ಮಾನಸಿಕ ತುಮುಲ, ಸಣ್ಣ ಕಥೆ-ಬಿ.ಟಿ.ನಾಯಕ್

ಕಥಾ ಸಂಗಾತಿ

ಬಿ.ಟಿ.ನಾಯಕ್

ಮಾನಸಿಕ ತುಮುಲ

ರಾಮಾಂಜನಪ್ಪ ಮತ್ತು ನಾರಾಯಣಪ್ಪ ಇಬ್ಬರು ಒಳ್ಳೆಯ ಸ್ನೇಹಿತರು. ಕನಿಷ್ಠ ವಾರಕ್ಕೊಮ್ಮೆಯಾದರೂ ಅವರು ಪರಸ್ಪರ ಭೇಟಿಯಾಗುತ್ತಿದ್ದರು. ಅವರವರ ಮನೆಗಳು ಪರಸ್ಪರ ಒಂದರ್ಧ ಕಿಲೋ ಮೀಟರ್ ದೂರದಲ್ಲಿ ಇವೆ. ಆದರೂ, ಅವರು ಇಬ್ಬರೂ ಸೇರಿ ತಮ್ಮ ಕಷ್ಟ ಸುಖಗಳನ್ನು ಪರಸ್ಪರ ಹಂಚಿ ಕೊಳ್ಳುತ್ತಿದ್ದರು. ಅಲ್ಲದೇ, ಅವರವರ ಕುಟುಂಬದವರು ಇವರಿಬ್ಬರ ಸ್ನೇಹ ನೋಡಿ ಆನಂದ ಪಡುತ್ತಿದ್ದರು. ಆ ಸಲಿಗೆಯಿಂದ ಎರಡೂ ಕುಟುಂಬಗಳಲ್ಲಿರುವವರು ಒಬ್ಬರಿಗೊಬ್ಬರು ನೆರಳಿನಂತೆ ಇದ್ದರು.

