ಮರೆಯುವ ಚಟ-ಲಲಿತ ಪ್ರಬಂಧ,ಡಾ ವೈ.ಎಂ.ಯಾಕೊಳ್ಳಿ

ಲಲಿತ ಪ್ರಬಂಧ

ಮರೆಯುವ ಚಟ

ಲಲಿತ ಪ್ರಬಂಧ

ಡಾ ವೈ.ಎಂ.ಯಾಕೊಳ್ಳಿ

ಜಗತ್ತಿನಲ್ಲಿ ಮರೆವಿನ ಚಟ ಇರೋ ಗಂಡಸರನ್ನು ದೇವರು ಮರೆತೂ ಸೃಷ್ಟಿಸಿಲ್ಲ ಕಾಣಿಸುತ್ತದೆ.ಸ್ವತಹ ಪರಮಾತ್ಮನೇ ಮರೆವಿನ ಮಹಾಚಟಕ್ಕೆ ತುತ್ತಾದವನಾದ್ದರಿಂದ ಅವನ ನಿರ್ಮಾಣವಾದ ಪುರುಷರೆಲ್ಲ ಮರೆವಿನ ಮಹಾದಾಸರೇ ಎಂ ಕಾಣುತ್ತದೆ.

ಮೇಲಿನ ಶೀರ್ಷಿಕೆಯನ್ನು ಯಾರಾದರೂ ದಯವಿಟ್ಟು ತಪ್ಪಾಗಿ ಬರೆಯುವ ಚಟ ಎಂದು ಓದಬೇಡಿ.ಎಲ್ಲರಿಗೂ ಇರುವಂತೆ ನನಗೂ ಮರೆಯುವ ಚಟ ಇರೋದರಿಂದ ನಾನು ಇಲ್ಲಿ ನನ್ನ‌ ಮರೆವಿನ ಮಹಾಗುಣ ಎಷ್ಟು ಉಳಿಸಿ ನೆನಪಿಟ್ಟು ಕೊಂಡಿದೆ ಯೋ ಅಷ್ಟನೆ ಇಲ್ಲಿ ನೆನಪಿಸಿ ಬರೆಯುತ್ತೇನೆ.
ಮದುವೆಯಾದ ಮುವತ್ತು ವರ್ಷದ‌ ಮೇಲೂ ನಾನು ಹೆಂಡತಿಯಿಂದ ಬೈಸಿಕೊಳ್ಳೊದು ಮರೆಯುವ ಕಾರಣಕ್ಕಾಗಿ ಯೆ. ಎಲ್ಲಿ ಹೋದರೂ ಏನಾದರೂ ಒಂದನ್ನು ಬಿಟ್ಟು ಬರುವ ಚಾಳಿ ನನ್ನದು.ದೇವಸ್ಥಾನಕ್ಕೆ ಹೋದಾಗ ಏನಾದರೂ ಕೆಟ್ಟದ್ದನ್ನು ಬಿಟ್ಟು ಬನ್ನಿ ಎಂದು ಹಿರಿಯರು ಹೇಳುತ್ತಾರೆ.ಆದರೆ ಅಂತಹ‌ಕೆಟ್ಟ ಚಟಗಳು ಇರುವಷ್ಟು ದಪಡಗಡಮನುಷ್ಯ ನಾನಲ್ಲವಾದ್ದರಿಂದ ಹೋದಲ್ಲೆಲ್ಲ ಏನಾದರೂ ಬಿಟ್ಟು ಬರುತ್ತೇನೆ. ನಾನು ಮರೆಯುವ ವಸ್ತುಗಳೆಂದರೆ ಸಾಮಾನ್ಯವಾಗಿ ಕರ್ಚಿಪು, ಪೆನ್ನು ಇತ್ಯಾದಿ.ಒಮ್ಮಮ್ಮೆ ಅವಳನ್ನೂ ಕೂಡಾ ಎಂದು ನನ್ನ ಹೆಂಡತಿಯ ಆರೋಪ. ಅದಿರಲಿ. ಮೇಲೆ ಹೇಳಿದ ವಸ್ತುಗಳನ್ನು ನಾನು ಕಳೆದುಕೊಂಡದ್ದು ನನ್ನಾಕೆಗೆ ಗೊತ್ತಾಗುವದು ಆಕೆ ತೊಳೆಯಲು ಪ್ಯಾಂಟು ಶರ್ಟು ತಗೆದುಕೊಂಡಾಗಲೇ. ಕರ್ಚಿಪಿಗಾಗಿ ಹುಡುಕುವ ಆಕೆ ಎಲ್ಲ ಕಿಸೆ ಕೋಣೆ ಗಳನ್ನು ಜಾಲಾಡಿದರೂ ಕೊನೆಗೆ ಕರ್ಚಿಪು ಸಿಗದೆ ಅಕೆ “ಈ‌ ಮಾರಾಯ ಎಲ್ಲೊ ಬಿಟ್ಟು ಬಂದಿದ್ದಾನೆ” ಎಂದು ಕಳಾ ಕಟ್ಟುತ್ತಾಳೆ.