ಡಾ. ಮೀನಾಕ್ಷಿ ಪಾಟೀಲ್ ಕವಿತೆ-ಮಳೆ ಹುಡುಗಿ

ಕಾವ್ಯ ಸಂಗಾತಿ

ಡಾ. ಮೀನಾಕ್ಷಿ ಪಾಟೀಲ್

ಮಳೆ ಹುಡುಗಿ

ಓಡುವ ಮೋಡಗಳೇ
ಓಡದಿರಿ ನಿಲ್ಲಿ ನಿಂತು
ಒಂದಿಷ್ಟು ಹನಿಸಿ ಹೋಗಿ
ಈ ಮಿಂಚಿನ ಹುಡುಗಿಗಾಗಿ

ನಿನ್ನ ಹನಿಗೆ
ಮುತ್ತಾಗುವ ಆಸೆ
ಕಾಮನಬಿಲ್ಲಿನ ಕಣ್ಣಿನ
ಈ ಹುಡುಗಿಗೆ

ಚೆದುರಿದ ಮೋಡಗಳೇ
ಮತ್ತೆ ಒಂದಾಗಿ
ನಿಮ್ಮ ಮಿಲನ
ಸ್ಪೂರ್ತಿ ಆಗಬಹುದು ಈ ಹುಡುಗಿಗೆ

ಹನಿಗೆ ಹಸಿಯಾಗುವಾಸೆ
ಹೃದಯಾಳದಲ್ಲಿ ಹವಳವಾಗುವಾಸೆ
ಚೆಂದುಟಿಯ ಚೆಂದುಳ್ಳಿ
ಈ ಹುಡುಗಿಗೆ

ಜಿಟಿ ಜಿಟಿ ಮಳೆ
ಪುಳಕಗೊಂಡಿದೆ ಇಳೆ
ಉನ್ಮತ್ತವಾಗಿದೆ ಮನಸು
ಈ ಮಳೆ ಹುಡುಗಿಗೆ

ಹನಿ ಹನಿಯಾಗಿ
ಹನಿಸೋ ಸೊಲ್ಲಿಗೆ
ಜೇನಿಟ್ಟಿದೆ ಎದೆಯ ಗೂಡಲ್ಲಿ
ತೊಟ್ಟಿಕ್ಕುವಾಸೆ ಈ ಹುಡುಗಿಗೆ

ಮುಂಗಾರಿನ ಆರ್ಭಟ
ಕೇಳಿಸಲೇ ಇಲ್ಲ
ನಿನ್ನ ಪ್ರೇಮದ
ಪಿಸುದನಿ ಅನುರಣಿಸಿದೆ
ಈ ಮಳೆ ಹುಡುಗಿಯ ಎದೆಯಲ್ಲಿ

—————————–

ಡಾ. ಮೀನಾಕ್ಷಿ ಪಾಟೀಲ್

One thought on “ಡಾ. ಮೀನಾಕ್ಷಿ ಪಾಟೀಲ್ ಕವಿತೆ-ಮಳೆ ಹುಡುಗಿ

Leave a Reply

Back To Top