ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ

ನದಾಫ್ ರವರ ಗಜಲ್ ಗಳಲ್ಲಿ ಹಕ್ಕಿಯ ಕಲರವ

ಗಜಲ್ ಪ್ರೇಮಿಗಳಿಗೆ ಗಜಲ್ ಪಾಗಲ್ ನ ದಿಲ್ ಸೇ ನಮಸ್ಕಾರಗಳು..

ಗುರುವಾರ ಎಂದರೆ ಹಲವು ಆಚರಣೆಗಳ ತವರೂರು, ಆದರೆ ಗಜಲ್ ಮನಸುಗಳಿಗೆ ಗಜಲ್ ವಾರ. ಪ್ರತಿ ವಾರದಂತೆ ಈ ವಾರವೂ ಸಹ ತಮ್ಮ ನಿರೀಕ್ಷೆಯಂತೆ ಒಬ್ಬ ಗಜಲ್ ಗೋ ಅವರ ಹೆಜ್ಜೆ ಗುರುತುಗಳೊಂದಿಗೆ ತಮ್ಮ ಮುಂದೆ ಬರುತ್ತಿರುವೆ. ಅವರ ಗಜಲ್ ಅಶಅರ್ ನಲ್ಲಿ ಒಂದು ಸುತ್ತು ವಿಹರಿಸಿ ಬರೋಣವೇ..ಮತ್ತೇಕೆ ತಡ…,ಚಲೋ, ಹೋಗಿ ಬರೋಣ.

“ಆತನನ್ನು ನೆನಪಿಸಿಕೊಳ್ಳಲೂ ನನಗೆ ಸಮಯವಿರಲಿಲ್ಲ
ನಾನು ಏನೂ ಮಾಡದಿದ್ದರೂ ಅವಿಶ್ರಾಂತನಾಗಿದ್ದೆ”
-ಜಾಫರ್ ಇಕ್ಬಾಲ್

