ಸಿದ್ದರಾಮೇಶ್ವರರ ವಚನ ವಿಶ್ಲೇಷಣೆ-ಪ್ರೊ. ಜಿ ಎ. ತಿಗಡಿ.

ವಚನ ವಿಶೇಷ

ಸಿದ್ದರಾಮೇಶ್ವರರ ವಚನ

ವಿಶ್ಲೇಷಣೆ-ಪ್ರೊ. ಜಿ ಎ. ತಿಗಡಿ.

ಉದಕವೆಲ್ಲ ಒಂದೆ: ಈಚಲವ ಆಶ್ರಯಿಸಿ ಮದ್ಯಪಾನವೆನಿಸಿತ್ತು ; ದೇಹವೆಲ್ಲ ಒಂದೆ: ಅಂಗನೆಯರ ಆಶ್ರಯಿಸಿ ಭವಕ್ಕೆ ಬೀಜವಾಯಿತ್ತು ; ಲಿಂಗವ ಆಶ್ರಯಿಸಿ ಭವಾರಣ್ಯಕ್ಕೆ ದಾವಾನಲವೆನಿಸಿತ್ತು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.

     ನೀರೆಲ್ಲವೂ ಒಂದೇ ಆಗಿರುತ್ತದೆ.   ಆದರೆ ಅದೇ ನೀರು ಈಚಲ ಮರದ ಆಶ್ರಯ ಪಡೆದರೆ ಮಧ್ಯವೆಂದು ಕರೆಸಿಕೊಳ್ಳುತ್ತದೆ.  ಕಲ್ಪವೃಕ್ಷವನ್ನು (ತೆಂಗಿನ ಮರ)ಆಶ್ರಯಿಸಿದರೆ ಅಮೃತವೆನಿಸುತ್ತದೆ.  ಅದೇ ರೀತಿ ಮಾನವ ದೇಹಗಳೆಲ್ಲವೂ ಒಂದೇ,  ಈ ದೇಹ ಅಂಗನೆಯರನ್ನು(ಕಾಮ ಕ್ರೋಧಾದಿ ಅರಿಷಡ್ವರ್ಗಗಳನ್ನು) ಆಶ್ರಯಿಸಿದರೆ  ಭವಿಯ ಆರಂಭಕ್ಕೆ ಬೀಜವಾಗುತ್ತದೆ.   ಆದರೆ ಅದೇ ದೇಹ ಲಿಂಗವನ್ನು ಆಶ್ರಯಿಸಿದರೆ ಭವಾರಣ್ಯವನ್ನು ಸುಟ್ಟು ಹಾಕುತ್ತದೆ ಎಂದು ಸಿದ್ದರಾಮಯ್ಯನವರು ಹೇಳುತ್ತಾರೆ.

       ನಾನಾ  ರೀತಿಯಲ್ಲಿರುವ ದ್ರವರೂಪದ ನೀರು ಒಂದೇ ಆಗಿದ್ದರೂ,  ತನ್ನ ಸಂಪರ್ಕಕ್ಕೆ ಬಂದ ವಸ್ತುಗಳಿಂದಾಗಿ, ಅದು ಬೇರೆ ಬೇರೆ ರೀತಿಯ ಹೆಸರಿನಿಂದ ಕರೆಸಿಕೊಳ್ಳುತ್ತದೆ.   ಈಚಲ ಮರದ ಮೂಲಕ ದೊರೆಯುವ ದ್ರವ ರೂಪದ ನೀರು ಮದ್ಯ, ಸಾರಾಯಿ ಎಂದೆಲ್ಲ ಕರೆಸಿಕೊoಡರೆ,  ಕಳ್ಳಿಯ ಮೂಲಕ ದೊರಕುವ ನೀರು ವಿಷಕಾರಿ ಹಾಲೆನಿಸುತ್ತದೆ.  ತೆಂಗಿನ ಮರದ ಮೂಲಕ ಲಭಿಸುವ ಎಳೆನೀರು ಹಾಗೂ ಕಬ್ಬಿನ ಮೂಲಕ ದೊರಕುವ  ರುಚಿಕರ ಹಾಲು ಅಮೃತಸಮಾನವೆನಿಸಿಕೊಳ್ಳುತ್ತವೆ.  ಹಾಗೆಯೇ ಈ ದೇಹದ ನಿರ್ಮಾಣ, ರೂಪರೇಷೆಗಳು (Structure) ಕೂಡ ಒಂದೇ ರೀತಿಯಾಗಿದ್ದು , ಸಂಸರ್ಗವಶದಿಂದಾಗಿ ಅದು ಒಳ್ಳೆಯದೂ ಕೆಟ್ಟದ್ದೂ ಎನಿಸಿಕೊಳ್ಳುತ್ತದೆ.  ಅಂಗನೆಯರ(ಕಾಮ ಕ್ರೋಧಾದಿ ಅರಿಷಡ್ವರ್ಗಗಳು ) ಸಂಗ ಮಾಡಿ ಅವರ ಆಶ್ರಯದಲ್ಲಿದ್ದರೆ ಸಂಸಾರಿಕ ಬಂಧನಕ್ಕೊಳಗಾಗಿ ಜನನ ಮರಣಗಳ ಭವಾವಳಿಯ  ಚಕ್ರದಲ್ಲಿ ಸಿಲುಕುತ್ತದೆ.  ಆದರೆ ಅದೇ ದೇಹ ಲಿಂಗವನ್ನು  ಆಶ್ರಯಿಸಿ ಸದಾಕಾಲ ಅದರ ಸಂಗದಲ್ಲಿದ್ದರೆ ಭವಾವಳಿಯ ಚಕ್ರದಿಂದ ದೂರಾಗಿ ಮುಕ್ತವಾಗುತ್ತದೆ ಎಂಬುದು   ಸಿದ್ದರಾಮಯ್ಯನವರ ನಿಲುವಾಗಿದೆ.