ಹಾಗಿರುವಾಗ, ಒಂದು ದಿನ ನಾರಾಯಣಪ್ಪ ಬೆಳಗ್ಗೆ ಏದ್ದು ಎಂಟು ಗಂಟೆಗೆಲ್ಲಾ ರಾಮಂಜನಪ್ಪನ ಮನೆ ಕಡೆಗೆ ಧಾವಿಸಿ ಬಂದವನೇ, ಆತನನ್ನು ಕಂಡು ;
‘ರಾಮಣ್ಣ ನಿನ್ನ ಜೊತೆ ಮಾತಾಡುವುದಿದೆ ಸ್ವಲ್ಪ ಹೊರಗೆ ಹೋಗೋಣ ಬಾ. ‘ ಎಂದ.
‘ನಾರಾಯಣ ನಿನ್ನ ಸಮಸ್ಯೆ ಏನು ? ಇಲ್ಲೇ ಮಾತಾಡಿ ಬಿಡೋಣ. ಇಲ್ಲಿ ಯಾವ ಅಡೆ ತಡೆಗಳಿಲ್ಲ’ ಎಂದ.
‘ಏಕೋ ನನಗೆ ದುಃಖ ಒತ್ತಿ ಬರುತ್ತಿದೆ. ನಿನ್ನ ಶ್ರೀಮತಿ ಅದನ್ನು ನೋಡಿದರೇ ಕಷ್ಟ.’ ಎಂದಾಗ;
‘ಹಾಗಾದರೇ ಮೇಲಿರುವ ಕೋಣೆಗೆ ಹೋಗೋಣ ಬಾ’ ಎಂದು ಮೇಲ್ಮಾಳಿಗೆ ಕಡೆ ಹೋಗುತ್ತಿರುವಾಗ ರಾಮಂಜನಪ್ಪನವರ ಶ್ರೀಮತಿ ಚಹಾ ದೊಂದಿಗೆ ಬಂದೇ ಬಿಟ್ಟಳು.
‘ಅಣ್ಣಾ ಚಹಾ ಸೇವನೆ ಮಾಡಿ’ ಎಂದಳು.
‘ಆಯ್ತಮ್ಮಾ ಕೊಡು’ ಎಂದು ಪಡೆದ ಚಹಾ ಗುಟುಕು ಹಾಕುತ್ತಲೇ ಚಿಂತಿಸುತ್ತಿದ್ದ. ಅದನ್ನು ಗಮನಿಸಿದ ರಾಮಾಂಜನಪ್ಪ ;ಅಯ್ಯೋ ಬಿಡು ನಾರಾಯಣ.. ನಿನ್ನ ಚಿಂತೆ ಚಿಟಿಕೆ ಹೊಡೆಯುವಷ್ಟರಲ್ಲಿ ಸರಿ ಮಾಡಿಬಿಡ್ತೇನೆ. ಈಗ ಚಹಾ ಕುಡಿ’ ಎಂದನು.’ಆಯ್ತು ಕಣಪ್ಪ’ ಎಂದು ಚಹಾ ಸೇವನೆ ಮಾಡಿದ ಮೇಲೆ ಇಬ್ಬರೂ ಮೇಲ್ಮಾಳಿಗೆ ಹೋದರು.ಅಲ್ಲಿ ನಾರಾಯಣಪ್ಪ ರಾಮಾಂಜನಪ್ಪನ ಎರಡೂ ಕೈಗಳನ್ನು ಗಟ್ಟಿಯಾಗಿ ಹಿಡಿದು ಆತನ ಮುಖನೋಡಿ ಗೊಳೋ ಎಂದು ದುಃಖಿಸತೊಡಗಿದ.ಏನು ಸಮಸ್ಯೆ ಹೇಳು ನಾರಾಯಣ?’ ಎಂದಾಗ;
‘ಅಯ್ಯೋ ..ಅದ್ಹೇಗೆ ಹೇಳಲಿ. ಇಂದು ನಾನು ನನ್ನ ಸೊಸೆಗೆ ಹೀಗೆ ಹೇಳಿದೆ;’ಏನಮ್ಮಾ ಆಶಾ, ಅದೇನು ನಿನ್ನ ಯಜಮಾನ ಅಂದ್ರೇ ನನ್ನ ಮಗ ತಿಂಡಿ ತಿನ್ನದೆಯೇ ಆಫೀಸಿಗೆ ಹೊರಟು ಹೋದ. ಸ್ವಲ್ಪ ಬೇಗ ಎದ್ದು ಏನಾದರೂ ತಿಂಡಿ ಮಾಡಿ ಕೊಡಬಹುದಿತ್ತಲ್ಲ. ನಿನಗೆ ಆಷ್ಟು ಸೋಮಾರಿತನವೇ ?’ ಎಂದಾಗ ಅದಕ್ಕವಳು;
‘ನನಗೆ ತಿಳಿಸದೆಯೇ ಹಾಗೆಯೇ ತಯಾರಾಗಿ ಹೊರಡುವಾಗ ನಾನು ಏನು ಮಾಡಬಲ್ಲೆ ಮಾವ ?’ ಎಂದು ಮರು ಪ್ರಶ್ನೆ ಮಾಡಿದಳು. ಆಗ ನಾನು;
‘ಅದೆಂಥವಳು ನೀನು, ಮದುವೆಯಾಗಿ ಇಷ್ಟು ವರ್ಷಗಳಾದರೂ, ಅವನನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎಂದ ಹಾಗಾಯಿತು’ ಎಂದಾಗ;.
‘……… ‘ ಅವಳು ಏನೂ ಉತ್ತರ ಕೊಡಲಿಲ್ಲ.
‘ಇಷ್ಟೇ..ಆದದ್ದು ರಾಮಣ್ಣ. ಆದರೇ, ಆಶಾ ಅಳತೊಡಗಿದಳು. ಅವಳು ಅಳುವದನ್ನು ನೋಡಿ ನಿನ್ನ ಅತ್ತಿಗೆ ಭಾಗಾ ನನ್ನನ್ನೇ ಗುರಿ ಮಾಡಿ ;
‘ನಿಮಗೇಕೆ ಬೇಕಿತ್ತು ಉಸಾಬರಿ.  ಅವಳುಂಟು ಅವಳ ಸಂಸಾರ ಉಂಟು. ಸುಮ್ಮನೇ, ಅದರಲ್ಲಿ ಯಾಕೆ ತಲೆ ಹಾಕಿದಿರಿ ?’ ಎಂದಳು. ಅಂತೂ ಇಂತೂ ಇಬ್ಬರೂ ಸೇರಿ ನನಗೆ ಉಗಿದ ಹಾಗೆ ಆಯಿತು. ಇದರಲ್ಲಿ ನನ್ನ ತಪ್ಪು ಏನಿದೆ ರಾಮಣ್ಣ ?’ ಏಂದು ಕೇಳಿದ.
‘ಹೀಗಾಯಿತಾ ?. ಈಗಿನ ಕಾಲದ ಹುಡ್ಗಿಯರ ಕೋಪ ಮೂಗಿನ ಮೇಲೆಯೇ.’ ಎಂದು ಹೇಳಿ;
‘ಈಗ ಸಮಸ್ಯೆಯಾದರೂ ಏನು ? ಏನೂ ಅನ್ನಿಸ್ತಾ ಇಲ್ಲವಲ್ಲ?’
‘ನೀನು ಹಾಗೆ ತಿಳಿದುಕೊಂಡಿಯಾ.  ಆದರೇ, ಅತ್ತೆ ಸೊಸೆ ಇಬ್ಬರೂ ಸೇರಿ ನನ್ನನ್ನು ತೊಳೆದು ಬಿಟ್ಟದ್ದೇ ನನ್ನ ದುಃಖ.’
‘ಸರಿ.. ಈಗೇನು ನಾನು ನಿಮ್ಮಲ್ಲಿಗೆ ಬಂದು ಪಂಚಾಯತಿ ಮಾಡಬೇಕಾ ?’
‘ಹೌದು ಮತ್ತೇ, ನೀನು ನನ್ನ ಸ್ನೇಹಿತ ಅಲ್ವ. ಈ ಮೋಡ ಕವಿದ ವಾತಾವರಣವನ್ನು ನೀನೇ ತಿಳಿ ಮಾಡಬೇಕು’ ಎಂದ.
ಆಮೇಲೆ ಇಬ್ಬರೂ ಅಲ್ಲಿಂದ ಹೊರಟು ನಾರಾಯಣಪ್ಪನ ಮನೆ ತಲುಪಿದಾಗ, ರಾಮಣ್ಣನನ್ನು ಭಾಗಮತಿ ಒಳಕ್ಕೆ ಕರೆದಳು. ಆಗ ಆಕೆ ಹೀಗೆ ಹೇಳಿದಳು;
‘ಅಣ್ಣಾ ಚಹಾ ತರುತ್ತೇನೆ ಕೂತ್ಕೊಳ್ಳಿ’ ಎಂದಾಗ, ಆಕೆಯನ್ನು ತಡೆದ ರಾಮಾಂಜನಪ್ಪ ಹೀಗೆ ಪ್ರಹಾರ ಮಾಡಿದ.
‘ಏನು ಅತ್ತಿಗೆ, ನೀವೂ ನಿಮ್ಮ ಸೊಸೆ ಸೇರಿ ನನ್ನ ಸ್ನೇಹಿತನನ್ನು ಚೆನ್ನಾಗಿ ರುಬ್ಬಿ ಬಿಟ್ಟೀದ್ದೀರಿ ? ಏನು ಆತನ ಮಾತಿಗೆ ಬೆಲೆನೇ ಇಲ್ವಾ ?
ಆಗ ಭಾಗಮ್ಮ ನಾರಾಯಣಪ್ಪನ ಕಡೆ ನೋಡಿ ಕೆಂಗಣ್ಣು ಬೀರಿದಳು. ಅಲ್ಲೇ ಇದ್ದ ಆಶಾ ಕೂಡಾ ಇವರ ಮಾತು ಕೇಳಿ ಮುಖ ಸಣ್ಣದು ಮಾಡಿಕೊಂಡಳು.  ಆಶಾಳನ್ನು ನೋಡಿದ ರಾಮಣ್ಣ ಹೀಗೆ ಛೇಡಿಸಿದ;
‘ಏನಮ್ಮ ಮಗಳೇ, ಹಿರಿಯರನ್ನು ಗೌರವಿಸುವುದು ನಿನಗೆ ಹೇಳಬೇಕೇ ? ಈ ಸಂಸ್ಕಾರ ನೀನು ತವರಿನಿಂದ ಬರುವಾಗ ತಂದಿಲ್ಲವೇ ?’ ಆಗ ಮಧ್ಯದಲ್ಲಿ ಭಾಗಮ್ಮ ಮಾತಾಡಿದಳು;
‘ನಿಲ್ಲಿಸಿ ಅಣ್ಣ….ಏನಂತ ಮಾತಾಡ್ತೀರಿ, ಏನೋ ಅನಾಹುತ ಆಗಿದೆ ಏಂಬ ಹಾಗೆ ಹೇಳುತ್ತಿದ್ದೀರಾ. ನಮ್ಮನೆಯವರು ನಿಮ್ಮತಲೆಗೆ ಅದೇನು ತುಂಬಿದರು ?’
‘ಯಾಕಮ್ಮ ನೀನೂ ಸಹ ನನ್ನ ಸ್ನೇಹಿತನ ಗೋಳಿಗೆ ಇನ್ನೂ ಖಾರ ಹಾಕ್ತಿಯಾ.’ ಎಂದನು ರಾಮಣ್ಣ.
‘ನನಗೆ ಏನೂ ಅರ್ಥವಾಗದಾಗಿದೆ.  ನೀವೇ ಏನಾದರೂ ಮಾಡಿಕೊಳ್ಳಿ’ ಎಂದು ಭಾಗಾ ಸರ ಸರನೇ ಅಲ್ಲಿಂದ  ಹೊರಟು ಹೋದಳು. ಆಗ ಆಶಾ ಕೂಡ ಮುಖ ತಿರುಗಿಸಿಕೊಂಡು ಒಳಕ್ಕೆ ಹೋದಳು. ಈಗ ನಿಜವಾಗಿಯೂ  ಕಾರ್ಮೋಡ ಕವಿದು ಕತ್ತಲಾಯಿತು.  

