ಅಂಕಣ ಸಂಗಾತಿ
ಸುಜಾತಾ ರವೀಶ್
ಹೊತ್ತಿಗೆಯೊಂದಿಗೆ ಒಂದಿಷ್ಟು ಹೊತ್ತು
ನೆನಪ ರಂಗೋಲಿ
ಕವನ ಸಂಕಲನ
ಲೇಖಕರು :ರಾಜೇಂದ್ರ ಪಾಟೀಲ (ಉಮಾತನಯರಾಜ)
ಪ್ರಕಟಣೆ ೨೦೧೮
ಪ್ರಕಾಶಕರು : ಸಪ್ನ ಬುಕ್ ಹೌಸ್
ಶ್ರೀ ರಾಜೇಂದ್ರ ಪಾಟೀಲ ಉಮಾತನಯರಾಜ ಎಂಬ ಕಾವ್ಯನಾಮದಲ್ಲಿ ಬರೆಯುವ ಇವರು ಬಾಲ್ಯದಿಂದಲೇ ಬರೆಯುವ ಗೀಳು ಹತ್ತಿಸಿ ಕೊಂಡವರು. ಇವರ ಮಕ್ಕಳ ಕವಿತೆಗಳ ಸಹಿತ ಇತರ ಕವಿತೆಗಳು, ಕತೆಗಳು, ಲೇಖನಗಳು ಸುಧಾ, ತರಂಗ, ವಾರಪತ್ರಿಕೆ, ರಾಗಸಂಗಮ, ಮಂಗಳ, ಮಲ್ಲಿಗೆ, ಮಯೂರ, ಪ್ರಜಾವಾಣಿ, ಪ್ರಜಾಮತ, ಸಂಯುಕ್ತ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟ ಗೊಂಡಿವೆ . ಇವರ “ತಂಗಿಯ ಪತ್ರ” ೧೯೯೬ ರ ಹೊತ್ತಿಗೆ ಎರಡನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಪ್ರಕಟವಾಗಿ ೨೦೧೪ ರವರೆಗೂ ಪುಸ್ತಕದಲ್ಲಿತ್ತು. ಈ ಕವಿತೆಯನ್ನು ನಂತರ ಮಕ್ಕಳ ಪ್ಲೇ ಕಾರ್ಡ್ ಗಳಲ್ಲಿ ಮತ್ತು ಶಿಕ್ಷಕರ ಕೈಪಿಡಿ ಯಲ್ಲಿ ಅಳವಡಿಸಲಾಗಿದೆ ಇದೇ ಕವಿತೆಯ ಧ್ವನಿಸುರಳಿಯನ್ನು ತೇಜಸ್ವಿನಿ ಅನಂತ್ ಕುಮಾರ್ ೨೦೦೧ ರಲ್ಲಿಯೇ ಹೊರತಂದಿರುವುದು ವಿಶೇಷ. ಅಲ್ಲದೆ ಮತ್ತೆ ಕೆಲವು ಕವನಗಳು ಮರಾಠಿ ಹಾಗೂ ಕನ್ನಡ ಪಠ್ಯಪುಸ್ತಕಗಳಲ್ಲಿ ಅಡಕವಾಗಿದೆ . ಕನ್ನಡ ಸಾಹಿತ್ಯ ಅಕಾಡೆಮಿಯ 4 ಕವನ ಸಂಕಲನಗಳಲ್ಲಿ ಇವರ ಕವನ ಪ್ರಕಟಗೊಂಡಿರುವುದು ವಿಶೇಷ . ಕಲಬುರಗಿ ಆಕಾಶವಾಣಿ ಕೇಂದ್ರದ ಝೇಂಕಾರ ಕಾರ್ಯಕ್ರಮ ಇವರ ಕವನದಿಂದಲೇ ಚಾಲನೆಗೊಂಡು ಇಡೀ ತಿಂಗಳು ಪ್ರಸಾರವಾಯಿತು. ಕನ್ನಡ ಪತ್ರಿಕೆಗಳಾದ ಕಲಬುರ್ಗಿಯ ಕ್ರಾಂತಿ, ಗ್ರಿನೊಬಲ್, ಚಿಂತಕ ಬೆಳಗಾವಿಯ ಕನ್ನಡಮ್ಮ, ಹಸಿರುಕ್ರಾಂತಿ, ನಾಡೋಜ ಈ ಎಲ್ಲ ಪತ್ರಿಕೆಗಳಿಗೂ ತಮ್ಮ ಸಾಹಿತ್ಯ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಹಿರಿಯ ಉಪಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ .ನೆನಪ ರಂಗೋಲಿ ಒಲವ ಚುಕ್ಕೆಗಳ ಮಧುರ ಎಳೆಗಳು ಇವರ ಮೊದಲ ಪ್ರಕಟಿತ ಕವನ ಸಂಕಲನ . ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರಾದ ಇವರು ಬಹುಕಾಲದಿಂದ ಬರೆಯುತ್ತಿದ್ದರೂ ಇದುವರೆಗೂ ಕವನ ಸಂಕಲನ ಹೊರ ತಾರದಿದ್ದುದು ನಿಜಕ್ಕೂ ಸೋಜಿಗದ ಸಂಗತಿಯೇ .
ತಾನು ಬರೆಯುವುದು ರಚಿಸುವುದು ವೈಯಕ್ತಿಕ ಸಾಧನೆ. ಆದರೆ ತಮ್ಮೊಂದಿಗೆ ಬೇರೆಯವರಿಂದ ಬರೆಸಿ ಅವರನ್ನು ಸಾಹಿತ್ಯ ಪಯಣದಲ್ಲಿ ಕೈಹಿಡಿದು ಮುನ್ನಡೆಸಿ ಕೊಂಡು ಹೋಗುವುದಿದೆಯಲ್ಲ ಅದು ಸಾಮಾನ್ಯ ಸಂಗತಿ ಅಲ್ಲವೇ ಅಲ್ಲ .ರಾಜಕೀಯ, ಒಳಜಗಳ, ಪರರ ಉತ್ಕರ್ಷದ ಬಗ್ಗೆ ಅಸೂಯೆ ವಿಜೃಂಭಿಸುತ್ತಿರುವ ಈ ಕಾಲದಲ್ಲಿ ಭಾವಸಂಗಮ ಬಳಗ ಕಟ್ಟಿ ಲೇಖಕರ ಸೃಜನಶೀಲತೆಗೆ ಮೆರಗುಕೊಟ್ಟು ವೇದಿಕೆ ಕಲ್ಪಿಸಿ ಪ್ರಗತಿಗೆ ಪ್ರೋತ್ಸಾಹ ಕೊಡುತ್ತಿರುವ ಅಪ್ರತಿಮ ಕಾರ್ಯ ಇವರದು. ಭಾವಸಂಗಮದವರಿಗೆ ರಾಪಾ ಅವರ ಪರಿಚಯ ಮಾಡಿ ಕೊಡುವುದು ಬೇಡವೇ ಬೇಡ. ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬಂತೆ ರಾಪಾ ಸರ್ ಸೋದರ ಅಪ್ಪಾಜಿ ಮಗ ಮಾತ್ರವಲ್ಲದೆ ಉತ್ತಮ ಸ್ನೇಹಿತ ವಿಮರ್ಶಕ ಹಿತಚಿಂತಕ ಗುರುಗಳು ಹಾಗೂ ಪ್ರೇರಕ ಶಕ್ತಿ .
