ಅಂಕಣ ಸಂಗಾತಿ.
ಶಿಕ್ಷಣ ಲೋಕ
ಡಾ.ದಾನಮ್ಮ ಝಳಕಿ
ಮಗುವಿನ ವಿಕಾಸ ಮತ್ತು ಬೆಳವಣಿಗೆ
ಒಂದು ಗಿಡ ವಿಶಾಲವಾಗಿ ಬೆಳೆಯಲು ಅದರ ಬೇರುಗಳು ಆಳಕ್ಕೆ ಬೆಳೆಯುವುದೇ ಕಾರಣವಾಗಿದೆ. ಯಾವ ಪರಿಸರದಲ್ಲಿ ಗಿಡವಿದೆ ಯಾವ ಮಣ್ಣಿನಲ್ಲಿ ಬೇರು ಇಳಿಯುತ್ತದೆ. ಅದೇ ಆ ಗಿಡಕ್ಕೆ ಮೂಲ ಶಕ್ತಿಯಾಗಿದೆ ಹಾಗೆಯೇ ಮಗು ಬೆಳೆಯಲು ಪರಿಸರ, ಪೋಷಕರ ಸಂಸ್ಕಾರಗಳೇ ಮೂಲ ಶಕ್ತಿಯಾಗಿದೆ.
ಮಗು ಎತ್ತರವಾಗಿ ಬೆಳೆದಿದೆ. ತೂಕದಲ್ಲಿ ಹೆಚ್ಚಳವಾಗಿದೆ ಎಂದಾಗ ಸ್ಪಷ್ಠವಾಗಿ ಕಾಣಬಹುದಾದ ಬದಲಾವಣೆಗಳು ಇದನ್ನೇ ಬೆಳವಣಿಗೆ ಎನ್ನಬಹುದು. ಬೆಳವಣಿಗೆ ಎಂಬ ಪದವನ್ನು ಪರಿಮಾಣಾತ್ಮಕ ಸ್ವರೂಪದ ಬದಲಾವಣೆಗಳನ್ನು ಸೂಚಿಸಲು ಬಳಸಲಾಗಿದೆ. ವಿಕಾಸ ಎಂಬ ಪದವನ್ನು ಗುಣಾತ್ಮಕ ಬದಲಾವಣೆಗಳನ್ನು ಸೂಚಿಸಲು ಬಳಸುತ್ತಾರೆ. ಈ ಎರಡು ಪದಗಳು ಪರಸ್ಪರ ಪೂರಕವಾಗಿವೆ. ವಿಕಾಸವಿಲ್ಲದೆ ಒಬ್ಬ ವ್ಯಕ್ತಿ ಬೆಳೆಯಲಾರ, ಬೆಳವಣಿಗೆಯಲ್ಲಿ ಸೂಕ್ತ ಬದಲಾವಣೆಗಳಾಗದೇ ವಿಕಾಸ ಸಾಧ್ಯವಿಲ್ಲ. ವಿಕಾಸ ಎಂಬ ಪದ ಹೆಚ್ಚು ವ್ಯಾಪಕವಾಗಿದೆ ಹಾಗೂ ಇದು ನಿರಂತರ ಪ್ರಕ್ರಿಯೆಯಾಗಿದೆ. ಒಬ್ಬ ವ್ಯಕ್ತಿ ಒಂದು ನಿರ್ದಿಷ್ಠ ವಯೋಮಾನ ಮತ್ತು ಹಂತ ತಲುಪಿದಾಗ ಬೆಳವಣಿಗೆ ಕೊನೆಗೊಳ್ಳುತ್ತದೆ. ಆದರೆ ವಿಕಾಸ ಜೀವನ ಪರ್ಯಂತ ಮುಂದುವರೆಯುತ್ತದೆ.
ಬೆಳವಣಿಗೆ ಮತ್ತು ವಿಕಾಸ ಎಂಬ ಎರಡೂ ಪದಗಳನ್ನು ಸಾಮಾನ್ಯವಾಗಿ ಪರ್ಯಾಯ ಪದಗಳಾಗಿ ಬಳಸಲಾಗುತ್ತಿದೆ. ಈ ಎರಡೂ ಪದಗಳು ಮೇಲ್ನೋಟಕ್ಕೆ ಒಂದೇ ಅರ್ಥವನ್ನು ನೀಡುತ್ತಿದ್ದರೂ ಅವುಗಳ ಅರ್ಥಗಳಲ್ಲಿ ವ್ಯತ್ಯಾಸವುಂಟು ಬೆಳವಣಿಗೆ ಎಂಬ ಪದವು ಸೀಮಿತಾರ್ಥವನ್ನು ಹೊಂದಿದ್ದರೆ ವಿಕಾಸದ ವೆಂಬ ಪದವು ವಿಶಾಲಾರ್ಥವನ್ನು ಹೊಂದಿರುವುದು ಎಂಬುದು ಸಾಮಾನ್ಯ ಅಭಿಪ್ರಾಯವಾಗಿದೆ.
ಕ್ರೊ ಮತ್ತು ಕ್ರೊರವರ ಪ್ರಕಾರ ರಚನಾತ್ಮಕ ಮತ್ತು ಶಾರೀರಿಕ ಬದಲಾವಣೆಯನ್ನು ಬೆಳವಣಿಗೆ ಎಂಬ ಪದವು ಸೂಚಿಸಿದರೆ ವಿಕಾಸವೆಂಬ ಪದವು ಬೆಳವಣಿಗೆಯನ್ನು ಅಂತರ್ಗತ ಮಾಡಿಕೊಂಡು ವರ್ತನೆಯಲ್ಲಿಯ ಬದಲಾವಣೆಯನ್ನು ಸೂಚಿಸುವುದು.
