ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಏಕಾಗ್ರತೆ

ಹತ್ತನೇ ತರಗತಿ ಪರೀಕ್ಷೆಯ ಪ್ರತಿ ವಿಷಯದ ಪೇಪರ ಮುಗಿಸಿ ಮನೆಗೆ ಬಂದ ತಕ್ಷಣ ಕುಮಾರ ತಾನು ಬಿಡಿಸಿದ ಪ್ರಶ್ನೆಗಳನ್ನು ಸರಿಯಾಗಿವೆಯೇ ಹೇಗೆ ಎಂದು ತಾನು ಬರೆದ ಉತ್ತರಗಳನ್ನು ಪರೀಕ್ಷಿಸಿಕೊಂಡು ತನಗೆ ಸರಿಯುತ್ತರ ಗೊತ್ತಿದ್ದೂ ಬರೆಯುವಾಗ ಗೊಂದಲವಾಗಿ ತಪ್ಪಾಗಿದ್ದರಿಂದ ಬೇಸರ ಪಟ್ಟುಕೊಂಡು ಸರಿಯಾಗಿ ಊಟ ಕೂಡ ಮಾಡದನ್ನು ಕಂಡು ಅವರ ತಾಯಿ “ಆದದ್ದು ಆಗಿ ಹೋಗಿದೆ ಮುಂದಿನದನ್ನು ನೋಡು” ಎಂದು ಪರಿಪರಿಯಾಗಿ ಹೇಳಿದರೂ ಅವನ ಮನಸ್ಸಿಗೆ ಸಮಾಧಾನವಾಗುತ್ತಿರಲಿಲ್ಲ.ಹೀಗೆ ಬೇಸರವಾಗಲು ಕಾರಣ ಓದುವಾಗ ಏಕಾಗ್ರತೆ ಇಲ್ಲದಿರುವದು.
ಬೇಗ ಬೇಗ ಮುಗಿಸಬೇಕು ಎಂಬ ಆತುರ, ಅತಿಯಾದ ಆತ್ಮವಿಶ್ವಾಸದಿಂದ ನಾವು ಚಿಕ್ಕ ಚಿಕ್ಕ ತಪ್ಪುಗಳನ್ನು ಮಾಡಿ ನಂತರ ಮರುಗುವುದರಿಂದ ಯಾವುದೇ ಪ್ರಯೋಜನ ಇಲ್ಲ. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ.

ಹಾಗಾದರೆ ಈ ಗೊಂದಲಗಳು ಉಂಟಾಗಲು ಕಾರಣಗಳೆ ನಿರಬಹುದು? ಎಂಬುದನ್ನು ಪರಮರ್ಶಿಸಿದಾಗ ನಾವು ಮಾಡುವ ಕೆಲಸದಲ್ಲಿ ನಾವು ತೋರುವ ಉದಾಸೀನ, ಸರಿಯಾಗಿ ಏಕಾಗ್ರತೆಯಿಂದ ಭಾಗವಹಿಸದೆ ಇರಬಹುದು. ಇದು ಚಿಕ್ಕ ವಿಷಯ ತಾನೇ ಎನ್ನುವ ಹಗುರವಾದ ತೆಗೆದುಕೊಳ್ಳುವ ಮನೋಭಾವನೆ. ಹೀಗಿದ್ದಾಗ ಯಾವುದೂ ಮನಸ್ಸಿನಲ್ಲಿ ನಿಲ್ಲುವದಿಲ್ಲ. ಚಂಚಲಗೊಳ್ಳದೆ ನಿರ್ಭಯದಿಂದ ಮನಸ್ಸನ್ನು ದೃಢವಾಗಿಸಿಕೊಂಡು ಏಕಾಗ್ರತೆಯಿಂದ ಕೆಲಸಗಳನ್ನು ಮಾಡಿದರೆ ತಪ್ಪು ಆಗುವುದೇ ಇಲ್ಲ.ಅದು ಅಲ್ಲದೆ ಒಂದೇ ವೇಳೆಯಲ್ಲಿ ಅನೇಕ ಕೆಲಸಗಳನ್ನು ಮಾಡಬೇಕು ಎಂಬ ವಿಚಾರ ಕೂಡ ಏಕಾಗ್ರತೆಗೆ ಅಡ್ಡಿಯಾಗುತ್ತದೆ.

ಕೆಲವೊಮ್ಮೆ ಯಾವ ಕೆಲಸವನ್ನು ಮಾಡಹೊರಟರೂ ‘ಶಾರ್ಟ್ ಕಟ್ ‘ ಹುಡುಕಲು ಹೋಗಿ ವಿಫಲರಾಗುತ್ತೇವೆ.

“ಏಕಾಗ್ರತೆ ” ಎಂದರೆ ಒಬ್ಬರ ಆಲೋಚನೆಗಳು ಮತ್ತು ಗಮನವನ್ನು ಒಂದು ವಿಷಯ ಅಥವಾ ಆಲೋಚನೆಯ ಮೇಲೆ ಕೇಂದ್ರೀಕರಿಸುವದೇ ಆಗಿದೆ.

