ಅಂಕಣ ಸಂಗಾತಿ
ಸುತ್ತ-ಮುತ್ತ
ಸುಜಾತಾ ರವೀಶ್
ಅಣಕವಾಡು ಅಥವಾ ಅಣಕು ಗೀತೆ
ಸುಪ್ರಸಿದ್ಧವಾದ ಭಾವಗೀತೆ ಕವನ ಅಥವಾ ಚಿತ್ರಗೀತೆಗಳನ್ನು ಬೇರೆ ಸಾಹಿತ್ಯದಲ್ಲಿ ಹಾಡುವ ರಚನೆಗಳಿಗೆ ಅಣಕವಾಡು ಅಥವಾ ಅಣಕು ಗೀತೆ ಎಂದು ಹೇಳುತ್ತೇವೆ . ಹಲಕೆಲ ಅಶುಕವಿಗಳ ಬಾಯಲ್ಲಿ ಎಷ್ಟೋ ಗೀತೆಗಳು ಬೇರೆಯದೇ ರೂಪ ತಾಳಿರುತ್ತದೆ . ಇಲ್ಲಿ ಲಯ ಪ್ರಾಸ ಗೇಯತೆಗಳು ಮೂಲ ಹಾಡು ಅಥವಾ ಕವಿತೆಯ ರೀತಿಯೇ ಇದ್ದು ಓದುಗರ ಮನಸ್ಸನ್ನು ಸೆಳೆಯುತ್ತವೆ . ಬಹುತೇಕ ಅಣಕುವಾಡುಗಳು ಹಾಸ್ಯಕ್ಕಾಗಿಯೇ ಬರೆದಿದ್ದರೂ ಕೆಲವೊಂದು ಗಂಭೀರ ರೀತಿಯ ಅಣಕುವಾಡುಗಳು ಇವೆ .
ಈ ಅಣಕು ಸಾಹಿತ್ಯ ಪ್ರಕಾರ ಬೇಂದ್ರೆಯವರ “ಹಕ್ಕಿಯು ಹಾರುತಿದೆ ನೋಡಿದಿರಾ” ಪ್ರಸಿದ್ಧ ಪದ್ಯಕ್ಕೆ ಅಣಕು ಗೀತೆಯಾದ “ಬೆಕ್ಕು ಹಾರುತಿದೆ ನೋಡಿದಿರಾ” ನಲ್ಲಿ ಕಾಣಬಹುದು . ಕಾಲಪಕ್ಷಿಯ ಓಟದ ಬಗ್ಗೆ ವಿವರಿಸುವ ಹಕ್ಕಿಯು ಹಾರುತಿದೆ ಯನ್ನೇ ವಿನೋದಮಯವಾಗಿ ಬೆಕ್ಕು ಹಾರುತಿದೆ ಎಂದು ಬರೆದರೂ ಬೇಂದ್ರೆಯವರ ರಚನೆಗಳಲ್ಲಿ ಸಾಮಾನ್ಯವಾದ, ಅಂತರ್ಗತವಾದ ಗಂಭೀರತೆ ವಿವಿಧ ರೀತಿಯ ಅರ್ಥೈಸಿಕೊಳ್ಳುವಿಕೆಯ ಸಾಧ್ಯತೆಗಳನ್ನು ಇಲ್ಲಿ ಕಾಣಬಹುದು .
‘ಹಕ್ಕಿ ಹಾರುತಿದೆ ನೋಡಿದಿರಾ?’ ಮೂಲಕವನದ ಪೂರ್ತಿಪಾಠ ಹೀಗಿದೆ:
ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತುಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಗಾವುದ ಮುಂದೆ
ಎವೆ ತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ? ||೧||
ಕರಿನೆರೆ ಬಣ್ಣದ ಪುಚ್ಚಗಳುಂಟು
ಬಿಳಿ-ಹೊಳೆ ಬಣ್ಣದ ಗರಿ-ಗರಿಯುಂಟು
ಕೆನ್ನನ ಹೊನ್ನನ ಬಣ್ಣಬಣ್ಣಗಳ
ರೆಕ್ಕೆಗಳೆರಡೂ ಪಕ್ಕದಲುಂಟು
ಹಕ್ಕಿ ಹಾರುತಿದೆ ನೋಡಿದಿರಾ? ||೨||
ನೀಲಮೇಘಮಂಡಲ-ಸಮ ಬಣ್ಣ !
