ಅಂಕಣ ಸಂಗಾತಿ

ಸಕಾಲ

ಶಿವಲೀಲಾ ಹುಣಸಗಿ

ಫ್ರೀ ಗುಂಗಿಂದ ಸಧ್ಯ ಹೊರಬರುವ ಮಾತಿಲ್ಲ

ಅಕಾಲಿಕ ಮಳೆ,ಆಣೆಕಲ್ಲಿನ ಮಳೆ,ಸುನಾಮಿ ಒಂದೇ ಸಲ ಅಪ್ಪಳಿಸಿದರೆ ಏನಾಗಬಹುದು? ಒಂದೆಡೆಗೆ ಆತಂಕ,ಒಂದೆಡೆಗೆ ಸಂತಸದ ಹೊಳೆ ಹರಿದು ಬದುಕು ಕನಸೋ ನನಸೋ ಎಂಬ ಭ್ರಮೆಯಲ್ಲಿ ತೇಲುವ ಗಳಿಗೆ ಈಗ ಹೆಂಗಳೆಯರ ಪಾಲಿಗೆ ಎಂದರೆ ತಪ್ಪಾಗದು.ಇಂತಹದೊಂದು‌ ಸಮಯ ಬರಬಹುದೆಂಬ ನಿರೀಕ್ಷೆ ಮಾಡದ ಮಹಿಳಾ ಮಣಿಗಳಿಗೆ ಅದೃಷ್ಟ ಮನೆಬಾಗಿಲಿಗೆ ಬಾಗಿನ ಹಿಡಿದು ನಿಂತ ಅನುಭವ.ನಾವ್ಯಾರು ಬರೀ ಮುಸುರಿ ತಿಕ್ಕೊಕೆ, ಮನೆಗೆಲಸಕ್ಕೆ ,ಮಕ್ಕಳ ಹೇರುವುದು,ಪಾಲನೆ ಲಾಲನೆ ಮಾತ್ರಕ್ಕೆ ಸೀಮಿತ ಪಡಿಸಿ ಕೈಗೆ ಕಾಸು ದಕ್ಕದಿರುವಂತೆ ಮಾಡುವ ಗಂಡಂದಿರಿಂದ ಬೇಸತ್ತವರಿಗೆ ಒಂದಿಷ್ಟು ರಿಲ್ಯಾಕ್ಸ.

ಹೇಗಿದ್ದ ಜೀವನ ಹೇಗಾತು ಎಂಬ ಚಿಂತೆ ಮನೆಮಾತಾಗಿದ್ದು ನಿಜ. ಜನತಂತ್ರ ವ್ಯವಸ್ಥೆ ನಮ್ಮದು.ಬಡವನಿಗೂ ಬದುಕುವ ಹಕ್ಕಿದೆ.ಒಂದು ತುತ್ತು ಅನ್ನ ಹಸಿವನ್ನು ನೀಗಿಸಿದಷ್ಟು ಮತ್ತ್ಯಾವುದು ನೀಗಿಸಲು ಸಾಧ್ಯವಾಗುತ್ತದೆ. ಅದೇ ಹೊಟ್ಟೆಪಾಡಿಗಾಗಿ ದುಡಿವ ಬಡಕುಟುಂಬಕೆ ಇದೊಂದು ವರದಾನವೆನ್ನುವ ಹಿರಿಜೀವಗಳು. ಜೀವನದ ಮಜಲುಗಳು ಒಂದೇ ತರನಾಗಿ ತೆರೆದುಕೊಳ್ಳುವುದಿಲ್ಲ.2023 ಜೂನ್‌  ರಾಜ್ಯದ ಎಲ್ಲ ಮಹಿಳೆಯರಿಗೊಂದು ಸಬಲಿಕರಣದ ಪ್ರಬಲ ಅಸ್ತ್ರ “ಶಕ್ತಿ” ಯೋಜನೆ ದೇಶದ ಇತಿಹಾಸದಲ್ಲಿ ಪ್ರಥಮವಾಗಿ ದಾಖಲಾಗಿದ್ದು ಕರ್ನಾಟಕದ ಇತಿಹಾಸದ ಪುಟಗಳಲ್ಲಿ. ಸರಕಾರ ಜನಪರ ಅದರಲ್ಲೂ ಬಸ್ಸಿಗೆ ದುಡ್ಡು ಹೊಂದಿಸಿಕೊಳ್ಳಲಾಗದ  ಎಷ್ಟೋ ಕುಟುಂಬಗಳಿಗೆ ಪರ್ಯಾಯವಾಗಿ ಕೈಜೋಡಿಸಿ ಸಹಾಯ ಮಾಡಿದ್ದನ್ನು‌ ಆರ್ಥಿಕ ಹೊರೆಯ ಜೊತೆಗೆ ಸಂಕಷ್ಟದ ನಡುವೆ ಫ್ರೀ ಎನ್ನುವ ಶಬ್ದ “ಡಿಜೆ ಸೌಂಡಿಗಿಂತ” ಹೆಚ್ಚು ಸದ್ದು ಮಾಡಿದೆ.ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದವರೆಷ್ಟೋ, ನಕಾರಾತ್ಮಕವಾಗಿ ಸ್ವೀಕರಿಸಿದವರೆಷ್ಟೋ?ಈ ಎರಡು ಮನೋಭಾವದವರು ನಮ್ಮವರೇ.

