ವಿಶೇಷ ಬರಹ
ಶಂಗನ್ ವೀಸಾ ಪ್ರಯಾಸ! ( ಭಾಗ ಒಂದು)
ಡಾ. ಅರಕಲಗೂಡು ನೀಲಕಂಠ ಮೂರ್ತಿ.
ಶಂಗನ್ ವೀಸಾ ಪ್ರಯಾಸ!
ಭಾಗ — ೦೧ —
ಅದು ಆರಂಭ ಆದದ್ದು ಆ ಒಂದು ರಾತ್ರಿ ಸುಮಾರು ಒಂಭತ್ತರ ಹೊತ್ತಿಗೆ; ನಾನು ಅಷ್ಟರಲ್ಲಿ ನನ್ನ ಸಂಜೆ ಆರರಿಂದ ರಾತ್ರಿ ಒಂಭತ್ತರ ಸಮಯದ ಕ್ಲಿನಿಕ್ ಮುಗಿಸಿ ಮನೆಗೆ ಬಂದ ನಂತರ. ಸಾಮಾನ್ಯವಾಗಿ ಅಮೆರಿಕದಲ್ಲಿ ನೆಲೆಸಿರುವ ನನ್ನ ಮಗಳು ಸರಿಸುಮಾರು ಆ ಸಮಯಕ್ಕೆ ದೂರವಾಣಿ ಕರೆ ಮಾಡುವುದು ರೂಢಿ – ಅಮ್ಮ ಮಗಳು ಯಾವಾಗ ಬೇಕಾದರೂ ಪರಸ್ಪರ ಮಾತನಾಡಿಕೊಂಡಿರುವುದು ಸಾಮಾನ್ಯ ಮತ್ತು ಹಾಗೆ ಮಾತನಾಡುವುದರಲ್ಲೆ ನನ್ನ ಮಡದಿಗೆ ಸಮಯದ ಅರಿವು ಬಾರದಷ್ಟು ಆನಂದ; ಯಾವ ತಾಯಿಗೆ ತಾನೆ ಹಾಗಾಗದು. ಅದಕ್ಕೆ ನನ್ನ ತಕರಾರೂ ಇಲ್ಲ. ಪಾಪ ದೂರದಲ್ಲಿರುವ ಮಗಳಿಗೆ ಅದು ನೆಮ್ಮದಿಯೂ ಸಹ. ಅಮ್ಮನೊಡನೆ ಮಾತ್ರ ಅಲ್ಲದೆ, ಅಕಸ್ಮಾತ್ ನನ್ನೊಡನೆಯೂ ಮಾತನಾಡಬೇಕಾದಾಗ ಮಾತ್ರ ಮಾತು ಮುಗಿಸದೆ ನನಗಾಗಿ ಮಗಳು ಕಾಯುತ್ತಾಳೆ ಅಥವ ನನ್ನ ಬರುವಿಕೆಯ ಸಮಯಕ್ಕೆ ಹೊಂದುವ ಹಾಗೆ ಕರೆ ಮಾಡುತ್ತಾಳೆ. ಅಂದೂ ಸಹ ನನ್ನ ಬರುವಿನ ಹೊತ್ತಿಗೆ ಅಮ್ಮ ಮಗಳ ಮಾತಿನ ಜಡಿಮಳೆ ಆರಂಭ ಆಗಿತ್ತು. ಮಡದಿ “ಮಗಳು ನಿಮ್ಮ ಜೊತೆ ಮಾತಾಡಬೇಕಂತೆ” ಎನ್ನುತ್ತಾ ಅವಳ ಮೊಬೈಲನ್ನು ನನ್ನ ಕೈಗಿತ್ತಳು. ನಾನು ಅವರೆಲ್ಲರ ಆರೋಗ್ಯ ಮುಂತಾದ ಪ್ರಾಸ್ತಾವಿಕ ವಿಚಾರಣೆ ಮಾಡಿದ ನಂತರ, “ಅಪ್ಪಾಜಿ, ನಿಮ್ಮ ಅಳಿಯ ಮಾತಾಡಬೇಕಂತೆ” ಅನ್ನುತ್ತಾ ನೇರ ತನ್ನ ಗಂಡನಿಗೆ ಫೋನ್ ವರ್ಗಾಯಿಸಿದಳು ಮಗಳು. ಅಳಿಯ ಕೂಡ ಪರಸ್ಪರ ಅದು ಇದು ಪ್ರಾಸ್ತಾವಿಕ ಮಾತನಾಡಿದ ಬಳಿಕ, “ಮಾವ ಈಗಾಗಲೆ ನಿಮ್ಮ ಮಗಳು ನಮ್ಮ ಯೂರೋಪ್ ಟ್ರಿಪ್ ಬಗ್ಗೆ ನಿಮ್ಮ ಸಂಗಡ ಮಾತಾಡಿರ್ತಾಳೆ ಅಂದ್ಕೊಂಡಿದೀನಿ” ಅಂತ ಆರಂಭಿಸಿದರು. ಹೌದು, ಅಷ್ಟರಲ್ಲಿ ನನ್ನ ಮಡದಿಯ ಮುಖಾಂತರ ನನಗೆ ಅದರ ಬಗ್ಗೆ ಅರಿವಿದ್ದು, “ಹೌದೆಂದೆ.” ಅದಕ್ಕವರು, “ಮಾವ, ನಿಮಗೆ, ಅತ್ತೆ ಮತ್ತು ನಮ್ಮಪ್ಪ ಅವರಿಗೆ ಕೂಡ ಈಗ ಬುಕ್ ಮಾಡ್ತಾ ಇದೀನಿ; ದಯವಿಟ್ಟು ಹೊರಡೋದಕ್ಕೆ ರೆಡಿ ಮಾಡ್ಕೊಳಿ” ಎಂದು ಅಳಿಯ ಹೇಳಿದಾಗ, ನನಗೆ ಕ್ಷಣ ಮಾತೆ ಹೊರಡದ ಹಾಗಾಯ್ತು! ಅಲ್ಲದೆ ನನ್ನ ಮಂಡಿಗಳ ಮತ್ತು ಬೆನ್ನು ನೋವು ದಿಢೀರನೆ ನೆನಪಾಗಿ, ದಢಕ್ಕನೆ ಎಚ್ಚರಿಸಲೋ ಎಂಬಂತೆ ನೋವು ಹೆಚ್ಚಾದ ಅನುಭವ ಆಯ್ತು. ಆದರೂ ತಕ್ಷಣ ವಾಸ್ತವಕ್ಕೆ ಬಂದು, “ಖಂಡಿತ ಬೇಡಿ. ಮೊದಲನೆಯದಾಗಿ ನನ್ನ ಬೆನ್ನು ಮತ್ತು ಮಂಡಿ ನೋವುಗಳಲ್ಲಿ ಓಡಾಟ ಕಷ್ಟ ಆಗುತ್ತೆ; ಅಲ್ಲದೆ ಅಂಥ ದುಬಾರಿ ಪ್ರವಾಸ ಈ ವಯಸ್ಸಿನಲ್ಲಿ ನಮಗೇಕೆ” ಅನ್ನುತ್ತಾ, ಆ ವಿಷಯದಿಂದ ಅವರನ್ನು ಬೇಡದ ಕಡೆ ಎಳೆಯುವ ಪ್ರಯತ್ನ ಮಾಡಿದೆ. ಊಹುಂ, ಅಳಿಯ ಒಂದು ಸಲ ಮನಸ್ಸು ಮಾಡಿದ ಮೇಲೆ ಅದರಿಂದ ಹೊರಬರುವುದು ಅಸಾಧ್ಯ ಅಂತ ಗೊತ್ತಿದ್ದರೂ ನನ್ನ ಪ್ರಯತ್ನ ಮಾಡಿದೆ. “ಮಾವ, ದುಡ್ಡು ಬರುತ್ತೆ ಹೋಗುತ್ತೆ; ಅದರ ಬಗ್ಗೆ ನೀವೇನೂ ಚಿಂತೆ ಮಾಡಬೇಡಿ. ಅಷ್ಟಲ್ಲದೆ ಈ ಆಪರ್ಚುನಿಟಿ ಬಿಟ್ರೆ ಮತ್ತೆ ಇಂಥದ್ದು ಸಾಧ್ಯಾನ ನೀವೆ ಯೋಚನೆ ಮಾಡಿ; ನಾವೂ ಮತ್ತೆ ಮತ್ತೆ ಹೋಗೋಕಾಗಲ್ಲ, ಅಲ್ಲದೆ ನಿಮಗೂ ವಯಸ್ಸು ಏರ್ತಾ ಹೋಗುತ್ತೆ. ನಮಗೆ ಯಾವ ರೀತಿಯಲ್ಲು ತೊಂದರೆ ಇಲ್ಲ. ಮೇಲಾಗಿ ನೀವು ಮೂವರೂ ಬಂದರೆ ಮೊಮ್ಮಕ್ಕಳಿಗೆ, ನನಗೆ, ನಿಮ್ಮ ಮಗಳಿಗೆ ಹೆಚ್ಚು ಖುಷಿ ಆಗಲ್ವ? ದಯಮಾಡಿ ದೊಡ್ಡ ಮನಸ್ಸು ಮಾಡಿ ಒಪ್ಪಿ ಬಿಡಿ ಮಾವ” ಅಂದಾಗ, ನನಗೆ ಇಲ್ಲ ಅನ್ನಲಾಗಲಿಲ್ಲ. ಆದರೆ ನನಗೆ ನನ್ನ ಖಾಯಿಲೆಗಳಿಂದ ಅವರ ಸಂಭ್ರಮದ ಪ್ರವಾಸಕ್ಕೆ ಎಲ್ಲಿ ತೊಂದರೆ ಆಗುವುದೋ ಎಂಬ ಹಿಂಜರಿಕೆ ಕಾಡುತ್ತಾ ಇದ್ದರೂ ಒಪ್ಪಿದೆ. ನನ್ನ ಹೆಂಡತಿಯ ಒಪ್ಪಿಗೆ ಅವಶ್ಯಕತೆ ಇರಲೇ ಇಲ್ಲ; ಅವಳು ಇಂಥದ್ದಕ್ಕೆಲ್ಲ ಎಂದೂ ಇಲ್ಲ ಎನ್ನುವ ಪ್ರಮೇಯ ಇಲ್ಲವೇ ಇಲ್ಲ; ಸದಾ ಸಿದ್ಧ! “ಬೀಗರು ಒಪ್ಪಿದಾರ?” (ಅಳಿಯ ಅವರ ತಂದೆ ಬೆಂಗಳೂರಿನಲ್ಲಿ ಒಬ್ಬರೆ ವಾಸ ಇದ್ದಾರೆ) ಎಂದೆ. “ಹೌದು ಮಾವ, ಅವರನ್ನೂ ಒಪ್ಪಿಸಿದೀನಿ” ಎಂಬ ಉತ್ತರ. “ನೋಡಿ ಮಾವ, ಮೊದಲು ಲಿಸ್ಬನ್ ತಲಪಿ, ಅಲ್ಲಿ ಒಂದೂವರೆ ದಿನ ಇದ್ದ ನಂತರ ಕ್ರೂಸ್ ಹತ್ತತೀವಿ. ಒಂಭತ್ತು ದಿನ ಒಟ್ಟು ಕ್ರೂಸ್ ನಲ್ಲಿ; ಡೀಟೈಲ್ಡ್ ಐಟಿನರರಿ ನಿಮ್ಮ ಮಗಳು ಕಳಿಸ್ತಾಳೆ. ಶಿಪ್ಪಲ್ಲಿ ಎಲ್ಲ ಸ್ಟಾರ್ ಫೆಸಿಲಿಟಿ ಇರುತ್ತೆ. ಎಲ್ಲ ರೀತಿಯ ಊಟ ಮತ್ತು ಡ್ರಿಂಕ್ಸ್ ಕೂಡ ಎಲ್ಲ ವೆರೈಟಿ ಇರುತ್ತೆ. ಪೂರ್ತಿ ವಿಚಾರ ನಿಮ್ಮ ಮಗಳು ತಿಳಿಸ್ತಾಳೆ” ಅಂದದ್ದೆ ಮಗಳಿಗೆ ಫೋನ್ ಒಪ್ಪಿಸಿದರು. ಕ್ರೂಸ್ ಹಾಗು ವಿಮಾನ ಪ್ರಯಾಣದ ಟಿಕೆಟ್ ಮತ್ತು ಹೋಟೆಲ್ ಕೂಡ ಕ್ರಮೇಣ ಬುಕ್ ಮಾಡಿಯೇ ಬಿಟ್ಟರು.
ಮುಂದಿನ ಹೆಜ್ಜೆ ವೀಸಾ. ನಾನು, ನನ್ನ ಹೆಂಡತಿ ಅಮೆರಿಕ ವೀಸಾಕ್ಕೆ ಸುಮಾರು ಹದಿನಾರು ವರ್ಷಗಳ ಹಿಂದೆ, ಅಂದಿನ ಮದ್ರಾಸ್ (ಈಗ ಚನ್ನೈ) ನಗರಕ್ಕೆ ಹೋಗಿದ್ದು ಇನ್ನೂ ನೆನಪಲ್ಲಿ ಇದ್ದಿದ್ದರಿಂದ, ಇದೂ ಹಾಗೆ ಕಷ್ಟ ಆಗಲಾರದು ಅನ್ನಿಸಿದ್ದು ಸಹಜ. ಎರಡು ಬಾರಿ ಅಮೆರಿಕಕ್ಕೆ ಹೋಗಿ ಸಾಕಷ್ಟು ತಿಂಗಳು ಇದ್ದು ಬಂದ ನಂತರ, ಹತ್ತು ವರ್ಷದ ವೀಸಾ ಅವಧಿ ಮುಗಿದು ಏಳೆಂಟು ವರ್ಷಗಳ ನಂತರ ಈಗ ಮತ್ತೆ ಅಳಿಯ-ಮಗಳ ಬಲವಂತದಿಂದ ಚನ್ನೈನ ಅಮೆರಿಕನ್ ಕಾನ್ಸುಲೇಟಿಂದ ವೀಸಾ ನವೀಕರಣಕ್ಕೆ ದಿನಾಂಕ ನಿಗದಿಯಾಗಿದೆ. ಹಾಗಾಗಿ ಈ ಶಂಗನ್ ( ಕೆಲವರು ಅದನ್ನು ‘ಶಂಜನ್’ ಎಂದು ಉಚ್ಛಾರ ಮಾಡುತ್ತಾರೆ) ಗುಂಪಿನ ಯೂರೋಪ್ ದೇಶಗಳ ವೀಸಾ ಕೂಡ ಹಾಗೆಯೆ ಇರಬಹುದು ಎಂದು ಅಂದುಕೊಂಡದ್ದು ನಮ್ಮ ಪ್ರಾಥಮಿಕ ತಪ್ಪು; ಅಂಥ ಅನುಭವ ಇದ್ದರಲ್ಲವೆ? ಹಾಗಾಗಿ ಹಗುರ ಎನಿಸಿದ್ದು ಸಹಜ. ಅಮೆರಿಕದಲ್ಲಿ ಮಗಳು, ಇಲ್ಲಿ ಮಗ ಮತ್ತು ಸೊಸೆ ತಡ ಮಾಡದೆ ಪ್ರಯತ್ನಗಳ ಸರಮಾಲೆಯಲ್ಲೇ ತೊಡಗಿಕೊಂಡರು; ಸದಾ ಲ್ಯಾಪ್‌ಟಾಪಿನ ಮುಂದೆ ದೇವರ ಗುಡಿಯಲ್ಲಿ ಕೂತು ಜಪ ಮಾಡಿದಂತೆ! ಶಂಗನ್ ಗುಂಪು ಎಂದು ಕರೆಯುವ ಒಟ್ಟು ಇಪ್ಪತ್ತೇಳು ದೇಶಗಳಲ್ಲಿ ನಾವು ಕಾಲಿಡುವ ಪೋರ್ಚುಗಲ್, ಸ್ಪೈನ್, ಫ್ರಾನ್ಸ್ ಹಾಗೂ ಇಟಲಿ ಇವಾವುಗಳ ವೆಬ್ಸೈಟುಗಳಲ್ಲೂ ಸುತರಾಂ ಸಂದರ್ಶನ ಅಸಾಧ್ಯ ಅನ್ನಿಸಿದಾಗ ನಮ್ಮ ಪ್ರವಾಸದ ಕಥೆ ಇಷ್ಟೆ ಅನ್ನಿಸತೊಡಗಿತ್ತು. ಹಾಗಂತ ನಮ್ಮ ರೀತಿ ಮಗಳ ಕುಟುಂಬಕ್ಕೆ ಇಂಥ ತೊಂದರೆ ಇರಲಿಲ್ಲ; ಅಮೆರಿಕದ ನಾಗರಿಕರಾಗಿರುವ ಅವರಿಗೆ ಯೂರೋಪಿನ ವೀಸಾ ಅವಶ್ಯಕತೆ ಇರಲಿಲ್ಲ.
