ಒಂದು ಪಯಣದ ಕತೆ…ಅನ್ನಪೂರ್ಣ ಹಿರೇಮಠ

ವಿಶೇಷ ಬರಹ

ಅನ್ನಪೂರ್ಣ ಹಿರೇಮಠ

ಒಂದು ಪಯಣದ ಕಥೆ

ಬೆಳಗಾವಿ ಜಿಲ್ಲಾ ಗೋಕಾಕಿನ ನಾಡಿನ ಸಮಾಚಾರದ ಬಸವರಾಜ ಅವರಿಂದ ಒಂದು ದಿನ ಕರೆ ,ಮೇಡಂ ನಿಮ್ಮ ಸಾಹಿತ್ಯ ತುಂಬಾ ಚೆನ್ನಾಗಿದೆ, ನಿಮ್ಮ ಕವನಗಳ ಓದಲಿಕ್ಕೆ ತುಂಬಾ ಸಂತೋಷ ಮೇಡಂ ,ನಿಮಗೆ ಒಂದು ಪ್ರಶಸ್ತಿ ನಮ್ಮ ನಾಡಿನ ಸಮಾಚಾರ ಪತ್ರಿಕಾ ಸಂಸ್ಥೆಯಿಂದ ಕೊಡಬೇಕೆಂದಿದ್ದೇವೆ ಎಂದರು. ಬಿಡಿ ಸರ್ ಅಂತ ಸಾಧನೆ ಏನು ಮಾಡಿಲ್ಲ ಹಾಗೆ ಬರೀತೀನಿ ಎಂದೆ ,ಇಲ್ಲ ಮೇಡಂ ನಿಮ್ಮ ವಚನ ,ಗಜಲ್ ಹಿಡಿದು ಎಲ್ಲಾ ಸಾಹಿತ್ಯ ಸೂಪರ್ ಅಂದರು. ಧನ್ಯವಾದ ಸರ್ ಅಂದೆ ನೀವು ಕರುನಾಡ ಹೆಮ್ಮೆಯ ಕನ್ನಡತಿ ಎಂಬ ಪ್ರಶಸ್ತಿಗೆ ಭಾಜನರಾಗಿದ್ದೀರಿ ಮೇಡಂ ನಮ್ಮ ಕಾರ್ಯಕ್ರಮ ಮುಂಬೈ ನಗರದಲ್ಲಿ ರಾಷ್ಟ್ರಮಟ್ಟದ ಕಾರ್ಯಕ್ರಮವಾಗಿ ನಡೆಯಲಿದೆ ಎಂದರು .ಹೌದಾ ಸರ್ ತುಂಬಾ ಸಂತೋಷ ಕೆಲಸ ಬಾಳ ಇದೆ ಬರೋದಕ್ಕೆ ಆಗುತ್ತೋ ಇಲ್ಲವೋ ಎಂದೆ .ಹಾಗೆ ಇಲ್ಲಿ ನಮ್ಮ ಮನೆ ಎದುರುಗಡೆಯ ಸಂಗೀತ ವಿದ್ವಾಂಸರೂ, ಆಕಾಶವಾಣಿ ಕಲಾವಿದರೂ ಆದ ಶ್ರೀರಂಗ ಜೋಶಿ ನನ್ನ ತಂದೆಯಂತೆ ಸದಾ ಎಲ್ಲ ಕಾರ್ಯಕ್ರಮಕ್ಕೆ ಜೊತೆ ಇರುವವರು. ಕರೆ ಮಾಡಿ ಅವರು ಏನು ಒಪ್ಪಿಕೋ ನಾನು ಹೋಗುತ್ತೇನೆ ನೀನು ಬಾ ಎಂದರು. ಅವರ ಮಾತು ತಳ್ಳಿ ಹಾಕಲಾಗದೆ ಒಪ್ಪಿಕೊಂಡೆ.


ಮುಂದೆ ಹದಿನೈದು ದಿನಗಳ ನಂತರ ಹೊರಡುವುದು ಎಂದಾಯಿತು. ಹಿಂದೆ ಮುಂಬೈಗೆ ನಮ್ಮಣ್ಣನ ಜೊತೆ ಒಮ್ಮೆ ಹೋಗಿದ್ದೆ 15 ವರ್ಷಗಳ ಹಿಂದೆ ,ಇಗ ಹೇಗೆ ಎತ್ತ ಒಂದೂ ಗೊತ್ತಿಲ್ಲ, ಮತ್ತೆ ಜೋಶಿ ಅವರಿಂದ ಕರೆ ಬಸವರಾಜರೆ ಟಿಕೆಟ್ ಬುಕ್ ಮಾಡ್ತಾರಂತೆ ಎಂದರು .ತುಂಬಾ ಸಂತೋಷ ಸರ್ ಎಂದೆ ಆದರೆ ಕೊನೆಗೆ ಯಾವ ಟ್ರೈನ್ನಲ್ಲಿಯೂ ಸೀಟ್ ಇಲ್ಲ ಎಂದು ಹೇಳಿದರು ,ಮನೇಲಿ ಬೇಡವೇ ಬೇಡ ಮುಂಬೈಗೆ ಹಾಗೆಲ್ಲ ಹೋಗಬಾರದು ಜನರಲ್ ಭೋಗಿಯಲ್ಲಿ ಎಂತೆಂತ ಜನರಿರುತ್ತಾರೆ ಗೊತ್ತಾ ಎಂದರು ?.ಉಪಾಯ ಕಾನದಾಗಿ ಜೋಶಿಯವರಿಗೆ ಹೇಳಿದೆ ಬಸ್ಸಲ್ಲಿ ಹೋಗೋಣ ಎಂದು ,ಅವರು ಬೇಡಮ್ಮ ಬಸ್ ತುಂಬಾ ದುಬಾರಿ ಎಂದರು ,ನೋಡಿ ನಮ್ಮ ಮಿಡಲ್ ಕ್ಲಾಸ್ ಜನರ ಪಜಿತಿ ಇಷ್ಟೇ ಎಂದೆನಿಸಿತು. ಮತ್ತೇಕೆ ಪ್ರಶ್ನೆ ಜೋಶಿಯವರು ಹೇಳಿದ್ರು ಬಿಡುವ ಹಾಗಿಲ್ಲ ಹೋಗ್ಲೇಬೇಕು ಎಂದರು. ತತ್ಕಾಲದಲ್ಲಿ ಬುಕ್ ಮಾಡೋಣ ಎಂದು ಮಕ್ಕಳಿಗೆ ರಿಸರ್ವೇಶನ್ ಸೀಟ್ ಹುಡುಕಲು ಹೇಳಿದೆ ಎಷ್ಟು ಹುಡುಕಿದರೂ ಎರಡು ಸೀಟು ಒಟ್ಟಿಗೆ ಸಿಗಲೇ ಇಲ್ಲ. ಒಂದು ಭೋಗಿಯಲ್ಲಿ ಎರಡು ಸೀಟ್ ಖಾಲಿ ಇರಲಿಲ್ಲ. ಇನ್ನು ತಂದೆಯನ್ನೇ ಹೇಗೆ ಬಿಟ್ಟು ಒಬ್ಬಳೆ ಹೋಗೋದು ಬಿಡು ಹೇಗಾಗುತ್ತೆ ಆಗಲಿ ಎಂದು ಸುಮ್ಮನಾದೆ .ಅಂದು 22ನೆಯ ತಾರೀಖು ಶನಿವಾರ ಹೋಗುವ ದಿನ ನಾಲ್ಕು ಗಂಟೆಗೆ ಜೋಷಿಯವರ ಭಾರಿ ವಾಹನ ಎಲೆಕ್ಟ್ರಿಕ್ ಬೈಕ್ ನಮ್ಮ ಮನೆಯ ಮುಂದೆ ,ಮಗಳು ಸಾವಕಾಶ ಹೋಗಿರಿ ಎಂದು ಹೇಳಿದಳು ,ಸರಿ ಎಂದು ಹತ್ತಿ ಕೈ ಬೀಸಿದೆ. ನಾಲ್ಕು ಮೂವತ್ತಕ್ಕೆ ರೈಲ್ವೆ ಸ್ಟೇಷನ್ಲ್ ನಲ್ಲಿ ಇದ್ದೆವು. ಬೊಮ್ಮಾಯಿ, ಮೋದಿ ಅವರಿಂದ ಉದ್ಘಾಟನೆಯಾದ ಮೇಲೆ ಬೆಳಗಾವಿಯ ಹೊಸ ರೈಲ್ವೆ ನಿಲ್ದಾಣವನ್ನು ನೋಡುತ್ತಿರುವುದು ಇದೆ ಮೊದಲ ಬಾರಿಗೆ ಹಾಗಾಗಿ ಹೋದ ತಕ್ಷಣ ನಿಲ್ದಾಣವನ್ನು ನೋಡುತ್ತಾ ಟಿಕೆಟ್ ಕೌಂಟರ್ನಲ್ಲಿ ಸರತಿ ಸಾಲಲ್ಲಿ ನಿಂತು ಟಿಕೆಟ್ ಪಡೆದೆವು. ಇಬ್ಬರಿಗೆ ಸೇರಿ ಕೇವಲ .370 ರೂಂ ಗಳು ದಂಗಾದೆ ಅಯ್ಯೋ !