       ಮನುಷ್ಯನ ಜೀವನ, ಅವರ ಆಲೋಚನಾ ಕ್ರಮವನ್ನು ಒಮ್ಮೆ ಗಮನಿಸುತ್ತ ಹೋದರೆ ಬಲು ಸೋಜಿಗವೆನಿಸುತ್ತದೆ. ಎದೆಯಾಳದಲ್ಲಿ ಜಗತ್ತನ್ನು ಬದಲಿಸುವ ತುಡಿತ, ಹಂಬಲವಿದ್ದರೂ ತಾವು ಬದಲಾಗಬೇಕು ಎಂಬ ಸಂಕಲ್ಪದಿಂದ ವಿಮುಖರಾಗಿರುತ್ತಾರೆ, ದೂರವೇ ಉಳಿಯಲು ಪ್ರಯತ್ನಿಸುತ್ತಾರೆ. ತಮ್ಮದೇಯಾದ ಲೋಕದಲ್ಲಿ ಗೂಡೊಂದನ್ನು ಕಟ್ಟಿಕೊಂಡು ದ್ವೀಪದಲ್ಲಿ ಬದುಕುವವರೆ ಹೆಚ್ಚಾಗಿದ್ದಾರೆ. ಅವರ ಜೀವನ ಸೌಕರ್ಯವು ಅವರಿಗೆ ತೀವ್ರವಾಗಿ ಬೆದರಿಸದ ಹೊರತು ಅನ್ಯಾಯದ ವಿರುದ್ಧ ನಿಲ್ಲುವುದಿಲ್ಲ. ಇಂದಿನ ಜನತೆ ತಮ್ಮ ತಲೆಯ ಮೇಲೆ ಸೂರು, ನಾಲ್ಕು ಗೋಡೆಗಳನ್ನು ಹೊಂದಿದ್ದ ಮಾತ್ರಕ್ಕೆ ಹೊರ ಜಗತ್ತಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಯಾವಾಗಲೂ ಸೇಫ್, ಕಂಫರ್ಟ್ ಝೋನ್ ನಲ್ಲಿರಲು ಬಯಸುತ್ತಾರೆ. ಆರಾಮ ವಲಯ ಎನ್ನುವಂತದ್ದು ಒಂದು ಸುಂದರವಾದ ಸ್ಥಳವಾಗಿದೆ, ಆದರೆ ಅಲ್ಲಿ ಏನೂ ಬೆಳೆಯುವುದಿಲ್ಲ. ಆದರೆ ಎಲ್ಲಾ ಬೆಳವಣಿಗೆಗಳು, ಜೀವನವು ಆರಂಭವಾಗುವುದೇ ಆರಾಮ ವಲಯದ ಕೊನೆಯಲ್ಲಿ, ಆರಾಮ ವಲಯದಿಂದ ಒಂದು ಹೆಜ್ಜೆ ಇಟ್ಟಾಗಲೇ! ಕಾರಣ ಈ ವಲಯ ಅತ್ಯಂತ ಅಪಾಯಕಾರಿ ಸ್ಥಳ. ಇದೊಂದು ಚಳಿಗಾಲದ ಬೆಚ್ಚಗಿನ ಹಾಸಿಗೆಯಂತೆ; ಅದರಿಂದ ಹೊರಬರದಿದ್ದರೆ, ನಮ್ಮ ದಿನವು ಪ್ರಾರಂಭವಾಗುವುದಿಲ್ಲ. ಸುರಕ್ಷಿತ ಜೀವನವನ್ನು ಆರಿಸಿಕೊಂಡವರಿಗೆ ಗೆಲುವು ಏನೆಂದು ಎಂದಿಗೂ ತಿಳಿಯುವುದಿಲ್ಲ. ಆರಾಮ ವಲಯದಿಂದ ಹೊರ ಬಂದು ಹೊಸದನ್ನು ಪ್ರಯತ್ನಿಸಿದಾಗ ವಿಚಿತ್ರವಾದ ಮತ್ತು ಅನಾನುಕೂಲತೆ ಎದುರಾಗುತ್ತದೆ. ಆದರೆ ಅದು ತಾತ್ಕಾಲಿಕ ಮಾತ್ರ. ನಿಜವಾದ ಬದಲಾವಣೆಯು ಆರಂಭದಲ್ಲಿ ಕಷ್ಟವೆನಿಸಿದರೂ ಕೊನೆಯಲ್ಲಿ ಸುಂದರವಾಗಿರುತ್ತದೆ. ಏಕೆಂದರೆ ಕೊನೆಯಲ್ಲಿ ಸಂಪೂರ್ಣ ಹೊಸ ಜಗತ್ತಿನ ದರ್ಶನವಾಗುತ್ತದೆ!! ಆದರೆ ಇದು ಹೇಳಿದಷ್ಟು ಸುಲಭವಲ್ಲ. ಪ್ರಪಂಚದ ಅತ್ಯಂತ ಸವಾಲಿನ ಕೆಲಸವೆಂದರೆ ಅದು ಆರಾಮ ವಲಯಗಳಿಂದ ಹೊರಬರುವುದು! ಆರಾಮ ವಲಯವನ್ನು ವಿಸ್ತರಿಸುವುದಕ್ಕೂ ಮತ್ತು ಆ ಆರಾಮ ವಲಯದಿಂದ ಹೊರಬರುವುದಕ್ಕೂ ಗಮನಾರ್ಹ ವ್ಯತ್ಯಾಸವಿದೆ. ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಆಧುನಿಕ ಬದಲಾವಣೆ ನಿರ್ವಹಣೆಯ ಮೊದಲ ಹಂತವಾಗಿದೆ. ಒಂದಂತೂ ಸತ್ಯ, ಅದೆಂದರೆ ನಾವು ಸಂತೋಷದಿಂದ ಕಲಿಯುವುದಕ್ಕಿಂತ ಹೆಚ್ಚಿನದನ್ನು ನೋವಿನಿಂದ ಕಲಿಯುತ್ತೇವೆ. ಜೀವನದಲ್ಲಿ ಏನಾದರೂ ಹೊಸದನ್ನು ಕಲಿಯಬೇಕೆಂದರೆ, ಸಾಧಿಸಬೇಕೆಂದರೆ ರಿಸ್ಕ್ ಅನ್ನು ಆಲಂಗಿಸಲೇಬೇಕು. ಗುರಿಗಳನ್ನು ಸಾಧಿಸಲು ಬಯಸುವವರು ತಮ್ಮ ಆರಾಮ ವಲಯದಿಂದ ಹೊರಬರಲು ಮತ್ತು ಅಪಾಯಗಳನ್ನು ತೆಗೆದುಕೊಳ್ಳಲು ಸಿದ್ಧರಾಗಿರಬೇಕು. ಇದು ಇಂದಿನ ತುರ್ತಾಗಿದೆ. ಇದೆಲ್ಲವನ್ನೂ ಮನುಷ್ಯ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಲಿಯಲಾರ, ಕಲಿತರೆ ಅದೂ ತನ್ನ ಜೀವನದ ದಟ್ಟವಾದ ಅನುಭವಗಳಿಂದ ಮಾತ್ರ. ಈ ನೆಲೆಯಲ್ಲಿ ಅನುಭವಗಳ ಹೆಪ್ಪುಗಟ್ಟುವಿಕೆಯಿಂದ ಘನೀಕೃತವಾಗುವ ಸಾಹಿತ್ಯ ಎಲ್ಲವನ್ನೂ ಮನುಕುಲಕ್ಕೆ ಅರುಹುತ್ತದೆ. ಇಂಥಹ ಸಾಹಿತ್ಯದ ಪ್ರಕಾರಗಳಲ್ಲಿ ಒಂದಾದ ಗಜಲ್ ಮನುಕುಲಕ್ಕೆ ವ್ಯಕ್ತಿತ್ವ ವಿಕಸನವನ್ನು ತನ್ನ ಅಶಅರ್ ಮೂಲಕ ಅನಾದಿಕಾಲದಿಂದಲೂ ಹೇಳಿ ಕೊಡುತ್ತಿದೆ. ಇಂದಂತೂ ಈ ಗಜಲ್ ನ ಸೆಳೆತಕ್ಕೆ ಒಳಗಾಗದವರನ್ನು ಚಿಮಣಿ ಹಿಡಿದು ಹುಡುಕಬೇಕಾಗಿದೆ! ಅಸಂಖ್ಯಾತ ಬರಹಗಾರರು ಗಜಲ್ ಕೃಷಿಯಲ್ಲಿ ತೊಡಗಿ ಸಮೃದ್ಧವಾಗಿ ಫಸಲನ್ನು ಪಡೆಯುತ್ತಿದ್ದಾರೆ. ಅವರಲ್ಲಿ ಶ್ರೀ ಪೀರಸಾಬ್ ನದಾಫ್ ಅವರೂ ಒಬ್ಬರು.