     ಇದಕ್ಕೆ  ಸಂವಾದಿಯಾಗಿ ಬಸವಣ್ಣನವರ ವಚನವೊಂದನ್ನಿಲ್ಲಿ  ಗಮನಿಸಬಹುದು.

 ನೆಲನೊಂದೆ ಹೊಲಗೇರಿ-ಶಿವಾಲಯಕ್ಕೆ;
ಜಲವೊಂದೆ ಶೌಚಾಚಮನಕ್ಕೆ;
ಕುಲವೊಂದೆ ತನ್ನ ತಾನರಿದವಂಗೆ;
ಫಲವೊಂದೆ ಷಡುದರುಶನ ಮುಕ್ತಿಗೆ;
ನಿಲವೊಂದೆ, ಕೂಡಲಸಂಗಮದೇವಾ, ನಿಮ್ಮನರಿದವಂಗೆ.

     ” ಪ್ರಸಾದ ಕಾಯುವ ಕೆಡಿಸಲಾಗದು ” ಎಂಬಂತೆ,  ಈ ಕಾಯವನ್ನು ಹೆಣ್ಣು, ಹೊನ್ನು, ಮಣ್ಣು ಇತ್ಯಾದಿ,  ಅನ್ಯವಿಷಯಕ್ಕೆಳಸದೆ ಶರಣರ ಆಶ್ರಯಕ್ಕೆ ತರಬೇಕೆಂಬ ಬಯಕೆ ಸಿದ್ದರಾಮಯ್ಯನವರದಾಗಿದೆ.  ಅಂಗನೆಯರು ಎಂದರೆ,  ಕಾಮ ಕ್ರೋಧಾದಿ ಅರಿಷಡ್ವರ್ಗಗಳು.  ಇವುಗಳ  ಸಂಗಕ್ಕೊಳಗಾದರೆ ಪುನ:  ಭವಾವಳಿಯ ಚಕ್ರದಲ್ಲಿ ಸಿಲುಕಿ ಬಿಡುತ್ತೇವೆ.  ಕಾರಣ ಆದಷ್ಟು ಇವುಗಳ ಸಂಗದಿಂದ ದೂರವಿರಬೇಕು. ಎಂದಿಗೂ ಇವುಗಳನ್ನು ಆಶ್ರಯಿಸಬಾರದು.    ಭಗವಂತನಾಗಲು ಮಾನವ ಶರೀರಿಯಾಗಿ ಭೂಮಿಗೆ ಬಂದ ಈ ಶುದ್ಧಾತ್ಮನನ್ನು ಕ್ಷಣಿಕ ಸುಖ ಭೋಗಗಳ ವಾಂಛೇಗಳಿಗೆ ಬಲಿಯಾಗದೆ ಚೈತನ್ಯಸ್ವರೂಪಿ ಲಿಂಗವನ್ನು ಆಶ್ರಯಿಸಿ ಸದಾ ಅದರ ಸಂಗದಲ್ಲಿರಬೇಕು.   ಲಿಂಗಯ್ಯನ ಮೂಲಕ ಪ್ರಾಣಲಿಂಗದ ಸಂಗ ಮಾಡಿ ಸತತ ಸಾಧನಗೈಯ್ಯುತ್ತ  ಭಾವಲಿಂಗದ ಬೆಳಗನ್ನು ದರ್ಶಿಸುತ್ತಾ ಮಹಾ ಬೆಳಗಿನಲ್ಲಿ ಒಂದಾಗಿ ಪರಮ ಸುಖಿಯಾಗಿರಬೇಕೆಂಬುದು ಸಿದ್ದರಾಮಯ್ಯನವರ ನಿಲುವಾಗಿದೆ

———————————————-

ಪ್ರೊ. ಜಿ ಎ. ತಿಗಡಿ.

Leave a Reply

Back To Top