ಬಾಲಕಾರ್ಮಿಕ ಪದ್ದತಿ ತೊಲಗಲಿ..!ಶ್ರೀನಿವಾಸ್ ಎನ್.ದೇಸಾಯಿ

ಇವತ್ತು ಅಂದರೆ ಜೂನ್‌ 12 ರಂದು ಆಚರಿಸಲ್ಪಡುವ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯ ನಿಮಿತ್ತವಾಗಿ ಈ ಲೇಖನ..

ಶ್ರೀನಿವಾಸ್ ಎನ್. ದೇಸಾಯಿ

ಬಾಲಕಾರ್ಮಿಕ ಪದ್ದತಿ ತೊಲಗಲಿ..!

ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಅತ್ಯಂತ ಆಹ್ಲಾದಕರವಾದ ಹಾಗೂ ಉತ್ಸುಕವಾದ ಪ್ರಮುಖ ಘಟ್ಟ ಅಂದ್ರೆ ಅದು ಬಾಲ್ಯದ ಸುಂದರ ದಿನಗಳು. ಇಂತಹ ಶ್ರೇಷ್ಠ ದಿನಗಳಲ್ಲಿ ಮಗು ಮುಖ್ಯವಾಗಿ ಓದು- ಬರಹದೊಂದಿಗೆ ಜ್ಞಾನ ಸಂಪಾದನೆ ಮಾಡಿ ಸತ್ಪ್ರಜೆಯಾಗಬೇಕಾದದ್ದು ಅತ್ಯಾವಶ್ಯಕ. ಒಬ್ಬ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ಈ ಬಾಲ್ಯದ ದಿನಗಳು ಭದ್ರ ಬುನಾದಿಯನ್ನು ಹಾಕಿಕೊಡುತ್ತವೆ. ಆದರೆ ಇಂತಹ ವಯಸ್ಸಿನಲ್ಲಿ ಮಗು ಕೂಲಿ ಕೆಲಸಗಾರನಾಗಿಯೋ ಅಥವಾ ಬಾಲಕಾರ್ಮಿಕನಾಗಿಯೋ ಕಾಲ ಕಳೆದರೆ ಅವನ ಜೀವನ ನಿಜಕ್ಕೂ ಅಯೋಮಯವಾಗುವುದರಲ್ಲಿ ಸಂದೇಹವೇ ಇಲ್ಲ. ಹೀಗಾಗಿಯೇ ಇಂಗ್ಲೀಷಿನಲ್ಲಿರುವ “Student life is golden life” ಎನ್ನುವ ಜನಜನಿತ ಗಾದೆ ಮಾತು ಅಕ್ಷರಶಃ ಸತ್ಯವಾಗಿದೆ.
ಬಾಲಕಾರ್ಮಿಕ ಅಂದ್ರೆ ಯಾರು..? ಎನ್ಮುವ ಪ್ರಶ್ನೆಗೆ ಸುಲಭವಾದ ಉತ್ತರವೇನೆಂದರೆ “16 ವರ್ಷದೊಳಗಿನ ಮಕ್ಕಳು ದಿನನಿತ್ಯದ ಹಾಗೂ ದೀರ್ಘಾವಧಿ ದುಡಿಮೆಯ ಕೆಲಸವನ್ನಾಗಲಿ ಅಥವಾ ಉದ್ಯೋಗವನ್ನಾಗಲಿ ಕಾರ್ಖಾನೆಗಳಲ್ಲಿ, ಗಣಿಗಾರಿಕೆಯಲ್ಲಿ, ಕಲ್ಲು ಒಡೆಯುವ ಕೆಲಸ, ಕೃಷಿ- ಬೇಸಾಯದ ವ್ಯವಹಾರಗಳಲ್ಲಿ ಪೋಷಕರಿಗೆ ಸಹಾಯ ಮಾಡುವುದು,ತಮ್ಮದೇ ಸ್ವಂತ ಹಣದೊಂದಿಗೆ ವ್ಯಾಪರ ಮಾಡುವುದು ಅಥವಾ ಇನ್ನಿತರ ವಿಲಕ್ಷಣ ಕೆಲಸಗಳನ್ನು ಮಾಡುತ್ತಿದ್ದರೆ ಅಂತಹ ಮಗುವನ್ನು ಬಾಲಕಾರ್ಮಿಕ ಎಂದು ಕರೆಯುತ್ತಾರೆ “.