ನೆನಪು ಮಾನವನಿಗೆ ನಿಸರ್ಗದ ಅಪೂರ್ವ ಕೊಡುಗೆ ನೆನಪು ಸಿಹಿಯಲ್ಲ ಹಾಗಂತ ಕಹಿಯೂ ಅಲ್ಲ ಬದುಕು ಒಲವ ಚುಕ್ಕಿಗಳ ಮಧುರ ಎಳೆಗಳ ಚಿತ್ತಾರದ ನೆನಪ ರಂಗೋಲಿ. ವಿವಿಧ ರಂಗಿನಲ್ಲಿ ವಿವಿಧ ವಿನ್ಯಾಸಗಳಲ್ಲಿ ಚಿತ್ತಾಕರ್ಷಕವಾಗಿ ಬಿಡಿಸಿಟ್ಟ ರಂಗವಲ್ಲಿಗಳ ಸಂಗ್ರಹ ಈ ಸಂಕಲನ . ನಲವತ್ತು ಹನಿಗವನಗಳನ್ನು ಇಪ್ಪತ್ತು ಉದ್ದದ ಕವನ ಕುಸುಮಗಳನ್ನು ಕೋದ ಹೂಮಾಲೆ . ಚಿಕ್ಕ ಹನಿ ಕವನಗಳು ಕೆಲವು ಕಡೆ ಕಚಕುಳಿಯಿಟ್ಟು ನಗಿಸುತ್ತದೆ. ಈ ಕವನ ನೋಡಿ
ಕಾಯುತ್ತಿದ್ದೆ ಅಂದು
ದಿನಾ ಮುಂಜಾನೆ
ಕಾಲೇಜಿನ ಬಾಗಿಲಲ್ಲಿ
ನೀ ಬರುವುದು
ಯಾವಾಗ ಅಂತ!
ಕಾಯುತ್ತಿದ್ದೇನೆ ಇಂದೂ
ತವರಿನ ಕಡೆಗೆ
ನಿನ್ನ ಪ್ರಯಾಣ
ಯಾವಾಗ ಅಂತ! .
ತನ್ನ ಪ್ರೇಯಸಿಯನ್ನು ವರ್ಣಿಸುವ ಭಾವ ಪ್ರೀತಿಯ ಉತ್ಕಟತೆ ತೋರುತ್ತದೆ . “ನೆನಪ ರಂಗೋಲಿ” ಕವನದಲ್ಲಿ ಪ್ರಕೃತಿಯ ಕುಳಿರ್ಗಾಳಿ, ರವಿಕಿರಣ, ಬಾನ ಮುಗಿಲು, ಹರಿವ ನದಿ, ಹಗಲು_ಇರುಳು ಎಲ್ಲದರಲ್ಲೂ ನಿನ್ನ ನೆನಪು ಎನ್ನುತ್ತಾರೆ .”ಅವಳಿಗೆ ಅವಳೇ ಸಾಟಿ” ಎಂಬ ಕವನದಲ್ಲಿ
“ಕನ್ನಡದ ಅಕ್ಷರ ಬಳ್ಳಿಯೂ ಗಲಿಬಿಲಿಗೊಳ್ಳುತ್ತದೆ ಅವಳ ವರ್ಣಿಸಲು” ಎನ್ನುತ್ತಲೇ ಅವಳನ್ನು ವರ್ಣಿಸುತ್ತಾರೆ. ಆಕೆಯ ಪ್ರೀತಿಯ ವರ್ಣನೆ ಚೆಂದ. “ನಿನ್ನ ಹೆಸರು” “ಅಂತಿಮ ಸತ್ಯ” “ತೀವ್ರತೆ” ಕವನಗಳು ಹಾಗೇ ಮನದ ಮಂಟಪದ ಮಲ್ಲಿಗೆಯರಳ ಸೌರಭವನ್ನು ಪದಗಳಲ್ಲಿ ಕಟ್ಟಿಕೊಡುತ್ತವೆ. ಅಂತೆಯೇ ಪ್ರೀತಿಸುವವರು ದೂರಾಗುವ ವಿರಹದ ಭಾವನೆ “ಸಂವೇದನೆ” “ಈ ಹುಡುಗಿಯರೇ ಹೀಗೆ” “ಭಾವನೆಗಳೇ ಹೀಗೆ” “ಭಾವನೆಗಳಿಗೆ ಬೆಂಕಿ” ಕವಿತೆಗಳಲ್ಲಿ ಬಿಂಬಿತವಾಗುತ್ತದೆ. ಹೆಂಡತಿಯ ಮುನಿಸನ್ನು ಬಣ್ಣಿಸುವ “ದೂರಾದರೆ ಚಂದೇನಾ” ಅಚ್ಚ ಧಾರವಾಡದ ಶೈಲಿಯ ಭಾಷೆಯಲ್ಲಿ ರಚಿತವಾಗಿದ್ದು “ಗಂಡಹೆಂಡಿರ ಜಗಳ ಗಂಧ ತೀಡಿಧ್ಹಾಂಗ” ಎಂಬ ಚಿರಂತನ ಸತ್ಯದ ಹೂರಣವನ್ನು ಪದರ ಪದರವಾಗಿ ತೆರೆದಿಡುತ್ತದೆ. ಗೇಯತೆಯಿಂದ ಕೂಡಿದ ಹಾಡಲೂ ಸೊಗಸಾದ ಕವನ .