ಇಲ್ಲಿಗೆ ಬರಲಿಕ್ಕೆ ನಮ್ಮ ಮನೆಯಿಂದ ನಮ್ಮ ಆಟೋದವನು 250 ತಗೊಳ್ತಾನೆ? ಕೇವಲ 370ಕ್ಕೆ ಇಬ್ಬರು ಮುಂಬೈಗೆ ಪ್ರಯಾಣಿಸಬಹುದಾ ?ಅಯ್ಯೋ !ಎಷ್ಟು ಬಾರಿ ಹೋಗಬಹುದಿತ್ತು ಮುಂಬೈಗೆ ಎಂದುಕೊಂಡೆ ಮನದಲ್ಲಿ .ಟ್ರೈನ್ ಬರುವ ಫ್ಲಾಟ್ ಫಾರ್ಮ್ ಹತ್ತಿರ ಒಂದು ಗಂಟೆ ಕಾಯಬೇಕಿತ್ತು. ಬಳಿ ಇರುವ ಜೋಶಿಯವರು ತುಂಬಾ ವಾಚಾಳಿ ಅವರ ಮಾತು ತಪ್ಪಿಸಿಕೊಳ್ಳಲು ಸುಮ್ನೆ ಬ್ಯಾಗಿನಿಂದ ಶಿವರಾಂ ಕಾರಂತರ “ಬೆಟ್ಟದ ಜೀವ” ಕಾದಂಬರಿ ತೆಗೆದು ಓದತೊಡಗಿದೆ ,ಶಿವರಾಮರು ಇನ್ನೂ ಮುಟ್ಟಬೇಕಾದ ಊರು ಮುಟ್ಟಿರಲಿಲ್ಲ ಬಂತು ನಮ್ಮ ಚಾಲುಕ್ಯ ಎಕ್ಸ್ಪ್ರೆಸ್ ಟ್ರೈನ್ ಸೀಟ್ ಗಾಗಿ ನೂಕು ನುಗ್ಗಲು ಕ್ಷಣ ಮಾತ್ರದಲ್ಲಿ ತುಂಬಿ ಹೋಯಿತು. ಯಾರೋ ಒಬ್ಬ ತನ್ನ ಕುಟುಂಬಕ್ಕಾಗಿ ಬಲಭೀಮನಂತೆ ಎರಡು ಸೀಟ್ಗಳ ಮೇಲೆ ಕಾಲಿಟ್ಟು ಸೀಟು ಬುಕ್ ಮಾಡಿದ್ದ. ಬರ್ತಾರೆ, ಬರ್ತಾರೆ, ಅಂತಿದ್ದ. ನಮ್ಮಪ್ಪ ಕೇಳ್ತಾರಾ ಕಾಲ್ ತೆಗಿ ಎಂದು ಕುಳಿತೆ ಬಿಟ್ಟರು. ಅವನಿಗೆ ನೀನೇನು ಈ ಟ್ರೈನ್ ಖರೀದಿ ತಗೊಂಡಿದ್ದಿಯಾ, ಈ ಟ್ರೈನ್ ಏನು ಇವರ ಅಪ್ಪಂದ ಸೀಟ್ ಹಿಡಿದು ಕೊಟ್ಟನಂತೆ, ಸೀಟು ಅಂತ ಗೊನಗ್ತಾ ಇದ್ರು. ಅಷ್ಟೊತ್ತಿಗೆ ಅವ್ನು ಮಾತಾಡಿ ಸಮಾಧಾನ ಆಗಿದ್ದ, ಮತ ಮತ್ಯಾರಿಗೂ ಜೋಷಿ ಹೇಳ್ತಾ ಇದ್ರು ಪಾಪ ಇವನೇ ನಮಗ ಸೀಟ್ ಹಿಡ್ಕೊಟ್ಟ ಅಂತ, ನಮಗೆ ಆಗ ಬಿಜೆಪಿಗೆ ಸ್ಪರ್ಧಿಸಲು ಎಂ ಎಲ್ ಎ ಸೀಟ್ಗೆ ಟಿಕೆಟ್ ಸಿಕ್ಕ ಖುಷಿಯಾಗಿತ್ತು.
ಪ್ರಯಾಣ ಮುಂಬೈನತ್ತ ಸಾಗಿತ್ತು, ಹನುಮಂತನಿಗೆ ಮೂರು ಜನ ಹೆಣ್ಣು ಮಕ್ಕಳು, ಒಬ್ಬ ಗಂಡ್ಮಗ, ಎಲ್ಲರೂ ನಮ್ಮ ಅಕ್ಕ ಪಕ್ಕ ಇದ್ದರು. ಅವನ ಒಬ್ಬನೇ ಮಗ ಯುಕೆಜಿ ಓದೊ ಹುಡುಗ ತಂದೆಯನ್ನ ಗುದ್ದುತ್ತಾ, ತಾಯಿಯನ್ನು ಒದಿತಾ ಇದ್ದ,  ಮಿನಿ ರೌಡಿ ಎನಿಸಿದ, ಅವರ ತಾಯಿ ಅವರೇ ಮುದ್ದು ಮಾಡಿದ್ದು ಅಂತಾಳೆ ,ತಂದಿನ್ ಕೇಳಿದ್ರೆ ಅವಳೇ ಮುದ್ದು ಮಾಡಿದ್ದು ಅಂತಾನೆ, ಒಟ್ಟಾರೆ ಇಬ್ಬರು ಮುದ್ದು ಮಾಡಿ ಕೊರಳ ಪಟ್ಟಿ ಹಿಡಿದರೂ ಮುತ್ತು ಕೊಡ್ತಾ ಇದ್ರು, ನೋಡಿ ನೋಡಿ ಹೇಳಿದೆ ಇವನ ಇಷ್ಟು ಲಾಡ ಮಾಡ್ಬೇಡ್ರಿ ಇತ್ನ ಪ್ಯಾರ್ ಅಚ್ಚಾ ನಹಿ , ಪ್ರೀತಿ ಮಾಡಿ ಕೆಡಿಸ್ಬ್ಯಾಡ್ರಿ ಎಂದೇ. ಹಾಗೆ ಅವರೊಂದಿಗೆ ತುಂಬಾ ಮಾತಾಯಿತು, ಆದರೆ ಇಳಿದು ಹೋಗುವಾಗ ಅವರು ನಮ್ಮವರೇ ಎನ್ನುವ ಭಾವ ಅವರೆಲ್ಲ ನಗ್ತಾ ಬಾಯ್ ಹೇಳಿದಾಗ ಮನ ತುಂಬಿ ಬಂತು, ಹಾಗೆ ಎಲ್ಲಾ ನಿಲ್ದಾಣದಲ್ಲಿಯೂ ನಾಲ್ಕು ಜನ ಇಳಿಯುವರು 10 ಜನ ಹತ್ತುವವರು. ನನಗೆ ಭಯ ಏನಪ್ಪಾ ಇದು ಹೇಗೆ ಹೋಗುವುದು ?ನಿದ್ರೆಯ ಗತಿಯೇನು? ಇಷ್ಟು ಜನರ ಮಧ್ಯೆ ಕೂಡ್ಬೇಕು, ನೂರೆಂಟು ಪ್ರಶ್ನೆ ಒಳಗೆ ನನ್ನ ತಿನ್ನತೊಡಗಿದವು .ಒಬ್ಬಳೇ ಹೋದವಳಲ್ಲ ನಾನು, ನಮ್ಮ ದಂಡು ಬಾಳ ಇರೋದ್ರಿಂದ ಅಕ್ಕನೂ ತಂಗಿನೂ ಮಕ್ಕಳೊ ಯಾರಾದ್ರೂ ಇರ್ತಾ ಇದ್ರು. ಹೇಗೋ ಗಟ್ಟಿ ಮನಸ್ಸು ಮಾಡಿ ಕುಂತೆವು .ಪ್ರತಿ ಹಳ್ಳಿಗೂ ಟ್ರೈ ನಿಲ್ತಾ ಇತ್ತು. ಗೊತ್ತಿಲ್ಲ ಎಕ್ಸ್ಪ್ರೆಸ್ ಎಂದೇಕೆ ?ಇದಕ್ಕೆ ಹೆಸರಿಟ್ಟಿದ್ದಾರೆ ಎಂದು ಎನಿಸಿತು. ಪೂನಾ ಬಂತು ನಾವಿಬ್ಬರೂ ಇನ್ನು  ಹಾಯಾಗಿ ಅಲ್ಲೇ ಮಲಗಬೇಕು ಎಂದುಕೊಂಡೆವು. ಅಷ್ಟೊತ್ತಿಗೆ ಮತ್ತೆ ಗಂಟು ಮೂಟೆ ತಗೊಂಡು ಹತ್ತಿದ್ರು ನಾಲ್ಕೈದು ಜನ ಏಳಿ, ಏಳಿ ಇವು ಮಲಗಲು ಅಲ್ಲ ಕುಳಿತುಕೊಳ್ಳಿ ಸೋನೆಕೆ ಲಿಯೆ ನಹಿ ಹೈ ಎಂದು ಎಬ್ಬಿಸಿದರು.
