ಪ್ರಬಂಧ ಸಂಗಾತಿ
ಸಮತಾ ಆರ್.
ಕರೋನಾ ಮಾರಿಯೂ ಮೈಸೂರು ಸಿಲ್ಕ್ ಸೀರೆಯೂ…
ಮೊನ್ನೆ ನನ್ನ ತಮ್ಮ ಕರೆ ಮಾಡಿ “ಮೈಸೂರಿನಲ್ಲಿ ಒಳ್ಳೇ ಮೈಸೂರು ಸಿಲ್ಕ್ ಸೀರೆಗಳ ಶೋ ರೂಂ ಗಳು ಎಲ್ಲೆಲ್ಲಿವೆ ಹೇಳೆ”ಎಂದಾಗ ಸಣ್ಣಗೆ ಖುಷಿಯಾಯಿತು.” ಹೇಗಿದ್ದರೂ ದೀಪಾವಳಿ ಹತ್ರ ಬರ್ತಾ ಇದೆಯಲ್ಲ ಅದಕ್ಕೆ ಕೊಡಿಸಲು ಇರಬೇಕು” ಅನ್ನಿಸಿತು.ಖುಷಿ ದನಿಯಲ್ಲಿ ತೋರಗೊಡದಂತೆ,ಏನೂ ನಿರೀಕ್ಷೆಯಿಲ್ಲದವಳಂತೆ, ಎಲ್ಲೆಲ್ಲಿವೇ ಎಂದು ಹೇಳಿ,”ಹಬ್ಬಕ್ಕೆಲ್ಲಾ ಯಾಕೆ ಸುಮ್ನೆ ಅಷ್ಟು ದುಬಾರಿ ಸೀರೆ ಬೇಡ ಬಿಡೋ,” ಎಂದೆ.ಆ ಬದಿಯಿಂದ ನನ್ನ ತಮ್ಮನ ದೊಡ್ಡ ನಗು ಆಸ್ಫೋಟಿಸಿತು.” ನಿನ್ ತಲೆ,ನನಗೂ ಏನೂ ಅಷ್ಟು ತಲೆ ಕೆಟ್ಟಿಲ್ಲ ಹಬ್ಬಕ್ಕೆಲ್ಲ ಆ ಸೀರೆ ಕೊಡ್ಸಕ್ಕೆ, ಯಾರಿಗೋ ಬೇಕಿತ್ತು ಅದಕ್ಕೆ ಕೇಳಿದೆ ಕಣೆ ತಲೆ ಹರಟೆ,”ಎಂದು ಬೈದ.ನಾನು ಆದ ನಿರಾಸೆಯ ನುಂಗಿಕೊಂಡು ಏನೂ ಆಗದವಳಂತೆ ಉದಾಸೀನ ನಟಿಸುತ್ತಾ,” ಮತ್ತೆ ಇನ್ಯಾರಿಗೋ”ಎಂದು ಕುತೂಹಲ ತಾಳಲಾರದೆ ಕೇಳಿದೆ.
“ಅದು ನಮ್ಮ ಆಫೀಸ್ ಗೆ ಯಾರೋ ಫಾರಿನ್ ಡೆಲಿಗೇಟ್ಸ್ ಬಂದವ್ರೆ ಕಣೆ.ಅವ್ರಿಗೆ ಮೈಸೂರು ಸಿಲ್ಕ್ ಬೇಕಂತೆ ಅದಿಕ್ಕೆ ಕೇಳ್ದೆ “ಎಂದ.” ಅಯ್ಯೋ ಚೆಲುವ ನಾರಾಯಣ ಸ್ವಾಮಿ, ಈ ಫಾರಿನ್ನೋರೂ ಸೀರೆ ಉಡಕ್ಕೆ ಶುರು ಮಾಡಿದ್ರೆ ಇನ್ನೇನ್ ಗತಿ.ಈಗ್ಲೇ ಆಳೆತ್ತರದಲ್ಲಿರೋ ಮೈಸೂರು ಸಿಲ್ಕ್ ರೇಟ್ ಹಿಡಿಯಲು ಆಮೇಲೆ ಯಾವುದಾದ್ರೂ ಕ್ರೇನನ್ನೇ ತರಿಸ್ಬೇಕು ಬಿಡಪ್ಪ,”ಅನ್ನಿಸಿಬಿಡ್ತು.ನನ್ನ ತಮ್ಮನನ್ನು ಬಿಡದೇ ಕೆಣಕಿದೆ.”ಅವರೇನು ಸೀರೆ ಉಡ್ತಾರೇನೋ! ಏನೋ ನಿಮ್ಮ ಆಫೀಸ್ ಕಥೆ,” ಎಂದು ಕೇಳಿದ್ದಕ್ಕೆ ಅವನ ನಗು ಇನ್ನೂ ಜೋರಾಯಿತು.” ಬಟ್ಟೆ ಅಂದ್ರೆ ಬರೀ ಮೈ ಮೇಲೆ ಹಾಕ್ಕೊಳ್ಳಕ್ಕೆ ಮಾತ್ರ ಅಂದ್ಕೊಂಡ್ಯ! ಅವ್ರಿಗೆ ಕಿಟಕಿ ಬಾಗಿಲು ಪರದೆಗೆ,ಹಾಸಿಗೆಯ ಹೊದಿಕೆಗೆ,ಸೋಫಾ ಕುಶನ್ ಗೆ ಅಂತೆಲ್ಲಾ ಬೇಕಂತೆ ,” ಅಂದಾಗ ,”ಶಿವಾ! ಹೀಗೂ ಉಂಟೆ,” ಅನ್ನಿಸಿ ಬೆರಗಾಗಿ ಹೋದೆ.ಮತ್ತೆ ತಮ್ಮನಿಗೆ ಮಸ್ಕ ಹೊಡೆದು,” ಹಾಸಿಗೆ ಹೊದಿಕೆಗೇ ಅಷ್ಟು ಖರ್ಚು ಮಾಡ್ತರಾ? ನೀನೂ ಇದ್ದೀಯ ನೋಡು ಉಡಕೆ ಅಂತ ಒಂದ್ ಕೊಡ್ಸಕ್ಕೇ ಅಳ್ತಿಯ,” ಅಂತ ಹಲ್ಲು ಕಿರಿದೆ.ಅವನಿಗೆ ರೇಗಿ ಹೋಯಿತು.,”ನಿಂಗೆ ತಲೆ ಕೆಟ್ಟಿದೆ,ಒಂದು ಅಂಗ್ಡಿ ಮಡಗಷ್ಟು ಸೀರೆ ಇದ್ರೂ ನಿಂಗೆ ದುರಾಸೆ,ಅಷ್ಟಿಲ್ದೆ ಭಾವ ನಿಂಗೆ ಸೀರೆ ಹುಚ್ಚು ಅಂತ ಬೈತರ.ಸುಮ್ನೆ ಫೋನಿಡು,”ಅನ್ನುತ್ತಾ ಮುಂದೆ ಮಾತಿಗೆ ಅವಕಾಶವೇ ಕೊಡದೆ ಕರೆ ಕತ್ತರಿಸಿದ.ನನಗೆ ಪೆಚ್ಚೆನಿಸಿದರೂ ಮೈಸೂರು ಸಿಲ್ಕ್ ನ ಅವಾಂತರಗಳೆಲ್ಲ ನೆನಪಾಗಿ ತೆಪ್ಪಗಾದೆ.
ಅದಕ್ಕೆ ಒಂದು ಹಿನ್ನೆಲೆಯೇ ಇದೆ.