ಅತ್ತೆ ಸೊಸೆ ಹೋದ ಮೇಲೆ ರಾಮಣ್ಣ ಹಾಗು ನಾರಾಯಣಪ್ಪ ಸ್ವಲ್ಪ ಹೊತ್ತು ಏನೂ ತಿಳಿಯದೇ ಹಾಗೆಯೇ ಸುಮ್ಮನೇ ಕುಳಿತು ಕೊಂಡರು.  ಆಮೇಲೆ ರಾಮಣ್ಣ ತಮ್ಮ ಮನೆಗೆ ಹೋದನು. ಇತ್ತ ನಾರಾಯಣಪ್ಪ ತಲೆ ಮೇಲೆ ಕೈ ಹೊತ್ತು ಮೂಕನಾಗಿ ಕುಳಿತು ಬಿಟ್ಟನು.
ಆ ನಂತರ ಅತ್ತೆ, ಸೊಸೆ ಗೋಜಿಗೆ ಹೋಗದೇ ನಾರಾಯಣಪ್ಪ ಒಂದು ರೂಮಿನೊಳಕ್ಕೆ ಹೋಗಿ ಕುಳಿತುಕೊಂಡನು. ಏಕೋ ಆತನ ಮನಸ್ಸು ತಳಮಳ ಗೊಂಡಿತು. ಆತನಿಗೆ ಹಸಿವು ಕೂಡಾ ಆಗಿತ್ತು. ಅವೆರಡೂ ಶಮನವಾಗಬೇಕಾದರೆ,  ಭಾಗಮ್ಮಳ ಬಳಿ ಹೋಗಿ ತಪ್ಪಿನ ಅರಿವನ್ನು ನಿವೇದಿಸಿ ಕೊಳ್ಳ ಬೇಕೆಂದಿನಿಸಿತು.
ಆಗ ತಮ್ಮ ಕೋಣೆಯಿಂದ ಹೊರಗೆ ಬಂದು ಭಾಗಮ್ಮಳನ್ನು ಹುಡುಕಿದನು. ಆದರೇ, ಆಕೆ  ಸಿಗಲಿಲ್ಲ. ಆಮೇಲೆ, ಆಶಾಳ ಕೋಣೆಗೆ ಹೋದಾಗ ಅಲ್ಲಿ ಆಶಾ ಕೂಡಾ ಇರಲಿಲ್ಲ. ಅಡುಗೆ ಕೊಣೆಯಲ್ಲಿ ಇರಬಹುದೆಂದು ಇಣುಕಿದಾಗ ಅಲ್ಲಿ ಯಾರೂ ಕಾಣಲಿಲ್ಲ ! ಇದೇನಿದು ಇಬ್ಬರೂ ಕಾಣುತ್ತಿಲ್ಲವಲ್ಲ ಎಂದು ಮನೆಯಿಂದ ಹೊರಗೆ ಬಂದು ಇಣುಕಿ ನೋಡಿದರು. ಅನುಮಾನ ಮೂಡಿ ಮನೆಯ ಮೇಲ್ಛಾವಣಿಗೆ ಹೋದರು. ಅಲ್ಲಿಯೂ ಯಾರೂ ಕಾಣಲಿಲ್ಲ. ಏಕೋ ಮನಸ್ಸಿಗೆ ಆತಂಕವಾಯಿತು. ಆಗ ಚಡ ಪಡಿಕೆ ಹೆಚ್ಚಾಯಿತು. ಸುಮಾರು ಒಂದು ಗಂಟೆಯಾಯಿತು ಅವರಿಬ್ಬರ ಸುಳಿವೇ ಇಲ್ಲ. ಆಮೇಲೆ ಪಕ್ಕದ ಮನೆಯ ಅಂಬುಜಾಕ್ಷಮ್ಮನವರಲ್ಲಿ ವಿಚಾರಿಸಲು ಹೋದಾಗ;
‘ಅಣ್ಣಾ.. ಅವರ್ಯಾರೂ ಇಲ್ಲಿಗೆ ಬಂದಿಲ್ಲ. ಏಕೆ ಅವರು ನಿಮಗೆ ಏನೂ ಹೇಳದೆಯೇ ಹೊರಟು ಹೋಗಿದ್ದಾರೆಯೇ ?’ ಎಂದು ಏನೆಲ್ಲಾ ಕೇಳಿದಾಗ ನಾರಾಯಣಪ್ಪ ತೆಪ್ಪಗೆ ಅಲ್ಲಿಂದ ಮರಳಿದನು.
