ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ಪ್ರೀತಿಯಿಂದ ಹೃದಯ ಗೆಲ್ಲಿರೋ

ಹೆಣ್ಣಿನ ಹೃದಯ ಗೆಲ್ಲುವುದು ಹೇಗೆ? ಪ್ರಾಯಶಃ ಬ್ರಹ್ಮಾಂಡದ ನಿಗೂಢ ರಹಸ್ಯಗಳಲ್ಲಿ ಇದೂ ಒಂದು ಇರಬಹುದೇನೋ? “ಹೆಣ್ಣೆಂದರೆ ಬಿಡಿಸಲಾಗದ ಒಗಟಿನ ಭಂಡಾರ”  ಚಂಚಲತೆಗೆ ಇನ್ನೊಂದು ಹೆಸರೇ ಹೆಣ್ಣು “ನೀರಿನಾಳವ ಮೀನಿನ ಹೆಜ್ಜೆ ಹೆಣ್ಣಿನ ಮನಸ್ಸು ಬಲ್ಲವರಾರು” ಈ ಎಲ್ಲ ಹೇಳಿಕೆಗಳು ಅದನ್ನೇ ಪುಷ್ಟೀಕರಿಸುತ್ತದೆ.  ಭ್ರಮೆಯ ಬುನಾದಿಯ ಮೇಲೆ ಕಟ್ಟಿದ ಈ ಎಲ್ಲ ಸುಳ್ಳುಗಳ ಸೌಧ ಗೋಪುರದಡಿಯಲ್ಲಿ ನಿಂತುವ “ಹೆಣ್ಣು ಮಾಯೆ” ಎಂದು ಹಲುಬುವವರಿಗೆ ಏನನ್ನುವುದು? ಅಕ್ಕ ಹೇಳಿದಂತೆ “ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕೆ ಅಂಜಿದೊಡೆ ಎಂತಯ್ಯ” ಎಂಬಂತೆ ಈ ಸಂಸಾರದ ಸುಳಿಗೆ ಸಿಕ್ಕಿದ ಮೇಲೆ ಪಾರಾಗಲು ಯಾವುದೇ ಹನ್ನೆರಡು ಸೂತ್ರಗಳೂ ನೆರವಿಗೆ ಬಾರವು

ಹಾಗಾದರೆ ಹೆಣ್ಣಿನ ಮನಸ್ಸು ಗೆಲ್ಲುವುದು ಹೇಗೆ? ಮಿಲಿಯನ್  ಡಾಲರ್ ಪ್ರಶ್ನೆ . ಲೇಖಕರಿಗೆ ಗೊತ್ತಿದ್ದರೆ ಬೃಹದ್ಗಂಥ ರಚಿಸಿ ಹೆಚ್ಚಿನ ಬೆಲೆಗೆ ಮಾರುತ್ತಿದ್ದರು.  ಕವಿಗಳು ಅರಿತಿದ್ದರೆ ಮಹಾಕಾವ್ಯ ರಚಿಸುತ್ತಿದ್ದರು. ಎಲ್ಲ ಚಿತ್ರಕಾರರು ಅದನ್ನೇ ಚಿತ್ರಿಸುತ್ತಿದ್ದರು .ಆದರೆ ಅದು ಸಾಧ್ಯವಿಲ್ಲ.  ಹೌದು ಹೆಣ್ಣು  ಸೂಕ್ಷ್ಮ ಸಂವೇದನಾಶೀಲೆ .ಭಾವನೆಗಳಿಗೆ ಶೀಘ್ರ ಸ್ಪಂದಿಸುವವಳೂ ಹೌದು.  ತನ್ನದೇ ಆದ ಒಂದು ಅಂಥ ಸುಪ್ತ ಕಲ್ಪನಾ ವರ್ತುಲದಲ್ಲಿ ಸಿಲುಕಿರಲು ಬಯಸಿರುವ ಅವಳ ಮನಸ್ಸು ತನ್ನ ಸಂಗಾತಿಯಿಂದಲೂ ಅದನ್ನೇ ಬಯಸುತ್ತದೆ.  ಡಿವಿಜಿಯವರು ಕಗ್ಗದಲ್ಲಿ ಹೇಳಿದಂತೆ

ಕಾರಿರುಳೊಳಾಗಸದ ತಾರೆ ನೂರಿದ್ದೇನು
ದಾರಿಗರ ಕಣ್ಗೆ ಬೇಕೊಂದು ಮನೆಬೆಳಕು
ದೂರದ ದೈವವಂತಿರಲು ಮಾನುಷಸಖ
ಕೋರುವುದು ಬಡಜೀವ_  ಮಂಕುತಿಮ್ಮ
                ಡಿ. ವಿ. ಜಿ.