ಬೆಳವಣಿಗೆ ಮತ್ತು ವಿಕಾಸದ ಹಂತಗಳು
ತಾಯಿಯ ಗರ್ಭವನ್ನು ಪ್ರವೇಶ ಮಾಡಿದ ಕ್ಷಣದಿಂದ ಭ್ರೂಣದ ಬೆಳವಣಿಗೆ ಮತ್ತು ವಿಕಾಸ ಪ್ರಾರಂಭಗೊಳ್ಳುತ್ತದೆ. ಬದಲಾವಣೆಯು ನಿರಂತರ ಪ್ರಕ್ರಿಯೆಯಾಗಿರುವುದರಿಂದ ಮಗು ಬದಲಾಗುತ್ತ ಬೆಳವಣಿಗೆ ಮತ್ತು ವಿಕಾಸವನ್ನು ಹೊಂದಿ ಪರಿಪಕ್ವತೆಯ ಕಡೆಗೆ ಸಾಗುವುದು. ನಿರಂತರವಾಗಿ ಆಗುವ ಬೆಳವಣಿಗೆ ಮತ್ತು ವಿಕಾಸಗಳನ್ನು ಭ್ರೂಣ, ಶೈಶವ, ಬಾಲ್ಯ, ಕೌಮಾರ್ಯ ಮತ್ತು ಪ್ರೌಢಾವಸ್ಥೆಗಳಲ್ಲಿ ಸ್ಪಷ್ಠವಾಗಿ ಕಾಣಬಹುದು. ಪ್ರತಿಯೊಂದು ಜೀವಿಯೂ ಜನ್ಮದಿಂದ ಆರಂಭಿಸಿ ಮರಣ ಪರ್ಯಂತದ ಜೀವನವನ್ನು ಈ ಅವಸ್ಥೆಗಳಲ್ಲಿ ಸಾಗುವುದು. ಪ್ರತಿಯೊಂದು ಅವಸ್ಥೆಯಲ್ಲಿ ಮಗು ಪರಿಮಾಣಾತ್ಮಕ ಮತ್ತು ಗುಣಾತ್ಮಕ ಬದಲಾವಣೆಗಳನ್ನು ಹೊಂದುತ್ತಾ ಅವನ ಶರೀರ ಮತ್ತು ವರ್ತನೆಯಲ್ಲಿ ಆಗುವ ಬದಲಾವಣೆಗಳನ್ನು ಸ್ಪಷ್ಠವಾಗಿ ಕಾಣಬಹುದಾಗಿದೆ. ಹರ್‌ಲಾಕ್ ಮತ್ತು ಅರ್ನೆಸ್ಟ ಜೋನ್ಸ ಇವರು ಮನುಷ್ಯನ ಬೆಳವಣಿಗೆ ಮತ್ತು ವಿಕಾಸವನ್ನು ನಿರ್ದಿಷ್ಟವಾದ ನಾಲ್ಕು ಹಂತಗಳಲ್ಲಿ ವಿಂಗಡಿಸಿದ್ದಾರೆ.
ಅವುಗಳೆಂದರೆ
೧. ಶೈಶವಾವಸ್ಥೆ (ಜನನದಿಂದ ೫ ವರ್ಷದ ವರೆಗೆ)
೨. ಬಾಲ್ಯಾವಸ್ಥೆ (೫ರಿಂದ ೧೨ ವರ್ಷದವರೆಗೆ)
೩. ಕೌಮಾರ್ಯಾವಸ್ಥೆ (೧೨ ರಿಂದ ೧೮ ವರ್ಷದವರೆಗೆ)
೪. ಪ್ರೌಢಾವಸ್ಥೆ (೧೮ ವರ್ಷಕ್ಕಿಂತ ಮೇಲ್ಪಟ್ಟವರು)
ಕೌಮಾರ್ಯ ಮತ್ತು ಪ್ರೌಢಾವಸ್ಥೆಗಳು ಶೈಶವ ಮತ್ತು ಬಾಲ್ಯಾವಸ್ಥೆಗಳ ಮುಂದುವರೆದ ಅವಸ್ಥೆಗಳಾಗಿವೆ. ಈ ಅವಸ್ಥೆಯಲ್ಲಿ ನಿರ್ಧರಿಸಲಾದ ವಯೋಮಾನವು ಕೆಲವು ಸಂದರ್ಭಗಳಲ್ಲಿ ಹೆಚ್ಚು ಕಡಿಮೆಯಾಗಬಹುದು. ಹಾಗೂ ಶಿಕ್ಷಣದ ದೃಷ್ಠಿಯಲ್ಲಿ ಬಾಲ್ಯ ಮತ್ತು ಕೌಮಾರ್ಯ ಅವಸ್ಥೆಗಳು ಅತ್ಯಂತ ಮಹತ್ವದ್ದಾಗಿದೆ.
ವಿಶ್ವದಲ್ಲಿ ಪ್ರಖ್ಯಾತಿಯನ್ನು ಪಡೆದ ವ್ಯಕ್ತಿಯನ್ನು ಗಮನಿಸಿದಾಗ ಆತನ ಬಗ್ಗೆ ಕೇಳಿದಾಗ, ನಮಗೂ ಆ ವ್ಯಕ್ತಿಯಂತೆ ಬೆಳೆಯ ಬೇಕೆಂಬ ಮನಸ್ಸು ಬಾರದೇ ಇರುವುದಿಲ್ಲ, ಆತನ ಬೆಳವಣಿಗೆಯಲ್ಲಿ ಶರೀರದ ಸಧೃಡತೆ, ಪ್ರಾಣದ ಉತ್ಪçಷ್ಯತೆ, ಇಂದ್ರಿಯಗಳ ಸ್ಪಂದನೆ, ಯೋಜನೆಯ ಸ್ಪಷ್ಠತೆ, ಮನಸ್ಸಿನ ತೀಕ್ಷ್ಣತೆ, ಬುದ್ಧಿಯ ನಿರ್ಧಾರ, ಭಾವನೆಗಳ ಮಹಾಪೂರವನ್ನು ನಾವು ಒಟ್ಟಾಗಿ ಕಾಣುತ್ತೇವೆ. ಯಶಸ್ಸನ್ನು ಗಳಿಸಲು ಭಾವನೆಗಳೇ ಆಧಾರ, ಭಾವನೆಗಳಿಗೆ ಬುದ್ಧಿ, ಬುದ್ಧಿಗೆ ಮನಸ್ಸು ಮನಸ್ಸಿಗೆ ಯೋಚನೆಗಳು, ಯೋಚನೆಗಳಿಗೆ ಇಂದ್ರಿಯಗಳು, ಇಂದ್ರಿಯಗಳಿಗೆ ಪ್ರಾಣ, ಪ್ರಾಣಕ್ಕೆ ಶರೀರ ಆಧಾರವಾಗಿದೆ.
