ಅಂಕಣ ಸಂಗಾತಿ
ಗಜಲ್ ಲೋಕ
ರತ್ನರಾಯಮಲ್ಲ
ಗಾಯಕವಾಡ ಅವರ ಗಜಲ್ ಗಳಲ್ಲಿ
ಪ್ರತಿಭಟನೆಯ ಕಾವು
ಎಲ್ಲರಿಗೂ ನಮಸ್ಕಾರಗಳು..
ಹೇಗಿದ್ದೀರಿ, ಏನು ಓದ್ತಾ ಇದ್ದೀರಿ; ಏನು ಬರೀತಾ ಇದ್ದೀರಿ.. ‘ಗಜಲ್’ ಅಂತೀರಾ, ಸಂತೋಷ. ಪ್ರತಿ ವಾರದಂತೆ ಈ ವಾರವೂ ಸಹ ಗಜಲ್ ಗುಲ್ಜಾರ್ ನ ಒಂದು ಹೂವಿನೊಂದಿಗೆ ತಮ್ಮ ಮುಂದೆ ಬರುತ್ತಿರುವೆ. ಆ ಹೂವಿನ ಪರಿಮಳ ತಮ್ಮ ಮನಸ್ಸಿಗೆ ಮುದ ನೀಡುತ್ತದೆ ಎಂಬ ವಿಶ್ವಾಸವಿದೆ. ಬನ್ನಿ, ಗಜಲ್ ಗುಲ್ಜಾರ್ ನಲ್ಲಿ ಒಂದು ಸುತ್ತು ವಿಹರಿಸಿ ಬರೋಣ…!!
“ಆ ರಾತ್ರಿಗಳು ಚಂದ್ರನೊಂದಿಗೆ ಹೋದವು ಆ ಮಾತುಕತೆಗಳು ಚಂದ್ರನೊಂದಿಗೆ ಹೋದವು
ಈಗ ದುಃಖದ ಸೂರ್ಯನು ತಲೆಯ ಮೇಲೆ ಇರುವಾಗ ಸಂತೋಷದ ಕನಸು ಹೇಗೆ ಕಾಣಲಿ”
-ಇಬ್ನ್-ಎ-ಇನ್ಶಾ
ನಮ್ಮ ಸಮಕಾಲೀನ ಬದುಕು ಇದೀಗ ತಾನೆ ಉದ್ಭವವಾದುದಲ್ಲ. ಅದರ ಹಿಂದೆ ಅನುಪಮವಾದ ಇತಿಹಾಸವೇ ಇದೆ. ನಮ್ಮ ಸಾಮಾಜಿಕ ಸ್ವರೂಪಕ್ಕೆ ಇಂದಿನ ಅಂಶಗಳೊಂದಿಗೆ ಹಿಂದಿನ ಇತಿಹಾಸದ ಅಚ್ಚೂ ಬಿದ್ದಿದೆ. ಧರ್ಮ, ಪ್ರಭುತ್ವ, ಆರ್ಥಿಕ ವ್ಯವಸ್ಥೆ, ದುಡಿಮೆ, ಸಾಮಾಜಿಕ ಸ್ಥಿತಿಗತಿ ಇವೆಲ್ಲವೂ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಜೀವನ ಎನ್ನುವುದು ಒಂದು ಸಮಾಜದ ಬೇರೆ ಬೇರೆ ಅಂಗಗಳಿಂದ ಪ್ರತ್ಯೇಕಗೊಂಡ ಸ್ವತಂತ್ರ ಘಟಕವಲ್ಲ; ರಾಜಕೀಯ, ಸಾಂಸ್ಕೃತಿಕ, ಆರ್ಥಿಕ ಸ್ಥಿತಿಗಳು ರೂಪಿಸಿದ, ರೂಪಿಸುತ್ತಿರುವ ಸಂಕೀರ್ಣಾಕೃತಿ. ಮನುಷ್ಯನ ಬದುಕು ಬಲು ವಿಚಿತ್ರವಾದದ್ದು; ಈ ವೈಚಿತ್ರ್ಯ ನಿಗೂಢತೆಯ ರೂಪದಲ್ಲಿ ನಮ್ಮನ್ನು ಕಾಡಿಸುತ್ತ, ಕೆರಳಿಸುತ್ತ ಕೊಂಡೊಯ್ಯುತ್ತದೆ. ನಮ್ಮ ಆಸೆ, ಆಕಾಂಕ್ಷೆ, ಆದರ್ಶ, ಅರಿವುಗಳು ಆದಿಯಾಗಿ ಅನೇಕ ಅಂಶಗಳನ್ನು ಬದುಕಿನಲ್ಲಿ ಕಂಡುಕೊಳ್ಳುತ್ತ ಅದಕ್ಕೆ ತಕ್ಕಂತೆ ವೈಯಕ್ತಿಕ ಬದುಕನ್ನು ರೂಪಿಸಿಕೊಳ್ಳುವ ನಿರಂತರ ಯತ್ನದಲ್ಲಿ ಈ ನಿಗೂಢತೆಯನ್ನು ಒಡೆಯುವ, ವಿಸ್ಮಯಗೊಳ್ಳುವ, ಒಂದಾಗುವ ಅಥವಾ ವೇದನೆಯಲ್ಲಿ ಹೊರಳಾಡುವ ಸ್ಥಿತಿಯನ್ನು ಅನುಭವಿಸುತ್ತೇವೆ. ಒಟ್ಟು ಪರಿಸರದ ನಡುವೆ ತನ್ನನ್ನು ತಾನು ತೊಡಗಿಸಿಕೊಳ್ಳುವ ವಿಧಿ ವಿಧಾನದಲ್ಲೇ ಮನುಷ್ಯನೊಬ್ಬ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಾಹಿತಿ ಮತ್ತು ಸಾಹಿತ್ಯದ ಹುಟ್ಟು, ಬೆಳವಣಿಗೆ, ಬದುಕು ಈ ಸಮಾಜದಲ್ಲೆ ಆಗುತ್ತದೆ. ಆದ್ದರಿಂದ ಸಾಹಿತಿ ಸ್ಪಂದಿಸಬೇಕಾದದ್ದು ಈ ಸಮಾಜದ ಬದುಕಿನೊಂದಿಗೆ; ಸುಖ-ಕಷ್ಟಗಳೊಂದಿಗೆ. ಸಮಾಜ ಅನೇಕ ಅನಪೇಕ್ಷಿತ ಸ್ಥಿತಿಗಳ ಸಂಗಮ ಕ್ಷೇತ್ರ. ಜನತೆ ಬದುಕಿನ ಪ್ರತಿ ಕ್ಷಣದ ಜೊತೆಗೂ ಕಾದಾಡುತ್ತಿರುವಾಗ ಇತ್ತ ಕಡೆ ಮಿಡಿಯಬೇಕಾದುದು ಸಾಹಿತ್ಯದ ಮೂಲ ಸೆಲೆಯಾಗಿದೆ. ಈ ದಿಸೆಯಲ್ಲಿ ಸಾಹಿತ್ಯ ಬದುಕಿಗೆ ಸಂಬಂಧಿಸಿರಬೇಕು, ಬದುಕೇ ಸಾಹಿತ್ಯದಲ್ಲಿ ಅಭಿವ್ಯಕ್ತವಾಗಬೇಕು. ಜಾಗತಿಕ ನೆಲೆಯಲ್ಲಿ ಕೋಟ್ಯಂತರ ಹೃದಯಗಳನ್ನು ಬೆಸೆದಿರುವ, ಬೆಸೆಯುತ್ತಿರುವ ಗಜಲ್ ಕಾವ್ಯ ಪ್ರಕಾರವು ಆರಂಭದಲ್ಲಿ ‘ಕಲೆ ಕಲೆಗಾಗಿ’ ಎಂಬ ಸಿದ್ಧಾಂತವನ್ನು ರೂಢಿಸಿಕೊಂಡಿತ್ತಾದರೂ ನಂತರದ ದಿನಗಳಲ್ಲಿ ‘ಕಲೆ ಜೀವನಕ್ಕಾಗಿ’ ಎಂಬುದರತ್ತ ಹೊರಳಿ, ಇಂದು ಜೀವನದ ಅವಿಭಾಜ್ಯ ಅಂಗವಾಗಿ ರಾರಾಜಿಸುತ್ತಿದೆ. ಈ ಮಾರ್ಗದಲ್ಲಿ ಹಲವಾರು ಬರಹಗಾರರು ಗಜಲ್ ಕೃಷಿಯನ್ನು ಮಾಡುತ್ತಿದ್ದಾರೆ. ಅವರಲ್ಲಿ ಭೀಮಶೇನ ಎಮ್. ಗಾಯಕವಾಡ ಅವರೂ ಒಬ್ಬರು.
