ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ನಮ್ಮ ಸಂಸ್ಕೃತಿ ಉಳಿಸೋಣವೇ?

ಭಾರತೀಯ ಸಂಸ್ಕೃತಿ ಎನ್ನುವಾಗ ಪ್ರದೇಶದ ಯಾರೇ ಇಲ್ಲಿ ಅದನ್ನು ಅಧ್ಯಯನ ಮಾಡಲು ಬಂದರೂ ಜೀವನ ಪೂರ್ತಿ ಆದರೂ ಕಲಿತು ಆಗದಷ್ಟು ವಿವಿಧ ಸಾಂಸ್ಕ್ರತಿಕ ಪರಂಪರೆ ಹಾಗೂ ವಿವಿಧತೆ ಇಲ್ಲಿದೆ. ಕನ್ನಡದ ಹಲವಾರು ಪದಗಳು ಬೇರೆ ಯಾವುದೇ ಭಾಷೆಯಲ್ಲಿ ಮಾತನಾಡುವ ಜನರಿಗೆ ಬೈಗುಳ ಅನ್ನಿಸಬಹುದು, ಹೇಳಲು ಬಾರದೆ ಇರಬಹುದು, ಕಷ್ಟ ಅನ್ನಿಸಬಹುದು. ದ್ರಾವಿಡ ಭಾಷೆಗಳಲ್ಲಿ ಡ ಮತ್ತು ದ ಅಕ್ಷರಗಳ ಬಳಕೆ ಹೆಚ್ಚು ಎಂದು ಉತ್ತರ ಭಾರತದ ಜನ ದಕ್ಷಿಣ ಭಾರತದ ಜನರಿಗೆ ಕುಡುಕುಡಿಯ ಎನ್ನುತ್ತಾರೆ. ಅಸ್ಸಾಮಿ ಎಂದರೆ ಅಸ್ಸಾಂ ರಾಜ್ಯದವರು. ಆದರೆ ದಕ್ಷಿಣದಲ್ಲಿ ಅದು ಬೈಗುಳದ ಪದ. ಆದರೆ ಒಂದು ವಿಚಾರ ನಾವು ನೆನಪಿನಲ್ಲಿ ಇಡಬೇಕಾದ್ದು ಏನೆಂದರೆ ಪ್ರತಿಯೊಬ್ಬರೂ ತಮ್ಮದೇ ಆದ ಭಾಷೆಗಳಲ್ಲಿ ಭಾರತ ಮಾತೆ, ಈ ದೇಶ, ಮಣ್ಣು, ಜನ,ವಿವಿಧತೆಯಲ್ಲಿ ಏಕತೆ ಬಯಸುತ್ತಾರೆ. ನಮ್ಮ ದೇಶವೇ ಶ್ರೇಷ್ಠ ಎನ್ನುತ್ತಾರೆ. ಪ್ರತಿ ಭಾರತೀಯನೂ ತನ್ನ ಸಂಸ್ಕೃತಿಯನ್ನು ಗೌರವಿಸುತ್ತಾನೆ ಮತ್ತು ಅದರ ಮೂಲಕವೇ ತನ್ನನ್ನು ಕಾಣಲು ಬಯಸುತ್ತಾನೆ. ಹೇಗೆ ಮುಸಲ್ಮಾನ ಹೆಣ್ಣು ಮಕ್ಕಳು ಬುರ್ಕಾ ಧರಿಸಿ, ತಲೆಯ ಮೇಲೊಂದು ಶಾಲು ಸುತ್ತಿ ತಮ್ಮ ಸಂಸ್ಕೃತಿಯನ್ನು ಪ್ರತಿನಿಧಿಸುವರೋ ಹಾಗೆಯೇ ಪ್ರತಿಯೊಬ್ಬ ಕೊಡವ ತನ್ನ ನಾಡಿನ ಸಂಸ್ಕೃತಿಯ ಸರದಾರ, ದೂತ. ಪ್ರತಿ ಮೂವತ್ತು ಕಿಲೋ ಮೀಟರು ದೂರ ಹೋದ ಹಾಗೆ ಭಾಷೆಯ ರೀತಿ ಬದಲಾಗುತ್ತದೆ. ವಿವಿಧ ರಾಜ್ಯಗಳ ವೇಷ ಭೂಷಣ, ಕಲೆ, ಸಾಹಿತ್ಯ, ಆಚರಣೆಗಳು, ಹಬ್ಬ, ಹರಿದಿನಗಳು, ಪ್ರತಿ ಕುಟುಂಬದ ಕಟ್ಟುಗಳು, ಹೀಗೆಯೇ ಆಚರಿಸಬೇಕು ಎಂಬ ಕಟ್ಟು ನಿಟ್ಟಿನ ಆಚರಣೆಗಳು ಬೇರೆಯೇ. ಅದನ್ನು ಪಾಲಿಸುವುದರಲ್ಲಿ ಎಲ್ಲರೂ ಸಂತಸ ಕಾಣುತ್ತೇವೆ. ಇದುವೇ ಭಾರತ.