ಹೂವು ಚಲುವೆಲ್ಲಾ‌ನಂದೆಂದಿತು…ಎಂಬ ಹಾಡನ್ನು ಹಾಡಿ ಸಂಭ್ರಮಿಸಿದ‌ ಮಹಿಳಾಮಣಿಗಳಿಗೆ,ಜೂನ್‌ 11 ಕರ್ನಾಟಕದ ಇತಿಹಾಸದಲ್ಲಿ ಮಹಿಳೆಯರಿಗೊಂದು ಫ್ರೀ ಬಸ್ಸ್ ಯೋಜನೆ ಸ್ರ್ತೀ ಶಕ್ತಿ ‌ಯೋಜನೆ ಜಾರಿಯಾಗಿದ್ದನ್ನು ಯಾರು ಮರೆಯುವಂತಿಲ್ಲ.ಇದರಿಂದ ರಾಜ್ಯದ ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣ ಘೋಷಿಸಲಾಗಿದ್ದು, ಬಸ್​ ಹತ್ತಿದ ಮಹಿಳೆಯರಿಗೆ ಟಿಕೆಟ್​ ನೀಡಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿ,ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಸರ್ಕಾರ ನೀಡುವ ಪಿಂಕ್‌ ಟಿಕೆಟ್‌ ಬದಲು “ಫ್ರೀ ಬಸ್​” ಟಿಕೆಟ್​ ನೀಡಲು ಇಲಾಖೆ ನಿರ್ಧಾರ ಮಾಡಿದೆ.ಸರ್ಕಾರಿ ಉಚಿತ ಪ್ರಯಾಣ ಬಸ್​ ಹತ್ತುವ ಮಹಿಳಾ ಪ್ರಯಾಣಿಕರಿಗೆ ಗುರುತಿನ ಚೀಟಿಗಳನ್ನು ಪರಿಶೀಲಿಸಿ,ಬಿಬಿಎಂಪಿ, ಕೆಎಸ್​ಆರ್​ಟಿಸಿ ಸೇರಿ ನಾಲ್ಕು ಸಾರಿಗೆ ನಿಗಮಗಳಲ್ಲಿ ರಾಜ್ಯ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ ಲಭ್ಯವಿರುವುದು,ಕರ್ನಾಟಕದಲ್ಲಿ ಎಲ್ಲಿ ಬೇಕಾದರೂ ಪ್ರಯಾಣ ಮಾಡಲು ಮಹಿಳೆಯರಿಗೆ ಮುಕ್ತ ಅವಕಾಶ ನೀಡಲಾಗಿದೆ.ಕರ್ನಾಟಕ ರಾಜ್ಯ ಮಹಿಳೆರಿಗೆ ಮಾತ್ರ ಯೋಜನೆ ಅನ್ವಯ ಆಗಲಿದೆ. ಬೇರೆ ರಾಜ್ಯಗಳಿಗೆ ತೆರಳುವ ಸರ್ಕಾರಿ ಬಸ್​​ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಲಭ್ಯ ಇರುವುದಿಲ್ಲ. ಹವಾನಿಯಂತ್ರಿತ ಹಾಗೂ ಐಷಾರಾಮಿ ಬಸ್​ಗಳಲ್ಲಿ ಮಹಿಳೆಯರಿಗೆ ಪ್ರಯಾಣಕ್ಕೆ ಅವಕಾಶವಿಲ್ಲ.

ಅದೆಷ್ಟೋ ಕೂಗುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಹೊಸತೆನಲ್ಲ.ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಆರಂಭವಾದ ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಮೂರ್ನಾಲ್ಕು ಜನ ಯುವಕರು ಸೀರೆಯುಟ್ಟು ಬಸ್‌ಗಾಗಿ ಕಾಯುವ ದೃಶ್ಯ ವೈರಲ್‌ ಆಗಿತ್ತು. ಈ ವಿಡಿಯೋ ಮನೋರಂಜನೆಗಾಗಿ ಮಾಡಲಾಗಿದ್ದರೂ,ಕೆಲವೊಂದು ಕಡೆ ಇದು ಸತ್ಯವಾಗಿದ್ದು ಆಶ್ಚರ್ಯ.ರಾಜ್ಯ ಸರ್ಕಾರದ ಫ್ರೀ ಬಸ್‌ ಕೊಟ್ಟಿದ್ದು ಮಹಿಳೆಯರಿಗೆ ಹಬ್ಬದೂಟ. ಕರ್ನಾಟಕ ಸರ್ಕಾರ ಮಹಿಳೆಯರಿಗೆ ಫ್ರೀ ಬಸ್‌ ಯೋಜನೆ ಘೋಷಣೆ ಮಾಡಿದೆ. ಮಹಿಳೆಯರೂ ಕೂಡ ಉಚಿತ ಪ್ರಯಾಣದ ಸವಿ ಅನುಭವಿಸುತ್ತಿದ್ದಾರೆ.ಟೀಕಾಪ್ರಹಾರಗಳ ನಡುವೆಯು ಫ್ರೀ ಬಸ್ ನಲ್ಲಿ ಪ್ರಯಾಣ ಸಾಗಿದೆ,ಗುರುತಿನ ಚೀಟಿಗಳ ಜೊತೆಗೆ.

