ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಜ್ಞಾನವೇ ಶಕ್ತಿ

ಪಾಠ ಮಾಡುವಾಗ ಶಿಕ್ಷಕರೊಬ್ಬರು ಮಕ್ಕಳಿಗೆ ಒಂದು ಪ್ರಶ್ನೆಯನ್ನು ಕೇಳಿದರಂತೆ “ಮಕ್ಕಳೇ  ಈಗ ನಿಮ್ಮ ಮುಂದೆ ದೇವರು ಪ್ರತ್ಯಕ್ಷ ವಾದರೆ ಏನು ವರ ಕೇಳುವಿರಿ? ಎಲ್ಲಿ ಒಬ್ಬೊಬ್ಬರಾಗಿ ಉತ್ತರಿಸಿ ನೋಡುವ ”   ಎನ್ನುತ್ತಾರೆ. ಆಗ ಮುಂದಿನ ಸಾಲಿನ ವಿದ್ಯಾರ್ಥಿಗಳಿಂದ ಉತ್ತರ ಪ್ರಾರಂಭವಾಯಿತು. ಒಬ್ಬನು “ನನಗಾಗಿ ಒಂದು ಕಂಪ್ಯೂಟರ ಕೇಳುವೆ” ಎಂದ.ಅದರಂತೆ ಒಬ್ಬರು ಬೈಸಿಕಲ್, ಮತ್ತೊಬ್ಬರು ಮೊಬೈಲ್, ಮಗದೊಬ್ಬರು ಆಟಿಗೆ ಸಾಮಾನು, ಕಾರು ಎಂದು ಉತ್ತರಿಸಿದರು.
ಆಗ ಕೊನೆಯ ಬೆಂಚಿನ ಮೇಲೆ ಕುಳಿತು ತದೇಕ ಚಿತ್ತದಿಂದ  ಮೇಲೆ ನೋಡುತ್ತ  ಅಂಗಿಯ ಹರಿದ ಜೇಬಲ್ಲಿ ಕೈ ಹಾಕುತ್ತ ಕುಳಿತ ಬಾಲಕನನ್ನು ಎದ್ದು ನಿಲ್ಲಿಸಿ “ದೇವರು ನಿನ್ನ ಮುಂದೆ ಪ್ರತ್ಯಕ್ಷವಾದರೆ ನೀ ಏನು ವರ ಕೇಳುವೆ?”ಎಂದು ಪ್ರಶ್ನಿಸಿದಾಗ ಆ ಬಾಲಕ ನೀಡಿದ ಉತ್ತರ ಎಲ್ಲರ ಕಣ್ಣು ತೆರೆಸಿತ್ತು.”ಗುರುಗಳೇ ನನ್ನ ಮುಂದೆ ದೇವರು ಪ್ರತ್ಯಕ್ಷ ನಾದರೆ ನಾನು ನನಗೆ ಜ್ಞಾನವನ್ನು ನೀಡೆಂದು ಕೇಳುವೆ “ಎಂದಾಗ ಗುರುಗಳು “ಇವರು ಕೇಳಿದ್ದನ್ನು ನೀನೇಕೆ ಕೇಳುವದಿಲ್ಲ?”ಎಂದಾಗ ಉಳಿದವರು ಬೇಡಿದ ಎಲ್ಲ ವಸ್ತುಗಳನ್ನು ಜ್ಞಾನ ಒಂದರಿಂದ ಮಾತ್ರ ಪಡೆಯಬಹುದು, ಅಲ್ಲದೆ ಆ  ವಸ್ತುಗಳು ಒಂದಲ್ಲ ಒಂದು ಸಲ ಹಾಳಾಗಬಹುದು ಅಥವಾ ಯಾರಿಂದಾದರೂ ಕದಿಯಲ್ಪಡಬಹುದು, ಆದರೆ ಜ್ಞಾನವನ್ನು ಮಾತ್ರ ಕದಿ ಯಲಾಗದು  ಅಲ್ಲದೆ ಅದು ಯಾರನ್ನು ಹಾಳು ಮಾಡದು ಎನ್ನುವ ಮಾತು ನಹಿ ಜ್ಞಾನೇನ ಸದೃಶಂ ಅಂದರೆ ಜ್ಞಾನಕ್ಕಿಂತ ಮಿಗಿಲಾದ ವಸ್ತು ಈ ಜಗತ್ತಿನಲ್ಲಿ ಇಲ್ಲ.

