ಬಡತನ – ಬರಹ ಮತ್ತು ಸಹಿಷ್ಣುತೆ-ಗಂಗಾಧರ ಬಿ ಎಲ್ ನಿಟ್ಟೂರ್ -ವಿಶೇಷ ಲೇಖನ

ವಿಶೇಷ ಲೇಖನ

ಬಡತನ – ಬರಹ ಮತ್ತು ಸಹಿಷ್ಣುತೆ-

ಗಂಗಾಧರ ಬಿ ಎಲ್ ನಿಟ್ಟೂರ್

ಭಾಗ  – 1

ಬಡತನ ರೇಖೆಗಿಂತಲೂ ಕೆಳಗಿರುವ ಅಧಿಕ ಮಂದಿ ಬದುಕುತ್ತಿರುವ ದೇಶ ನಮ್ಮದು. ಅಗಾಧ ಪ್ರತಿಭೆ ಇದ್ದರೂ ಯಾವ್ಯಾವುದೋ ಅನಿವಾರ್ಯತೆಗೆ ಕಟ್ಟು ಬಿದ್ದು ಖಾಸಗಿ ವಲಯದಲ್ಲಿ ಹಾಗೂ ಸರ್ಕಾರಿ ಕಚೇರಿಗಳಲ್ಲಿ
CONTRACT BASE ಅಥವಾ ಅರೆಕಾಲಿಕ ಹೆಸರಿನಲ್ಲಿ ಕೇವಲ 5 – 10 ಸಾವಿರ ರೂ ತಿಂಗಳ ಸಂಬಳಕ್ಕೆ ಹಗಲಿರುಳು ದುಡಿಯುವ ಕೋಟಿ ಕೋಟಿ ಮಂದಿ ಇದ್ದಾರೆ. ಕೃಷಿ, ಶಿಕ್ಷಣ, ಆರೋಗ್ಯ, ಪತ್ರಿಕೋದ್ಯಮ, ಆಡಳಿತ ಮತ್ತು ಆರ್ಥಿಕ ವಲಯ ಸೇರಿದಂತೆ ಬಹುಪಾಲು ಎಲ್ಲಾ ರಂಗದಲ್ಲೂ ಇಂಥವರ ಪರಿಶ್ರಮದ ಫಲವಾಗಿ ಆ ಕ್ಷೇತ್ರಗಳು ಉಳಿದಿವೆ – ಬೆಳೆದಿವೆ. ಆದರೆ ಮಾಲೀಕರ ಉದ್ಧಾರಕ್ಕಾಗಿ ಶ್ರಮಿಸುವ ಈ ಮಂದಿಯ ಮೂಳೆ ಸವೆದಿವೆ. ಈ ಶ್ರಮಿಕರ ದುಡಿತ , ವಿನಿಯೋಗಿಸುವ ಸಮಯ ಮತ್ತು ಶ್ರಮಕ್ಕೆ ಸಿಗುತ್ತಿರುವ ಪ್ರತಿಫಲ ಮಾತ್ರ ಅತ್ಯಲ್ಪ.

ಇಂದಿನ ದುಬಾರಿ ಕಾಲದಲ್ಲಿ ಇಷ್ಟೊಂದು ಕಡಿಮೆ ಆದಾಯದಲ್ಲಿ ಬದುಕುತ್ತಿರುವವರ ಪಾಡೇನು. ಹಾಲು, ನೀರು, ಗ್ಯಾಸು, ಕರೆಂಟ್ ಬಿಲ್, ಅದು ಇದಕ್ಕೆಂದು ಭರಿಸುವ ವೆಚ್ಚ  ಎಷ್ಟು. ಅದೇ ಅಲ್ಪಾದಾಯದಲ್ಲಿ  ಕಂದಾಯ, ತೆರಿಗೆ, ಹಬ್ಬ ಹರಿದಿನ, ಮಕ್ಕಳ ಶಾಲಾ – ಕಾಲೇಜು ಫಿ ಇತ್ಯಾದಿಗೆಂದು ಎಷ್ಟು ಉಳಿಸಲು ಸಾಧ್ಯ. ಏನೇನು ಕೊಳ್ಳಲು, ಖರೀದಿಸಲು, ನಿಭಾಯಿಸಲು – ನಿರ್ವಹಿಸಲು ಸಾಧ್ಯ  ?  ಈ ವಾಸ್ತವ ಆರ್ಥಿಕ ಸಂಕಷ್ಟದ ಯಾತನೆ, ನೋವುಗಳ ಬಗ್ಗೆ ಸ್ವಾನುಭವ ಇಲ್ಲದ ಸರ್ಕಾರಿ ಅಥವಾ ಅದೇ ಖಾಸಗಿ ವಲಯದಲ್ಲಿ ಲಕ್ಷಾಂತರ ರೂ ಸಂಬಳ ಪಡೆಯುವ ನೌಕರರಿಗೆ ಹಾಗೂ ಬಂಡವಾಳಶಾಹಿಗಳಿಗೆ ಹೇಗೆ ಅರ್ಥವಾದೀತು  ? ಹೊಟ್ಟೆ ತುಂಬಿದವರಿಗೆ ಹಸಿದವರ ಸಂಕಟ ತಿಳಿದೀತು ಹೇಗೆ  ?