ಈ ಹುಡುಕುವ ಚಟ ಆಕೆಗೆ ಕೆಲವೊಮ್ಮ ಲಾಭವನ್ನು ಮಾಡಿದೆ. ಮಹಾಮರೆ ಗುಳಿಯಾದ ನಾನು ಒಮ್ಮೊಮ್ಮೆ ನೂರೆಡುನೂರರ , ಐದು ನೂರರ ನೋಟನ್ನು ಕಿಸೆಯಲ್ಲಿಯೆ ಬಿಟ್ಟು ಪ್ಯಾಂಟು ತೊಳೆಯಲು ಬಿಟ್ಟಾಗ ಕಿಸೆ ಜಾಲಾಡಿದ ಆಕೆಗೆ ಈ ನೋಟು ಸಿಕ್ಕುದನ್ನು ಹೇಳುವದೆ ಇಲ್ಲ .ಆಕೆಗೆ ಹಣ ಕೊಡುವ ವಿಷಯದಲ್ಲಿ ಮಹಾ ಜುಗ್ಗನಾದ ( ಇದೂ ಅವಳ ಕಲ್ಪಿತ ಅಭಿಪ್ರಾಯವೇ) ನನ್ನ ಮೇಲಿನ ಅಸಮಾಧಾನವನ್ನು ಆಕೆ ಹೀಗೆ ತೀರಿಸಿಕೊಳ್ಳುತ್ತಾಳೆ. ಆಕೆಯ‌ ಪ್ರಕಾರ ಮನೆಯ ಉಳಿದ ಎಲ್ಲ ರಿಗೆ ಹಣ‌ ಕೊಡುವದರಲ್ಲಿ‌ ಮಹಾ ಉದಾರಿಯಾ ದ .ನಾನು ಆಕೆಗೆ ಹಣ‌ಕೊಡುವಾಗ ಮಾತ್ರ ಲೆಕ್ಕಹಾಕುತ್ತೇನಂತೆ ಆದರೆ ಇದು‌ ಏಕಪಕ್ಷೀಯ ಆರೋಪವೆಂದು ನಾನು ಸಾರಾಸಗಟಾಗಿ‌ ಹೇಳಬಲ್ಲೆ .ಏಕೆಂದರೆ ಹಣದ ವಿಷಯದಲ್ಲಿ ಹುಟ್ಟಾ ಸುದಾಮನ ಸಹೋದರನಾದ ನಾನು ಮನೆಯ ವರಿಗೆಲ್ಲಿಂದ ಹಣ‌ ಕೊಡಲಿ? ಇರಲಿ ಆ‌ಮಾತು ಬೇರೆ.

ನಾನು ಈಚೆಗೆ ಈ ಕರಚಿಪ್ ಕಳೆದುಕೊಂಡು ಬೈಸಿಕೊಳ್ಳುವ ಪ್ರಮೇಯದಿಂದ ತಪ್ಪಿಸಿಕೊಳ್ಳಲು ಒಂದು ಹೊಸ ತಂತ್ರ ಕಂಡುಹಿಡಿದಿದ್ದೇನೆ.ಅದೇನೆಂದರೆ ನನ್ನ ಅರಿವೆ ನಾನೇ ತೊಳೆದುಕೊಳ್ಳುವದು.ಇಷ್ಟಾದರೂ ನಾನು ಯಾರ ಮನೆಯಲ್ಲಿ ಕರಚಿಪ್ ಬಿಟ್ಟು ಬಂದಿರುತ್ತೇನೋ ಅವರೇ ಆಕೆಗೆ ನಿಮ್ಮ ಸರ್ ಇಲ್ಲಿ ಕರಚಿಪ್ ಬಿಟ್ಟು ಹೋಗಿದ್ದಾರೆ ಎಂದು ಪೋನ್ ಮಾಡಿ ನನ್ನನ್ನು ಆಕೆ ಬೈಯುವ‌ ಪ್ರೋಗ್ರಾಮಿಗೆ ಮತ್ತಷ್ಟು ಸಹಾಯ ಮಾಡುತ್ತಾರೆನ್ನಿ.