ಇದನ್ನೇ ಸ್ವಾಮಿ ವಿವೇಕಾನಂದರವರು “ವಿಷಯವನ್ನು ತಲೆಗೆ ತುರುಕದೆ ಮನಸ್ಸಿಗೆ ತರಬೇತಿ ನೀಡುವ ಲಕ್ಷಾಂತರ ಶಿಕ್ಷಕರ ಸೇವೆ ಭಾರತಕ್ಕೆ ಅವಶ್ಯಕವಾಗಿದೆ “. ಎಂದು ಹೇಳಿದ್ದಾರೆ.
“ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ದಿವ್ಯಔಷಧ “ಎಂಬುದು ಅವರ ನಿಲುವಾಗಿತ್ತು.

ಬಾಳಿನ ಗುರಿ ಎಂಬುದು ನಾಳಿನ ಹೊಟ್ಟೆಪಾಡಿನ ಮಾರ್ಗವನ್ನು, ವ್ಯಕ್ತಿಯಲ್ಲಿನ ಅಭಿಜಾತ ಆಸಕ್ತಿಯನ್ನು ಅವಲಂಬಿಸಿ ನಿರ್ಧರಿಸಲ್ಪಡುವಂಥದ್ದು.ಆದರೆ ಕೆಲವೊಮ್ಮೆ ಮಕ್ಕಳು ತಮ್ಮ ಪ್ರವೃತ್ತಿಗೆ ಅಂಟಿಕೊಂಡು ಶಿಕ್ಷಣವನ್ನೇ ಮೊಟಕುಗೊಳಿಸುತ್ತಾರೆ. ಇದರಿಂದ ತಮ್ಮಮಕ್ಕಳ ಭವಿಷ್ಯಕ್ಕೆ  ಬೆವರ ಬೆಲೆ ತೆತ್ತ ಹೆತ್ತವರ ಸಂಕಟ ಹೇಳತೀರದು. ಇತ್ತ ನುಂಗಲುಬಾರದು ಅತ್ತ ಉಗುಳಲುಬಾರದು ಎಂಬ ಬಿಸಿ ತುಪ್ಪದಂತೆ ಮನದಲ್ಲೇ ಕೊರಗುತ್ತಾರೆ.
ಜ್ಞಾನರ್ಜನೆಯೇ ವಿದ್ಯಾರ್ಥಿ ಜೀವನದ ಜೀವಾಳ. ಇದಕ್ಕೆ ತೀವ್ರವಾದ ಜ್ಞಾನಾಸಕ್ತಿ, ಜ್ಞಾನದ ಹಸಿವು ಇದ್ದಾಗ ಮಾತ್ರ ಯಶಸ್ಸು ಕಟ್ಟಿಟ್ಟ ಬುತ್ತಿ.
 ಆನಂದ ಸಿಗುವ ಕಡೆಗೆ ಒಲಿ ಯುವದು, ಓಡುವದು ಮನುಷ್ಯರ ಸ್ವಭಾವ. ಈ ಯುವಜನರು ತಮಗೆ ಕಲಿಕೆಯಲ್ಲಿ ಸಿಗದ ಆನಂದವನ್ನು ದುಶ್ಚಟಗಳಲ್ಲಿ ಅರಸುವ ಭ್ರಮೆಯಿಂದ ಅವುಗಳ ಬಲೆಗೆ ಬಿದ್ದು ಬದುಕನ್ನೇ ಹಾಳುಮಾಡಿಕೊಂಡಿದ್ದಾರೆ. ಆದ್ದರಿಂದ ಹೆತ್ತವರು ಅವರ ವರ್ತನೆಯ ಬದಲಾವಣೆಯನ್ನು ಗಮನಿಸಿ ಸಕಾಲದಲ್ಲಿ ತಿದ್ದಿದ್ದೆಯಾದರೆ ಜ್ಞಾನದ  ಪಯಣ  ನಿರಂತರವಾಗುತ್ತೆ.