ಹತಾಶೆಯ ಕೊನೆ ಹಂತದಲ್ಲಿ ಮಗಳ ಕಡೆಯಿಂದ ಒಂದು ಶುಭಸುದ್ದಿ ಬಂದು ಖುಷಿಕೊಟ್ಟಿತು. ಆದರೆ ಅದಕ್ಕಾಗಿ ಪುಣೆಗೆ ಪ್ರಯಾಣ ಮಾಡಬೇಕಾಗಿತ್ತು; ಅಲ್ಲಿಯ ಕೇಂದ್ರದಲ್ಲಿ ಪೋರ್ಚುಗಲ್ ವೀಸಾಕ್ಕಾಗಿಯೇ ಸಂದರ್ಶನದ ಅವಕಾಶ ದೊರಕಿತ್ತು. ವೇಳೆಯ ಅಭಾವದಿಂದ ನನ್ನ ಮಗ ಅವನಿಗೂ ಸೇರಿಸಿ ನಾಲ್ಕು, ಏರ್ ಟಿಕೆಟ್ಟುಗಳನ್ನು ಬೆಂಗಳೂರು-ಪುಣೆ-ಬೆಂಗಳೂರು, ಹೀಗೆ (ಅವನು,ನಾನು,ನನ್ನ ಪತ್ನಿ ಮತ್ತು ಬೀಗರು – ಅಳಿಯನ ತಂದೆ) ಹೋಗಿ ವಾಪಸ್ ಬರುವಂತೆ ಬುಕ್ ಮಾಡಿದ್ದಲ್ಲದೆ, ಎರಡು ಹೋಟೆಲ್ ಕೊಠಡಿಗಳನ್ನು ಕೂಡ ಎರಡು ದಿನಕ್ಕೆ ಮುಂದಾಗಿ ಕಾಯ್ದಿರಿಸಲು ಹಣ ವರ್ಗ ಮಾಡಿದನು. ವಯೋವೃದ್ಧರನ್ನು ಪುಣೆ ನಗರ ಸುತ್ತಿಸುವ ಸಲುವಾಗಿ ಒಂದು ದಿನ ಹೆಚ್ಚಿರಲಿ ಎಂದು ಮಗಳೆ ಹೇಳಿದ್ದಳಂತೆ.
ಅಂತು ಪುಣೆಯ ಶಾಂತಾಯ್ ಹೋಟೆಲ್ ತಲಪಿದ ನಂತರ, ವೀಸಾ ಸಂದರ್ಶನಕ್ಕಾಗಿ ಮೊದಲೆ ಅಣಿ ಮಡಿಕೊಂಡು ತಂದಿದ್ದ ಒಬ್ಬೊಬ್ಬರಿಗೆ ಒಂದೊಂದರಂತೆ ಸಾಕಷ್ಟು ದಪ್ಪ ಫೈಲುಗಳ ಪರಿಶೀಲನೆ ಮಾಡುವ ಪ್ರಯತ್ನ ಆರಂಭಿಸಿದೆವು. ಅರ್ಜಿಯ ಸಂಗಡ ವಿಮಾನ ಪ್ರಯಾಣದ ಹೋಗುವ ಹಾಗೂ ವಾಪಸ್ಸು ಗ್ಯಾರಂಟಿ ಬರುವ ಟಿಕೆಟ್ಟುಗಳ ಫೋಟೋಕಾಪಿ, ಯಾವ ಯಾವ ದೇಶದ ಯಾವಯಾವ ಹೋಟೆಲ್ಲಿನಲ್ಲಿ ಉಳಿಯುತ್ತೇವೆಯೋ ಅವುಗಳ ಮುಂಗಡ ಕಾಯ್ದಿರಿಸಿರುವ ನಕಲುಗಳು (ಶಂಕೆ ಆದರೆ ಆಯಾ ದೂತಾವಾಸ ಕಛೇರಿಗಳಿಂದ ಆಯಾ ದೇಶದ ಹೋಟೆಲ್ಲುಗಳಿಗೂ ಕರೆ ಮಾಡಿ ಅದರ ಬಗ್ಗೆ ವಿಚಾರಿಸಲಾಗುತ್ತಂತೆ), ಮೂರು ವರ್ಷದ ಆದಾಯ ತೆರಿಗೆಯ ಮತ್ತು ಬ್ಯಾಂಕ್ ಖಾತೆಯ ಕಾಪಿಗಳೇ ಅಲ್ಲದೆ ನಮ್ಮ ಒಬ್ಬೊಬ್ಬರ ಖಾತೆಯಲ್ಲಿ ಕನಿಷ್ಠ ಎರಡು ಲಕ್ಷಕ್ಕಿಂತ ಕಡಿಮೆ ಇರದ ವಿವರ, ಬೇರೆಯವರು ನಮ್ಮ ಪ್ರಯಾಣಕ್ಕೆ ಹಣ ಕೊಡುತ್ತಿದ್ದರೆ ಅವರ ಆದಾಯದ ವಿವರಗಳು ಮತ್ತು ಅವರ ಮೂಲ ಕೆಲಸದ ದೇಶ ಮತ್ತು ಕಂಪೆನಿ ವಿವರಗಳು ಹೀಗೆ ಅನೇಕಾನೇಕ ವಿವರಗಳನ್ನು ಅವರು ಹೇಳಿದ ಅನುಕ್ರಮ ವ್ಯವಸ್ಥೆಯಲ್ಲಿ ಒಂದರ ನಂತರ ಒಂದು ಮಾದರಿಯಲ್ಲೇ ಫೈಲೊಳಗೆ ಜೋಡಿಸಿರಬೇಕು. ಜೊತೆಗೆ ಮೂರು ಶಂಗೆನ್ ವೀಸಾಕ್ಕಾಗಿಯೇ ವಿಶೇಷವಾಗಿ ತೆಗೆಸಿದ ಫೋಟೋಗಳಿರಬೇಕು; ಅಚ್ಚ ಬಿಳಿ ಹಿನ್ನೆಲೆಯ, ತಲೆ ಮತ್ತು ಮುಖಗಳ ಉದ್ದ ಹಾಗು ಅಗಲ ಅವರು ನಿಗದಿಪಡಿಸಿದಷ್ಟೆ ಮಿಲಿಮೀಟರುಗಳ ಅಳತೆಗಳಲ್ಲಿ ಕರಾರುವಾಕ್ಕಾಗಿ, ಒಂದಿನಿತು ಹುಸಿನಗೆ ಇಲ್ಲದ ಹಾಗೆಯೇ ಅಚ್ಚಿಳಿಸಿದ ಫೋಟೋ ಆಗಬೇಕು. (ಕೆಲವಲ್ಲದೆ ಎಲ್ಲ ಸ್ಟೂಡಿಯೋಗಳಲ್ಲೂ ಆ ಮಾದರಿಯಲ್ಲೇ ತೆಗೆಯಲಾರರು!) ಇವುಗಳ ಸಂಗಡ ಒರಿಜಿನಲ್ ದಾಖಲೆ ಎಲ್ಲವನ್ನೂ ಇನ್ನೊಂದು ಫೈಲಲ್ಲಿ ಕೊಂಡೊಯ್ಯಬೇಕು.
ಇಷ್ಟೆಲ್ಲಾ ಸರ್ಕಸ್ ಮಾಡಿದ ನಂತರ ಬೆಳಿಗ್ಗೆ ಬೇಗನೆ ಎದ್ದು, ಅವರು ಕೊಟ್ಟಿದ್ದ ವೇಳೆಗೆ (ನನ್ನ ಮಡದಿಗೆ ಒಂಭತ್ತು ಘಂಟೆಗೆ, ಬೀಗರಿಗೆ ಒಂಭತ್ತೂವರೆ ಮತ್ತು ನನಗೆ ಹತ್ತು) ಸರಿಯಾಗಿ ಅಲ್ಲಿರಲು ಎಂಟು ಘಂಟೆಗೇ ಟ್ಯಾಕ್ಸಿ ಹಿಡಿದು ಹೊರಟೆವು. ಪುಣೆಯ ವಾನೌರಿ ಬಡಾವಣೆಯ, ಕಲುಬಾಯ್ ಚೌಕದಲ್ಲಿ, ನಂ. 93, ಅವೆನ್ಯೂ ಮಾಲ್ ಎಂಬಲ್ಲಿ, ವಿ.ಎಫ್.ಎಸ್ ಗ್ಲೋಬಲ್ ಕಛೇರಿಗೆ ಹೋಟೆಲಿಂದ ಸುಮಾರು ಅರ್ಧ ಘಂಟೆ ಪ್ರಯಾಣ. ನಾಲ್ಕನೆಯ ಅಂತಸ್ತಿನಲ್ಲಿದ್ದ ಕಛೇರಿ ತಲಪಿದಾಗ ಅಲ್ಲಿ ಆಗಲೆ ಜಾತ್ರೆ! ಈ ಒಂದು ಕಛೇರಿಯಲ್ಲೆ ಇಷ್ಟೊಂದು ಜನ ವೀಸಾಸಕ್ತರಾದರೆ ಇಡಿ ದೇಶದ ಎಲ್ಲ ರಾಜ್ಯಗಳಲ್ಲಿ ಇರುವ ಅಷ್ಟೂ ವಿ.ಎಫ್.ಎಸ್.ಗ್ಲೋಬಲ್ ಆಫೀಸುಗಳಲ್ಲಿ ಒಂದು ದಿನದ ಜನಸಂದಣಿ ಅದೆಷ್ಟಿರಬಹುದು? ಹಾಗಾದರೆ ಒಂದು ವರ್ಷ ಪೂರ್ತಿ ಬೇರೇಬೇರೆ ವಿದೇಶಗಳಿಗೆ ಅವರವರ ವಿವಿಧ ಕಾರಣಕ್ಕಾಗಿ ಅದೆಷ್ಟು ದಶಲಕ್ಷ ಜನತೆ ಪ್ರಯಾಣ ಮಾಡುವರಿರಬಹುದು ಎಂಬ ಲೆಕ್ಕಾಚಾರದಿಂದ ಪರಮಾಶ್ಚರ್ಯವಾದಾಗ, “ಭಲೆ ಭಾರತ ಮಾತೆ!” ಅನಿಸದೆ ಇರಲಿಲ್ಲ.