       ಶ್ರೀ ಪೀರಸಾಬ ನದಾಫ ರವರು ೧೯೬೪ ರ ಮೇ ಒಂದರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕೆರೆಮಲ್ಲಾಪುರ ಗ್ರಾಮದ ರೈತಾಪಿ ಕುಟುಂಬ ಶ್ರೀ ಫಕ್ಕೀರಸಾಬ ನದಾಫ ಹಾಗೂ ಶ್ರೀಮತಿ ಬೀಬಿಜಾನ್ ನದಾಫ ದಂಪತಿಗಳ ಜೇಷ್ಠ ಮಗನಾಗಿ ಜನಿಸಿದರು. ಧಾರವಾಡದ ಆರ್.ಎಲ್.ಎಸ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಮೃತ್ಯುಂಜಯ ಆರ್ಟ್ಸ ಮತ್ತು ಕಾಮರ್ಸ ಪದವಿ ಕಾಲೇಜಿನಲ್ಲಿ ಬಿ.ಕಾಮ್ ಪದವಿಯನ್ನು ಪೂರೈಸಿ ಲ್ಯಾಬ್ ಟಕ್ನಿಷಿಯನ್ ಆಗಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ‘ಭೂ ವಿಜ್ಞಾನ ವಿಭಾಗ’ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಥೆ, ಕವನ, ಲೇಖನ, ಗಜಲ್ … ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ‘ಮನಸು ಮೋಜಿನ ಕುದುರಿ’ ಎಂಬ ಕವನ ಸಂಕಲನ, ‘ಫಾತಿಮಾ ಮತ್ತು ತಲ್ಲಾಖ್’ ಎಂಬ ಕಥಾ ಸಂಕಲನ, ‘ಜೀವನಪ್ರೀತಿ ಆತ್ಮದೃಷ್ಟಿ’ ಎಂಬ ಲೇಖನಗಳ ಸಂಗ್ರಹ ಹಾಗೂ ‘ಪೀರ ಹಾರಿಬಿಡು ಪಾರಿವಾಳ’ ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ.  

