ವಿಶೇಷ ಲೇಖನ
ಡಾ ಅನ್ನಪೂರ್ಣ ಹಿರೇಮಠ
ಮೂಡನಂಬಿಕೆಗಳೆಂಬ ಕತ್ತಲು
ಮೂಡನಂಬಿಕೆಯ ಮೌಡ್ಯತೆಯ ಹೃದಯ ಚುಚ್ಚವ ಮೌಡ್ಯಗಳು ಎಂದು ತೊಲಗುತಾವ? ಮನುಷ್ಯನ ವೈಚಾರಿಕತೆ ಎಂದು ಹಿಗ್ಗೊದು? 21ನೆಯ ಶತಮಾನ ಬಂದ್ರು, ಮನುಷ್ಯ ಬೆರಳ ತುದಿಯ ಮ್ಯಾಲ ಎಲ್ಲಾ ಕುಣಿಸುವಂತಾಗಿದ್ದರೂ, ಕ್ಷಣಮಾತ್ರದಲ್ಲಿ ಎಲ್ಲರ ನೋಡುವ ಸಂಪರ್ಕಿಸುವ ಜಾನ್ಮೆ ಮೆರೆದಿದ್ದರೂ ,ಜಗತ್ತಿನೆಲ್ಲ ವಿಷಯ ಅರೆದು ಕುಡಿಯುವಂತಾಗಿದ್ದರೂ ಗಗನ ಚುಂಬಿಸುವ ಚತುರನಾಗಿದ್ದರೂ ,ಹೃದಯಕ್ಕೆ ಹೃದಯ ಜೋಡಿಸೊ, ಹೋದ ಜೀವ ಮರಳಿ ತರುವ, ರಕ್ತಕ್ಕೆ ರಕ್ತ ಬೆರೆಸುವ ಎಲ್ಲಾ ಕಲಿತಿದ್ದರೂ ನಾಗರಿಕತೆಯ ತುತ್ತ ತುದಿಯ ಮೆಟ್ಟಿಲಿನಲ್ಲಿದ್ದೆನೆಂದು ಬೀಗುವಂತಾಗಿದ್ದರೂ, ಏನು ಪ್ರಯೋಜನವಿಲ್ಲ. ಗಂಟೆಗಟ್ಟಲೆ ಭಾಷಣಗಳು ಕೋಟಿ ಕೋಟಿ ಖರ್ಚು ಮಾಡಿ ನಿಲ್ಲಿಸಿದ ಚೆತ್ತುಗಳ ಮೇಲೆ ನಿಂತು ಮಾಡಿದರೆ ಏನು ಪ್ರಯೋಜನ ?ಪಕ್ವವಾಗದ ಬುದ್ಧಿ ,ತೂಕವಿರದ ಮಾತುಗಳು, ಸೋರುತಿರುವ ಗುಣ ಸ್ವಭಾವಗಳು, ಹುಳುಕಾಗಿಯ ಕಣ್ಣೋಟ ,ಕಂಗೆಟ್ಟ ಕಾಲುಗಳು ,ಯಾವುದಕ್ಕೂ ಕಡಿವಾಣವಿಲ್ಲ ,ಭೀತಿ ,ಭಯವಿಲ್ಲ, ಇಷ್ಟೆಲ್ಲಾ ಗೊತ್ತಿದ್ದು ಈ ಕೊಟ್ಟಿ ಮನುಷ್ಯನಲ್ಲಿ ಅನೇಕ ಹಳೆ ಕಂದಾಚಾರಗಳು ಮೂಢನಂಬಿಕೆಗಳು ತಡೆಯುವ ಎದೆಗಾರಿಕೆ ,ಗಟ್ಟಿತನ, ಧೀರತ್ವ ಬಂದಿಲ್ಲ ಎಂಬುದು ವಿಷಾದನೆಯ ಸಂಗತಿ..
