ಬಲವಂತರಾದವರು ಕಲಹದಿಂ ಕೆಟ್ಟಿಹರು ಪ್ರೊ.ಸಿದ್ದು ಸಾವಳಸಂಗ

ವಿಶೇಷಲೇಖನ

ಪ್ರೊ.ಸಿದ್ದು ಸಾವಳಸಂಗ

ಬಲವಂತರಾದವರು ಕಲಹದಿಂ ಕೆಟ್ಟಿಹರು

ಬಲವಂತರಾದವರು ಕಲಹದಿಂ ಕೆಟ್ಟಿಹರು|
ಬಲವಂತ ಬಲಿಯು,ದುರ್ಯೋ ಧನಾಧಿಗಳು |
ಛಲದಲುಳಿದಿಹರೆ ಸರ್ವಜ್ಞ ||

   ಸರ್ವವನ್ನೂ ಬಲ್ಲ ಸರ್ವಜ್ಞ ಅಪಾರ ಜ್ಞಾನಿ.ಆತನ ನುಡಿ ನೇರ.ನುಡಿದಂತೆ ನಡೆದವನು.
ಆತನಿಗೆ ಯಾರ ಹಂಗೂ ಇಲ್ಲ.
ಯಾರ ಬಿಡೆಯೂ ಬೇಕಾಗಿಲ್ಲ.
ಕಲಹಗಳಿಂದ ಮನುಷ್ಯ ತನಗೆ ತಾನೇ ನಾಶ ಹೊಂದುತ್ತಾನೆ ಎಂದು ತಿಳಿಸಲು ಈ ತ್ರಿಪದಿಯನ್ನು ರಚಿಸಿದ್ದಾನೆ.
ಎಷ್ಟೇ ಬಲವಂತರಾದರೂ ಸಹ ಯಾರ ಜೊತೆಗೂ ಜಗಳಕ್ಕೆ ಹೋಗಬಾರದು.ಅಪಾರ ಶಕ್ತಿವಂತನಾದ ಬಲಿ ಚಕ್ರವರ್ತಿ ಹಾಗೂ ಹೆಚ್ಚು ಬಲಶಾಲಿಯಾದ ದುರ್ಯೋಧನರು ಜಗಳದಿಂದಲೇ ನಾಶವಾದರು ಎಂಬುದು ತ್ರಿಪದಿಯ ಸಾರಾಂಶ.
   ಜಗಳವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ.
ಜಗಳದ ಸಂದರ್ಭದಲ್ಲಿ ವ್ಯಕ್ತಿ ತನ್ನ ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಳ್ಳುತ್ತಾನೆ.ಎದುರಿನ ವ್ಯಕ್ತಿ ಯಾರೆಂದು ನೋಡದೆ
ಜಗಳವಾಡಿ ಸಂಬಂಧಗಳನ್ನು ಹಾಳುಮಾಡಿಕೊಳ್ಳುತ್ತಾನೆ.
ಸಂಬಂಧಗಳು ಬಹಳ ಸೂಕ್ಷ್ಮ.ಒಮ್ಮೆ ಕೆಟ್ಟರೆ ಮತ್ತೆ ಬೆಸೆಯುವುದು ಕಠಿಣ.
ಕಲಹಗಳಿಂದ ದೊಡ್ಡ ಸಾಮ್ರಾಜ್ಯಗಳೆ ಹಾಳಾಗಿದ್ದನ್ನು ಇತಿಹಾಸ ಹೇಳುತ್ತದೆ.
   ಸರ್ವಜ್ಞ ಇಲ್ಲಿ ಬಲಿ ಚಕ್ರವರ್ತಿ ಹಾಗೂ ದುರ್ಯೋಧನರ ಉದಾಹರಣೆ ಕೊಡುತ್ತಾನೆ.
ಇಬ್ಬರೂ ಮಹಾನ್ ಬಲಶಾಲಿ
ಅರಸರೆ.ಆದರೆ ಜಗಳವಾಡಿ ನಾಶ ಹೊಂದಿದರು.ಬಲಿ ಚಕ್ರವರ್ತಿ ತ್ರಿಲೋಕ ಗೆದ್ದರೂ ಸಮಾಧಾನವಿರಲಿಲ್ಲ.
ದುರ್ಯೋಧನನಿಗೆ
ಪಾಂಡವರನ್ನು ಕಂಡರೆ ಆಗುತ್ತಿರಲಿಲ್ಲ.ಮಹಾವಿಷ್ಣು ಬಲಿ ಚಕ್ರವರ್ತಿಯನ್ನು ಕೊಂದರೆ,ಭೀಮನು
ದುರ್ಯೋಧನನನ್ನು ಕೊಲ್ಲುತ್ತಾನೆ.ಹೀಗಾಗಿ ಇಬ್ಬರೂ ಅರಸರು ತಮ್ಮ ಹಠ,
ಜಗಳಗಳಿಂದ ನಾಶವಾದರು.
ಏನೇ ಆದರೂ ಸಮಾಧಾನದಿಂದ ಯೋಚಿಸಿದರೆ ಪರಿಹಾರವಿದೆ.
ಎಲ್ಲರನ್ನು ಜಗಳದಿಂದಲೇ ಗೆಲ್ಲುತ್ತೇನೆಂಬುದು ಮನುಷ್ಯನ ಅಹಂ ಆಗಬಾರದು.ಸಣ್ಣ-ಪುಟ್ಟ ಜಗಳಗಳು ಕೊಲೆಗಳಲ್ಲಿ ಅಂತ್ಯವಾದದ್ದನ್ನು ಕೇಳಿದ್ದೇವೆ.
ಬದುಕಿ ಬಾಳಲು ಶಾಂತಿ ಬಹಳ ಮುಖ್ಯ.ಬುದ್ಧ,ಬಸವ ಹಾಗೂ ಗಾಂಧಿ ಶಾಂತಿಯಿಂದಲೆ ಜಗತ್ತನ್ನು ಗೆದ್ದರು.ಅದಕ್ಕಾಗಿ ತಾಳಿದವನು ಬಾಳಿಯಾನು ಎಂಬುದು ಗಾದೆ.


ಪ್ರೊ.ಸಿದ್ದು ಸಾವಳಸಂಗ,ತಾಜಪುರ

Leave a Reply

Back To Top