ನನಗಂತೂ ಬೇಂದ್ರೆಯಜ್ಜನ ಕವನಗಳು ನೆನಪಿಗೆ ತಂದಿತು. ಇಂಥದೇ ಮೊದಲ ಅನುಭವಗಳ ಮಧುರ ಪುಳಕದ ನವಿರು ಬಣ್ಣನೆಯ ಶೃಂಗಾರ “ನೆನಪ ಗಂಧ” ಕವನದಲ್ಲಿದೆ. .
“ಭಾವಸಂಗಮ” ಕವನದಲ್ಲಿ ಹೇಳುವಂತೆ “ಈ ಮನಸ್ಸೇ ಹೀಗೆ ಪ್ರೀತಿ ಬಯಸುತ್ತದೆ ಸ್ನೇಹ ಅಂತಃಕರಣಕ್ಕೆ ಬಾಗುತ್ತದೆ” ಎನ್ನುತ್ತಾ ಕವಿಯ ಭಾವುಕ ಮನಸ್ಸಿನ ದನಿಯಾಗುತ್ತಾ “ಗೆಳತಿ” ಎಂಬ ಶಬ್ದಕ್ಕೆ ಕೊಡುವ ಈ ವ್ಯಾಖ್ಯಾನ ಮನಕ್ಕೆ ಆತ್ಮೀಯವೆನಿಸಿತು.
ದೊಡ್ಡ ದೊಡ್ಡ ಮಾತನಾಡಿದಾಗ
ನಾವು ಪ್ರಬುದ್ದರಾಗುವುದಿಲ್ಲ
ಸಣ್ಣ ಸಣ್ಣ ಸಂಗತಿಗಳನ್ನು
ಅರ್ಥ ಮಾಡಿಕೊಂಡಾಗಲೇ
ನಾವು ಪ್ರಬುದ್ಧರಾಗುತ್ತೇವೆ
ಅಂಥ ಪ್ರಬುದ್ಧತೆ ನಿನ್ನಲ್ಲಿ ಕಂಡೇ
ಅದೇ ನಮ್ಮ ನಡುವಿನ ಸೇತುವೆ
ಕಾವ್ಯವನ್ನು ಕಟ್ಟುವ ಕಾರ್ಯದಲ್ಲಿ ಚಿಂತನ ಮತ್ತು ವರ್ಣನಾಂಶಗಳಾದ ತನ್ನ ವಿದ್ಯೆ ಬುದ್ದಿ ಅಧ್ಯಯನ ಅಭ್ಯಾಸ ಮತ ದೇಶ ಕಾಲ ಇತ್ಯಾದಿಗಳೆಲ್ಲವನ್ನೂ ವಿನಿಯೋಗಿಸುತ್ತಾನೆ ಕವಿ .ತಾನು ಏರಿ ಮುಟ್ಟಿದ “ದರ್ಶನ” ವನ್ನು ಇಳಿದು ಕಟ್ಟುತ್ತಾನೆ .