ಇಂದು ನಾ ನೋಡುತ್ತಿದ್ದೇನೆ ಅಲ್ಲಲ್ಲಿ ಅನೇಕ ಸಂಘಟನೆಗಳು ,ಧ್ಯಾನ ,ಯೋಗದ ತರಗತಿಗಳು ,ವೈದ್ಯಕೀಯ, ವೈದಿಕ ಪದ್ಧತಿಯ ಕಲಿಕೆ ,ಮಠಮಾನ್ಯಗಳು ,ಸಮಾಜ ಸುಧಾರಣಾ ಸಂಘಗಳು ,ಸ್ವಾಸ್ಧ ಸಮಾಜ ಕಟ್ಟುವ ಬಂಟರ ದಂಡುಗಳು, ಧರ್ಮ ,ಜಾತಿಯ ,ಕಟ್ಟಿಕೊಂಡು ಒಂದಿಷ್ಟು,ಇನ್ನೊಂದಿಷ್ಟು ಗುಂಪುಗಳು ವೈಚಾರಿಕತೆ ಮೆರೆಸುವ ಗೂಗಲ್ ಮೀಟುಗಳು, ಆಧ್ಯಾತ್ಮ ಬಿತ್ತುವ ಬತ್ತಿದ ಮನಗಳು, ಯಾರು? ಯಾರಿಗೆ? ಏಕೆ ?ಹೇಳಬೇಕೆಂಬರಿವಿಲ್ಲ, ಯಾರು ಕೇಳಬೇಕೆಂಬ ಪರಿವೆ ಇಲ್ಲ ?ಯಾವುದು ಅಗತ್ಯ ?ಯಾವುದು ಅನಗತ್ಯ? ಎಂಬುದರ ಅರಿವಿಲ್ಲ. ಒಬ್ಬರು ಮಾಡಿದ್ದನ್ನು ಇನ್ನೊಬ್ಬರು ಕಣ್ಣು ಮುಚ್ಚಿ ಮಾಡುತ್ತಾ ಅದು ಹಿರಿಯರು ಮಾಡಿದ್ದು ಎಂದು ಅಜ್ಜಿ ನೆಟ್ಟ ಆಲದ ಮರಕ್ಕೆ ಉರುಳು ಹಾಕಿಕೊಳ್ಳುವವರೇ ಎಲ್ಲರೂ. ಚಿಂತನ ಮಂಥನದಲ್ಲಿ ತಾಳ್ಮೆಯಿಂದ ಅವಲೋಕನವಿಲ್ಲ, ಯಾರಾದರೊಬ್ಬರ ಓಡಿದರೆ ಮುಂದೇನೈತಿ ಗೊತ್ತಿಲ್ಲ ಆದರೆ ಓಡುವವನ ಬೆನ್ನತ್ತಿ ಓಡುವುದ. ಯಾಕ? ಇಷ್ಟೆಲ್ಲಾ ಪೀಠಿಕೆ ಹಾಕಿದ್ದು ನಿಮಗೆ ಏನೂ ಸ್ವಲ್ಪ ತಿಳಿದಿರಬೇಕು. ನಾನೇನು ಹೇಳುತ್ತಿದ್ದೇನೆ ಎಂದು ಮೂಢನಂಬಿಕೆಗಳ ಕಾಟದ ಬಗ್ಗೆ ಎಂದು ತಿಳಿದಿದೆಯಲ್ಲವೇ?