ಕೊಡಗಿನಲ್ಲಿ ಕೆಲಸದ ನಿಮಿತ್ತವಾಗಿ ಹಲವು ವರ್ಷಗಳವರೆಗೆ ನಮ್ಮ ವಾಸ.ನಮ್ಮ ಬಂಧು ಬಳಗದವರೆಲ್ಲ ಮೈಸೂರು ಹಾಗೂ ಮೈಸೂರು ಜಿಲ್ಲೆಯಲ್ಲೇ ಇರುವ ನಮ್ಮೂರು ಮತ್ತು ಆಸುಪಾಸಿನ ಊರುಗಳಲ್ಲೇ ಹೆಚ್ಚು ಇರೋದು.ಅವರ ಪ್ರಕಾರ ಕೊಡಗಿನಂತಹ ದೂರದ ಊರಿನಲ್ಲಿ ದಿಕ್ಕಿಲ್ಲದವರಂತೆ ನಾವು ಮಾತ್ರ ಇದ್ದದ್ದು.ಕೊಡಗಿನಲ್ಲಿ ಇದ್ದ ನೆಂಟರ ಮನೆಗಳು ಎರಡೋ ಮೂರೋ ಅಷ್ಟೇ. ಹಾಗಾಗಿ ನಮ್ಮೂರಿನ ಕಡೆಗೆ ಹೋಗಿ ಸೇರಿಕೊಳ್ಳೋಣ ಎನ್ನೋ ಆಸೆಯಿಂದ ಮೈಸೂರಿನಲ್ಲಿ ಮನೆ ಕಟ್ಟಿಕೊಂಡು ಬಂದು ನೆಲೆಸಿದೆವು.
ಆದರೆ ಇಲ್ಲಿಗೆ ಬಂದ ಮೇಲೆ ನಾನು ಕನಸು ಮನಸಲ್ಲೂ ಯೋಚಿಸದ ಹೊಸ ಸಮಸ್ಯೆಯೊಂದು ಧುತ್ತನೆ ಎದುರಾಗಿ ನನ್ನ ಹಾಗೂ ನನ್ನ ಪರ್ಸನ್ನು ಕಾಡತೊಡಗಿತು.ಅದುವೇ ನೂರೆಂಟು ಮದುವೆ,ನಾಮಕರಣ,ಗೃಹಪ್ರವೇಶ ಅಂತೆಲ್ಲ ಕಾರ್ಯಗಳಿಗೆ ಹಾಜರಾಗಲು ಬರ ತೊಡಗಿದ ಆಮಂತ್ರಣ ಗಳು.
“ಇದೇನಪ್ಪಾ ವಿಚಿತ್ರ,ಕಾರ್ಯಕ್ಕೆ ಹೋಗೋದು ಅಂದ್ರೆ ಅದೂ ಸಮಸ್ಯೆಯೇ! ಖುಷಿ ಖುಷಿಯಾಗಿ ಹೋಗಿ ಬರೋದಲ್ವ,” ಅಂದು ಕೊಂಡಿರಾ.ನನ್ನ ಕಷ್ಟ ಏನು ಗೊತ್ತೆ ?ವರ್ಷದ ಮುನ್ನೂರ ಅರವತ್ತೈದು ದಿನಗಳಲ್ಲಿ ಮುನ್ನೂರ ಅರವತ್ತನಾಲ್ಕು ದಿನ ಕಾರ್ಯಗಳು ಬಂದು ಅವಕ್ಕೆಲ್ಲ ಸೀರೆ ಹೊಂದಿಸು ಎಂದರೆ ಹೇಗೆ ಹೊಂದಿಸೋದು? ಕೊಡಗಿನಲ್ಲಿದ್ದಾಗ ಕಾರ್ಯಗಳಿಗೆ ಆಮಂತ್ರಣವಿದ್ದರೂ,”ಛೆ ಅಷ್ಟು ದೂರ ಯಾರು ಹೋಗೋದು,” ಅಂದುಕೊಂಡು,ತುಂಬಾ ಮಹತ್ವದ್ದು , ತೀರಾ ಹತ್ತಿರದ ನೆಂಟರ ಮನೆಯ ಕಾರ್ಯಗಳಿಗೆ ಮಾತ್ರ ಹಾಜರಾಗಿ,ಇಲ್ಲವೇ ಗಂಡನನ್ನ ಮಾತ್ರ ಕಳಿಸಿ ಸುಮ್ಮನಾಗುತ್ತಿದ್ದೆ.ಆದರೆ ಮೈಸೂರಿನಲ್ಲಿ ಎಲ್ಲಾದರೂ ನಿಂತು ಒಂದು ಕಲ್ಲು ಹೊಡೆದರೆ ಸಾಕು ಅದು ಗ್ಯಾರಂಟಿ ಯಾರಾದರೂ ನಮ್ಮ ನೆಂಟರ ಮನೆ ಮೇಲೆ ಬೀಳುತ್ತದೆ.ಪ್ರತಿ ಬಡಾವಣೆ,ಗಲ್ಲಿ ಗಲ್ಲಿಗಳಲ್ಲೂ ಅಮ್ಮನ ಕಡೆಯವರು,ಅಪ್ಪನ ಕಡೆಯವರು,ಮಾವನ ಮನೆಯವರು,ತಮ್ಮನ ಹೆಂಡತಿ ನೆಂಟರು,ಅತ್ತಿಗೆ ಗಂಡನ ಬಳಗ,ವಾರಗಿತ್ತಿಯ ಅಕ್ಕನ ಮನೆಯವರು,ಗಂಡನ ಸೋದರ ಮಾವನ ಮಕ್ಕಳು,ಅಜ್ಜಿಯ ಅಣ್ಣನ ಹೆಂಡತಿಯ ತಂಗಿಯ ಸೊಸೆಯಂದಿರು ಅಂತೆಲ್ಲಾ ನೆಂಟರೋ ನೆಂಟರು. ಅವರೆಲ್ಲಾ ಹುಡುಕಿಕೊಂಡು ಮನೆ ಬಾಗಿಲಿಗೆ ಬಂದು ಕಾರ್ಯಗಳಿಗೆ ಕರೆದು ಹೋದರೆ ಹೋಗದಿರುವುದು ಸರಿಯೇ?
ಮೈಸೂರಿಗೆ ಹೋದ ಬಳಿಕ ಮೊದಲ ವರ್ಷವೇ ನನ್ನ ಬಳಿ ಇದ್ದ ಎಲ್ಲಾ ರೇಷ್ಮೆ ಸೀರೆಗಳನ್ನು ಸರದಿಯಂತೆ ಎರಡೆರಡು ಬಾರಿ ಉಟ್ಟರೂ ಒಂದೇ ವರ್ಷಕ್ಕೆ ಎಲ್ಲಾ ಸೀರೆಗಳ ಸರದಿ ಮುಗಿದು ಹಳತೆನಿಸತೊಡಗಿ ಬಿಟ್ಟವು.ಮತ್ತೆ ಯಾವುದಾದರೂ ಕಾರ್ಯಕ್ಕೆ ಹೊರಟಾಗ ರಿಪೀಟ್ ಮಾಡಿ ಉಡಲು ಹೊರಟರೆ “ಅರೆ ಈ ಸೀರೆ ಫ್ಯಾಷನ್ನೇ ಹೋಗಿಬಿಟ್ಟಿದೆಯಲ್ಲ,ಬೇಡ ಅಮ್ಮ,”ಅನ್ನೋ ಮಗಳ ರಾಗ ಬೇರೆ ಸಹಿಸಬೇಕಾಗಿ ಬರತೊಡಗಿತು.
ಮೈಸೂರು ಕಡೆ ಮದುವೆಗಳಲ್ಲಿ ಮೈಸೂರು ಸಿಲ್ಕ್ ಉಟ್ಟವರು ಸ್ವಲ್ಪ ಹೆಚ್ಚೇ ಕಾಣುತ್ತಾರೆ.ಮೈಸೂರು ಸಿಲ್ಕ್ ನೀಡುವ ಅನುಭವ ಉಟ್ಟೇ ತಿಳಿಯಬೇಕು. ಕಣ್ತುಂಬುವ ಉಜ್ವಲ ಬಣ್ಣ,ಹಗುರಾಗಿ ಉಟ್ಟಿದ್ದೇವೆಯೋ ಇಲ್ಲವೋ ಅನ್ನಿಸುವಷ್ಟು ನವಿರು,ಅಸಲಿ ಚಿನ್ನದ ಜರಿ ಬಳಸುವುದರಿಂದ ಎಷ್ಟು ವರ್ಷಗಳಾದರೂ ಮಾಸದ ಅಂಚು, ಸೆರಗು.ಉಡಲು ಕೂಡ ಬಹಳ ಸುಲಭ.ಗಟ್ಟಿ ಜರಿಯಂಚಿನ, ಉಡುವಾಗ ರಟ್ಟಿನಂತೆ ನಿಲ್ಲುವ ರೇಷ್ಮೆ ಸೀರೆಗಳಿಗಿಂತ ,ಮೃದುವಾಗಿರುವುದರಿಂದ ಸಲೀಸಾಗಿ ನೆರಿಗೆ ಮಾಡಲು ಆಗುವ,ಹಿತವಾಗಿ ಮೈಯಪ್ಪಿ ಕೊಂಡು ,ಕೊಂಚವೂ ಸುಕ್ಕಾಗದ ಸೀರೆಗಳು ಇವು.ಜೊತೆಗೆ “ನೆರಿಗೆ ಹಿಡಿದು ಕೊಡಿ” ಎಂದು ಯಾರನ್ನೂ ಗೋಗರೆಯುವ ಹಂಗೂ ಇಲ್ಲ. ಅಲ್ಲದೇ ಕೊಂಡು ಎಷ್ಟೇ ವರ್ಷಗಳಾದರೂ ಹಳತು ಅನ್ನಿಸದ ಸೀರೆಗಳು ಮೈಸೂರು ಸೀಮೆಯ ಎಲ್ಲರಿಗೂ ಅಚ್ಚು ಮೆಚ್ಚು.ಆದರೆ ಅಪ್ಪಟ ಚಿನ್ನದ ಜರಿಯ ಕಾರಣದಿಂದಾಗಿ ಬೆಲೆ ಮಾತ್ರ ದುಬಾರಿಯೇ.ಹಾಗಾಗಿ ನಾನು “ಒಂದು ಮೈಸೂರು ಸಿಲ್ಕ್ ನ ಬೆಲೆಗೆ ಐದು ಮಾಮೂಲಿ ರೇಷ್ಮೆ ಸೀರೆ ಸಿಗುತ್ತಲ್ಲ ಬಿಡು,”ಎಂದುಕೊಂಡು ಆ ಗೊಡವೆಗೆ ಹೋಗದೆ ಸುಮ್ಮನಾಗಿದ್ದೆ.ಆದರೆ ಒಂದು ದಿನ ಮದುವೆಯೊಂದರಲ್ಲಿ ಎತ್ತ ನೋಡಿದರೂ ವಿವಿಧ ವರ್ಣ ಸಂಯೋಜನೆಯ ಮೈಸೂರು ಸಿಲ್ಕ್ ಗಳ ನೋಡಿ ಕಣ್ಣು ಮನಸ್ಸುಗಳೆರಡೂ ತುಂಬಿ ಹೋದವು.ಜೊತೆಯಲ್ಲಿದ್ದ ನಮ್ಮ ಅತ್ತಿಗೆಯನ್ನು ಕೇಳಿದೆ,”ಅಲ್ಲ ಕಣಕ್ಕ ಇಷ್ಟೊಂದು ಮೈಸೂರು ಸಿಲ್ಕ್ ಅದೆಲ್ಲಿ ಜೋಡಿಸಿದ್ರು,ಇಲ್ಲಿರೋ ಸೀರೆಗಳ ಬೆಲೆಯಲ್ಲಿ ಒಂದು ಮದ್ವೆನೆ ಮಾಡಿ ಬಿಡಬಹುದು,” ಎಂದು ನಕ್ಕೆ.ಅದಕ್ಕವರು,” ನೀನೂ ಒಂದೆರಡು ತೊಗೊಂಡು ಉಟ್ಟು ನೋಡು ನೀನೂ ಮರುಳಾಗಿ ಬಿಡ್ತಿಯ,”ಎಂದು ನಕ್ಕರು.ನಾನು ನಿಟ್ಟುಸಿರು ಬಿಡುತ್ತಾ”ಈಗಿನ ರೇಟ್ ನಲ್ಲಿ ತೊಗೊಂಡ ಹಾಗೆಯೇ ಬಿಡಿ,” ಎಂದೆ.”ಇಲ್ಲ ಕಣೆ ಸರ್ಕಾರಿ ನೌಕರರಿಗೆ ಕಂತಿನ ಸೌಲಭ್ಯ ಇದೆ.ಮೈಸೂರು ಸಿಲ್ಕ್ ಫ್ಯಾಕ್ಟರಿ ಸರ್ಕಾರಿ ಉದ್ಯಮ ಅಲ್ವಾ ಅದಿಕ್ಕೆ.ಹತ್ತು ಕಂತಲ್ಲಿ ತೊಗೊಬಹುದು, ನಾನೂ ಒಂದೆರಡು ಹಾಗೇ ತೊಗೊಂಡಿದ್ದು.’ ಎಂದು ನನ್ನಲ್ಲಿ ಮೈಸೂರು ಸಿಲ್ಕ್ ನ ಕನಸಿನ ಬೀಜ ಬಿತ್ತಿದರು.
