ಅಂಕಣ ಬರಹ
ಕ್ಷಿತಿಜ
ಭಾರತಿ ನಲವಡೆ
ಮಳೆಯ ಪುಳಕ
“ನನ್ನ ದೋಣಿ ನೋಡು ಎಷ್ಟು ದೂರ ಹೋಗ್ತಾ ಇದೆ, ನಿನ್ನದು ಇನ್ನೂ ಹಾಗೆ ನಿಂತಿದೆ,”ಎಂದು ಕಾಗದದ ದೋಣಿಯನ್ನು ಹರಿವ ಮನೆಯ ಮುಂದಿನ ನೀರಿನಲ್ಲಿ ತೇಲಿ ಬಿಟ್ಟು ಅದರೊಂದಿಗೆ ಮಳೆಯಲ್ಲಿ ನೆನೆಯುತ್ತ ಓಡುವ ಸಂಭ್ರಮ, ಹೇಳತೀರದ ಸಾಹಸ ಮಾಡಿದಂತ ಇಳೆಯೊಡನೆ ಮಳೆಯ ಸಂಗಮದ ಮುಂಗಾರಿನ ಪುಳಕ ಮರೆಯಲಾಗದ ಜಳಕ ಕಣ್ಮುಂದೆ ಬಾಲ್ಯದ ಝಲಕು ಹಾಯ್ದುಹೋದಂತೆ ಒಂದು ಕ್ಷಣ ಮುದದಿ ಮನ ಅರಳಿದಂತಾಯಿತು. ಮಳೆಯಲ್ಲಿ ನೆನೆದು ಅಪ್ಪ ಅಮ್ಮನಿಂದ ಬೈಸಿಕೊಂಡು ಬಿಸಿ ಚಹ ಚುರುಮುರಿ ಸವಿದು ಅಜ್ಜಿಯೊಡನೆ ಮಾತನಾಡುತ್ತ ನಡು ನಡುವೆ ಸೀನುತ್ತ ತುಳಸಿ, ಅಲ್ಲ, ಗೌತಿಎಲೆಯ ಕಷಾಯ ಕುಡಿದು ಮರುದಿನ ಶಾಲೆಗೆ ಹೋಗುವಾಗ ರೈನ್ಕೋಟ್, ಛತ್ರಿ ಹಿಡಿದು ಅಜ್ಜಿಯ ಕಷಾಯದ ಮಹಿಮೆಯ ತಿಳಿಸಿ ಮನೆ ದಾಟುವವರೆಗೆ ಛತ್ರಿ ಹಿಡಿದುಕೊಂಡು ಮನೆ ದಾಟಿದ ಮೇಲೆ ಮತ್ತೆ ಮಳೆಯಲಿ ನೆನೆದು ಶಾಲೆ ಸಮೀಪ ಬಂದಾಗ ಮತ್ತೆ ಛತ್ರಿ ಬಿಡಿಸಿ ತರಗತಿಗೆ ಬಂದುಚಳಿಯಿಂದ ನಡುಗುವಾಗ “ಛತ್ರಿ ರೈನ್ಕೋಟ ಇದ್ರೂ ಅದ್ಹೇಗೆ ಒದ್ದೆಯಾದ್ರಿ?”ಎಂಬ ಗುರುಗಳ ಮಾತಿಗೆ ನಕ್ಕು ಮಳೆ ತುಂಬಾ ಜೋರಾಗಿತ್ತು ಎಂಬ ಮಾತನ್ನು ತಲೆಬಗ್ಗಿಸಿ ಹೇಳುವಾಗಲೇ ಅವರಿಗೆ ಗೊತ್ತಾಗಿ ಬಿಡುತಿತ್ತು ಇವರು ಬೇಕೆಂದಲೇ ಒದ್ದೆಯಾಗಿದ್ದಾರೆ ಎಂದು.
ಬಾಲ್ಯದಲ್ಲಿ ಮಳೆ, ಚಳಿ, ಬಿಸಿಲ ಲೆಕ್ಕಿಸದೆ ಮೈಮರೆತು ನಲಿದ ದಿನಗಳನ್ನು ಮೆಲುಕು ಹಾಕುತ್ತಾ ಕೈಯಲ್ಲಿದ್ದ ಬಿಸಿ ಚಹ ನೆನಪುಗಳ ರಿಂಗಣಿಸಿ ಮನದಲ್ಲಿ ಮಡುಗಟ್ಟಿದಕಳೆದ ಚಣಗಳು ಕಾರ್ಮೋಡ ಕರಗಿ ಮಳೆಯಾದಂತೆ ಒಂದೊಂದಾಗಿ ಕಣ್ಮುಂದೆ ಮಿಂಚಂತೆ ಬಂದು ಮರೆಯಾಗತೋಡಗಿದಾಗ ಆಗಿನ ಆ ಆನಂದ ಮರಳಿ ಪಡೆಯಲಾಗದ ಬೇಸರ ಮತ್ತೆ ಮಳೆಯಾಗಿದೆ ಎಂಬಂತೆ ಮರಳಬಾರದೇ… ಎನ್ನುವ ಆಶಯ ಭಾವಪಟಲದಿ ಓಡಮೂಡುತ್ತಿರುವಾಗ ಸಿಡಿಲಿಗೆ ಬೆದರಿದ ಮಗನು ಅಮ್ಮ ಅಂದಾಗಲೇ ವಾಸ್ತವಕ್ಕೆ ಪಯಣ.
ಮುಂಗಾರು ಮಳೆಯ ಮೊದಲ ಇಳೆಯ ಸ್ಪರ್ಶದ ಪರಿಮಳ ತಿಂದು ಬಿಡಲೇ ಎಂಬಂತೆ ಆಸೆಯಿಂದ ಮಣ್ಣನು ನೋಡಿ ಮನದಲ್ಲಿ ಆಸ್ವಾದಿಸಿದ ರುಚಿಗೆ ಸರಿಸಾಟಿ ಇಲ್ಲ. ಅಂದ ಹಾಗೆ ಮಳೆ ಅಂದಾಗ ಭಾವಯಾನದಿ ಪಯಣಿಸಿದ ಈ ಎಲ್ಲ ಹೃದಯಂಗಮವಾದ ಫಲಕುಗಳನ್ನು ಚಿತ್ತಾರಂತೆ ಮೂಡಿಸಿಕೊಳ್ಳಲು ಇಂದು ಮಕ್ಕಳಿಗೆ ಅವಕಾಶವಿಲ್ಲ. ‘ನೆಗಡಿ ಆಗುತ್ತೆ ಹುಷಾರು! ನಡಿ ಒಳಗೆ ಜ್ವರ ಬರುತ್ತೆ ಮಳೆಯಲ್ಲಿ ನೆನೆಯಬೇಡ “ಎಂದು ಅವರಿಗೆ ಆರೋಗ್ಯದ ಬಗ್ಗೆ ಎಚ್ಚರಿಸುವದು ದಿಟವಾದರೂ ಅತಿಯಾದ ಕಾಳಜಿಯನು ತೋರಿ ಅಪರೋಕ್ಷವಾಗಿ ಅವರನ್ನು ಕೋಣೆಯ ಕೂಸಾಗಿಸುವಲ್ಲಿ ಸಾಲದ್ದಕ್ಕೆ ಅವರಿಗೆ ಅವರ ನೆಚ್ಚಿನ ಕಾರ್ಟೂನ್ ಅಥವಾ ಮೊಬೈಲ್ನಲ್ಲಿ ಗೇಮ್ಗಳನ್ನು ಆಡುತ್ತ ನೋಡುತ್ತಾ ಕೂತಿರಲು ಹೇಳುತ್ತೇವೆ, ಮಳೆಯಲ್ಲಿ ನೆನೆದು ಅನುಭವಿಸುವ ಪುಳಕದ ಮಜವೇ ಬೇರೆ.