ನಾವು ನಮ್ಮ ಸಂಸ್ಕೃತಿಯನ್ನು ಗೌರವಿಸುತ್ತೇವೆ, ಪಾಲಿಸುತ್ತೇವೆ. ಆದರೆ ನಮ್ಮ ಮಕ್ಕಳಿಗೆ ಪಾಶ್ಚಾತ್ಯ ವಿದ್ಯೆ ಕೊಟ್ಟು ಅವರನ್ನು ಹೊರ ದೇಶಗಳಿಗೆ ಕಳಿಸಿ ಪಾಶ್ಚಾತ್ಯರನಾಗಿ ಮಾಡುತ್ತಿದ್ದೇವೆ. ಇಂದಿನ ಭಾರತವನ್ನು ನೋಡಿದಾಗ ಮತ್ತು ಹೆಚ್ಚಿನ ಮಕ್ಕಳ ವೇಷ ಭೂಷಣ ಗಮನಿಸಿದಾಗ ಮುಂದಿನ ಭಾರತದ ಅರಿವು ನಮಗೆ ಆಗುತ್ತದೆ. ಮುಂದೊಂದು ದಿನ ಇಂತಹ ಆಚರಣೆಗಳಿಗೆ, ಹಬ್ಬಗಳಿಗೆ, ವೇಷ ಭೂಷಣ ಗಳಿಗೆ ಸಮಯ ಇಲ್ಲದೆ ಜನ ಜೀನ್ಸ್ ಶರ್ಟ್ ಗಳಿಗೆ ಬದಲಾಗಿ ಇಲ್ಲಿನ ಭಾಷೆ, ಸಂಸ್ಕೃತಿ ಮಾಯವಾಗಿ ಹೋಗಿ ಮತ್ತೆ ಆಂಗ್ಲರು ಭಾರತಕ್ಕೆ ಬಂದಂತೆ ಇಲ್ಲಿನವರೆ ಹಾಗೆ ಆಗುವರೋ ಎಂಬ ಭಯ ಅಲ್ಲವೇ?

