ಸರಣಿ ಸತ್ಯ ಕಥೆಗಳು
ಕು.ಸ.ಮಧುಸೂದನರಂಗೇನಹಳ್ಳಿ
ಅಸಹಾಯಕ ಆತ್ಮಕಥೆಗಳು
ಓದುವ ಮುನ್ನ
ಈ ಕತೆಗಳ ಮೊದಲ ಕತೆಯ ಮೊದಲ ಸಾಲು ಓದುವ ಮೊದಲುನಿಮಗೆ ಹೇಳಬೇಕಾದ ಮಾತುಗಳು.
ಅದಾಗತೊಂಭತ್ತರ ದಶಕದಲ್ಲಿ ನಾನೊಮ್ಮೆ ಮುಂಬೈಗೆ ಹೋದಾಗ ಗೆಳೆಯರೊಬ್ಬರು ನಡೆಸು್ತಿದ್ದ ಹೆಚ್.ಐ,ವಿ. ಪೀಡಿತಹೆಣ್ಣು ಮಕ್ಕಳ ಪುನರ್ವಸತಿ ಕೇಂದ್ರಕ್ಕೆ ಬೇಟಿ ನೀಡಿದಾಗ, ಅಲ್ಲಿದ್ದ ಅನೇಕ ಹೆಣ್ಣು ಮಕ್ಕಳನ್ನು ಮಾತನಾಡಿಸಿದ್ದೆ.ಹಾಗೆ ಮಾತಾಡಿಸುವಾಗ ಸಿಕ್ಕ ಒಬ್ಬ ಹೆಣ್ಣು ಮಗಳು ನಮ್ಮ ಕನ್ನಡಿಗಳೇ ಆಗಿದ್ದು ತನ್ನ ಬದುಕಿನ ಅಮೂಲ್ಯವಾದ ಮುವತ್ತು ವರ್ಷ ಆಯುಷ್ಯವನ್ನು ಮುಂಬೈನ ವೇಶ್ಯಾವಾಟಿಕೆಯಲ್ಲಿ ಕಳೆದು ಹೆಚ್.ಐ.ವಿ ರೋಗಕ್ಕೆ ತುತ್ತಾಗಿದ್ದಳು.ಆಕೆಯ ಕಥೆ ಕೇಳಿ ನನಗೆ ಅಪಾರ ದು:ಖವಾಗಿದ್ದು ಮಾತ್ರವಲ್ಲದೆ, ಅಂತವರ ಬದುಕಿನ ವಾಸ್ತವಾಂಶಗಳ ಬಗ್ಗ ಬೆಳಕು ಚೆಲ್ಲಲೇಬೇಕೆಂಬ ಹಠ ಹುಟ್ಟಿತು. ಆ ನಂತರ ದಕ್ಷಿಣ ಬಾರತದ ಹಲವು ನಗರಗಳನ್ನು, ಸಣ್ಣ ಊರುಗಳನ್ನು ಸುತ್ತಿ ಅಂತಹ ಹೆಣ್ಣು ಮಕ್ಕಳನ್ನು ಹರಸಾಹಸಪಟ್ಟು ಹುಡುಕಿ,ಬೇಟಿಯಾಗಿ, ನನ್ನ ಉದ್ದೇಶವನ್ನು ಅವರಿಗೆ ಮನದಟ್ಟು ಮಾಡಿ, ಅವರ ಬಾಯಿಂದಲೇ ಅವರ ಜೀವನದ ಬಗ್ಗೆ ಕೇಳುತ್ತ ಹೋದೆ.
ಇಲ್ಲ ನನ್ನ ಉದ್ದೇಶವಿದ್ದುದು ಅವರು ಲೈಂಗಿಕ ಕಾರ್ಯಕರ್ತರಾಗಿ ಹೇಗೆ ಬದುಕಿದರು ಎನ್ನುವ ರೋಚಕತೆಯ ಬಗ್ಗೆ ಬರೆಯುವುದಲ್ಲ. ಬದಲಿಗೆ ಎಲ್ಲರಂತೆ ನೆಮ್ಮದಿಯಾಗಿ ಬದುಕು ಕಟ್ಟಿಕೊಂಡು ಜೀವಿಸ ಬೇಕಿದ್ದ ಅವರುಗಳು ಅದು ಹೇಗೆ ವೇಶ್ಯಾವಾಟಿಕೆಯಕೂಪದಲ್ಲಿ ಬಿದ್ದರುಎಂಬುದರ ಬಗ್ಗೆ ಮಾತ್ರ.ಹಾಗಾಗಿ ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ಬಂದ ಹಲವು ಪುಸ್ತಕಗಳಲ್ಲಿ ಕಂಡು ಬರುವ ರೋಚಕತೆಯಾಗಲಿ-ಕಾಮೋದ್ರೇಕಗೊಳಿಸುವ ಸನ್ನಿವೇಶಗಳಾಗಲಿ ಈಕತೆಗಳಲ್ಲಿ ಎಲ್ಲಿಯೂ ನಿಮಗೆ ಸಿಗುವುದಿಲ್ಲ. ಇಲ್ಲಿರುವುದು ತಮ್ಮ ಕಡುಬಡತನದಿಂದ, ಹಸಿವಿನಿಂದ, ಅಸಹಾಯಕತೆಯಿಂದ,ಕೆಲವು ಸ್ವಯಂಕೃತಾಪರಾಧಗಳಿಂದ ಲೈಂಗಿಕ ಕಾರ್ಯಕರ್ತೆಯರಾಗಿ ಬದಲಾದ ಅವರುಗಳ ಬದುಕಿನ ತಿರುವುಗಳ ಚಿತ್ರಣ ಮಾತ್ರ.
ಅವರುಗಳು ಏನನ್ನು ಹೇಳಿದರೋ ಅಷ್ಟನ್ನು ಮಾತ್ರ ನಾನು ಇಲ್ಲಿ ಅಕ್ಷರ ರೂಪಕ್ಕಿಳಿಸಿದ್ದೇನೆಯೇ ಹೊರತು ಏನನ್ನೂ ಸೇರಿಸಿಲ್ಲ.ನನ್ನಿಂದ ಲೋಪವಾಗಿದ್ದರೆ ಅದು ಭಾಷೆಯ ವಿಷಯದಲ್ಲಿ ಮಾತ್ರ.ವಿವಿಧ ಪ್ರದೇಶಗಳಿಂದ ಬಂದ ಅವರುಗಳು ಮಾತನಾಡಿದ್ದು ಬೇರೆ ಬೇರೆ ಭಾಷೆಯಲ್ಲಿ. ಆದರೆ ಓದುಗರಿಗೆ ಅನುಕೂಲವಾಗುವಂತೆ ನಮ್ಮ ಕಡೆಯ ಜನಸಾಮಾನ್ಯರು ಬಳಸುವ ಆಡು ಬಾಷೆಯನ್ನೇ ಇಲ್ಲಿ ಎಲ್ಲಾ ಕತೆಗಳಲ್ಲಿ ಬಳಸಿದ್ದೇನೆ.
ಈ ಕತೆಗಳನ್ನು ಓದಿದ ನಂತರವಾದರೂ ನಿಮ್ಮಲ್ಲಿ ಅಂತಹ ಹೆಣ್ಣು ಮಕ್ಕಳ ಬದುಕಿನ ಬಗ್ಗೆಒಂದಿಷ್ಟು ಸಹಾನುಭೂತಿ, ಪ್ರೇಮ ಮೊಳೆತರೆ ನನ್ನ ಶ್ರಮ ಸಾರ್ಥಕವದೀತೆಂದು ನಾನು ನಂಬಿದ್ದೇನೆ.
ಕಥೆ ಒಂದು.