ಮಳೆಗಾಲದಲ್ಲಿ ನದಿ ತೊರೆಗಳು ತುಂಬಿ ಹರಿಯುತ್ತಿರುತ್ತವೆ, ಆಗ ಮಕ್ಕಳಿಗೆ ಅವುಗಳ ಸನಿಹ ಹೋಗದಂತೆ ಎಚ್ಚರಿಕೆಯನ್ನು ನೀಡುವದು ಸಹಜ. ಮಳೆ ಕೆಲವೊಮ್ಮೆ ನಿರಂತರವಾಗಿ ಸುರಿದು ಅತೀಯಾದಾಗ ಅಮೃತವು ವಿಷ ಎಂಬಂತೆ ಬೆಳೆ , ಆಸ್ತಿ ಹಾನಿಯ ಜೊತೆಗೆ ಜೀವಹಾನಿಯಾಗುವಂತ ಘಟನೆಗಳು ಇಲ್ಲವೆಂದಿಲ್ಲ, ಹಾಗೆಯೇ ಕಡಿಮೆ ಮಳೆಯಾದಾಗ ಕೂಡ ರೈತನ ಪಾಡು ಹೇಳತೀರದು. ಗಗನಚುಂಬಿ ಕಟ್ಟಡಗಳು ತಲೆ ಎತ್ತಲು ಆಗಸದೆತ್ತರ ಬೆಳೆದ ಮರಗಳನ್ನು ಧರೆಗರುಳಿಸುವದು ಎಲ್ಲಿಯ ನ್ಯಾಯ? ಮುಂದಿನ ತಲೆಮಾರಿಗೆ ಗಿಡ ಮರಗಳನ್ನು, ಪ್ರಾಣಿ, ಪಕ್ಷಿಗಳನ್ನು ಕೇವಲ ಚಿತ್ರದಲ್ಲಿ ಒಂದು ಪರಿಚಯಾತ್ಮಕವಾದ ದಾಖಲೆಯಾಗಿ ತೋರಿಸುವ ದಿನಗಳು ಬಹಳ ದೂರವಿಲ್ಲ!
ಮಳೆ ಅದು ಸಕಾಲದಲ್ಲಾದರೆ ಅನುಕೂಲ. ಇಂದು ಹವಾಮಾನ ವೈಪರಿತ್ಯದಿಂದ ಮಳೆಗಾಲ ಯಾವಾಗ ಪ್ರಾರಂಭ ವಾಗುತ್ತೋ? ಬೇಸಿಗೆ ಬಿಸಿಲು ಇನ್ನು ಮುಗಿದೇ ಇಲ್ಲವೋ ಎಂಬ ದುಮ್ಮಾನಕ್ಕೆ ನಿಸರ್ಗವೇ ಕಾಲಚಕ್ರದಿ ಉತ್ತರ ಕೊಡುತ್ತದೆ.
ಮಳೆಗಾಲಕ್ಕಾಗಿಯೇ ಹಪ್ಪಳ, ಸಂಡಿಗೆ, ಮಜ್ಜಿಗೆ ಮೆಣಸು (ಬಾಳಕ )ಕಷಾಯದ ಪುಡಿ, ಮೆಂತೆ ಹುಡಿ ಇವುಗಳೊಂದಿಗೆ ವಿಧವಿಧದ ಚಟ್ನಿಗಳು, ದ್ವಿದಳ ಧಾನ್ಯಗಳನ್ನು ಒಣಗಿಸಿ ಕಾಳಿನ ಪಲ್ಯ ಇದರಂತೆ ಹುರುಳಿಹಿಟ್ಟಿನ ಮತ್ತು ಹೆಸರು ಕಡಲೆ ಬೇಳೆಯ ಹಿಟ್ಟಿನ ಜುಣಕ ಇವುಗಳ ಸವಿಯೊಂದಿಗೆ ಮಳೆಗಾಲದ ವಿಶೇಷತೆ ಈ ರುಚಿಯನ್ನು ಇಮ್ಮಡಿಗೊಳಿಸುತ್ತದೆ.