        ಉತ್ತಮ ಸಂಘಟಕರಾಗಿರುವ ನದಾಫ್ ರವರು ಹಲವಾರು ಸಾಹಿತ್ಯಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಸಂಘಟನೆಗಳಲ್ಲಿ ವಿವಿಧ ಹುದ್ದೆಗಳನ್ನು ತುಂಬಾ ಜವಾಬ್ದಾರಿಯಿಂದ ನಿರ್ವಹಿಸಿದ್ದಾರೆ, ನಿರ್ವಹಿಸುತ್ತಿದ್ದಾರೆ.‌ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ನಾಡಿನ ವಿವಿಧ ಸಾಹಿತ್ಯ ಸಂಘ ಸಂಸ್ಥೆಗಳು ಏರ್ಪಡಿಸುವ ತಾಲೂಕ, ಜಿಲ್ಲಾ ಹಾಗೂ ರಾಜ್ಯಮಟ್ಟದ ಸಾಹಿತ್ಯ ಸಮ್ಮೇಳನಗಳಲ್ಲಿ ಕಾವ್ಯ ಮತ್ತು ಗಜಲ್ ವಾಚನ ಮಾಡುವುದರೊಟ್ಟಿಗೆ ಸಂಪನ್ಮೂಲ ವ್ಯಕ್ತಿಯಾಗಿಯೂ ಪಾಲ್ಗೊಂಡಿದ್ದಾರೆ. ಇವರ ಕಥೆ, ಕವನ, ಲೇಖನ, ಹಾಗೂ ಗಜಲ್ ಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ನದಾಫ್ ರವರ ಸಾಹಿತ್ಯಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಗಮನಿಸಿ ರಾಜ್ಯದ ಹಲವು ಸಂಘ, ಸಂಸ್ಥೆಗಳು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಜೈ ಹೋ ಭಾರತ್ ಫೌಂಡೇಶನ್‌ ಬೆಂಗಳೂರು ರವರು ೨೦೧೭ ರಲ್ಲಿ ನೀಡಿದ ‘ವಿಶ್ವಗುರು ಬಸವಶ್ರೀ ಪ್ರಶಸ್ತಿ‌’, ಕನ್ನಡಾಂಬೆ ಕಲಾನಿಕೇತನ ಬೆಂಗಳೂರು ರವರು ೨೦೧೭ ರಲ್ಲಿ ನೀಡಿದ ‘೬೨ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’, ಕರ್ನಾಟಕ ಕಲ್ಚರಲ್ ಅಕಾಡೆಮಿ ಬೆಂಗಳೂರ ರವರು ೨೦೧೮ ರಲ್ಲಿ ನೀಡಿದ ‘ಸಮಾಜ ಸೇವಾರತ್ನ ಪ್ರಶಸ್ತಿ’, ಚೇತನ ಪ್ರಕಾಶನ ಹುಬ್ಬಳ್ಳಿ ರವರು ೨೦೧೮ ರಲ್ಲಿ ನೀಡಿದ ‘ಡಾ. ಸರೋಜಿನಿ ಚವಲಾರ ರಾಜ್ಯ ಪ್ರಶಸ್ತಿ’, ಬೆಳಕು ಸಂಸ್ಥೆ ಬೆಂಗಳೂರ ರವರು ೨೦೧೮ ರಲ್ಲಿ ನೀಡಿದ ‘ಬೆಳಕು ರಾಜ್ಯ ಮಟ್ಟದ ಪ್ರಶಸ್ತಿ’ ಬೆಂಗಳೂರ ನಗರ ಜಿಲ್ಲಾ ಸಾಹಿತ್ಯ ಪರಿಷತ್ತು ಬೆಂಗಳೂರ ರವರು ೨೦೧೯ ರಲ್ಲಿ ನೀಡಿದ ‘ಸಮಾಜ ಸೇವಾರತ್ನ ಪ್ರಶಸ್ತಿ’, ಚೇತನಾ ಫೌಂಡೇಶನ್ ಹುಬ್ಬಳ್ಳಿ ಇವರಿಂದ ಭಾವಕ್ಯತೆಯ ಕವಿ ಶ್ರೀ ಎಂ. ಡಿ. ಗೋಗೆರಿಯವರ ಹೆಸರಲ್ಲಿ ೨೦೨೧ ರಲ್ಲಿ ನೀಡಿದ ‘ಸದ್ಭಾವನಾ ಪ್ರಶಸ್ತಿ’, ಡಾ ಪಂಡಿತ್ ಪುಟ್ಟರಾಜ ಸೇವಾ ಸಮಿತಿ ನವದೆಹಲಿ ಇವರು ೨೦೨೨ ರಲ್ಲಿ ನೀಡಿದ ‘ರಾಷ್ಟ್ರೀಯ ಸೇವಾರತ್ನ ಪ್ರಶಸ್ತಿ’, ಶ್ರೀ ಕೃಷ್ಣ ಪರ್ಯಾಯ ಕೃಷ್ಣಾಪುರ ಮಠ ಹಾಗೂ ಕಥಾಬಿಂದು ಪ್ರಕಾಶನ ಇವರ ಆಶ್ರಯದಲ್ಲಿ ಶ್ರೀ ವಿದ್ಯಾಸಾಗರ ತೀರ್ಥ ಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ೨೦೨೨ ರಲ್ಲಿ ನೀಡಿದ ‘ಶ್ರೀ ಕೃಷ್ಣಾನುಗ್ರಹ ರಾಜ್ಯ ಪ್ರಶಸ್ತಿ’… ಮುಂತಾದವಗಳು ಪ್ರಮುಖವಾಗಿವೆ.