ಹೀಗೆ ಶಾಲೆ ಮುಗಿಸಿಕೊಂಡು ಆಫೀಸಿಗೆ ಹೋಗಿದ್ದೆ. ಒಂದು ಕರೆ ಕಿತ್ತೂರಿನ ಹತ್ತಿರದಲ್ಲಿ ಬೈಲೂರು ಎಂಬ ಒಂದು ಗ್ರಾಮ ಅಲ್ಲಿ ಸಂಬಂಧಿ ಒಬ್ಬರು ತೀರಿಹೋಗಿದ್ದಾರೆ ಎಂದು ಸುದ್ದಿ ಬಂತು. ತಕ್ಷಣ ಮನೆಗೆ ಒಂದು ಕಾಲ್ ಮಾಡಿ ನನ್ನ ತಮ್ಮನೊಂದಿಗೆ ಕಾರ್ ನಲ್ಲಿ ಆ ಊರ ತಲುಪಿದೆವು. ಆಪ್ತರು ,ಸಂಬಂಧಿಗಳು, ಬಂದು, ಬಳಗ, ಊರ ಜನ ಎಲ್ಲಾ ಬಂಧು-ಬಂದು ಅತ್ತ, ಅವರ ಬಗ್ಗೆ ಎರಡು ಒಳ್ಳೆ ಮಾತಾಡಿ ಮನುಷ್ಯ ಬಹಳ ಚಲೋ ಹಿಂಗಾಗಬಾರದಾಗಿತ್ತು ಅಂತ ಕೆಲವೊಬ್ಬರು ,ಕೆಲವೊಬ್ಬರು ಎಲ್ಲಾ ಮುಗಿದಿತ್ತು ಯಾವಾಗಲೂ ಒಂದಿಲ್ಲ ಒಂದಿನ ಸಾಯೋದ ಐತಿ, ಅವರ ಹಿಂದಿಂದ ನಮ್ ಪಾಳೆ ಬರ್ತಾ ಇದೆ ಅಂತಿದ್ರು .ಯಪ್ಪಾ ನಮ್ಮನ್ನ ಹೆಂಗ್ ಬಿಟ್ಟ ಹ್ವಾದಿ ಅಂತ ಅಳುತ್ತಿದ್ರು .ಅವನ ಹೆಂಡತಿ ಅಕಿನೂ ವಯಸ್ಸಾದಕಿ 50 60 ವರ್ಷ ಗಂಡನ ಜೊತೆ ಅನುಸರಿಸಿ ಸಂಸಾರದ ಭಾರ ಹೊತ್ತು ಎಲ್ಲಾ ನೀಗಿಸ್ಕೊಂಡ ಬಂದಕಿ, ಕಷ್ಟ ನಷ್ಟ ಅನುಭವಿಸಿ ಸಮಾಧಾನಲೆ ಜೀವನ ಮಾಡಿದ್ಲು ,ಜೀವನದಾಗ ಅಂತ ಹೇಳಿಕೊಳ್ಳುವಂತ ಸುಖ ಏನು ಅಕಿ ಕಂಡಿರಲಿಲ್ಲ. ಬಾಳ ಸಮಾಧಾನದಕಿ ಬಂಗಾರ ತೂಕದ ಹೆಣ್ಣು ಮಗಳು ಆಗಿದ್ಲು. ಆಕಿ ದೇವರ ನನ್ನೊಬ್ಬಕಿನ್ನ ಯಾಕ ಬಿಟ್ ಹೊಂಟ್ರಿ? ನಾನು ಬರುತನ್ರಿ ಅಂತ ಪಾಪ ಅಳಾಕ ಧ್ವನಿ ಬಾರದಷ್ಟು ಶಕ್ತಿ ಕುಂದಿತ್ತು. ಹಂಗ ನೀರ್ ಕಾಣದ ಗುಬ್ಬಿ ಹಂಗ ಹಲುಬಾತಿದ್ಲು .ನಾನು ಒಂದಿಷ್ಟು ಅತ್ತೆ, ಆದ್ರ ನನ್ನ ಮನಸ ಎಚ್ಚರಿಸಿತ್ತು ಎಲ್ಲರೂ ಸಾಯುದ ಅಂತ. ಎಲ್ಲಾ ಗಡಿಬಿಡಿ, ಲಗುನ ಮಣ್ಣ ಕೊಟ್ಟು ಬರಬೇಕು ,ಬ್ಯಾರೆ ಬ್ಯಾರೆ ಊರಿಗೆ ಹೋಗೌರ್ಗೆ ತ್ರಾಸ್ ಆಕ್ಕತಿ ಅಂತ ತಯಾರಿ ನಡೆಸಿದ್ದರು .ಅಲ್ಲಿಂದ ಮುಂಜಾನೆಯಿಂದ ಭಜನೆ ಹಾಡುತ್ತಿದ್ದ ಸ್ಟೀಲ್ ಡಬ್ಬಿ ಮೇಲೆ ಎಲ್ಲರೂ ತಂದ ಮಾಲಿಂದ ಸಿಂಗಾರ್ ಮಾಡಿದ ಸಿದಗಿ ಇಟ್ರು. ಋಣ ತಿರ್ಸಾಕ ಮಕ್ಕಳಾ ,ಮೊಮ್ಮಕ್ಕಳಾ, ಸಿದಗಿ ಹೆಗಲ್ ಮ್ಯಾಲ ಹೊತ್ತ ದುಃಖ ತಪ್ತ ಹೃದಯ ಗಟ್ಟಿ ಮಾಡಿಕೊಂಡ ಎದಿ ಮ್ಯಾಲ ಕಲ್ಲು ಚಪ್ಪಡಿ ಹೆರ್ಕೊಂಡ ಅಂತಾರಲ್ಲ ,ಹಂಗ ನಡೆದರು. ಹಂಗ ಹಿಂದಿಂದ ಎಲ್ಲರೂ ಎತ್ತು ಹೊಂಟೊ? ಅಂತ ಅಳಕೊಂತ ಹೋಗ್ತಾ ಇದ್ವಿ ಸ್ಮಶಾನ ಬಂತು ಸುಮಾರು ರಾತ್ರಿ 7:30 ಗಂಟೆ ಆಗಿರಬೇಕು, 6.3 ಮೂರು ಆರಡಿ ಅಗಲದ ಮಣ್ಣಿನ ಮನಿ ರೆಡಿ ಮಾಡಿದ್ರು .ಸುತ್ತೆಲ್ಲ ಮಣ್ಣು ಕೊಡಲಿಕ್ಕೆ ಬಂದ ಜನ ಕುಂತ್ರು .ಕೆಲವೊಬ್ಬರು ನಿಂತ್ಕೊಂಡ್ರು, ಕುಣೀಲಿ ದೇಹಾನ ಗಟ್ಟಿಯಿದ್ದ ನಾಕ್ ಜನ ಗಂಡ್ಸುರ ಇಳಿಸಿ ಒಳಗೆ ಕುಂಡ್ರಿಸೆ ಎಲ್ಲಾ ಸಂಸ್ಕಾರದ ಕ್ರಿಯೆಗಳನ್ನ ಮಾಡ್ತಾ ಇದ್ರು .ಸ್ವಾಮಿ ಏನೇನೋ ಗೊನಗ್ತಾ ಇದ್ರು, ಆ ಅಮ್ಮಂದ ನಡಾ ಬಾಗಿತ್ತು, ಕಣ್ಣೀರು ಒರೆಸಿಕೊಳ್ಳುತ್ತಾ ಬತ್ತಿದ ಕಣ್ಣ, ಹಣ್ಣಾದ ದೇಹ .ಸೀರಿ ನೀರಿಗಿ ಅಕ್ಕಿನ ಬಿಳಸಾತಿದ್ವು. ಒಬ್ಬ ಹೇಳ್ತಾ ಇದ್ದ, ಇಲ್ಲಿ ಕರ್ಕೊಂಡ ಬಂದ ಕುಂಡಸರಿ ಅಂತ .ಒಂದಿಬ್ಬರು ಹೆಣ್ಣು ಮಕ್ಕಳು ಬಾ ಅಂತ ಪಾಪ ಅಕಿನ ಕೈ ಹಿಡಿದ ಕರ್ಕೊಂಡು ಹೋಗಿ ಕುಂಡಿಸಿದ್ರು. ಅವ ಯಾರೋ ನಂಗ ಗೊತ್ತಾಗ್ಲಿಲ್ಲ ಕುಂಕುಮ ವರ್ಸರಿ, ಬಳಿ ಒಡಿರಿ ,ತಾಳಿ ತೆಗಿರಿ ಅಂತಿದ್ದ .ನಂಗ ಎದೆ ಬಾಯಿಗೆ ಬಂದಂಗ ಆತು .ಕೋಪ, ಸಿಟ್ಟು, ಬೇಜಾರು ಒಮ್ಮೆ ಹೊರಗೆ ಬಂದು ನಾ ಏನ್ ಮಾಡ್ಬೇಡ್ರಿ ಮಾಡ್ಬೇಡಿ ಅಜ್ಜನ ಸೇವಾ ಮಾಡಿ ಇಲ್ಲಿ ಮಟ ಜೀವನ ಮಾಡಿಕೊಂಡ ಬಂದ ಕೃಷವಾದ ದೇಹ, ದನಿದ ಮನಸ್ಸು, ಬೇಸತ್ತ ಜೀವಕ್ಕ ನೋವಿನ ಮ್ಯಾಲ ಬರೀ ಕೊಡಬ್ಯಾಡ್ರಿ.