ಉತ್ತಮ ಶರೀರವುಳ್ಳವರು ಉತ್ತಮ ಪ್ರಾಣವನ್ನು ಪಡೆಯಲು ಸಮರ್ಥರಾದರೆ ಉತ್ತಮ ಪ್ರಾಣವಿದ್ದವರು ಉತ್ತಮ ಇಂದ್ರಿಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಬೆಳವಣಿಗೆ ಮತ್ತು ವಿಕಾಸಗಳ ಪ್ರಕ್ರಿಯೆಯಲ್ಲಿ ಬದಲಾವಣೆಯು ಒಂದು ನಿರ್ದಿಷ್ಠವಾದ ತತ್ವವನ್ನು ಅವಲಂಬಿಸಿ ಆಗುತ್ತದೆ. ಅನೇಕ ಮನೋವಿಜ್ಞಾನಿಗಳು ಆ ತತ್ವಗಳನ್ನು ಬೆಳವಣಿಗೆ ಮತ್ತು ವಿಕಾಸದ ತತ್ವಗಳೆಂದು ಕರೆಯುವರು. ಇವು ಬೆಳವಣಿಗೆ ಮತ್ತು ವಿಕಾಸದ ಸ್ವರೂಪವನ್ನು ವಿವರಿಸುವದರಿಂದ ಬೆಳವಣಿಗೆ ಮತ್ತು ವಿಕಾಸದ ಲಕ್ಷಣಗಳೆಂದು ಗುರುತಿಸಬಹುದಾಗಿದೆ.
ಬೆಳವಣಿಗೆ ಮತ್ತು ವಿಕಾಸದ ಲಕ್ಷಣಗಳು;-
೧) ವಿಕಾಸವು ನಿರಂತರ ಪ್ರಕ್ರಿಯೆ (Development is a Continue Process) ಜನನದಿಂದ ಮರಣದವರೆಗೆ ವಿಕಾಸವು ನಿರಂತರವಾಗಿ ಆಗುತ್ತಾ ಇರುವುದು. ವಿಕಾಸವು ಯಾವಾಗಲೂ ನಿಧಾನವಾಗಿ ಮತ್ತು ನಿಯಮಿತ ಗತಿಯಲ್ಲಿ ಆಗುವದು. ಅದು ಅತೀ ಶೀಘ್ರವಾಗಿ ನಡೆಯುವುದಿಲ್ಲ. ಶಾರೀರಿಕ ಮತ್ತು ಬೌದ್ಧಿಕ ಬೆಳವಣಿಗೆ ನಿರಂತರವಾಗಿ ಆಗುತ್ತಲಿರುವದು. ಹುಟ್ಟಿದ ಮಗು ಒಂದೇ ದಿನದಲ್ಲಿ ಬೆಳೆದು ದೊಡ್ಡವನಾಗುವದಿಲ್ಲ. ಮಾತು ಕಲಿಯುವ ಮಗು ಒಂದೇ ದಿನದಲ್ಲಿ ಎಲ್ಲವನ್ನು ಮಾತನಾಡಲು ಸಾಧ್ಯವೇ ಇಲ್ಲ. ಮೊದಲು ಇನ್ನೊಬ್ಬರ ಮಾತಿಗೆ ಧ್ವನಿಯ ಮೂಲಕ ಪ್ರತಿಕ್ರಯಿಸುತ್ತಾ, ಅಕ್ಷರಗಳನ್ನು ಉಚ್ಛರಿಸುತ್ತಾ ತೊದಲು ನುಡಿಗಳನ್ನು ಕಲಿತ ನಂತರ ಸಣ್ಣ ಸಣ್ಣಪದ, ವಾಕ್ಯಗಳನ್ನು ಮಾತನಾಡಲು ಆರಂಭಿಸುವದು ಆದ್ದರಿಂದ ಈ ಪ್ರಕ್ರಿಯೆ ನಿರಂತರ ವಾಗಿರುವದಾಗಿದೆ.
೩ ತಿಂಗಳ ಮಗು ದೂರದರ್ಶನದಲ್ಲಿ ಬರುವ ದ್ವನಿ,ಹಾಡುಗಳನ್ನು ಕೇಳಿ ಅತ್ತಕಡೆ ಗೋಣು ತಿರುಗಿಸುವುದನ್ನು ನೋಡುತ್ತೇವೆ.ಮಗುವನ್ನೇ ನೋಡಿ ಮಾತನಾಡುತ್ತಿದ್ದಾಗ ಮಗು ತನ್ನ ದ್ವನಿಯಿಂದ ತನಗೆ ತಿಳಿದಂತೆ ಪ್ರತಿಕ್ರಯಿಸುವುದನ್ನು ನೋಡಬಹುದಾಗಿದೆ.