        ಇಂದು ಮನುಕುಲ ಪ್ರೀತಿಗೆ ಅಂಟಿಕೊಳ್ಳುವುದು ತುರ್ತಾಗಿ ಆಗಬೇಕಾದ ಕಾರ್ಯವಾಗಿದೆ. ಕಾರಣ, ದ್ವೇಷವು ಹೊರಲು ತುಂಬಾ ದೊಡ್ಡ ಹೊರೆಯಾಗಿದೆ. ಅಂತೆಯೇ “ಜಗತ್ತಿಗೆ ನಿಜವಾಗಿಯೂ ಬೇಕಾಗಿರುವುದು ಹೆಚ್ಚು ಪ್ರೀತಿ ಮತ್ತು ಕಡಿಮೆ ದಾಖಲೆಗಳು” ಎಂಬ ಅಮೇರಿಕನ್ ನಟಿ, ಗಾಯಕ ಮತ್ತು ಲೇಖಕಿ ಪರ್ಲ್ ಬೈಲಿ ಯವರ ಹೇಳಿಕೆ ಅಕ್ಷರಶಃ ನಿಜವಾಗಿದೆ. ಪ್ರೀತಿ ಎಂಬುದು ಶಾಶ್ವತತೆಯ ಲಾಂಛನವಾಗಿದೆ. ಇದು ಕಾಲದ ಎಲ್ಲಾ ಕಲ್ಪನೆಯನ್ನು ಗೆಲ್ಲುತ್ತದೆ; ಪ್ರಾರಂಭದ ಎಲ್ಲಾ ಸ್ಮರಣೆಯನ್ನು, ಅಂತ್ಯದ ಎಲ್ಲಾ ಭಯವನ್ನು ಅಳಿಸಿ ಹಾಕುತ್ತದೆ. ಈ ನೆಲೆಯಲ್ಲಿ ನಮ್ಮ ಹೃದಯವನ್ನು ಎಂದಿಗೂ ಮುರಿಯದ, ಯಾವಾಗಲೂ ನಮ್ಮೊಂದಿಗೆ ಇರುವ, ಯಾವಾಗಲೂ ನಮ್ಮನ್ನು ಸಂತೋಷ ಪಡಿಸುವ, ಎಲ್ಲದರಲ್ಲೂ ನಮ್ಮನ್ನು ಗೌರವಿಸುವ, ಪ್ರೀತಿಸುವ ಯಾರನ್ನಾದರೂ ಹುಡುಕಬೇಕು ಎಂದು ಹುಡುಕುತ್ತಿರುವಾಗ ಸಿಕ್ಕಿದ್ದೇ ಈ ಗಜಲ್. ಸ್ವರ್ಗವು ನಿಜವಾಗಿಯೂ ಒಂದು ಭಾವವಾಗಿದ್ದರೆ, ಅದು ಗಜಲ್ ನ ಹೃದಯದಲ್ಲಿ ಅಂದರೆ ಅದರ ಅಶಅರ್ ನಲ್ಲಿ ನೆಲೆಗೊಂಡಿದೆ. ಈ ಮಾರ್ಪೀಗದಲ್ಲಿ ‘ಪೀರ ಹಾರಿಬಿಡು ಪಾರಿವಾಳ’ ಎಂಬ ಗಜಲ್ ಸಂಕಲನವನ್ನು ಗಮನಿಸಿದಾಗ ಮಾಶುಕಾಳ ಕಲರವ, ಪ್ರೀತಿ-ಪ್ರೇಮ-ಮಾನವೀಯ ಮೌಲ್ಯಗಳ ಹದಬರಿತ ಹೂರಣ, ಅಂತರಂಗದ ನೋವಿನ ಮಿಡಿತ, ಸೂಫಿಯ ಸಹಬಾಳ್ವೆ, ಭ್ರಾತೃತ್ವ, ಸಮನ್ವಯತೆ, ನಾಡು ನುಡಿಯ ಪ್ರೇಮ, ಏಕತೆ, ಐಕ್ಯತೆಯ ಭಾವದುಂಬಿ, ಧರ್ಮದ ಅಮೃತಧಾರೆ, ಸಾಮಾಜಿಕ ಬಾಂಧವ್ಯ, ಸಂಬಂಧಗಳ ಆಲಿಂಗನ… ಎಲ್ಲವೂ ಮೃದುವಾಗಿ, ಮೆದುವಾಗಿದ್ದು ಸಹೃದಯ ಓದುಗರ ಮನವನ್ನು ತಟ್ಟುವಂತಿವೆ.