ಸುಮ್ನೆ ಎದ್ದು ಕಿಟಕಿ ಹತ್ತಿರ ಇಬ್ಬರೂ ಎದುರುಬದುರು ಕುಳಿತಿದ್ದಿವಿ ಅಷ್ಟೊತ್ತಿಗೆ ವೇಳೆ ಎಂಟು ಮೂವತ್ತು ಆಗಿತ್ತುಜೋಶಿಯವರಾಕೆ ಕಟ್ಟಿಕೊಟ್ಟ ಚಟ್ನಿ ತುಪ್ಪ ಹಚ್ಚಿದ ಚಪಾತಿ ಕ್ಯಾಬೇಜ್ ಪಲ್ಯ ಇತ್ತು ಎರಡೆರಡು ಚಪಾತಿ ಹಾಗೆ ಒಳಗೆ ಹೋದವು ,ಆಗಾಗ ಬರುವ ಗಬ್ಬು ವಾಸನೆ  ನನ್ನ ಮೂಗು ಕಟ್ತಾ ಇತ್ತು, ಹೊಟ್ಟೆ ಥಳಿಸಿದ ಅನುಭವ. ಇದಕ್ಕಾಗಿಯೇ ನನಗೆ ರೈಲ್ವೆ ಪ್ರಯಾಣ ಇಷ್ಟ ಆಗದು, ಅಲ್ಲೇ ಒಮ್ಮೆ ಕಣ್ಮುಚ್ಚುತ್ತಾ ಎರಡು ಮಾತಾಡ್ತಾ ಸಾಗುತ್ತಿದ್ದೆವು, ಬೇಸರ, ಏನು ಮಾಡಲು ತೋಚದ ಪರಿಸ್ಥಿತಿ ಪಕ್ಕ ನೋಡ್ತೀನಿ ನನ್ನ ಹತ್ತಿರ ಇದ್ದಾಕಿ, ಹೊಲಿಗೆ ಯಂತ್ರ ಅದು ಸ್ಪೇರ್ ಪಾರ್ಟ್ಸ್ ಎಲ್ಲಾ ಕಾಲ್ ಅಲುಗಾಡಿದಂಗ ಇಟ್ಟ ಉದ್ದ ಮಲಗಿ ಬಿಟ್ಟಿದ್ದು,ಯಾರಿಗೆ ಹೇಳೋದು ಅಕ್ಕಿನಾ ಅಂದಕ್ಕಿ ಸೋನೆ ಕೈ ಲೀಯೆ ನಹಿ ಹೈ ಸೀಟ್ ಅಂತ.ಬಾಳ ಸಿಟ್ಟು ಬಂದಿತು .ಉಪಾಯಗಾನದೆ ಅಲ್ಲೇ ಕುಳಿತು ನಿದ್ರೆ, ಕುಳಿತು ಬೇಸತ್ತು ಅಲ್ಲೇ ಗುಂಪಿಯಾಗಿ ಕಾಲ್ ಮುದುಡಿಸಿಕೊಂಡು ಅಡ್ಡಾದೆ ಸಾತಾರಾ ಬಂತು, ಅದು ಬಂತು, ಇದು ಬಂತು, ಅಂತ ಕಣ್ಮುಚ್ಚೋದು ತೆರೆದು ಮಧ್ಯೆ ನೋಡೋದು ಚಾಯ್ ಚಾಯ್ ಗರಮ್ ಚಾಯ್ ಎಂಬ ಗಟ್ಟಿಯಾದ ಶಬ್ದಗಳ ಹಾರಾಟ ನಾ ಹೋದ ಕುಂತಕ್ಕಿ ದಾದರ್ ಬರುಮಟ ಎದ್ದಿರಲಿಲ್ಲ,ಕೊನೆಗೂ ಬಂತು ದಾದರ್ ಎಂದರು. ಆಗ ಗಂಟೆ ಬೆಳಗಿನ ಆರಾಗಿತ್ತು, ಬೆಳಗಾಗಿತ್ತು, ಜೀವ ಬಂದಂಗಾಯ್ತು, ನಮ್ಮಪ್ಪ ಬಸವರಾಜರನ್ನೆ ಎದಿರು ನೋಡ್ತಾ ಇದ್ರು, ಬರ್ರಿ ಅಂದ ಬಸವರಾಜ ಬೇರೆ ಭೋಗಿಯಲ್ಲಿದ್ದರು, ಅವರಿಗೆ ಫೋನ್ ಮಾಡಿದೆ ಸ್ವಿಚ್ ಆಫ್ ಬಂತು ಮುಂದೇನು ಗತಿ ಎಂದೆವು . ಅಯ್ಯ ಅಣ್ಣಕ್ಕ ಮುಂದೋಗೆ ನಿಲ್ಲುನ್ ಬಾ ಅಂವ ಬರ್ತಾನ ಅಂತ ಹತ್ತರಿಂದ ಹದಿನೈದು ಬಾರಿ ಇದೇ ಮಾತು ಹೇಳಿದ್ರೂ ಸಿಟ್ಟು ಬಂದಿತು ಸುಮ್ಮ್ರಿನಾ ಕರ್ಕೊಂಡು ಹೋಗ್ತೀನಿ ಎಂದೆ, ಮತ್ತೆ ನಗ್ತಿದ್ರು, ಬಸವರಾಜರ ಇನ್ನೊಂದು ನಂಬರ್ಗೆ ಕಾಲ್ ಮಾಡಿದೆ ಪುಣ್ಯಾತ್ಮರು ಎತ್ತಿದ್ರು, ಅವರಿಗೂ ಬೈದೆ ಎಲ್ಲರಾ ಏನಾರ ಮಾಡಿಟ್ಟೇರಿ ಕರ್ಕೊಂಡು ಬಂದ್ ಎಂದೆ ,ಇಲ್ಲ ಇಲ್ಲೇ ಇದ್ದೀವಿ ಬನ್ನಿ, ಭಟ್ರು ಉಡುಪಿಯಿಂದ ಬರ್ತಾರೆ ಇನ್ನೂ ಕಾಲ್ ಗಂಟೆ ಅವರಿಗೆ ವ್ಹೇಟ್ ಮಾಡಬೇಕು ಎಂದ್ರು, ಇರಲು, ಭವನದ ಇತ್ಯಾದಿ ಎಲ್ಲಾ ವ್ಯವಸ್ಥೆ ಅವರೇ ಮಾಡಿದ್ದಾರೆ ಎಂದ್ರು, ಮತ್ತೆ ಅಲ್ಲೇ ಕುಳಿತು ಒಂದು ಹನಿಗವನ ಬರೆದೆ ಎಲ್ಲರಿಗೂ ಶುಭೋದಯ ಕಳಿಸಿದೆ. ಹಾಸನದಿಂದ ಇನ್ನೊಬ್ಬರುಲೀಲಾಮಹೇಶ್ವರ ಅಂತ ಶಿಕ್ಷಕರು ಬಸವರಾಜರಿಗೆ ಫೋನ್ ಮಾಡಲು ಸಹಾಯ ಮಾಡ್ತಾ ಇದ್ರು. ಮನಸಲ್ಲಿ ಅನ್ಕೊಂಡೆ ಅಲ್ಲಿಂದ ಬಂದಿದ್ದಾರೆ ಈ ಅಸ್ಸಾಮಿ ಬೇಜಾರಿಲ್ಲ ಇವರಿಗೆ ಎಂದೆ,? ಅಷ್ಟರಲ್ಲಿ ನಮ್ಮಪ್ಪ ಜೋಶಿ ಅಂದೆ ಬಿಟ್ರು ಅಯ್ಯೋ ಯಪ್ಪಾ ಅರಸೀಕೆರೆಯಿಂದ ಬಂದ್ರಾ? ಭಟ್ರು ಬರ್ತಾನೆ ಇಲ್ಲ ಎಂಟು ಗಂಟೆ ಅಲ್ಲೇ ಆಯಿತು, ಬಸವರಾಜ ಅಂದ್ರು ಫ್ರೆಶ್ ಆಗಿ ಟೀ ಕುಡಿಯೋಣ ನಡಿರಿ ಅಲ್ಲೇ ಬರ್ತಾರೆ ಎಂದು ನಮ್ಮ ಲಗೇಜ್ನ ಕತ್ತೆಯಂತೆ ಹೊತ್ಕೊಂಡು ಹಾಳು ಮುಖದಿಂದ ಹೋದ್ವಿ, ಎಲ್ಲಿ ಫ್ರೆಶ್ ಆಗೋದು ಏನ್ ಒಂದು ಗೊತ್ತಿಲ್ಲದೆ ಹಾಗೆ ನಿಂತೆ, ಅಲ್ಲಿ ಮತ್ತೆ ಚಿಕ್ಕೋಡಿ ,ಸಂಕೇಶ್ವರ್, ಧಾರವಾಡದಿಂದ ಬಂದ ಮೂರ್ನಾಲ್ಕು ಜನರ ಪರಿಚಯ ಮಾಡಿಕೊಂಡ್ವಿ, ಏನ್ ಚಹಾ ಇಲ್ಲ ಪ್ರೇಶ್ನೆ ಇಲ್ಲ, ಮತ್ತೆ ನಾವೇ ಮೂರು ಜನ ಹೆಣ್ಮಕ್ಕಳೇ  ಚಹನಾದ್ರೂ ಕುಡಿಯೋಣ ಎಂದು ಹೋದ್ವಿ ಆಸಾಮಿಗಳು ನಮ್ಮನ್ನು ಅಲ್ಲೇ ಬಿಟ್ಟು ಚಾ ಕುಡಿದು ಬಂದಿದ್ರು .ಅಯ್ಯೋ ಶಿವ! ಎಂದು ಹೋಗಿ ತಳ್ಳೋ ಗಾಡಿ ಮೇಲಿರೋ ಬಿಸಿಬಿಸಿ ಟೀ ಹೇಳಿದ್ವಿ, ಆದ್ರೆ ಅಲ್ಲೇ ಅಕ್ಕಪಕ್ಕ ತುಂಬಾ ಗಲೀಜು ಗಂಡಸರ ಬಾಯಿ ಚಪಲದ ದರಿದ್ರ ತುಂಬಿತ್ತು. ಏನ್ ಮಾಡೋದು ನಾಲ್ಕು ಚಹಾ ತಗೊಂಡು ರೂ.10 ಗೆ ಒಂದರಂತೆ 40 ರೂಪಾಯಿ ಕೊಟ್ಟೆ .ಆಗ ಆ ಭಟ್ರು ಪ್ರತ್ಯಕ್ಷ ಆದ್ರು ಚೋಟುದ್ದ ಶರೀರ ,ಚೂಟಿಯಂತೆ ಓಡಾಟ ,ಎದೆಗೆ ಒಂದು ಬ್ಯಾಗ್ ಹಿಂದೆ ಒಂದು ಬ್ಯಾಗ್, ನನಗೆ ಅವರು ಬುದ್ಧಿವಂತ ಹಾಸ್ಯಗಾರನಂತೆ ಕಂಡರು. ಒಳಗೊಳಗೆ ನಕ್ಕೆ ,ಮನಸ್ಸಿನಲ್ಲಿ ಅಂದುಕೊಂಡೆ ಬೊಟ್ಟಷ್ಟು ಭಟ್ರು ಜಾನ್ರು ಎಂದೆ. ಅವರು ರೋಬೋಟ್ ಯಂತ್ರದಂತೆ ಹೊರ ಹೋಗಿ ಟ್ಯಾಕ್ಸಿ ಕರೆದರು ಒಂದು ಟ್ಯಾಕ್ಸಿಯಲ್ಲಿ ನಾಲ್ಕು ಜನ 60 ರೂಪಾಯಿ ಬಾಡಿಗೆ ನಮ್ಮ ಕಾರ್ಯಕ್ರಮದ ಜಾಗೆಗೆ ಹೋಗಲು, ಐದೇ ನಿಮಿಷಗಳಲ್ಲಿ ಒಂದು ದೊಡ್ಡ ಕಟ್ಟಡದ ಮುಂದೆ ನಿಲ್ಲಿಸಿ ಇದರೀ ಉತರಿಯೇ, ಎಂದ ಟ್ಯಾಕ್ಸಿ ಯಾತ 60 ರೂಪಾಯಿ ಕೊಟ್ಟು ಇಳಿದೇವು.ಏನೊ ಮುಂಬೈಗೆ ಬಂದ ಅನುಭವ ಅಲ್ಪಸಲ್ಪ, ಅದೇ ಹಾಳು ಮುಖದಲ್ಲಿ ಫೋಟೋ ಹೊಡೆಸಿಕೊಂಡ್ವಿ ನಮ್ಮ ಜೊತೆಯಲ್ಲಿದ್ದ ಹನುಮಂತನಿಂದ. ಆಗ ಒಂಬತ್ತು ಗಂಟೆ ಆಗಿತ್ತು. ಅಲ್ಲಿಂದ ತುಸು ದೂರ ನಡ್ಕೊಂಡು ಹೋದ್ವಿ ,ಅಲ್ಲೇ ರಾಮ್ಬಾಗ್ ಅಂತ ಒಂದು ವಸತಿಗೃಹ ತುಂಬಾ ಹಳೆಯದು, ಕಟ್ಟಡದ ಮೇಲಿದ್ದ ಮರದ ಒಣಗಿದ ಎಲೆಗಳು ನಮ್ಮನ್ನು ಹಾರಿ ಹಾರಿ ಬಂದು ಸ್ವಾಗತ ಮಾಡುತ್ತಿದ್ದವು, ಅಯ್ಯೋ! ಅಲ್ಲಿಯೂ ನಿಲುಗಡೆ ಮಾತು ಮುಗಿತಾ ಇಲ್ಲ , ಭಟ್ರು ಬ್ಯಾಗ್ ಎದೆಗೆ ಹಾಕೊಂಡು ಓಡಾಡಿದ್ದೆ ಓಡಾಡಿದ್ದು ಅಲ್ಲೇ .೧೫ ವರ್ಷ ಬ್ಯಾಂಕ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ ಅನುಭವ ಅವರದು ಅದಕ್ಕೆ ನಮಗೆಲ್ಲ ಗೊತ್ತಾಗೋಲ್ಲ ಎಂದು ನನಗೆ ಎಲ್ಲಾ ತಿಳಿದಿದೆ ಎಂಬ ಟಿವಿಯಲ್ಲಿ ಅವರ ಓಡಾಟ. ಅಲ್ಲೇ ಇದ್ದ ಕುರ್ಚಿಗಳನ್ನು ಜಗ್ಗಿಕೊಂಡು ಮೋಕ್ಷ ಯಾವಾಗ ಎಂದು ಕುಳಿತಿದ್ದಿವಿ, ಬಸವರಾಜ್ ಸರ್ ಬಂದು ನಾವು 12 ಜನ ಇದೀವಿ ಮೇಡಂ ,ಎರಡು ರೂಮ್ ಬುಕ್ ಆಗಿವೆ ,ಅವರು ಒಂದು ರೂಮ್ನಲ್ಲಿ ನಾಲ್ಕು ಜನರಿಗೆ ಮಾತ್ರ ಅವಕಾಶ ಕೊಡ್ತಾರಂತೆ, ಇನ್ನೊಂದು ರೂಮ್ ತಗೊಳ್ಳೋಕೆ ಒಬ್ಬರಿಗೆ 500 ರೂಂ ನಂತೆ ಕೊಡಬೇಕಂತೆ  ಅಂದ್ರು, ನಾ ಹೇಳ್ದೆ ನಮ್ಗೆ ಮೊದ್ಲು ಚಾವಿ ಕೊಡಿ, ನೀವು ದುಡ್ಡು ಕೊಟ್ಟು ಬರ್ರಿ ಅಂತ ಹೇಳಿದೆ. ಆ ವಸತಿ ಗ್ರಹದಾತ ಇದರಸೇ ಜಾಯಿಯೇ,ಅಂದ ಗೊತ್ತಾಗಲ್ಲಪಾ  ಅಂತ ಅಂದ್ವಿ, ಆಯಿಯೆ ಮೇರಾ ಸಾಥ್ ಅಂತ ಚಾವಿ ಹಿಡುಕೊಂಡು ಹತ್ತಾಕತ್ತ ಹಿಂದಿಂದ ಬೆನ್ನಿಗೆ ಬ್ಯಾಗ ಹಾಕೊಂಡು ನಾವೂ ನಡೆಯಾಕತ್ತೀವಿ ,ರೂಮ್ ಬರತ್ತಿಲ್ಲಾ, ಜೊತೆ ಜೋಶಿಯವರು ಅಯ್ಯ ಯಪ್ಪಾ ಇನ್ನೂ ಎಷ್ಟು ಹತ್ತೋದು ಅನು ಅಂತಿದ್ರು ನಮ್ಮಪ್ಪ  ಅರ್ಧ ಕಟ್ಟಿಗೆ ಮೆಟ್ಲು ,ಅರ್ಧ ಕಲ್ಲಿನ ಮೆಟ್ಟಿಲು ,ಇನ್ನರ್ಧ ಸಿಮೆಂಟ್ ಮೆಟ್ಲು ,ಒಟ್ಟು 100 ರಿಂದ 150 ಸ್ಟೆಪ್ಸ್ ಏರೋದಕ್ಕೆ ಎವರೆಸ್ಟ್ ಶಿಖರ ಏರಿದಂಗ ಆತು. ಅಂತೂ ಇಂತೂ ರೂಮ್ ಬಾಗಿಲ ತೆಗೆದೆ ಡೈರೆಕ್ಟ್ ಬಾತ್ರೂಮ್ ಪ್ರವೇಶ ಬೇಗ ಬೇಗ ರೆಡಿಯಾಗ್ರಿ ಎಲ್ಲಾದ್ರೂ ತಿರುಗ ಹೋಗೋಣ ಅಂದ್ರು .ಭಟ್ರು ಮೊದಲೇ ಫೋನ್ನಲ್ಲಿ ಹೇಳಿದ್ರು ನಿಮಗೆ ಶಾಪಿಂಗ್ ಮಾಡಿಸ್ತೀವಿ ಮುಂಬೈಯಲ್ಲಿ ತುಂಬಾ ವಸ್ತುಗಳು ಚೀಪ್ ಸಿಗ್ತವೆ ಎಂದಿದ್ರು .ಎಲ್ಲರೂ ಚರ್ಚೆ ಮಾಡಿ ಕಡೆಗೆ ಇಂಡಿಯಾ ಗೇಟ್ ಗೆ ಹೋಗಲು ನಿರ್ಧಾರ ಆತು. ಮುಂಬೈನಲ್ಲಿ ತೊಡಲು ಎಂದು ತಂದ ಬ್ಯಾಗನಲ್ಲಿಯ ದಿರೆಸುಗಳು ಮೈಮೇಲೆ ಇದ್ದವು .ಕೆಳ ನಡೆದೆವು .ಮುಂಬೈನಲ್ಲಿ ಕೆಲಸ ಮಾಡೊ ಒಬ್ರು ನನ್ನ ಫ್ರೆಂಡ್ ನನ್ನ ಬೆಟ್ಟಿಗಾಗಿ ಕೆಳಗೆ ಬಂದು ನಿಂತಿದ್ರು .ನಾ ಲಗು ಬಗೆಯಿಂದ ರೆಡಿ ಆಗಿ ಕೆಳಗೆ ಹೋದೆ . ಅವರನ್ನು ಮೊದಲನೇ ಬಾರಿಗೆ ನೋಡ್ತಾ ಇರುವುದರಿಂದ ಬೇಗ ಗುರುತು ಸಿಗಲಿಲ್ಲ. ಆನ್ಲೈನ್ನಲ್ಲಿ ಫ್ರೆಂಡ್ ಆಗಿದ್ದರು, ಅವರೊಂದಿಗೆ ಮುಂಜಾನೆ ಉಪಹಾರ ಮಾಡಿದೆ. ಅಷ್ಟೊತ್ತಿಗೆ ಎಲ್ರೂ ತಯಾರಾಗಿ ಬಂದ್ರು ಮತ್ತೆ ಮೂರು ಟ್ಯಾಕ್ಸಿಗಳು ಬಾಡಿಗೆ ,ಒಂದೊಂದು ಟ್ಯಾಕ್ಸಿಯಲ್ಲಿ ನಾಲ್ಕು ಜನ, ನಮ್ಮ ಟ್ಯಾಕ್ಸಿ ಮುಂದೆ ಸಾಗಿತು .ನಾನು, ವಿದ್ಯಾ, ಬಿನಾ ಟೀಚರ್ ಮತ್ತು ಮುಂದಿನ ಸೀಟಲ್ಲಿ ಹನುಮಂತ ಕುಂತ ,ಟ್ಯಾಕ್ಸಿ ಡ್ರೈವರ್ಗೆ ಏನೇನು ಕೇಳ್ತಾ ಇದ್ದ ಹನುಮಂತ ಹರುಕು ಮುರುಕು ಹಿಂದಿ ಭಾಷೆಯಲ್ಲಿ ,ಅವನಿಗೆ ತಿಳಿದಷ್ಟು ಅವನು ಎ ದೆಖೊ,  ಎ ದೆಖೊ, ೧೯೪೨ ಕಾ, ಇದರ್ ದೇಖೋ ಉದರ್ ದೇಖೊ ಅಂತಿದ್ದ, ನಾವು ಅಬ್ಬಾ !ಎಷ್ಟೆಷ್ಟು ಎತ್ತರದ ಕಲ್ಲಿನ ಕಟ್ಟಡಗಳು ಅಂತ ಅಚಿಕೊಮ್ಮೆ, ಇಚಿಕ್ಕೊಮ್ಮೆ ನೋಡಿದ್ದೇ ನೋಡಿದ್ದು. ಟ್ಯಾಕ್ಸಿ ಒಳಗೆ ಕೂತ್ಕೊಂಡ ಹಳೆ ಕನ್ನಡ ಚಿತ್ರಗೀತೆ ಹಾಡ್ಕೊಂಡ ಸೆಲ್ಪಿ ಕ್ಲಿಕಿಸಿಕೊಳ್ತಾ ಸಾಗಿತ್ತು ನಮ್ಮ ಪ್ರಯಾಣ ಗೇಟ್ವೇ ಆಫ್ ಇಂಡಿಯಾಗೆ . ಅಂದು ಕಂಡಂತೆ ಇದ್ದರೂ ಅದೇ ಕುತೋಹಲ ,ಅದೇ ಆಶ್ಚರ್ಯ, ಅದೇ ನೋಡುವ ತವಕ, ಮನ ತುಡಿಯುತ್ತಿತ್ತು.

