‘ಪ್ರೀತಿ ಪಾತ್ರರ ಜಗಳ’ ಹರಟೆ- -ಬಿ.ಟಿ.ನಾಯಕ್

ಹರಟೆ

ಬಿ.ಟಿ.ನಾಯಕ್

ಪ್ರೀತಿ ಪಾತ್ರರ ಜಗಳ’

ನಾಗಣ್ಣ ಮತ್ತು ಆತನ ಪುತ್ರ ಚಂದ್ರು ಇಬ್ಬರೂ ಸೇರಿ, ಪರಸ್ಪರ ವಿರೋಧತೆಯ ಮಾತುಗಳನ್ನು ಆಡುತ್ತಾ, ಎಂದಿನಂತೆ ಕೋಳಿ ಜಗಳ ಕಾಯುವುದೇ ಅವರ ಸದಾ ಕಾಯಕವಾಗಿತ್ತು. ಆದರೇ, ಮನೆಯವರು ಅದನ್ನು ನಿಲ್ಲಿಸಲು ಎಂದೂ ಪ್ರಯತ್ನಿಸುತ್ತಿದ್ದಿಲ್ಲ. ಅಲ್ಪ ಸ್ವಲ್ಪ ಬೇಜಾರು ಮಾಡಿ ಕೊಳ್ಳುತ್ತಿದ್ದರು ಅಷ್ಟೇ. ಅವರಿಬ್ಬರ ಹಸಿ ಬಿಸಿಯಾದ ಮಾತುಗಳು ಹೇಗಿರುತ್ತಿದ್ದವೆಂದರೇ, ಅವು ಮುಜುಗರ ತರುತ್ತಿದ್ದಿಲ್ಲವಾದರೂ, ‘ಹಾವು ಸಾಯಲಿಲ್ಲ ಕೋಲೂ ಮುರಿಯಲಿಲ್ಲ ‘ ಎಂಬಂತೆ ಇರುತ್ತಿದ್ದವು. ಅಲ್ಲದೇ, ಅವರಿಬ್ಬರೂ ನೇರ ನುಡಿಗಳಿಲ್ಲದ ಸಂಭಾಷಣೆಯ ಮೂಲಕ ಏರು ಧ್ವನಿ ಇಲ್ಲದೆಯೇ ಮಾತಾಡುತ್ತಿದ್ದರು.