“ಸತ್ಯ ಸಾಕ್ಷಾತ್ಕಾರಕ್ಕೆ ಅನುಭಾವಿಗಳ aಡಿ ದಾರಿದೀಪ
ರಬ್ನ ಅನುಸಂಧಾನಕ್ಕೆ ಮಾರ್ಗ ಕರುಣಿಸಿದವ ಗುರು”

ಗುರು ನಮಗೆ ಏನು ಮಾಡಬೇಕೆಂದು ಹೇಳುವುದಿಲ್ಲ, ಬದಲಿಗೆ ಅವನು ನಮಗೆ ಜ್ಞಾನವನ್ನು ನೀಡುತ್ತಾನೆ. ಅದರೊಂದಿಗೆ ನಾವು ಏನು ಮಾಡಬೇಕೆಂದು ನಿರ್ಧರಿಸಲು ಕಾರಣನಾಗುತ್ತಾನೆ. ಹಳೆಯ ದ್ರಾಕ್ಷಾರಸವನ್ನು ಹೊಸ ದ್ರಾಕ್ಷಾರಸದೊಂದಿಗೆ ಬೆರೆಸುವುದು ಮೂರ್ಖತನ. ಆದರೆ ಹಳೆಯ ಬುದ್ಧಿವಂತಿಕೆಯನ್ನು ಹೊಸ ಬುದ್ಧಿವಂತಿಕೆಯೊಂದಿಗೆ ಬೆರೆಸುವುದು ಪ್ರಬುದ್ಧತೆಯಾಗುತ್ತದೆ. ಇದನ್ನು ಗುರು ಉಪದೇಶದ ಮೂಲಕ ಹೇಳದೆ ತನ್ನ ನಡೆಯ ಮೂಲಕ ಶಿಷ್ಯನೆದೆಗೆ ವರ್ಗಾಯಿಸುತ್ತಾನೆ. ಈ ಹಿನ್ನೆಲೆಯಲ್ಲಿ ಮೇಲಿನ ಷೇರ್ ಗಮನಿಸಿದಾಗ ನಮಗೆ ಗುರುವಿನ ಮಹತ್ವ ಅರ್ಥವಾಗುತ್ತದೆ. ತನ್ನ ಅನುಭಾವದ ಬೆಳಕಲ್ಲಿ ಸತ್ಯ ಶೋಧನೆಗೆ ದಾರಿದೀಪವಾಗಿ ಶಿಷ್ಯಂದಿರನ್ನು ಅವರ ಅಂತರಂಗದೊಂದಿಗೆ ಅನುಸಂಧಾನ ಮಾಡಲು ಹಚ್ಚುತ್ತಾನೆ. ಇಲ್ಲಿ ಸುಖನವರ್ ಪೀರ ನದಾಫ್ ರವರು ಶಿಷ್ಯನ ಬೆಳವಣಿಗೆಯಲ್ಲಿ ಗುರುವಿನ ಸ್ಥಾನ ಕುರಿತು ವಿವೇಚನೆಗೆ ಹೆಚ್ಚುವಂತೆ ದಾಖಲಿಸಿದ್ದಾರೆ.

“ಪ್ರೀತಿಯ ಹೊಳೆ ಹರಿಸಿ ನಿಂತಿರುವೆ ಜೀವನವ ಕಟ್ಟಿಕೊಳ್ಳಲು
ನೀತಿ ನಿಯಮಗಳ ಕಟ್ಟು ನಿಟ್ಟುಗಳೇಕೆ ಪ್ರೇಮವ ಕಟ್ಟಿಕೊಳ್ಳಲು”

