ಅಂಕಣ ಸಂಗಾತಿ
ಸಕಾಲ
ಶಿವಲೀಲಾ ಹುಣಸಗಿ
ಪ್ರೀತಿ ಕೂಡಾ ಲೆಕ್ಕಕ್ಕೆ ಸಿಗುವ ಅಗ್ಗದ ಔಷಧವಾಗಿದೆ.
ಪ್ರೀತಿ ಇಲ್ಲದ ಮೇಲೆ-
ಹೂವು ಅರಳೀತು ಹೇಗೆ ?
ಮೋಡ ಕಟ್ಟೀತು ಹೇಗೆ ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ ?
ಪ್ರೀತಿ ಇಲ್ಲದ ಮೇಲೆ-
ಮಾತಿಗೆ ಮಾತು ಕೂಡೀತು ಹೇಗೆ ?
ಅರ್ಥ ಹುಟ್ಟೀತು ಹೇಗೆ?
ಬರಿ ಪದಕ್ಕೆ ಪದ ಜತೆಗಿದ್ದ ಮಾತ್ರಕ್ಕೆ
ಪದ್ಯವಾದೀತು ಹೇಗೆ ?
ಜಿ. ಎಸ್. ಶಿವರುದ್ರಪ್ಪ
ಬದುಕು ನಾವೆನಿಸಿಕೊಂಡಂತೆ ನಡೆಯುವಂತಿದ್ದರೆ ಜಗತ್ತು ಹೀಗೆ ಇರುತ್ತಿರಲಿಲ್ಲ.ಸ್ಪರ್ಧಾತ್ಮಕ ಜಗತ್ತಿನಲ್ಲಿ ಬದುಕುತ್ತಿರುವ ನಾವು ಡಾರ್ವಿನ್ನನ ಸಿದ್ಧಾಂತವನ್ನು ಅಗತ್ಯಕ್ಕಿಂತ ಜಾಸ್ತಿ ಅಪ್ಪಿಕೊಂಡಿದ್ದೇವೆ. ನಿರ್ದಿಷ್ಟ ಚೌಕಟ್ಟಿನಲ್ಲಿ ಬದುಕುವ ಕಾಲ ಮುಗಿದಾಗಿದೆ. ಉಳಿವಿಗೆ ಹೋರಾಟ ಅನಿವಾರ್ಯವಾಗಿದೆಯೆಂಬ ಸತ್ಯ ಒಪ್ಪಿಕೊಳ್ಳುವ ಅನಿವಾರ್ಯತೆ. ಎಷ್ಟೊಂದು ಒತ್ತಡಗಳು ಮನಸ್ಸಿಗೆ,ಅದನ್ನು ನಿಭಾಯಿಸುವುದು ಕಷ್ಟ ಸಾಧ್ಯವಾದರೂ, ನೀರಿನ ಹರಿವಿನಂತೆ ಅವಕಾಶಗಳ ಬೆನ್ನಟ್ಟಬೇಕಿದೆ. ಜೀವನದ ಮೌಲ್ಯಗಳನ್ನು ಒಂದೊಂದಾಗಿ ಕೈಬಿಡುವ ಅನಿವಾರ್ಯತೆಯನ್ನು ಬದುಕು ಸೃಷ್ಟಿಸುತ್ತಿದೆ. ಹುಟ್ಟಿನಿಂದಲೇ ಆರಂಭಗೊಳ್ಳುವ ಹೋರಾಟಕ್ಕೆ ಅಂತ್ಯ ಸಿಗುವುದು ನಾವು ಭೌತಿಕವಾಗಿ ಅಂತ್ಯಗೊಂಡಾಗಲೇ.