ಒಂದು ದಿನ ಹೀಗೆಯೇ ಯಾವುದೋ ವಿಷಯಕ್ಕೆ ಇಬ್ಬರಿಗೂ ಹಗುರವಾದ ಮನಸ್ತಾಪ ಮೂಡಿತು. ಆಗ ತಂದೆ ಮಗನ ಮೃದು ಮಿಶ್ರಿತ ಒರಟು ಸಂಭಾಷಣೆ ಹೀಗಿತ್ತು;
‘ಲೋ..ಚಂದ್ರು ನಿನ್ನ ಹಣೆ ಬರಹವೇ ಇಷ್ಟೇ ಆಯಿತಲ್ಲೋ. ಅದೂ ಕೈಯಲ್ಲಿ ಇದ್ದ ಅವಕಾಶವನ್ನು ಕಳೆದು ಕೊಂಡಿದ್ದೀಯಾ ಆಲ್ವಾ.?’
‘ಅದೇನಪ್ಪ, ನಿನಗೆ ಎಲ್ಲಾ ತಿಳಿದಿರುವ ಹಾಗೆಯೇ ಮಾತಾಡ್ತೀಯಾ. ನೀನು ಸ್ವಲ್ಪನಾದ್ರೂ
ಆ ವಿಷಯದ ಬಗ್ಗೆ ತಿಳಿದುಕೊಂಡು ಮಾತಾಡ ಬೇಕಲ್ಲವೇ ?’
‘ಅದರಲ್ಲಿ ತಿಳಿದು ಕೊಳ್ಳೋದು ಏನು ಮಹಾ ಇದೆ. ನೀನು ಯಾವಾಗಲೂ ಹಠಮಾರಿ, ಹಾಗಾಗಿ ಅದನ್ನು ಕಳೆದು ಕೊಂಡೀಯಾ ಅಷ್ಟೇ ‘ಎಂದು ಛೇಡಿಸಿಯೇ ಬಿಟ್ಟ.
‘ಹೌದೌದು..ನಿನಗೆ ಎಲ್ಲಾ ತಿಳಿದಂತೆಯೇ ಮಾತಾಡ್ತಾ ಇದ್ದೀಯ. ನೀನು ಅರಿತಿರುವದಾದರೂ ಏನು ? ಅದರ ಬಗೆಗಿನ ವಿಷಯದಾಳ ಏನು ಇರಬಹುದು ? ಈ ಬಗ್ಗೆ ನಿನಗೆ ಏನು ಮಾಹಿತಿ ಇದೆ ? ಎಂದು ಕೇಳಿದ.
‘ಅದೇನೋ..ಈಗಾಗಲೇ ಹದಿನೈದು ದಿನಗಳಾದವು, ಮನೆಯಲ್ಲಿಯೇ ಕುಳಿತು ಕೊಂಡೀಯಾ ? ಅದರ ಬಗ್ಗೆ ನಾನು ಬಿಡಿಸಿ ಹೇಳಬೇಕಾ ?ನನಗೆ ಅಷ್ಟೂ ಅರ್ಥವಾಗೋದಿಲ್ವೇ ? ಅದೇನು ಅಷ್ಟು ಧಡ್ಡನಾ ನಾನು ?’ ಎಂದ.
‘ನಾನು ಮನೆಯಲ್ಲಿ ಇದ್ದೇನೆ ಎಂದ ಮಾತ್ರಕ್ಕೆ, ಅದನ್ನು ಕಳೆದು ಕೊಂಡೀನಂತ ತಿಳಿಯಬೇಡ. ನನ್ನ ಅರಿವು ನನಗೆ ಚೆನ್ನಾಗಿ ಇದೆ’.
‘ಅಯ್ಯೋ..ಏನು ಮಾತಾಡುತ್ತಿದ್ದೀಯೋ, ನೀನು ಅವಕಾಶವನ್ನೇ ಕಳೆದುಕೊಂಡಿರುವ ಹಾಗಿದೆ, ಆದರೂ ಜಂಭದ ಮಾತು ಬಿಡುತ್ತಿಲ್ಲ ಬಿಡು.’ ಎಂದು ನಯವಾಗಿ ಮತ್ತೇ ಛೇಡಿಸಿದ.
‘ಅದೇನೂ ಜಂಭ ಅಥವಾ ಹಠ ನನ್ನಲ್ಲಿಲ್ಲ. ಒಂದು ವೇಳೆ ನಿನ್ನ ರಕ್ತದಲ್ಲಿ ಅವು ಇದ್ದಿದ್ದರೇ, ಅವೆಲ್ಲಾ ನನಗೆ ಸ್ವಯಂಚಾಲಿತವಾಗಿ ಬಂದು ಬಿಡ್ತಿದ್ದವು.’ ತಿರುಗಿ ಬಾಣ ಬಿಟ್ಟ.
‘ಹಾಗೆ ಹೇಳಬೇಡ, ನನಗೂ ನಿನಗೂ ವ್ಯತ್ಯಾಸ ಇದೆಯಪ್ಪಾ. ಅದೇನಿದ್ದರೂ ನಿನ್ನ ಜಂಭದ ಗುಣಗಳು ನಿನ್ನಮ್ಮಳ ಬಳುವಳಿಯಾಗಿ ನಿನಗೆ ಬಂದಿರಬಹುದು. ಏಕೆಂದರೇ ,ಅವಳೂ ಕೂಡ ಎಲ್ಲಾದಕ್ಕೂ ಪ್ರತಿರೋಧ ಮಾಡುತ್ತಾನೇ ಇರುತ್ತಾಳೆ’ ಈ ಬಾರಿ ಅವನ ಅಮ್ಮಳ ಕಡೆಗೆ ವಾಲೀ, ಆಕೆಯನ್ನು ಮೂದಲಿಸಿದ.
‘ಬೇಡ..ನೋಡು, ಈಗ ನನ್ನ ಬಿಟ್ಟು ನನ್ನಮ್ಮಳ ತಂಟೆಗೆ ಸುಮ್ಮ ಸುಮ್ಮನೇ ಹೋಗಬೇಡ. ಅದು ಸರಿಯಲ್ಲ’ ಎಂದ ಚಂದ್ರು. ಅಮ್ಮನನ್ನು ಮಧ್ಯೆ ಎಳೆದು ತಂದುದಕ್ಕೆ ಸ್ವಲ್ಪ ಕೋಪಗೊಂಡ.
‘ಏಯ್..ಬಿಡೋ.ನಾನು ಅವಳ ಜೊತೆಲೀ ಅಲ್ಲಿಂದಿಲ್ಲಿಗೆ ಸಂಸಾರ ಮಾಡಿದ್ದೇನೆ. ಅವಳೆಷ್ಟರ ಮಟ್ಟಿಗೆ ಇದ್ದಾಳೆ ಏನ್ನೋದು ನನಗೆ ತಿಳಿದಿದೆ’ ಎಂದ.