ಪ್ರೀತಿಗೆ ಗುರುಗಳಿಲ್ಲ,
ಪ್ರೀತಿ ಮಾಡಲು ಯಾವುದೇ ಮಂತ್ರವಿಲ್ಲ. ಪ್ರೀತಿಯು ಯಾವುದೇ ಅಡೆತಡೆಗಳನ್ನು, ನೀತಿ-ನಿಯಮಗಳನ್ನು ಗುರುತಿಸುವುದಿಲ್ಲ. ಎಲ್ಲವನ್ನೂ ಮೀರಿ ಸಾಗುತ್ತದೆ. ಇದೊಂದು ಸಂಪೂರ್ಣ ವಿಷಯವಾಗಿದೆ, ನಾವು ಕೇವಲ ಅದರ ತುಂಡುಗಳು ಮಾತ್ರ. ಈ ನೆಲೆಯಲ್ಲಿ ಪ್ರೀತಿ ಎನ್ನುವುದು ಅನುಪಮ ಭಾವವನ್ನು ಮಿಡಿಯುವ ಜೀವ ಸಂವೇದನೆಯಾಗಿದೆ. ಇಲ್ಲಿ ಶಾಯರ್ ಪೀರ ನದಾಫ್ ರವರು ‘ಕಟ್ಟಿಕೊಳ್ಳಲು’ ಎನ್ನುವ ರದೀಫ್ ಬಳಸಿಕೊಂಡು ಪ್ರೇಮಿಯೊಬ್ಬನ ಅಂತರಂಗದ ಹಂಬಲವನ್ನು ತಮ್ಮ ಷೇರ್ ನಲ್ಲಿ ಸೆರೆ ಹಿಡಿದಿದ್ದಾರೆ.

“ಪ್ರೀತಿಯು ಅನೇಕರು ಅನುಭವಿಸುವ ಮತ್ತು ಕೆಲವರು ಆನಂದಿಸುವ ಭಾವನೆಯಾಗಿದೆ” ಎಂಬ ಅಮೇರಿಕನ್ ನಾಟಕ ವಿಮರ್ಶಕ ಮತ್ತು ಪತ್ರಿಕೆಯ ಸಂಪಾದಕ ಜಾರ್ಜ್ ಜೀನ್ ನಾಥನ್ ರವರ ಮಾತನ್ನು ಗಜಲ್ ಸಾರುತ್ತ ಬಂದಿದೆ. ಈ ಹಿನ್ನೆಲೆಯಲ್ಲಿ ಪ್ರೀತಿಯು ಸ್ವರ್ಗದಂತಿದೆ, ಆದರೆ ಅದು ನರಕದಂತೆ ನೋಯಿಸಬಹುದು ಎಂಬುದನ್ನೂ ಗಜಲ್ ದಾಖಲಿಸುತ್ತ ಬಂದಿದೆ. ಗಜಲ್ ಗೋ ಪೀರ್ ನದಾಫ್ ರವರಿಂದ ನಮ್ಮ ಗಜಲ್ ಲೋಕ ಮತ್ತಷ್ಟು, ಮೊಗೆದಷ್ಟೂ ಶ್ರೀಮಂತವಾಗಲಿ ಎಂದು ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ.

“ಮಾತುಕತೆ ಜಾರಿಯಲ್ಲಿದೆ ಫಲಿತಾಂಶದ ಹೊರತಾಗಿಯೂ
ಎಲ್ಲದರ ಜೊತೆಗೆ ಒಂದು ಹೊಸ ವಿಷಯ ಹೊರಬರುತ್ತದೆ”
-ಏತಬಾರ್ ಸಾಜಿದ್

ಗಜಲ್ ಬಗ್ಗೆ, ಗಜಲ್ ಕಾರರ ಬಗ್ಗೆ, ವಿಶೇಷವಾಗಿ ಗಜಲ್ ನ ಪರಂಪರೆ ಬಗ್ಗೆ ಬರೆಯುತಿದ್ದರೆ ಸಮಯ ಸರಿಯುವುದೇ ಗೊತ್ತಾಗುವುದಿಲ್ಲ. ಆದಾಗ್ಯೂ ಆ ಕಾಲದ ಮುಂದೆ ಮಂಡಿಯೂರಲೆಬೇಕಲ್ಲವೇ.‌ ಅಂತೆಯೇ ಈ ಲೇಖನಿಗೆ ಸದ್ಯ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ಗುರುವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಟೇಕೇರ್…!!

ಧನ್ಯವಾದಗಳು..

—————[

ಡಾ. ಮಲ್ಲಿನಾಥ ಎಸ್. ತಳವಾರ, 

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top