೨) ವಿಕಾಸವು ಗುಣಾತ್ಮಕ ಮತ್ತು ಪರಿಮಾಣಾತ್ಮಕವಾಗಿರುವುದು. ಗುಣಾತ್ಮಕ ಮತ್ತು ಪರಿಮಾಣಾತ್ಮಕ ಅಂಶಗಳು ಅವಿಭಾಜ್ಯವಾಗಿರುವುದು ಮಗು ಆಕಾರದಲ್ಲಿ ಮಾತ್ರ ಬೆಳೆಯುವದಿಲ್ಲ ಅದು ರಚನೆ ಮತ್ತು ಕಾರ್ಯಕ್ಷಮತೆಯಲ್ಲಿಯೂ ಪಕ್ವತೆಯನ್ನು ಹೊಂದುವದು. ಈ ತತ್ವವನ್ನು ಸಮರ್ಥಿಸಲು ಬ್ರೇಕನ್ ರಿಜ್ ಮತ್ತು ವಿನ್ಸೆಂಟ್ ಉತ್ತಮ ನಿದರ್ಶನವನ್ನು ನೀಡಿದ್ದಾರೆ. ಮಗುವಿನ ಎಲ್ಲ ಅಂಗಾಂಗಗಳು ಆಕಾರದಲ್ಲಿ ಮಾತ್ರ ಬೆಳೆಯದೆ ಅದರ ರಚನೆಯು ಬದಲಾವಣೆಯನ್ನು ಹೊಂದುವದು ಅದು ಮೊದಲಿಗಿಂತ ಹೆಚ್ಚು ಆಹಾರವನ್ನು ಸ್ವೀಕರಿಸುವ ಮತ್ತು ಘನ ಆಹಾರವನ್ನು ಸೇವಿಸುವ ಸಾಮರ್ಥ್ಯವನ್ನು ಪಡೆಯುವದು. ಈ ರೀತಿ ವಿಕಾಸವು ಗುಣಾತ್ಮಕ ಮತ್ತು ಪರಿಮಾಣಾತ್ಮಕವಾಗಿರುವುದು.
ಮಗು ದ್ರವಾಹಾರವನ್ನು ಸ್ವಲ್ಪ ಸ್ವಲ್ಪ ಸೇವಿಸುತ್ತಾ ಕ್ರಮೇಣ ಘನಾಹರವನ್ನು ಸೇವಿಸುತ್ತದೆ.ವಯಸ್ಸಿಗೆ ತಕ್ಕಂತೆ ಆಹಾರದ ಪ್ರಮಾಣದಲ್ಲಿ ಹೆಚ್ಚಾಗುವುದನ್ನು ಗಮನಿಸಬಹುದು.
೩) ವಿನ್ಯಾಸದ ಏಕರೂಪತೆ, ಬೆಳವಣಿಗೆ ಮತ್ತು ವಿಕಾಸವು ಮಗುವಿನಿಂದ ಮಗುವಿಗೆ ಭಿನ್ನವಾಗಿ ಆಗುತ್ತದೆ. ಆ ಭಿನ್ನತೆಯಲ್ಲಿಯೂ ಏಕರೂಪದ ವಿನ್ಯಾಸವನ್ನು ಕಾಣಬಹುದಾಗಿದೆ. ವಿಕಾಸದ ವಿನ್ಯಾಸವು ಯಾವಾಗಲೂ ಕ್ರಮಬದ್ಧವಾಗಿರುವದು. ಮಗುವಿನ ಬೆಳವಣಿಗೆ ಮತ್ತು ವಿಕಾಸವು ತಲೆಯಿಂದ ಆರಂಭವಾಗುವದು. ಆನಂತರÀ ಅಂಗಾಂಗಗಳ ಬೆಳವಣಿಗೆ ಆಗುವದು. ಭಾಷೆಯನ್ನು ಕಲಿಯುವಾಗಲೂ ಮಕ್ಕಳಲ್ಲಿ ವೈವಿಧ್ಯತೆ ಕಂಡು ಬಂದರೂ ನಿರ್ದಿಷ್ಠವಾದ ಏಕರೂಪತೆಯು ಅದರಲ್ಲಿ ಅಡಕವಾಗಿರುವದು.
ಮಗುವಿಗೆ ಸೂರ್ಯ/ಚಂದ್ರನ ಚಿತ್ರ ಬರವಣಿಗೆ ಹೇಳಿದಾಗ ಆಕಾರದಲ್ಲಿ ವ್ಯತ್ಯಾಸ ಕಂಡುಬಂದರೂ ಹೋಲಿಕೆಯಲ್ಲಿ ಸಾಮ್ಯತೆ ಇರುವುದನ್ನು ಕಾಣಬಹುದಾಗಿದೆ. ಕೆಲವು ದ್ವನಿ, ಅಕ್ಷರ ಬಳಸಿ ವಸ್ತುಗಳನ್ನು ಗುರುತಿಸುತ್ತಾ ಕ್ರಮೇಣ ಪದ,ವಾಕ್ಯೆಗಳನ್ನು ಬಳಸುವುದನ್ನು ನೋಡುತ್ತೇವೆ.