ಈ ಕುರಿತು ಮಾತಾಡುವವರು ಯಾರು ?  ಶ್ರಮಿಕರ ಬದುಕಿನ ಬದಲಾವಣೆಗೆ ಪರಿಹಾರ ಏನು, ಹೇಗೆ ?  ಆರ್ಥಿಕವಾಗಿ ಹಿಂದುಳಿದ ಮತ್ತು ತಳ ಮಟ್ಟದವರ ತಲಾದಾಯ, ತಲ ವರಮಾನದ  ಹೆಚ್ಚಳವಾದರೂ ಎಂತು ? ಪರ್ಯಾಯ ಮಾರ್ಗದ ಬಗ್ಗೆ ಯೋಚಿಸುವ ಯೋಜಿಸುವ ಕುರಿತು ಚಿಂತಿಸುವ ವರು, ಕೈ ಜೋಡಿಸುವವರು ಯಾರು  ?  ಸಂಬಂಧ ಪಟ್ಟವರಿಗೆ, ಆಡಳಿತ ಮತ್ತು ಅಧಿಕಾರಿ ವರ್ಗಕ್ಕೆ ಬಡವರ ಬದುಕಿನ ಬವಣೆ ತಿಳಿಸುವ ಪರಿ ಎಂತು  ?  ಅವರ ಬಗ್ಗೆ ಕಳಕಳಿ ತೋರುವಂತೆ ಗಮನ ಸೆಳೆಯುವ ಬಗೆಯಾದರೂ ಎಂತು ? ಬಡತನದ ನಿರ್ಮೂಲನೆಯ ಸಾಧನೋಪಾಯಗಳೇನು …. ಇದು ಅಂದಿಗೂ ಇಂದಿಗೂ ಜನಸಾಮಾನ್ಯರಿಗೆ ಕಾಡುತ್ತಲೇ ಇರುವ ಪ್ರಶ್ನೆಯಾಗಿದೆ.

          ಭಾಗ  – 2

ನಮ್ಮ ಒಂದು whatsapp ಬಳಗದಲ್ಲಿ ಕೆಲ ತಿಂಗಳುಗಳ ಹಿಂದೆ ಒಬ್ಬ ಖ್ಯಾತ ಬರಹಗಾರರು ಯಾವುದೋ ಒಂದು ಪುಸ್ತಕ ಖರೀದಿ, ಮಾರಾಟಕ್ಕೆ ಸಂಬಂಧಿಸಿದ  ಪೋಸ್ಟ್ ಹಾಕಿದ್ದರು.  ನಮ್ಮ ಮಿತ್ರರೊಬ್ಬರು – ” ಪುಸ್ತಕ ಓದುವ ಮನಸ್ಸು, ಆಸಕ್ತಿ ಖಂಡಿತ ಇದೆ. ಆದರೆ ಕೊಳ್ಳುವ ಆರ್ಥಿಕ ಶಕ್ತಿ ಇಲ್ಲ. ಕೊಂಡು ಓದುವವರಿಗೆ ವಿಷಯ ತಿಳಿಸುವ ಪ್ರಯತ್ನ ಮಾಡುತ್ತೇವೆ. ಶುಭವಾಗಲಿ ಸರ್ ” ಎಂದು ಆ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದರು . ಜೊತೆಯಲ್ಲಿ ಅದೇ ವೇಳೆಗೆ ಸರಿಯಾಗಿ ಆ ಮಿತ್ರರು ಮತ್ತೊಂದು ಪೋಸ್ಟ್ ಹಾಕಿದ್ದರು .
” ಪ್ರಸ್ತುತ ಕಲ್ಪನೆಯ ಕತೆ, ಕವನಗಳಿಗಿಂತ ವಾಸ್ತವ ಬದುಕಿನ ಬವಣೆಗಳ ಮೇಲೆ ಬೆಳಕು ಚೆಲ್ಲಿ, ಪ್ರಚಲಿತ ಸಮಸ್ಯೆಗಳ ನಿವಾರಣೆಗೆ ಒಂದಷ್ಟು ಉತ್ತೇಜನ ನೀಡಬಲ್ಲ ಬರಹಗಳ ತುರ್ತು ಅಗತ್ಯವಿದೆ. ಆದರೆ ಆ ದಿಸೆಯಲ್ಲಿ ಪ್ರಯತ್ನಗಳ ಪ್ರಮಾಣ ಇಳಿಮುಖವಾಗಿದೆ ” ಎಂದು ಅನಿಸಿಕೆ ವ್ಯಕ್ತಪಡಿಸಿದ್ದ ಬರಹವದು.

