ಅಂಕಣ ಸಂಗಾತಿ

ಸುತ್ತ-ಮುತ್ತ

ಸುಜಾತಾ ರವೀಶ್

ಬಸ್_ಸ್ಟಾಂಡ್

ಬನ್ನಿ ಸ್ವಾಮಿ ಇಲ್ಲೇ ಇಲ್ಲೇ ಕೂತ್ಕೊಳಿ. ಗಲೀಜು
ಅಂತೀರಾ? ನಮ್ಮ ಜನಕ್ಕೆ ಯಾವಾಗ ಬುದ್ಧಿ ಬರುತ್ತೆ ಹೇಳಿ? ಸುತ್ತ ಯಾರೂ ಇಲ್ಲ ಅಂತ ನೋಡ್ತಿದ್ದೀರಾ? ನೀವು ನಿಂತ ಜಾಗದಿಂದ ಹಿಂದೆ ನೋಡಿ . ಬಣ್ಣವಿರದ ಸೀಳು ಬಿಟ್ಟ “ಬಸರಳ್ಳಿ ಬಸ್ ನಿಲ್ದಾಣ” ಅಂತ ಹೆಸರಿದೆಯಲ್ಲ ಅದೇ ಸ್ವಾಮಿ ನಾನು. ನಾನೇ ಮಾತಾಡ್ತೊರೋದು. ದೆವ್ವ ಭೂತ ಅಂತೆಲ್ಲ ಹೆದರ್ಕೋಬೇಡಿ . ಮಳೆ ಶುರುವಾಯ್ತು . ಒಳಗೆ ಬರಲೇ ಬೇಕಾಯ್ತು ನೋಡಿ ನೀವು . ನಂಗೂ ಇವತ್ತು ಮಾತನಾಡುವ ಮೂಡ್ . ಬನ್ನಿ ಮಳೆ ನಿಂತು ನಿಮ್ಮ ಬಸ್ ಬರುವ ತನಕ ನನ್ನ ಕಥೆ ಕೇಳಿ.

ಸುತ್ತ ನಾಲ್ಕು ಹಳ್ಳಿ ಹತ್ತಿರದ ಬಸರಳ್ಳಿ ಇದೆಲ್ಲಕ್ಕೂ ಕೇಂದ್ರಸ್ಥಾನ ಇದು. ನಾನು ಹೇಳ್ತಿರೋದು ಮೂವತ್ತು ವರ್ಷದ ಹಿಂದಿನ ಮಾತು . ಮನೆಗೊಂದು ಬೈಕು ಇರದ ಕಾಲ . ಹಾಗಾಗಿ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಬರುವ ಬಸ್ ಮೇಲೆ ಎಲ್ಲರೂ ಅವಲಂಬಿಸಿದ್ದರು. ಆ ಸಮಯದ ಪುಡಾರಿಯ ಮುತುವರ್ಜಿಯಿಂದ ಇಲ್ಲಿ ಬಸ್ ಸ್ಟಾಂಡ್ ಕಟ್ಟುವ ಅನುಮೋದನೆ ದೊರೆತು ನನ್ನ ಜನ್ಮವಾಯಿತು. ಹೊಸ ಕಟ್ಟಡ ಸುಣ್ಣಬಣ್ಣ ನಾನು ಸುಂದರವಾಗೇ ಇದ್ದೆ ಆಗ. ಆರಂಭೋತ್ಸವನೂ ಆಯಿತು . ಅಲ್ಲಿಂದ ಇಲ್ಲಿ ನಡೆಯುತ್ತಿರುವ ಎಲ್ಲಾ ಘಟನೆಗಳಿಗೂ ನಾನೇ ಮೂಕಸಾಕ್ಷಿ ನೋಡಿ .