೪) ವಿಕಾಸವು ಸಾಮಾನ್ಯದಿಂದ ನಿರ್ದಿಷ್ಠತೆಯೆಡೆಗೆ ಮುಂದುವರೆಯುವುದು, ಮಗುವಿನ ಬೆಳವಣಿಗೆಯು ಮೊದಲು ಸಾಮಾನ್ಯ ಪ್ರತ್ಯುತ್ತರದಿಂದ ಆರಂಭಗೊಳ್ಳುವದು. ಆನಂತರ ನಿರ್ದಿಷ್ಠ ಪ್ರತ್ಯುತ್ತರವನ್ನು ವ್ಯಕ್ತಪಡಿಸುವದು ಮಗು ಮೊದಲು ಕೈ ಕಾಲು ಮುಂತಾದವುಗಳನ್ನು ಆಡಿಸುವದನ್ನು ಕಲಿಯುತ್ತದೆ. ಕೈ ಚಾಚುವ ಸಾಮಾನ್ಯ ಕ್ರಿಯೆಯನ್ನು ಕಲಿತ ನಂತರ ನಿರ್ದಿಷ್ಠ ವಸ್ತುವಿಗಾಗಿ ಕೈ ಚಾಚುವದನ್ನು ಕಲಿಯುವದು. ಪ್ರಾರಂಭದ ಹಂತದಲ್ಲಿ ಮಗು ತನ್ನ ದು:ಖ ಹಾಗೂ ಸಂತಸಗಳನ್ನು ಸಂಪೂರ್ಣ ದೇಹದ ಮೂಲಕ ಪ್ರಕಟಿಸಿದರೆ ಆನಂತರ ಕ್ರಮೇಣ ಭಾವನೆಗಳನ್ನು ನಿರ್ದಿಷ್ಠವಾದ ಅಂಗಾಂಗಗಳ ಮೂಲಕ ತೋರಿಸುವದು. ಮಾತು ಕಲಿಯುವಾಗ ಅಮ್ಮ, ಅಪ್ಪ ಎಂದು ಕರೆದರೆ, ಆನಂತರ ಆ ಕರೆ ನಿರ್ದಿಷ್ಠ ವ್ಯಕ್ತಿಗೆ ಮಾತ್ರ ಸೀಮಿತವಾಗುವದು. ಈ ರೀತಿಯಾಗಿ ವಿಕಾಸವು ಸಾಮಾನ್ಯದಿಂದ ನಿರ್ದಿಷ್ಠದ ಕಡೆಗೆ ಸಾಗುವದು.
೫) ಅನುವಂಶೀಯತೆ ಮತ್ತು ಪರಿಸರಗಳ ನಡುವಿನ ಅನ್ಯೋನ್ಯ ಕ್ರಿಯೆಯ ಫಲಿತವೇ ವಿಕಾಸ : ಎಂಬ ಪ್ರಕ್ರಿಯೆ ಮಗುವಿನಲ್ಲಿ ಅಂತರ್ಗತವಾಗಿರುವ ಶಕ್ತಿಗಳು ಹಾಗೂ ಅವನ ಪರಿಸರ ನಡುವಿನ ಅಂತರ್‌ಕ್ರಿಯೆಯ ಫಲವಾಗಿದೆ. ಅಂತರ್ಗತವಾಗಿರುವ ಅನುಂಶೀಯ ಅಂಶಗಳು ಮತ್ತು ಪರಿಸರದ ಅಂಶಗಳು ಮಗುವಿನ ವಿಕಾಸದ ಮೇಲೆ ಪ್ರಭಾವ ಬೀರುತ್ತವೆ. ಇವೆರಡರ ಪ್ರಭಾವವನ್ನು ಪ್ರತ್ಯೇಕಿಸುವುದು ತುಂಬಾ ಕಷ್ಟದ ಕೆಲಸ.
೬) ವಿಕಾಸ ಎಂಬುದು ಸಂಚಿತವಾದದ್ದು : ವಿಕಾಸದ ಕೆಲವು ಬದಲಾವಣೆಗಳು ಉದಾಹರಣೆಗೆ ಮಗುವಿನ ಮೊದಲ ಹೆಜ್ಜೆ, ಮೊದಲ ಶಬ್ಧ, ಹಲ್ಲುಗಳು ಕಾಣಿಸಿಕೊಳ್ಳುವಿಕೆ ಮತ್ತು ತರುಣರಲ್ಲಿ ಕಾಣಿಸಿಕೊಳ್ಳುವ ಮುಖದ ಮೇಲಿನ ಕೂದಲುಗಳು ಇದ್ದಕ್ಕಿದ್ದ ಹಾಗೆಯೇ ಕಾಣಿಸಿಕೊಂಡಂತಾಗುತ್ತದೆ. ಆದರೆ ಇವುಗಳು ಕಾಣಿಸಿಕೊಳ್ಳಲು ಕಾರಣ ವ್ಯಕ್ತಿಯಲ್ಲಿ ಬಹಳ ದಿನಗಳಿಂದ ನಡೆಯುತ್ತಿರುವ ಅಂತರಿಕ ತಯಾರಿಯಾಗಿದೆ. ಪ್ರತಿಯೊಂದು ಬದಲಾವಣೆಗಳು ಅವನ ಹಿಂದಿನ ಬೆಳವಣಿಗೆ ಮತ್ತು ಅನುಭವಗಳ ಮೇಲೆ ಅವಲಂಬಿಸಿರುತ್ತದೆ. ಆದ್ದರಿಂದ ವಿಕಾಸ ಸಂಚಿತ ಬದಲಾವಣೆ ಎಂದು ಹೇಳಬಹುದು.
೭) ವಿಕಾಸ ಎಂಬುದು ವ್ಯಕ್ತಿಗತ ಪ್ರಕ್ರಿಯೆ : ಎಲ್ಲಾ ಮಕ್ಕಳು ತಮ್ಮದೇ ಆದ ರೀತಿಯಲ್ಲಿ ವಿಕಾಸ ಹೊಂದುತ್ತಾರೆ. ಪ್ರತಿಯೊಂದು ಮಗುವು ತನ್ನದೇ ಆದ ವೇಗದಲ್ಲಿ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಸಾಮಾಜಿಕ ವಿಕಾಸ ಹೊಂದುತ್ತಾನೆ. ಆರು ವರ್ಷದ ಮಕ್ಕಳನ್ನು ನಾವು ವೀಕ್ಷಿಸಿದಾಗ ಅವರ ಎತ್ತರ, ತೂಕ, ಸಾಮಾಜಿಕ, ಭಾವನಾತ್ಮಕ ಮತ್ತು ಕಲಿಕೆಯ ಸಿದ್ಧತೆಯಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ಕಾಣುತ್ತೇವೆ. ಒಂದು ಮಗುವಿನಲ್ಲಿ ಭಾಷಾ ಸಾಮರ್ಥ್ಯಕ್ಕಿಂತ ಮೊದಲು ಗತಿ ಸಾಮರ್ಥ್ಯ ವಿಕಾಸವಾಗುತ್ತದೆ. ಇದಕ್ಕೆ ಪರಿಸರದ ಪ್ರಚೋದನೆ ಅಥವಾ ಕೊರತೆ ಕಾರಣವಾಗಿರಬಹುದು. ವಿವಿಧ ವಯೋಮಾನದಲ್ಲಿ ಮಕ್ಕಳು ವಿವಿಧ ವೇಗದಲ್ಲಿ ವಿಕಾಸ ಹೊಂದುತ್ತಾರೆ.