ಈಗ ಸ್ನೇಹಿತ ರಾಮಂಜನ ಬಳಿ ಹೋಗಬೇಕೆಂದಿನಿಸಿತು. ಆದರೇ, ಆತನ ಬಳಿ ಹೋಗಿ ಬಂದದ್ದೇ ಈಗ ದೊಡ್ಡ ರಾದ್ಧಾಂತವಾಗಿದೆ, ಮತ್ತೇ ಹೋದರೇ, ಇದ್ದ ಸಮಸ್ಯೆ ಇನ್ನಷ್ಟು ಕಗ್ಗಂಟಾದರೇ ಕಷ್ಟ, ಏನು ಮಾಡೋದು ?  ಬೇಡವೇ ಬೇಡ, ಆತನ ಬಳಿ ಹೋಗುವ ವಿಚಾರವನ್ನು ಕೈ ಬಿಟ್ಟನು.
ಸುಮಾರು ಎರಡೂವರೆ ಗಂಟೆಗಳಾದರೂ ಅತ್ತೆ, ಸೊಸೆ ಇಬ್ಬರೂ ಬರಲಿಲ್ಲ. ಈಗ
ನಾರಾಯಣಪ್ಪ ನಿಜವಾಗಿಯೂ ಗಾಭರಿಗೊಂಡನು. ಆಗ ದೇವರ ಕೊಣೆಗೆ ಹೋಗಿ, ಕಣ್ಮುಚ್ಚಿ ನಿಂತು ಮನದಲ್ಲಿ  ‘ದೇವರೇ,ನನ್ನ ಸಮಸ್ಯೆಗೆ ನೀನೇ ಪರಿಹಾರ ನೀಡು’ ಎಂದು ಪ್ರಾರ್ಥಿಸಿದನು.
ಅಲ್ಲದೇ, ಇನ್ನು ಮುಂದೆ ಮನೆಯಲ್ಲಿ ಏನೇ ವಿಚಾರಗಳು ಬರಲಿ ಅಥವಾ ವಿವಾದಗಳು ಬಂದರೂ ಅದರಲ್ಲಿ ತಲೆ ಹಾಕದೆಯೇ ತೆಪ್ಪಗಿರುತ್ತೇನೆ ಎಂದು ಮನಸ್ಸಿನಲ್ಲಿ ಅಂದು ಕೊಂಡನು. ಈಗ ಆತನ
ಮಾನಸಿಕ ತುಮುಲ ಹೆಚ್ಚಾಯಿತು. ಇನ್ನೇನು ಆತಂಕದಲ್ಲಿರುವಾಗ, ಕುರುಡನ ಕಣ್ಣಿಗೆ ಒಂದು ಸಣ್ಣ ಕಿರಣ ಮೂಡಿದಂತೆ ಭಾಗಮ್ಮ ಮನೆಯೊಳಕ್ಕೆ ಬಂದಳು. ಆಕೆ ನಾರಾಯಣಪ್ಪನನ್ನು ನೋಡಿ;
‘ಏನು ಮಾಡ್ತಾ ಇದ್ದೀರಿ ?’ ಎಂದು ಕೇಳಿದಳು.
‘ನಾನೀಗ ಏನು ಮಾಡಬಲ್ಲೆ ?ನಾನಾಗಲೇ ಅವಾಂತರ ಮಾಡಿಯಾಗಿದೆ. ಈಗ ಪಶ್ಚಾತಾಪ ಪಡುತ್ತಿದ್ದೇನೆ ಅಷ್ಟೇ’ ಎಂದನು.
‘ಅಯ್ಯೋ, ಏನಾಗಿದೆ ನಿಮಗೆ ? ನಾನು ಕೇಳೊದೇನು ನೀವು ಹೇಳೋದೇನು ?’
‘ನಾನು ಏನೂ ಹೇಳೋ ಹಾಗಿಲ್ಲ.. ಮಾತಾಡೋ ಹಾಗಿಲ್ಲ, ಸಾಕು ಈ ಸಂಸಾರ’ ಎಂದ ನಾರಾಯಣಪ್ಪ.
‘ಸಂಸಾರ ಝಾಡಿಸಿಕೊಳ್ತೀನಿ ಅನ್ನಲು ಅದೇನು ವಸ್ತುವೇ ?’
ಆ ಮಾತಿಗೆ ಉತ್ತರ ಕೊಡದೆಯೇ ಆಕೆಗೆ ಹೀಗೆ ಕೇಳಿದ;