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ !
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ? ||೩||
ರಾಜ್ಯದ ಸಾಮ್ರಾಜ್ಯದ ತೆನೆ ಒಕ್ಕಿ
ಮಂಡಲ-ಗಿಂಡಲಗಳ ಗಡ ಮುಕ್ಕಿ
ತೇಲಿಸಿ ಮುಳುಗಿಸಿ ಖಂಡ-ಖಂಡಗಳ
ಸಾರ್ವಭೌಮರಾ ನೆತ್ತಿಯ ಕುಕ್ಕಿ
ಹಕ್ಕಿ ಹಾರುತಿದೆ ನೋಡಿದಿರಾ? ||೪||
ಯುಗ-ಯುಗಗಳ ಹಣೆಬರಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನೆಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ? ||೫||
ಬೆಳ್ಳಿಯ ಹಳ್ಳಿಯ ಮೇರೆಯ ಮೀರಿ
ತಿಂಗಳೂರಿನ ನೀರನು ಹೀರಿ
ಆಡಲು ಹಾಡಲು ತಾ ಹಾರಾಡಲು
ಮಂಗಳಲೋಕದ ಅಂಗಳಕೇರಿ
ಹಕ್ಕಿ ಹಾರುತಿದೆ ನೋಡಿದಿರಾ? ||೬||
ಮುಟ್ಟಿದೆ ದಿಗ್ಮಂಡಲಗಳ ಅಂಚ
ಆಚೆಗೆ ಚಾಚಿದೆ ತನ್ನಯ ಚುಂಚ
ಬ್ರಹ್ಮಾಂಡಗಳನು ಒಡೆಯಲು ಎಂದೊ
ಬಲ್ಲರು ಯಾರಾ ಹಾಕಿದ ಹೊಂಚ
ಹಕ್ಕಿ ಹಾರುತಿದೆ ನೋಡಿದಿರಾ? ||೭||
ಬೆಕ್ಕು ಹಾರುತಿದೆ ನೋಡಿದಿರಾ?’ ಕವನದ ಪೂರ್ತಿಪಾಠ ಹೀಗಿದೆ:
ಈರುಳ್ಳ್ಯುರುಳಲು ಮಾಡವು ಬೆಳಗೆ
ಅತ್ತಲೆತ್ತಲು ಕತ್ತಲೆಯೊಳಗೆ
ಯಾವುದ ! ಯಾವುದ ! ಯಾವುದ ಎಂದು
ಕೇಳುವ ಹೇಳುವ ಹೊತ್ತಿನ ಒಳಗೆ
ಬೆಕ್ಕು ಹಾರುತಿದೆ ನೋಡಿದಿರಾ? ||೧||
ಕರಿ-ನೆರೆ ಬಣ್ಣದ ಮೊಸಡೆಯ ಗಂಟು
ಬಿಳಿ-ಹೊಳೆ ಬಣ್ಣದ ಮೀಸೆಗಳೆಂಟು
ಹಚ್ಚನ ಬೆಚ್ಚನ ಪಚ್ಚೆಯ ಪೈರಿನ
ಬಣ್ಣದ ಕಣ್ಣು ಕಿವಿ ಬದಿಗುಂಟು