ಇರಲಿ ಈಗ ನಾನು ಹೇಳ ಹೊರಟಿದ್ದು ಮರೆವಿನ ಬಗ್ಗೆ. ಮರವು ದೇವರು ಕೊಟ್ಟ ವರ ಅಂತ ಕೆಲವರು ಹೇಳುತ್ತಾರೆ. ನಮಗೆ ಗಂಡಸರಿಗೆ ಈ ಮರೆವು ದೇವರು ನೀಡಿದ ಮಹಾವರ ಎಂದೇ ನಾನು ಭಾವಿಸಿದ್ದೇನೆ.ಒಂದು ವೇಳೆ ಹೆಂಡತಿಯರು ಹೇಳುವ ಬುದ್ದಿ‌ ಮಾತನ್ನು , ಬೈಗುಳಗಳನ್ನು ಗಂಡಂದಿರು ನೆನಪಿಟ್ಟು ಕೊಂಡಿದ್ದರೆ ಮಾನಸಿಕ ಆಸ್ಪತ್ರೆಗಳಲ್ಲಿ ಒಂದೂ ಬೆಡ್ ಖಾಲಿ ಇರುತ್ತಿರಲಿಲ್ಲ ಎಂದು ನನ್ನ ಗಾಢ ನಂಬಿಕೆ.

ಇರಲಿ, ಈ ಗಂಡಸರ ಮರೆವಿನ ಮೂಲ ಎಂದಿನದು ಎಂಬ ಕುತೂಹಲಕ್ಕೆ ನಾವು ಹೋದರೆ ಭಾರತ ದೇಶದ ಮೂಲ ಪುರುಷನಾದ ಭರತ ಚಕ್ರವರ್ತಿಯ ತಂದೆ ದುಷ್ಯಂತ ಮಹಾರಾಜನೇ ಈ ಮರೆವಿನ ಗುಣಕ್ಕೆ ಮೊದಲ ಉದಾಹರಣೆ ಎನಿಸುತ್ತದೆ.ಆತ ತನ್ನ ಹೆಂಡತಿ ಶಾಕುಂತಲೆ ಎಂಬುದನ್ನೆ ಮರೆತು ಬಿಟ್ಟ ಕಾರಣ ಭರತ ಚಕ್ರವರ್ತಿಯ ಬಾಲ್ಯ ವಿಶ್ವಾಮಿತ್ರ ಋಷಿಗಳ ಆಶ್ರಮದಲ್ಲಿ ಕಳೆಯುವಂತಾಯಿತು.ತಾನೇ ಕೊಟ್ಟ ಗುರುತಿನ ಉಂಗುರವನ್ನು ತಾನೇ ಮರೆತಿರುವ ದುಷ್ಯಂತ ಒಂದಿಷ್ಟಾದರೂ ಭಾಗ್ಯವಂತನೆಂದು ನನಗೆ ಅನಿಸುತ್ತದೆ. ಶಾಕುಂತಲೆ ವಿಶ್ವಾಮಿತ್ರ ರ ಆಶ್ರಮದಲ್ಲಿರುವಷ್ಟೂ ದಿನವಾ ದರೂ ಹೆಂಡತಿಯ ಕಾಟದಿಂದ ದೂರವಿದ್ದನಲ್ಲ ಎಂದು ನನಗೆ ಅಭಿಮಾನ ಮೂಡುತ್ತದೆ.ಆದರೆ ಅವನಿಗೆ ಇನ್ನಿತರ ಪತ್ನಿಯರಿದ್ದರೇ ? ಈ ವಿಷಯದ ಬಗ್ಗೆ ನಾನಿನ್ನೂ ಸಂಶೋಧನೆ ಮಾಡಲು ಹೋಗಿಲ್ಲ.ಒಬ್ಬಳೇ ಹೆಂಡತಿಯ ಜಾಣ್ಮೆಯನ್ನು ಎದುರಿಸಲಾರದ ನನಗೆ ಇನ್ನಿತರ‌ ಪತ್ನಿಯರ ಗೊಡವೆ ಏಕೆ ( ಪ್ರೇಯಸಿಯರ ಲೆಕ್ಕ ಇಲ್ಲಿ ಬರುವದಿಲ್ಲ) ಎಂದು ಸುಮ್ಮನಿದ್ದೇನೆ .ಮತು ಇನ್ನಿತರ ಹೆಂಡತಿಯರಿದ್ದರೆ ಅದು ದುಷ್ಯಂತ ತಾನೇ ಕಟ್ಟಿಕೊಂಡ ಅವ ನ ದೌರ್ಭಾಗ್ಯ ಎಂದು ನನ್ನ ಸ್ಪಷ್ಟ ಅಭಿಪ್ರಾಯ.