ಖುಷಿಯ ಸಂದರ್ಭಗಳು ಯಾವಾಗ ಅಂತೀರಾ? ಮುದ್ದು ಪುಟ್ಟ ಮಕ್ಕಳು ಶಾಲೆಗೆ ಹೋಗ್ತವಲ್ಲ ಆಗ ದಾವಣಿ ಹುಡುಗಿಯರು ಕಾಲೇಜಿಗೆ ಮಲ್ಲಿಗೆ ಮುಡಿದು ಪಿಸಪಿಸ ಮಾತಾಡಿ ಕಿಸಕಿಸ ನಗುತ್ತಾ ಹೋಗುವಾಗ , ಇಲ್ಲಿ ನಡೆದ ಒಂದಷ್ಟು ಮನಸು ನಯನಗಳ ಮಿಲನಗಳಿಗೆ, ಊರ ಹೆಣ್ಣು ಮಕ್ಕಳು ಮದುವೆಯಾಗಿ ಹೋಗುವಾಗ ಮತ್ತೆ ಹೆರಿಗೆಯಾಗಿ ಮಕ್ಕಳನ್ನು ಹೊತ್ತು ಹೋಗುವಾಗಲೆಲ್ಲ ನನ್ನದೇ ಒಡಲಕುಡಿ ಗಳೇನೋ ಅನಿಸುವಷ್ಟು ಸಂತಸವಾಗತ್ತೆ. ಊರ ಗಂಡುಮಕ್ಕಳು ದೊಡ್ಡ ಓದಿ ಒಳ್ಳೆ ಕೆಲಸ ಹಿಡಿದು ಪಟ್ಟಣ ಸೇರಿದವರು ಯಾವಾಗಲಾದರೂ ಕಾರಿನಲ್ಲಿ ಬಂದು ಇಲ್ಲಿ ನಿಲ್ಲಿಸಿ ತಮ್ಮ ಮಕ್ಕಳಿಗೆ ನನ್ನ ತೋರಿಸಿ ನಾನು ಇಷ್ಟ ನೇ ಕ್ಲಾಸ್ ನಲ್ಲಿದ್ದಾಗ ಇದನ್ನು ಕಟ್ಟಿದ್ದು ಅಂತ ಪರಿಚಯಿಸಿದಾಗಲೂ ಅಷ್ಟೇ ಖುಷಿ. ಸಂತೆಗೆ, ಬೇರೆ ಊರಿಗೆ ಹೋಗುವ ಅಜ್ಜಿ ತಾತ ನಡು ವಯಸ್ಸಿನ ಹೆಂಗಸರು ಪಟ್ಟಾಂಗ ಹೊಡೆಯುವಾಗ ಅವರ ವಿಷಯ ಎಲ್ಲಾ ತಿಳಿದು ಕೊಂಡಿರ್ತಿನೀ . ಮತ್ತೆ ಇಂತಹವರು ಸತ್ತರು ಅನ್ನೋದು ಬಂದ ಸಂಬಂಧಿಕರು ಊರಿಗೆ ಹೊರಡುವಾಗ ನನಗೆ ತಿಳಿದು ಬಿಡುತ್ತೆ . ಒಂದೆರಡು ಹನಿ ಕಣ್ಣೀರು ಹಾಕುವ ಅನ್ನಿಸುತ್ತೆ.

ಪ್ರೇಮ ಪ್ರಸಂಗಗಳ ಬಗ್ಗೆ ಅಂತ ಹೇಳಿದೆನಲ್ಲ ಎಂದೂ ಹಳೆಯದಾಗದ್ದು ಅಂದರೆ ಇದೇ ನೋಡಿ . ಲಂಗ ಬ್ಲೌಸ್, ಲಂಗ ದಾವಣಿ ಹುಡುಗಿಯರದು ಆಯ್ತು, ಚೂಡಿದಾರ್ಗಳ ಷೋಡಷಿಯರದು ಆಯ್ತು ಈಗ ಪ್ಯಾಂಟು ಶರ್ಟು ಗಳ ತರುಣಿಯರು! ಆದರೆ ಈ ಪ್ರೀತಿಗೆ ಬೀಳೋದು ಮಾತ್ರ ಕಡಿಮೆಯಾಗಲೇ ಇಲ್ಲ . ಅಷ್ಟರಲ್ಲಿ ಎಷ್ಟೋ ಕೆಲವು ಹಂತಗಳಲ್ಲಿ ಮುರಿದುಬಿದ್ದವು . ಮನೆಯವರ ಒತ್ತಾಯಕ್ಕೆ ಬೇರೆಯಾದದ್ದು ಕೆಲವು . ಅವರೆಲ್ಲ ನನ್ನನ್ನು ಅವರ ಪ್ರೀತಿ ಪ್ರತೀಕ ಅನ್ಕೊಂಡಿರೋದು ನನ್ನ ಹೆಮ್ಮೆಯ ವಿಷಯ. ಒಂದು ಸಂಗತಿ ಊರಿಂದ ನನ್ನೆದುರಲ್ಲೇ ಓಡಿಹೋದ ಒಂದು ಜೋಡಿ ಈಗ ಮೊಮ್ಮಗನ ಜೊತೆ ಮೊದಲ ಬಾರಿ ಊರಿಗೆ ಬಂದು ಅವರ ಮಕ್ಕಳಿಗೆ ನನ್ನ ಪರಿಚಯ ಮಾಡಿಸಿದರು ನೋಡಿ ಅವರ ಖುಷಿಗೆ ನನಗೆ ಆನಂದ ಭಾಷ್ಪ ಬಂತು.