ಲಾರಿಯಿಂದ ಲಾರಿಗೆ
ನಾನು ಎಂಟು ವರ್ಷದವಳಾಗಿದ್ದಾಗ ಅಪ್ಪ ಅಮ್ಮನ ಜೊತೆ ಬೆಂಗಳೂರಿಗೆ ವಲಸೆ ಬಂದೆ. ಮೂಲತ: ನಮ್ಮದು ಆಂದ್ರದ ಒಂದು ಹಳ್ಳಿ. ಅಲ್ಲಿ ನಮಗಿದ್ದ ತುಂಡು ನೆಲಕ್ಕಾಗಿ ದಾಯಾದಿಗಳ ಜೊತೆ ಹೊಡೆದಾಡಿಕೊಂಡು ಪೋಲಿಸ್ ಕೇಸ್ ಹಾಕಿಸಿಕೊಂಡ ನಮ್ಮಪ್ಪ ರಾತ್ರೋರಾತ್ರಿ ನನ್ನನ್ನು ಅಮ್ಮನನ್ನು ಕರೆದುಕೊಂಡು ಬೆಂಗಳೂರಿಗೆ ಓಡಿಬಂದು ಬಿಟ್ಟ. ಇಲ್ಲಿ ಬೆಂಗಳೂರಿಗೆ ಬಂದಮೇಲೆ ಒಬ್ಬ ಆಂದ್ರದವನೇ ಕಂಟ್ರಾಕ್ಟರ್ ಪರಿಚಯವಾಗಿ ಅವನು ಕಟ್ಟಿಸುತ್ತಿದ್ದ ಕಟ್ಟಡಗಳಲ್ಲಿ ಇಟ್ಟಿಗೆ ಸೀಮೆಂಟು ಹೊರುವ ಕೆಲಸಕ್ಕೆ ಅಪ್ಪ ಅಮ್ಮ ಸೇರಿಕೊಂಡರು. ಅವತ್ತಿಂದ ನಮ್ಮ ಅಲೆಮಾರಿ ಜೀವನ ಶುರುವಾಯಿತು. ಎಲ್ಲೆಲ್ಲಿ ಕಟ್ಟಡಗಳನ್ನು ಕಟ್ತಾ ಇದ್ರೋ ಅಲ್ಲೇ ತಗಡಿನ ಶೆಡ್ ಹಾಕಿಕೊಂಡು ಜೀವನ ಮಾಡಬೇಕಾಗಿತ್ತು. ಬಹುಶ: ಬೆಂಗಳೂರಿನ ಎಲ್ಲ ದಿಕ್ಕುಗಳಲ್ಲಿಯೂ ನಮ್ಮ ಶೆಡ್ ಓಡಾಡ್ತಾ ಇತ್ತು. ನನಗೆ ಒಂದತ್ತು ವರ್ಷವಾಗೊತನಕ ಎಲ್ಲವೂ ಚೆನ್ನಾಗಿಯೇ ಇತ್ತು. ಯಾವ ದುರಬ್ಯಾಸವೂ ಇರದ ಅಪ್ಪ, ತನ್ನ ಪಾಡಿಗೆ ತಾನಿರುತ್ತಿದ್ದ ಅಮ್ಮ ನನ್ನನ್ನು ಮುದ್ದಿನಿಂದಲೇ ಸಾಕುತ್ತಿದ್ದರು. ಆದರೆ ಒಂದು ದಿನ ಕಟ್ಟುತ್ತಿದ್ದ ಕಟ್ಟಡದ ಸೆಂಟ್ರಿಂಗ್ ಕುಸಿದು ಅಪ್ಪ ಸತ್ತುಹೋಗಿಬಿಟ್ಟ. ಹಾಗಂತ ನಾವು ಮತ್ತೆ ವಾಪಾಸು ಊರಿಗೆ ಹೋಗೋ ಹಾಗಿರಲಿಲ್ಲ. ವಿದಿಯಿಲ್ಲದೆ ಅಮ್ಮ ಅಲ್ಲೇ ಕೆಲಸ ಮುಂದುವರೆಸಿದಳು.
ಅದೇನಾಯಿತೊ ಗೊತ್ತಿಲ್ಲ, ತನ್ನ ಪಾಡಿಗೆ ತಾನಿರುತ್ತಿದ್ದ ಅಮ್ಮ ಆಂದ್ರದವನೇ ಆದ ಒಬ್ಬ ಮೇಸ್ತ್ರಿಯ ಬಲೆಗೆ ಬಿದ್ದು ಬಿಟ್ಟಳು. ನಮ್ಮ ಅಪ್ಪನಿಗಿಂತ ವಯಸ್ಸಲ್ಲಿ ದೊಡ್ಡವನಾಗಿದ್ದ ಅವನಿಗೆ ಮದುವೆಯಾಗಿ ಹೆಂಡತಿ ಮಕ್ಕಳೆಲ್ಲ ಆಂದ್ರದಲ್ಲೇ ಇರ್ತಾ ಇದ್ದರು. ಅವನದು ಅಂತ ಒಂದು ಬೇರೇ ದೊಡ್ಡ ಶೆಡ್ ಇರ್ತಾ ಇತ್ತು. ಆಮೆಲೆ ನಾವು ಸಹ ಅವನ ಶೆಡ್ಡಿನಲ್ಲೇ ಇರತೊಡಗಿದೆವು. ಅಮ್ಮ, ಅವನು ಮದುವೆಯಾದರೋ ಬಿಟ್ಟರೊ ನನಗೆ ನೆನಪಿಲ್ಲ. ಆದರವನನ್ನು ಚಿಕ್ಕಪ್ಪ ಅಂತ ಕರೀ ಅಂತ ಅಮ್ಮ ಹೇಳಿಕೊಟ್ಟಿದ್ದಳು. ನಾನೂ ಹಾಗೇ ಕರೀತಾ ಇದ್ದೆ. ಅವನು ನನ್ನ ತುಂಬಾ ಮುದ್ದು ಮಾಡ್ತಾ ಇದ್ದ. ಕೇಳಿದ ತಿಂಡಿ ತೆಗೆದುಕೊಡ್ತಾ ಇದ್ದ. ಅವನು, ಅಮ್ಮ ಕೆಲಸಕ್ಕೆ ಹೋದರೆ ನಾನು ಅಕ್ಕಪಕ್ಕದ ಶೆಡ್ಡುಗಳ ಪುಟಾಣಿ ಮಕ್ಕಳ ಜೊತೆ ಆಟ ಆಡ್ತಾ ಬೆಳಿತಾ ಇದ್ದೆ.