‘ಅದು ಬಿಡು, ನೀನೆಲ್ಲಿಗೆ ಹೋಗಿದ್ದೆ ಮತ್ತು ಆಶಾ ಮನೇಲಿ ಇಲ್ಲವಲ್ಲ, ಅವಳೆಲ್ಲಿಗೆ ಹೋಗಿದ್ದಾಳೆ ?’
‘ನಾನು ಮಂದಿರಕ್ಕೆ ಹೋಗಿದ್ದೆ. ಅಲ್ಲಿ ಕಾರ್ಯಕ್ರಮ ಇತ್ತು, ಅರ್ಧಕ್ಕೆ ಮೊಟಕು ಮಾಡಿ ಬಂದಿದ್ದೇನೆ’ ಎಂದಳು.
‘ಹಾಗಾದರೆ, ಆಶಾ ಎಲ್ಲಿ ?’
‘ನನಗೆ ತಿಳಿದಿಲ್ಲ. ಏಕೆ ಮನೆಯಲ್ಲಿ ಇಲ್ಲವೇ ?’ಮರು ಪ್ರಶ್ನೆ ಹಾಕಿದಳು.
‘ಇಲ್ಲ..ಆಕೆ ಕಾಣಿಸುತ್ತಿಲ್ಲ’ ಎಂದಾಗ;
‘ಹುಚ್ಚು ಹುಡುಗಿ.. ನೊಂದು ಕೊಂಡು ಇಲ್ಲೇ ಹತ್ತಿರಕ್ಕೆ ಎಲ್ಲಿಯಾದರೂ ಹೋಗಿರಬೇಕು. ಆಕೆ ಬರ್ತಾಳೆ ಬಿಡಿ ‘ ಎಂದಳು.
‘ಏಕೋ ಅನುಮಾನ ಕಣೆ.. ಮನೆಯಲ್ಲಿಯ ಎಲ್ಲಾ ವಿಷಯಗಳಲ್ಲಿ ನಾನು ಮೂಗು ತೂರಿಸ ಬಾರದಿತ್ತು’ ಎಂದ ನಾರಾಯಣಪ್ಪ.  
‘ಅಯ್ಯೋ ಬಿಡಿ, ಇದೇನು ಮಹಾ. ಅವಳೇನೂ ಮುನಿಸಿ ಕೊಂಡಿಲ್ಲ ಎಂದನಿಸುತ್ತೆ. ಆದರೇ, ತಾನು ಹೋಗುವಾಗ ಮನೆಯಲ್ಲಿದ್ದ ನಿಮಗೆ ಹೇಳಿ ಹೋಗಬೇಕಾಗಿತ್ತು ಆಲ್ವಾ.?’
‘ಭಾಗಾ..ಆಕೆ ಮುನಿಸಿ ಕೊಂಡು ಏನಾದ್ರೂ ತವರಿಗೆ ಹೋದಳೇ ?’
‘ಥೂ..ನೀವು ಗಂಡಸರೇ ಇಷ್ಟು. ನಿಮಗೆ ತಾಳ್ಮೆ ಇಲ್ಲ ಮತ್ತು ಧೈರ್ಯಾನೂ ಇಲ್ಲ. ನಿಮಗೆ ಹಸಿವಾಗಿದೆಯೋ ಏನೋ, ಸ್ವಲ್ಪ ತಿಂಡಿ ತಿನ್ನಿ ಮನಸ್ಸಿಗೆ ನೆಮ್ಮದಿ ಕೊಡುತ್ತದೆ’ ಎಂದು ಅವಲಕ್ಕಿ ಚೂಡಾ ತಂದು ಕೊಟ್ಟಳು.
ಆದರೇ, ನಾರಾಯಣಪ್ಪಗೆ ಏನೂ ತಿನ್ನಲು, ಕುಡಿಯಲು ಮನಸ್ಸೇ ಆಗುತ್ತಿಲ್ಲ. ಆಶಾ ಬಂದರೆ ಸಾಕು, ಆಕೆಯ ಬಳಿ ಕ್ಷಮೆ ಕೋರಿ ಇನ್ಮೇಲೆ ಎಂಥಹ ತಂಟೆಗೂ ಬರೋದಿಲ್ಲ ಎಂದು ಹೇಳಿ ಬಿಡುತ್ತೇನೆ ಎಂದು ಧೃಡ ನಿರ್ಧಾರ ಮಾಡಿದನು.