೮) ದ್ವಿ ಪಾರ್ಶ್ವತೆಯಿಂದ ಏಕ ಪಾರ್ಶ್ವದೆಡೆಗೆ ವಿಕಾಸ ಸಾಗುತ್ತದೆ : ಹೊಸದಾಗಿ ಜನಿಸಿದ ಶಿಶು ಸಮರೂಪತೆಯ ಜೀವಿಯಾಗಿರುತ್ತದೆ. ಅಂಗರಚನೆಯಲ್ಲಿ ಶಾರೀರಿಕವಾಗಿ ಹಾಗೂ ಕಾರ್ಯತ್ಮಕವಾಗಿ ಸಮರೂಪತೆಯನ್ನು ಕಾಣಬಹುದು. ಕಾರ್ಯಾತ್ಮಕ ಸಮರೂಪತೆಯನ್ನು ಬಾಲ್ಯದ ಗತಿ ಸಾಮರ್ಥ್ಯದ ಬೆಳವಣಿಗೆಯಲ್ಲಿ ಕಾಣಬಹುದಾಗಿದೆ. ಒಂದು ಮಗು ೨ ೧/೨ ವರ್ಷಗಳ ನಂತರ ಮಾತ್ರ ಕೈಗಳ ಬಳಕೆ ಆಯ್ಕೆ ಪ್ರಾರಂಭವಾಗುತ್ತದೆ. ಹೀಗೆ ಮಗು ದ್ವಿಪಾರ್ಶ್ವತೆಯಿಂದ ಏಕ ಪಾರ್ಶ್ವತೆಯಡೆಗೆ ಸಾಗುತ್ತಾನೆ.
೯) ವಿಕಾಸದ ವಿವಿಧ ಅಂಶಗಳು ಒಂದಕ್ಕೊಂದು ಅಂತರ ಸಂಬAಧ ಹೊಂದಿವೆ : ಮಗುವಿನ ಪ್ರಾರಂಭದ ಸಾಮಾಜಿಕ ವರ್ತನೆ ಅವನ ದೈಹಿಕ ಬೆಳವಣಿಗೆಯೊಂದಿಗೆ ಅಂತರ್ ಸಂಬಂಧ ಹೊಂದಿದೆ. ಒಂದು ವೇಳೆ ಮಗು ದೈಹಿಕ ಅಂಗವಿಕಲನಾಗಿದ್ದರೆ ಅವನ ಸಾಮಾಜಿಕ ವರ್ತನೆಯ ವಿಕಾಸ ಕುಂಠಿತಗೊಳ್ಳುತ್ತದೆ. ಮಗುವಿನ ಗತಿ ಸಾಮರ್ಥ್ಯದ ವಿಕಾಸ ಅವನ ಜ್ಞಾನಾತ್ಮಕ ವಿಕಾಸದ ಮೇಲೆ ಧನಾತ್ಮಕ ಪ್ರಭಾವ ಬೀರುತ್ತದೆ. ಆದ್ದರಿಂದ ವಿಕಾಸದ ವಿವಿಧ ಅಂಶಗಳು ಒಂದಕ್ಕೊಂದು ಪೂರಕವಾಗಿವೆ ಹಾಗೂ ಅಂತರ್ ಸಂಬAಧ ಹೊಂದಿದೆ ಎಂದು ಹೇಳಬಹುದು.
ಮಗುವಿನ ಬೆಳವಣಿಗೆಯ ಲಕ್ಷಣಗಳನ್ನು ಅರಿತ ನಾವು ಶಾಲಾ ಪೂರ್ವದಲ್ಲಿ ಮಗುವಿನೊಂದಿಗೆ ಹೇಗೆ ವರ್ತಿಸಬೇಕು?
ಶಾಲಾಪರಿಸರದಲ್ಲಿ ಯುಕ್ತ ಹಾಗೂ ಸಂಪದ್ಭರಿತವಾದ ವಾತಾವರಣವನ್ನು ಒದಗಿಸಬೇಕು. ಶಾಲೆ ತನ್ನಲ್ಲಿ ದೊರೆಯುವ ಸೌಲಭ್ಯಗಳು ಹಾಗೂ ಸಾಧನಗಳ ಸಹಾಯದಿಂದ ವಿದ್ಯಾರ್ಥಿಯ ಸಹಜ ಸಾಮರ್ಥ್ಯಗಳನ್ನು ಪತ್ತೆ ಹಚ್ಚಿ ಅವುಗಳ ಬೆಳವಣಿಗೆಗೆ ಸೂಕ್ತ ಪಠ್ಯ ಚಟುವಟಿಕೆಗಳನ್ನು ಒದಗಿಸಬೇಕು ಹಾಗೂ ಅವನ ಅಂತರ್ಗತ ಸಾಮರ್ಥ್ಯಗಳನ್ನು ಬೆಳೆಸಲು ಸೂಕ್ತ ಮಾರ್ಗದರ್ಶನ ನೀಡಬೇಕು. ವಿದ್ಯಾರ್ಥಿಯು ತನ್ನಲ್ಲಿರುವ ಅನುವಂಶೀಯ ಸಾಮರ್ಥ್ಯಗಳು ಪರಿಪೂರ್ಣವಾಗಿ ಬೆಳವಣಿಗೆಯಾಗಬೇಕಾದರೆ ಹೆಚ್ಚಿನ ಕಾರ್ಯ ನಿರ್ವಹಿಸುವಂತೆ ಅವನನ್ನು ಪ್ರೋತ್ಸಾಹಿಸಬೇಕು. ಸುಗಮಕಾರರು ವಿದ್ಯಾರ್ಥಿಗಳ ಬೆಳವಣಿಗೆಗೆ ಸೂಕ್ತ ನಿರ್ದೇಶನ ಹಾಗೂ ಮಾರ್ಗದರ್ಶನ ನೀಡಬೇಕು. ಕಾರಣ ಈ ವಯಸ್ಸಿನಲ್ಲಿ ಮಕ್ಕಳು ತಮ್ಮ ಜೀವನವನ್ನು ತಾವೇ ನಿರ್ದೇಶಿಸಿಕೊಳ್ಳುವಂತಹ ಪರಿಪಕ್ವನ ಹೊಂದಿರುವುದಿಲ್ಲ.