ನನಗೆ ಹದಿನಾಲ್ಕು ವರ್ಷವಾದಾಗ ಮೈನೆರೆದೆ. ಅಮ್ಮ ಆ ಶೆಡ್ಡಲ್ಲೇ ಒಂದಷ್ಟು ಶಾಸ್ತ್ರ ಮಾಡಿದಳು. ಇನ್ನು ಮುಂದೆ ನಾವು ಕೆಲಸಕ್ಕೆ ಹೋದಾಗ ಹೊರಗೆಲ್ಲೂ ಹೋಗದೆ ಶೆಡ್ಡಲ್ಲೇ ಇರಬೇಕು ಅಂತ ಅವರಿಬ್ಬರು ಹೇಳಿ ಬಿಟ್ಟರು. ಅವತ್ತಿಂದ ಶೆಡ್ಡಿನ ಒಳಗೇ ಕೂತು ಹಳೇ ರೇಡಿಯೋದಲ್ಲಿ ಬರುತ್ತಿದ್ದ ತೆಲುಗು ಚಿತ್ರಗೀತೆಗಳನ್ನು ಕೇಳ್ತಾ ಕಾಲ ಕಳೀತಿದ್ದೆ. ಆದರೆ ನನ್ನ ಜೀವನವನ್ನ ನರಕ ಮಾಡೋ ಆ ದಿನ ಬಂದೇ ಬಿಟ್ಟಿತ್ತು. ನಾನು ಮೈನೆರೆದ ಆರು ತಿಂಗಳಿಗೆ ಸರ್ವನಾಶವಾಗಿ ಹೋಗಿಬಿಟ್ಟೆ. ಎಲ್ಲರೂ ಬೆಳಿಗ್ಗೆ ಏಳುಗಂಟೆಗೇ ಕೆಲಸಕ್ಕೆ ಹೋದರೆ ಮದ್ಯಾಹ್ನ ಅಲ್ಲೇ ಕಂಟ್ರಾಕ್ಟರ್ ಕೊಡಿಸೋ ಊಟ ಮಾಡಿ ಸಾಯಂಕಲ ಆರುಗಂಟೆಗೆ ಶೆಡ್ಡಿಗೆ ವಾಪಾಸು ಬರೋರು. ಅವತ್ತೊಂದು ದಿನ ಬೆಳಿಗ್ಗೆ ಹತ್ತು ಗಂಟೆಗೆಲ್ಲ ಚಿಕ್ಕಪ್ಪ ವಾಪಾಸು ಬಂದುಬಿಟ್ಟ. ಬರುವಾಗ ತುಂಬಾ ಕುಡಿದಿದ್ದ. ಅವನ್ಯಾವತ್ತು ಹಗಲು ಹೊತ್ತು ಕುಡಿದಿದ್ದನ್ನು ನಾನು ನೋಡಿರಲಿಲ್ಲ. ಶೆಡ್ಡಿನೊಳಗೆ ಬಂದವನು ತಗಡಿನ ಬಾಗಿಲು ಮುಚ್ಚಿ ಚಾಪೆಯ ಮೇಲೆ ಮಲಗಿ, ನನಗೆ ತಲೆ ನೋವಾಗ್ತಾ ಇದೆ ಹಣೆಯನ್ನು ಸ್ವಲ್ಪ ಅಮುಕು ಅಂದ. ನಾನು ಸರಿಯೆಂದು ಪಕ್ಕದಲ್ಲಿ ಕೂತು ಬೆರಳುಗಳಿಂದ ಹಣೆಯನ್ನು ನಿದಾನವಾಗಿ ಒತ್ತತೊಡಗಿದೆ. ಅಷ್ಟೇ ತಟಕ್ಕನೆ ನನ್ನನ್ನು ಎಳೆದುಕೊಂಡು ಮಲಗಿಸಿಬಿಟ್ಟು ಬಟ್ಟೆಗಳನ್ನೆಲ್ಲ ಕಿತ್ತು ಹಾಕಿ ನನ್ನನ್ನು ಕೆಡಿಸಿಬಿಟ್ಟಿದ್ದ. ಅವನ ಆವೇಶದ ಮುಂದೆ ಕೂಗಲಾಗಲಿ ಎದ್ದು ಓಡಿಹೋಗಲಾಗಲಿ ನನಗಾಗಲಿಲ್ಲ. ಅರ್ದ ಗಂಟೆ ಅವನ ಆಸೆ ಪೂರೈಸಿಕೊಂಡವನು, ಇದನ್ನು ನಿಮ್ಮಮ್ಮನಿಗೆ ಹೇಳಿದರೆ ನಿಮ್ಮಬ್ಬರನ್ನೂ ಕೊಂದು ಹಾಕಿಬಿಡ್ತೀನಿ ಅಂತ ಹೆದರಿಸಿ ಹೊರಗೆ ಹೊರಟುಹೋದ. ನನಗೇನೂ ತೋಚದಂತಾಗಿ ಮಂಕಾಗಿ ಮೂಲೆಯಲ್ಲಿ ಕೂತುಬಿಟ್ಟೆ. ಸಾಯಂಕಾಲ ಅಮ್ಮ ಬಂದಾಗ ಮೈ ಬೆಚ್ಚಗಾಗಿತ್ತು. ಅವಳದನ್ನು ಜ್ವರ ಅಂದುಕೊಂಡು ಅಂಗಡಿಯಿಂದ ಮಾತ್ರೆ ತಂದು ಗಂಜಿ ಕುಡಿಸಿ ಮಲಗಿಸಿದಳು. ಮಾರನೇ ಬೆಳಿಗ್ಗೆ ಎದ್ದಾಗ ಚಿಕ್ಕಪ್ಪ ಅನಿಸಿಕೊಂಡವನು ಏನೂ ಆಗಿಯೇ ಇಲ್ಲವೇನೋ ಅನ್ನುವಂತೆ ನಡೆದುಕೊಂಡಿದ್ದ.
ಆಮೆಲೆ ಸತತವಾಗಿ ಒಂದೂವರೆ ವರ್ಷ ಅವನು ನನ್ನ ಉಪಯೋಗಿಸಿಕೊಂಡ. ಈ ನಡುವೆ ಕಟ್ಟಡದ ಕೆಲಸಕ್ಕೆ ಸಾಮಗ್ರಿಗಳನ್ನು ತರುತ್ತಿದ್ದ ಲಾರಿ ಡ್ರೈವರ್ ಒಬ್ಬ ಪರಿಚಯವಾಗಿದ್ದ. ಒಂದೆರಡು ಬಾರಿ ಕಟ್ಟಡದ ಕೆಲಸ ನಡೆಯೋ ಸ್ಥಳದಲ್ಲಿ ಅವನನ್ನು ನೋಡಿದ್ದೆ. ಆಮೇಲೊಂದು ದಿನ ಮದ್ಯಾಹ್ನ ಯಾರೂ ಇಲ್ಲದಾಗ ನಮ್ಮ ಶೆಡ್ಡಿಗೆ ಬಂದು ನನ್ನನ್ನು ಮದುವೆಯಾಗ್ತೀಯಾ ಅಂತ ಕೇಳಿದ್ದ. ನಾನು ಅವನಿಗೆ ಏನೂ ಹೇಳಿರಲಿಲ್ಲ.