ಅದೇ ತಿಂಗಳು ಮೈಸೂರು ಸಿಲ್ಕ್ ಶೋ ರೂಂ ಒಂದರಿಂದ ಅರ್ಜಿ ತಂದು,ಮೇಲಧಿಕಾರಿಗಳಿಂದ ಸಹಿ ಮಾಡಿಸಿ,ಒಂಬತ್ತು ಖಾಲಿ ಚೆಕ್ ಕೊಟ್ಟು , ಬೆಲೆಯ ಶೇಕಡಾ ಹತ್ತರಷ್ಟು ಮೊದಲ ಕಂತು ಪಾವತಿಸಿ,ಗುಲಾಬಿ ಹಾಗೂ ದಟ್ಟ ನೀಲಿಯ ಬಣ್ಣದ ಎರಡು ಸುಂದರ ಸೀರೆಗಳ ಖರೀದಿಸಿದೆ. ಮೈಸೂರು ಸಿಲ್ಕ್ ಗೆ ಅದರ ಒಡಲ ಬಣ್ಣಕ್ಕೆ ಇಲ್ಲವೇ ಅಂಚಿಗೆ ಹೊಂದಿಕೆಯಾಗುವ ಬಣ್ಣದ ರೇಷ್ಮೆಯ ಕಣವನ್ನು ಬೇರೆಯಾಗಿಯೇ ತೊಗೊಬೇಕು. ಹಾಗಾಗಿ ಮತ್ತೆ ಇನ್ನೊಂದು ದಿನ ಸೂಕ್ತ ರೇಷ್ಮೆಯ ಕಣ ಖರೀದಿಸಲು ಬ್ಲೌಸ್ ಪೀಸ್ ಅಂಗಡಿಗೆ ಹೋಗಿ, ಸುರುಳಿ ಸುರುಳಿಯಾಗಿ ಸುತ್ತಿಟ್ಟಿದ್ದ ರೇಷ್ಮೆ ಥಾನುಗಳಿಗೆ ನನ್ನ ಸೀರೆಗಳ ಹಿಡಿದು ಮ್ಯಾಚ್ ಮಾಡುತ್ತಿದ್ದ ಸೇಲ್ಸ್ ಗರ್ಲ್ ನ್ನೇ ನೋಡುತ್ತಾ ನಿಂತಿದ್ದೆ, ಆಗ ಯಾರೋ ಹೆಗಲ ಮೇಲೆ ಕೈ ಇರಿಸಿದಂತಾಗಿ ಬೆಚ್ಚಿ ಹಿಂತಿರುಗಿ ನೋಡಿದರೆ ನನ್ನ ಕಾಲೇಜು ದಿನಗಳ ಗೆಳತಿ ದೀಪ ನಗುತ್ತಾ ನಿಂತಿದ್ದಳು.ಇಪ್ಪತ್ತು ವರ್ಷಗಳ ಹಿಂದೆ ಹೇಗಿದ್ದಳೋ ಈಗಲೂ ಹಾಗೇ, ಅದೇ ಸಣಕಲು ಮೈಕಟ್ಟಿನ ನೀಳ ಜಡೆಯ ಹುಡುಗಿ.”ಏನೇ ಒಂದು ಗ್ರಾಂ ಕೂಡ ಹೆಚ್ಚಾಗಿಲ್ಲವಲ್ಲೇ” ಎನ್ನುತ್ತಾ ತಬ್ಬಿಕೊಂಡೆ.ಅವಳಿಗೂ ಖುಷಿಯೋ ಖುಷಿ.”ಎಷ್ಟು ವರ್ಷ ಆದ ಮೇಲೆ ಸಿಕ್ಕಿದ್ದೀಯ,ನಮ್ಮ ಮನೆ ಇಲ್ಲೇ ಹತ್ತಿರ, ಬಾ ಕಾಫಿಯಾದ್ರು ಕುಡಿದು ಹೋಗುವೆಯಂತೆ” ಎಂದು ಬಿಡದೇ ಎಳೆದುಕೊಂಡು ಹೋದಳು.
ಮನೆ ಚಿಕ್ಕದಾದರೂ ಸ್ವಂತದ್ದು ಅನ್ನುವ ಖುಷಿ ಅವಳಿಗೆ.ಮನೆಯಲ್ಲಿ ಮಗಳು ಮಾತ್ರ ಇದ್ದು ಗಂಡ ಮತ್ತು ಮಗ ಎಲ್ಲೋ ಆಚೆ ಹೋಗಿದ್ದರು.ಮನೆಯಲ್ಲಿ ಒಳಾಲಂಕಾರ ಅಂತ ಏನೂ ಅವಳು ತಲೆ ಕೆಡಿಸಿಕೊಂಡಿರಲಿಲ್ಲ.ಸರಳತೆ ಪೀಠೋಪಕರಣಗಳಲ್ಲಿ ,ಅಡಿಗೆ ಮನೆ ವಸ್ತುಗಳಲ್ಲಿ ಎದ್ದು ಕಾಣುತ್ತಿತ್ತು.ಎಂಜಿನಿಯರಿಂಗ್ ಓದುತ್ತಿದ್ದ ಮಗಳು ಮಿತಭಾಷಿ ಅನ್ನಿಸಿದಳು.ಅವಳಿಗೆ ನನ್ನ ಪರಿಚಯಿಸಿ ಕಾಫಿ ಮಾಡಿ ತಂದು,”ಬಾರೆ ಆರಾಮಾಗಿ ಮಾತಾಡೋಣ ” ಅಂತ ಅವಳ ರೂಂಗೆ ಕರೆದುಕೊಂಡು ಹೋದಳು.
ಅಲ್ಲಿ ಕುಳಿತು ಹರಟುವಾಗ ನನ್ನ ಸೀರೆಗಳ ನೋಡಿ ಮೆಚ್ಚುಗೆ ಸೂಸಿ,” ನಂಗೆ ಸ್ವಲ್ಪ ಮೈಸೂರು ಸಿಲ್ಕ್ ಹುಚ್ಚು ಕಣೆ,ಬಾ ನನ್ನ ಕಲೆಕ್ಷನ್ ತೋರಿಸ್ತೀನಿ” ಎಂದು ಅವಳ ವಾರ್ಡ್ರೋಬ್ ಬಾಗಿಲು ತೆರೆದು ತೋರಿಸಿದಳು.ಅಲ್ಲಿ ತೂಗು ಹಾಕಿದ್ದ ವಿವಿಧ ವರ್ಣ ಸಂಯೋಜನೆಯ,ಚೌಕುಳಿ, ಕಡ್ಡಿಯಂಚು,ಮಾವಿನಕಾಯಿ ಅಂಚು,ಅಡ್ಡ ಪಟ್ಟೆ ಎಂದೆಲ್ಲ ತರಹಾವರಿ ಜರಿ ಅಂಚಿನ ಸೀರೆಗಳ ನೋಡುತ್ತಾ ನೋಡುತ್ತಾ ಬೆರಗಾಗಿ “ಇದೇನೇ ಇಷ್ಟೊಂದು ತಗೊಂಡಿದ್ದಿ!ಇವುಕ್ಕೆ ಕೊಟ್ಟಿರೋ ದುಡ್ಡಲ್ಲಿ ಕಾಲು ಕೆಜಿ ಚಿನ್ನವೇ ಬರೋದಲ್ಲ, ನಿನಗೇನಿದು ಹುಚ್ಚು!,” ಎಂದು ಅಚ್ಚರಿಯಿಂದ ಕೇಳಿದೆ.ಅವಳಿಗೆ ಮಾತ್ರ ನಗು.” ಒಂದೇ ಸಾರಿ ಏನೂ ತಗೊಂಡಿದ್ದಲ್ಲ ಕಣೆ,ಕೆಲಸಕ್ಕೆ ಸೇರಿದಾಗಿಂದ ಕಂತುಗಳಲ್ಲಿ ತೊಗೊಂಡು ತೊಗೊಂಡು ಇಷ್ಟು ಮಾಡಿಕೊಂಡೆ,ಎಷ್ಟು ವರ್ಷ ಆದ್ರೂಫ್ಯಾಷನ್ ಹೋಗಲ್ಲ,”ಎನ್ನುವ ಸಮಜಾಯಿಷಿ ಅವಳದು.”ಆದ್ರೂ ಬಟ್ಟೆಗೆ ಇಷ್ಟೊಂದು ದುಡ್ಡು ಹಾಕೋದು ಅಂದ್ರೇ..!! ” ಅನ್ನೋ ರಾಗ ನನ್ನದು.ಅವಳು ಇನ್ನೂ ನಗುತ್ತಾ,” ನನಗೇ ಹೀಗಂದ್ರೆ ಇನ್ನು ನನ್ನ ಚಿಕ್ಕತ್ತೆ ಬಳಿ ಇರೋ ಸೀರೆಗಳನ್ನ ನೋಡಿದ್ರೆ ಏನಂತಿಯೋ” ಅಂತ ಪಕ್ಕದಲ್ಲೇ ಇದ್ದ ಅವರ ಮನೆಗೂ ಎಳೆದುಕೊಂಡು ಹೋದಳು.
