ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ಸದಾ ಕಾಡುವ ಹಾಡು.ಕೊಳಲು

ಕೊಳಲು ಮುರಳಿ ವೇಣು ಎಂದೆಲ್ಲಾ ಹೆಸರಿನಿಂದ ಕರೆಸಿಕೊಳ್ಳುವ ಈ ವಾದ್ಯ ಕೃಷ್ಣನ ಸಂಗಾತಿ ಎಂದೇ ಚಿರಪರಿಚಿತ.  ಲೋಕೋದ್ಧಾರದ ಮೊದಲಂಕವಾಗಿ ಬಾಲ ಲೀಲೆ ತೋರುವ ಕೃಷ್ಣ ಯೌವನಾವಸ್ಥೆಗೆ ಬಂದಾಗ ಮಥುರೆಗೆ ತೆರಳುತ್ತಾನೆ.  ರಾಧೆಯೊಡನಿನ ಅವನ ಅನುರಾಗದ ಸಾಕ್ಷಿ ಕೊಳಲು.  ಗೋಕುಲದ ಆಬಾಲವೃದ್ಧರಾಗಿ ಎಲ್ಲರೂ ವೇಣು ನಾದಕ್ಕೆ ಮನಸೋತವರೇ.   ಗೋಕುಲಕ್ಕೆ ಮತ್ತೆ ಮರಳಿ ಬರುವವರೆಗೆ ಕೊಳಲು ನುಡಿಸಲಾರೆ ಎಂದು ಮಥುರೆಗೆ ಹೊರಡುವ ಮುನ್ನ ಭಾಷೆ ಈಯುತ್ತಾನೆ ಕೃಷ್ಣ ,ಅಂತೆಯೇ ನಡೆದುಕೊಳ್ಳುತ್ತಾನೆ . ಗೋಕುಲದ ರಮಣೀಯ ವ್ಯಕ್ತಿತ್ವದ ಕೃಷ್ಣ ಮಹಾಭಾರತದ ನಂತರದ ದಿನಗಳಲ್ಲಿ ಕೊಳಲಿರದ ರಾಜಕಾರಣಿ ಆಗಿಬಿಡುತ್ತಾನೆ.  ಕೃಷ್ಣ ಮತ್ತು ಕೊಳಲಿನದು ಅವಿನಾಭಾವ ಸಂಬಂಧ.  ಪುತಿನ ಅವರ “ಗೋಕುಲ ನಿರ್ಗಮನ”  ಗೀತ ನಾಟಕ ಕೃಷ್ಣ ಮಧುರೆಗೆ ತೆರಳುವ ಹಿಂದಿನ ದಿನದ ಹುಣ್ಣಿಮೆಯ ಸಂಭ್ರಮವನ್ನು ವರ್ಣಿಸುವುದು.  ಅದರಲ್ಲಿ ಗೋಪಿಕೆಯರು ಹೇಗೆ ಕೃಷ್ಣನ ಮುರಳಿ ಗಾನಕ್ಕೆ ಪರವಶರಾಗಿ ವೃಂದಾವನಕ್ಕೆ ಧಾವಿಸುತ್ತಿದ್ದರು ಎಂಬುದನ್ನು ಈ ಗೀತೆಯ ಮೂಲಕ ಹೇಳುತ್ತಾರೆ . ಮೂಲತಃ ವಾಗ್ಗೇಯಕಾರರೂ ಆಗಿದ್ದ ಪುತಿನ ಅವರು ನಾಟಕದಲ್ಲಿ ಈ ಗೀತೆಯನ್ನು ಹಿಂದೂಸ್ತಾನಿ ತೋಡಿ ರಾಗದಲ್ಲಿ ಬರೆದಿದ್ದಾರೆ.  ವೀಣೆ ದೊರೆಸ್ವಾಮಿ ಅಯ್ಯಂಗಾರ್ ಸಂಗೀತ ನಿರ್ದೇಶನದಲ್ಲಿ ಸುಬ್ಬಾಶಾಸ್ತ್ರಿ ಚಿತ್ರದಲ್ಲಿ ಅಳವಡಿಸಿಕೊಂಡಿರುವ ಈ ಹಾಡು ಸಿಂಧು ಭೈರವಿ ರಾಗದಲ್ಲಿದೆ.   ಇದರ ಬಗ್ಗೆ ಒಂದು ರೋಚಕ ಕಥೆ ಇದೆ . ಮೂಲತಃ ಗೋಕುಲ ನಿರ್ಗಮನ ನಾಟಕ ಬಿ. ವಿ. ಕಾರಂತರಿಂದ ರಂಗಕ್ಕೆ ತರಲ್ಪಟ್ಟಿತ್ತು.  