ಶಾಲೆಯ ಹುಡುಗರು ಹಾಗೂ ಹುಡುಗಿಯರ ಆಸಕ್ತಿಗಳಲ್ಲಿರುವ ವ್ಯತ್ಯಾಸವನ್ನು ಗಮನಿಸಿ ಅವರ ಆಸಕ್ತಿಗಳು ಹಾಗೂ ಪರಿಪಕ್ವನ ಮಟ್ಟಕ್ಕನುಗುಣವಾದ ಸಹಪಠ್ಯ ಚಟುವಟಿಕೆಗಳನ್ನು ಒದಗಿಸಬೇಕು.
ಆರು ವರ್ಷಗಳು ಅಥವಾ ಸಮಾನ ಮಾನಸಿಕ ವಯಸ್ಸಿಗಿಂತ ಮೊದಲ ಮಕ್ಕಳನ್ನು ಮೊದಲನೇ ತರಗತಿಗೆ ಸೇರಿಸಿಕೊಳ್ಳಬಾರದು. ಕಲಿಕಾ ಸಾಮಗ್ರಿಗಳನ್ನು ಕಲಿಯುವವರ ಪರಿಪಕ್ವನಾ ಮಟ್ಟಕ್ಕನುಗುಣವಾಗಿ ಆಯ್ಕೆ ಮಾಡಬೇಕು. ಹಾಗೂ ಅನುಕ್ರಮವಾಗಿ ಜೋಡಿಸಬೇಕು. ಸೂಕ್ತ ಪರಿಪಕ್ವನಾ ಮಟ್ಟವನ್ನು ತಲುಪದೇ ಅವರಿಗೆ ಯಾವುದೇ ವಿಷಯಗಳನ್ನು ಬೋಧಿಸಲು ಅಥವಾ ಕಾರ್ಯಗಳನ್ನು ಕಲಿಸಲು ಪ್ರಯತ್ನಿಸುವುದು ವ್ಯರ್ಥ ಪ್ರಕ್ರಿಯೆಯಾಗುತ್ತದೆ.
ಪ್ರಾಥಮಿಕ ಶಾಲೆಯು ಕೇವಲ ತರಬೇತಿ ಅಥವಾ ನಿರಂತರ ಅಭ್ಯಾಸ ಮಾಡಿರುವ ಕೇಂದ್ರವಾಗಬಾರದು, ತಾರ್ಕಿಕತೆ, ಕಲ್ಪನಾಶಕ್ತಿ, ಪ್ರಶಂಸಾಭಾವ, ಸಾರ್ವತ್ರೀಕರಣ ಇವುಗಳ ಜೊತೆಗೆ ಸಂವೇದನೆ, ನೆನಪಿಟ್ಟುಕೊಳ್ಳುವಿಕೆ ಮತ್ತು ಗ್ರಹಿಸುವಿಕೆ ಇವುಗಳನ್ನು ಸಹ ಬೆಳೆಸುವುದು ಶಾಲೆಯ ಪ್ರಮುಖ ಉದ್ದೇಶವಾಗಬೇಕು. ಆದ್ದರಿಂದ ಪ್ರಾಥಮಿಕ ಶಾಲೆಗಳಲ್ಲಿ ಸುಗಮಕಾರರು ತಮ್ಮ ವಿದ್ಯಾರ್ಥಿಗಳಿಗೆ ವಿವಿಧ ಅನುಭವಗಳನ್ನು ಒದಗಿಸಿಕೊಡಬೇಕು.
