ರಂಗಭೂಮಿ
‘ಒಂದು ಕಾನೂನಾತ್ಮಕ ಕೊಲೆ’-
ನಾಟಕದ ಬಗ್ಗೆ ಹರೀಶ್ ಬೇದ್ರೆ
ಒಂದು ಕಾನೂನಾತ್ಮಕ ಕೊಲೆ
ವಿನ್ಯಾಸ, ರಾಗಸಂಯೋಜನೆ ಹಾಗೂ ನಿರ್ದೇಶನ :
ಹೊಂಗಿರಣ ಚಂದ್ರು(ಕಾಮಿಡಿ ಕಿಲಾಡಿಗಳು ಖ್ಯಾತಿ)
ರಚನೆ: ಶಿವಕುಮಾರ್ ಮಾವಲಿ
ಪ್ರಸ್ತುತಿ: ಹೊಂಗಿರಣ, ಶಿವಮೊಗ್ಗ
“ಒಂದು ಕಾನೂನಾತ್ಮಕ ಕೊಲೆ” ಒಂದು ಕಾಲ್ಪನಿಕ ನಾಟಕ. ಇದು ಯಾರನ್ನೂ, ಯಾವುದನ್ನೂ ಕುರಿತು ಬರೆದದ್ದಲ್ಲ.
ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯ ನೇತೃತ್ವದಲ್ಲಿ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ, ರಾಜ್ಯದ ಪ್ರತಿಯೊಬ್ಬ ನಾಗರಿಕನನಿಗೂ ತನ್ನ ಜೀವಿತಾವಧಿಯಲ್ಲಿ ತಾನು ಬಯಸಿದ ಒಬ್ಬ ವ್ಯಕ್ತಿಯನ್ನು ಕಾನೂನಾತ್ಮಕವಾಗಿ ಕೊಲ್ಲಲು ಅವಕಾಶವನ್ನು ನೀಡುವ ಕಾಯಿದೆಯನ್ನು ಜಾರಿಗೆ ತರುತ್ತಾರೆ. ಹೀಗೆ ಕಾನೂನಾತ್ಮಕವಾಗಿ ಕೊಲ್ಲಲು ಬಯಸುವ ವ್ಯಕ್ತಿಯೂ ಸರ್ಕಾರ ನಿಗದಿಪಡಿಸಿದ ನೀತಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಏನೆಂದರೆ, ಯಾರನ್ನಾದರೂ ಕೊಲೆ ಮಾಡಲು ಬಯಸುವ ವ್ಯಕ್ತಿಯೂ, ಮೊದಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಭೇಟಿಯಾಗಿ, ತಾನು ಯಾರನ್ನು ಕೊಲ್ಲುತ್ತೇನೆ, ಏಕೆ ಕೊಲ್ಲುತ್ತೇನೆ, ಏಕೆ, ಹೇಗೆ ಎಲ್ಲಾ ವಿಚಾರಗಳನ್ನು ತಿಳಿಸಬೇಕು. ಅದು ಸರಿಯಿದ್ದರೆ M.A.O. (MURDER APPROVAL OFFICER) ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ M.D.O. ( MURDER DECIDING OFFICER)ಗೆ ಕೊಡುತ್ತಾನೆ. ಆ ಅಧಿಕಾರಿಯೂ, ಕೊಲೆಯಾಗಲ್ಪಡುವ ವ್ಯಕ್ತಿಗೆ ಈ ಎಲ್ಲಾ ವಿಚಾರಗಳನ್ನು ತಿಳಿಸುತ್ತಾನೆ. ಆದರೆ ಆ ವ್ಯಕ್ತಿ ಒಪ್ಪಿಕೊಳ್ಳುವುದು ಬಿಡುವುದು ಕಡ್ಡಾಯವಲ್ಲ. ಆದರೆ ಆ ಅಧಿಕಾರಿ ಒಪ್ಪಿಗೆ ಸೂಚಿಸಿದ ಮೇಲಷ್ಟೇ ಕೊಲೆ ಮಾಡಬೇಕು ಇದು ನಿಯಮ. ಈ ಕಾಯಿದೆಯ ಕುರಿತ ಮಾಹಿತಿಯನ್ನು ಸುದ್ದಿ ಮಾಧ್ಯಮಗಳ ಮೂಲಕ ತಿಳಿಸುವ ಬದಲು ನೇರವಾಗಿ ನಾಗರಿಕರಿಗೆ ಪತ್ರದ ಮೂಲಕ ತಿಳಿಸಲು ನಿರ್ಧರಿಸಲಾಗುತ್ತದೆ.