ಶ್ರೀ ಭೀಮಶೇನ ಎಮ್. ಗಾಯಕವಾಡ ಅವರು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ೧೯೭೦ ರ ಜನೆವರಿ ೧೬ ರಂದು ಶ್ರೀ ಮಲ್ಲಪ್ಪ ಗಾಯಕವಾಡ ಮತ್ತು ಶ್ರೀಮತಿ ಬಸಮ್ಮ ಗಾಯಕವಾಡ ದಂಪತಿಗಳ ಮಗನಾಗಿ ಜನಿಸಿದರು. ಹುಟ್ಟೂರಾದ ರಾಜೇಶ್ವರದಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದು, ಕಲಬುರಗಿಯ ಸರಕಾರಿ ಪದವಿ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದ ಇವರು ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂ.ಎ ಕನ್ನಡ ಸ್ನಾತಕೋತ್ತರ ಪದವಿಯನ್ನು ಮುಗಿಸಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯದಿಂದ ಎಮ್.ಫಿಲ್ ಪದವಿಯನ್ನು ಪೂರೈಸಿದ್ದಾರೆ. ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಶಿಕ್ಷಣ ಮಹಾವಿದ್ಯಾಲಯದಿಂದ ಬಿ.ಇಡಿ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತವಾಗಿ ಇವರು ಬಸವಕಲ್ಯಾಣದ ರಾಜೋಳಾದ ಸರಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ತಮ್ಮ ಶಾಲಾ ದಿನಗಳಿಂದಲೇ ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ಹೊಂದಿರುವ ಗಾಯಕವಾಡ ಅವರು ಕವನ, ಕಥೆ, ವಚನ, ಲೇಖನ, ಶಾಹಿರಿ, ಗಜಲ್ … ಹೀಗೆ ಹಲವು ಪ್ರಕಾರಗಳಲ್ಲಿ ಸಾಹಿತ್ಯ ಕೃಷಿಯನ್ನು ಮಾಡುತ್ತ ಬಂದಿದ್ದಾರೆ. ‘ನಲಿದಾಡಿ ಹೊಳೆಯುವ ಮುತ್ತುಗಳೇ’ ಎಂಬ ಕವನ ಸಂಕಲನ, ‘ಬೆಸಗರಹಳ್ಳಿ ರಾಮಣ್ಣನವರ ಕತೆಗಳು’ ಎಂಬ ವಿಮರ್ಶಾ ಕೃತಿ, ‘ಬುದ್ಧನೊಲುಮೆಯ ಆಧುನಿಕ ವಚನಗಳು’, ‘ಸಮರಸ ಜೀವಿ’ ಎಂಬ ಸಂಪಾದಿತ ಕೃತಿ ಹಾಗೂ ‘ಭೀಮನೊಲುಮೆಯ ಶಾಹಿರಿ ಮತ್ತು ಗಜಲ್ ಗಳು’ ಎಂಬ ಗಜಲ್ ಸಂಕಲನ… ಮುಂತಾದ ಹಲವು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಶ್ರೀಯುತರು ವಿಚಾರಗೋಷ್ಠಿ, ಕವಿಗೋಷ್ಠಿ, ವಚನಗೋಷ್ಠಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ತಮ್ಮ ಸಾಹಿತ್ಯಿಕ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇವರ ಸಾಹಿತ್ಯದ ಅನೇಕ ಪ್ರಕಾರಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹಲವು ವೈವಿಧ್ಯಮಯ ಸಂಘ ಸಂಸ್ಥೆಗಳಲ್ಲಿ ದುಡಿದಿರುವ, ದುಡಿಯುತ್ತಿರುವ ಇವರು ಸದಾ ಸಂಘಟನೆಯಲ್ಲಿ ಸಕ್ರಿಯವಾಗಿದ್ದಾರೆ. ಇವರ ಸಾಹಿತ್ಯ ಕೃಷಿಯನ್ನು ಗಮನಿಸಿ ನಾಡಿನ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿ ಸತ್ಕರಿಸಿವೆ. ಅವುಗಳಲ್ಲಿ ಡಾ. ಅಂಬೇಡ್ಕರ್ ಪ್ರಶಸ್ತಿ, ದೇಶಪಾಂಡೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಬೀದರ್ ನ ಕಾವ್ಯ ಚೈತನ್ಯ ರತ್ನ ಪ್ರಶಸ್ತಿ, ಕಾವ್ಯ ರತ್ನಾಕರ ಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯ ನೀಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ… ಪ್ರಮುಖವಾಗಿವೆ.