ಕಣ್ತುಂಬ ಅಜ್ಜನ ನೋಡಿಕೊಂಡ ಅಕಿ ಕುಂಡ್ರಲಿ ಅಂತ ಅಂದಿನಿ ಆದ್ರ ನನ್ನೊಬ್ಬಳ ಮಾತ ಕೇಳೋರ ಯಾರು ಅಲ್ಲಿ ಇರಲಿಲ್ಲ .ಮಾಡೋ ಪದ್ಧತಿ ಮಾಡ್ಬೇಕಂತ ಎಲ್ಲರೂ ನನ್ನ ಬಾಯಿ ಮುಚ್ಚಿಸಾಕ ನೋಡ್ತಾ ಇದ್ರು. ಯಾರ್ ಮಾಡಿದ್ರು ಈ ಪದ್ಧತಿ? ಹುಟ್ಟಿಸಿದ ಬ್ರಹ್ಮ ಮಾಡಿದನೇನು ?ಯಾ ಸಾಧು ಸಂತರ ಬರೆದಿಟ್ಟಿದ್ದಾರೆ ಏನ್ರೀ? ಪದ್ಧತಿ, ಪಾಪ ಅಕಿದ ಅಕಿಗೆ ಸಾಕಾಗೈತಿ ,ಹೆಣ್ಮಕ್ಕಳನ್ನ ಸಮಾಜದಾಗ ತುಳುಕೊಂತ ಬಂದಾರ, ನೀವು ತುಳಿಸ್ಕೊಂತ ಬಂದರಿ ಹೆಂಡ್ತಿ ಸತ್ರ ಮೂರ್ ದಿನದಾಗ ಮದ್ವಿ ಮಾಡ್ತರಿ, ಗಂಡಸ್ರಿಗೆ. ಎಷ್ಟು ಕೀಳಾಗಿ ನೋಡುತಿರಿ ಹೆಣ್ಮಕ್ಕಳನ್ನ ಗಂಡ ತೀರಿ ಹೋದ್ರ..? ಪಾಪ್ ಅಕಿಗೆ ಮಾರಿ ಮಣ್ಣಾಗಾಕಲಿ,ಅಂತ ಜೀವನಾ ನರಕ ಮಾಡ್ತೀರಿ .ನಿಮ್ಮದೆಂತಾ ಪದ್ದತಿ ಅಂತ ಬೈದೆ ಬೈದೆ.
,ಆವತ್ತ ಅಲ್ಲೇ ಪಾಪ ಒಬ್ಬ ಹೆಣ್ಮಗಳ ಹೆರೆಗೆ ನೋವಿನಾಗ ಮಗನ ಹಡದ ರಕ್ತ ನಿಲ್ದ ಸತ್ತಿದ್ಲು ನೋಡಬೇಕ್ರಿ ಆ ಕಂದನ ಬಿಟ್ಟ ಆಕಿ ಜೀವ ಬಿಟ್ಟ ಹೋಗಿದ್ಲು. ನಾ ಹೇಳ್ದೆ ನೋಡ್ರಿ ಈ ಪದ್ಧತಿ ಮಾಡ್ತೀರಿ .ಈಗ ಅಕಿ ಸತ್ತಾಳು ಅಕಿ ಗಂಡ ಬದುಕಿದಾನ ಅವನು ಏನ್ ಮಾಡ್ತೀರಿ ,ಏನ್ ಪದ್ಧತಿ ಕುಂಡ್ರಿಸೆ ತಲಿ ಬೋಳಸ್ತರಿ ? ಎಲ್ಲಾ ಮರತ ಅಂದ ಮದ್ವಿ ಮಾಡುತರಿ, ಆದ್ರ ಯಾಕ್ ಹೆಣ್ಣು ಮಗಳಿಗೆ ಹಿಂಗ ಮಾಡತರಿ?. 21ನೇ ಶತಮಾನದಾಗೂ ಇಂಥ ಮೌಡ್ಯ ನೋಡಿ ನನ್ನ ಹೃದಯ ಚೂರಾದಂಗ, ಅನಸಾತಿತ್ತು, ಅಂತ ಹೃದಯ ವಿದ್ರಾವಕ ದೃಶ್ಯ ಹ್ಯಾಂಗ್ ನೋಡೋದು? ನಂಗ್ ಯಾಕ ಇದನ್ನ ತಂದಿ ದೇವರ? ಇದನ ತಡೋ ಶಕ್ತಿ ನನಗ್ಯಾಕಿಲ್ಲ? ನಾ ಯಾಕ ಸುಮ್ಮನ ಇದನ್ನೆಲ್ಲ ,ಮಾಡಾಕ ಕೊಟ್ನಿ,,? ಅಂತ ನನ್ ಮನಸ ತುಂಬಾ ಚಿಂತಿ. ಮೂಕಳಾಗಿದ್ದೆ. ಈ ವ್ಯವಸ್ಥೆಯನ್ನು ಶಪಿಸುತಿದ್ದೆ.