ಅದೊಂದು ರಾತ್ರಿ ಚಿಕ್ಕಪ್ಪ ತುಂಬ ಕುಡಿದಿದ್ದು ಅಮ್ಮನ ಎದುರಿಗೇ ನನ್ನ ಮೇಲೆ ಕೈಹಾಕಿದ. ಅದುವರೆಗೂ ಏನೂ ಗೊತ್ತಿರದ ಅಮ್ಮ ಅವನ್ನು ವಿರೋದಿಸಿ ಕೂಗಾಡಿದಾಗ, ಕುಡಿದ ಅಮಲಿನಲ್ಲಿ ಅವನು ಕಳೆದ ಒಂದು ವರ್ಷದಿಂದ ಅವಳ ಜೊತೆ ಮಲಗ್ತಾ ಇದೀನಿ, ಏನೇ ಮಾಡ್ತೀಯಾ ಬೋಸುಡಿ? ಎಂದು ಬಿಟ್ಟ. ರೊಚ್ಚಿಗೆದ್ದ ಅಮ್ಮ ಪಕ್ಕದಲ್ಲಿದ್ದ ಈಳಿಗೆ ಮಣೆಯಿಂದ ಅವನ ಕತ್ತಿಗೆ ಹೊಡೆದು ಬಿಟ್ಟಳು. ಒಂದೇ ಏಟಿಗೆ ಅವನು ಸತ್ತು ಹೋಗಿದ್ದ. ಆಮೆಲೆ ಪೋಲಿಸರು ಅವಳನ್ನು ಅರೆಸ್ಟ್ ಮಾಡಿಕೊಂಡು ಹೋದರು. ಅವಳಿಗಿನ್ನು ಗಲ್ಲು ಶಿಕ್ಷೆಯಾಗುತ್ತೆ ಅಂತ ಅಕ್ಕಪಕ್ಕದವರೆಲ್ಲ ಮಾತಾಡಿಕೊಂಡರು. ಒಂಟಿಯಾಗಿದ್ದ ನಾನು ಅವರಿವರು ಕೊಟ್ಟದ್ದನ್ನು ತಿಂದುಕೊಂಡು ಒಂದು ವಾರ ಕಳೆದೆ. ಮದುವೆ ಮಾಡಿಕೊಳ್ಳ್ತೀಯಾ ಅಂತ ಕೇಳಿದ್ದ ಡ್ರೈವರ್ ಅಮ್ಮ ಜೈಲಿಗೆ ಹೋದ ಹತ್ತನೆ ದಿನಕ್ಕೆ ಮದ್ಯಾಹ್ನದ ಹೊತ್ತಿಗೆ ಶೆಡ್ಡಿಗೆ ಬಂದ. ಅವನು ಮಾತಾಡುವ ಮುಂಚೇನೇ ನಾನು ನನ್ನ ಕರೆದುಕೊಂಡು ಹೋಗ್ತೀಯಾ ಅಂತ ಕೇಳಿದೆ. ಆಯ್ತು ಅಂದವನು ಸಂಜೆ ಕತ್ತಲಾದ ಮೇಲೆ ಕಟ್ಟಡದ ಪಕ್ಕದ ರಸ್ತೆಗೆ ಬಾ ಎಂದು ಹೇಳಿ ಹೋದ.
ಸಾಯಂಕಾಲ ನನ್ನ ಒಂದೆರಡು ಬಟ್ಟೆಯನ್ನು ಗಂಟು ಕಟ್ಟಿಕೊಂಡು ಅವನು ಹೇಳಿದ ಜಾಗಕ್ಕೆ ಹೋಗಿ ಲಾರಿ ಹತ್ತಿದೆ. ಅಲ್ಲಿಂದ ಅವನು ತಮಿಳುನಾಡಿನ ಯಾವುದೋ ಊರಿಗೆ ಅಂತ ಕರೆದುಕೊಂಡು ಹೋದ. ಅಲ್ಲಿಂದ ಮತ್ತೆ ಬೆಂಗಳೂರಿಗೆ ಬಂದೆವು. ಒಂದೆರಡು ತಿಂಗಳು ಬೆಳಗಾಂ, ಚಿತ್ರದುರ್ಗ, ಮೈಸೂರು ಅಂತ ಲಾರಿಯಲ್ಲೇ ಅವನ ಜೊತೆ ಸಂಸಾರ ಮಾಡಿದೆ. ಅವನಿಗೆ ಬೇಕಾದ ಕಡೆಯಲ್ಲೆಲ್ಲ ಲಾರಿ ನಿಲ್ಲಸೋನು, ಆಗೆಲ್ಲ ಅವನ ಜೊತೆ ಮಲಗಬೇಕಾಗಿತ್ತು.