ಮಿತ್ರರಾಗಿದ್ದ ಪುತಿನ ಹಾಗೂ ದೊರೆಸ್ವಾಮಿ ಅಯ್ಯಂಗಾರರು ನಾಟಕ ಪ್ರದರ್ಶನಕ್ಕೆ ಹೋಗಿದ್ದರು.  ಆಗ ಅಲ್ಲಿ ಈ ಹಾಡಿನ ರಾಗ ಪುತಿನರವರಿಗೆ ಇಷ್ಟವಾಗಲಿಲ್ಲವಂತೆ . ಮುಂದೆ ಚಲನಚಿತ್ರಕ್ಕೆ ಅಳವಡಿಸುವ ಸಂದರ್ಭ ಬಂದಾಗ ದೊರೆಸ್ವಾಮಿ ಅಯ್ಯಂಗಾರರು ಬೇರೆ ರಾಗವನ್ನು ಬಳಸಿದರಂತೆ.  ಈ ವಿಷಯವನ್ನು ಎಚ್ ಎಸ್ ವೆಂಕಟೇಶ್ ಮೂರ್ತಿ ಅವರು ಒಂದು ಸಂದರ್ಭದಲ್ಲಿ ವಿವರಿಸಿದ್ದಾರೆ . ಮಾಧವನ ವೇಣುವಾದನದ ಮೋಹಕತೆಗೆ ಮನಸೋತ ಗೋಪಿಕೆಯರು “ತ್ವರೆ ತ್ವರೆ” ಎನ್ನುತ್ತಾ ಕೊಳಲ ಗಾನದ ಜಾಡು ಹಿಡಿದು ಹೊರಡುತ್ತಾರೆ.  ತೊಟ್ಟಿಲಿನ ಹಸುಗೂಸು ಪಕ್ಕದಲ್ಲಿನ ಗಂಡ ಎಲ್ಲರನ್ನೂ ತೊರೆದು ವೃಂದಾವನಕ್ಕೆ ಹೋಗೋಣ ಎನ್ನುತ್ತಾರೆ. ಮುತ್ತಿನ ಕುಪ್ಪಸ, ಹರಳಿನೋಲೆ ಮಲ್ಲಿಗೆ ಜಾಜಿ ಹೂಮಾಲೆಗಳು, ಕಾಲುಂಗುರ, ಗೆಜ್ಜೆ ಯಾವುದೇ ಅಲಂಕಾರ ಆಡಂಬರವಿಲ್ಲದೆ ಎಲ್ಲವನ್ನೂ ಮನೆಯಲ್ಲೇ ಬಿಟ್ಟು ಬಂದೆ ಎನ್ನುತ್ತಾರೆ.  ಮನೆ ಕೆಲಸದ ಮಿಕ್ಕರೂ ಸರಿ ನೆರೆಹೊರೆ ನಕ್ಕರೂ ಸರಿ ಬೃಂದಾವನಕ್ಕೆ ಹೋಗುವುದೊಂದೇ ಅವರ ಗುರಿ . ಹೇಗೆ ರವಿಕಿರಣ ಬಂದು ಕತ್ತಲನ್ನೋಡಿಸುವುದೋ ಹಾಗೆ ಕೃಷ್ಣನ ಕೊಳಲಿನ ಗಾನ ಮನದ ಕತ್ತಲೆ ಎಂಬ ಭೀತಿಯನ್ನು ಓಡಿಸಿ ಪ್ರೀತಿ ಎಂಬ ಬೆಳಕು ಮೂಡಿಸುತ್ತದೆ ಅನ್ನುತ್ತಾರೆ.  ಚಿತ್ರದಲ್ಲಿಯೂ ಸಹ ಇದನ್ನು ಮೇಲುಕೋಟೆಗೆ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಭಾವಿ ಪತಿ ಮತ್ತು ಕುಟುಂಬದವರೊಡನೆ ಕುಳಿತ ಸಂದರ್ಭದಲ್ಲಿ ನಾಯಕಿ  ಹಾಡಿದ ಪ್ರಸಂಗವಾಗಿ ಚಿತ್ರೀಕರಿಸಿದ್ದಾರೆ.  ಆದರೆ ಸೂಚ್ಯಾರ್ಥವನ್ನು ಕಥೆಯ ಮುಂದಿನ ಓಟದಲ್ಲಿ ಬಳಸಿಕೊಂಡಿರುವ ಜಾಣ್ಮೆ ನಿರ್ದೇಶಕರದ್ದು.