ಬೆಕ್ಕು ಹಾರುತಿದೆ ನೋಡಿದಿರಾ? ||೨||
ಕಾಡಿಗೆಗಿಂತಲು ಕಪ್ಪೋ ಬಣ್ಣಾ
ಕತ್ತಲಕೇ ಕಾಲೊಡೆದವೊ ಅಣ್ಣಾ
ಕೂದಲ ಕೂದಲ ನಿಗುರಿಸಿಕೊಂಡು
ಸೂರ್ಯ-ಚಂದ್ರರೊಲು ಮಾಡಿದೆ ಕಣ್ಣಾ
ಬೆಕ್ಕು ಹಾರುತಿದೆ ನೋಡಿದಿರಾ? ||೩||
ರಾಜ್ಯದ ಹೆಗ್ಗಣಗಳ ತಾನೊಕ್ಕಿ
ಜೊಂಡಿಗದಾ ಹುಲುಗಡಣವ ಮುಕ್ಕಿ
ಹಾರಿಸಿ ಹೇಂಟೆಯ ಹಿಂಡುಹಿಂಡುಗಳ
ಜಂಭದ ಕೋಳಿಯ ನೆತ್ತಿಯ ಕುಕ್ಕಿ
ಬೆಕ್ಕು ಹಾರುತಿದೆ ನೋಡಿದಿರಾ? ||೪||
ಹಾಲಿನ ಗಡಿಗೆಯ ತಳವನು ಒರಸಿ
ಮೊಸರಿನ ಮಡಿಕೆಯ ಮುಚ್ಚಳ ಸರಿಸಿ
ಉರುಳಿಸಿ ಹೊರಳಿಸಿ ಭಾಂಡ ಭಾಂಡಗಳ
ಬಿಸಿ ಹಾಲಲಿ ತುಸು ಮಜ್ಜಿಗೆ ಬೆರಸಿ
ಬೆಕ್ಕು ಹಾರುತಿದೆ ನೋಡಿದಿರಾ? ||೫||
ಇಲಿಗಳು ಬೆಳ್ಳಗೆ ಇದ್ದರು ಬಿಡದು
ಬೆಳ್ಳಗಿದ್ದದನು ಕುಡಿದೂ ಕುಡಿದೂ
ನೋಡಿ ಚಂದ್ರನನು ಬೆಣ್ಣೆಯದೆಂದೊ
ಮುಗಿಲಿನಂಗಳಕೆ ಸಿಟ್ಟನೆ ಸಿಡಿದು
ಬೆಕ್ಕು ಹಾರುತಿದೆ ನೋಡಿದಿರಾ? ||೬||
ಹಿಂದಕೆ ಮುಂದಕೆ ಚಾಚಿದೆ ಕಾಲ
ಉಬ್ಬಿಸೆಬ್ಬಿಸಿದೆ ಜೊಂಡಿನ ಬಾಲ
ಬೆಳುದಿಂಗಳ ಹಾಲೆನೆ ತಿಳುಕೊಂಡೊ
ಬಲ್ಲರು ಯಾರಿವರಪ್ಪನ ಸಾಲ!
ಬೆಕ್ಕು ಹಾರುತಿದೆ ನೋಡಿದಿರಾ? ||೭||
ಇಲ್ಲಿ ಬೇಂದ್ರೆಯವರ ಕಲ್ಪನಾಚಾತುರ್ಯವನ್ನು ವಿನೋದ ಪ್ರಜ್ಞೆ ಯನ್ನು ನಾವು ಮೆಚ್ಚಲೇ ಬೇಕು .
ಅಂತೆಯೇ ಇನ್ನೂ ಎಷ್ಟೋ ಅಣಕು ಗೀತೆಗಳು ಬಂದಿದ್ದರೂ ನನ್ನ ಗಮನಕ್ಕೆ ಬಂದ ಪುಸ್ತಕವೆಂದರೆ ಮಾಸದ ಅಣಕು ಗೀತೆಗಳು .ಇದರ ಲೇಖಕರು ಎನ್ ರಾಮನಾಥ್ ಪ್ರಕಾಶಕರು ಪ್ರಶಾಂತ ಪ್ರಕಾಶನ .