ನನ್ನ ಮಗ ನಮಗೆ ಕೂರಲು ಕಷ್ಟದಲ್ಲಿ ಒರಗು ಬೆಂಚೊಂದನ್ನು ಹುಡುಕಿಕೊಟ್ಟು, ವಿಚಾರಣೆ ಮಾಡಲು ಹೊರಟ. ಆಗ ತಾನೆ ಒಂಭತ್ತು ಘಂಟೆ ಸಂದರ್ಶನಕ್ಕೆ ಬನ್ನಿ ಎಂದು ಬಿತ್ತರವಾಯಿತು. ಹೇಗಾದರಿರಲಿ, ಭಾಷೆ ತೊಂದರೆ ಇದೆ ಎಂದು ಹೇಳಿ ಮೂವರು ಒಟ್ಟಾಗಿ ಒಳಹೋಗಲು ಪ್ರಯತ್ನ ಮಾಡಲು ಎಲ್ಲ ಒಟ್ಟಿಗೆ ಒಂದೇ ಸಾಲಿಗೆ ಸೇರಿದೆವು. ಅಂತು ನನ್ನ ಮಡದಿಯ ಸರದಿ ಬಂದಾಗ, ಸಿಬ್ಬಂದಿಯೊಡನೆ ಕೇಳಿಕೊಂಡಾಗ ತಕರಾರಿಲ್ಲದೆ ಮೂರೂ ಫೈಲು ಕೂಲಂಕಷ ನೋಡಿ ಒಳಬಿಟ್ಟ. ನನ್ನ ಮಗಳು ಅಮೇರಿಕದಿಂದಲೆ ಅಪಾಯಿಂಟ್ಮೆಂಟ್ ಬುಕ್ ಮಾಡುವಾಗ, ಸಂದರ್ಶನದ ಫೀಸ್ ಸಂಗಡ ಲೌಂಜ್ ಫೆಸಿಲಿಟಿ ಫೀಸ್ ಸಹ ಸೇರಿಸಿ, ಒಬ್ಬೊಬ್ಬರಿಗೆ ಐದುಸಾವಿರ ರೂಪಾಯಿಗು ಮಿಕ್ಕಿ ಪೀಕಿದ್ದಳು. ಲೌಂಜ್ ಫೀಸಿಂದ ಕ್ಯೂ ಇರುವುದಿಲ್ಲ ಎಂದು ಯಾರೋ ಹೇಳಿದ್ದು ಕೇಳಿ, ಮೂವರು ವಯಸ್ಸಾದವರು, ಕ್ಯೂ ನಿಲ್ಲುವುದೂ ಬೇಡ ಎಂದು ತೆತ್ತಿದ್ದಳು. ಆದರೆ ಇಲ್ಲಿ ನೋಡಿದಾಗಲೆ ಅದರ ಮರ್ಮ ಗೊತ್ತಾದದ್ದು; ಲೌಂಜಿಗಾಗಿ ಹಣ ಒಬ್ಬೂಬ್ಬರಿಗೆ ಎರಡು ಸಾವಿರದ ಆಸುಪಾಸಿನಲ್ಲಿ ಕಟ್ಟಿದ್ದರಿಂದ ಬಿಸ್ಕತ್ತು ಮತ್ತು ಕಾಫಿ-ಟೀ ಮಾತ್ರ ‘ಉಚಿತ’ ಕೊಟ್ಟಿದ್ದು ವಿಶೇಷ! ಕೊನೆಗೂ ನಮ್ಮ ಸರದಿ ಬಂದಾಗ ಬೀಗರು ಮೊದಲು ಹೋದರು. ಅವರ ಫೈಲು ಅವಲೋಕಿಸಿದ ಅಲ್ಲಿಯ ಸಿಬ್ಬಂದಿಯ ಒಬ್ಬ ವ್ಯಕ್ತಿ ನನ್ನ ಕಡೆ ನೋಡಿ ಕರೆದ. ನಾನು ಹೋದಾಗ ನಿರಾಸೆಯ ಕರಿ ಮೋಡ ಆಚ್ಛಾದಿಸಿತು!
