ಆಶಾ ಯಮಕನಮರಡಿ-ಅಪ್ಪ
ಗಡಿಯಾರದ ಗಂಟೆ ಸಂಜೆ
ಏಳನು ತೋರಿಸಿದಾಗ
ಥಟ್ಟನೆ ನೆನಪಾಗುತ್ತಾನೆ ಅಪ್ಪಾ
ಎಲ್ಲೆ ಇದ್ದರೂ ಕಾಲುಗಳು
ಓಡತೊಡಗುತ್ತವೆ
ಮನೆಯತ್ತಾ
ಊಟಕ್ಕೆ ಕುಳಿತಾಗ ತಟ್ಟೆಯಾಚೆ
ಅಗುಳು ಬಿದ್ದರೆ ಕೂಡಲೆ ನೆನಪಾಗುತ್ತಾನೆ ಅಪ್ಪಾ
ಈಗಲೂ ಚೆಲ್ಲದೆ ಉಣ್ಣುವುದನು
ಕಲಿತುಬಿಟ್ಟಿರುವೆ
ಏನಾದರೂ ಕೊಂಡರೆ
ಪಾವತಿ ಕೇಳಬೇಕು ಎನ್ನುವಾಗಲೆಲ್ಲಾ ನೆನಪಾಗುತ್ತಾನೆ ಅಪ್ಪಾ
ಶಾಲೆಯ ಫೀಸ್ ತುಂಬಿದ ರಸೀದಿಯ ದಾಖಲೆ ಈಗಲೂ ಇರುವುದು ನನ್ನ ಹತ್ತಿರ
ತಿಂಗಳ ಲೆಕ್ಕ ಮಾಡುವಾಗಲೆಲ್ಲಾ ಆಕ್ಷಣಕ್ಕೆ ನೆನಪಾಗುತ್ತಾನೆ ಅಪ್ಪಾ
ಇಂದಿಗೂ ಚಿಲ್ಲರೆಯ ಲೆಕ್ಕವನು ಹೊಂದಿಸಿ ಇಡುವೆ
ಅಪ್ಪನ ಕ್ಕಿಂತ ಹೆಚ್ಚು ವಿದ್ಯೆ ಕಲಿತವಳು ನಾನು
ಶಾಲೆಯಲ್ಲಿ ಕಲಿತಿದ್ದಕ್ಕಿಂತ
ಹೆಚ್ಚು ಅಪ್ಪನನ್ನೆ ನೋಡಿ ಕಲಿತಿರುವೆ
ಬರಹ ಕಲಿಯಲು ಶಾಲೆಗೆ ಕಳಿಸಿದ ಅಪ್ಪ
ಬದುಕುವುದನ್ನು ತಾನೆ ಕಲಿಸಿದ ಕೊಟ್ಟು ಬೆತ್ತದೇಟನು
ಎಂದು ಮರೆಯದಂತೆ
ಎಲ್ಲಿಯು ನಡೆ ನುಡಿ ತಪ್ಪದಂತೆ