ಆದರೆ ಆ ಖ್ಯಾತ ಬರಹಗಾರರು ತನ್ನ ಬರವಣಿಗೆ ಬಗ್ಗೆ ಆ ಮಿತ್ರ ಮೂದಲಿಸಿದ್ದಾನೆ ಎಂದೇ  ಭಾವಿಸಿ ಏನೇನೊ ಖಾರವಾಗಿ ಪ್ರತಿಕ್ರಿಯಿಸಿದರು. ಅದೊಂದು ಸಾಂದರ್ಭಿಕ ಬರೆಹ. ನಿಮ್ಮನ್ನು ಉದ್ದೇಶಿಸಿಯೇ ಬರೆದಿದ್ದಲ್ಲ. ನಿಮ್ಮ ಮತ್ತು ನಿಮ್ಮ ಬರಹಗಳ ಬಗ್ಗೆ ನಮಗೆ ಗೌರವವಿದೆ. ತಪ್ಪು ತಿಳಿಯಬೇಡಿ ಎಂದು ವಿನಂತಿಸಿಕೊಂಡರೂ ಅವರ ಮನ ಕರಗಲಿಲ್ಲ.  ಬಳಗ ಬಿಟ್ಟು ಹೊರ ಹೋದರು. ಅವರಿದ್ದ ಇನ್ನೊಂದು whatsapp ಗ್ರೂಪ್ ನಲ್ಲಿ ಆ ಮಿತ್ರ ಸಹ ಇದ್ದ . ಆ ಖ್ಯಾತನಾಮರ ಅಸಮಾಧಾನ ಅಲ್ಲಿಯೂ ಮುಂದುವರಿಯಿತು. ಮಿತ್ರನ ಪ್ರತಿ ಪೋಸ್ಟ್ ಗೂ ಕೌಂಟರ್ ಕೊಡುವ ರೀತಿಯಲ್ಲಿ ಹಾಗೂ ಪರೋಕ್ಷವಾಗಿ ಏನೇನೊ ಹುರುಳಿಲ್ಲದ ಆಪಾದನೆ, ಮಿಥ್ಯಾರೋಪಗಳ ಕಿಡಿ ಕಾರುವ ಬರವಣಿಗೆ ಮೂಲಕ ಅದು ತಾರಕಕ್ಕೇರಿತು. ಅವರೊಡನೆ ಮಾತಾಡಿ ಈ ತಪ್ಪು ತಿಳಿವಳಿಕೆಗೆ  ಇತಿಶ್ರೀ ಹಾಡಲು ಪ್ರಯತ್ನ ಮಾಡೋಣವೆಂದು ಕರೆ ಮಾಡಿದರೆ ಆ ಮಹಾಶಯರು ನಮ್ಮ ಬಳಗದ ಕೆಲವರ ನಂಬರ್ ಅನ್ನು ಬ್ಲಾಕ್ ಲಿಸ್ಟ್ ಗೆ ಹಾಕಿಕೊಂಡಿದ್ದರು.

ವೈಯುಕ್ತಿಕವಾಗಿ ಅವರ ಬಗ್ಗೆ ಯಾವ ವಿಷಯದಲ್ಲೂ, ಯಾವುದೇ ರೀತಿಯಲ್ಲೂ ಮೂಗು ತೂರಿಸದಿದ್ದರೂ ಆ ಖ್ಯಾತನಾಮರು ಹಾಗೆ ವರ್ತಿಸಿದ್ದರ ಬಗ್ಗೆ ಅತೀವ ಬೇಸರ  ಎನಿಸಿದರೂ ಬಹುದಿನಗಳ ಪರಿಚಿತರು ಮತ್ತು ಹಿರಿಯರು ಎಂಬ ಕಾರಣಕ್ಕಾಗಿ ಸಹಿಸಬೇಕಾಯಿತು.