ನಮ್ಮ ಹಿಂದಿನ ತಲೆಮಾರಿನವರು ಶಿಕ್ಷಣ ಮತ್ತು ವೃತ್ತಿಯಲ್ಲಿ ಮಾತ್ರ ಸ್ಪರ್ಧಾತ್ಮಕ ಭಾವನೆಯನ್ನು ಹೊಂದಿದ್ದರು. ಲಾಭ–ನಷ್ಟಗಳೆಂಬ ಲೆಕ್ಕಾಚಾರಗಳು ವ್ಯಾಪಾರದಲ್ಲಿ ಮಾತ್ರ ಇಣುಕುತ್ತಿದ್ದವು. ಕಾಲಚಕ್ರ ಉರುಳಿದಂತೆ ಪ್ರೀತಿಯ ವಿಷಯದಲ್ಲೂ ಲಾಭ–ನಷ್ಟಗಳು ಸ್ಥಾನ ಪಡೆದುಬಿಟ್ಟಿರುವುದು ವಿಪರ್ಯಾಸ, ಆದರೆ ಸತ್ಯ. ಪ್ರೀತಿ ತನ್ನ ನವಿರಾದ ಭಾವನೆಯನ್ನು ಕಿತ್ತೊಗೆದು ಹೊಸ ಹೊಸ ಮುಖವಾಡಗಳನ್ನು ಧರಿಸುತ್ತಿದೆ.ಎಷ್ಟೊಂದು ವಿಚಿತ್ರ ನೋಡಿ,ನಮಗೆ ಪರಿಚಿತರು ಎದುರಾದಾಗ ನಾವೊಂದು ಕ್ಷಣ ಮಂದಹಾಸ ಬೀರಲು ಯೋಚಿಸುವ ಕ್ಷಣಗಳು, ನಕ್ಕರೂ ಅದೊಂದು ಕಿರುನಗೆ ಮಾತ್ರ ಆ ಮುಗುಳ್ನಗೆ ಬೀರಿ ವ್ಯಾವಹಾರಿಕ ಬುದ್ಧಿ ತೋರ್ಪಡಿಸುತ್ತೇವೆ.
ಕಾಲಚಕ್ರ ಉರುಳಿದಂತೆಲ್ಲ ಬದುಕಿನ ಎಲ್ಲ ಭಾವಗಳು ಅಂಟಿಕೊಂಡಿರುವುದು ನಮ್ಮ ಜೀವನದ ಜಂಜಾಟದಲ್ಲಿ.ಅದೊಂದು ಅನುಭವ ಆಗುಹೋಗುಗಳ ಮೇಲೆ ಬೀರುವ ಪರಿಣಾಮ ಲೆಕ್ಕವಿರದ ಎಷ್ಟೋ ಸಂಬಂದಗಳು ತಮ್ಮೊಳಗಿನ ತಳಮಳವನ್ನು ಹೊರಹಾಕುವಲ್ಲಿ ಒದ್ದಾಡುತ್ತಿವೆ.ಮನಸ್ಸುಗಳು ಒಂದಾಗಬೇಕಿರುವಲ್ಲಿ ಲಾಭ–ನಷ್ಟಗಳು ಮಿಳಿತಗೊಳ್ಳತೊಡಗಿವೆ. ಇದರಿಂದ ವೈವಾಹಿಕ ಜೀವನದಲ್ಲಿ ಬಾಂಧವ್ಯ ಬೆಸೆಯದೇ ಬಿರುಕು ಮೂಡುವುದರೊಂದಿಗೆ, ಮದುವೆಗಳು ಮುರಿದು ಬಿಳುತ್ತಿವೆ. ತಮ್ಮಗಳ ಅಹಂಭಾವ, ಜವಾಬ್ದಾರಿಯಿಂದ ನುಣುಚಿಕೊಳ್ಳುವ ನಕಾರಾತ್ಮಕ ಅಂಶಗಳು ಸಂಸಾರದಲ್ಲಿ ಇಣುಕಿ ಲಾಭದ ತಳಹದಿಯ ಮೇಲೆ ಕಟ್ಟಿಕೊಂಡ ಬದುಕು ಕುಸಿದು ಬೀಳುತ್ತಿವೆ. ಕೌಟುಂಬಿಕ ಸ್ವಾಸ್ಥ್ಯದ ಜೊತೆ ಜೊತೆಗೆ ಸಾಮಾಜಿಕ ಸ್ವಾಸ್ಥ್ಯದ ಮೇಲೂ ಇದು ಪರಿಣಾಮ ಬೀರುತ್ತಿದೆ.ಮದುವೆಯೆಂದರೆ ತಮಾಷೆಯಾಗಿ ಪರಿಣಮಿಸಿದೆ.ಪಾಶ್ಚಾತ್ಯ ಸಂಸ್ಕೃತಿಯ ಅನಾವಣರ ನಾವುಗಳು ಬಿಂದಾಸಾಗಿ ಪರಿಚಯಿಸುತ್ತಿದ್ದೆವೆ.
