ಗಂಗಾಂಬಿಕೆ ವಚನ ವಿಶ್ಲೇಷಣೆ-ಪ್ರೊ. ಜಿ ಎ.ತಿಗಡಿ. ಸವದತ್ತಿ.

ವಚನ ವಿಶ್ಲೇಷಣೆ

ಗಂಗಾಂಬಿಕೆ ವಚನ

ಪ್ರೊ. ಜಿ ಎ.ತಿಗಡಿ. ಸವದತ್ತಿ

ಫೋಟೊ ಕೃಪೆ: ಗೂಗಲ್

ಪತಿಯಾಜ್ಞೆಯಲ್ಲಿ ಚರಿಪ ಸತಿಗ್ಯಾಕೆ ಪ್ರತಿಜ್ಞೆಯು ?
ಪ್ರತಿಜ್ಞೆಯ ಪತಿಕರದಲ್ಲಿ ಪೋಪದಿರೆ ಯಾತನೆಯಲ್ಲವೆ ?
ಇವಳ ಲಿಂಗನಿಷ್ಠೆ ಇವಳಿಗೆ,
ನಮ್ಮ ನಿಷ್ಠೆ ಪತಿಯಾಜ್ಞೆಯಲ್ಲಿ ಕಾಣಾ
ಗಂಗಾಪ್ರಿಯ ಕೂಡಲಸಂಗಮದೇವಾ.

ತನ್ನ ಪತಿಯ ಮಾರ್ಗದರ್ಶನದಲ್ಲಿ ನಡೆಯುತ್ತಾ ಅಂತರಂಗ ಬಹಿರಂಗದಲ್ಲಿ ಆತನಿಗೆ ನೆರವಾಗುತ್ತಾ ಜೀವನ ಸಾಗಿಸುತ್ತಿರುವ ಸತಿಗೆ ಮತ್ತೆ ಬೇರೆ ನಿಯಮ, ವೃತಗಳು ಬೇಕೆ ? ಎಂದು ಗಂಗಾಂಬಿಕೆ ಪ್ರಶ್ನಿಸುತ್ತಾಳೆ. ಹಾಗೊಂದು ವೇಳೆ ವ್ರತ ನಿಯಮಗಳ ಆಚರಣೆಯ ಜಂಜಡದಲ್ಲಿ ಸಿಲುಕಿಕೊಂಡರೆ ಬೇರೊಂದು ಅಪಾಯಕ್ಕೆ ದಾರಿಮಾಡಿ ಕೊಟ್ಟಂತಾಗುತ್ತದೆಯಲ್ಲವೇ? ಒಂದು ವೇಳೆ ಆಕಸ್ಮಿಕವಾಗಿ ವ್ರತ ನಿಯಮಗಳ ಆಚರಣೆಯಲ್ಲಿ ಭಂಗ ಉಂಟಾದರೆ ಅದರಿಂದ ಮಾನಸಿಕ ಕ್ಲೇಶ, ದುಃಖಗಳುಂಟಾಗಿ ಯಾತನೆಪಡುವುದು ನಿಶ್ಚಯ. ಬಹಿರಂಗದಲ್ಲಿ ಲಿಂಗನಿಷ್ಠೆ, ಅಂತರಂಗದಲ್ಲಿ ಪತಿ ಆಜ್ಞೆಯ ಪಾಲನೆಯೇ ಸತಿಯ ಪರಮ ಧರ್ಮ ಎಂಬುದನ್ನು ಆಕೆ ಸ್ಪಷ್ಟಪಡಿಸಿದ್ದಾಳೆ . ಹೀಗಿರುವಾಗ ವ್ರತ ನಿಯಮಗಳ ಆಚರಣೆಗೆ ಇಲ್ಲಿ ಅವಕಾಶವೇ ಇರುವುದಿಲ್ಲ.