ಯಾವುದು ಸುಲಭವಾಗಿ ಸಿಗುತ್ತದೆಯೋ ಅದರ ಮಹತ್ವದ ಬಗ್ಗೆ ಅರಿವು ಕಡಿಮೆಯೆಂದೆ ಭಾವಿಸಬೇಕು.ಫ್ರೀ ಬಸ್ಸು‌ ಮಹಿಳೆಯರಿಗೆ ಉಪಯೋಗ ವಾಗಿದೆ,ಅದರ ಸಾಧಕ ಬಾದಕಗಳ ಬಗ್ಗೆ ಚಿಂತನೆ ಮಾಡುವುದು ಅನಿವಾರ್ಯ. ಅನವಶ್ಯಕ ತಿರುಗಾಟ ಅವಶ್ಯಕತೆ ಇದೆಯಾ ಎಂಬ ಪ್ರಶ್ನೆಗೆ ಉತ್ತರ ನೀಡಬೇಕಾಗಿದ್ದು ಪ್ರತಿಯೊಬ್ಬ ಹೆಣ್ಣು ಮಗಳ ಜವಾಬ್ದಾರಿ. ಹಾಗಂತ ನೀಡಿರುವ ಸೌಲಭ್ಯದಿಂದ ವಂಚಿತಳಾಗಿ ಇರುವುದು ಸಲ್ಲ.ಒತ್ತಾಯ,ಹೇರಿಕೆ,ಬಲವಂತ ಹಾಗೂ ದೌರ್ಜನ್ಯಕ್ಕೆ ಒಳಗಾಗಿ ಮೂಕವೇದನೆಯಿಂದ ಬಲಿಯಾದವರ ಪಟ್ಟಿ ನಮ್ಮ ನಡುವೆ ಇದೆ.ಪುರುಷರಿಗೆ ಅನ್ಯಾಯ ಮಾಡದೇ ಅವರೆಲ್ಲ ಭಾವನೆಗಳಿಗೆ ಬೆಲೆ ಕೊಟ್ಟು ಬದುಕುವಾಗ,ಅವಳಿಗೊಂದು ಸ್ವಾತಂತ್ರ್ಯ ಫ್ರೀ ಟೀಕೇಟ್ ಅಂದಾಕ್ಷಣ ಅತಂತ್ರರಾದಂತೆ ಮನಬಂದಂತೆ ಹೆಣ್ಣು ಮಕ್ಕಳಿಗೆ ಬಯ್ಯುವ ನಶೆಯ ಮನಸ್ಥಿತಿಯುಳ್ಳವರಿಗೆ ಏನು ಹೇಳಲು ಸಾಧ್ಯ.
ಹೆಣ್ಣು ಮಕ್ಕಳಿಗೆ ಸರ್ಕಾರ ಗೃಹ ಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಅಂತ ಮೂರು ಯೋಜನೆ ಕೊಟ್ಟಿದೆ. ಮಹಿಳೆಯರು ಫ್ರೀ ಬಸ್‌ ಬಳಸ್ತಿದ್ದಾರೆ. ಆದರೆ ಪುರುಷರು ಮಾತ್ರ ನಾವು ಏನ್ ಪಾಪ ಮಾಡಿದೀವಿ ಸ್ವಾಮಿ ಅಂತ ಪ್ರಶ್ನೆ ಮಾಡುತ್ತಿದ್ದಾರೆ.ಮೊದಲೆಲ್ಲ ಬಸ್ಸುಗಳಲ್ಲಿ ಮಹಿಳೆಯರ ಸಂಖ್ಯೆ ಅಷ್ಟಕ್ಕೇ ಇಂದು ಅದರ ಗಡಿ ದಾಟಿದೆ.ಬಸ್ಸ್ಗಳಲ್ಲಿ ಮಹಿಳೆಯರಿಗೆ ಮೀಸಲು ಸೀಟಗಳ ಬೋರ್ಡ್ ಓದದವರೆ ಇಲ್ಲ.ಆದ್ರೆ ಇನ್ಮುಂದೆ ಪುರುಷರಿಗಾಗಿ ಎಂಬ ಬೋರ್ಡ್ ಬಂದರೆ ಆಶ್ಚರ್ಯವಿಲ್ಲ.

ಏನೋ ಅನ್ನಿ ಕೆಲ ಮಹಿಳೆಯರಿಗೆ ಫ್ರೀ ಅವಶ್ಯಕತೆ ಇಲ್ಲ.ಅವರು ಸ್ವತಃ ದುಡ್ಡು ಕೊಟ್ಟು ಟಿಕೇಟ್ ಪಡೆದು ಪ್ರಯಾಣಿಸುವ ಮಹಿಳೆಯರಿಗೇನು ಕಮ್ಮಿಯಿಲ್ಲ.ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದಿಂದ, ಯಾವುದೇ ಪ್ರಯೋಜನೆ ಕೂಡ ಇಲ್ಲ.ಸರಕಾರ ಉಚಿತವಾಗಿ ನೀಡಬೇಕಾಗಿದ್ದು ಸರಕಾರಿ ಶಾಲೆಗಳು ಸಮೃದ್ಧವಾಗಿ ಬೆಳೆಯುವತ್ತ ಹಾಗೂ ಶಿಕ್ಷಣ ವ್ಯಾಪರವಾಗದಂತೆ,ಬಡ ಮಕ್ಕಳಿಗೆ ಕೈಗೆಟುಕುವ ಶಿಕ್ಷಣ ಫ್ರೀಯಾಗಿ ಸಿಗಲಿ.ಉದ್ಯೋಗ ನೀಡುವುದರಿಂದ ನಿರುದ್ಯೋಗ ಸಮಸ್ಯೆ ನಿವಾರಣೆಯಾದಷ್ಟು ಆರ್ಥಿಕ ಸ್ಥಿತಿಯ ಜೊತೆಗೆ ಕುಟುಂಬ ಅಭಿವೃದ್ಧಿ ಹೊಂದುತ್ತದೆ.ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಲ್ಲಿ ಖಂಡಿತ ಫಲಾನುಭವಿಗಳಿಗೆ ಎರಡು ಹೊತ್ತಿನ ಊಟಕ್ಕೆ ಗಂಜಿಯಾದರೂ ದಕ್ಕಿದರೆ ಯೋಗ್ಯವೇನೋ ಎಂಬ ಆತಂಕದ ಹಾಗೂ ತಮ್ಮೊಳಗಿನ ನೋವು ಹಂಚಿಕೊಂಡ ಮಹಿಳೆಯರು ನಮ್ಮೊಂದಿಗೆ ಇದ್ದಾರೆ‌.