ಸಾಹಿತ್ಯವೇ ಸಾಹಿತಿಯ ಕಲಾ ಮಾಧ್ಯಮ. ಆದ್ದರಿಂದ ಯಾವುದು ಅವನನ್ನು ತೀವ್ರವಾಗಿ ಕಾಡಿಸುತ್ತದೆಯೋ ಅದು ಬರವಣಿಗೆಯಲ್ಲಿ ಬರಬೇಕಾಗುತ್ತದೆ. ಗಜಲ್ ತನ್ನ ಪರಂಪರೆಯಲ್ಲಿ ಮನುಕುಲದ ಚಟುವಟಿಕೆಗಳನ್ನು ಹಿಡಿದಿಟ್ಟುಕೊಂಡು ಬಂದಿದೆ. ಬದುಕುವ ಕಲೆಯನ್ನು ಸಾರುತ್ತಿದೆ. ಹೆಜ್ಜೆ ಹೆಜ್ಜೆಗೂ ಮನುಷ್ಯನ ಚಿಂತನೆಗಳಿಗೆ ಸಾಥ್ ನೀಡುತ್ತಿದೆ. ಗಜಲ್ ಎಂದರೆ ಮಲ್ಲಿಗೆ ಮೊಗ್ಗಿನ ಕೋಮಲತೆಯೂ ಹೌದು, ಗುಲಾಬಿಯನ್ನು ಕಾಪಾಡುವ ಪ್ರೀತಿಯ, ಸುಂದರ ಮುಳ್ಳೂ ಹೌದು. ಹಾಗಂತ ಇದು ವಿಷಕಾರಿಯಲ್ಲ, ಬೇಲಿಯಾಗಿ ಕಾಪಾಡುವ ಸಂವೇದನೆಯ ಮುಳ್ಳು! ಸಾಮಾಜಿಕ ಸಮಸ್ಯೆಗಳಿಗೆ ಮುಲಾಮು ಹಚ್ಚುವ ದಾದಿಯಾಗಿ ಕಾರ್ಯ ನಿರ್ವಹಿಸುತ್ತದೆ. ಈ ನಿಟ್ಟಿನಲ್ಲಿ ಸುಖನವರ್ ಭೀಮಶೇನ ಎಮ್. ಗಾಯಕವಾಡ ಅವರ ‘ಭೀಮನೊಲುಮೆಯ ಶಾಹಿರಿ ಮತ್ತು ಗಜಲ್ ಗಳು’ ಸಂಕಲನವು ತಣ್ಣನೆಯ ಪ್ರತಿರೋಧವನ್ನು ವ್ಯಕ್ತಪಡಿಸುತ್ತದೆ. ಬುದ್ಧ, ಬಸವ, ಫುಲೆ ದಂಪತಿಗಳ, ಅಂಬೇಡ್ಕರ್ ಅವರ ಚಿಂತನೆಗಳು, ಶೋಷಣೆಯ ಸ್ವರೂಪ, ದೀನ ದಲಿತರ ನೋವು, ಬಡತನದ ಬೇಗುದಿ, ರಾಜಕೀಯ ಪಕ್ಷಗಳ ಆಸೆಬುರುಕುತನ, ಜಾತಿಯತೆ, ಮೇಲು-ಕೀಳು, ಕೋಮುಗಲಭೆ, ಬಂಡವಾಳಶಾಹಿಯ ಅಟ್ಟಹಾಸ, ಕಾರ್ಮಿಕರ ಅಸಹಾಯಕತೆ, ವೈಚಾರಿಕ ಜಿಜ್ಞಾಸೆ, ಮೌಢ್ಯತೆಯ ಖಂಡನೆ, ಅಂಧಶ್ರದ್ಧೆ, ಅಜ್ಞಾನ, ಭ್ರಷ್ಟಾಚಾರ, ವ್ಯವಸ್ಥೆಯ ಕ್ರೌರ್ಯ, ಸಂವಿಧಾನದ ಮಹತ್ವ… ಎಲ್ಲವೂ ಇಲ್ಲಿ ಹದವರಿತು ಮುಪ್ಪರಿಗೊಂಡಿವೆ.