ಅಷ್ಟರಲ್ಲಿ ನಾಗಣ್ಣನ ಶ್ರೀಮತಿ ಅವರ ಮಧ್ಯದಲ್ಲಿ ಬಂದು ಹೀಗೆ ಹೇಳಿದಳು;
‘ಏನ್ರೀ ಮಗ ಅಂದ್ರೆ, ನಿಮಗೆ ಇಷ್ಟೇನಾ ಪ್ರೀತಿ ? ಯಾವುದೇ ವಿಷಯದ ಬಗ್ಗೆ ತಿಳಿಸಿ ಹೇಳುವ ವ್ಯವಧಾನ ನಿಮಗೇಕಿಲ್ಲ ?ಹಾಗೆ ನೋಡಿದರೆ ಯಾವಾಗಲೂ ಗುರ್ರ್ ಅಂತೀರಾ. ಏಕೆ ಹಾಗೆ ?’
‘ಒಹೋ ಬಂದು ಬಿಟ್ಟಳು ಮಗನ ಪರವಹಿಸಿ. ಅಲ್ವೇ, ಆತ ನಿರುದ್ಯೋಗಿಯಾಗಿ ಮನೆಯಲ್ಲಿ ಕುಳಿತು ಕೊಳ್ಳೋದು ನಿನಗೆ ಬಹಳೇ ಇಷ್ಟ ಅನ್ನು.’ ಎಂದು ಆಕೆಗೂ ಛೇಡಿಸಿದ. ಆಗ ಆಕೆ ಚಂದ್ರುನ ಕಡೆ ನೋಡಿ;
‘ಏನೋ ಮಗಾ, ಈ ಮಾತು ನಾನು ಅನ್ನಿಸಿಕೊಳ್ಳಬೇಕೇನೋ ?’ ಎಂದಳು ಮುಖ ಸಪ್ಪೆ ಮಾಡಿ.
‘ಬಿಡಮ್ಮ..ನಿನಗೆ ಅಪ್ಪನ ಸ್ವಭಾವ ಗೊತ್ತಿಲ್ವೆ ?  ಅಪ್ಪ ಏನೂ ಸರಿಯಾಗಿ ಅರಿತು ಕೊಳ್ಳದೆಯೇ ಎಷ್ಟೋ ಸಲ ಕೊಂಕು ಮಾತಾಡಿದ್ದಾನೆ. ನಂತರ ಪರಿಸ್ಥಿತಿ ತಿಳಿಯಾದ ಮೇಲೆ ಮೌನ ಆಗಿಬಿಡ್ತಾನೆ’ ಎಂದ. ಆಗ ಅಪ್ಪ ಹೀಗೆ ಹೇಳಿದ;
‘ಆಯಿತಪ್ಪ ನಾನು ಸರಿಯಾಗಿ ಅರಿಯದೇ ಹೇಳಿದೆ ಅಂದುಕೋ, ಆದರೆ, ನೀನು ಅದಕ್ಕೆ ಕಾರಣಗಳನ್ನು ವಿವರಿಸಬೇಕಲ್ಲವೇ ?’
‘ಹಾಗಂತ ನೀನು ಎಂದಾದರೂ ಸಾವಧಾನವಾಗಿ ಮತ್ತು ಪ್ರೀತಿ ತೋರಿಸಿ ಕೇಳಿದೆಯಾ ?’
‘ಒಹೋ..ಆ ದುರಾದೃಷ್ಟದ ಕೆಲಸಕ್ಕೂ ಪ್ರೀತಿ ತೋರಿಸಬೇಕಾ ?’
‘ಬಿಡಪ್ಪ..ಏನೇನೊ ಮಾತಾಡಬೇಡ. ಇದರಲ್ಲಿ ಯಾವ ದುರಾದೃಷ್ಟ ಇಲ್ಲ. ನಾನು ಮೊದಲಿದ್ದ ಕಂಪನಿಗೆ ರಾಜೀನಾಮೆ ಕೊಟ್ಟಿದ್ದೇನೆ. ಹಾಗಂತ ಸುಮ್ಮನೇ ಕುಳಿತಿಲ್ಲ. ಬೇರೆ ಕಡೆಗೆ ಪ್ರಯತ್ನಿಸಿದ್ದೇನೆ. ಇನ್ನೇನು ಎರಡು ರೌಂಡ್ಸ್ ಗಳು ಮುಗಿದಿವೆ.  ಹಾಗಾಗಿ ಉತ್ತರಕ್ಕಾಗಿ ಕಾಯುತ್ತಿದ್ದೇನೆ’ ಎಂದ.
‘ಹೀಗಂತ ಮೊದಲೇ ಯಾಕೆ ಹೇಳಲಿಲ್ಲ ?’
‘ಹಾಗೇಕೆ ಅಂತ ಸಂಬದ್ಧವಾಗಿ ನೀನೇಕೆ ಕೇಳಲಿಲ್ಲ ?’
‘ಸರಿ ಬಿಡು..ಯಾವಾಗ ಸರಿ ಹೋಗೋದು’ ? ಸ್ವಲ್ಪ ಮೆತ್ತಗಾಗಿ ಕೇಳಿದ ನಾಗಣ್ಣ.
‘ಅದೇನು ಕಣ್ಣಿಗೆ ಕಾಣಿಸುತ್ತದೆಯೇ ? ಅದು ಇನ್ನೊಬ್ಬರ ಕೈನಿಂದ ಬರೋದು.’ ಎಂದ.
‘ಯಾವುದಕ್ಕೂ ನೀನು ನೇರ ಉತ್ತರಾನೇ ಕೊಡೋದಿಲ್ಲ. ಅದು ನನ್ನ ಕರ್ಮ ಎಂದು ಹಣೆ ಚಚ್ಚಿ ಕೊಂಡ.  ಈಗ ಮಗ ಮೃದುವಾಗಿ ಹೀಗೆ ಹೇಳಿದ;
‘ಅಪ್ಪಾ ಹಾಗೆಲ್ಲಾ ಮನಸ್ಸಿಗೆ ಹಚ್ಚಿ ಕೊಳ್ಳಬೇಡ. ಆಯಿತು ಕಾಯೋಣ. ನನಗೆ ಭರವಸೆ ಇದೆ’ ಆಗ ತಂದೆ ಸುಮ್ಮನಾದ.