ವಿಕಾಸದ ಮೇಲೆ ಪ್ರಭಾವ ಬೀರುವ ಅಂಶಗಳು : ಪ್ರತಿಯೊಬ್ಬನು ಈ ವಿಶ್ವಕ್ಕೆ ಬರುವಾಗ ತನ್ನ ತಂದೆ ತಾಯಿಗಳಿಂದ ಕೆಲವು ವಿಶೇಷ ಗುಣಲಕ್ಷಣಗಳನ್ನು ಪಡೆದುಕೊಂಡೆ ಹುಟ್ಟುತ್ತಾನೆ. ಕೆಲವು ಅನುವಂಶೀಯ ಅಂಶಗಳೊಂದಿಗೆ ಜನಿಸಿದ ನಂತರ ನಾವು ಪರಿಸರದ ಸಂಪರ್ಕಕ್ಕೆ ಬರುತ್ತೇವೆ. ಅನುವಂಶೀಯತೆ ವ್ಯಕ್ತಿಗೆ ಕೆಲವು ಅಂಶಗಳನ್ನು ನೀಡುತ್ತದೆ ಮತ್ತು ಪರಿಸರ ಅವುಗಳ ಮೇಲೆ ಪ್ರಭಾವ ಬೀರುತ್ತದೆ. ಅನುವಂಶೀಯತೆ ಮತ್ತು ಪರಿಸರಗಳೆರಡೂ ವ್ಯಕ್ತಿಯ ವಿಕಾಸದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಮಾನವನ ಕೆಲವು ಗುಣಲಕ್ಷಣಗಳು ಅನುವಂಶೀಯತೆಯಿಂದ ಪ್ರಭಾವಿತವಾದರೆ, ಮತ್ತೇ ಕೆಲವು ಪರಿಸರದಿಂದ ಪ್ರಭಾವಿತವಾಗುತ್ತವೆ. ವ್ಯಕ್ತಿಗಳು ತಮ್ಮ ಗುಣಲಕ್ಷಣಗಳನ್ನು ಅಂಕುರಾಣುಗಳು ಮತ್ತು ಅವುಗಳಲ್ಲಿರುವ ವರ್ಣತಂತುಗಳು ಹಾಗೂ ವಂಶವಾಹಿಗಳ ಮೂಲಕ ವಂಶ ಪರಂಪರೆಯಾಗಿ ಪಡೆದುಕೊಳ್ಳುತ್ತಾರೆ. ಕಣ್ಣು, ಕೂದಲು ಹಾಗೂ ಚರ್ಮಗಳ ಬಣ್ಣ, ತಲೆಯಗಾತ್ರ, ಕೈಬೆರಳು ವಿನ್ಯಾಸ, ಲೈಂಗಿಕ ಪಕ್ವನದ ಕಾಲ ಮತ್ತು ದೇಹದ ದೃಢತೆ ಇವುಗಳು ಮುಖ್ಯವಾಗಿ ಅನುವಂಶೀಯ ಗುಣಗಳಿಂದ ನಿರ್ಧರಿಸಲ್ಪಡುತ್ತವೆ.
ಇನ್ನೊಂದು ಕಡೆ ಮನೋವೈಜ್ಞಾನಿಕ ಗುಣಗಳಾದ ಮನಃಸ್ಥಿತಿ, ಆದರ್ಶ, ಆಸಕ್ತಿಗಳು ಮತ್ತು ಮನೋಭಾವಗಳು ಪರಿಸರದಿಂದ ಪ್ರಭಾವಿತವಾಗುತ್ತವೆ. ಆದ್ದರಿಂದ ಅನುವಂಶೀಯತೆ ಮತ್ತು ಪರಿಸರದ ಅಂಶಗಳೆರಡೂ ವಿವಿಧ ವಯೋಮಾನದಲ್ಲಿ ಹಾಗೂ ವಿಭಿನ್ನ ಲಕ್ಷಣಗಳಿಗೆ ಸಂಬಂಧಿಸಿದAತೆ ತಮ್ಮ ಪಾತ್ರಗಳನ್ನು ಸಾಪೇಕ್ಷವಾಗಿ ನಿರ್ವಹಿಸುತ್ತವೆ ಎಂಬುದನ್ನು ಸ್ಪಷ್ಟಪಡಿಸಿವೆ. ಈ ಎರಡೂ ಪ್ರಮುಖ ಪ್ರಭಾವ ಬೀರುವ ಅಂಶಗಳನ್ನು ಪ್ರಕೃತಿ ಹಾಗೂ ಪೋಷಣೆ ಅಂಶಗಳೆಂದು ಸಹ ಕರೆಯುತ್ತಾರೆ.
ಪ್ರತಿಯೊಂದು ವರ್ಣತಂತುವಿನಲ್ಲೂ ‘ವಂಶವಾಹಿ’ ಗಳೆಂಬ ಸಾವಿರಾರು ಅತಿಸೂಕ್ಷ್ಮ ರಾಸಾಯನಿಕ ದ್ರವ್ಯಗಳಿರುತ್ತವೆ. ಈ ವಂಶವಾಹಿಗಳೇ ಅನುವಂಶೀಯತೆಯ ಮೂಲ ಘಟಕಗಳು, ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ದೈಹಿಕ ಹಾಗೂ ಮಾನಸಿಕ ಗುಣಗಳು ವಂಶಪಾರಂರ‍್ಯವಾಗಿ ವರ್ಗಾವಣೆಯಾಗಲು ಕಾರಣವಾದ ಅಂಶಗಳೇ ಈ ವಂಶವಾಹಿಗಳು, ಪ್ರತಿಯೊಂದು ವರ್ಣತಂತುವಿನಲ್ಲಿ ಸುಮಾರು ೩,೦೦೦ ವಂಶವಾಹಿಗಳಿವೆಯೆಂದು ಅಂದಾಜು ಮಾಡಲಾಗಿದೆ.ಅನುವಂಶೀಯ ಅಂಶಗಳು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಆಗುವ ಗುಣಗಳ ವರ್ಗಾವಣೆಯನ್ನು ನಿರ್ಧರಿಸುವ ಅಂಶಗಳಾವುವು ಎಂಬುದನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತವೆ.
ಡಾ ದಾನಮ್ಮ ಝಳಕಿ
ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ
ಅತ್ಯಂತ ವಿಸ್ತಾರವಾಗಿ ಮಗುವಿನ ವಿಕಾಸ
ಮತ್ತು ಬೆಳವಣಿಗೆಯನ್ನು ಹಂತ ಹಂತವಾಗಿ
ಎಲ್ಲರಿಗೂ ತಿಳಿಯುವಂತೆ ನಿಮ್ಮ ಲೇಖನದಲ್ಲಿ
ವ್ಯಕ್ತಪಡಿಸಿದ್ದೀರಿ… ಮೇಡಂ
ಧನ್ಯವಾದಗಳು ಮೇಡಂ
Very informative article madam.