“ನಿನ್ನೆದೆಗೆ ಬಿದ್ದ ಅಕ್ಷರ ಬೆಳಕಾಗಿ ಸಿಡಿದು ದಾರಿಗಾಣದವರಿಗೆ ದಾರಿ ದೀಪವಾಗಬೇಕು
ದಿನವಿಡೀ ದುಡಿದು ಮಹಲು ಕಟ್ಟಿ ಕಟ್ಟಿ ಬೀದಿಯಲ್ಲಿ ಬಿದ್ದವರಿಗೆ ನೆರಳಾಗಬೇಕು”
ಬರೀ ಭಾವಲಹರಿಯ ಬೆನ್ನು ಹತ್ತದೆ, ತಾನು, ತನ್ನ ಜನಾಂಗ ಬದುಕುತ್ತಿರುವ ಪರಿಸರ ಅಥವಾ ಸಮಾಜದಲ್ಲಿ ತೀವ್ರವಾಗಿ ತೊಡಗಿ ಅರ್ಥೈಸಿಕೊಳ್ಳಲು ಹೋರಾಡುವ ಹೆಜ್ಜೆ ಗುರುತುಗಳನ್ನು ಈ ಮೇಲಿನ ಷೇರ್ ನಲ್ಲಿ ಗಮನಿಸಬಹುದು. ‘ಅಕ್ಷರ’ ಶಬ್ದದ ಅರ್ಥವೇ ನಾಶವಾಗಲಾರದ್ದು ಎಂಬುದು. ಇಲ್ಲಿ ಅಕ್ಷರದ ಮಹತ್ವವನ್ನು ಸಾರುತ್ತ ಅದು ಅನ್ಯರಿಗೆ ಬೆಳಕಾಗಲಿ ಎಂಬ ಸದುದ್ದೇಶವಿದೆ. ಜೊತೆಯಲ್ಲಿ ಸಮತೆಯ ನಾಡಿನ ಚಿತ್ರಣದ ಹಂಬಲವು ಇಲ್ಲಿ ಅಭಿವ್ಯಕ್ತಗೊಂಡಿದೆ. ಬಂಡವಾಳಶಾಹಿಯ ದೌಲತ್ತು ನಿಲ್ಲಲಿ ಎಂಬ ಆಶಾಭಾವನೆ ಇದೆ.
“ಬಿರುಗಾಳಿಯ ಹೊಡೆತಕ್ಕೂ ಜಗ್ಗದ ಹುಲ್ಲು ಕಡ್ಡಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ
ಗುಡುಗು ಮಿಂಚಿಗೂ ಬಗ್ಗದ ಬೆಂಕಿಯ ಜ್ವಾಲೆಗಳನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ”
ತನ್ನ ಕಾಲದ ಅಗತ್ಯವನ್ನು ಗುರುತಿಸಿದ, ಧ್ವನಿಸಿದ ವಾಣಿ ಈ ಷೇರ್ ನಲ್ಲಿದೆ. ಇಲ್ಲಿ ‘ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ’ ಎಂಬುದು ಮಜಲುನ್ ರದೀಫ್ ಆಗಿದ್ದು, ಇಡೀ ಗಜಲ್ ಗೆ ಒಂದು ತೂಕವನ್ನು ನೀಡಿದೆ. ಪ್ರಚಾರದ ಭರಾಟೆಯಲ್ಲಿ ಸುಳ್ಳು, ಮೋಸ, ವಂಚನೆಗಳೇ ಸಭ್ಯತೆಯ ಗೆರೆ ದಾಟಿ ಮುನ್ನೆಲೆಗೆ ಬರುತ್ತಿರುವುದನ್ನು ಗಜಲ್ ಕಾರರು ಗಮನಿಸಿ, ಅದನ್ನು ತಡೆಯಲು ಕರೆ ನೀಡಿದ್ದಾರೆ.