(ಕುವೆಂಪು _ ಕಾವ್ಯ ವಿಮರ್ಶೆಯಲ್ಲಿ ಪೂರ್ಣದೃಷ್ಟಿ)
ಹೀಗೆ ಅನುಭವವೇದ್ಯದ ಪ್ರೇಮ ಪುಳಕದ ಮಧುವನ್ನು ಪದ ರೂಪಗಳಲ್ಲಿ ಕಾವ್ಯ ರಸಿಕರಿಗೆ ಉಣಬಡಿಸುವ ಕುಸುಮ ಪಾತ್ರೆ ಈ ಒಲವ ಚುಕ್ಕಿಗಳ ರೇಖೆಗಳ ವಿನ್ಯಾಸ.
ಸಾಹಿತ್ಯ ಜೀವನದ ಪ್ರತಿಬಿಂಬ ಎನ್ನುವುದು ಸಾಮಾನ್ಯ ನಂಬಿಕೆ . ಬಿಂಬ ಮಾತ್ರವಲ್ಲದೆ ಅದು ಪ್ರತಿಫಲನವೂ ಸಹ ಹೌದು . ಸಾಹಿತ್ಯವೆಂದರೆ ನದಿ ಹರಿದ ಮೇಲೆ ರೂಪಿತವಾಗುವ ನದಿ ಪಾತ್ರ ಮಾತ್ರ ಎಂದು ಪರಿಗಣಿಸಲಾಗದು. ನದಿಯು ಹರಿಯಬೇಕಾದ ದಿಕ್ಕು ದಾರಿಗಳನ್ನು ನಿರ್ಣಯಿಸುವ ನಿರ್ದಿಷ್ಟ ಪ್ರೇರಕ ಶಕ್ತಿಯೂ ಆಗಬೇಕು . ಆ ನಿಟ್ಟಿನಲ್ಲಿ ಕವಿ ಬರೀ ಅಂತರ್ದೃಷ್ಟಿಯುಳ್ಳವನು ಆಗದೆ ಸುತ್ತಲ ಪರಿಸರವನ್ನು ಅವಲೋಕಿಸುವ ಅಧ್ಯಯಿಸುವ ಅಭ್ಯಾಸಿಯೂ, ಅದರ ಮೇಲೆ ತನ್ನ ಕ್ಷಕಿರಣ ನೋಟವನ್ನು ಬೀರುವಂಥವನೂ ಆಗಬೇಕಾಗುತ್ತದೆ. ಈ ಕಾರ್ಯ ಬಹು ಸಮರ್ಥವಾಗಿ ಕವಿಯ ಸಮಾಜಮುಖಿ ಧೋರಣೆ “ಹೆಜ್ಜೆಮೂಡದ ಹಾದಿಯಲ್ಲಿ” ಕವನದಲ್ಲಿ ಅಭಿವ್ಯಕ್ತಿಗೊಂಡಿದೆ. ಸ್ನೇಹ ಪ್ರೀತಿ ಅಂತಃಕರಣಗಳು ಸವಕಲು ನಾಣ್ಯ ಗಳಾಗಿ ಭಾವ ಶೂನ್ಯವಾಗಿರುವ ಕಾಲಘಟ್ಟದಲ್ಲಿ ಜಾಗತೀಕರಣದ ಸುಂಟರಗಾಳಿಗೆ ಮನಸ್ಸುಗಳೆಲ್ಲ ಚೆಲ್ಲಾಪಿಲ್ಲಿ ಎನ್ನುವಲ್ಲಿ ಉಪಯೋಗಿಸುವ ರೂಪಕ ಕಾವ್ಯಾಸಕ್ತರಿಗೆ ರಸದೂಟ. ಹಾಗೆಯೇ ಈ ರಾಜಕೀಯ ದೊಂಬರಾಟ ಅಭಿವೃದ್ಧಿಯ ಚದುರಂಗದಾಟಗಳು ನಿಂತು ಇನ್ನಾದರೂ ಶುರುವಾಗಲಿ ಮನಸ್ಸು ಮನಸ್ಸುಗಳ ಸಂವಾದ ಎಂಬಲ್ಲಿ ಕವಿಯ ಮನದ ಸದಾಶಯದ ಹಾರೈಕೆ ಪೂರ್ಣಗೊಳ್ಳುತ್ತದೆ. ಅಂತೆಯೇ ಇನ್ನೊಂದು ಕವನ “ಆನ್ ಲೈನ್ ಬಾಂಧವ್ಯ” ಆಧುನಿಕ ತಂತ್ರಜ್ಞಾನಗಳ ಸಾಮಾಜಿಕ ಜಾಲತಾಣಗಳಾದ ವಾಟ್ಸ್ ಆ್ಯಪ್ ಟ್ವಿಟರ್ ಫೇಸ್ ಬುಕ್ನಂತಹ ಆನ್ ಲೈನ್ ಗಳಲ್ಲಿ ನಾಯಿಕೊಡೆಗಳಂತೆ ಹೀಗೆ ಹುಟ್ಟಿ ಹಾಗೆ ಕ್ಷಣಿಕಕಾಲ ಮೆರೆದು ನಶಿಸುವ ಮತಲಬೀ ಸ್ನೇಹ ಗಳ ಬಗ್ಗೆ ಮೊನಚು ವ್ಯಂಗ್ಯ ಇದೆ. ಕಡೆಯ ಸಾಲಿನ ಪಂಚ್ ಅಂತೂ ಅದ್ಭುತ.
ಸಾಕೆನಿಸಿದಾಗ
ಹೂ ಈಸ್ ದಿಸ್
ಸಿಮ್ ಕಾರ್ಡ್ ಬದಲು
ಕಟುವಾಸ್ತವದ ನೈಜತೆಯ ಪರಿಪೂರ್ಣ ದರ್ಶನ
ತಂದೆ ತಾಯಿಗಳಿಗೆ ಅರ್ಪಿಸಿರುವ ಈ ಕವನ ಸ್ವತಃ ತಂದೆಯವರಿಂದಲೇ ಆಶಯನುಡಿ ದೊಡ್ಡರಂಗೇಗೌಡರ ಮುನ್ನುಡಿಗಳನ್ನು ಹೊಂದಿದೆ ಮಿತ್ರರ ಹಿತೈಷಿಗಳ ಸಹಸ್ಪಂದನ ಬರಹಗಳಿವೆ .
ಆಂಗ್ಲ ಸಾಹಿತ್ಯ ವಿಮರ್ಶಕರಾದ ಶ್ರೀ ವಿ ಸಿ ಬ್ರಾಡ್ಲೆಯವರು ಕವಿಕೃತಿ ಸ್ವರೂಪದ ಬಗ್ಗೆ ಹೀಗೆ ಹೇಳುತ್ತಾರೆ .
Its nature is to be not a part not yet a copy of the real world (as we commonly understand that phrase) but to be a real world by itself independent complete autonomous.
ಅಂತಹದೊಂದು ಅಮೂರ್ತ ಅದ್ಭುತ ಅನನ್ಯ ಸ್ವತಂತ್ರ ಸುಂದರ ಲೋಕದ ಸ್ವೈರ ವಿಹಾರ ಗೈಸುವ ಪುಷ್ಪಕವಿಮಾನ ಇದು. ಇಂತಹದೇ ಮತ್ತು ಇದನ್ನೂ ಮೀರಿಸುವಂತಹ ಅನುಭಾವದ ಮತ್ತಷ್ಟು ಉತ್ಕೃಷ್ಟ ಕೃತಿಗಳು ಇವರ ಲೇಖನಿಯಿಂದ ಮೂಡಿಬಂದು ಲೋಕಾರ್ಪಣೆಗೊಳ್ಳಲಿ. ಅದನ್ನು ಸವಿಯುವ ಭಾಗ್ಯ ಕನ್ನಡ ಕಾವ್ಯ ರಸಿಕರಿಗೆ ಸಿಗಲಿ ಎಂಬ ಮನಃಪೂರ್ವಕ ಹಾರೈಕೆ
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು
ತುಂಬಾ ಅರ್ಥಪೂರ್ಣವಾಗಿದೆ
ಧನ್ಯವಾದಗಳು
ಸುಜಾತಾ ರವೀಶ್