ಬಸ್ಸನ್ಯಾಗ ಫ್ರೀ ಟಿಕೇಟ್
ಬ್ಯಾಗನ್ಯಾಗ ಆಧಾರ ಕಾರ್ಡ ಇಟ್ಟ
ನನ್ನ ಗೆಳತಿ ತಿರಗಾಕ ಹತ್ಯಾಳ ನಮ್ಮೂತ ಬಿಟ್ಟ
ಕೈಗೆ ಸಿಗವಲ್ದ ನನ್ನದು ಆಗೈತಿ ತಲಿಕೆಟ್ಟ
ಆಧಾರ ಕಾರ್ಡ ಹಿಡಕೊಂಡು ಊರೂರು ತಿರುಗ್ಯಾಳ


ಜನಪದ ಹಾಡುಗಳು ಮನಸ್ಸಿಗೆ ಬಂದಂಗ ಕೇಳುತ್ತಿವೆ.ತಮಾಷೆಗಾಗಿ ಮನಸ್ಸಿಗೆ ಏನೋ ಸಮಾಧಾನ…ಯಾರೋ ವೀಡಿಯೋ ಹಂಚಿಕೊಂಡ ನೆನಪು…ಒನಕೆ ಓಬವ್ವನ ಹಾಡಿಗೆ ಫ್ರೀ ಬಸ್ ಹತ್ತಲು ಓಡಿ ಬರುವ ಮಹಿಳೆಯರ ದಂಡು ನೋಡಿ ನಾನು ಹೌಹಾರಿದ್ದೆ.ಮಹಿಳಾ ಸೈನ್ಯ ಕಟ್ಟಲು ಶ್ರಮಪಡುವ ಅಗತ್ಯವಿಲ್ಲವೆನಿಸಿತು. ಗುಂಪು,ಬಸ್ಸಿನ ತುಂಬ ಅವರದೇ ಸಾಂಗ್… ಹೆಣ್ಮಕ್ಕೆ ಸ್ಟ್ರಾಂಗು ಗುರು,ಕಾಸಿಲ್ಲದಾಗ ಕೈಲಾಸ ಕಂಡತೆಂಬ ಮಾತಿನಂತೆ.ಏನೋ ಒಗ್ಗಟ್ಟಾಗಿ ದೇವಸ್ಥಾನಗಳ ದರ್ಶನಕ್ಕೆ ಮನೆಯಜಮಾನನ್ನು ಮನೆಕಾಯಲು ಬಿಟ್ಟು ಹೋದ ಘಟನೆಗಳು  ಎಷ್ಟೋ. ಬಸ್ಸಿನ ಚಕ್ರಕ್ಕೆ ತಲೆಕೊಟ್ಟು ಮನೆಬಿಟ್ಟು ಹೋದ ಹೆಂಡತಿಗಾಗಿ ಅಳುವ ಕುಡುಕ ಗಂಡಂದಿರ ಗೋಳು ಕೇಳಲಾಗದು ಹಾಸ್ಯವೆನಿಸಿದರೂ ದಿಟವೇ.ನಾನು ಅಂದುಕೊಂಡಿದ್ದು ಇದೆ,ಇಂತ ಗಂಡ ಬುದ್ದಿಕಲಿಲಿ ಎಂದು ತವರು ಮನೆ ಸೇರಿರಬಹುದೆಂಬ ಗುಮಾನಿ.ಯಾವ ಹೆಣ್ಣು ಮಕ್ಕಳು ಫ್ರೀ ಗಾಗಿ ಬದುಕನ್ನು ಮುರಾಬಟ್ಟೆ ಮಾಡಲು ಸಾಧ್ಯವಿಲ್ಲ. ಅಪವಾದಗಳು ಇರಬಹುದು.ಮನಿಯಾಗಿನ ಎಲ್ಲ‌ಹೆಣ್ಮಕ್ಕಳು ಒಟ್ಟಾಗಿ ಸೇರಿ ನಲಿಯುವ ಸಮಯಕ್ಕೆ‌ ಸಾಕ್ಷಿಯಾಗಬೇಕು.