ಪ್ರಸಿದ್ಧ ಲಿಂಗಾಷ್ಟಕದ ಸಾಲುಗಳು ಇವರ ಲೇಖನಿಯಿಂದ ಹೀಗಾಗಿದೆ ನೋಡಿ
ಮೋಹಿನಿ ಮೋಹಕ ಮಾದಕ ಲಂಚಮ್
ಮಡದಿಯ ಕೋಪ ನಿವಾರಕ ಲಂಚಮ್
ಮಂತ್ರಿಯ ಮನವನು ಗೆಲ್ಲುವ ಲಂಚಮ್
ತತ್ಪ್ರಣಮಾಮಿ ಸದಾಪ್ರಿಯ ಲಂಚಮ್
ಚಕ್ರತೀರ್ಥ ಚಲನಚಿತ್ರದ “ಹಗಲು ಹರಿಯಿತು ಇರುಳು ಕರಗಿತು ಏಳು ಪಯಣಿಗ ಎಚ್ಚರ ಎಂಬ ಹಾಡು ಇವರಿಂದ ಅಣಕುಗೀತೆಯಾಗಿ ಬಂದಿರುವುದು ಹೀಗೆ
ಕೊರೆತ ಮುಗಿಯಿತು ಸಭೆಯು ಕರಗಿತು ಏಳು ಸಭಿಕನೇ ಎಚ್ಚರ
ಅದೇ ಹಾಡಿಗೆ ಮತ್ತೊಂದು ಅಣಕು
ಕದವು ತೆರೆಯಿತು ಇರುಳು ಸರಿಯಿತು ಏಳು ಕುಡುಕನೇ ಎಚ್ಚರ
ಮುಗಿಲು ಹರಿಯಿತು ಮಳೆಯು ಸುರಿಯಿತು ಸಾಗು ಪಯಣಿಗ ಎಚ್ಚರ
ಬಿಎಂಶ್ರೀ ಅವರ ಪ್ರಸಿದ್ಧ ಕವನ ಇಂಗ್ಲಿಷ್ ಗೀತಗಳು ಸಂಕಲನದ ಇಂಗ್ಲಿಷ್ ಕವಿತೆಯ ಅನುವಾದ ಕರುಣಾಳು ಬಾ ಬೆಳಕೆ ವೈ ಎನ್ ಕೆ ಅವರಿಂದ ಅಣಕವಾಡುವಾಗಿ ಹೀಗಿದೆ
ಕರುಣಾಳು ಬಾ ಬೆಳಕೆ
ಮಸುಕಿದೀ ಪಬ್ಬಿನಲಿ
ಕೈಹಿಡಿದು ಕುಡಿಸೆನ್ನನು
ಬೇಲೂರು ರಾಮಮೂರ್ತಿ ಅವರು ಕೆ ಎಸ್ ನ ಅವರ ರಾಯರು ಬಂದರು ಮಾವನ ಮನೆಗೆನಲ್ಲಿನ ಚಿತ್ರಣವನ್ನು ಜುಗ್ಗಾತಿಜುಗ್ಗ ನ ಮನೆಗೆ ನೆಂಟರು ಬಂದ ಸಂದರ್ಭವನ್ನು ವರ್ಣಿಸುವ ಹಾಗೆ ಬರೆದಿದ್ದಾರೆ. ಆರಂಭದ ಸಾಲುಗಳೇ ನೋಡಿ ಎಷ್ಟು ನಗೆಯುಕ್ಕಿಸುತ್ತವೆ .
ನೆಂಟರು ಬಂದರು ಜುಗ್ಗನ ಮನೆಗೆ ರಾತ್ರಿಯಾಗಿತ್ತು
ಊಟವ ಮುಗಿಸಿದ ಪಾತ್ರೆಯ ನಡುವೆ ತಪ್ಪಲೆ ಒಂದಿತ್ತು ನೀರಿನ ತಪ್ಪಲೆ ಒಂದಿತ್ತು.
ಶ್ರೀರಾಮಕೃಷ್ಣ ಬೆಳ್ಳೂರು ಅವರ ಪ್ರಸಿದ್ಧ ಗೀತೆ ಆಚೆ ಮನೆಯ ಸುಬ್ಬಮ್ಮನಿಗೆ ಏಕಾದಶಿ ಉಪವಾಸವನ್ನು ಬಹಳ ಹಾಸ್ಯಮಯವಾಗಿ ಚೆನ್ನಾಗಿ ಬರೆದಿದ್ದಾರೆ .
ಆಚೆ ಮನೆಯ ಸುಬ್ಬಮ್ಮನಿಗೆ
ಏಕಾದಶಿ ಉಪವಾಸ
ಎಲ್ಲೋ ಸ್ವಲ್ಪ ತಿಂತಾರಷ್ಟೆ
ಚಾಟ್ಸ್, ನೂಡಲ್ಸು, ಪಾಸ್ತಾ .
ಅವರದೇ ರಚನೆ ಸುವರ್ಣ ಸೇತುವೆ ಚಿತ್ರದ ಪ್ರಸಿದ್ಧ ಮಕ್ಕಳ ಗೀತೆ ಮಲೆನಾಡಿನ ಮೂಲೆಯ ಅಣಕು ಹಾಡಿನ ಸಾಹಿತ್ಯ ಹೀಗೆ ಆರಂಭವಾಗುತ್ತದೆ .