ಮೇಲ್ನೋಟಕ್ಕೆ ನೋಡಿದರೆ ಏನಪ್ಪಾ ಇದು ಭಾರತೀಯ ಸ್ತ್ರೀ ಗಂಡ ಮಗುವನ್ನು ತೊರೆದು ಹೋಗಲು ಸಾಧ್ಯವೇ ಎಂದೆನಿಸುತ್ತದೆ ಆದರೆ ಇಲ್ಲಿ ಕೊಳಲಗಾನವೆಂದರೆ ಭಗವಂತನ ಕರೆ . ಅಧ್ಯಾತ್ಮದತ್ತ ನೆಟ್ಟ ನೋಟ.  ಹೀಗೆ ಸಾಯುಜ್ಯಕ್ಕಾಗಿ ಪರಿತಪಿಸುವ ಜೀವಗಳು ಗೋಪಿಕೆಯರು.  ಕೃಷ್ಣನ ಭಕ್ತಿಯ ಪರಾಕಾಷ್ಠೆಯಲ್ಲಿ ಭವ ಬಂಧನವನ್ನು ತೊರೆದು ಮುಕ್ತಿಗಾಗಿ ಧಾವಿಸುವ ಪರಿಕಲ್ಪನೆ ಇದು.  ಭಗವಂತನ ಬಳಿ ಹೋಗಲು ಭೂಮಿಯ ಋಣ ಭಾರದ ಬಂಧನಗಳನ್ನು ಕಳಚಿಕೊಳ್ಳಲೇ ಬೇಕಲ್ಲವೇ ?

ಹೀಗೆ ಆಧ್ಯಾತ್ಮದ ಪರಮಾತ್ಮನ  ಬಗ್ಗೆ ತಾದ್ಯಾತ್ಮ ದೃಷ್ಟಿ ಇರುವ ಈ ಹಾಡನ್ನು ಹಾಡಿರುವವರು ಶ್ರೀರಂಗಂ ಗೋಪಾಲನ್ ಎಂಬ ಶಾಸ್ತ್ರೀಯ ಸಂಗೀತದ ಹಾಡುಗಾರ್ತಿ. ಆಯಾ ರಂಗದ ದಿಗ್ಗಜಗಳನ್ನೆಲ್ಲ ಒಂದುಗೂಡಿಸಿ ಮಾಡಿದ  ಈ ಮಹತ್ತರ  ಚಿತ್ರದ ನಿರ್ದೇಶಕ ಎಂ ವಿ ಕೃಷ್ಣಮೂರ್ತಿ.   ಸೂಚ್ಯಾರ್ಥದ ಭಾವಾರ್ಥ ಗೂಢಾರ್ಥಗಳನ್ನು ಹೊಂದಿರುವ ಈ ಹಾಡು ಕೊಳಲು ಎಂಬ ಪದದೊಂದಿಗೆ ನೆನಪಿಗೆ ಬಂದೇ ಬರುವುದು.


 ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂaಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು

One thought on “

  1. ಪ್ರಕಟಿಸಿದ್ದಕ್ಕಾಗಿ ಸಂಪಾದಕರಿಗೆ ಧನ್ಯವಾದಗಳು

    ಸುಜಾತಾ ರವೀಶ್

Leave a Reply

Back To Top