ಸುಮಾರು ಹೊತ್ತು ಕಳೆದ ಮೇಲೆ ಆಶಾ ಮನೆಗೆ ಮರಳಿದಳು.  ಆಕೆ ತನ್ನ ಅತ್ತೆ-ಮಾವನವರ ಮುಖ ನೋಡಿದಳು. ಅವರ ಮುಖದಲ್ಲಿ ಗಾಭರಿ ಕಂಡಳು. ಆಗ ಆಕೆಯೇ ಹೀಗೆ ಹೇಳಿದಳು ;
‘ನಾನು ನನ್ನ ಸ್ನೇಹಿತೆಯ ಮನೆಗೆ ಹೋಗುವಾಗ ಅತ್ತೆ ಮನೆಯಲ್ಲಿರಲಿಲ್ಲ, ಅಲ್ಲದೇ, ಮಾವ ರೂಮಿನಲ್ಲಿದ್ದದ್ದು ನೋಡಿದೆ. ಆದಷ್ಟು ಬೇಗ ಬಂದ ರಾಯಿತೆಂದು ಅವರಿಗೆ ಹೇಳದೆಯೇ ಅವಸರದಲ್ಲಿ ಹೊರಟುಹೋದೆ.’ ಎಂದಳು.
‘ಸರಿ ಬಿಡಮ್ಮ, ನೀನೂ ಅವಲಕ್ಕಿ ಚೂಡಾ ಸೇವಿಸಿಬಿಡು, ಮಧ್ಯಾನ್ಹ ಊಟ ಮಾಡಿದರಾಯಿತು’ ಎಂದು ಆಶಾಗೆ ಹೇಳಿದಳು ಅತ್ತೆ.  
‘ಸ್ನೇಹಿತೆಯ ಮನೆಯಲ್ಲಿ ನನ್ನ ತಿಂಡಿ ಆಯಿತು, ನೀವು ಮುಗಿಸಿ ಬಿಡಿ ಅತ್ತೆ’ ಎಂದಳಾಕೆ.
ಭಾಗಾ ಅಡುಗೆ ಕೋಣೆಗೆ ಹೋದಾಗ ಆಶಾ ಅಲ್ಲೇ ಇರುವುದನ್ನು ಕಂಡು
ನಾರಾಯಣಪ್ಪ ತನ್ನ ಸೊಸೆಯನ್ನು ಕರೆದು ಹೀಗೆ ಹೇಳಿದ;
‘ಅಮ್ಮಾ..ಆಶಾ ನನ್ನ ಮಾತಿನಿಂದ ನಿನಗೆ ನೋವಾಯಿತೇ ? ನಾನು ಹಾಗೆ ಹೇಳಬಾರದಿತ್ತು. ಏನೋ, ನನ್ನ ಮಗ ಹಸಿವಿನಿಂದ ಆಫೀಸಿಗೆ ಹೋಗುವುದು ನನಗೆ ಸಂಕಟವೆನಿಸಿತು. ಹಾಗಾಗಿ  ದುಡುಕಿನಲ್ಲಿ ಹೇಳಿದೆ.’ ಎಂದಾಗ;
‘ಮಾವಾ, ನಿಮ್ಮ ಕಾಳಜಿ ನನಗೆ ಅರ್ಥವಾಗುತ್ತದೆ. ನಿಮ್ಮ ಮಗ ಅರ್ಜೆಂಟಾಗಿ ಹೋಗಬೇಕಾಗಿ ಬಂದುದಕ್ಕೆ, ಹೊರಗಡೇನೇ ತಿಂಡಿ ತಿನ್ನುವದಾಗಿ ಹೇಳಿ ಅವಸರದಿಂದ ಅವರೇ ಹೊರಟು ಹೋದರು. ನನಗೆ ಏನೂ ಅವಕಾಶವನ್ನೇ ಕೊಡಲಿಲ್ಲ. ಅದನ್ನು ನಿಮಗೆ ಹೇಳಿದರೇ, ಎಲ್ಲಿ ನೀವು ನೊಂದು ಕೊಳ್ಳುತ್ತೀರೆಂದು ನಾನು ಹೇಳಲಿಲ್ಲ.’ ಎಂದಳು. ಆಗ ನಾರಾಯಣಪ್ಪನ ಕಣ್ಣಲ್ಲಿ ನೀರು ಬಂದವು. ಅದನ್ನು ಗಮನಿಸಿದ ಆಶಾ;
‘ಹಾಗೆ ಕಣ್ಣೀರು ಹಾಕಬೇಡಿ ಮಾವಾ. ಅಂಥಹದು ಏನೂ ಆಗಿಲ್ಲ. ಇದು ನಮ್ಮ ನಮ್ಮಲ್ಲಿ ಮೂಡಿದ ತಪ್ಪು ತಿಳುವಳಿಕೆ ಅಷ್ಟೇ’ ಎಂದು ಹೇಳಿ ಸಮಾಧಾನಿಸಿದಳು.
‘ನೀನು ಸೊಸೆಯಲ್ಲಮ್ಮ ನಮ್ಮ ಮನೆ ಮಗಳು’ ಆತ ಎಂದಾಗ ;
‘ಹೌದು ಮಾವ.. ನಾನು ನಿಮ್ಮ ಮಗಳೇ ಸರಿ, ತಂದೆ ಇಲ್ಲದ ನನಗೆ ನೀವೇ ತಂದೆ’ ಎಂದಳು.
ಆ ಮಾತುಗಳನ್ನು ಆಲಿಸಿದ ನಾರಾಯಣಪ್ಪ ಮುಜುಗರದಿಂದ ಹೊರ ಬಂದು, ಭಾರವಾಗಿದ್ದ ಮನಸ್ಸಿನ ಉದ್ವೇಗ ಹಗುರವಾದದ್ದು ತಾನು ಕಂಡುಕೊಂಡಾಗ,ತುಂಬಾ ಪುಳಕಿತನಾಗಿ ಸೊಸೆಯ ಮಾತಿಗೆ ಮನದಲ್ಲಿಯೇ ಒಂದು ಸಲಾಮು ಹೊಡೆದ.  