ಮನೆಗೆ ಹೋಗಿ ಕರೆಗಂಟೆ ಒತ್ತಿದಾಗ ಬಾಗಿಲು ತೆರೆದದ್ದು ಅವಳ ಚಿಕ್ಕತ್ತೆಯೇ.ಅರವತ್ತರ ಹತ್ತಿರದ ವಯಸ್ಸಿನ,ದೊಡ್ಡ ಮೈಕಟ್ಟಿನ, ನಗುಮೊಗದ, ಕಳೆ ಕಳೆಯಾಗಿದ್ದ ಹೆಂಗಸು. ಸರಳತೆ,ಅಚ್ಚು ಕಟ್ಟುತನ,ಮನೆಯ ಪೀಠೋಪಕರಣಗಳಲ್ಲಿ , ಅಡಿಗೆಮನೆ ವಸ್ತುಗಳಲ್ಲಿ ಎದ್ದು ಕಾಣುತ್ತಿತ್ತು.ದೀಪ ನನ್ನ ಪರಿಚಯ ಹೇಳಿ,” ಎಲ್ಲಿ ಅತ್ತೆ ನಿಮ್ ಮೈಸೂರು ಸಿಲ್ಕ್ ಗಳ ತೋರ್ಸಿ,ಇವ್ಳು ನೋಡ್ಬೇಕಂತೆ,” ಎಂದಾಗ,”ಅದಕ್ಕೇನಂತೆ ಬಾ,” ಅನ್ನುತ್ತಾ ಲಗುಬಗೆಯಿಂದ ಕೈ ವರೆಸಿಕೊಳ್ಳುತ್ತಾ ತಮ್ಮ ಕೋಣೆಗೆ ಕರೆದುಕೊಂಡು ಹೋದರು.
ಸಜ್ಜೆ ಮೇಲೆ ಇರಿಸಿದ್ದ ಎರಡು ದೊಡ್ಡ ಸೂಟ್ ಕೇಸ್ ಗಳನ್ನು ಕೆಳಗಿಳಿಸಿ,ಅವುಗಳ ಒಳಗೆ ಬಿಳಿ ಮಲ್ ಪಂಚೆಗಳಲ್ಲಿ ಸುತ್ತಿ ಇರಿಸಿದ್ದ ಸೀರೆಗಳನ್ನು ಒಂದೊಂದಾಗಿ ಮೆಲ್ಲನೆ ಬಿಚ್ಚಿ ತೋರಿಸುವಾಗ,ಒಂದು ಸೀರೆ ಅಂಗಡಿ ಇಡುವಷ್ಟು ವೈವಿಧ್ಯಮಯ ಸೀರೆಗಳ ನೋಡುತ್ತಾ ನೋಡುತ್ತಾ ನಾನು ಮೂರ್ಛೆ ತಪ್ಪಿ ಬೀಳದೆ ಇದ್ದದ್ದು ನನ್ನ ಪುಣ್ಯ.ಒಂದೊಂದು ಸೀರೆಯನ್ನೂ ಚಿಕ್ಕ ಮಗುವನ್ನು ಎತ್ತಿಕೊಳ್ಳುವಂತೆ ಹುಷಾರಾಗಿ ಎತ್ತಿಕೊಂಡು,ಅದರ ನವಿರು ಸ್ಪರ್ಶಕ್ಕೆ ಪುಳಕ ಗೊಂಡವರಂತೆ ಮುಗುಳ್ನಗುತ್ತಾ, ತನ್ಮಯತೆಯಿಂದ ಅವರು ‘ಆ ಸೀರೆ ಯಾವಾಗ ಕೊಂಡದ್ದು,ಎಷ್ಟು ವರ್ಷಗಳ ಹಿಂದೆ,ಯಾವ ಕಾರ್ಯಕ್ಕೆ’ಅಂತೆಲ್ಲಾ ಹೇಳುತ್ತಾ,ಆ ನೆನಪುಗಳ ಸುಖಿಸುತ್ತಾ, ನೋಡುತ್ತಿದ್ದ ನಮಗಿಂತ ಅವರೇ ಹೆಚ್ಚು ಖುಷಿ ಪಟ್ಟಂತೆ ಕಾಣುತ್ತಿತ್ತು.ನೋಡಿಯಾದ ಬಳಿಕ ಮತ್ತೆ ಹುಷಾರಾಗಿ ಪಂಚೆಗಳಲ್ಲಿ ಜೋಪಾನವಾಗಿ ಸುತ್ತಿ ಸೂಟ್ ಕೇಸ್ಗಳಲ್ಲಿ ತುಂಬಿ ಮತ್ತೆ ಸ್ವಸ್ಥಾನದಲ್ಲಿಟ್ಟರು.ಅವರ ತಾಳ್ಮೆಗೆ ಥಾಂಕ್ಸ್ ಹೇಳಿ,ಅವರು ಕೊಟ್ಟ ಕಾಫಿ ಕುಡಿದು ಮತ್ತೆ ದೀಪಾಳ ಮನೆಗೆ ಹಿಂದಿರುಗಿದ್ದಾಯಿತು.
ದೀಪಾಳ ಮನೆಗೆ ಬಂದು ಸೋಫಾ ಮೇಲೆ ದೊಪ್ ಎಂದು ಕೂರುತ್ತ,” ಅಲ್ಲ ಕಣೆ ನೀನು ಮೈಸೂರು ಸಿಲ್ಕ್ ಸಾಮ್ರಾಜ್ಯದ ಸಾಮಂತ ದೊರೆಯಾದ್ರೆ ನಿಮ್ಮತ್ತೆ ಚಕ್ರವರ್ತಿಯೇ ಕಣಂತೆ ಬಿಡು,”ಎಂದು ಹೊಟ್ಟೆ ತುಂಬಾ ನಗಾಡಿದೆ.ದೀಪ ನನ್ನ ನಗುವಿಗೆ ಜೊತೆಯಾಗಿ,” ನಂಗೂ ಅವರೇ ಕಲಿಸಿದ್ದು ಕಣೇ, “ದೀಪಾ ಹೆಂಗಸರು ಎಷ್ಟು ದುಡುದ್ರೂ ಅವರಿಗೇನು ಸಿಗುತ್ತೆ ಹೇಳು,ತಿಂದ ಅನ್ನ,ಉಟ್ಟ ಬಟ್ಟೆ ಅಷ್ಟೇ,ಆಸ್ತಿ ಮಗನಿಗೆ ಹೋಗುತ್ತೆ, ಚಿನ್ನ ಮಗಳಿಗೆ,ಅದಿಕ್ಕೆ ಚೆನ್ನಾಗಿ ಉಂಡು ತಿಂದು, ಒಳ್ಳೇ ಬಟ್ಟೆ ಬರೆ ಉಟ್ಕೊಂಡು ಖುಷಿ ಪಡು”,ಅಂತ ಅವರೇ ಹೇಳಿಕೊಟ್ಟದ್ದು,” ಎಂದು ಅವರ ಸೀರೆ ಸಂಗ್ರಹದ ಗುಟ್ಟು ಬಿಟ್ಟುಕೊಟ್ಟಳು. ನಾನೂ” ಹೌದಲ್ವಾ” ಅಂತ ತಲೆದೂಗಿದೆ.
ಅಂತೂ ದೀಪಾಳ ಮನೆಯಿಂದ ಬಂದ ಬಳಿಕವೂ ಆ ಸೀರೆಗಳ ನೆನಪಿನ ಹೊಡೆತದಿಂದ ಸುಧಾರಿಸಿಕೊಳ್ಳಲು ಸ್ವಲ್ಪ ಸಮಯವೇ ಹಿಡಿಯಿತು ನನಗೆ.