ಆಮೇಲೊಂದು ದಿನ ದಾವಣಗೆರೆ ಚಿತ್ರದುರ್ಗದ ನಡುವೆ ಹೈವೇಯ ಪಕ್ಕದ ಒಂದು ಗುಡಿಸಲು ಹೋಟೆಲಿನಲ್ಲಿ ರಾತ್ರಿ ಊಟಕ್ಕೆ ಅಂತ ನಿಲ್ಲಿಸಿದ್ದ. ಬೇಗಬೇಗ ಊಟ ಮುಗಿಸಿದ ಅವನು ನನ್ನನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿಬಿಟ್ಟ. ಅಲ್ಲಿಗೆ ಮತ್ತೆ ನಾನು ಒಂಟಿಯಾದೆ. ಅವತ್ತು ರಾತ್ರಿ ಆ ಗುಡಿಸಲು ಹೋಟೆಲಿನ ಓನರ್ ಜೊತೆ ಮಲಗಬೇಕಾಗಿಬಂತು. ಮಾರನೇ ದಿನ ಹಗಲು ಪೂರಾ ಅವನ ಹೋಟೆಲ್ಲಿನಲ್ಲೇ ಕೂತಿದ್ದೆ. ಕತ್ತಲಾಗುತ್ತಿದ್ದಂತೆ ಲಾರಿಗಳು ಬಂದು ನಿಲ್ಲಲಾರಂಬಿಸಿದವು. ಬಂದವರಿಗೆ ಓನರ್ ನನ್ನ ತೋರಿಸಿ ಏನೋ ಹೇಳುತ್ತಿದ್ದ. ಅವರು ನನ್ನ ಹತ್ತಿರ ಬಂದು ಲಾರಿ ಹತ್ತು ಬಾ ಅಂತ ಕರೆಯುತ್ತಿದ್ದರು. ಆದರೆ ಅವತ್ತು ರಾತ್ರಿ ಹತ್ತುಗಂಟೆಯ ತನಕ ನಾನು ಯಾರಿಗೂ ಉತ್ತರ ಕೊಡದೆ ಸುಮ್ಮನೇ ಇದ್ದೆ. ಕೊನೆಗೆ ಹೋಟೆಲಿನವನು ಹತ್ತಿರ ಕರೆದು ನೋಡು ಸುಮ್ಮನೇ ಅವರ ಜೊತೆ ಹೋಗು, ದುಡ್ಡು ಊಟ ಕೊಡ್ತಾರೆ ನಿನ್ನನ್ನಿಲ್ಲಿ ಯಾರೂ ಸಾಕಲ್ಲ ಅಂದ. ಅವನ ಹೋಟೆಲ್ಲಿನಲ್ಲೇ ಕೂತಿದ್ದರೂ ಅವನು ಕುಡಿಯಲು ನೀರೂ ಕೊಟ್ಟಿರಲಲ್ಲ. ಹೊಟ್ಟೆ ಹಸಿದಿತ್ತು. ಹು ಅಂದು ಬಿಟ್ಟೆ. ಅವಾಗ ಬಂದ ಲಾರಿಯ ಡ್ರೈವರ್ ಒಬ್ಬ ಊಟ ಕೊಡಿಸಿ ಲಾರಿ ಹತ್ತು ಅಂದ. ಮರುಮಾತಾಡದೆ ಹತ್ತಿಬಿಟ್ಟೆ.
ಅಲ್ಲಿಂದ ಶುರುವಾಯಿತು ನೋಡಿ ಅಲೆದಾಟದ ಬದುಕು. ಆ ಲಾರಿಯಿಂದ ಈ ಲಾರಿ. ಈ ಊರಿನಿಂದ ಆ ಊರು. ಹೀಗೆ ಹದಿನೈದು ವರ್ಷಗಳ ಕಾಲ ದೇಶದ ಎಲ್ಲ ಹೈವೇಗಳನ್ನು ಕಂಡುಬಿಟ್ಟೆ. ಸಿಕ್ಕಸಿಕ್ಕವರ ಜೊತೆ ಮಲಗಿದೆ, ಸಿಕ್ಕಿಸಿಕ್ಕಿದ್ದನ್ನೆಲ್ಲ ತಿಂದು, ಕುಡಿದೆ. ಮೈ ಎಷ್ಟೂ ಅಂತಾ ಕೇಳುತ್ತೇ? ಒಂದು ದಿನ ಅದು ಸುಸ್ತಾಯಿತು. ಪ್ರಯಾಣ ಸಾಕು ಅನಿಸಿ, ಈ ಕೊಳಕು ಬಸ್ಟ್ಯಾಂಡಿಗೆ ಬಂದು ನಿಂತೆ. ಪಕ್ಕದಲ್ಲೇ ಇರೋ ಸ್ಲಮ್ಮಿನ ಗುಡಿಸಲಲ್ಲಿ ಇರುತ್ತೇನೆ. ಕತ್ತಲಾಗೊ ಸಮಯಕ್ಕೆ ಸರಿಯಾಗಿ ಈ ಸ್ಟ್ಯಾಂಡಿಗೆ ಬಂದು ನಿಲ್ಲುತ್ತೇನೆ. ಒಬ್ಬರೋ ಇಬ್ಬರೋ ಗಿರಾಕಿಗಳು ಸಿಗುತ್ತಾರೆ., ಅವರು ಕೊಟ್ಟಷ್ಟು ತಗೊಂಡು ಮಲಗ್ತೀನಿ ಇಲ್ಲೇ ಎಲ್ಲಾದರು. ಮೂಳೇ ಚಕ್ಕಳವಾಗಿರೋ ಈ ಮೈಗಿನ್ಯಾರು ಜಾಸ್ತಿ ಕೊಡ್ತಾರೆ ಹೇಳಿ? ಎರಡು ಹೊತ್ತು ತಿನ್ನೋಕೆ, ಸಾಯಂಕಾಕಲ ಬ್ರಾಂಡಿಗೆ ಸಾಕಾಗುತ್ತೆ, ಬಿಡಿ.