ನನ್ನ ಮರೆವಿನ ಚಾಳಿ ಮಾಡಿದ ಒಂದು ಅತಿ ದೊಡ್ಡ ಆಘಾತವನ್ನು‌ ನಾನಿಲ್ಲಿ ಹೇಳಬೇಕು. ಆಗನಾನು ಬಿ.ಎ ಪದವಿಗೆ ಗುಳೆದಗುಡ್ಡ ಎಂಬ ಪಟ್ಟಣದಲ್ಕಿ ಓದುತ್ತಿದ್ದೆ.ಆ ಊರಿನವರೊಬ್ಬರು ನಮ್ಮ ಊರು ನೀರಬೂದಿಹಾಳಕ್ಕೆ ಹೈಸ್ಕೂಲ್ ಶಿಕ್ಷಕರಾಗಿದ್ದರು.ಮಹಾ‌ ಪುಣ್ಯವಂತರು.ನನಗೆ ಓದಲು ಬರೆಯಲು ಸಹಾಯ ಮಾಡಿದ್ದು ಮಾತ್ರವಲ್ಲ ,ಅವರ ಮನೆಯಲ್ಲಿ‌ ಕರೆಸಿ ಊಟ ಹಾಕುತ್ತಿದ್ದರು .ಅವರ‌ ಮನೆಯವರೂ ಮಹಾದಯಾಮಯಿ ತಾಯಿ.ಅವರಿಗೆ ಬಹಳ ದಿನ‌ಕ್ಕೆ ಗಂಡು‌ ಮಗ ಜನಿಸಿದ್ದ . ನಾಲ್ಕು ಜನ ಹೆಣ್ಣುಮಕ್ಕಳಾದ ಮೇಲೆ ಹುಟ್ಟಿದ‌ ಮಗ. ಆತ‌ನ‌ ಮೇಲೆ ಅವರಿಗೆ ತುಂಬ ಪ್ರೀತಿ.ಪ್ರತಿ ಶನಿವಾರ ಊರಿಗೆ ಹೋಗುತ್ತಿದ್ದ ಗುರುಗಳು ಅಂದು “ಹೇಗೂ ನೀ ಈ ವಾರ ನಿಮ್ಮುರಿಗೆ ಬರುತ್ತಿ ನಮ್ಮ ಮಗನನ್ನು ಕರೆದುಕೊಂಡು ಬಾ” ಎಂದರು . ನಾನು ಕರೆದುಕೊಂಡು ಬಂದೆ.ನಮ್ಮೂರಿಗೆ ಬರಬೇಕಾದರೆ ಬಾಗಲಕೋಟೆಯಲ್ಲಿ ಬಸ್ಸಿಳಿದು ಮತ್ತೊಂದು ಬಸ್ ಚೆಂಜ್ ಮಾಡಬೇಕು.ಇಳಿದು ಬಸ್ಸು ಹತ್ತಿದೆವು.ಬಸ್ಸು ಬಿಡಲು ಇನ್ನು ತಡವಿತ್ತು .ಕಿಟಕಿಯಲ್ಲಿ ಐದಾರು ವರ್ಷದ ಹಿಂದೆ ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗಿನ ಸ್ನೇಹಿತ ನೊಬ್ಬ ಕಂಡ .ತನ್ನ ಂಬ ಖುಷಿಯಾಯಿತು.ಆತ ಚಹಾ‌ ಕುಡಿಯಲು ಕರೆದ. ನನ್ನ ಪಕ್ಕ ಇರುವ ಶಿಕ್ಷಕರ ಮಗನನ್ನು ಮರೆತು ಚಹಾಕೆ ಇಳಿದು ಬಿಟ್ಟೆ .ಚಹಾ‌ ಕುಡಿದು ನೋಡುತ್ತೇವೆ ಬಸ್ಸು ಇಲ್ಲ.ಬಸ್ಸು ಹೋಗಿ ಬಿಟ್ಟಿತ್ತು.