   ವಚನದ ಅರ್ಥ ಇಷ್ಟಕ್ಕೇ ನಿಲ್ಲದೆ ಪಾರಮಾರ್ಥಿಕ ನೆಲೆಯಲ್ಲಿ   ಮತ್ತೇನನ್ನೋ ಧ್ವನಿಸುವಂತಿದೆ.  " ಶರಣ ಸತಿ ಲಿಂಗಪತಿ" ಇದು ಶರಣ ಸಿದ್ದಾಂತ.   ಗಂಗಾಂಬಿಕೆ ಇಲ್ಲಿ 'ಪತಿಯಾಜ್ಞೆ 'ಎಂದಿರುವುದು , ಚೈತನ್ಯ ಸ್ವರೂಪಿಯಾದ ನಮ್ಮ' ಅರಿವೆಂಬ'  ಪತಿಯ ನಿರ್ದೇಶನದಂತೆ ನಡೆಯುವುದು ಎಂದರ್ಥ.  ಆ ಅರಿವೆಂಬ ಯಜಮಾನನ ಮಾರ್ಗದರ್ಶನದಂತೆ  ಸತ್ತ್ಕ್ರಿಯೆಗಳ ಆಚರಣೆಯಲ್ಲಿ ತೊಡಗಬೇಕಾದದ್ದು ಪ್ರತಿಯೊಬ್ಬ ಶರಣನ ಆದ್ಯ ಕರ್ತವ್ಯವಾಗಿದೆ.   ಹೀಗಿರುವಾಗ ಲೌಕಿಕದ ಸಕಾಮಿ ವೃತ ನಿಯಮಾದಿಗಳ ಗೊಡವೆ ಬೇಕಿಲ್ಲ.   ಒಂದು ವೇಳೆ ಇವುಗಳಲ್ಲಿಯೂ ತೊಡಗಿಕೊಂಡರೆ ಉಭಯದ ದ್ವಂದ್ವದಿಂದ ಹೊರಬರುವುದು ತುಂಬಾ ಕಷ್ಟ.   ಏಕನಿಷ್ಠೆ ವಿಘಟನೆಗೊಂಡು ಬಹು ನಿಷ್ಠೆಯಾದಲ್ಲಿ ನೋವು, ತೊಂದರೆ,  ದುಃಖಗಳಿಗೆಗೊಳಗಾಗಿ  ಯಾತನೆಪಡುವುದು ನಿಶ್ಚಿತ.  ಕೊನೆಗೆ ಅಲ್ಲಿಯೂ ಸಲ್ಲದೆ, ಇಲ್ಲಿಯೂ ಸಲ್ಲದೆ, ಮಧ್ಯದಲ್ಲಿ ತ್ರಿಶಂಕುವಿನಂತೆ ಒದ್ದಾಡಬೇಕಾಗುತ್ತದೆ.

       ಕಾರಣ ಅಂತರಂಗದ ಅರಿವಿನ ಕುರುಹಾಗಿ ಕರಸ್ಥಲದಲ್ಲಿ ಸ್ಥಿತನಾದ ಲಿಂಗಯ್ಯನಿಗೆ ನಿಷ್ಠೆ ತೋರಿದರೆ ಸಾಕು,  ಆತನೇ ನಮಗೆ ಪತಿ, ಒಡೆಯ, ಮಾರ್ಗದರ್ಶಕ ಎಲ್ಲವೂ ಆಗಿದ್ದಾನೆ.   ಹೀಗೆ ಬಹಿರಂಗದ ಲಿಂಗನಿಷ್ಠೆ, ಅಂತರಂಗದ ಲಿಂಗಪತಿ ಭಾವಗಳೆರಡೂ ಒಂದಾದಲ್ಲಿ  ಪರಮಸುಖಿಯಾಗಬಹುದು.

ಪ್ರೊ. ಜಿ ಎ.ತಿಗಡಿ. ಸವದತ್ತಿ

Leave a Reply

Back To Top