ಕೃತಕ ಬದುಕು ಎಂದಿಗೂ ಶಾಶ್ವತವಲ್ಲವೆಂಬ ಸತ್ಯ ಅರಿವಾಗುವ ಹೊತ್ತಿಗೆ,ಜೀವನ ಮುಕ್ತಾಯ ಹಂತ ತಲುಪುತ್ತಿರುವುದು ದುರದೃಷ್ಟಕರ.
ಪ್ರೀತಿ ಹುಟ್ಟುವುದು ಹೃದಯದಿಂದ, ಹೃದಯ ಲಾಭ–ನಷ್ಟಗಳ ಚಿಂತೆಯಿಂದ ಯಾವತ್ತೂ ದೂರಯಿದ್ದಷ್ಟು, ಸುಖ–ದುಃಖದಲ್ಲಿ ಸಹಭಾಗಿಯಾಗಲು,ಜೊತೆಯಾಗಿರಬೇಕಾದ ಬಾಳ ಸಂಗಾತಿಯ ಆಯ್ಕೆಯನ್ನು ಹೃದಯದ ಮಾತನ್ನೇ ಆಲಿಸಿದರೆ ಬದುಕು ಬಂಗಾರವಾಗಲು ಸಾಧ್ಯ.ಯಾವ ಸಂಬಂಧವನ್ನು ಲೆಕ್ಕಾಚಾರದಿಂದ ಆಯ್ದುಕೊಳ್ಳುವ ಬದುಕು ವ್ಯಾಪಾರದಂತೆ. ಒಮ್ಮೆ ಲಾಭ ತಂದರೆ ಮತ್ತೊಮ್ಮೆ ನಷ್ಟ. ಕೆಲವೊಮ್ಮೆ ದಿವಾಳಿಯೂ ಆಗಬಹುದು. ಆದ್ದರಿಂದ ಲೆಕ್ಕಾಚಾರ ಮೀರಿದ ಸಂಬಂಧ ಜೀವನದಲ್ಲಿ ಸಾಕ್ಷಾತ್ಕಾರ ಆಗದು.
ವ್ಯವಹಾರವನ್ನು ಪ್ರೀತಿಸುತ್ತಾ ಸದಾ ಗೆಲ್ಲುವ ತವಕದಿಂದಿರುವ ಜನರು ಎಲ್ಲವನ್ನೂ ವ್ಯವಹಾರ ದೃಷ್ಟಿಯಿಂದ ನೋಡುತ್ತಿರುವುದು ನಿಜ. ಇದು ಜನರ ಮನಸ್ಥಿತಿ ಅಷ್ಟೇ ಅಲ್ಲ, ಸಮಾಜವೂ ಹಾಗೇ ಆಗಿದೆ. ಯಾವುದೇ ಕೆಲಸದ ಮುನ್ನ ಲಾಭ ನಷ್ಟ ಯೋಚಿಸದೇ ಮಾಡುವವರ ಸಂಖ್ಯೆ ಮೊದಲಿನಿಂದಲೂ ಕಡಿಮೆಯೇ. ಆದರೆ ಈಗ ಈ ಮಾತು ಪ್ರೀತಿ, ವಿಶ್ವಾಸ, ನಂಬಿಕೆಗೂ ಸೂಕ್ತ ಎನಿಸುತ್ತದೆ.