ಭಾಗ  – 1  ರ ಮುಂದುವರಿಕೆ…..

ಪ್ರಚಲಿತ ವಿದ್ಯಮಾನಗಳ ಕುರಿತು ಬರೆಯುವ ಇಂಗಿತ ವ್ಯಕ್ತ ಪಡಿಸುವುದೇ ತಪ್ಪಾ  ! ಈ ಸಂಬಂಧ ಧ್ವನಿ ಎತ್ತುವವರನ್ನು ಅಪಹಾಸ್ಯ ಮಾಡುವ, ವ್ಯಂಗ್ಯದಿಂದ ನೋಡುವ ವಾತಾವರಣ ಒಂದೆಡೆ ಇಂತಹ ಮೇಲ್ಕಂಡ ಖ್ಯಾತ ಬುದ್ಧಿಜೀವಿಗಳು ಎನಿಸಿಕೊಂಡವರಿಂದಲೇ ನಿರ್ಮಾಣವಾಗುತ್ತಿರುವುದು ಖೇದಕರ.

ಆ ಖ್ಯಾತನಾಮರು ನಮ್ಮಂತಹ ಬಡವರ ಬಳಗ ಬಿಟ್ಟು ಹೊರ ಹೋದಷ್ಟು ಸುಲಭವಾಗಿ ಇತರೆ ಬಳಗ ಬಿಟ್ಟು ಹೋಗಲಾರರು. ಏಕೆಂದರೆ ಅವರಿಗೆ ಅಲ್ಲಿ ಅವರಿಗೆ ಪ್ರಚಾರ, ಪ್ರಸಾರ, ದೊಡ್ಡವರ ಒಡನಾಟ, ಸಂಪರ್ಕ ಇತ್ಯಾದಿ – ಇತ್ಯಾದಿ ರೂಪದ ಉತ್ತರೋತ್ತರ ಬೆಳವಣಿಗೆಗೆ ಹಲವಾರು ಲಾಭಾಂಶಗಳೇ ಇರುವಾಗ ಹೊರ ಹೋಗುವ ಯೋಚನೆ ಯಾದರೂ ಹುಟ್ಟೀತೇ.

ಇನ್ನೊಬ್ಬರ ಹೆಗಲ ಮೇಲೆ ಕಾಲಿಟ್ಟು ದಾಪುಗಾಲು ಇಡುತ್ತಿರುವ ಇಂತಹ ಕೆಲ ಸ್ವಘೋಷಿತ ಮೇಧಾವಿ ಪ್ರತಿಭಾವಂತರು ತಮ್ಮ ಪಾಡಿಗೆ ತಮ್ಮ ಕಾರ್ಯ ಮುಂದುವರಿಸಿಕೊಳ್ಳಲಿ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕೀರ್ತಿ ಪಡೆಯಲಿ, ವಿಶ್ವ ಮಟ್ಟದ ಪ್ರಶಸ್ತಿ ಪುರಸ್ಕಾರಕ್ಕೂ ಭಾಜನರಾಗಲಿ.  ಬೇಡ ಎಂದವರಾರು , ತಡೆದವರಾರು ?

 ಹಾಗೇ ನೋಡಿದರೆ ಇಲ್ಲಿ ನಾವೆಲ್ಲಾ ದೇಶ, ಭಾಷೆ, ಸಂಸ್ಕೃತಿಗಾಗಿ ಅದ್ಯಾವ ಸಾಹಸ, ಸಾಧನೆ, ತ್ಯಾಗ ಬಲಿದಾನ ಮಾಡುತ್ತಿದ್ದೇವೆ ಹೇಳಿ. ಎಲ್ಲರೂ ತಂತಮ್ಮ  ಇಷ್ಟ ಕ್ಷೇತ್ರದಲ್ಲಿ ತೊಡಗಿಸಿಕೊಂಡು ನಮ್ಮ ಆಸಕ್ತಿಯ ಕಾರಣ ಅದರಲ್ಲಿ ಮುಂದುವರಿಯುತ್ತಿದ್ದೇವೆ. ಇದೊಂದು ಸಹಜ ಪ್ರಕ್ರಿಯೆ ಅಷ್ಟೇ.  