ಯಾರಿಗಾರದು ಉಚಿತ ಟಿಕೆಟ್‌ ಸೌಲಭ್ಯ ಬೇಡ ಎಂದಾದಲ್ಲಿ
 ಬಸ್‌ ಕಂಡಕ್ಟರ್‌ ಬಳಿ ಕೇಳಿ ಶುಲ್ಕ ಪಾವತಿಸಿದ ಟಿಕೆಟ್‌ ಪಡೆದುಕೊಳ್ಳಬಹುದು.ಈ ಹಿಂದಿನಂತೆಯೇ ಶುಲ್ಕ ನಮೂದಿಸಿದ ಟಿಕೆಟ್‌ ಅನ್ನು ನೀಡಲಾಗುತ್ತದೆ.ಯಾರಿಗೂ ಉಚಿತ ಪ್ರಯಾಣ ಕಡ್ಡಾಯವಲ್ಲ, ಸೌಲಭ್ಯ ಬೇಕಿದ್ದವರು ಪಡೆದುಕೊಳ್ಳಬಹುದು.
ಉಳ್ಳವರು ಗ್ಯಾರಂಟಿ ಯೋಜನೆ ಸೌಲಭ್ಯ ತ್ಯಜಿಸಿ ಸರ್ಕಾರದ ಹೊರೆ ಕಡಿಮೆ ಮಾಡಿ ಎಂಬ ಮಾತುಗಳು ಕೇಳಿಬರುತ್ತಿದ್ದವು.ಒಟ್ಟಾರೆಯಾಗಿ ಫ್ರೀ ಗುಂಗಿಂದ ಸಧ್ಯ ಹೊರಬರುವ ಮಾತಿಲ್ಲ.ಮನಸ್ಸು ಒಂದುಕಡೆ ಒಂದೂರಿಂದ ಇನ್ನೊಂದೂರಿಗೆ ಮಹಿಳೆಯರ ಗುಂಪುಗುಂಪಾಗಿ ಖುಷಿಖುಷಿಯಿಂದ ಓಡಾಡುವ ದೃಶ್ಯ ಕಣ್ಮುಂದೆ ಇದೆ.ಒಂದಿಷ್ಟು ಸಮಯ ಈ ಖುಷಿ ಅನುಭವಿಸಿದ ಮೇಲೆ ಅದಕ್ಕೊಂದು ಸಾರ್ಥಕತೆ.ಗಂಡಸರ ಜೇಬಿಗೆ ಕತ್ತರಿ ಬೀಳುವುದು ಕಡಿಮೆಯಾದಂತೆ. ದುಡ್ಡು ಹೊಂದಿಸಲಾರದೆ ಒದ್ದಾಡುವ ಪ್ರಮೇಯ ಇಲ್ಲ.ಆದರೆ ನಮ್ಮೊಟ್ಟಿಗೆ ಗಂಡಸರಿಗೂ ಟಿಕೇಟ್ ಫ್ರೀ ಇದ್ದಿದ್ದರೆ ಒಳ್ಳೆಯದಿತ್ತು ಎಂಬ ಸಣ್ಣ ಕೂಗು ಮನದೊಳಗಿಂದ.ನಾವೆಲ್ಲ‌ ಖುಷಿಯಾಗಿದ್ದಾಗ ಅವರ ಸಪ್ಪೆಮುಖ ನೋಡಲಾಗದು ಅಷ್ಟೇ.ಊರಿಗೆ ಹೊಂಟವಳಿಗೆ ಟಾ ಟಾ ಹೇಳುವ ಅವರಿಗೂ ನಮ್ಮ ಸಂಕಟ ಗೊತ್ತಾಗಲಿ‌ ಮನಿಯಾಗ ಖಾಲಿ ಇರತಾಳ ಕೆಲಸಿಲ್ಲ ಅನ್ನೊವರಿಗೆ…ಒಂದಿಷ್ಟು ಜವಾಬ್ದಾರಿ ಕೊಟ್ಟಂತಾಗಿದೆ.ಫ್ರೀ ಎಷ್ಟದಿನ ಇರತದೋ ಗೊತ್ತಿಲ್ಲ… ಇದ್ದಷ್ಟ ಸಮಯ ಅದರ ಸದುಪಯೋಗ ಪಡಕೊಳ್ಳೊದು ನಮ್ಮ ಹಕ್ಕು.