ಪ್ರೀತಿ ಎಂದರೆ ಒಬ್ಬರಿಗೊಬ್ಬರ ಆಸರೆ, ನೋವು ನಲಿವುಗಳನ್ನು ಹಂಚಿಕೊಂಡು ಪರಸ್ಪರ ಬೆನ್ನೆಲುಬಾಗಿ ನಿಲ್ಲುವುದು, ಕೊನೆಯವರೆಗೂ ಕೈ ಹಿಡಿಯುವುದು. ಆದರೆ ಈಗ ಪ್ರೀತಿಯ ಅರ್ಥ ಕೂಡ ಬದಲಾದಂತಿದೆ ಸದಾ ಯಾಂತ್ರಿಕ ಬದುಕನ್ನು ನಡೆಸುತ್ತಿರುವ ಈ ಕಾಲದ ಜನರಿಗೆ ಪ್ರೀತಿಯೂ ಯಾಂತ್ರಿಕವಾಗಿದೆ. ಪ್ರೀತಿಸಿ ಮನೆಯವರನ್ನು ಎದುರಿಸಿ, ಅವರನ್ನು ಧಿಕ್ಕರಿಸಿ ಮದುವೆಯಾಗುವ ಅನೇಕ ಜನರಿಗೆ ಮೂಲತಃ ಪ್ರೀತಿಯ ಅರ್ಥವೇ ತಿಳಿದಿರುವುದಿಲ್ಲ.ಹಾಗೆಂದ ಮಾತ್ರಕ್ಕೆ ಪ್ರೀತಿ ಇಲ್ಲವೇ ಇಲ್ಲ ಎಂದಲ್ಲ, ಹಣದ ಕೊರತೆ, ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳಲಾಗದೆ ಒತ್ತಡಕ್ಕೆ ಸಿಲುಕಿ, ಅಪನಂಬಿಕೆಯ ಹಾದಿ ಹಿಡಿಯುವುದೂ ಸುಂದರ ಜೀವನಕ್ಕೆ ಮುಳ್ಳಾಗಬಹುದು. ಯಾರೇ ಆಗಲಿ,ಮದುವೆಯಾಗುವ ಮುನ್ನ ಅವರು ಸಂಗಾತಿಯ ಆಸ್ತಿ, ಅಂತಸ್ತು, ಸ್ಥಾನಮಾನವನ್ನು ನೋಡುತ್ತಾರೆಯೇ ಹೊರತು ಗುಣ, ಅಭ್ಯಾಸ, ನಡವಳಿಕೆ ಇದ್ಯಾವುದನ್ನೂ ಲೆಕ್ಕಕ್ಕೇ ತೆಗೆದುಕೊಳ್ಳುತ್ತಿಲ್ಲ.ಹೀಗಾದರೆ ಪ್ರೀತಿಯ ಬೆಲೆ ತೆತ್ತಾಯಿತು ಎಂದಾಯಿತು…. ಹಣವಿದ್ದವರನ್ನು ಮದುವೆಯಾಗಿ ಸುಖವಾಗಿದ್ದರಾಯಿತು ಎಂಬ ಸ್ವಾರ್ಥ ಮನೋಭಾವ ಹೊಂದಿರುವವರೇ ಈಗ ಹೆಚ್ಚಾಗಿ ಸಿಗುತ್ತಾರೆ.ಕಳೆದುಹೋಗಿದೆ ನಿಜವಾದ ಪ್ರೀತಿ.
ಇತಿಹಾಸದ ಪುಟ ಸೇರಿದ ಪ್ರೀತಿಯ ಕಾಲ, ಜನಸಂಖ್ಯೆ ಹೆಚ್ಚಾದಂತೆ ಸ್ಪರ್ಧೆ ಹೆಚ್ಚಾಗುತ್ತಿದೆ.ಸ್ಪರ್ಧೆ ಹೆಚ್ಚಾದಂತೆ ಸ್ನೇಹ, ಪ್ರೀತಿ, ಪ್ರಾಮಾಣಿಕತೆ, ಬದ್ಧತೆ ಇವೂ ಗೌಣವಾಗುತ್ತಾ ಹೋಗುತ್ತವೆ. ಈ ಯಾಂತ್ರಿಕ ಜೀವನದಲ್ಲಿ ಪ್ರೀತಿ ಹೀಗೇ ಕಳೆದುಹೋಗುತ್ತಿದೆ.‘ಏನಾದರು ಸರಿ, ಗೆಲುವು ಒಂದೇ ಗುರಿ’ ಎನ್ನುವ ಅಜೆಂಡ ಪೋಷಿಸುವ ಅರ್ಧದಷ್ಟು ಪೋಷಕರು, ‘ಯಾವುದಾದರೂ ದಾರಿ, ಗೆಲುವಿನ ಗುರಿಯಲಿ’ ಎನ್ನುವ ಅರ್ಧದಷ್ಟು ಮಕ್ಕಳು. ಚಿಕ್ಕವರಿದ್ದಾಗಿಂದಲೇ ಈ ಲೆಕ್ಕಾಚಾರ ಬೆಳೆದುಬಿಡುತ್ತದೆ.
