ಕಾವ್ಗ ಸಂಗಾತಿ
ಮಹಾಬಲ
ಯಾನ
ದಾಖಲೆಗಳ ತೋರಿಸಿ ಪ್ರವೇಶ ಹಡಗಿನೊಳಗೆ
ನವಜಾತ ಶಿಶು ಸಂತಸದಿ ಬಂದಂತೆ ಈ ಭುವಿಗೆ
ಕೊಟ್ಟ ಕೋಣೆಯಲಿ ಇರಿಸಿ ತಂದ ನಮ್ಮ ಸರಕು
ಸುತ್ತಮುತ್ತ ಸೌಂದರ್ಯ ಸವಿಯುವ ಹೊತ್ತು ಇದು
ಇನ್ನು ಮೂರು ದಿನ ಈ ಶಾಂತಸಾಗರದಲಿ ಯಾನ
ಇಲ್ಲಿಂದ ಆ ಬಂದರಿಗೆ:ಅಲ್ಲಿಂದ ಮತ್ತೊಂದು ತಾಣ
ಈಗ ಹೊರಜಗತ್ತಿನ ಸಂಪರ್ಕದ ಹಂಗಿಲ್ಲ ನಮಗೆ
ತಡವೇಕೆ?ಆರಂಭವಾಗಲಿ ವಿನೂತನ ಜೈತ್ರಯಾತ್ರೆ
ಚಲನೆಯುಂಟೆ ಈ ನೌಕೆಗೆ ? ಸ್ಥಬ್ದಗೊಂಡಂತೆ ಇದೆಯಲ್ಲ
ಏಕಿಲ್ಲ? ಎದುರು ಕಂಡಿದ್ದ ಪರ್ವತ ಹಿಂದೆ ಬಿದ್ದಿತಲ್ಲ.
ಆಹಾ ಅತಿಸುಂದರ ಮುಳುಗುವ ಸೂರ್ಯನ ಸೊಬಗು
ಬಾನ ತುಂಬೆಲ್ಲ ಚಿತ್ತಾರ ಅರುಣರಾಗದ ದರ್ಬಾರು
ಸಾಗರದ ಮೇಲಿಂದ ತೀಡಿ ಬರುತಿರುವ ಈ ತಂಗಾಳಿ
ಅದೇನು ವೈರವೋ ಅಲೆಗಳ ಮೇಲೆ? ಹಕ್ಕಿಗಳ ದಾಳಿ
ಬೇಕಿದ್ದಾಗ ಬೇಕಾದಷ್ಟು ಖಾದ್ಯ ಹೊಟ್ಟೆ ತುಂಬಿಸಲು
ದುಡ್ಡು ನೀಡಿದರೆ ಸಾಕು ಲಭ್ಯ ಕಾಫಿ ಚಹ ,ವಿಸ್ಕಿ ಬೀರು
ಅಲ್ಲಿ ಈಜುಕೊಳದಲಿ ವಿಹರಿಸುವ ಬೆಡಗಿಯರು
ಅಬ್ಬರದ ಸಂಗೀತಕೆ ಕುಣಿಕುಣಿವ ಜೋಡಿಗಳು
ಎಳೆಬಿಸಿಲಿಗೆ ಮೈಚಾಚಿ ಹಲವರ ಸೂರ್ಯಸ್ನಾನ
ಹಬೆಯ ಕೊಳದಲಿ ವಿರಾಜಿಸಿ ಮರೆತಿಹರೆ ಈ ಜಗವ?
ಸದ್ಯಕೆ ಸಾಕು ಈ ಸವಿಯ ಸವಿಯುವ ಬಯಕೆ
ಕೊಠಡಿ ಕರೆಯುತಿದೆ ವಿಶ್ರಾಂತಿ ಪಡೆವ ಸುಖಕೆ
ಮೂರೇ ದಿನಕೆ ಮುಗಿಯುವುದಲ್ಲ ಈ ಐಷಾರಾಮ
ಬದುಕ ಜಂಜಡಗಳತ್ತ ಮತ್ತೆ ತೆತ್ತುಕೊಳ್ಳುವ ಕರ್ಮ
ಅದೋ! ಹಡಗಿನ ಸಿಬ್ಬಂದಿಗಳ ಏರುದನಿಯ ಘೋಷ
ಜೀವರಕ್ಷಕ ಕವಚ ಕಪಾಟಿನಲ್ಲಿರುವ ಬಗ್ಗೆ ಸಂದೇಶ
ಶುಭವ ಹಾರೈಸುತ್ತಲೇ ಆಪತ್ಕಾಲದ ಕ್ರಮಗಳ ಸೂಚನೆ
ಬದುಕೆಂಬುದು ಹೀಗೇ ಮಿಶ್ರ ಅನುಭವದ ಸಂಚಿ ತಾನೆ!
ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣವ ಮೆಯ್ದಿತ್ತು
ಅದೇಕೋ ಈ ಮಾತು ಬೇಡವೆಂದರೂ ನೆನಪಾಯ್ತು
ಮಹಾಬಲ
ಬದುಕಿನ ಯಾನದ ವಾಸ್ತವ ಚಿತ್ರಣ. ಕೊನೆಯ ಸಾಲುಗಳು ಬಹಳ ಅರ್ಥಪೂರ್ಣ.
ಬಹಳ ಸುಂದರ ಅನುಭವ ಕಾವ್ಯ ರೂಪದಿ
ಮೆಚ್ಚಿರುವೆ ನಾನು ಬಹಳ ಆನಂದದಿ
ಶುಭಾಶಯಗಳೊಂದಿಗೆ
ಎ.ಮಂಜುನಾಥ.
ಶುಭದ ಜೊತೆ ಆಪತ್ತು- ಪರಮಸತ್ಯ
ಚಂದದ ಕವಿತೆ ಕಡಲಯಾನದ ಅನನ್ಯ ಅಭವಕ್ಕೆ ಕಾವ್ಯಯಾನದ ಮೆರುಗು.
ಅಭಿನಂದನೆ ಸರ್.