ಅದೇನು ಜನ, ಅದೆಷ್ಟು ಗದ್ದಲ, ಅಬ್ಬಾ! ಸರತಿಯಲ್ಲಿ ನಿಂತು ಬ್ಯಾಗ್ ಚೆಕ್ ಮಾಡಿ ಬಿಡ್ತಾ ಇದ್ರು, ನನ್ನ ಬಗಲಿಗೆ ನೇತು ಹಾಕಿದ ಚೀಲ ಅವರಿಗೆ ಕಾಣಲಿಲ್ಲವೇನೋ ಸುಮ್ನೆ ಬಿಟ್ರು ,ಒಳ ಪ್ರವೇಶಿಸುತ್ತಲೇ, ಅರಿಯದ ಆನಂದ, ಮೈಮನದಿ ಪುಳಕ, ರೋಮಾಂಚನ ,ಒಂದೆಡೆ ತಾಜ್, ಎದುರುಗಡೆ ಗೇಟ್ ವ್ಹೆ ಆಫ್ ಇಂಡಿಯಾ. ಸಮುದ್ರದ ತೆರೆಗಳ ಮೊರೆತ, ದಿಗಂತದವರೆಗೆ ಕಾಣುವ ನೀರು, ಸುಂದರ ಬೂಟ್ಗಳ ಓಡಾಟ, ನೂರಾರು ಜನ ಫೋಟೋ ತೆಗೆಯುವವರು, ಪ್ಲೀಸ್ ಫೋಟೋ ಅಂತಾ ಇದ್ರು, ಜಂಗಮವಾಣಿ ಹೊರಬಂತು ,ಆ ಕಡೆ ಈ ಕಡೆ ಹೊರಳಿ ಹೊರಳಿ ಕೈಯನ್ನು ಆಚೆ ಈಚೆ ಚಾಚುತ್ತ ಫೋಟೋಗಳನ್ನು ಕ್ಲಿಕ್ಕಿಸಿದ್ದೆ ಕ್ಲಿಕ್ಕಿಸಿದ್ದು, ನೀವು ಬನ್ನಿ ,ನೀವು ಬನ್ನಿ ಎಂದು ಎಲ್ಲರೊಂದಿಗೆ ಫೋಟೋಗಳ ಸುರಿಮಳೆ. ಮತ್ತೆ ಕ್ಯಾಮೆರಾದವನಿಂದ ಫೋಟೋ, ತೆಗೆಯುವವನೇ ನಮ್ಗೆ ಕೂಲಿಂಗ್ ಗ್ಲಾಸ್ ಕೊಟ್ಟು, ನಿಂತುಕೊಳ್ಳೋ ಬಂಗಿ ಹೇಳ್ತಾ, ಫೋಟೋಗಳ ತೆಗೆದ ಆಗಲೇ ತೊಳೆದು ಕೊಟ್ಟ ,ತುಂಬಾ ಚೆನ್ನಾಗಿ ತೊಳೆದು ಬಿಳಿ ಅರಿವಿಯಂಗ ಚಂದಾಗಿ ಮುದ್ದಾಗಿ ಬಂದ ಫೋಟೋಗಳನ್ನು ಮತ್ತೆ ಮತ್ತೆ ನೋಡಿಕೊಳ್ಳುತ್ತಾ, ಅನಿಸ್ತು ಜೀವಕ್ಕೆ ಎಷ್ಟು ಆಸೆ ತನ್ನನ್ನು ತಾ ನೋಡಿಕೊಳ್ಳೋದು ? ಮತ್ತೆ ಅವಸರವಸರದಿಂದ ಗ್ರೂಪ್ ಫೋಟೋ  ತೆಗೆಸಿಕೊಂಡು ಹೊರಗಡೆ ಐಸ್ ಕ್ರೀಮ್ ತಿಂದು ಟ್ಯಾಕ್ಸಿ ಹತ್ತಿ ರೂಮ್ನತ್ತ ಪಯಣ ,ಮತ್ತೆ ಫ್ರೆಶ್ ಆಗಿ, ಕನ್ನಡ ಹೆಮ್ಮೆಯ ಕಾರ್ಯಕ್ರಮಕ್ಕಾಗಿ ಹಸಿರು ದಡಿಯ ಹಳದಿ ಕೆಂಪು ಮಿಶ್ರಿತ ರೇಷ್ಮೆ ಸೀರೆ ಉಟ್ಟು ಹೊರಟೆವು ,ರಂಗಮಂದಿರಕ್ಕೆ ಓಣಿ ಹುಡುಕುತ್ತಾ ಅವರಿವರ ಕೇಳುತ್ತಾ ಮೈಸೂರ ಭವನಕ್ಕೆ ಬಂದೆವು. ರಸ್ತೆ ಪಕ್ಕ ಇದ್ದ ಸುಂದರ ಹೂಗಳನ್ನ ಕೊಂಡುಕೊಂಡು ಮುಡಿಗೆರೆಸಿಕೊಂಡಿದ್ದೆವು. ಮಲ್ಲಿಗೆ ಮೊಗ್ಗಿನ ಹಸಿದು ಉಲನ್ನನಲ್ಲಿ ಹೆಣೆದ ಮಾಲಿ ತಗೊಂಡು ಹೊರಟ್ವಿ, ಚಿಕ್ಕದಾಗಿ ಚೊಕ್ಕದಾಗಿ ಇತ್ತು‌ ಭವನ, ಮದುವಣಗಿತ್ತಿಯಂತೆ ಸಿದ್ಧವಾಗಿ ನಿಂತಿತ್ತು. ಕನ್ನಡ ಅಭಿಮಾನಿಗಳ ಬಳಗ ತುಂಬಿತ್ತು .ಮುಂಬೈನಂತಹ ಮಹಾನಗರಿಯಲ್ಲಿ ನಮ್ಮ ಕನ್ನಡದ ಕಲರವ, ನಮ್ಮ ಭಾಷೆಯ ಕಹಳೆ, ನಮ್ಮ ಕನ್ನಡದ ನುಡಿ ಜಾತ್ರೆ ,ಸಾಂಸ್ಕೃತಿಕ ಸೊಗಡುಗಳ ಬೆಡಗು, ಎರಡು ಕಣ್ಣು ಸಾಲದಷ್ಟು ರಮಣೀಯತೆ ,ನಮ್ಮ ಹೆಮ್ಮೆಯ ಕನ್ನಡಿಗರು ಮಹಾರಾಷ್ಟ್ರದ ಭವ್ಯ ನಗರಿಯಲ್ಲಿದ್ದುಕೊಂಡು ಮಕ್ಕಳಿಗೆ ಕಲಿಸಿದ ಕನ್ನಡ ಅಭಿಮಾನದ ಹಾಡು, ಅಭಿನಯ, ನೃತ್ಯಗಳನ್ನು ನೋಡಿ ಮನ ತುಂಬಿಬಂತು. ನನ್ನ ನಾ ಮರೆಯುವಂತೆ ಆಯಿತು. ಹೃದಯ ಸಂತೃಪ್ತಿಗೊಂಡಿತು,” ಕನ್ನಡ ಕನ್ನಡ ಹಾ ಸವಿಗನ್ನಡ ಕನ್ನಡದಲ್ಲಿ ಕವಿ ಬರೆಯುವನು, ಕನ್ನಡದಲ್ಲಿ ಹರಿ ತಿರಿಯುವನು” ಎಂಬ ಸಾಲುಗಳು ನೆನಪಿಗೆ ಬಂದವು. ಅದರೊಂದಿಗೆ ಕಾಯಕಯೋಗಿ, ಸತ್ಯದ ಹರಿಕಾರ ,ಹರಿಜನೋದ್ದಾರಕ, ಭಕ್ತಿ ಭಂಡಾರಿ ,ವಚನ ಚಳುವಳಿಯ ಪಿತಾಮಹ ,ವಿಶ್ವಧರ್ಮ ಸಾರಿದ ಮಾನವತಾವಾದಿ ,ಸಮಾಜ ಸುಧಾರಕ, ಅನುಭವ ಮಂಟಪದ ನಿರ್ಮಾತೃ ,ವಚನ ಚಳುವಳಿಯ ರೂವಾರಿ ,ಮೂರ್ತಿ ಪೂಜೆ ಖಂಡಿಸಿದವ ,ಲಿಂಗಸಂದಿಯಾಗಿ ಸಂಗಮನಲ್ಲಿ ಐಕ್ಯ ಹೊಂದಿದಾತ, ಬಸವರ  ಜನ್ಮದಿನ ಆಚರಿಸಲಾಯಿತು.