ಈ ಮಾಹಿತಿಯನ್ನು ಹೊತ್ತ ಪತ್ರ ಸಾಮಾನ್ಯ ನಾಗರಿಕನೊಬ್ಬನಿಗೆ ಬರುತ್ತದೆ. ಈ ವಿಷಯದ ಕುರಿತು ಮಾಹಿತಿ ಪಡೆದ ವ್ಯಕ್ತಿ ಹೇಗಾದರೂ ಮಾಡಿ ಈ ಕಾಯಿದೆ ಜಾರಿಗೆ ಬಾರದಂತೆ ತಡೆಯಬೇಕು, ಇಲ್ಲದಿದ್ದರೆ ಇದರಿಂದ ದೊಡ್ಡ ಅನಾಹುತವೇ ಆಗುತ್ತದೆ ಎಂದು ನಿರ್ಧಾರ ಮಾಡುತ್ತಾನೆ. ಹೀಗೆ ನಿರ್ಧಾರ ಮಾಡಿದ ವ್ಯಕ್ತಿಗೆ ಆ ಕಾಯಿದೆ ಜಾರಿಗೆ ಆಗುವುದನ್ನು ತಡೆಯಲು ಸಾಧ್ಯವಾಯಿತೆ, ತಡೆಯಲು ಏನು ಮಾಡಿದ, ಹೇಗೆ ಮಾಡಿದ, ಈ ಸಂದರ್ಭದಲ್ಲಿ ಏನೇನಾಯಿತು ಎನ್ನುವುದೇ ನಾಟಕದ ತಿರುಳು.
ಶಾಸಕಾಂಗ ಸಭೆ ನಡೆಯುವಾಗ, ಕಾಯಿದೆಯ ವಿಷಯ ನೇರವಾಗಿ ಪತ್ರ ಮುಖೇನ ನಾಗರಿಕರಿಗೆ ತಿಳಿಸಬೇಕು ಎಂದಾಗ, ಇದನ್ನು ಸುದ್ದಿ ಮಾಧ್ಯಮಗಳಿಂದ ಮುಚ್ಚಿಡಲು ಸಾಧ್ಯವೇ ಎನ್ನುವ ಮಾತು ಬರುತ್ತದೆ, ಆಗ ಬೇಕು ಎನ್ನುವುದನ್ನು ತೋರಿಸಲು ಪ್ಯಾಕೆಜ್ ಇರುವಾಗ, ಬೇಡ ಎನ್ನಲು ಪ್ಯಾಕೆಜ್ ಇರುವುದಿಲ್ಲವೇ ಎಂಬ ಮಾತು, ಸರ್ಕಾರದ ಹಿರಿಯ ಅಧಿಕಾರಿಗೆ, ಕಾಯಿದೆ ಬಗ್ಗೆ ಸಭೆಗೆ ಸ್ಪಷ್ಟವಾಗಿ ತಿಳಿಸಿ ಎಂದಾಗ, ಆತ ನನಗೇ ಇದರ ಬಗ್ಗೆ ಸ್ಪಷ್ಟತೆ ಇಲ್ಲ ಎಂದಾಗ, ಯಾವುದೋ ಸಂಸ್ಥೆಗೆ ದುಡ್ಡು ಕೊಟ್ಟು, ಓದಿ ಪಾಸಾಗಿ ಬಂದುಬಿಡುತ್ತಾರೆ ಎಂದು ಹೀಯಾಳಿಸುವ ಮುಖ್ಯಮಂತ್ರಿಗಳ ನುಡಿ, ಇದರ ಜವಾಬ್ದಾರಿ ಹೊತ್ತ ಅಧಿಕಾರಿ, ಸರ್ ಇದಕ್ಕೂ ಟಾರ್ಗೆಟ್ ಇದೆಯೇ ಎನ್ನುವುದು, ಇದಕ್ಕೆ ವಿನಾಯಿತಿ ಮೀಸಲಾತಿ ಏನಾದರೂ ಇದೆಯೇ ಎನ್ನುವ ಮಾತುಗಳಿಗೆ, ಕೋರ್ಟ್ ಕಲಾಪ ನಡೆಯುವಾಗ, ಚಳಿ ಮಳೆ ಗಾಳಿ ಯಾವುದನ್ನು ಲೆಕ್ಕಿಸದೆ ದೇಶದ ಸೇವೆ ಮಾಡಿ ನಿವೃತ್ತನಾದ ಯೋಧನಿಗೆ, ದಶಕಗಳ ಕಾಲ ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿ ಬದುಕು ಕಟ್ಟಿಕೊಟ್ಟ ಶಿಕ್ಷಕ ನಿವೃತ್ತಿಯಾದಾಗ ಅವರಿಗೆ ಪಿಂಚಣಿ ಕೊಡಲು ಹಿಂದೆ ಮುಂದೆ ಯೋಚಿಸುವ ನೀವು, ನಿಮ್ಮ ವೇತನ ಭತ್ಯೆಗಳ ಹೆಚ್ಚಳಕ್ಕಾಗಿ ಪಕ್ಷಾತೀತವಾಗಿ ಬೆಂಬಲಿಸುತ್ತೀರ ಎಂದಾಗ, ನಾಟಕ ನೋಡಲು ಬಂದ ಪ್ರೇಕ್ಷಕರು ತಮಗೇ ಅರಿವಿಲ್ಲದೆ ಚಪ್ಪಾಳೆ ತಟ್ಟುತ್ತಾರೆ.
ಹಾಗೆಯೇ, ಕೊಲೆ ಮಾಡುತ್ತೇವೆ ಎಂದು ಅರ್ಜಿ ಕೊಡಲು ಬಂದ ಒಬ್ಬೊಬ್ಬರೂ ಕೊಡುವ ಕಾರಣಗಳು ನಗು ತರಿಸುವುದರ ಜೊತೆಗೆ, ಅವಕಾಶ ಸಿಕ್ಕರೆ ತಾನು ಕೊಡುವ ಕಾರಣವೂ ಹೌದು ಅನಿಸುತ್ತದೆ. ಗಂಡ ಗೊರಕೆ ಹೊಡೆಯುತ್ತಾನೆ ತಡೆದುಕೊಳ್ಳಲು ಸಾಧ್ಯವಿಲ್ಲ, ಎಷ್ಟೇ ಕೆಲಸ ಮಾಡಿದರೂ ಬಾಸಿಗೆ ತೃಪ್ತಿ ಇಲ್ಲ, ಪೇಪರಲ್ಲಿ ತನ್ನ ಬಗ್ಗೆ ಕೆಟ್ಟದಾಗಿ ಬರೆದಿದ್ದಾನೆ, ಫೈನ್ ಹಾಕುವ ಪೋಲಿಸ್, ಗಂಡ ರಾತ್ರಿ ತಡವಾಗಿ ಮನೆಗೆ ಬರುತ್ತಾನೆ, ಹೆಂಡತಿಗೆ ಅಡಿಗೆ ಮಾಡಲು ಬರುವುದಿಲ್ಲ……… ಎನ್ನುವುದು ಕೆಲವು ಕಾರಣಗಳ ಸ್ಯಾಂಪಲ್ ಅಷ್ಟೇ.