ಈ ಕೆಲಸ ಬಿಡು ಅಂತ ಈಗ ಹೇಳೋದನ್ನ ನೀವು ಅವತ್ತು ಮೈಯಲ್ಲಿ ನೆಣ ಇರೋವಾಗಲೇ ಹೇಳಿದ್ದರೆ ಕೇಳ್ತಾ ಇದ್ದೆನೋ ಏನೋ? ಈಗ ಅದನ್ನ ಬಿಟ್ಟರೆ ಅನ್ನ ಯಾರು ಹಾಕ್ತಾರೆ?
ಮಾತು ಮುಗಿಸಿ ಎದ್ದವಳ ಕೈಲಿ ನೂರು ರೂಪಾಯಿಗಳ ಐದು ನೋಟು ತುರುಕಿ, ಇವತ್ತು ನಿಮ್ಮ ದುಡಿಮೆ ಹಾಳು ಮಾಡಿದ್ದಕ್ಕೆ ಕ್ಷಮಿಸಿ ಎಂದು ಹೊರಟೆ. ಹೊರಟವನಿಗೆ ಹಿಂದಿರುಗಿ ಅವಳ ಮುಖ ನೋಡುವ ದೈರ್ಯವಾಗಲಿಲ್ಲ. ಒಳಗೆಲ್ಲೋ ಅಪರಾದಿಪ್ರಜ್ಞೆಯ ನೋವು!
(‘ಅಸಹಾಯಕ ಆತ್ಮಗಳು’ ಎನ್ನುವ ಮಾಲಿಕೆಯಲ್ಲಿ ನಾನು ಬರೆದ ಈ ಕತೆಗಳು ನೈಜ ಜೀವನದ ಚಿತ್ರಗಳಾಗಿದ್ದು, ಸಂಬಂದಿಸಿದ ಹೆಣ್ಣುಮಕ್ಕಳನ್ನು ಸಂದರ್ಶಿಸಿ ಅವರ ಬಾಯಿಂದಲೇ ಕೇಳಿ ಬರೆದ ಕತೆಗಳಾಗಿವೆ-)ನಿಮ್ಮ ಲೇಖಕ…………….ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ದಿನಾಂಕ:21-12-1996
ಆಯ್ಯಬ್ಬ..ಮನಸು ಕದಡಿ ಕಣ್ಣೀರಾದೇ..
ವಾವ್ ಸೂಪರ್ ಕಥೆ ಸೊಗಸಾಗಿದೆ ಸರ್
ಛೆ…ಆ ದೇವರು ಹೆಣ್ಣು ಮಕ್ಕಳ ಪೋಷಕರನ್ನು ಕಿತ್ತುಕೊಂಡು ಅದೆಂತಹ ಕಷ್ಟ ಕೊಡುತ್ತಾನೆ…ಬೇಸರವಾಯ್ತು…
ದೇವರೇ…ಇಂತಹ ಅಮಾಯಕ ಜೀವನ ಛಿದ್ರವಾಗಿ ಅಸಹಜ ಸ್ಥಿತಿಗೆ ಬಂದಿದ್ದು ದುರಂತವೇ ಸರಿ…ಭದ್ರತೆ ಎನ್ನುವ ಧ್ವನಿ ಅಭದ್ರತೆಯ ಮೂಲವೆಂತಾಗಿದೆ…ಕಥೆ ಚೆನ್ನಾಗಿದೆ… ಸರ್
ಕರುಳು ಹಿಚುಕಿದಂತಾಯ್ತು…