ನನಗೆ ಆಗ‌ಆ ಹುಡುಗನ ನೆನಪು ಬಂದು ಕೈಕಾಲು ನಡುಗ ಹತ್ತಿದವು. ಆಗೆನು ಈಗಿನಂತೆ ಪೋನ್ ಇರಲಿಲ್ಲ.ಅಂತೂ ಇಂತೂ ಊರವರ ದಯದಿಂದ ಹುಡುಗ ಊರು ಸೇರಿದ್ದ. ಬಸ್ಸಲ್ಲಿರುವ ನಮ್ಮೂರಿನ‌ ಪುಣ್ಯಾತ್ಮರು ಹುಡುಗನ ಬಾಯಿಂದ ಅವರ ತಂದೆಯವರ ಹೆಸರು‌ಕೇಳಿ ಅಳುವ ಹುಡುಗನನ್ನು ಇಳಿಸೊಕೊಂಡು ಅವರ ತಂದೆಯವರ ಹತ್ತಿರ ಮುಟ್ಟಿಸಿದ್ದರು.ಮದ್ಯಾನ್ಹ ಬಸ್ಸು‌ ಹೋದರೆ ಸಂಜೆಗೆ ಬಸ್ಸು .ನಾನು ಮನಸ್ಸಿನಲ್ಲಿ ನನ್ನ ಪಾಲಿನ ಎಲ್ಲ ದೇವರನ್ನು ನೆನೆಸುತ್ತ ಸಂಜೆ ಊರು ಸೇರಿದೆ.ನಮ್ಮ ತಂದೆ ಬಸ್ಸಿನವರಿಂದ ಸುದ್ದಿ ಕೇಳಿದವರು ಬಸ್ ಸ್ಟ್ಯಾಂಡಿಗೆ ಬಂದು ಕಾಯ್ದಿದ್ದರು. ಬೈಯದೆ ಎಲ್ಲ ಕೇಳಿದರು. ಮರುದಿನ ಹೋಗಿ ಶಿಕ್ಷಕರ ಕಾಲು ಹಿಡಿದೆ.ಆದರೂ “ಮಗ ಎಲ್ಲಾದರೂ ಹೋಗಿದ್ದರೆ” ಎಂಬ ಆಘಾತ ಈಗಲೂ ಅವರ‌ ಮನಸ್ಸಿನಲ್ಲಿತ್ತು. ಅರೆಮನಸ್ಸಿನಿಂದ ನನ್ನ ನ್ನು ಮಾತನಾಡಿಸಿದರು. ಒಂದು ವೇಳೆ ಆ ಹುಡುಗ ಎಲ್ಲಾದರೂ ಹೋಗಿದ್ದರೆ ಎಂದು ನಾನು ಈಗಲೂ ಚಿಂತೆ‌ ಮಾಡುತ್ತೇನೆ.
ಇಂಥ‌ ಮರೆಗುಳಿಯಾದ ನಾನು ಈಗಲೂ ಈ‌ ಮರೆವಿನ ದಾಸನೇ ಆಗಿದ್ದೇನೆ.
ಈ ಮರೆಯುವ ಚಟಕ್ಕೂ ಪ್ರೊಫೆಸರ್ ಗಳಿಗೂ ಏನೋ ಸಂಬಂಧ ಕಾಣಿಸುತ್ತದೆ.ಹತ್ತಿಪತ್ತು ವರ್ಷಗಳ ಹಿಂದೆ ಬರುತ್ತಿದ್ದ ಸಿನೆಮಾಗಳಲ್ಲಿ ಈ‌ ಮರೆವಿನ ಪ್ರೊಫೆಸರ್ ಗಳ ಚಿತ್ರವಿರುತ್ತಿತ್ತು.
ಮರೆಗುಳಿ ಉಪನ್ಯಾಸಕ ಎಂಬ ಸಾಲು ರೆಡಿಯಿರುತ್ತಿತ್ತು. ಎರಡು ಕನಸು ಸಿನೆಮಾದ ಮರೆಗುಳಿ ಪ್ರೊಪೆಸರ್ ಚಿತ್ರ ಈಗಲೂ ಕಣ್ಮುಂದೆ ಕಟ್ಟಿದೆ.