ಪ್ರಪಂಚದ ಅನೇಕ ದೇಶಗಳಲ್ಲಿ ನಿಗದಿತ ವಯಸ್ಸಿಗಿಂತ ಕೆಳ ವಯಸ್ಸಿನ ಮಕ್ಕಳನ್ನು ದುಡಿಸಿಕೊಳ್ಳುವುದು ಶೋಷಣೀಯವಾದದ್ದು ಮತ್ತು ಕ್ರೌರ್ಯದ ಕೆಲಸವೆಂದು ಪರಿಗಣಿಸಿಲಾಗಿದೆ.(ಮನೆಗೆಲಸ ಅಥವಾ ಶಾಲೆಗೆ ಸಂಭಂಧಿಸಿದ ಕೆಲಸಗಳನ್ನು ಹೊರತುಪಡಿಸಿ). ಉದ್ಯೋಗಿಯೊಬ್ಬನು ನಿಗದಿತ ಕೆಳವಯಸ್ಸಿನ ಮಕ್ಕಳನ್ನು ಬಾಡಿಗೆಗೆ ತೆಗೆದುಕೊಳ್ಳುವುದನ್ನು ಸಾಮಾನ್ಯವಾಗಿ ಒಪ್ಪಿಕೊಳ್ಳಲಾಗುವುದಿಲ್ಲ.
ಈ ನಿಗದಿತ ಕಿರಿ ವಯಸ್ಸು ದೇಶ ಮತ್ತು ಕೆಲಸದ ವಿವಿಧ ಮಾದರಿಯ ಮೇಲೆ ಅವಲಂಬಿತವಾಗಿದೆ. 1973ರ ಅಂತರರಾಷ್ಟ್ರೀಯ ಕಾರ್ಮಿಕ ಸಂಘದ ಕಿರಿ ವಯಸ್ಸಿನ ಪದ್ಧತಿಯನ್ನು, ಅಂದರೆ ಸುಮಾರು 14ರಿಂದ 16ರ ವಯಸ್ಸಿನ ಒಳಗಿನ ಮಕ್ಕಳನ್ನು ಸ್ವಾಧೀನಕ್ಕೆ ಒಳಪಡಿಸಿಕೊಳ್ಳಬಹುದೆಂಬ ನೀತಿಯನ್ನು ಅಮೆರಿಕಾವು ಮೊದಲಗೆ ಅಳವಡಿಸಿಕೊಂಡಿದೆ. ಅಮೆರಿಕಾದ ಬಾಲ ಕಾರ್ಮಿಕ ಕಾಯಿದೆಗಳ ಪ್ರಕಾರ ಪೋಷಕರ ಸಹಕಾರವಿಲ್ಲದೆ ಮತ್ತು ಯಾವುದೇ ನಿರ್ಬಂಧವಿಲ್ಲದೆ ಉದ್ಯಮದಲ್ಲಿ ದುಡಿಯುವ ನಿಗದಿತ ಕಿರಿ ವಯಸ್ಸನ್ನು16ಎಂದು ಪರಿಗಣಿಸಿವೆ.
ವಿಶ್ವ ಬ್ಯಾಂಕ್ ವರದಿಯ ಪ್ರಕಾರ, ಪ್ರಪಂಚದಲ್ಲಿ 1960 ರಿಂದ ಇತ್ತೀಚಿನ ಮಧ್ಯದಲ್ಲಿ ಬಾಲ ಕಾರ್ಮಿಕ ಘಟನೆಗಳು ಶೇಕಡಾ 25 ರಿಂದ 10ಕ್ಕೆ ಇಳಿದಿದೆ ಎನ್ನುವುದು ನೆಮ್ಮದಿಯ ಸಂಗತಿಯಾದರೂ ಕೂಡಾ ಇದು ಸಂಪೂರ್ಣವಾಗಿ ತೊಲಗಬೇಕು ಎಂಬುದು ನಮ್ಮಯ ಒಕ್ಕೊರಲ ಮನವಿಯಾಗಿದೆ.


ಬಾಲ ಕಾರ್ಮಿಕ ಪದ್ಧತಿಯು ಪ್ರಪಂಚದ ಕೆಲವು ಭಾಗಗಳಲ್ಲಿ ಇಂದಿಗೂ ಕೂಡಾ ಸಾಮಾನ್ಯವಾಗಿದೆ. ಬಾಲಕಾರ್ಮಿಕರುಎಲ್ಲಾ ಕೆಲಸಗಳನ್ನು ಎಲ್ಲಾ ಋತುಗಳಲ್ಲಿಯೂ ಮಾಡುತ್ತಿದ್ದಾರೆ. ಅವರು ಕನಿಷ್ಠ ವೇತನಕ್ಕಾಗಿ ತಮ್ಮ ಅತ್ಯಮೂಲ್ಯವಾದ ಬಾಲ್ಯದ ದಿನಗಳನ್ನು ವಿದ್ಯಾಭ್ಯಾಸಕ್ಕಾಗಿ ಮೀಸಲಿಡದೆ ಹಗಲಿರುಳು ದುಡಿಯುತ್ತಿದ್ದಾರೆ. ಎಲ್ಲಿಯವರೆಗೆ ಕುಟುಂಬದಲ್ಲಿ ಬಡತನವಿರುತ್ತದೋ ಅಲ್ಲಿಯವರೆಗೂ ಬಾಲಕಾರ್ಮಿಕ ಪದ್ದತಿಯು ಇದ್ದೆ ಇರುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಯುನಿಸೆಫ್ ಪ್ರಕಾರ, ಪ್ರಪಂಚದಾದ್ಯಂತ 5 ರಿಂದ 14 ವಯಸ್ಸಿನ ಒಳಗಿನ ಬಾಲಕಾರ್ಮಿಕರು ಸುಮಾರು158 ಮಿಲಿಯನ್ ಗಳಷ್ಟು ಇದ್ದಾರೆಂದು ಅಂದಾಜು ಮಾಡಲಾಗಿದೆ. ಮನೆಗೆಲಸದ ಸೇವಕರನ್ನು ಹೊರತುಪಡಿಸಿ ಯುನೈಟೆಡ್ ನೇಷನ್ಸ್ ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಘ ಬಾಲಕಾರ್ಮಿಕ ಪದ್ದತಿಯನ್ನು ಶೋಷಣೀಯ ಎಂದು ಪರಿಗಣಿಸಿದೆ. ಯುಏನ್ ನ ಕರಾರಿನಂತೆ ಮಕ್ಕಳ ಹಕ್ಕುಗಳ ಒಪ್ಪಂದದ 32ನೇ ನಿಬಂಧನೆಯಲ್ಲಿ ಅರ್ಥಿಕ ಶೋಷಣೆಯಿಂದ ಮಕ್ಕಳನ್ನು ರಕ್ಷಿಸುವುದು ಮತ್ತು ಅವರು ನಿರ್ವಹಿಸುವ ಯಾವುದೇ ಕೆಲಸ ಅಪಾಯಕಾರಿಯಾಗಿದ್ದಲ್ಲಿ ಅಥವಾ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾದಲ್ಲಿ, ಮಕ್ಕಳ ಆರೋಗ್ಯಕ್ಕೆ ತೊಂದರೆಯಾದಲ್ಲಿ ಅಥವಾ ಮಕ್ಕಳ ದೈಹಿಕ, ಮಾನಸಿಕ, ಆಧ್ಯಾತ್ಮಿಕ, ನೈತಿಕ ಅಥವಾ ಸಾಮಾಜಿಕ ಬೆಳವಣಿಗೆಯು ಮಕ್ಕಳ ಹಕ್ಕುಗಳೆಂದು ಅನೇಕ ರಾಷ್ಟ್ರಗಳು ಗುರುತಿಸಿವೆ. ಹಾಗಿದ್ದಾಗ್ಯೂ ಪ್ರಪಂಚದಾದ್ಯಂತ ಸುಮಾರು 250 ಮಿಲಿಯನ್ ಮಕ್ಕಳು ದುಡಿಯುತ್ತಿದ್ದಾರೆಂಬ ಸಂಗತಿ ಅರಗಿಸಿಕೊಳ್ಳಲಾಗದ ಕಹಿ ಸತ್ಯವಾಗಿದೆ.