ಮೂಲಭೂತ ಬದಲಾವಣೆಯ ಆಲೋಚನೆ ಹುಟ್ಟಿಸುವ ಮತ್ತು ಹಬ್ಬಿಸುವ ಸಾಹಿತ್ಯ ರಚನೆ ಇಂದಿನ ಅಗತ್ಯವಾಗಿದೆ. ಈ ದಿಸೆಯಲ್ಲಿ ಗಜಲ್ ಕಾವ್ಯ ಪ್ರಕಾರವೂ ಹಿಂದೆ ಬಿದ್ದಿಲ್ಲ! ಗಜಲ್ ಗೋ ಭೀಮಶೇನ ಎಮ್. ಗಾಯಕವಾಡ ಅವರಿಂದ ಗಜಲ್ ಲೋಕ ಮತ್ತಷ್ಟು ಪ್ರಪುಲ್ಲಿತವಾಗಿ ಕಂಗೊಳಿಸಲಿ ಎಂದು ಪ್ರೀತಿಯಿಂದ ಶುಭ ಕೋರುತ್ತೇನೆ.
“ನೀನು ಜೊತೆಗಿದ್ದರೆ ಈ ಹವಾಮಾನವ ದೇವದೂತನಂತೆ ಅನಿಸುತ್ತದೆ
ನಿನ್ನ ನಂತರ ಈ ಹವಾಮಾನವು ತುಂಬಾ ನೋಯಿಸುತ್ತದೆ”
-ಬಶೀರ್ ಬದ್ರ
ಅದೇನೋ ಗೊತ್ತಿಲ್ಲ, ಗಜಲ್ ಬಗ್ಗೆ, ಗಜಲ್ ಕಾರರ ಬಗ್ಗೆ, ಗಜಲ್ ನ ಪರಂಪರೆ ಬಗ್ಗೆ ಮಾತಾಡುತಿದ್ದರೆ, ಬರೆಯುತಿದ್ದರೆ ಗಡಿಯಾರಕ್ಕೆ ಮುಳ್ಳಿಗಳಿವೆ ಎಂಬುದೇ ಗೊತ್ತಾಗಲ್ಲ. ಆದಾಗ್ಯೂ ಆ ಮುಳ್ಳುಗಳು ಮಾತ್ರ ಚುಚ್ಚಿ ಚುಚ್ಚಿ ತನ್ನ ಇರುವಿಕೆಯನ್ನು ನೆನಪಿಸುತ್ತ ಸಮಯದ ಮಹತ್ವವನ್ನು ಸಾರುತ್ತಲೇ ಇವೆ, ಇರುತ್ತವೆ. ಹಾಗಾಗಿ ಈ ಲೇಖನಿಗೆ, ಲೇಖನಕ್ಕೆ ವಿಶ್ರಾಂತಿ ನೀಡುತ್ತಿರುವೆ. ಯಥಾಪ್ರಕಾರ ಮತ್ತೇ ಮುಂದಿನ ಗ
ವಾರ ತಮ್ಮ ಮುಂದೆ ಹಾಜರಾಗುವೆ. ಅಲ್ಲಿಯವರೆಗೆ ಬಾಯ್, ಬಾಯ್, ಸಿ-ಯುವ್, ಟೇಕೇರ್…!!
ಧನ್ಯವಾದಗಳು..
ಡಾ. ಮಲ್ಲಿನಾಥ ಎಸ್. ತಳವಾರ
ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ
ಇವರ ಒಂದು ಪ್ರಸಿದ್ಧ ಗಝಲ್ ಹಾಕಬೇಕಿತ್ತು ಸರ್, ಓದಲು ಉತ್ಸಾಹ ಇತ್ತು