ಆ ಬಡ ಜೀವ ಕೋರುವುದು ಬಯಸುವುದು ಎಲ್ಲಾ ತನ್ನಿನಿಯನ ಪ್ರೀತಿ ಮಾತ್ರ.  ಆ ಪ್ರೀತಿಯೆಂದರೆ ಅರ್ಥಮಾಡಿಕೊಳ್ಳುವುದು ಗೌರವಿಸುವುದು ಸೇರಿದ ಅಂತಃಸೆಲೆಯ, ಅಂತಕರಣದ, ಅಂತರಂಗದ ಅನುಭೂತಿ. ಅದಕ್ಕೆ ಅಲ್ಪ ತೃಪ್ತಳು ಆಕೆ . ಆದರೆ ಅಲ್ಲಿ ಗಮನಿಸಬಹುದಾದ ಅಂಶವೆಂದರೆ ಗೌರವ ಪ್ರೀತಿ ಬೆರೆತ ಅನುರಾಗ ಭದ್ರ ಅಡಿಪಾಯ.  ಅದರ ಮೇಲೆ ಅನೇಕ ಕಾರ್ಯಕಾರಣಗಳ ಅರಮನೆ ಬೆಳೆಯುವುದು.  ಅರ್ಥಮಾಡಿಕೊಂಡರೆ ಸಾಕು ಸಂವಹನ ಸುಗಮ . ಹೆಣ್ಣು ಅರ್ಥವಾಗದೆ ಉಳಿದಾಗ ಕಗ್ಗಂಟಾದಾಗ ಅವಳ ಒಲಿಸುವ ಪರಿ ತಿಳಿಯದೆನ್ನುವ ಪತಿಮಹಾಶಯ ಕೈಚೆಲ್ಲುತ್ತಾನೆ, ಅಸಹಾಯಕನಾಗಿ ಪ್ರಯತ್ನವನ್ನೇ ಕೈಬಿಡುತ್ತಾನೆ.  ಅರ್ಥಮಾಡಿಕೊಂಡರೆ ಅನುರಾಗದ ಹೂವರಳಿ ಪ್ರೀತಿಯ ಸೌರಭ ಚೆಲ್ಲುವುದು. ಒಂದು ಉದಾಹರಣೆ ಸಿನಿಮಾ ನೋಡಲು ಹೆಂಡತಿಗೆ ಇಷ್ಟ ಎಂದು ಗೊತ್ತು.  ಆದರೆ ತಲೆನೋವಿನಿಂದ ಬಳಲುತ್ತಿದ್ದ ಅಥವಾ ಮಾರನೆ ದಿನ ಮಕ್ಕಳಿಗೆ ಟೆಸ್ಟ್ ಓದಿಸ ಬೇಕಂತಲೋ ನಕಾರ ಸೂಚಿಸಿದರೆ “ಅರ್ಥ ಆಗಲ್ಲಪ್ಪ” ಎನ್ನುವ ಪತಿರಾಯ ಲ್ಲಿ ಇನ್ನೇನು ನಿರೀಕ್ಷೆ ಸಾಧ್ಯ?  ಆದರೆ ತಿಂಗಳ ಬಾದೆಯ ಕಿಬ್ಬೊಟ್ಟೆ ನೋವಿಗೆ ಬಿಸಿನೀರ ಚೀಲ ತಯಾರು ಮಾಡಿಕೊಡುವ, ತಲೆನೋವಿದ್ದಾಗ ಮುಲಾಮು ಹಚ್ಚಿ ಅಡಿಗೆ ಜವಾಬ್ದಾರಿ ತೆಗೆದುಕೊಳ್ಳುವ ಸಂಗಾತಿಗೆ ಹೃದಯ ಸೋಲದಿರುತ್ತದೆಯೇ?  ಇನ್ನೂ ಬಾಹ್ಯ ಆಡಂಬರದ ವಸ್ತುಗಳಿಂದಲೇ ಮನಸ್ಸು ಗೆಲ್ಲಬಹುದೆಂದು ಆಗಿದ್ದರೆ ಶ್ರೀಮಂತವರ್ಗದ ಹೆಂಗಸರಲ್ಲಿ ಖಿನ್ನತೆ ಏಕೆ ಹೆಚ್ಚು ಕಾಣಿಸುತ್ತಿದೆ ?