ಅಲ್ಲಿ ಎಲ್ಲಿ ನೋಡಿದರಲ್ಲಿ ಜನ ಜನ ಜನ! ಎಲ್ಲ ಆ ಯಕಃಶ್ಚಿತ್ ‘ವೀಸಾ’ ಎಂಬ ಮೊಹರಿಗಾಗಿ. ಪ್ರತಿಯೊಂದು ಮುಖದ ಮೇಲೆ ಅವರವರದೆ ಮಾದರಿಯ ದುಗುಡ. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹೋಗುವ ವಿದ್ಯಾರ್ಥಿಗಳು; ತಮ್ಮ ತಮ್ಮ ಬಂಧುಬಾಂಧವರನ್ನು ನೋಡಲೋ ಅಥವ ಅವರೊಡನೆ ಕೆಲವು ಕಾಲ ಇದ್ದು ಬರಲೋ ಹೊರಟಿದ್ದವರು; ಯಾರೋ ಕಾಯಿಲೆ ಮನುಷ್ಯರನ್ನ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುತ್ತಿರುವವರು; ಹೊರದೇಶಗಳಲ್ಲಿ ಕೆಲಸ ಅರಸಿ ಅಥವ ನೌಕರಿ ಈಗಾಗಲೆ ದೊರೆತಿದ್ದು, ಆ ಕೆಲಸಕ್ಕೆ ಸೇರಿಕೊಳ್ಳಲು ಹೋಗುವವರು ಅಥವ ನಮ್ಮ ಥರ ಟೂರಿಸ್ಟ್ ವೀಸಾ ಅರಸುತ್ತಿರುವವರು ಅಥವ ಇನ್ನೂ ಅನೇಕ ಕಾರಣಗಳು ಹಾಗೂ ಅಷ್ಟೆ ಥರ ದುಗುಡಗಳು! ಪ್ರತಿ ಟೇಬಲ್ಲಿನಲ್ಲು ಫೈಲಿನ ಆಚೆ ಮತ್ತು ಈಚೆ ಕೂತವರು. ಆಯಾ ಟೇಬಲ್ಲಿನಿಂದ, ಒಪ್ಪಿಗೆ ದೊರಕಿದವರು ಆಯಾ ದೇಶದ ಕಾನ್ಸುಲಾರ್ ಅಧಿಕಾರಿ ಅಥವ ಅಂಥ ಇನ್ನೊಬ್ಬರತ್ತ ಆಯಾ ಕೊಠಡಿ ಕಡೆ ಅರ್ಧ ಯುದ್ಧ ಗೆದ್ದ ಮುಖ ಭಾವದಲ್ಲಿ, ಅಂಥದೆ ಹೆಜ್ಜೆ ಇಡುತ್ತ ಹೋಗುತ್ತಿದ್ದ ಜನ…ಅಲ್ಲಿ ಜಗತ್ತಿನ ಯಾವಯಾವ ದೇಶಗಳಿಗೆ ಹೆಚ್ಚು ಹೆಚ್ಚಿನವರು ಹೋಗಬಹುದೋ ಅಂಥ ಎಲ್ಲ ಪ್ರಮುಖ ದೇಶಗಳ ಹೆಸರಿನ ಫಲಕಗಳಿದ್ದವು.
ನನ್ನನ್ನು ಕರೆದ ಆ ಅಧಿಕಾರಿಯತ್ತ, ಟೀಬಲ್ಲುಗನ್ನು ಬಳಸಿಕೊಂಡು ತಲುಪಿದೆ. ಆತ ನನಗೆ ಕೂರಲು ಹೇಳುವ ಬದಲು, “ನೀವು ಮಹಾರಾಷ್ಟ್ರದಲ್ಲಿ ನೆಲೆಸಿದ್ದೀರಾ?” ಎಂದು ಕೇಳಿದ. ನಾನು ಇಲ್ಲ ಎಂದಾಗ, “ಕನಿಷ್ಟ ಆರು ತಿಂಗಳ ಕಾಲ ನಮ್ಮ ರಾಜ್ಯದಲ್ಲೇಲ್ಲಾದರು ವಾಸ್ತವ್ಯ ಇದ್ದಿರೇ?” ಎಂದಾಗ ಅದಕ್ಕೂ ಇಲ್ಲ ಎಂಬ ಉತ್ತರ ಕೊಟ್ಟಾಗ “ಹಾಗಾದರೆ ನಿಮಗೆ ಇಲ್ಲಿ ವೀಸಾ ಕೊಡುವುದು ಅಸಾಧ್ಯ; ನೀವು ಬೆಂಗಳೂರಿನಲ್ಲೆ ಪ್ರಯತ್ನಿಸಿ” ಎಂದುಬಿಟ್ಟ! ಅಲ್ಲಿಗೆ ನನ್ನ ಮೈಮೇಲೆ ಮಂಜಿನ ತಣ್ಣೀರು ಎರಚಿದ ಹಾಗೆ ಭಾಸವಾಯಿತು. ನಾನು ದಯವಿಟ್ಟು ಪ್ರಯತ್ನ ಮಾಡಿ; ಬೇಕಾದರೆ ನನ್ನನ್ನೆ ಒಳ ಹೋಗಲು ಬಿಡಿ, ನಾನೆ ಕಾನ್ಸುಲಾರ್ ಆಫೀಸರನ್ನು ಕೇಳಿಕೊಳ್ಳುತ್ತೇನೆ ಎಂದೆಲ್ಲ ಆತನ ಮುಂದೆ ಹೆಚ್ಚುಕಮ್ಮಿ ಗೋಗರೆದೆ. ಊಹುಂ! “ಬೇಕಾದರೆ ದೆಹಲಿಯ ಎಂಬೆಸ್ಸಿ ಫೋನ್ ನಂಬರ್ ಕೊಡುವೆ; ನೀವೆ ಟೆಲಿಫೋನ್ ಮಾಡಿ ವಿಚಾರಿಸಿ. ಇದು ಪ್ರಾದೇಶಿಕ ವೀಸಾ ಕಛೇರಿಗಳ ನಿಯಮಗಳ ವಿಚಾರ; ನಿಮ್ಮ ನಿಮ್ಮ ಪ್ರಾಂತದಲ್ಲಿ ಮಾತ್ರ ನಿಮಗೆ ವೀಸಾ ಕೊಡಲು ಸಾಧ್ಯ, ಎಂಬ ಎಂಬೆಸಿ ರೂಲ್ಸ್ ಇದೆ ಎಂದು ನಮ್ಮಿಂದ ಕಳಚಿಕೊಂಡ. ಹೊರಗೆ ನನ್ನ ಮಗ ಅಷ್ಟರಲ್ಲಿ ವಿಷಯ ತಿಳಿದಿದ್ದರಿಂದ, ಅಮೆರಿಕಕ್ಕೆ ದೂರವಾಣಿ ಕರೆ ಮಾಡಿ ನಮ್ಮ ಅಳಿಯ ಅವರೊಡನೆ ಮಾತನಾಡಿದ್ದ. “ಹೌದು, ಅದು ಸತ್ಯ. ನಿನ್ನ ತಂಗಿ ಸಂದರ್ಶನಕ್ಕೆ ಅವಕಾಶ ಸಿಕ್ಕ ಖುಷಿಯಲ್ಲಿ, ಅಂತ್ಯದಲ್ಲಿ ‘ಮಹಾರಾಷ್ಟ್ರ ರಾಜ್ಯದಲ್ಲಿ ವಾಸ ಇದ್ದವರಿಗೆ ಮಾತ್ರ’ ಎಂದು ಬರೆದಿದ್ದ ನಿಬಂಧನೆಯ ಕಡೆ ಕಣ್ಣು ಹಾಯಿಸದೆ ಬುಕ್ ಮಾಡಿ, ಫೀಸು ಸಹ ತೆತ್ತಿದ್ದಳು. ಹಾಗಾಗಿ ವಾಪಸ್ ಊರಿಗೆ ಹೋಗಿ ಅಲ್ಲಿಂದ ಮತ್ತೆ ಪ್ರಯತ್ನ ಮಾಡಿ; ನಾವು ಕೂಡ ಇಲ್ಲಿಂದ ಮಾಡುತ್ತೇವೆ” ಎಂದು ಹೇಳಿದ್ದರಂತೆ. ಕೊನೆಗೆ ಹತಾಶೆಯಿಂದ ಹೋಟೆಲಿನತ್ತ ಹೊರಟೆವು. ಮಧ್ಯಾಹ್ನ ಊಟದ ನಂತರ ಸ್ವಲ್ಪ ವಿಶ್ರಾಂತಿ ಮಾಡಿ, ಸಂಜೆಯ ಪುಣೆ ಕಣ್ಣು ತುಂಬಿಕೊಳ್ಳಲು ಒಲ್ಲದ ಮನಸ್ಸಿನಿಂದ ಹೊರಟೆವು. ರಾತ್ರಿ ಎಂಟು ಘಂಟೆಯವರೆಗೆ ಸುತ್ತಾಡಿದೆವು; ಬೆಳಿಗ್ಗೆ ಯಾವಯಾವ ಕಡೆಗೆ ಹೋಗಬಹುದಾದ ಸಾಧ್ಯತೆ ಇರಬಹುದು ನೋಡು ಎಂದು ಮಗನಿಗೆ ಹೇಳಿ ಮಲಗಿದ್ದಾಯಿತು. ಮಾರನೆ ದಿನ ತಿಂಡಿ ಮುಗಿಸಿ ಹೊರಟೆವು. ವಾಸ್ತವದಲ್ಲಿ ಇಷ್ಟೆಲ್ಲ ನಡೆದಮೇಲೆ ನಮ್ಮ ನಾಲ್ವರಿಗೂ ಏನನ್ನೂ ನೋಡುವ ಮನಸ್ಸಿರಲಿಲ್ಲ; ಆದರೂ ವಿಮಾನದ ಪ್ರಯಾಣ ಮರುದಿನಕ್ಕೆ ನಿಗದಿ ಆಗಿದ್ದರಿಂದ ಅನಿವಾರ್ಯ. ಏನೋ ಕಾಟಾಚಾರಕ್ಕೆ ಅಡ್ಡಾಡಿ, ಅಂತು ಬಂದ ದಾರಿಗೆ ಸುಂಕ ಇಲ್ಲದ ಹಾಗೆ ಬರಿಗೈಲಿ ಬಂದು ಊರು ಸೇರಿದೆವು.
( ನಾಳೆಗೆ ಮುಂದುವರೆಯುವುದು)
ಡಾ. ಅರಕಲಗೂಡು ನೀಲಕಂಠ ಮೂರ್ತಿ.