ಈಗಲೇ ಸೀರೆ ಉಟ್ಟ ಹೆಣ್ಣು ಮಗಳಿಗಿಂತ ಜೀನ್ಸ್ ತೊಟ್ಟ ಹೆಂಗಸರು ಯಾವುದೇ ಯುದ್ಧ, ಪೆಟ್ಟು, ಹೊಡೆತ ಮಾಡಲು ಧೈರ್ಯಶಾಲಿಗಳಾಗಿರುತ್ತಾರೆ ಎಂದು ಮಾಧ್ಯಮಗಳು ಬಿಂಬಿಸುತ್ತಿವೆ. ಮಕ್ಕಳು ಅವುಗಳನ್ನು ನೋಡಿ ಕಲಿಯುತ್ತಿದ್ದಾರೆ. ಆಲೀವ್ ಎಣ್ಣೆ, ಫ್ರೆಂಚ್ ಫ್ರೈ, ಕಿವಿ ಹಣ್ಣು, ಡ್ರಾಗನ್ ಫ್ರೂಟ್, ಲೆಟ್ಟಿಸ್ ನಮ್ಮ ಅಹಾರಗಳಾಗುತ್ತಿವೆ. ಬೇರೆ ದೇಶದಲ್ಲಿ ತಯಾರಾದ ತಂಪು ಪಾನೀಯಗಳು ನಮಗೆ ಸುಲಭದಲ್ಲಿ ಸಿಗುತ್ತಿವೆ ಹಾಗೂ ಇಷ್ಟ ಆಗುತ್ತಿವೆ.ರುಚಿಕರ ರಾಸಾಯನಿಕ ಪುಡಿಗಳನ್ನು ಬಳಸಿ ಮಾಡಿದ ಚೈನಾದ ರಸ್ತೆ ಬದಿಯ ತಿನಿಸುಗಳಿಗೆ ಜನ ಮಾರು ಹೋಗಿದ್ದಾರೆ. ಮಕ್ಕಳಿಗೂ ಮನೆಯ ಊಟ ರುಚಿಸದು. ದುಬಾರಿ ಗ್ರಾಂಡ್ ಹೋಟೆಲ್ ಗಳು ನಗರ ಮಾತ್ರವಲ್ಲ , ಹಳ್ಳಿಗಳ ರಸ್ತೆ ಬದಿಯಲ್ಲೂ ತಲೆ ಎತ್ತುತ್ತಾ ಊಟಕ್ಕೆ ಹೊರಗಿನ ಹೋಟೆಲ್ ಗೆ ಹೋಗುವುದು, ಮನೆಗೇ ಬೇಕಾದುದನ್ನು ತರಿಸಿ ತಿನ್ನುವುದು ಖಯಾಲಿ ಆಗಿದೆ. ಐವತ್ತು ರೂಪಾಯಿಗೆ ಮಾಡಿ ತಿನ್ನಬಹುದಾದ ಮನೆ ಊಟದ ಸವಿ ಬಿಟ್ಟು, ಅಷ್ಟಕ್ಕೇ ಹತ್ತು ಪಟ್ಟು ಹಣ ಕೊಟ್ಟು, ತಿನ್ನಲಾಗದೆ ಅರ್ಧ ತಿಂದು ಅರ್ಧ ಬಿಟ್ಟು ಎದ್ದು ಬರುತ್ತೇವೆ. ಇದೇ ಇಂದಿನ ಸಂಸ್ಕೃತಿ ಆಗಿದೆ ಅಲ್ಲವೇ?