ಇಡೀ ಜಗವೇ ಏನಾದರೂ ಹೇಳಲಿ ಕೈಹಿಡಿದವನ ಹೊಗಳಿಕೆ ಮುಖ್ಯ ಅವಳಿಗೆ . ಅವಳಲ್ಲಿರುವ ಚೈಲ್ಡ್ ಇಗೋ ಅವನಿಂದ ಪ್ರಶಂಸೆ  ಬಯಸ್ತಾ ಇರುತ್ತೆ. ಅದು ಕಾಟಾಚಾರದ ಬಾಯಿಮಾತಿನದ್ದಲ್ಲ ಮನಃಪೂರ್ವಕವಾಗಿ.. ಮಾಡಿದಡುಗೆ ಹೊಗಳಿದರೆ ಅವಳ ಶ್ರಮ ಮರೆತು ಸಂತಸದಲ್ಲಿ ಮುಗುಳ್ನಗುತ್ತಾಳೆ.  ಸಹಾಯ ಮಾಡದಿದ್ದರೂ ಪಾಪ ದಣಿದಿದ್ದೀ ಎಂಬ ಮಾತು ಆಯಾಸ ಮರೆಸುತ್ತದೆ ಇಷ್ಟೆಲ್ಲ ಇಲ್ಲೆಲ್ಲಾ ಕೆಲಸಮಾಡುವುದು ಕೃತಿ ಅದರ ಹಿಂದಿನ ಸಹಾನುಭೂತಿ.  ಅಷ್ಟಕ್ಕೆ ಧನ್ಯೆಯಾಕೆ.  ಇಷ್ಟು ಅಲ್ಪ ತೃಪ್ತ ಳನ್ನು ಅರ್ಥಮಾಡಿಕೊಂಡು ಅವಳ ದೃಷ್ಟಿಕೋನದಿಂದ ನಿಮ್ಮ ನಡವಳಿಕೆ ನೋಡಿಕೊಳ್ಳಿ ಪತಿರಾಯರುಗಳೇ …ಇವಳೇಕೆ ಅರ್ಥವಾಗಲ್ಲ ಅನ್ನೋ ಪ್ರಶ್ನೆಗೆ ಉತ್ತರ ಸಿಗುತ್ತೆ. ಕನ್ನಡಿಯ ಬಿಂಬದಂತಹ  ಅವಳ ನಡವಳಿಕೆಗೆ ನಿಮ್ಮ ಪ್ರತಿಕ್ರಿಯೆಯು ಸಕಾರಾತ್ಮಕವಾಗಿ ಇದ್ದರೆ ಖಂಡಿತಾ ನೀವಿಬ್ಬರೂ “ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ” ಎಂಬ ಉಮಾಮಹೇಶ್ವರರ ಅರ್ಧನಾರಿ ತತ್ತ್ವ ಪರರಾಗ್ತೀರ.