ಇನ್ನು ನನ್ನ ಕಣ್ಣ ಮುಂದಿನ ಮಕ್ಕಳು ಶೋಕಿಗೆ ಬಿದ್ದು ಬೀಡಿ ಸಿಗರೇಟು ಎಣ್ಣೆ ಇಸ್ಪೀಟಾಡಿಕೊಂಡು ನನ್ನನ್ನೇ ಉಪಯೋಗಿಸಿದಾಗ ಮೈ ಉರಿಯತ್ತೆ. ಏನು ತಾನೆ ಮಾಡಲಿ ? ಇದೇ ಈ ಪಾಪಿ ಕಣ್ಣಿಂದ ಒಂದು ಅತ್ಯಾಚಾರ ಒಂದು ಕೊಲೆ ನೋಡಿಬಿಟ್ಟಿದ್ದೀನಿ ಸ್ವಾಮಿ. ಪ್ರಾರಬ್ಧ ಕರ್ಮ.

ಈಗ ಬಿಡಿ, ಮನೆಯಲ್ಲಿ ಎಲ್ಲರ ಬಳಿ ದ್ವಿಚಕ್ರವಾಹನ . ಯಾರೂ ಬಸ್ಸಿಗೆ ಹೆಚ್ಚು ಬರಲ್ಲ. ಪರಸ್ಥಳದಿಂದ ಬಂದವರೂ ನನ್ನ ಕಂಡರೆ ಅಸಹ್ಯ ಪಟ್ಟುಕೊಂಡು ದೂರದಲ್ಲೇ . ನಾನೂ ಹಾಗೆ! ಸೀಳಿ ಬಿದ್ದ ಕಟ್ಟಡ, ಸುಣ್ಣ ಬಣ್ಣ ಕಾಣದ ಗೋಡೆಗಳು, ಸೋರುವ ಛಾವಣಿ ಎಲ್ಲದಕ್ಕೂ ಕಳಸವಿಟ್ಟಂತೆ ಹರಡಿ ಬಿದ್ದಿರುವ ಕಸಕಡ್ಡಿ ಗಲೀಜು. ಯಾರಿಗೆ ತಾನೆ ಮನಸ್ಸು ಬರುತ್ತೆ ಹೇಳಿ? ನನಗೂ ಈ ಜೀವನ ಸಾಕಾಗಿ ಹೋಗಿದೆ ಈ ಬಾರಿ ಏನಾದರೂ ಜೋರು ಮಳೆ ಬಂದರೆ ನನ್ನ ಸಾವು ಖಂಡಿತ . ನಾನು ಸತ್ತರೆ ಬೇಸರ ಇಲ್ಲ, ಅಳೋರೂ ಇಲ್ಲ ಏನೂ ವ್ಯತ್ಯಾಸ ಆಗಲ್ಲ ಬಿಡಿ .

ಮಳೆ ನಿಲ್ಲುತ್ತಾ ಇದೆ ಬಸ್ಸು ಬರ್ತಾ ಇರೋ ಹಾಗೆ ಕಾಣತ್ತೆ. ವರ್ಷಗಳ ಬಳಿಕ ನನ್ನ ಗೋಳು ಸಂಕಟ ಹೇಳಿಕೊಳ್ಳಕ್ಕೆ 1 ಕಿವಿ ಸಿಕ್ತು. ಬರ್ತಿರಾ ಸ್ವಾಮಿ ಜೋಪಾನವಾಗಿ ಹೋಗಿಬನ್ನಿ. ಒಳ್ಳೆಯದಾಗ್ಲಿ ನಮಸ್ಕಾರ .


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ
ಬಯಕೆ ಲೇಖಕಿಯವರದು

One thought on “

  1. ಸೂಕ್ತ ಸುಂದರ ಪಟಗಳೊಂದಿಗೆ ಪ್ರಕಟಿಸಿದ ಸಂಪಾದಕರಿಗೆ ಅನಂತ ಧನ್ಯವಾದಗಳು .

    ಸುಜಾತಾ ರವೀಶ್

Leave a Reply

Back To Top