ಅನಂತರ, ಸ್ವಲ್ಪ ದಿನಗಳಾದ ಮೇಲೆ ನಾಗಣ್ಣ ಚಂದ್ರುವಿಗೆ ಹೀಗೆ ಕೇಳಿದ;
‘ಅದೇನಾಯ್ತೋ ಮಗಾ..ಹೋದ ವಾರ ಸಂದರ್ಶನ  ಕೊಟ್ಟಿದ್ದೆಯಲ್ಲ ?’
‘ಅದೇನೋ ಅವರು ಒಪ್ಪಿಕೊಂಡರು. ಆದರೇ, ನನ್ನ ವೇತನ ಮತ್ತು ಇತರೇ ವಿಷಯದ ಬಗ್ಗೆ ಹೊಂದಾಣಿಕೆ ಆಗಿಲ್ಲ’ ಎಂದ ಚಂದ್ರು.
‘ಅಂದ್ರೇ, ಅವರು ನಿನ್ನ ಕೆಲಸಕ್ಕೆ ತಕ್ಕಂತೆ ವೇತನದ ಮಾನ್ಯತೆ ಕೊಡುವುದಿಲ್ವೇ ?’
‘ಹಾಗಲ್ಲಪ್ಪ..ನಾನು ಹೆಚ್ಚಿನ ವೇತನ ಕೇಳಿದ್ದೆ, ಅದಕ್ಕವರು ಒಪ್ಪಿಲ್ಲ. ಮೊದಲಿನ ಕಂಪನಿಯಲ್ಲಿ ಏನು ಇತ್ತೋ ಅಷ್ಟೇ ಕೊಡುತ್ತೇವೆ’ ಅಂತ ಹೇಳಿದರು’ ಎಂದ.
‘ಹಾಗಿದ್ದರೇ, ಹಿಂದಿನ ಕಂಪನಿಗೆ ಕೊಟ್ಟ ನೋಟೀಸ್ ಹಿಂಪಡೆದು ಬಿಡು’ ಎಂದ ಅಪ್ಪ.
‘ಬಿಡಪ್ಪ..ನಿನಗೆ ಯಾವುದೂ ಅರ್ಥವಾಗುವುದಿಲ್ಲ.   ನಾನೇ ಯೋಚಿಸಿ ಸರಿಯಾದ ನಿರ್ಧಾರ  ತೊಗೊಳ್ಳುತ್ತೇನೆ. ನೀನು ಪದೇ ಪದೇ ಕೇಳಿದ್ದನ್ನೇ ಕೇಳಬೇಡ’ ಎಂದ.
‘ಆಯಿತು..ನಾನು ನಿನ್ನ ವಿಷಯಕ್ಕೆ ಇನ್ನು ಅಡ್ಡ ಬರೋದಿಲ್ಲ’ ಎಂದ ಅಪ್ಪ.
‘ದಯಮಾಡಿ ಹಾಗೆ ತಪ್ಪು ತಿಳಿದು ಕೊಳ್ಳಬೇಡ ಅಪ್ಪಾ. ನಾನು ನಿನಗೆ ಹಾಗೆ
ಹೇಳಿದೆನೆಯೇ ? ಇಲ್ವಲ್ಲ ?’
‘ಅಯ್ಯೋ….ಅದರರ್ಥ ಇಷ್ಟೇ, ಅರಿತು ಕೊಳ್ಳುವವನಿಗೆ ಬಿಡಿಸಿ ಹೇಳೋದು ಬೇಕಾಗಿಲ್ಲ’ ಎಂದ ತಂದೆ.
‘ಸರಿ..ನಿನಗೆ ಹೇಗೆ ಅನ್ನಿಸುತ್ತೋ ಹಾಗೆಯೇ ಯೋಚಿಸು.’ ಎಂದು ಸುಮ್ಮನಾದ ಚಂದ್ರು.
ಆಗ ತಂದೆ ಬಿಡಲಿಲ್ಲ ಮತ್ತು ಚಂದ್ರೂನ ಮೌನ ಒಪ್ಪಿಕೊಳ್ಳದೇ ಹೀಗೆ ಕೇಳಿದ;.
‘ಏಕೋ ಸುಮ್ಮನಾದೆ ?’
‘ನಾನು ಏನು ಮಾಡಲಿ.ನೀನು ಈಗ ಸುಮ್ಮನಾದರೇ, ನಮ್ಮೆಲ್ಲರಿಗೂ ಈ ದಿನ ನೆಮ್ಮದಿ’ ಎಂದ.
ಹಾಗಂದ ಮೇಲೆ ನಾಗಣ್ಣ ತಡಮಾಡದೆಯೇ ಅಲ್ಲಿಂದ ಎದ್ದು ಹೋಗಿಯೇ ಬಿಟ್ಟ !

ಆಮೇಲೆ ಎರಡು ದಿನಗಳಾದ ಮೇಲೆ ಚಂದ್ರು ತನ್ನ ತಂದೆಯ ಕೋಣೆಗೆ ಹೋಗಿ ಹೀಗೆ ಹೇಳಿದ;
‘ಅಪ್ಪಾ ಒಂದು ಸಿಹಿ ಸುದ್ದಿ.  ಹೊಸ ಕಂಪನಿಯಿಂದ ನನಗೆ ‘ಮೇಲ್’ ಬಂತು. ಅವರು ಯಥಾ ರೀತಿ ಹೆಚ್ಚಿನ ವೇತನ ಒಪ್ಪಿಕೊಂಡಿದ್ದಾರೆ’ ಎಂದ.
ಆಗ ಅಪ್ಪನಿಗೆ ಖುಷಿಯಾಯಿತು. ಆತ ತಕ್ಷಣವೇ ಹೀಗೆ ಹೇಳಿದ;
‘ನೀನು ನನ್ನ ಮಗ ಕಣೋ. ನೀನು ಸಹನೆ, ಶಾಂತಿ ಎಲ್ಲಾ ಕಾಪಾಡಿ ಕೊಂಡಿದ್ದೀಯ.  ಹಾಗಾಗಿ, ದೇವರು ಆಶಿರ್ವದಿಸಿದ್ದಾನೆ’ ಎಂದ.
ಆಗ ಚಂದ್ರುನ ಅಮ್ಮ ಕೂಡ ಬಂದು ವಿಷಯ ತಿಳಿದುಕೊಂಡು ಹೀಗೆ ಹೇಳಿದಳು;
‘ಇನ್ನಾದರೂ ಇಬ್ಬರೂ ಜಗಳ ಮಾಡುವುದನ್ನು ಸಾಕು ಮಾಡಿ’ ಎಂದಾಗ ಚಂದ್ರು ಅಮ್ಮನಿಗೆ ಹೇಳಿದೆ;
‘ಅಮ್ಮಾ.. ಇದು ನಮ್ಮಿಬ್ಬರ ಜಗಳ ಅಲ್ಲ.  ಅದು ಒಂದು ರೀತಿ ಪರೋಕ್ಷ ಪ್ರೋತ್ಸಾಹದ ಚಿಲುಮೆ ಮತ್ತು ನನ್ನನ್ನು ಪ್ರಯತ್ನದ ಕಡೆ ತಳ್ಳುವುದೇ ಅಪ್ಪನ ಉದ್ದೇಶವಿತ್ತು. ಹೌದಲ್ಲವೇ ಅಪ್ಪ ?’
‘ಹೌದು ಮಗ..ಯಾವ ತಂದೆ ತನ್ನ ಮಗನ ಮೇಲೆ ದ್ವೇಷ ಮಾಡುತ್ತಾನೆ ಹೇಳು. ಹಾಗೆಯೇ, ಯಾವ ಮಗ ತನ್ನ ತಂದೆಯನ್ನು ಹೀಯಾಳಿಸುತ್ತಾನೆ ? ಇವೆರಡೂ ಸಾಧ್ಯವೇ ಇಲ್ಲ.’
‘ಹೌದಪ್ಪ ನೀನು ಹೇಳಿದ್ದು ಸರಿ. ಕುಟುಂಬದಲ್ಲಿ ಈ ತರಹದ ಯೋಚನೆಗಳು ಮತ್ತು ವಿವೇಚನೆಗಳು ಇದ್ದರೇನೇ ಬದುಕಿಗೆ ಒಂದರ್ಥ ಎಂದ.
ಆಗ ಎಲ್ಲರೂ ಖುಷಿಯಿಂದ ಸೇರಿ, ಸುತ್ತಲೂ ಕುಳಿತುಕೊಂಡು ಹರಟುತ್ತಲೇ ಭೋಜನ ಮಾಡಿದರು.