ಪ್ರತಿವರ್ಷ ಜೂನ್ 12 ನೇ ತಾರೀಖಿನಂದು ಆಚರಿಸುವ ಈ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯು ಉಳಿದೆಲ್ಲ ದಿನಾಚರಣೆಯಂತೆ ನೆಪಮಾತ್ರಕ್ಕೆ ಆಚರಿಸುವಂತಾಗಬಾರದು. ಇದರ ಕಾರ್ಯಾನುಷ್ಠಾನ ಕ್ರಮಬದ್ಧವಾಗಿ ಅನುಪಾಲನೆಯಾಗಬೇಕಾಗಿದೆ. ಇದನ್ನು ಬೇರುಸಮೇತ ಕಿತ್ತೆಸೆಯುವಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಿಬೇಕಾಗಿದೆ. ಇದಕ್ಕಾಗಿ ಇನ್ನೂ ಹಲವಾರು ಕಠಿಣ ಕಾಯ್ದೆ ಕಾನೂನುಗಳು ಜಾರಿಗೆ ಬರಬೇಕಾಗಿದೆ. ಪ್ರಾಥಮಿಕ ಶಾಲೆಯಲ್ಲಿಯೇ ಮಕ್ಕಳಿಗೆ ಬಾಲಕಾರ್ಮಿಕ ಪದ್ದತಿಯ ಬಗ್ಗೆ ಜಾಗೃತಿ ಮೂಡಿಸಬೇಕಾದದ್ದು ಅತ್ಯಗತ್ಯವಾಗಿದೆ. ಮಕ್ಕಳಿಗೆ ಇದರ ಬಗ್ಗೆ ಸೂಕ್ತ ತಿಳುವಳಿಕೆ, ಜ್ಞಾನ ನೀಡುವ ಪಠ್ಯವಸ್ತು ಜಾರಿಗೆ ಬರಬೇಕಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಾ ಬಾಲಕಾರ್ಮಿಕ ಪದ್ದತಿಯನ್ನು ಹೊಗಲಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ಕರ್ತವ್ಯ ನಿರ್ವಹಿದ್ದಾದಲ್ಲಿ ಖಂಡಿತವಾಗಿಯೂ ಮಕ್ಕಳ ಉಜ್ವಲ ಭವಿಷ್ಯದಲ್ಲಿ ಬೆಳಕು ಮೂಡುವುದರಲ್ಲಿ ಸಂಶಯವೇ ಇಲ್ಲ. ಅವರಿವರೆನ್ನದೆ ಎಲ್ಲ ಭಾರತೀಯರೂ ಒಗ್ಗಟ್ಟಾಗಿ ಈ ಬಾಲಕಾರ್ಮಿಕ ಪದ್ದತಿಯನ್ನು ತೊಡೆದು ಹಾಕುವಲ್ಲಿ ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ಕೆಲಸ ಮಾಡೋಣ ಹಾಗೂ ಮುಗ್ಧ ಮಕ್ಕಳ ಕಲಿಕೆಗೆ ದಾರದೀಪವಾಗಿ ಅವರ ಭವಿಷ್ಯದಲ್ಲಿ ಜ್ಞಾನದ ಜ್ಯೋತಿಯಾಗೋಣ ಎಂದು ಪ್ರತಿಜ್ಞೆಗೈಯ್ಯೋಣ ಬನ್ನಿ…!!!

ಶ್ರೀನಿವಾಸ.ಎನ್.ದೇಸಾಯಿ

Leave a Reply

Back To Top