ನಂತರದಲ್ಲಿ ನನ್ನ ಸೀರೆಗಳಿಗೆ ಅಂಚು ಹೊಲಿಸಿ,ಕುಚ್ಚು ಕಟ್ಟಿಸಿ ಹೊಂದಿಕೆಯಾಗುವಂತೆ ಬ್ಲೌಸ್ ಹೊಲಿಸಿ ಇನ್ನೇನು ಯಾರಾದರೂ ಕಾರ್ಯಗಳಿಗೆ ಕರೆದರೆ ಸಾಕು ಉಟ್ಟು ಖುಷಿ ಪಡೋಣ ಎನ್ನುವಷ್ಟರಲ್ಲಿ ಕರೋನ ಮಾರಿಯ ಆಗಮನ ವಾಯಿತು.ತೊಗೊ ಎಲ್ಲಾ ರೀತಿಯ ಸಭೆ ಸಮಾರಂಭಗಳಿಗೆ ಕಡಿವಾಣ ಬಿತ್ತು.ಬದುಕಿದರೆ ಸಾಕು ಸೀರೆ ಗೀರೆಗೇನು ಬಿಡು ಉಟ್ಟರಾಯಿತು ಅನ್ನಿಸುವಷ್ಟು ಭಯ ಆಗ.ಆಗಲೇ ನನ್ನ ಫೋನ್ ಕೂಡ ಹಾಳಾಗಿ ಹೋಗಿ ಎಷ್ಟೋ ಜನರ ಜೊತೆಗೆ ದೀಪಾಳ ಫೋನ್ ನಂಬರ್ ಕೂಡ ಇಲ್ಲವಾಗಿ ಅವಳ ಜೊತೆ ಸಂಪರ್ಕವೇ ತಪ್ಪಿ ಹೋಯಿತು.
ಕರೋನ ಕಳೆದು ಮಾಮೂಲಿನಂತೆ ಶುರುವಾದ ಕಾರ್ಯಗಳಲ್ಲಿ ಅಂತೂ ಸಾವಿರಾರು ರೂಪಾಯಿ ಕೊಟ್ಟು ಖರೀದಿಸಿ,ಉಡಲು ಸಿದ್ಧ ಮಾಡಿಕೊಂಡಿದ್ದ ಸೀರೆಗಳು ಕೊಂಡ ಎರಡು ವರ್ಷಗಳ ಬಳಿಕ ವಾರ್ಡ್ರೋಬ್ ಕತ್ತಲೆಯಿಂದ ಆಚೆ ಬಂದವು. ಕರೋನ ನಿರ್ಬಂಧದ ಬಳಿಕ ಮಾಮೂಲಿನಂತೆ ಶುರುವಾದ ಕಾರ್ಯಗಳಲ್ಲಿ ಮೊದಲು ಹಾಜರಾದ ಮದುವೆಯಲ್ಲೇ ನನ್ನ ಗುಲಾಬಿ ಮೈಸೂರು ಸಿಲ್ಕ್ ಉಟ್ಟು, ನೋಡಿದವರಿಂದೆಲ್ಲ ಮೆಚ್ಚುಗೆ ಪಡೆದು ಬೀಗಿದ್ದಾಯಿತು.ಫೋಟೋಗಳಲ್ಲಿ ಕೂಡ ಎದ್ದು ಕಾಣುವಂತೆ ಸೂಸಿದ ನನ್ನ ಸೀರೆಯ ಚೆಲುವಿಗೆ ಇನ್ನಷ್ಟು ಸಂತಸ.ಆದರೆ ಆ ಖುಷಿಯ ಬಲೂನಿಗೆ ಸೂಜಿ ಚುಚ್ಚಿದವರು ಮಾತ್ರ ನನ್ನ ಸಹೋದ್ಯೋಗಿಗಳು.
ನನ್ನ ಮನೆ ಮೈಸೂರಿನಲ್ಲಿದ್ದರೂ ಕೆಲಸ ಮಾತ್ರ ಇನ್ನೂ ಕೊಡಗಿನಲ್ಲೇ. ದಿನಾ ಶಾಲೆಗೆ ಮನೆಗೆ ಅಂತ ಬಸ್ಸಿನಲ್ಲಿ ದಣಿಯುವುದೇ ಆಗಿದೆ.ಕೊಡಗಿನಲ್ಲಿ ಮೈಸೂರು ಸಿಲ್ಕ್ ಬಳಕೆ ಬಹಳ ಕಡಿಮೆ.ಹಾಗಾಗಿ ನನ್ನ ಸಹೋದ್ಯೋಗಿಗಳ ಪ್ರಕಾರ ಸೀರೆಗಳಿಗೆ ನಾನು ಸುರಿದ ದುಡ್ಡು ದಂಡ,ಅಷ್ಟರಲ್ಲಿ ಎರಡು ಪವನು ಚಿನ್ನ ಬರೋದು.ಎಲ್ಲರೂ ನನ್ನ ದಡ್ಡತನಕ್ಕೆ ಮರುಗಿ ಬೈದು ಬೈದು ಬುದ್ಧಿ ಹೇಳಿದರು.ನಾನು ಏನೂ ಸುಮ್ಮನಿರಲಿಲ್ಲ ಮೈಸೂರು ಸಿಲ್ಕ್ ಗಳ ಮಹಿಮೆಯನ್ನು ಹಾಡಿದ್ದೇ ಹಾಡಿದ್ದು.ನನ್ನ ಈ ಗುಣಗಾನವ ಕೇಳಿ ಕೇಳಿ ಸಾಕಾದ ಬಳಿಕ ನಮ್ಮ ಶಾಲೆಯ ಹಿರಿಯ ಸಹೋದ್ಯೋಗಿಯವರಾದ ಮೀನಾಕ್ಷಿ ಮೇಡಂ ರವರಿಗೆ ಸ್ವಲ್ಪ ಕುತೂಹಲ ಕೆರಳಿತು.ಅಂತೂ ಬಿಡದೆ ಅವರನ್ನು ಮೈಸೂರು ಸಿಲ್ಕ್ ಉಡಲು ಮನ ಒಲಿಸಿ ಬಿಟ್ಟೆ.