ಬಿ.ಟಿ.ನಾಯಕ್,

8 thoughts on “‘ಪ್ರೀತಿ ಪಾತ್ರರ ಜಗಳ’ ಹರಟೆ- -ಬಿ.ಟಿ.ನಾಯಕ್

  1. ಅಪ್ಪ ಮಗನ ಜುಗಲಬಂದಿ ತುಂಬಾ ಸ್ವಾರಸ್ಯವಾಗಿದೆ ಹಾಗೂ ಹಿತವಾಗಿದೆ ಕೂಡ.
    ಅಭಿನಂದನೆಗಳು

    1. ಶ್ರೀಯುತ ರಾಘವೇಂದ್ರರವರೇ ಧನ್ಯವಾದಗಳು.

  2. ಹರಟೆ ಚನ್ನಾಗಿದೆ. ಅಂತೂ ಜಗಳ ಆಗಲಿಲ್ಲ.

  3. ಸಹಜ, ಸುಂದರ, ಆಕರ್ಷಕ ಸಂಭಾಷಣೆಗಳು ಗಮನಸೆಳೆಯುತ್ತವೆ. ಅಭಿನಂದನೆಗಳು.

    1. ನಿಮ್ಮ ಅನಿಸಿಕೆ ನನಗೆ ಖುಷಿ ತಂದಿತು. ಧನ್ಯವಾದಗಳು ಸರ್.

Leave a Reply

Back To Top