ನನ್ನ ಮರೆಗುಳಿತನದಿಂದ ಬಹಳ ಹೆಚ್ಚು ಲಾಭವಾಗಿರುವದು ಬಸ್ ಕಂಡಕ್ಟರರಿಗೆ ಎಂದು ತೋರುತ್ತದೆ. ನನ್ನ ಬಸ್ ಯಾನ‌ ಪ್ರೀತಿಯನ್ನು ಕಂಡ ನನ್ನ‌ ಗೆಳೆಯರನೇಕರು ಹಾಸ್ಯ ಮಾಡುವದೂ ಉಂಟು . ಈಗಲೂ ನನಗೆ ರವಿವಾರವಾದರೂ ತಾಸೆರಡು ತಾಸು ಬಸ್ಸು ಹತ್ತಲಿಲ್ಲವೆಂದರೆ ನಿದ್ದೆಯೇ ಬರುವದಿಲ್ಲ . ಏಕೆಂದರೆ ವಾರದ ಎಲ್ಲಾದಿನ ಬಸ್ಸಲಿಯೇ ತಿರುಗುವ ನಾನು ರವಿವಾರದಂದು ಬಸ್ ಯಾನ ಬಿಟ್ಟು ಹೇಗಿರಲಿ. ನಾನು ಟಿಕೆಟ್ ತಗೆಯಲಿಕ್ಕಾಗಿ ಕೊಟ್ಟನೂರು ಇನ್ನೂರು ರೂಪಾಯಿಗಳಿಗೆ ಅವರು ಬರೆದ ಕೊಟ್ಟ ಉಳಿಕೆ ಹಣವನ್ನು ಅವರಲ್ಲಿಗೇ ಬಿಟ್ಟು ಇಳಿದು ಬಿಡುತ್ತೇನೆ. ಹೀಗಾಗಿ ವಾರಕ್ಕೆ ಒಂದೆರಡು ನೂರು ರೂಪಾಯಿಯಾದರೂ ನನ್ನ ಜೇಬಿಗೆ ಖೋತಾ ಬೀಳುತ್ತದೆ. ಖಂಡಿತವಾಗಿಯೂ ಇದರಲ್ಲಿ ಅವರ ತಪ್ಪು ಇಲ್ಲವೇ ಇಲ್ಲ .ಇದಕ್ಕೆ ನನ್ನ ಮರೆಗುಳಿತನವೇ ಕಾರಣ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ.