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ೧)ಬಿಚ್ಚಿಟ್ಟಮನ,೨)ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು ೩) ಗಿರಿನವಿಲನೆನಪುಗಳು ಪ್ರೇಮಲಹರಿಗಳು,೪) ಗೋರಿಯಸುತ್ತ ಸಪ್ತಪದಿ ತುಳಿದಾಗ ಕಥಾ ಸಂಕಲನ, ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿ,ಜಿಲ್ಲಾಧ್ಯಕ್ಷೆ ಕೇ.ಕ.ಸಾ.ವೇದಿಕೆ.ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

5 thoughts on “

    1. ಸುಂದರ ಲೇಖನ ವಾಸ್ತವ.

  1. ವಾಸ್ತವದ ಚಿತ್ರಣ …. ತುಂಬಾ ಚೆನ್ನಾಗಿದೆ….ಮನಸಿಗೆ ಮುದವನಿತ್ತು ಇನ್ನೂ ಇರಬೇಕಿತ್ತು ಎನ್ನುವ ಹಾಗಿದೆರೀ ಮೇಡಂ ರೀ

  2. ಅರ್ಥವ್ಯಕ್ತಿ
    ಶ್ರೀಮತಿ ಶಿವಲೀಲಾ ಹುಣಸಗಿ ಅವರ ಸಕಾಲ ಅಂಕಣ ಸಕಾಲಿಕ ವಿಷಯಗಳ ಮೇಲೆ ಕ್ಷಕಿರಣ. ಮಹಿಳೆಯರಿಗೆ ಬಸ್ ಫ್ರೀ ಆದದ್ದೇ ಒಂದು ಉತ್ಸವವೂ ಆಯಿತು, ಬೇಸರವೂ ಆಯಿತು. ಸ್ತ್ರೀ ಸಬಲಿಕರಣ ಎಂದು ಉಯಿಲು ಎಬ್ಬಿಸಿದವರ
    ಉಡುಗಿದ್ದು ವಿಪರ್ಯಾಸ ಎನಿಸಿತು. ಮಾತೇ ಆಡದೆ ಉಸಿರುಕಟ್ಟಿ ನಿಂತ ಮಾತೆಯರಿಗೆ ಒಂದಿಷ್ಟು ನಿರಾಳ. ತಾವು ಕಾಣದ ದೇವಾಲಯಗಳನ್ನು ಸುತ್ತಿ ಬರುವ ಹಂಬಲ. ಯಾವುದೇ ಒಂದು ತಕ್ಷಣದ‌ ಬದಲಾವಣೆ ತಲ್ಲಣಗೊಳಿಸುವುದು ನಿಜ. ಅಂಥ ಒಂದು ಅವಲೋಕನವೊಳಗೊಂಡ ಪ್ರಸ್ತುತ ಲೇಖನ!

    D.s.NAIK Sirsi

Leave a Reply

Back To Top