ಯೌವನದ ಹೊಸ್ತಿಲಿನಲ್ಲಿರುವ ಯುವಕರಿಗೆ ಜ್ಞಾನರ್ಜನೆಯ ಜೊತೆಗೆ ನೈತಿಕ ಆಧ್ಯಾತ್ಮಿಕ ಸಂಸ್ಕಾರ ಕೂಡ ಬೇಕು.
ಜ್ಞಾನವು ವಿದ್ಯಾರ್ಥಿ ಜೀವನದಲ್ಲಿ ಪಾಶವಿ ಪ್ರವೃತ್ತಿಯನ್ನು ದೈವಿಗುಣಗಳಾಗಿ ಪರಿವರ್ತಿಸಿ ಇಚ್ಚಾ ಶಕ್ತಿ, ಕ್ರಿಯಾಶಕ್ತಿಯ ಚಂಡು ಅವನಾಗುವಂತೆ ಮಾಡುವ ಒಂದು ಶಕ್ತಿಯಾಗಿದೆ.

ಜೀವನದಲ್ಲಿ ಅಸಾಧ್ಯ ಎನ್ನುವುದು ಯಾವುದೂ ಇಲ್ಲ, ಯಾಕೆಂದರೆ ನಿಮ್ಮ ಅಂತರಂಗದ ಆಳದಲ್ಲಿದೆ ಅಪಾರ ಶಕ್ತಿ, ಅದನ್ನು ಹೊರಗೆಳೆಯಲು ಬೇಕಾಗಿರುವದು ಆಂತರಿಕ ಪ್ರೇರಣೆ.

ದೇಹದ ಆರೋಗ್ಯ ಕೆಟ್ಟಾಗ ಔಷಧಿಯನ್ನು ತೆಗೆದುಕೊಂಡು ಮತ್ತೆ ಆರೋಗ್ಯವನ್ನು ಪಡೆಯುವಂತೆ ಸಮಾಜದ ಆರೋಗ್ಯಕ್ಕೆ ಈ ಜ್ಞಾನವೆಂಬ ಔಷಧಿ ಮುಖ್ಯವಾಗಿದೆ.
ಅರ್ಹತೆ ಪಡೆಯದೇ, ದುಡಿಯದೆ, ಬುದ್ಧಿಶಕ್ತಿಗಳನ್ನು ಬೇಳೆಸಿಕೊಳ್ಳದೆ ಮುಂದೆ ಬರಲು ಬಯಸುವವರು ಸಮಾಜ ಘಾತಕರು. ಹೀಗೆ ಮುಂದೆ ಬಂದು ಬಿಡುವವನನ್ನು ಯಾರೂ ಗೌರವಿಸುವದಿಲ್ಲ.

ಸುಜ್ಞಾನದ ಬೆಳಕಿನಲಿ ಅಜ್ಞಾನದ ಕತ್ತಲು ಕಳೆವಂತೆ ಜ್ಞಾನ ಪಡೆದು ಮನುಜ ಮತದಿ ವಿಶ್ವ ಪಥದಿ ಪಯಣಿಸಿ ಮಾನವೀಯತೆಯ ಸಾ ಕಾ ರಾಮೂರ್ತಿಗಳಾಗಿ ಬಾಳ ಬಂಡಿಯನ್ನು ಸತ್ಯ, ಧರ್ಮದ ಮಾರ್ಗದಲ್ಲಿ ಸಾಗಿಸಿ ವಿಶ್ವದ ವಿ ಶ್ವಾಸಿಗಳಾಗೋಣ.


ಭಾರತಿ ನಲವಡೆ

ಭಾರತಿಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಮಂಗಳವಾಡದಲ್ಲಿಸಹಶಿಕ್ಷಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾಸಾಹಿತ್ಯಪುರಸ್ಕಾರ2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆಸಲ್ಲಿಸುತ್ತಿದ್ದಾರೆ

One thought on “

Leave a Reply

Back To Top