡುಗಿನಂತೆ ಸೋನೆ ಹನಿಯ ಅಕ್ಷತೆಗೆ ಕಾದ ಇಳೆಯ ಸಂಭ್ರಮದಂತೆ ಕಾತರಿಸುತ್ತದೆ.
ಕಷ್ಟದಲೆಗಳನ್ನು ಸರಿಸಿ ಭಾವಭಿತ್ತಿಯಲಿ ಪ್ರೋತ್ಸಾಹದ ಕಾರಂಜಿಯಂತ ಗೆಳೆತನ ಆತ್ಮಸ್ಥೈರ್ಯವನು ತುಂಬಿ ಹೆಜ್ಜೆ ಹೆಜ್ಜೆಗೆ ಜೊತೆಯಾಗುವ ಬದುಕಿನ ಸಾರ್ಥಕತೆಗೆ ಕಥೆಯಗುವ ನಿಟ್ಟಿನಲ್ಲಿ ತ್ಯಾಗ ಸಮರ್ಪಣಾ ಭಾವದ ಅಡಿಪಾಯದ ಮೇಲೆ ಸ್ನೇಹ ಬಂಧನದ ಲೀಲೆ ಹೊಸ ಅಧ್ಯಾಯವನ್ನು ಬರೆವಲ್ಲಿ ಸಂದೇಹವಿಲ್ಲ. ಆದರೆ ಸ್ನೇಹವು ಸ್ವಾರ್ಥ, ದ್ವೇಷ, ಮತ್ಸರದಿಂದ ವಿಮುಖವಾಗಿದ್ದರೆ ಸ್ನೇಹಕ್ಕೊಂದು ಬೆಲೆ. ಜೀವನಕ್ಕೊಂದು ನೆಲೆಯಾಗುತ್ತದೆ.
ಸದಾ ಒಳಿತನ್ನು ಬಯಸುತ ಸ್ನೇಹಸಂಕೋಲೆಯನ್ನು ಭದ್ರಗೊಳಿಸೋಣ ಅಲ್ಲವೇ?


ಭಾರತಿ ನಲವಡೆ

ಭಾರತಿಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಮಂಗಳವಾಡದಲ್ಲಿಸಹಶಿಕ್ಷಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾಸಾಹಿತ್ಯಪುರಸ್ಕಾರ2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆಸಲ್ಲಿಸುತ್ತಿದ್ದಾರೆ

One thought on “

Leave a Reply

Back To Top