ಮಕ್ಕಳು ತಮ್ಮದೇ ಲೋಕದಲ್ಲಿ ತಮ್ಮ ಸ್ನೇಹಿತರೊಂದಿಗೆ ಏಕಾಗ್ರತೆಯಿಂದ ಆಟವಾಡುವಾಗ ನಾವೇಷ್ಟೇ ಕರೆದರೂ ಅವರು ನಮ್ಮನ್ನು ಗಮನಿಸುವದಿಲ್ಲ. ಅದೇರೀತಿ ತಾಯಿ ತನ್ನ ಮಗು ಅಳುತ್ತಿರುವಾಗ ಅವಳ ಏಕಾಗ್ರತೆಯಲ್ಲ ಮಗುವನ್ನು ಸಂಭಾಳಿಸುವದರಲ್ಲೇ ಇರುತ್ತದೆ.ತನ್ನ ಹಸಿವೆಯ ಪರಿವೆಯಿಲ್ಲದೇ ಮಗುವ ಹಸಿವನ್ನು ನೀಗಿಸುತ್ತಾಳೆ.
ಸ್ವಾಮಿ ವಿವೇಕಾನಂದರು ಹೇಳುವಂತೆ “ಒಬ್ಬ ಸಾಮಾನ್ಯ ವ್ಯಕ್ತಿಗೂ, ಮಹಾನವ್ಯಕ್ತಿಗೂ ಇರುವ ವ್ಯತ್ಯಾಸವೆಂದರೆ ಅವರಲ್ಲಿನ ಏಕಾಗ್ರತೆ “ಎಂದು ಏಕಾಗ್ರತೆಯ ಮಹತ್ವವನ್ನು ತಿಳಿಸಿದ್ದಾರೆ. ಅಧ್ಯಾತ್ಮಿಕತೆಯ ಮಾರ್ಗದಲ್ಲಿ ಭಕ್ತಿಯು ಏಕಾಗ್ರತೆಯ ಸಾಧನವಾಗಿದ್ದು, ದೇವರನ್ನು ಒಲಿಸಿಕೊಳ್ಳುವ ಸುಲಭ ಮಾರ್ಗವಾಗಿದೆ.ಆಂತ ತರಿಕ ಶಾಂತಿಗೆ ಧ್ಯಾನ ಬೇಕು. ತೈಲಧಾರೆಯಂತೆ ಮನಸ್ಸು ಏಕಮುಖವಾಗಿ ದೇವರೆಡೆಗೆ ಹರಿಯುವದೇ ಧ್ಯಾನ. ಜಪದಲ್ಲಿ ಏಕನಿಷ್ಠೆ, ಏಕಾಗ್ರತೆಗಳು ಏಖಿಭವಿಸಿದಾಗ ಅದು ಧ್ಯಾನದ ಮಟ್ಟಕ್ಕೆರುತ್ತದೆ.ಈ ಧ್ಯಾನ, ಪ್ರಾಣಾಯಾಮದಿಂದ ಏಕಾಗ್ರತೆಯನ್ನು ಹೆಚ್ಚಿಸಿ ಕೊಂಡು ಗುರಿ ತಲುಪಲು ಸಾಧ್ಯ. ಕೆಲವೊಮ್ಮೆ ಕುಟುಂಬದಲ್ಲಿ ನಡೆಯುವ ಸಂಘರ್ಷಗಳು ಮಕ್ಕಳ ವಿದ್ಯಾಭ್ಯಾಸ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡುತ್ತವೆ. ಚಿತ್ತ ಚಂಚಲತೆ ಯು ಭಾವ ಭಿತ್ತಿಯಲ್ಲಿ ಕಲ್ಪನಾ ವಿಹಾರದಿ ಮಿಂದು ಏಕಾಗ್ರತೆಗೆ ಭಂಗ ಉಂಟು ಮಾಡಿ ಸೂತ್ರ ಇಲ್ಲದ ಗಾಳಿ ಪಟ ದಂತೆ ಕೊಬಯಿಂದ ಕೊಂಬೆಗೆ ಹಾರುವ ಮರ್ಕಟದಂತೆ ಓಲಾಡುತ್ತಿರುತ್ತದೆ.
” ನಾನು ಏನು ಮಾಡುತಿದ್ದೇನೆ ಎಂಬುದರ ಮೇಲೆ ನಮ್ಮ ಏಕಾಗ್ರತೆ ಕೇಂದ್ರೀಕೃತವಾಗಿ ಮಾಡುವ ತಪ್ಪುಗಳು ಕಡಿಮೆಯಾಗಿ ನಮ್ಮ ಸಮಯ ಹಾಗೂ ಶಕ್ತಿ ಉಳಿದು ಮುಂದಿನ ಕಾರ್ಯ ಸುಗಮವಾಗಿ ಸಾಗುತ್ತದೆ.ಏಕಾಗ್ರತೆಯು ನಮ್ಮ ಕಾರ್ಯಕೆ ಸೂಕ್ತ ಯೋಜನೆ ಯೋಚನೆಗೆ ಸುಳಿವು ನೀಡುತ್ತದೆ. “An empty mind is devil’s workshop” ಎಂಬಂತೆ ಖಾಲಿ ಕ್ರಿಯಾಶೀಲವಲ್ಲದ ಮನಸು ದೆವ್ವದ ಮನೆ “ಎಂಬಂತೆ ಸೋಮಾರಿತನಕೆ ದಾರಿ ಮಾಡಿಕೊಡುತ್ತದೆ.
ನಮ್ಮ ಜೀವನದ ಸವಾಲುಗಳು ನಮ್ಮ ಶಕ್ತಿಗೂ ಮೀರಿದಾಗ ಏಕಾಗ್ರತೆ ಎಂಬ ಅಸ್ತ್ರ ಅದನ್ನು ಮೀರಿ ಜಯ ತಂದು ಕೊಡುತ್ತದೆ.
ಅಂದುಕೊಂಡಿದ್ದನ್ನು ಸಾಧಿಸಲು ಅಚಲವಾದ ನಿಷ್ಠೆಯೊಂದಿಗೆ ಏಕಾಗ್ರತೆ ಸೇರಿದಾಗ ಡಾ ಎ. ಪಿ. ಜೆ ಅಬ್ದುಲ್ ಕಲಾಂ ಹೇಳುವಂತೆ ಕನಸುಗಳನ್ನು ಕಾಣಬೇಕು, ಅವು ಹೇಗಿರಬೇಕೆಂದರೆ ನಿದ್ದೆ ಮಾಡಲಿಕ್ಕೆ ಬಿಡಬಾರದು ಎಂಬ ಮಾತು ನಮ್ಮ ಏಕಾಗ್ರತೆಗೆ ಸವಾಲನ್ನೊಡ್ಡಿ ನಮ್ಮ ಕಾಯಕ ಪ್ರಜ್ಞೆಯನ್ನು ಜಾಗೃತಿಗೊಳಿಸುತ್ತದೆ.
ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದಂತೆ ನಿನ್ನ ಕರ್ಮವನ್ನು ನೀನು ಮಾಡು ಅದರ ಫಲಾ ಫಲಗಳನ್ನು ನನಗೆ ಬಿಡು ಎಂಬಲ್ಲಿ ಕಾಯಕದ ಬದ್ಧತೆಯನ್ನು ನೆನಪಿಸಿದ್ದಾನೆ.

ಆಂಗ್ಲ ಕವಿ ಜಾನ್ ಮಿಲ್ಟನ ತನ್ನ ಮಹಾಕಾವ್ಯ “ಪ್ಯಾರಾಡೈಸ ಲಾಸ್ಟ “ನಲ್ಲಿ ಉಲ್ಲೆಖಿಸಿದಂತೆ “ಮನಸ್ಸು ತನ್ನೊಳಗೆ ತಾನೇ ನರಕವನ್ನು ಸ್ವರ್ಗವಾಗಿಸಬಲ್ಲ, ಸ್ವರ್ಗವನ್ನು ನರಕವಾಗಿಸಬಲ್ಲ ಜಾಗ ” ಎಂಬಂತೆ ಎಲ್ಲ ಸಾಧನೆಗೂ ಮೂಲ ಈ ಮನಸು. ಮನಸಲ್ಲಿ ಕನಸ ಬೇಜಾಗಳನ್ನು ಬಿತ್ತಿ, ಏಕಾಗ್ರತೆಯಿಂದ ಛಲದಂಕ ಮಲ್ಲರಂತೆ ಕಾರ್ಯ ಪೃವೃತ್ತರದಾಗ ಮಾತ್ರ ನಮ್ಮ ಬದುಕಿಗೆ ನೆಲೆ ಸಿಕ್ಕು ನಮ್ಮ ಹುಟ್ಟಿನ ಸಾರ್ಥಕತೆಗೆ ಒಂದು ಬೆಲೆ ಸಿಗಲು ಸಾಧ್ಯ.
ಏಕಾಗ್ರತೆಯ ಕಲೆಇರಲು ಅಂಗೈಯಲ್ಲಿ ಅರಮನೆ ಎಂಬಂತೆ ಬಯಸಿದ್ದನ್ನು ಪಡೆಯಬಹುದು ಆಗ ನಮ್ಮ ಭವಿಷ್ಯ ಬದುಕಲು ಸ್ಫೂರ್ತಿಯ ಸೆಲೆಯಾಗುವಲ್ಲಿ ಸಂಶಯವಿಲ್ಲ.


ಭಾರತಿ ನಲವಡೆ

ಭಾರತಿಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡಶಾಲೆಮಂಗಳವಾಡದಲ್ಲಿಸಹಶಿಕ್ಷಕಿಯಾಗಿಕಾರ್ಯನಿರ್ವಹಿಸುತ್ತಿದ್ದಾರೆ.ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾಸಾಹಿತ್ಯಪುರಸ್ಕಾರ2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆಸಲ್ಲಿಸುತ್ತಿದ್ದಾರೆ

One thought on “

Leave a Reply

Back To Top