ಶಾಲೆಯಿಂದ ಮನೆಗೆ ಬಂದ ಮಕ್ಕಳಿಗೆ, ಕೆಲಸದಿಂದ ಬಂದವರಿಗೆ ಚಕ್ಕುಲಿ, ಕೊಡಬಳೆ, ಕರಿದವಲಕ್ಕಿ, ಲಾಡು, ಚೂಡ ಇವುಗಳನ್ನು ಮೊದಲಾಗಿ ಮಾಡಿಡುತಿದ್ದರು. ಈಗಿನ ಮಕ್ಕಳಿಗೆ ಮ್ಯಾಗಿ, ನೂಡಲ್ಸ್, ಪಿಜ್ಜಾ, ಬರ್ಗರ್, ಚಿಪ್ಸ್, ಕಚೋರಿ, ಸಮೋಸ ಹೀಗೆಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.ಅಮ್ಮ, ಅಜ್ಜಿಯ ಕೈರುಚಿಗಿಂತ ಆನ್ಲೈನ್ ನಲ್ಲಿ ಆರ್ಡರ್ ಮಾಡುವ ನಮ್ಮ ಮಕ್ಕಳ ಸಾಧನೆಯೇ ನಮಗೆ ಹೆಮ್ಮೆ.
ಮುಂಗಾರು ಮಳೆಯಲಿ ಕೊರೆವ ಚಳಿಯಲಿ, ಹಸಿರ ಇಳೆಯ ಸೊಬಗನ್ನು ಕಣ್ತುಂಬಿಕೊಳ್ಳುವಾಗ ಮತ್ತೆ ನನ್ನ ಬಾಲ್ಯ ಮರಳಿ ಬರಬಾರದೇ, ಕಾಗದದ ದೋಣಿಯ ಮೇಲೆ ನನ್ನ ಹೆಸರು ಬರೆದು ಅದು ವೇಗವಾಗಿ ಓಡುವಾಗ ಏನನ್ನೋ ಗೆದ್ದಂತೆ, ಪಟ ಪಟನೆ ಬೀಳುವ ಆಣೆಕಲ್ಲುಗಳನ್ನು ಹೆಕ್ಕಿ ತಿನ್ನುವ ಆ ಸಾಹಸ ಹೇಳತೀರದ ಆತ್ಮಸ್ಥೈರ್ಯ ಸ್ವಾಭಾವಿಕವಾಗಿ ಮೈದಳೆದ ಹುಮ್ಮಸ್ಸನ್ನು ಪಡೆಯಲಾಗದು ಎಂದು ಯೋಚಿಸುತ್ತಿರುವಾಗ “ಮಳೆ ಬರ್ತಾ ಇದೆ, ನೀರು ಸಿಡಿತಾ ಇದೆ” ಎಂದು ಪಾತ್ರೆಗಳನ್ನು ಟಪ ಟಪನೆ ಸೋರುವ ಹಂಚಿನಿಂದ ಬೀಳುವಮಳೆಯ ನೀರನ್ನು ಸಂಗ್ರಹಿಸಲು ಇಡುವಾಗ ಮತ್ತೆ ವಾಸ್ತವಕ್ಕೆ ಮರಳಿದಾಗ ಮಧುರ ನೆನಪುಗಳು ಹೃದಯ ಸ್ಪರ್ಶಿಸಿ ಮನದಿ ಹರ್ಷಿಸಿ ಈ ಎಲ್ಲ ಅನುಭವಗಳನ್ನು ಸವಿಯಲು ಅವಕಾಶ ಮಾಡಿ, ತಪ್ಪನ್ನು ಕ್ಷಮಿಸಿ ರಮಿಸಿದ ಹೆತ್ತವರ ರೂಪ ಕಣ್ಮುಂದೆ ಕ್ಷಣ ಹೊತ್ತು ನಕ್ಕು ಹರಸಿದ ಭಾವ ಇಂದಿನ ಸಂತಸವನ್ನು ದ್ವಿಗುಣಗೊಳಿಸಿದಂತೆ ಇಂದಿಗೂ ಈ ಮಳೆ ಹನಿಗಳ ಲೀಲೆಯನ್ನು ನಮ್ಮ ಮಕ್ಕಳು ಅನುಭವಿಸಲಿ ಅಲ್ಲವೇ?
ಭಾರತಿ ನಲವಡೆ
ಭಾರತಿಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಮಂಗಳವಾಡದಲ್ಲಿಸಹಶಿಕ್ಷಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾಸಾಹಿತ್ಯಪುರಸ್ಕಾರ2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆಸಲ್ಲಿಸುತ್ತಿದ್ದಾರೆ
ಈ ಲೇಖನ ತುಂಬಾ ಉತ್ತಮವಾಗಿದೆ ಟೀಚರ್