ಫೇಸ್ ಬುಕ್ಕಿನ ಮೂಲೆನಾಗೆ
ಇತ್ತೊಂದು ಮೇಮ್ನಹಳ್ಳಿ
ಆ ಹಳ್ಳೀಲ್ ಎಲ್ಲಾ ಜನರು ವಾಟ್ಸಪ್ಪೇ ಗೊತ್ತಿಲ್ದೋರು
ಅವರೊಳಗೆ ಮುದುಕಿಯೊಬ್ಬಳು ಮೇಮೇ ಹಾಕ್ಕೊಂಡ್ ಮೆರೀತಿದ್ಲು
ಅವಳಂತೂ ಬೋ naughty ತುಂಬಾ haughty……
ಹೀಗೆ ಅಣಕು ಸಾಹಿತ್ಯ ರಚಿಸಲು ಭಾಷೆಯ ಪ್ರೌಢಿಮೆ, ಕಲ್ಪನಾಚಾತುರ್ಯ, ಅದರೊಂದಿಗೆ ಅಂತರ್ಗತ ಹಾಸ್ಯಪ್ರಜ್ಞೆ ಇರಬೇಕು. ಇವೆಲ್ಲವನ್ನು ಹೊರತರುವ ಅಣಕು ಸಾಹಿತ್ಯ ರಚನೆ ಕನ್ನಡದಲ್ಲಿ ಅಷ್ಟೇನು ಪ್ರಸಿದ್ಧಿ ಹೊಂದಿಲ್ಲ .
ಪ್ರಸಿದ್ಧ ಕವಿ ಶ್ರೀ ಜಿ ಎಸ್ ಶಿವರುದ್ರಪ್ಪ ಅವರ “ಎದೆ ತುಂಬಿ ಹಾಡಿದೆನು” ಗೆ ಅಣಕು ಗೀತೆ ಬರೆಯುವ ಒಂದು ಸಣ್ಣ ಪ್ರಯತ್ನ
ಅಣಕು ಗೀತೆ ರಚನೆ
(ಜಿಎಸ್ಎಸ್ ಅವರ ಕ್ಷಮೆ ಕೋರಿ)
ಮನಸಾರೆ ಬರೆಯುವೆನು ಇಂದು ನಾನು
ಭಾವದಲಿ ವಾಚಿಸುವೆ ಕೇಳಿ ನೀವು
ಹೃದಯದಾ ಭಾಷೆಯನು ಶಬ್ದವಾಗಿಸಿ ಈಗ
ಹೊಸೆದಿಹೆನು ನನ್ನುಸಿರ ಹಸಿರ ಪದವ
ಭಾವ ಬಸಿರಿಗೆ ಈಗ ಸುಖದ ಪ್ರಸವ
ಎಲ್ಲ ಮೆಚ್ಚಲಿ ಎಂಬ ಮಹದಾಸೆ ಎನಗಿಲ್ಲ
ಕಲ್ಪನೆಯ ಅಭಿವ್ಯಕ್ತಿ ನನ್ನ ಪ್ರವೃತ್ತಿ
ಸಮಾನ ಹೃದಯಗಳ ಅದು ಮುಟ್ಟಲೆಂಬಾಸೆ
ಹಾಗಾಗೇ ಗೀಚುವೆನು ತೋಚಿದಂತೇ
ಯಾರೇನೇ ಹೇಳಿದರೂ ನಿಲಿಸಲ್ಲವಂತೆ
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂaಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು
ಸುಜಾತಾ ರವೀಶ್
ಅಧ್ಬುತ ಅತ್ತಿಗೆಯವರೆ ನಿಮ್ಮ ಕವನ ದ್ವಿತೀಯ ಬಿ.ಎಸ್.ಸಿ., ಗೆ ಪಠ್ಯ ವಾಗಿರುವುದು ಬಹಳ ಸಂತಸದ ಸಂಗತಿ ಅಭಿನಂದನೆಗಳು.
ಧನ್ಯವಾದಗಳು ರತ್ನಾ ಅವರೇ….
ಸುಜಾತಾ ರವೀಶ್
ಸೂಕ್ತ ಸುಂದರ ಚಿತ್ರಗಳೊಂದಿಗೆ ಪ್ರಕಟಿಸಿ ಪ್ರೋತ್ಸಾಹಿಸುತ್ತಿರುವ ಸಂಪಾದಕರಿಗೆ ಧನ್ಯವಾದಗಳು .
ಸುಜಾತಾ ರವೀಶ್