ದೊಡ್ಡವರಾದ ಮೇಲೆ ಪ್ರೀತಿ ವಿಚಾರದಲ್ಲಿ ತೇಲಾಡುವವರು ಹಲವರು. ಇದರ ನಡುವೆ ಪ್ರೀತಿ ಇದ್ದು, ಪ್ರೀತಿ ಸಿಕ್ಕು, ಅಭಿವ್ಯಕ್ತಪಡಿಸಲಾಗದೆ, ಅನುಭವಿಸಲಾರದೆ ಕಳೆದುಹೋದವರೆಷ್ಟೋ? ಇದು ಪ್ರೀತಿಗೂ ಮೋಸ ಮಾಡುವ ಕಾಲ.
ಪ್ರೀತಿ ಇಲ್ಲದ ಮೇಲೆ-
ಸಂಶಯದ ಗಡಿಗಳುದ್ದಕ್ಕು
ಸಿಡಿಗುಂಡುಗಳ ಕದನ ನಿಂತೀತು ಹೇಗೆ ?
ಜಾತಿ-ಮತ-ಭಾಷೆ-ಬಣ್ಣಗಳ ಗೋಡೆಯ ನಡುವೆ
ನರಳುವ ಪಾಡು ತಪ್ಪೀತು ಹೇಗೆ ?
ನಮ್ಮ ನಿಮ್ಮ ಮನಸ್ಸು
ಮರುಭೂಮಿಯಾಗದ ಹಾಗೆ
ತಡೆಗಟ್ಟುವುದು ಹೇಗೆ
ಜಿ.ಎಸ್.ಶಿವರುದ್ರಪ್ಪ..
ಜಾತಿ–ಮತ ಭಾಷೆಯ ಮೀರಿ ಬೆಸೆದ ಅಂತರ್ಜಾತಿ, ಅಂತರ್ಮತೀಯ ಬಾಂಧವ್ಯಗಳಿಗೆ ಹಿಂದಿರುವ ಮೂಲಮಾನ ಯಾವುದು? ವೈವಿಧ್ಯಮಯ ಕೊಂಡಿಗಳಿರುವ ಅನೇಕ ಪ್ರದೇಶ, ಜನಸಮುದಾಯಕ್ಕೆ ಇಷ್ಟೊಂದು ಏಕಮಾತ್ರ ಒಡನಾಟಗಳ ಸಾಧ್ಯವಾದುದ್ದಾದರೂ ಹೇಗೆ? ಇವೆಲ್ಲಕ್ಕೂ ಅಂತರ್ಬಲದ ದ್ರವ್ಯವಾದ ಪ್ರೀತಿಯೇ ಕಾರಣ.
ಇದು ಸ್ಪರ್ಧಾತ್ಮಕ ಯುಗ. ಅದರಲ್ಲೂ ಆಧುನಿಕತೆ, ನಾಗರೀಕತೆ ಬದುಕಲ್ಲಿ ಪ್ರವೇಶಿಸಿ ಎಲ್ಲವನ್ನೂ ಸ್ಪರ್ಧೆಗಿಟ್ಟ ಮೇಲೆ ಪ್ರೀತಿ ಕೊಡು–ಕೊಳ್ಳುಬಾಕು ಸಂಸ್ಕೃತಿಯ ತೆಕ್ಕೆಗೆ ಸಿಕ್ಕು ತೊಳಲಾಟದಿಂದ ಆಯಾಸಗೊಂಡಿರಲೂಬಹುದು ದಣಿವಾಗಿರಲೂಬಹುದ.! ಭಾವನೆಗಳ ಬಂಧಕ್ಕೆ ‘ನೋಟ್’ ಮುದ್ರಿಸಿ ಇದು ಸ್ಪರ್ಧೆಯ ಕಾಲ. ಶಿಕ್ಷಣದಿಂದ ಆರಂಭಿಸಿ ವೃತ್ತಿಯ ತನಕ ಎಲ್ಲೆಡೆಯೂ ಸ್ಪರ್ಧೆಯೇ.