ಒಂದು ಗಂಟೆ ನಲವತ್ತು ನಿಮಿಷಗಳ ಈ ನಾಟಕ ಎಲ್ಲೂ ಒಂದಿನಿತೂ ಬೇಸರ ತರದಂತೆ, ನಟರ ಸಹಜ ಅಭಿನಯ, ಹಾಸ್ಯ ಲೇಪಿತ, ಮೊನಚು ಸಂಭಾಷಣೆ, ಸರ್ಕಾರವನ್ನು ಎದುರಿಸಿ ಸಾಮಾನ್ಯ ವ್ಯಕ್ತಿಯೊಬ್ಬ ಅನಾಹುತಕಾರಿ ಕಾಯಿದೆ ಜಾರಿಗೆ ತರುವುದನ್ನು ಹೇಗೆ ತಡೆಯುತ್ತಾನೆ ಎಂಬ ಕುತೂಹಲ ನಮ್ಮ ಮನಸ್ಸು ಆಚೆ ಈಚೆ ಹೋಗದಂತೆ ನಾಟಕದತ್ತ ಕೇಂದ್ರೀಕರಿಸುತ್ತದೆ. ಒಟ್ಟಿನಲ್ಲಿ ಹೇಳಬೇಕೆಂದರೆ ಸಂಪೂರ್ಣವಾಗಿ ಪೈಸಾ ವಸೂಲ್ ನಾಟಕ.
ಜಿ. ಹರೀಶ್ ಬೇದ್ರೆ
ವಿಸ್ಥಾರವಾದ ವಿಮರ್ಶೆ ಸರ್
ಧನ್ಯವಾದಗಳು ನಿಮ್ಮ ಈ ಅಭಿಪ್ರಾಯ ಮತ್ತು ವಿವರಣೆಗೆ… ಎಲ್ಲಾ ನಾಟಕಗಳನ್ನು ಹೀಗೇ ನೋಡುತ್ತಾ, ಪ್ರೋತ್ಸಾಹಿಸುತ್ತಾ ಇರಿ…
ನಾಟಕ ನೋಡಲು ಪ್ರೇರೇಪಿಸುವಂತಹ ಒಂದು ಸುಂದರ ವಿಮರ್ಶೆ.
ನಾಟಕದ ಬಗ್ಗೆ ಕುತೂಹಲ ಮೂಡಿಸಿ ಪ್ರತಿಯೊಬ್ಬರೂ ನೋಡುವಂತೆ ಪ್ರೇರೇಪಿಸುವ ವಿಮರ್ಶೆ. ಉತ್ತಮ ಬರಹಕ್ಕಾಗಿ ಅಭಿನಂದನೆಗಳು
ಉತ್ತಮವಾಗಿ ವಿಮರ್ಶಿಸಿದುದಕ್ಕೆ ಧನ್ಯವಾದಗಳು ಸರ್. ನೀವು ನಾಟಕದಲ್ಲಿ ಬರುವ ಪಾತ್ರಗಳ ಒಳ ಹೊಕ್ಕು ಬರೆದಂತೆ ಅನಿಸುತ್ತಿದೆ. ನಾಟಕ ಜನರಿಗೆ ಏನನ್ನು ತಲುಪಿಸಬೇಕು ಅದರಲ್ಲಿ ಯಶಸ್ವಿ ಆಗಿದೆ ಎಂಬ ಹೆಮ್ಮೆ ಮೂಡಿಸಿದ್ದೀರಿ. ನಿಮ್ಮ ಬೆಂಬಲ ರಂಗ ಚಟುವಟಿಕೆಗಳಿಗೆ ಹೀಗೆಯೇ ಇರಲಿ.
ಮತ್ತೊಮ್ಮೆ ಧನ್ಯವಾದಗಳು.