ಹತ್ತಾರು ಕವಿಗಳಿಂದ ಕನ್ನಡದ ಕವನ ವಾಚನ ಮೊಳಗಿತು. ಕಿವಿ ತಣಿಸಿದವು. ಅಲ್ಲೆ ತಿಂಡಿಯ ವ್ಯವಸ್ಥೆ ಮಾಡಿಸಿದ್ದರು ಎಷ್ಟೋ ಜನರ ಮುಖ ನೋಡಿರಲಿಲ್ಲ .ಪರಿಚಯ ಉಭಯಕುಶಲೊಪರಿ ಮಾತುಗಳು ಮೇಲ್ಚಾವಣಿಯ ಮೇಲೆ, ಮತ್ತೆ ನೂರಾರು ಫೋಟೋಗಳು, ತೆರೆದಿಟ್ಟ ಎಲ್ಲರ ನೆನಪಿನಂಗಳ, ಇನ್ನೊಂದು ದಿನ ಹೀಗೆ ಇರಬಾರದಾಗಿತ್ತಾ ಎನಿಸಿತು, ಬಿಟ್ಟು ಹೋಗ್ಬಾರ್ದು ಎಂದೆನಿಸುತ್ತಿತ್ತು.. ಭಾರ ಹೊತ್ತ  ಹೃದಯದಿಂದ ಬೀಳ್ಕೊಟ್ಟು ಲಗುಬಗೆಯಿಂದ ಹೊರಟೆವು.. ಮತ್ತೆ ರೂಮಿಗೆ ಹೋಗಿ ಬಟ್ಟೆ ಬದಲಾಯಿಸಿ ಬ್ಯಾಗ್ ಗಳ ಸಿದ್ಧಪಡಿಸಿಕೊಂಡು, ಮತ್ತೆ ಟ್ಯಾಕ್ಸಿಯಲ್ಲಿ ದಾದರ್ ರೈಲ್ವೆ ಸ್ಟೇಷನ್ಗೆ ಲಗೇಜ್ಗಳೆಲ್ಲ ಹೊತ್ತು ಹೋದೆವು. ಅರಸೀಕೆರೆಯಿಂದ ಬಂದ ಲೀಲಾಮಹೇಶ್ವರರ ಟ್ರೈನ್ ಟಿಕೆಟ್ ತೆಗೆದುಕೊಳ್ಳುವ ಗಡಿಬಿಡಿ ಹೇಳಲಾಗದು, ಸೀಟ್ ಸಿಗೋಲ್ಲ ಎಂದು ಓಡಾಡಿ ಅಂತೂ ಕಟ್ಟಯ್ಯನ ಕರುಣಾಕಟಾಕ್ಷದಿಂದ ಟಿಕೆಟ್ ಪಡೆದು ಧಾವಿಸಿ ಟ್ರೈನ್ ಹುಡುಕಿ ಒಳ ನುಗ್ಗುತ್ತಲೆ ಜಾತ್ರೆ, ನಮ್ಮ ಪುಣ್ಯ ಎಂದುಕೊಂಡು ಕುಂತೆವು ,ಜೋಶಿ, ನಾನು ಮತ್ತು ಲೀಲಾಮಹೇಶ ಮೂರು ಜನ ಒಂದೇ ಭೋಗಿಯಲ್ಲಿ ಇದ್ದೆವು. ಏನು ಸ್ಪರ್ಧೆ ಗೆದ್ದಂತ ಖುಷಿ ಸೀಟು ಸಿಕ್ಕಿದ್ದು. ಉಳಿದವರೆಲ್ಲ ಎದ್ದು ನಿಂತರು, ನಿಲ್ಲಲಾರದವರು ಕೆಳಗಡೆಯೆಲ್ಲ ಎಲ್ಲರ ಕಾಲುಗಳ ಮಧ್ಯೆ ನಿದ್ರಾದೇವತೆಗೆ ವಶವಾದರು. ಆ ದೃಶ್ಯ ನೋಡಿ ಕರುಳು ಚುರ್ರ ಎನ್ನುತ್ತಿತ್ತು ,ಭವ್ಯ ಭಾರತದ ಚಿತ್ರಣ ನಮ್ಮ ಕಣ್ಮುಂದೆ ನಿರ್ಮಾಣವಾಗಿತ್ತು. ಜಾತಿಭೇದ, ಊರು, ನಾಡು, ಭಾಷೆ ,ಧರ್ಮ ಎಲ್ಲಾ ಮರೆತು ಒಂದಾಗಿದ್ದ ಆ ದೃಶ್ಯ  ನೋಡಿದಾಗ, ಒಂದೆಡೆ ಎಲ್ಲಾ ಒಂದೆಂದ ಸಹಿಷ್ಣುತಾ ಭಾವ, ಸರ್ವಧರ್ಮ ಸಮನ್ವಯತೆ ಕಂಡುಬಂತು, ಇನ್ನೊಂದಡೆ ಮನುಷ್ಯನ ಅಸಹಾಯಕ ಸ್ಥಿತಿ, ಆಳುವವರೆಗೂ ಸಾಮಾನ್ಯರಿಗೂ ಇರುವ ವ್ಯವಸ್ಥೆಯ ವಿಚಿತ್ರ ಹೀನಾಯ ಸ್ಥಿತಿ ,ನೂರಾರು ಕೋಟಿ ರೂಪಾಯಿ ಖರ್ಚಿನಲ್ಲಿ ಒಬ್ಬನ ಪ್ರಯಾಣ ಒಂದೆಡೆಯಾದರೆ, ಅದೇ ನೂರಾರು ರೂಪಾಯಿಯಲ್ಲಿ ಒಟ್ಟಿಗೆ ಎಲ್ಲರ ಪಯಣ ಇದು ಜಗದ ನಿಯಮವೊ,? ಜನರ ನಿಯಮವೊ? ಅರಿಯುವುದು ಕಷ್ಟದ ಸಂಗತಿ ಎಂದುಕೊಂಡೆ.