ನಾನು ಮರೆವಿನ ಬಗ್ಗೆ ಹೇಳಲೇ ಬೇಕಾದ ಇನ್ನೊಂದು ಸಂಗತಿ ಎಂದರೆ ಅದು ಯಾರಿಂದ ಪುಸ್ತಕ ತಂದಿದ್ದೇನೆ ಮತ್ತು ಯಾರಿಗೆ ಪುಸ್ತಕ ಕೊಟ್ಟಿದ್ದೇನೆ ಎಂಬುದನ್ನು ಮರೆಯುವದು. ಪುಸ್ತಕಗಳ ವಿಷಯದಲ್ಲಿ ಈ‌ ಮರೆವಿನ ಗುಣ ಒಳ್ಳೆಯದು ಎಂದು ನನ್ನ ಅಭಿಪ್ರಾಯ. ಏಕೆಂದರೆ ನಮ್ಮಿಂದ ಪುಸ್ತಕ ಇಸಕೊಂಡವರು ತಾವು ಓದಲೆಂದೆ ಇಸಿದುಕೊಂಡಿರುತ್ತಾರೆ ಅಲ್ಲವೇ. ಅವರಿಗಾದರೂ ಪುಸ್ತಕ ಉಪಯುಕ್ತವಾಗಲಿ.ಇನ್ನು ನಾವು ಇಟ್ಟುಕೊಂಡರೂ ಓದಲೆಂದೆ ಇಟ್ಟುಕೊಂಡಿರುತ್ತೇವೆ.ಹೀಗಾಗಿ ಈ ಮರೆಯುವಿಕೆಗೆ “ಕ್ಷಮೆ” ಗೆ ಅರ್ಹವಾದದ್ದು ಎಂದು ನನ್ನ ಅನಿಸಿಕೆ. ಹಾಗಂತ ಲೇ ನಮ್ಮ ಹಿರಿಯರು ಪರರ ಕೈಗೆ ಹೋದ‌ ಪುಸ್ತಕ, ಪರರ‌ಕೈಗೆ ಸಿಕ್ಕ ಹೆಣ್ಣು, ಅಥವಾ ಹಣ ಸುಸ್ಥಿತಿಯಲ್ಲಿ ತಿರುಗಿ ಬರಲಾರವು ಎನ್ನುತ್ತಾರೆ.ಆ ಸಾಲುಗಳನ್ನು ನೆನಪಿನಿಂದ ಇಲ್ಲಿ ಬರೆಯುತ್ತೇನೆ
ಪುಸ್ತಕಂ ವನಿತಾ ವಿತ್ತಂ ಪರಹಸ್ತಗತಂ ಗತಂ
ಅಥವಾ ಪುನರಾಯಾತಂ ….
ಅಂದರೆ ಪರರ ಕೈಗೆ ಹೋದ ಹೆಣ್ಣಾಗಲೀ , ಪುಸ್ತಕವಾಗಲಿ ಹಣವಾಗಲಿ ಬರಲಾರವು .ಬಂದರೂ ತಮ್ಮ ಮೂಲ ಸ್ವರೂಪದಲ್ಲಿ ಬರದೆ ಪುಸ್ತಕ ಹರಿಯಲ್ಪಟ್ಟು,ಹಣ ಅರ್ದಂಬರ್ದ ಬರುತ್ತದೆ ಮತ್ತು ಹೆಣ್ಣು ತನ್ನ ಶೀಲ ಕಳೆದುಕೊಂಡು ಬರುತ್ತಾಳೆ ಎಂದು ಅದರ ಅರ್ಥ.ಇಂದು ನಾವು ಹಣದ ಬಗ್ಗೆ ತುಂಬ ಜಾಗರೂಕರೇ ಆಗಿರುತ್ತೇವೆ. ಹೆಣ್ಣುಮಕ್ಕಳಂತೂ ಅವರೇ ಸ್ವ ಸಾಮರ್ಥ್ಯ ಹೊಂದಿದವ ರಾಗಿದ್ದಾರೆ.ಪುಸ್ತಕದ ವಿಷಯದಲ್ಲಿ ಮಾತ್ರ ಈ ವಿಷಯ ಸತ್ಯವಾದದ್ದು ಕಾಣಿಸುತ್ತದೆ.
ಹೋಗಲಿ ನಿಮ್ಮ‌ಕೆಲಸವನ್ನು ಮರೆತು‌ನೀವು ಎಷ್ಟೊತ್ತು ಓದುತ್ತ ಕೂಡ್ರುತ್ತೀರಿ.ಮರೆವಿನ ಮಹಿಮೆ ಬರೆದಷ್ಟೂ ಮುಗಿಯದ್ದು ಎಂಬುದು ನಿಮಗೂ ಅರಿವಿಗೆ ಬಂದಿರಲಿಕ್ಕೂ ಸಾಕು.ಮರೆತು ಕುಳಿತ ನಿಮ್ಮನ್ನು ನಿಮ್ಮ ಮನೆಯವರು ಬೈಯಬಹುದು.ಸಾಕು ಮುಗಿಸೊದು ಸುಖವಲ್ಲವೇ?


ಡಾ ವೈ.ಎಂ.ಯಾಕೊಳ್ಳಿ

Leave a Reply

Back To Top