ಹೇಗಾದರೂ ಮಾಡಿ ಗೆಲ್ಲುವ ಕುದುರೆಯಾಗಬೇಕೆಂದು ಬದುಕುತ್ತಿರುವ ನಮ್ಮ ಬದುಕಿನಲ್ಲಿ ಪ್ರೀತಿ ಕೂಡಾ ಲೆಕ್ಕಕ್ಕೆ ಸಿಗುವ ಅಗ್ಗದ ಔಷಧದ ವಿಷಯವಾಗಿದೆಯೇ? ಹೃದಯದ ತುಡಿತಕ್ಕಿಂತಲೂ ಲಾಭದ ದೃಷ್ಟಿಯಲ್ಲಿಯೇ ಬಾಳ ಸಂಗಾತಿಯನ್ನೂ ಆರಿಸಿಕೊಳ್ಳುತ್ತಿದ್ದೇವೆಯೇ? ಅಥವಾ ನಮ್ಮ ಪಾಲಕರಂತೆ ಸುದೀರ್ಘ ದಾಂಪತ್ಯ ಸಾಧ್ಯವಿಲ್ಲದ ಕಾಲ ನಮ್ಮದೆಂದು ತೀರ್ಮಾನಿಸಿ ಲಾಭ ನಷ್ಟಗಳ ಲೆಕ್ಕಾಚಾರದಲ್ಲಿ ಬದುಕು ರೂಪಿಸಿಕೊಳ್ಳುತ್ತಿದ್ದೇವೆಯೇ? ಒಂದಿಷ್ಟು ಸಮಕಾಲಿನರಾಗಿ ಚಿಂತಿಸುವುದು ಅನಿವಾರ್ಯ. ಜಗತ್ತಿಗೆ ಏನು ಬೇಕು? ನಾವೇನನ್ಬು ನೀಡುತ್ತಿದ್ದೆವೆ? ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಚಿಂತನೆ ಪರಸ್ಪರ ಪರಿಣಾಮಕಾರಿಯಾಗಿ ನಡೆದರೆ ಮಾತ್ರ ಬದುಕು ಯಾವುದರ ಮೇಲೆ ನಿಂತಿದೆ ಎಂಬುದು ಅರಿವಾಗುತ್ತದೆ.
ಪ್ರೀತಿ ಹೃದಯದ ತುಡಿತವೇ ವಿನಃ ಲಾಭದ ಮಿಡಿತವಲ್ಲ! ಸವಾಲಿನತ್ತ ಸವಾರಿ ಮಾಡಿ ಹೋಗುವ ಭವಿಷ್ಯಕ್ಕೆ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ವಿಧಾನ ಲಾಭದ ಮಾತಲ್ಲ! ಪ್ರೀತಿ ಒಂದುಲಾಭ–ನಷ್ಟಕ್ಕೆ ಅಧೀನವಾದರೆ, ಕೊಂಡಾಟ, ಮಾರಾಟವಾಗುವ ಸರಕಾಗುತ್ತದೆ. ಭಾವನಾತ್ಮಕ ಸೆಳೆತಗಳು ಅಲ್ಲಿ ಉಳಿಯಲು ಸಾಧ್ಯವೇ ಇಲ್ಲ. ಪ್ರಸ್ತುತ ಮನುಷ್ಯನ ನಡುವಿನ ಹೊಂದಾಣಿಕೆ, ತಾಳ್ಮೆ ಸೋತಿರುವುದು ಸುಳ್ಳಲ್ಲ! ಆದರೆ ಪ್ರೀತಿ ಸೋತಿಲ್ಲ.ಯಾಂತ್ರಿಕತೆ, ಒತ್ತಡ, ಸಂಶಯ, ಮೌಲ್ಯಗಳ ಕುಸಿತ, ಇತ್ಯಾದಿ ಭಾವಗಳು ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತಿವೆ. ಲಾಭ–ನಷ್ಟಗಳು ಮನೋವ್ಯಾಧಿಗೆ ಬಿಟ್ಟದ್ದು.