ಬಹಳ ಹೊತ್ತು ನಾನು ಮತ್ತು ಲೀಲಾಮಹೇಶರ ನಡುವೆ ಉಭಯ ಕುಶಲೋಪರಿ ಮಾತುಗಳು, ನಮ್ಮ ನಮ್ಮ ಜೀವನದ ಕಥೆ ವ್ಯಥೆ, ಕಷ್ಟ ನಷ್ಟ ,ಕಳೆದ ದಿನಗಳು, ಉಳಿದದ್ದು ಎಲ್ಲ ಮಾತಾಡಿದೆವು. ಒಂದಿಷ್ಟು ಭಾರತದ ಇಂದಿನ ಸ್ಥಿತಿ, ಸುಧಾರಿಸಬೇಕಾದ ವಿಷಯಗಳು, ವ್ಯವಸ್ಥೆಯ ಪರಿಸ್ಥಿತಿ, ಆದ ಹುಣ್ಣುಗಳೇನು? ಔಷಧಿ ಏನು? ಹರಿದ ಹರಕುಗಳ ಹೊಲೆಯುವ ಬಗ್ಗೆ ಚಿಂತನ, ಮಂಥನ, ಉಪಾಯಗಳ ಹುಡುಕಾಟ ನಡೆಯಿತು. ನಂತರ ನಮ್ಮ ಭೋಗಿಯಲ್ಲಿದ್ದವರೆಲ್ಲರ ಉಭಯಕುಶಲೋಪರಿ ಮಾತು, ಇಂದಿನ ಯುವಕರ ವ್ಯಸನಕ್ಕೆ ದಾಸರಾದ ಗತಿ, ಸಮಾಜ ಸುಧಾರಿಸಲು ಬೇಕಾದ ಸರಕುಗಳು, ಗಟ್ಟಿತನ, ಎಲ್ಲದರ ಬಗ್ಗೆ ಮನಬಿಚ್ಚಿ ಮಾತಾದವು.ಛ ಜೀವ ಚಡಪಡಿಸುತ್ತಾ ನೋವಿನಿಂದ ಚರ್ಚಿಸಿದೆ. ‌ ನಡುನಡುವೆ ಕಣ್ಣಲ್ಲಿ ನಿದ್ರೆ ತೇಲುತ್ತಿತ್ತು, ಅಲ್ಲಿ ಯವರೆಗೆ ಸ್ವಲ್ಪ ನಿದ್ರೆ, ಮತ್ತೆ ಎಚ್ಚರ, ಮತ್ತೆ ಮಾತು, ನಮ್ಮೆದುರಿಗೆ ಇದ್ದ ಒಬ್ಬ ಸುಂದರ ನಗುಮುಖದ ಬಾಲಕ ಫೋನಿನಲ್ಲಿ ಏನು ಕೇಳುತ್ತಾ, ನೋಡುತ್ತಿದ್ದ ,ಲೀಲಾಮಹೇಶ್ರು ಅವನನ್ನು ಮಾತಾಡಿಸಿ ಲೋ ಮೊಬೈಲ್ನಲ್ಲಿ ಏನು ಮಾಡ್ತಾ ಛ ಇದ್ದಿ? ಎಂದ್ರು, ಹಾಗೆ ಮಾತು ಅವನೊಂದಿಗೆ ಶುರುವಾಯಿತು , ಕೈಸಾ ಪಡ್ನೇಕಾ, ಕೈಸ ಜೀನೆಕಾ,ಕೈಸಾ ಜೀವನ ಸುಂದರ ಕರ್ನೆಕಾ,ವಾಟ್ ಈಸ್ ಇವರ್ ಎಮ್? ಎಲ್ಲಾ ಉಪನ್ಯಾಸ ನನ್ನಿಂದ ಜರುಗಿತು. ಅವರೆಲ್ಲ ಅಂದುಕೊಂಡಿರಬೇಕು, ಇವರದೇನು ತಲೆನೋವು ಅಂತ. ತುಂಬಾ ಮಾತಾಡಿದೆವು. ಒಂದೇ ಮನೆಯವರೆಂಬ ಭಾವ ಬಾರದೆ ಇರಲಿಲ್ಲ .ಮಹೇಶ್ವರ ಧರ್ಮಪತ್ನಿ ಮಾಡಿಕೊಟ್ಟ ಚಪಾತಿ ಕೊಬ್ಬರಿ ಚಟ್ನಿ, ಜೊತೆ ನೀರ ಸೌತೆಕಾಯಿ, ಖರ್ಜೂರ, ಸೇಬು ತಿಂದೆವು. ತುಂಬಾ ರುಚಿ ಹತ್ತಿತು. ಹಸಿದ ಹೊಟ್ಟೆಗೆ ಎಲ್ಲಾ ರುಚಿ ಎಂಬಂತಿತ್ತು. ನಡು ನಡುವೆ ನಿದ್ರೆ, ತೂಕಡಿಕೆ ,ಆ ಕಡೆ, ಈ ಕಡೆ ,ಕಾಲಲ್ಲಿ ಮಲಗಿದವರಿಗೆ ಕಾಲು ತಾಕದಂತೆ ನೋಡಿಕೊಳ್ಳುವುದು, ಕುಂತ ಜಾಗೆ ಬಿಟ್ಟು ಅಲುಗಾಡಲಿಲ್ಲ. ಮತ್ತೆ ನಡು ನಡುವೆ ಊರುಗಳಿಗೆ, ನಿಲ್ದಾಣಗಳಿಗೆ ನಿಲುಗಡೆ ,ಹತ್ತುವವರು, ಇಳಿಯುವರು, ಕುಳಿತುಕೊಳ್ಳುವವರು, ಜಾಗೆಗೆ ಕಚ್ಚಾಟ, ಒಂದೊ ಎರಡೊ, ದೊಡ್ಡವರು, ಚಿಕ್ಕವರು, ವಯಸ್ಸಾದವರು, ಮಕ್ಕಳು ,ಮರಿ ,ದಾರಿ ಇಲ್ಲದಷ್ಟು ದೊಡ್ಡವರು ಚಿಕ್ಕವರು ಮಕ್ಕಳು ಮರಿ ಹೆಣ್ಣು ಗಂಡು ಭೇದವಿಲ್ಲದೆ ಎಲ್ಲಿ ಬೇಕಂದರಲ್ಲಿ ಜನ ಜನ ಜನ ಜನ, ನಿದ್ರೆ ನಿದ್ರೆ ನಿದ್ರೆ ,ಜುಮು ಜುಮು ಬೆಳಕು, ಮತ್ತೆ ಅದೇ ಛಾಯವಾಲಾಗಳ ಅಬ್ಬರ, ತಿಂಡಿಯ ವಾಸನೆ, ಸುತ್ತಲಿನ ಸೃಷ್ಟಿಯತ್ತ ಕಣ್ಣಾಡಿಸಿದೆ ಹಾಗೆ, ಹಸಿರು ನೋಡುತ್ತಾ ಸಾಗಿತು ಬೆಳಗಾವಿಗೆ  ನಮ್ಮ ರೈಲ್ವೆ  ಪ್ರಯಾಣ  ಪ್ರಯಾಸ ಆದರೂ, ಇಳಿಯಲು ಮನಸ್ಸಿಲ್ಲ, ಭಾರವಾದ ಹೃದಯದಿಂದ ಇಳಿತಾ , ಪರಿಚಯವಾದವರೆಲ್ಲರ ಫೋನ್ ನಂಬರ್ಗಳನ್ನು ತೆಗೆದುಕೊಂಡು, ತುಂಬಾ ಅನುಭವವಾದವರಂತೆ ನಮ್ಮ ಭಾವವಿತ್ತು. ಆ ಪುಟ್ಟ ಬಾಲಕ ಪ್ರೀತಂ ನಗೆ ಬೀರುತ್ತಾ ಸಿಹಿ ಮಾತುಗಳ ಆಡುತ್ತಿದ್ದರೆ ಕೇಳುತ್ತಲೇ ಇರಬೇಕೆಂದು ಎನಿಸುತ್ತಿತ್ತು. ಕಷ್ಟಕರವಾದ ಪಯಣ ಎಂದೆನಿಸಿದರೂ ಉತ್ತಮ ಅನುಭವ ನಮಗೆ ನೀಡಿತ್ತು. ಹೊಸ ಹೊಸ ಮನಸ್ಸಿನ ಜನಗಳ ಒಡನಾಟ  ವಿಶೇಷ ಅನುಭವ  ಪಡೆದಂತಾಯಿತು.
 ಬೆಳಗಾವಿ ಸ್ಟೇಷನ್ ಬಂದಿತು ಇಳಿದು ಮತ್ತೆ ಅದೇ ಜೋಶಿಯವರ ಭಾರಿ ವಾಹನದಲ್ಲಿ ಎಲ್ಲ ಮೆಲಕು ಹಾಕುತ್ತಾ ಮನೆ ತಲುಪಿದೆವು.


ಡಾ ಅನ್ನಪೂರ್ಣ ಹಿರೇಮಠ

2 thoughts on “ಒಂದು ಪಯಣದ ಕತೆ…ಅನ್ನಪೂರ್ಣ ಹಿರೇಮಠ

  1. ಸೂಪರ್ ಸೂಪರ್ ಲೇಖನ

    ನಿಮ್ಮ ಬರವಣಿಗೆಯ ಕೌಶಲ್ಯಕ್ಕೆ ನಮೋ

  2. ಚನ್ನಾಗಿ ಬಂದಿದೆ… ಆತ್ಮಪೂರ್ವಕ ಅಭಿನಂದನೆಗಳು ಕವಯಿತ್ರಿ ಹಾಗೂ ಕಥೆಗಾರ್ಥಿ… ಶರಣಾರ್ಥಿ..!

Leave a Reply

Back To Top