ಅದರಂತೆ ಒಂದು ಶನಿವಾರದ ಮಧ್ಯಾಹ್ನ ನನ್ನೊಟ್ಟಿಗೇ ಮೈಸೂರಿನ ಬಸ್ಸು ಹತ್ತಿದರು.ಮೈಸೂರಿಗೆ ಬಂದು ಬಸ್ ಸ್ಟಾಪ್ ಹೊರಗೆ ನಿಂತು ಸಿಲ್ಕ್ ಫ್ಯಾಕ್ಟರಿಗೆ ಹೋಗಲು ಆಟೋವೊಂದನ್ನು ಕರೆದೆವು.ಆಟೋ ಬಂದಾಗ ನಾವು ‘ ಮೈಸೂರು ಸಿಲ್ಕ್ ಫ್ಯಾಕ್ಟರಿಗೆ” ಎಂದಾಗ ಆಟೋ ಡ್ರೈವರ್ ಅರೆಕ್ಷಣ ನಮ್ಮಿಬ್ಬರನ್ನು ದಿಟ್ಟಿಸಿದ. ಬಳಿಕ” ಅಲ್ಲ ಮೇಡಂ ಅದರ ರೇಟ್ ಎಷ್ಟು ಗೊತ್ತಾ ನಿಮ್ಗೆ,ನೀವು ಬೇರೆ ಊರೋರಂಗೆ ಕಾಣ್ತಿರ,ಸುಮ್ನೆ ಬ್ಲೇಡು,ಬೇರೆ ಒಳ್ಳೆ ಅಂಗ್ಡಿಗೆ ಕರ್ಕೊಂಡ್ ಹೊಯ್ತಿನಿ ಬನ್ನಿ”ಎಂದ.ನಾವಿಬ್ಬರೂ ತಬ್ಬಿಬ್ಬಾದರೂ ಸೋಲದೆ,” ಇಲ್ಲ ಕಣಪ್ಪ, ನಮ್ಗೆ ಅಲ್ಗೇ ಹೋಗ್ಬೇಕು, ಬರೋದಾದ್ರೆ ಬಾ,ಇಲ್ಲ ಬೇರೆ ಆಟೋ ನೋಡ್ತೀವಿ,” ಎಂದಾಗ,” ಏನೋ ಪಾಪ ಅಂತ ಹೇಳ್ದೆ,ನಿಮ್ ದುಡ್ಡು ನಿಮ್ ಕಾಸು, ಏನಾರೂ ಮಾಡ್ಕೊಳಿ,ಹತ್ತಿ ಈಗ,”ಅಂತ ಆಟೋ ಸ್ಟಾರ್ಟ್ ಮಾಡಿದ.ಆದ್ರೂ ದಾರಿಯುದ್ದಕ್ಕೂ ಕೊರೆಯುವುದು ಬಿಡಲಿಲ್ಲ,” ಅಲ್ಲ ಮೇಡಂ ಒಂದ್ ಸೀರೆಗೆ ಇಪ್ಪತ್ ಸಾವ್ರ ಅಂದ್ರೆ ಹೆಂಗೆ! ನಾನ್ ಒಂದ್ತಿಂಗ್ಳು ಆಟೋ ಓಡ್ಸಿದ್ರೆ ಅಷ್ಟ್ ದುಡ್ಡ ಕಾಣೋದು,ನೀವು ಒಂದೇ ದಿನಕ್ಕೆ ಕಳಿತಿರಲ್ಲ,” ಅನ್ನೋ ಮಾತು ಕೇಳಿ ನಮ್ಮ ಪಾಪ ಪ್ರಜ್ಞೆ ಮೊಳೆತರೂ,ಸೀರೆಯ ಆಸೆ ಅದನ್ನು ಚಿವುಟಿತು.ಅಂತೂ ಅವನ ಮಾತಿಗೆ ಕಿವಿಗೊಡದೆ ಫ್ಯಾಕ್ಟರಿ ಹತ್ರ ಅವನು ಇಳಿಸಿದಾಗ ಮೀನಾಕ್ಷಿ ಮೇಡಂ ಅವನ ಆಟೋ ಬಾಡಿಗೆ ಮೇಲೆ ನೂರು ರೂಪಾಯಿ ಹೆಚ್ಚೇ ಕೊಟ್ಟು ಕಳಿಸಿದರು. ನಾನು ಕಣ್ಣರಳಿಸಿದಾಗ “ಪಾಪ ಬಿಡಿ,ಸೀರೆಗೆ ಇಷ್ಟು ಖರ್ಚು ಮಾಡಲು ಬಂದಿದ್ದೀನಿ,ಅವನಿಗೆ ನೂರು ರೂಪಾಯಿ ಕೊಡೋದು ಏನೂ ದೊಡ್ಡದಲ್ಲ,” ಎಂದರು.”ಇನ್ನು ಐದೇ ಐದು ನಿಮಿಷ ಅವನು ಮೇಡಂ ಹತ್ರ ಮಾತಾಡಿದ್ದಿದ್ದರೆ ಅವರ ಬ್ರೈನ್ ವಾಶ್ ಮಾಡಿ ವಾಪಸ್ ಮಡಿಕೇರಿ ಬಸ್ ಹತ್ತಿಸುತ್ತಿದ್ದ” ಅನ್ನಿಸಿ ನಗು ಉಕ್ಕಿದರೂ ತಡೆದುಕೊಂಡೆ. ಇಬ್ಬರೂ ಫ್ಯಾಕ್ಟರಿ ಒಳ ಹೋದೆವು.ಅಲ್ಲಿ ಮೇಡಂ ತಮ್ಮ ಇಚ್ಛೆಯ ಬಣ್ಣದ ಎರಡು ಸೀರೆ ಕೊಂಡರು.ಅವುಗಳಿಗೆ ತಕ್ಕ ಬ್ಲೌಸ್ ಪೀಸ್ ಕೊಳ್ಳಲು ಅಂತಲೇ ಮತ್ತೆ ಇನ್ನೊಂದು ಆಟೋ ಹಿಡಿದು ಬ್ಲೌಸ್ ಪೀಸ್ ಅಂಗಡಿ ವಿಳಾಸ ಹೇಳಿ ಹತ್ತಿದೆವು.ಹಿಂದಿನ ಆಟೋದವನ ಅನುಭವದಿಂದಾಗಿ ಇವನ ಬಳಿ ಮಾತೇ ಆಡಬಾರದು ಎಂದು ನಿಶ್ಚಯಿಸಿಕೊಂಡೆ.ನಮ್ಮ ಹಣೆ ಬರಹಕ್ಕೆ ಅನಿರೀಕ್ಷಿತವಾಗಿ ಮಳೆ ಬೇರೆ ಇದ್ದಕ್ಕಿದ್ದಂತೆ ಸದ್ದು ಸುದ್ದಿಯಿಲ್ಲದೆ ಬರುವ ಅತಿಥಿಯಂತೆ ಧೋ ಎಂದು ಸುರಿಯಲು ಪ್ರಾರಂಭಿಸಿತು. ಎರಡೂ ಬದಿಯಿಂದ ಮಳೆಯ ಎರಚಲು ಬೇರೆ ಹೊಡೆಯಲು ಆರಂಭವಾಯಿತು.ನನಗೆ ಗಾಬರಿಯೋ ಗಾಬರಿ.”ಅಷ್ಟು ಬೆಲೆ ಬಾಳುವ ಸೀರೆ,ಅಷ್ಟು ದೂರದಿಂದ ಬಂದು ಕೊಂಡದ್ದು,ನೆಂದರೆ ಏನು ಮಾಡೋದಪ್ಪ? “ಬೆಳಗಾನ ನೋವು ತಿಂದು ಈದ ಕರವ ಬೆಳಿಗ್ಗೆ ಹುಲಿ ಕಚ್ಚಿಕೊಂಡು ಹೋದ ಹಾಗೆ ಆಗದಿರಲಿ ದೇವ್ರೆ,”ಅಂತ ಮನಸ್ಸಲ್ಲೇ ಮೊರೆಯಿಡತೊಡಗಿದೆ.ಪುಣ್ಯಕ್ಕೆ ಮೇಡಂ ಒಂದು ದೊಡ್ಡ ಪ್ಲಾಸ್ಟಿಕ್ ಕವರ್ ಹಾಗೂ ಕೈಚೀಲ ತಂದಿದ್ದರು.ಬೇಗ ಬೇಗ ಸೀರೆಗಳ ಕವರ್ ಪ್ಲಾಸ್ಟಿಕ್ ಕವರ್ಗೆ ಹಾಕಿ, ಕೈಚೀಲಕ್ಕೆ ಹಾಕಿ ಚೆನ್ನಾಗಿ ಸುತ್ತಿ ಇಟ್ಟುಕೊಂಡ ಬಳಿಕ ನಿರಾಳವೆನಿಸಿತು.ಅಂತೂ ಆ ಜಡಿ ಮಳೆಯಲ್ಲಿ ಆಟೋ ಉಂಟಾಡಿಕೊಂಡು ತಲುಪಬೇಕಾದ ಸ್ಥಳ ತಲುಪುವಷ್ಟರಲ್ಲಿ ಕತ್ತಲು ಆವರಿಸತೊಡಗಿತ್ತು.ಅಂತೂ ಲಗುಬಗೆಯಿಂದ ಅಂಗಡಿ ಹೊಕ್ಕು ಮ್ಯಾಚಿಂಗ್ ರವಿಕೆ ಕಣ ಹುಡುಕ ತೊಡಗಿದೆವು.