ಊಟ ತಿಂಡಿ ಮಾತ್ರವಲ್ಲ ಹಾಳಾದದ್ದು, ಅದರ ಜೊತೆಗೆ ನಮ್ಮ ಆರೋಗ್ಯ ಕೂಡ! ರೈತನ ಮಗನು ಕೂಡಾ ಇಂದು ಜಾಗಿಂಗ್ ವಾಕಿಂಗ್ ಅಂತ ಓಡುತ್ತಾನೆ. ಹೊಲದಲ್ಲಿ ಕಷ್ಟ ಪಟ್ಟು ದುಡಿವವನಿಗೆ ಯಾವುದೇ ವಾಕಿಂಗ್ ಜಾಗಿಂಗ್ ನ ಅವಶ್ಯಕತೆ ಇಲ್ಲ. ರೈತರೇ ಬೇಡದ ಭಯಾನಕ ರಾಸಾಯನಿಕಗಳ ಸುರಿದು ಬೆಳೆಸಿದ ಬೆಳೆಯನ್ನು ನಮಗೆ ಉಣ ಬಡಿಸುತ್ತಾರೆ. ರಾಸಾಯನಿಕ ಬಳಸದೇ ಇರುವ ಆಹಾರ ಬೆಳೆಸಲು ರೈತರಿಗೆ ಸಾಧ್ಯ ಆದರೂ ಅದು ಹೆಚ್ಚಿರುವ ಜನಸಂಖ್ಯೆಗೆ ಸಾಲದು. ರೈತನ ಬದುಕು ಅದರಿಂದ ನಡೆಯದು. ಇಂದಿನ , ಮುಂದಿನ ಹಾಗೂ ತದ ನಂತರ ಬರುವ ಜನಾಂಗಕ್ಕೂ ಉತ್ತಮ ಆಹಾರ, ಆರೋಗ್ಯ ಸಿಗದೇ ಹೋಗುವುದಂತೂ ಸತ್ಯ. ಇನ್ನು ನಾವು ಒಳ್ಳೆಯ ನೀರು, ಗಾಳಿ, ಪರಿಸರ, ಮಣ್ಣು ಯಾವುದನ್ನೂ ಚೆನ್ನಾಗಿ ಇಡಲಿಲ್ಲ ನಾವು. ಎಲ್ಲವನ್ನೂ ಕೆಡಿಸುತ್ತಾ ,ಮುಂದೆ ಏನೂ ಉಳಿಸದೆ ಜನರನ್ನು ಕಷ್ಟಕ್ಕೆ ತಳ್ಳುವ ಈ ಮನುಜರ ಕಾರ್ಯಕ್ಕೆ ಯಾರು ಏನು ಹೇಳಬೇಕೋ ಯಾರಿಗೂ ತಿಳಿದಿಲ್ಲ. ಪರಿಸರದ ಬಗ್ಗೆ ವೇದಿಕೆಯಲ್ಲಿ ಬಹಳವೇ ಮಾತನಾಡುವ ಜನ ಕೆಳಗೆ ಇಳಿದು ಬಂದು ಪ್ಲಾಸ್ಟಿಕ್ ತಟ್ಟೆಯಲ್ಲಿ ತಿಂಡಿ ತಿಂದು, ಉಪಯೋಗಿಸಿ ಬಿಸಾಕುವ ಲೋಟದಲ್ಲಿ ಚಹಾ ಕುಡಿದು ಅಲ್ಲೇ ಮೂಲೆಗೆ ಹಾಕಿ ಹೋಗುತ್ತಾರೆ ಎನ್ನುವುದು ಸತ್ಯ ತಾನೇ?

ನಮ್ಮ ಮಕ್ಕಳು ನಾವು ಹೇಳಿದ್ದು ಕೇಳುವುದಕ್ಕಿಂತ ಹೆಚ್ಚಾಗಿ ನಾವು ಮಾಡಿದ ಕೆಲಸವನ್ನು ಅನುಕರಿಸುತ್ತಾರೆ. ಹಾಗಾಗಿ ನಾವೇನೇ ಒಳ್ಳೆಯದು ಹೇಳಿದರು ಕೂಡಾ ಅವರು ಮಾಡುವುದು ನಾವು ಮಾಡಿದ ಹಾಗೆಯೇ. ಅವರನ್ನು ಮಾತೃಭಾಷೆ ಕಲಿಸದೆ ಆಂಗ್ಲ ಭಾಷೆ ಕಲಿಸಿ, ಆ ಸಂಸ್ಕೃತಿ ಕಲಿಸಿ ಬೆಳೆಸುತ್ತಿರುವ ಪೋಷಕರು ನಾವೇ ಅಲ್ಲವೇ? ಇನ್ನೆಲ್ಲಿ ಉಳಿದೀತು ಭಾರತದ ಸಂಸ್ಕೃತಿ ಅಲ್ಲವೇ? ಮೊದಲು ನಾವು ಸಂಸ್ಕೃತಿ ಉಳಿಸಲು ಏನು ಮಾಡುತ್ತಿದ್ದೇವೆ ಎಂದು ನಮ್ಮನ್ನು ನಾವು ಕೇಳಿ ಅಲ್ಲವೇ? ನೀವೇನಂತೀರಿ?



ಹನಿ ಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.


Leave a Reply

Back To Top