ಇಂದಿರಾ ಮೋಟೆಬೆನ್ನೂರ….

ಕಳಚಿದ ಹೆಗಲು


(ಅಪ್ಪನ ನೆನಪಿನಲ್ಲಿ……)

ಇಂದಿರಾ ಮೋಟೆಬೆನ್ನೂರ….

ಕರುಳ ಬಳ್ಳಿಯ ಕುಡಿಯು ಹೊಸ ಬೆಳಕು ಕಾಣುತಿದೆ ಹೃದಯ ಸುಮಗಳ ಸೊಂಪ ಸುರಿಸಬನ್ನಿ…. ಜೊತೆ ಬಾಳ ಸಿಹಿ ಕಹಿಯ ಸಮರಸವ ತಿಳಿ ಹೇಳಿ ಹಸೆ ಮಣೆಯ ಹಸುಳರನು ಹರಸಬನ್ನಿ…..
ಎಂದೆನ್ನ ಹಾರೈಸಿ ಮರೆಯಾದ
ಕವಿ ಹೃದಯಿ…ನನ್ನಪ್ಪ

ಬಚ್ಚಿಡದೆ ಬಿಚ್ಚಿಟ್ಟ
ಬಯಲಂಥ ಬದುಕು
ನಿನದಪ್ಪ..
ಸಾವಿರ ಸಿರಿ ಸೂರೆಗೊಂಡರೂ
ಸಿಗಲಾರದ ಪ್ರೀತಿಯ
ಸಿರಿಯಲ್ಲಿ ಸೆರೆ ಹಾಕಿದ
ಸಿರಿವಂತ…..ನನ್ನಪ್ಪ

ಮನಗಳ ನಡುವಿನ
ಗೋಡೆಯ ಕೆಡವಿ
ಹೃದಯಗಳ ನಡುವೆ
ಸೇತುವೆ ಕಟ್ಟಿದ
ಅಭಿಯಂತ….
ಸಾವಿರ ಕೊರತೆಗಳ
ನಡುವೆಯೂ ಬತ್ತದ ಪ್ರೀತಿಯ
ಒರತೆ ಹರಿಸುತ
ಹಣದಿಂದಲ್ಲ ಗುಣದಿಂದಾಳಿದ
ಧೀಮಂತ…..ನನ್ನಪ್ಪ

ಆಸ್ತಿ ಅಡವಿಗೆ ಆಸೆ ಪಡದೆ
ಕಾಂಚಾಣವ ಕಡೆಗಣ್ಣಲೂ
ನೋಡದೆ ನೇರ ನಡೆದು
ಎಲ್ಲರ ಹೃದಯಕೆ ಲಗ್ಗೆ ಹಾಕಿದ
ಹೃದಯವಂತ….
ಅಂತರಂಗದೀ ಅಡಗಿಹ
ಕೆಸರ ಹೊರಹಾಕಿ
ತಿಳಿ ನೀರ ಕೊಳವಾಗಿಸಿದ
ಹುದುಗಿದ ದ್ವೇಷದ ಹೂಳೆತ್ತಿ
ಪ್ರೀತಿಯ ಅಂತರ್ಜಲ
ಸ್ಫುರಿಸಿದ ಹೆಂಗರುಳು.,.ನನ್ನಪ್ಪ.

ಇಟ್ಟಿಗೆ ಗಾರೆಯ ಮನೆ ಕಟ್ಟದೇ
ಎಲ್ಲರ ಮನದಲ್ಲೇ ಮನೆ ಕಟ್ಟಿ
ನೆಲೆಸಿದ ಪ್ರೀತಿಯ ನನ್ನಪ್ಪ..
ಹಗಲ ಬಟ್ಟೆಯ ತೊಟ್ಟು,
ಹೆಗಲ ಮೇಲೆ ನನ್ನ ಹೊತ್ತು
ಮುಗಿಲ ತೋರಿಸಿದ ಸರದಾರ…ನನ್ನಪ್ಪ
ನಿನಗೆ ನೀನೇ ಸಾಟಿಯಪ್ಪ
ನಿನ್ನಂತೆ ಬೇರಾರೂ ಇಲ್ಲ ನನ್ನಪ್ಪ….


2 thoughts on “ಇಂದಿರಾ ಮೋಟೆಬೆನ್ನೂರ….

  1. ತಂದೆಯನ್ನ ಹುಬೇ ಹೂಬ ತಂದಿರಿಸಿದ್ದೀರಿ.
    ನಾವು ಹಂಸಭಾವಿಯಲ್ಲಿ ಹೇಮಣ್ಣನವರ ಮನೆಯಲ್ಲಿ ಬೆಳೆದು ದೊಡ್ಡವರಾದವರು ಶಿಕ್ಷಣ ಪಡೆದು ಕೊಂಡವರು ಅದರಲ್ಲಿ ಹೊಳೆಬಸಣ್ಣನವರ ಪಾತ್ರವೂ ದೊಡ್ಡದು.

  2. ಏಣಗಿ ಬಾಳಪ್ಪ ಅಜ್ಜನವರ ಜೊತೆಗೆ ಆತ್ಮೀಯ ಗೆಳೆತನದ ಬಂಧ ಅನುಬಂಧ… ನನ್ನ ಅಪ್ಪಾಜಿ ಹೊಳೆಬಸಪ್ಪ ಹಾಗೂ ದೊಡ್ಡಪ್ಪನದು….ನೆನಪಿನ ದೋಣಿಯಲಿ ತೇಲಿಸಿ ಸ್ಪಂದಿಸಿದ ತಮಗೆ ಶರಣು ಶ್ರೀ ಸುಭಾಷ ಏಣಗಿ ಅವರಿಗೆ…
    –ಇಂದಿರಾ ಮೋಟೆಬೆನ್ನೂರ. ಬೆಳಗಾವಿ.

Leave a Reply

Back To Top