ರವಿಕೆ ಕಣ ತೊಗೊಂಡು ಬಿಲ್ ಹಾಕಿಸುವಾಗ ನೋಡಿದರೆ ಕ್ಯಾಶ್ ಕೌಂಟರ್ ಬಳಿ ದೀಪಾ ನಿಂತಿದ್ದಾಳೆ! ನನ್ನ ನೋಡಿ ಬಾಚಿ ತಬ್ಬಿಕೊಂಡಳು., ಅವಳೂ ಸೀರೆಯ ಬ್ಲೌಸ್ ಪೀಸ್ಗೆ ಅಂತ ಬಂದದ್ದಂತೆ.ಅವಳ ನೋಡಿ ತಾನೇ ತಾನಾಗಿ ಅವಳ ಚಿಕ್ಕತ್ತೆ ನೆನಪಾದರು.”ನಿಮ್ಮ ಮೈಸೂರು ಸಿಲ್ಕ್ ಅತ್ತೆ ಹೆಂಗವರೇ,” ಎಂದು ಕೇಳಿದೆ.ಇದ್ದಕ್ಕಿದ್ದಂತೆ ಅವಳ ಮುಖ ಗಂಭೀರವಾಯಿತು.” ಪಾಪ ಕಣೆ, ಈ ಕರೋನಾದಲ್ಲಿ ಹೋಗ್ಬಿಟ್ರು , ನಮ್ಮಾವ ‘ಅವಳಿಗೆ ಮೈಸೂರು ಸಿಲ್ಕ್ ಹುಚ್ಚು ವಿಪರೀತ. ನನ್ನ ಬೇರೆ ಏನೂ ಕೇಳ್ಲಿಲ್ಲ, ಬರೀ ಸೀರೆ ತಕ್ಕೊಂಡ್ ಖುಷಿ ಪಟ್ಳು.’ ಅಂತ ಹೇಳಿ ಹೆಂಡತಿ ಚಿತೆಗೂ ಒಂದು ಮೈಸೂರು ಸಿಲ್ಕ್ ಹಾಕಿಸಿದರು. ಅವರ ಮಗಳು”ಚೆನ್ನಾಗಿ ಬಾಳಿ ಬದುಕ್ದೋರು, ಅವರ ಆಶೀರ್ವಾದ,”ಅಂತ ಎಲ್ಲಾ ಸೀರೆಗಳನ್ನು ಪ್ರತೀ ನೆಂಟರಿಷ್ಟರಿಗೆ ಒಂದೊಂದು ಕೊಟ್ಟು ಖಾಲಿ ಮಾಡಿದಳು.ನನಗೂ ಒಂದು ಸಿಕ್ಕಿತು,ಅವರ ಪ್ರೀತಿಯ ನೆನಪಿಗೆ ಅಂತ ಇಸ್ಕೊಂಡೆ. “ಎಂದಾಗ ನನಗೂ ಮನಸ್ಸು ಭಾರವಾಗಿ ಹೋಯಿತು.ಅಂತೂ ಅಲ್ಲಿಂದ ಹೊರಟು ದೀಪಾಳನ್ನು ಬೀಳ್ಕೊಟ್ಟು,ಮೀನಾಕ್ಷಿ ಮೇಡಂರವರನ್ನು ಮಡಿಕೇರಿ ಬಸ್ ಹತ್ತಿಸಿ ಮನೆಗೆ ಬರುವಷ್ಟರಲ್ಲಿ ರಾತ್ರಿ ಒಂಬತ್ತು ಕಳೆದಿತ್ತು.
ದೀಪಾಳ ಅತ್ತೆ ಸುದ್ದಿ ಕೇಳಿದ ಬಳಿಕದಿಂದ ಕಂತುಗಳು ಮುಗಿದ ಬಳಿಕ ಮತ್ತೆ ಮತ್ತೆ ಕಟ್ಟಿ ಮೈಸೂರು ಸಿಲ್ಕ್ ಕೊಳ್ಳುವ ನನ್ನ ಪ್ಲಾನ್ ನಾನು ಬಿಟ್ಟುಕೊಟ್ಟೆ.ಸಾವಿನ ತನಕವೂ ಹಿಂಬಾಲಿಸುವ ಮೋಹಕ್ಕೆ ಏನರ್ಥ ಅನ್ನಿಸಿ ಬಿಟ್ಟಿದೆ.ಇರುವ ನೂರೆಂಟು ಸೀರೆಗಳನ್ನೇ ಅಗುಚಿ ಮಗುಚಿ ಉಟ್ಟು ಹರಿಯುವ ಎನ್ನಿಸಿ ಬಿಟ್ಟಿದೆ.
ಸಮತಾ.ಆರ್
Mysurusilk seereyaste naviraada lekhana
Very nice madam I am ushas Collegue.please send your writing to this number thank you
ಸುಂದರ ಕಥೆ ಬಹಳ ಸ್ಪಷ್ಟವಾದ ನೀಲುವು ಹೀಗೆ ಸಾಗಲಿ ನಿಮ್ಮ ಬರವಣಿಗೆ
ಲೇಖನ ತುಂಬ ಚನ್ನಾಗಿದೆ. ಆದರೆ ಅಕ್ಕ ಮೈಸೂರ್ ಸಿಲ್ಕ್ ಸೀರೆಗಳ ಆಸೆ ಕಡಿಮೆ ಆಗಿಲ್ಲ
ಅದ್ಭುತವಾಗಿದೆ
Samatha, idannu odidaaga…Mysore seere uttashte khushi aaythu
This is excellent..it’s written to its perfection….the writer must be well skilled….hats off to the writer.
ಮೈಸೂರಿನ ವನಿತೆಯರ ರೇಷ್ಮೆ ಸೀರೆಯ ಮೋಹ ಪ್ರತಿಬಿಂಬಿತವಾಗಿದೆ. Beautiful mam.
ಸೀರೆ, ಅಂತಿಂಥ ಸೀರೆ ಅಲ್ಲ, ರೇಷ್ಮೆ ಸೀರೆ, ಅದರಲ್ಲೂ, ಮೈಸೂರು ರೇಷ್ಮೆಯ ಸೀರೆ. ಅದರ ವಿಶೇಷತೆಯೇ ಬೇರೆ. ಈ ಬರಹವು ಹಾಗೆ ವಿಶೇಷ ವಾಗಿದೆ. ಹಾಸ್ಯವಷ್ಟೇ ಅಲ್ಲ, ಕರ್ನಾಟಕದ ವೈಶಿಷ್ಟ್ಯ, ಪರಂಪರೆಯನ್ನ ಪ್ರತೀ ಸೀರೆಯ ಅಂಚಿನಲ್ಲಿ ನೇಯ್ದಂತೆ ಇದೆ.
Excellent
Super madam.
ತುಂಬಾ ಚೆಂದದ ಕುತೂಹಲಕಾರಿ ಬರಹ ಮೇಡಂ…. ಅಭಿನಂದನೆಗಳು
ಓದಿ ಅಭಿಪ್ರಾಯ ತಿಳಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು
ಸಮತಾ
Wonderful writing mam..natural too.. ಓದಿಸುತ್ತೆ. I feel happy. I’m Maharani’s student. Thank you for good writing. Keep it up..keep writing to Sangati..@honeybindu@