ನೆನಪಿಡಿ ಯಾವುದೇ ಮುಖವಾಡಗಳು ಹೆಚ್ಚುಕಾಲ ನಿಲ್ಲವು ಅವುಗಳ ಆಯಸ್ಸು ಕಡಿಮೆ. ಹಾಗಾಗಿ ಮನದಾಳದ ಭಾವನೆಗಳನ್ನು ನಿಸ್ಸಂಕೋಚವಾಗಿ ಕಪಟವಿಲ್ಲದೆ  ತೋರಿಸಿದಿರಾದರೆ ನಿಮ್ಮವಳ ಹೃದಯದರಮನೆಗೆ ಪ್ರವೇಶ ಖಂಡಿತ ಖಚಿತ.  ಮನೆಯಾಕೆಯ ನೆಮ್ಮದಿ ಎಂಬ ಗಮ್ಯಕ್ಕೆ ಎಷ್ಟೋ ಕವಲುದಾರಿ ಬಳಸು ದಾರಿಗಳಿದ್ದರೂ ಅವಳನ್ನು ಅರ್ಥ ಮಾಡಿಕೊಳ್ಲುವುದೊಂದೇ ರಾಜಮಾರ್ಗ.  ಸಕಾರಾತ್ಮಕವಾಗಿ ಸ್ಪಂದಿಸಿದರೆ “ಹಾಲುಜೇನು ನನ್ನ ನಿನ್ನ ಜೀವನ” ಎಂದು ಅಣ್ಣಾವ್ರು ಹಾಡಿದ ಹಾಡು ಹಾಡಬಹುದು.  ಇಲ್ಲದಿದ್ದರೆ ಗೊತ್ತಲ್ವಾ “ನಾನೊಂದು ತೀರಾ ನೀನೊಂದು ತೀರಾ” ಅಷ್ಟೇ.

ಹೆಣ್ಣಿನ ಮನ ಗೆಲ್ಲಲು ಇರುವುದೊಂದೇ ದಾರಿ.  ಅವಳನ್ನು ಅವಳಾಗಿ ನೋಡಿ ಸಾಧನೆ ಅತಿಶಯಗಳನ್ನು ಮೆಚ್ಚಿ ದೌರ್ಬಲ್ಯಗಳನ್ನು ಇದ್ದ ಹಾಗೆ ಸ್ವೀಕರಿಸಿ . ಸಾಧ್ಯವಾದರೆ ಅವುಗಳನ್ನು ಮೆಟ್ಟಿ ನಿಲ್ಲಲು ಅವಳಿಗೆ ಸಹಕರಿಸಿ.  ನಿಂದೆ ಅವಹೇಳನ ಬೇಡ .ಕೀಳರಿಮೆ ಬೆಳೆಯದಂತೆ ನೋಡಿಕೊಳ್ಳಿ . ಇದ್ದರೆ ಕಿತ್ತುಹಾಕಿ.  ಪ್ರೇಮವೆಂಬ ಲತೆ  ಸುಮ್ಮನೇ ಅಲ್ಲ .ಅರಳಿ ನಳನಳಿಸಲು ಆರೈಕೆ ಎಂಬ ನೀರು ಗೊಬ್ಬರ ಬೇಕು.  ಪ್ರಣಯದ ಜ್ಯೋತಿಗೆ ಸಹಕಾರ ಸಮನ್ವಯದ ತೈಲ ಆಗಾಗ ಎರೆಯುತ್ತಲೇ ಇರಬೇಕು . ಹೆಣ್ಣು ತನ್ನನ್ನು ಅರ್ಥ ಮಾಡಿಕೊಂಡ ಪತಿಯನ್ನು ಸಾಮ್ರಾಟನನ್ನಾಗಿಸಿ ತಾನು ಸಾಮ್ರಾಜ್ಞಿಯಾಗಿ  ನಲಿಯಲು ಬಯಸುತ್ತಾಳೆ . ನೀವು ಮುಷ್ಟಿ ಒಲವಿತ್ತರೆ ಅವಳು ಖಂಡುಗ ರಾಶಿ ಧಾರೆಯೆರೆಯುತ್ತಾಳೆ.


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂaಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು

2 thoughts on “

  1. Rumba mana tattuva bahala gandasarige hennina hrudayantaranga ariyuva sootra hardika abhinandanegalu nvramesh

  2. ಮೇಡಂ ತುಂಬಾ ಚೆನ್ನಾಗಿ ವರ್ಣಿಸಿದ್ದೀರಿ ಹೆಣ್ಣಿನ ಅಂತರಾಳವನ್ನು. ಹೌದಲ್ಲವೇ ಆಕೆ ಬಯಸುವುದು ಮುಷ್ಟಿಯಷ್ಟು ಪ್ರೀತಿ. ಅದಕ್ಕೇ ಈ ಜನ ಮೀನಿನ ಹೆಜ್ಜೆಗೆ ಹೋಲಿಸುವುದು ತಪ್ಪಲ್ವೇ

Leave a Reply

Back To Top