ಈ ಗೊಳ್ಳ ಸಂಪ್ರದಾಯಕ್ಕ ಕಟ್ಟ ಬಿದ್ದ ಕೊಟ್ಟಿ ಹೆಂಗಸರನ್ನ ಬೈತಿದ್ದೆ ಅದರಾಗ ಒಬ್ಬಕಿ ಏನ್ ಮಾಡುದ್ರಿ? ನಮ್ಮ ಮಾತ ಯಾರು ಕೇಳುತಾರ ಅಂತಿದ್ರು, ನಾ ಅಂದೆ ನೋಡ್ರಿ ಹುಟ್ಟು ಸಾವು ಕಟ್ಟಿಟ್ಟ ಬುತ್ತಿ ಜೀವನದಾಗ ಏನೊ ನಿಮಿತ್ಯ ಕ ಜೊತೆ ಆಗ್ತವು, ಎಷ್ಟೋ ದಿನ ಕೂಡ ನಡಿತವು ಯಾರ ಸತ್ರಂತ ಎಲ್ಲರೂ ಸಾಯಕ ಬರುಲ, ಯಾರು ಜೋಡಿ ಆಗೆ ಹುಟ್ಟಿಲ್ಲ ,ಜೋಡಿ ಆಗೆ ಸಾಯುದಿಲ್ಲ, ಯಾಕ್ ಹಿಂಗ ಪಾಪ ಆ ಜೀವ ನೋಯಿಸ್ತರಿ ಅಜ್ಜನ ಜೊತೆ 50 60 ವರ್ಷ ಬಾಳಿದಾಳ, ಅವನ ಹೊಟ್ಟೆ ನೆತ್ತಿ ನೋಡ್ಕೊಂಡು ಅಷ್ಟು ವರ್ಷ ಜೊತೆಗಾತಿಯಾಗಿ ಜೀವನದ ಬಂಡಿಗೆ ಹೆಗಲ ಕೊಟ್ಟಿದ್ದಕ್ಕೆ ಇಂತಾ ಬಹುಮಾನ್ರಿ? ಹುಟ್ಟಿದಾಗಿನಿಂದ ತೊಟ್ಟುಕೊಂಡ ಬಳಿ ಒಡದ,ಹಚಿಗೊಂಡ ಕುಂಕುಮಾ ಅಳಿಸಿ ಅಕಿಗೆ ನೋವಾ, ಸಂಕಟ ನೀಡೋದ ಬಹುಮಾನಾ? ಎಂಥ ಸಮಾಜ ಎಂತ ಕೊಡುಗೆ ಆಕಿಗೆ ಮೆಚ್ಚಬೇಕ್ರಿ ಈ ರೂಢಿ ಪದ್ಧತಿಗಳನ್ನ, ಎರಡು ದಿನ ಆದ್ರೂ ನನ್ನ ಜೀವ ಕುದ್ಯಾತೈತಿ, ನೆಮ್ಮದಿ ಸಿಗಾತಿಲ್ಲ ಏನ್ ಮಾಡ್ಲಿ? ಯಾರಿಗೆ ಹೇಳ್ಲಿ? ನನ್ ಸಂಕಟ, ಭಾರವಾದ ಹೃದಯ, ವಿಚಾರಿಸಿ ವಿಚಾರಿಸಿ ಇದಕ್ಕೆಲ್ಲ ಎಂದ ಕೊನಿ ತಿಳಿದವರೂ, ಬುದ್ದಿವಂತರೂ, ಭಾಷಣ ಬಿಗ್ಯಾವ್ರು, ಬಸವಾದಿ ಶರಣರ ವಚನ ಚಿಂತನ ಮಂಥನ ಮಾಡವರೂ, ಸಮಾಜ ಸುಧಾರಕರೆಂದು ಬಿಂಬಿಸುತ್ತಿರುವವರೂ, ಮಠಾಧೀಶರೂ ಏನ್ ಮಾಡ್ತಾ ಇದ್ದಿವಿ ನಾವು ಎನ್ನುವ ಕಬರ ಇಲ್ಲ, ಮಾಡಿದ್ದು ನೋಡೊ ಕರ್ಮ, ಯಾಕಿಂಗ?? ವೈದಿಕ ಕಲಿಸೊ ಸ್ವಾಮಿಗಳೇ ಪೂಜಾ ವಿಧಿ ವಿಧಾನದೊಂದಿಗೆ ಅವರಿಗೆ ಹೇಳ್ರಿ ಇಂತದನ್ನ ತಡಿರಿ ,ಮೂಡನಂಬಿಕೆಗಳನ್ನ ಮಾಡಾಕ ಕೊಡಬ್ಯಾಡ್ರಿ ಅಂತ ಹೇಳ್ರಿ, ನಿಮ್ಮನ್ನ ಜನ ಪೂಜಿಸತಾರ. ನೀವು ಬಂದ್ರ ಎದ್ದ ನಿಂತ ಕಾಲಿಗೆ ಬೀಳ್ತಾರ, ನೀವು ಹೇಳಿದ್ದನ್ನು ಕೇಳುತಾರ ಸಮಾಜಕ್ಕ ಏನಾರ ಕೊಡುಗೆ ಕೋಡಬೇಕ ಅನ್ನೋದನ್ನ ಸ್ವಲ್ಪ ನೀವು ನಿಮ್ಮ ಮನಸ್ಸನ್ನ ಕೇಳಿಕೊಳ್ಳಿ , ನಮ್ಮ ನಾಗರಿಕತೆ ಎಲ್ಲಿ ಐತಿ ,ತಿಳುವಳಿಕೆ ಎಲ್ಲೈತಿ ,ಕಲಿತ ಜನರ ಸುಧಾರಣೆ ಎಲ್ಲೈತಿ ,ಸಮಾಜ ಸುಧಾರಣೆ ,ಸಮಾಜ ಸುಧಾರಣೆ ಅಂದ್ರ, ಗಂಟೆಗಟ್ಟಲೆ ಭಾಷಣ ಚೆನ್ನಾಗಿ ಕಲಿತು ಬಂದ ಬಿಗದ ಹೋದ್ರಲ್ಲ, ಚಪ್ಪಾಳೆ ಹೊಡೆಸಿಕೊಳ್ಳುವಲ್ಲ, ಗೂಗಲ್ ಮೀಟ್ನಾಗ ಕುಂತ ವಚನಕಾರರ ಆದರ್ಶ, ವಚನಗಳು, ಜೀವನ ಬಗ್ಗೆ ತಿಳ್ಕೊಂಡ್ರ ಸುಧಾರಣೆ ಅಲ್ಲ. ಆ ಬಸವಾದಿ ಶರಣರು ಸಮಾಜದಲ್ಲಿರುವ ಲೋಪದೋಷಗಳನ್ನ ತೆಗೆಯೊ ಸಲುವಾಗಿ ಹೋರಾಡಿದರೂ ಚಳುವಳಿ ಮಾಡಿ ಪ್ರಾಣ ಕೊಟ್ರು ,ನೀವ ಸಮಾಜ ಸುಧಾರಣೆಗಿಂತ ಸಂಘಟನೆಗಳನ್ನ ಕಟ್ಟಿಕೊಂಡು ಕುಂತರಿ. ಸುಧಾರಣೆ ಎಲ್ಲಿ ?