ಸಾಧ್ಯವಾದರೆ, ಸಾಮಾಜಿಕ ಕಳಕಳಿ ಇದ್ದರೆ ಎಲ್ಲಿ ನಿಜವಾಗಿಯೂ ತಪ್ಪು ನಡೆಯುತ್ತಿದೆಯೋ ಅದನ್ನು ಖಂಡಿಸಲಿ. ಮೋಸ, ವಂಚನೆ, ವಿದ್ರೋಹ ಕೃತ್ಯಗಳನ್ನು ತಿದ್ದುವ ಸೌಜನ್ಯ ಪ್ರಯತ್ನ ನಡೆಸಲಿ.

ಆದರೆ ಪ್ರಚಲಿತ ಸಮಸ್ಯೆಗಳ ಕುರಿತ ಚಿಂತನೆ, ವಿಡಂಬನೆ, ಆಗ್ರಹಯುಕ್ತ ಬರಹ ಅಥವಾ  ಪ್ರಗತಿಪರ ಚಿಂತನೆಯ ಹಿನ್ನಲೆಯಲ್ಲಿ ಅಪೇಕ್ಷಿತ ನಿರೀಕ್ಷೆಗಳ ವ್ಯಕ್ತಪಡಿಸಿದವರನ್ನೇ ಅಪರಾಧಿಗಳು ಎಂಬಂತೆ ಬಿಂಬಿಸುವ ಕೀಳು ಮಟ್ಟಕ್ಕೆ ಇಳಿಯುವುದು ಯಾರಿಗೂ ತರವಲ್ಲ. ಬರೆವವರ  ಸ್ವಾಭಿಮಾನಿ ಬದುಕಿನ ಆರ್ಥಿಕ  ಪರಿಸ್ಥಿತಿ ಬಗ್ಗೆ ಕೇವಲವಾಗಿ ಮಾತಾಡುತ್ತಾ ಹಣ ಗಳಿಕೆಗೆ ಬೆನ್ನು ಬಿದ್ದವರೆಂಬಂತೆ ಅವರ ಬಗ್ಗೆ  ಮತ್ತೊಬ್ಬರ ಮುಂದೆ ಆಡಿಕೊಳ್ಳುವ ನೀಚ ಮಟ್ಟಕ್ಕೆ ಯಾರೂ ಇಳಿಯಬಾರದು. ಏಕೆಂದರೆ ಯಾವುದೇ ಒಂದು ವಿಷಯ ಅಥವಾ ಪ್ರಸಂಗದ ಬಗ್ಗೆ ಸಂಪೂರ್ಣ ಪರಿಶೀಲಿಸಿ, ಪರಾಮರ್ಶಿಸಿ ನೋಡುವ ವ್ಯವಧಾನ ಎಲ್ಲರಲ್ಲೂ ಇರುವುದಿಲ್ಲ. ಮೇಲಾಗಿ ಈ ಧಾವಂತದ ಬದುಕಿನಲ್ಲಿ ಈಗ ಎಲ್ಲರಿಗೂ ಅಷ್ಟೊಂದು ಸಮಯವೂ ಸಹ ಇಲ್ಲ.

ವೃತ್ತಿ ಮತ್ಸರ ಮತ್ತು ಪ್ರತಿಭಾ ಮತ್ಸರ ಎರಡೂ ಕೂಡ ಅಪಾಯಕಾರಿಯೇ. ಕ್ಷೇತ್ರ ಯಾವುದೇ ಇರಲಿ ಸಹಿಷ್ಣುತೆ ಅತ್ಯಗತ್ಯ. ಗುಂಪುಗಾರಿಕೆ, ಅಡ್ಡಗಾಲು,    ದ್ವೇಷಾಸೂಯೆ ಬದಲು ಒಳಿತಿಗಾಗಿ ಒಗ್ಗೂಡುವಿಕೆ ಅತಿ ಮುಖ್ಯ.

————————–[

  ಗಂಗಾಧರ ಬಿ ಎಲ್ ನಿಟ್ಟೂರ್

One thought on “ಬಡತನ – ಬರಹ ಮತ್ತು ಸಹಿಷ್ಣುತೆ-ಗಂಗಾಧರ ಬಿ ಎಲ್ ನಿಟ್ಟೂರ್ -ವಿಶೇಷ ಲೇಖನ

Leave a Reply

Back To Top