ಒಟ್ಟಾರೆಯಾಗಿ..ಮನುಷ್ಯ ಸಂಬಂಧಗಳು ಬದುಕಿನ ಬವಣೆಗೆ ಸುಖ ಶಾಂತಿ ನೆಮ್ಮದಿ ನೀಡುವ ಹಂತದಲ್ಲಿ ಇದ್ದರೆ ಮಾತ್ರ ಅದಕ್ಕೊಂದು ಬೆಲೆ.ಪ್ರೀತಿ ಯಾವತ್ತು ನೋವ ಬಯಸಿಲ್ಲ.ದುಡಿತವೆ ಜೀವನದ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ದಾರಿಯಲ್ಲ.ಸಂಬಂಧಗಳಲ್ಲಿಯ ಪರಸ್ಪರ ನಂಬಿಕೆ ಭರವಸೆ ಗಟ್ಟಿಯಾಗಿ ಬೆಸೆದಾಗ ಮಾತ್ರ,ಲೆಕ್ಕಗಳೇ ಬದುಕಲ್ಲವೆಂಬ ಮಾನವೀಯ ಮೌಲ್ಯಗಳನ್ನು ಅರಿತಾಗಲೇ ಮಾತ್ರ ಕೊಡು ಕೊಳ್ಳುವ ಬವಣೆಗಳು ನೀಗುವುದು.ಯಾವುದು ನಮ್ಮ ಮೂಲಮಂತ್ರವಾಗಬೇಕು ಎಂಬುದನ್ನು ಮನಗಂಡಾಗ ಜೀವನ ಪ್ರೀತಿ ಸುಖಮಯವಾಗಲು ಸಾಧ್ಯ.
ಶಿವಲೀಲಾ ಹುಣಸಗಿ
ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ೧)ಬಿಚ್ಚಿಟ್ಟಮನ,೨)ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು ೩) ಗಿರಿನವಿಲನೆನಪುಗಳು ಪ್ರೇಮಲಹರಿಗಳು,೪) ಗೋರಿಯಸುತ್ತ ಸಪ್ತಪದಿ ತುಳಿದಾಗ ಕಥಾ ಸಂಕಲನ, ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿ,ಜಿಲ್ಲಾಧ್ಯಕ್ಷೆ ಕೇ.ಕ.ಸಾ.ವೇದಿಕೆ.ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ
ಅತೀ ಸುಂದರ ಜೀವನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಲೇಖನ..ತಮ್ಮ ಸಾಹಿತ್ಯ ಕೃಷಿ ಗೆ ಶರಣು ಶರಣು.
ಪ್ರಿತಿ ಕೂಡ ಲೆಕ್ಕಕ್ಕೆ ಸಿಗುವ ಅಗ್ಗದ ಔಷಧವಾಗಿದೆ. ಲೇಖಕಿ ಶಿವಲೀಲಾ ಹುಣಸಗಿ ಅವರ ಪ್ರಸ್ತುತ ಲೇಖನ ಪ್ರೀತಿ ಕುರಿತಾಗಿ ಸೋದಾಹರಣ ಚಿಂತನ. ಸಚಿತ್ರ ವಿವರಣೆಗಳು ಲೇಖನದ ಸೊಗಸನ್ನು ಹೆಚ್ಚಿಸಿವೆ. ಪ್ರೀತಿ ತುಂಬಿದ ಶೈಲಿ ಓದುವ ರುಚಿಯ ಖುಷಿಯನ್ನು ಕೊಡುತ್ತದೆ. ಇದು ಅಕ್ಷರ ಪ್ರೀತಿ, ಜ್ಞಾನದ ಕೃಷಿ. ಶಿವಲೀಲಾ ಅವರ ಕವನವೇ ಇರಲಿ, ಲೇಖನವೇ ಇರಲಿ. ಅವೆಲ್ಲ ಇರುವಿಕೆಯ ಜೀವಂತ ಸ್ಪರ್ಶ!
ಪ್ರೀತಿ ಇಲ್ಲದ ಮೇಲೆ
ಹೂವು ಅರಳಿತು ಹೇಗೆ?
ಮೋಡ ಕಟ್ಟಿತು ಹೇಗೆ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ? ಜಿ.ಎಸ್. ಅವರ ಕವನ ಸಾಲುಗಳೊಂದಿಗೆ ಲೇಖನ ತನ್ನ ಅಂತರಾಳದ ಪ್ರೀತಿಯ ಚಿಂಚನವನ್ನು ಸ್ಪರ್ಶಗೊಳಿಸುತ್ತದೆ. ಪ್ರೀತಿ ಅನ್ನುವುದು ಅಗ್ಗಕ್ಕೆ ಸಿಗುವ ದಿವ್ಯ ಔಷಧ ಎಂಬುದನ್ನು ಮನದಟ್ಟು ಮಾಡಿಕೊಡುವ ಸ್ವಾದವುಳ್ಳ ಲೇಖನ!
D.S.Naik Sirsi
Very nice..preetina yalla riti inda samanagi tugisi baradidiri tumba sogasagide