ಜನ ಮಾನಸದಲ್ಲಿ ಅಳಿಸದಂತ ಕೆಟ್ಟ ಮೂಢನಂಬಿಕೆಗಳನ್ನ, ದುರಾಚಾರಗಳನ್ನ, ನಿಮ್ಮ ಕೈಲಾದಷ್ಟು ತಡ್ಯಾಕ ಹೋರಾಡರಿ, ಎಲ್ಲರ ಮನಸ್ಸಿನಾಗ ಸತ್ಯದ ಸಾಕ್ಷಾತ್ಕಾರ ಮಾಡ್ಸೋ ಕಡೆ ಎಲ್ಲಾರ್ದು ಗಮನ ಇರಲಿ,ಇಂತಾದಕ್ಕ ಕೈಜೋಡಸಿರಿ ,ಇಂತ ಮೌಧ್ಯ, ಕಂದಾಚಾರಗಳನ್ನ ಎಲ್ಲರೂ ಕೂಡೆ ಹೋದರ ಇದಕ ಏನ ಮಾಡೋದು? ಹೆಂಗ ಅಂತ ವಿಚಾರ ಮಾಡ್ರಿ ,ಸಮಾಜದ ಈ ಕೊಳೆತ ಕಸ ತೆಗೆದ, ಈ ಸಮಾಜ ಹಸಿರಿನಿಂದ ಕಂಗೊಳಿಸುವಂಗ ಯಾವಾಗ ಆಗೋದು? ಸದೃಢ ಸಮಾಜ ಅಂದ್ರೆ ಏನ? ಈ ಮೂಢನಂಬಿಕೆ, ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಇವುಗಳನ್ನೆಲ್ಲ ಹೋಗಲಾಡಿಸಾಕ ನಾವು ಕಾರ್ಯಕ್ರಮ ಮಾಡಿ ಆ ದಿನಗಳನ್ನ ಆಚರಿಸಿದರ ಅಲ್ಲ, ಇವೆಲ್ಲಾ ಇನ್ನೂ ಎಷ್ಟೋ ಕಡೆ ನಡದ್ದಾವು ಇದನ್ನೆಲ್ಲ ನಿಲ್ಲಿಸುವಂತಹ ಕಾರ್ಯ ನಮ್ಮ ನಿಮ್ಮೆಲ್ಲರದಾಗಲಿ, ಈ ಸಮಾಜದ ಅಳು ನಿಲ್ಲಲಿ, ಎಲ್ಲಾರು ನಗುವಂಗ ಸಮಾಜ ಸದೃಢ ಆಗಲಿ ಅನ್ನೋ ಆಸೆ ನಂದೈತಿ.
ಡಾ ಅನ್ನಪೂರ್ಣ ಹಿರೇಮಠ
ಬಹಳ ಚೆನ್ನಾಗಿದೆ ..
ಇವೆಲ್ಲಾ ಸಂಸ್ಕಾರ ಹೀನ ಸಂಸ್ಕಾರಗಳಿಗೆ ಕೊನೆ ಎಂದೋ…??
ನಿಮ್ಮ ಮಾತು ನಿಜ..ನಿಜ..,
ಮಾನಸಿಕವಾಗಿ ಎಲ್ಲ ಹೆಣ್ಣುಮಕ್ಕಳಿಗೆ ಅನ್ನುವುದಕ್ಕಿಂತ ಕೆಲವೊಂದಿಷ್ಟುಹೆಣ್ಣುಕ್ಕಳಿಗೆ ಈ ಧೈರ್ಯ ಮತ್ತು ತಿಳುವಳಿಕೆ ಮೂಲ ಬೇಸಿಕ್ ನಾಲ್ವಡೆಜ್ ಇಲ್ಲ ಕಾರಣ ಭಯ, ಇದು ಎಲ್ಲರಲ್ಲಿ ಮೂಡಬೇಕು, ನಿಮ್ಮ ಬರವಣಿಗೆ ಕಣ್ಣು ತೆರೆಸುವಂತದ್ದು,
ಪ್ಲೀಜ್ Stop this dirty activity everyone,
ಶರಣು ಅಕ್ಕವರೇ,