ಬಿ.ಟಿ.ನಾಯಕ್


12 thoughts on “ಮಾನಸಿಕ ತುಮುಲ, ಸಣ್ಣ ಕಥೆ-ಬಿ.ಟಿ.ನಾಯಕ್

  1. ಚಿಕ್ಕ ಚೊಕ್ಕ ಕಥೆ ಸಂಸಾರದಲ್ಲಿ ಸಣ್ಣಪುಟ್ಟ ಮಾತುಗಳೂ ಹೇಗೆ ಮನಸ್ತಾಪಕ್ಕೆ ಎಡೆಯಾಗುತ್ತವೆ ಎನ್ನುವುದನ್ನು ಮನಮುಟ್ಟುವಂತೆ ಸಾರಿ ಹೇಳಿದೆ.
    ಅಭಿನಂದನೆಗಳು

  2. ಅರಿತೋ ಅರಿಯದೆಯೋ ನಾವು ಕೂಡ ಇಂತಹ ತಪ್ಪು ಎಲ್ಲಿ ಮಾಡುತ್ತೇವೆ ಎಂದು ಅನಿಸುತ್ತಿದೆ ನನಗೆ. ಪುಟ್ಟ ಕಥೆ ಸೊಗಸಾಗಿದೆ.ಅಭಿನಂದನೆಗಳು.

    1. ನನ್ಕ ಕೌಟುಂಬಿಕ ಕಥೆಗಳಿಗೆ ತಮ್ಮ ಪ್ರೋತ್ಸಾಹ ಮೆಚ್ಚತಕ್ಕದ್ದು. ಧನ್ಯವಾದಗಳು M.R.

  3. ಕಥೆಯ ಶೈಲಿ, ಭಾಷೆ ಚನ್ನಾಗಿದೆ. ಅಭಿನಂದನೆಗಳು

  4. ಎಲ್ಲರ ಮನೆಯಲ್ಲೂ ಇಂತಹ ಪ್ರಸಂಗಗಳು ಬರುತ್ತಾ ಇರುತ್ತವೆ. ಧನ್ಯವಾದಗಳು.

    1. ನಿಮ್ಮ ಪ್ರತಿಕ್ರಿಯೆ ನನ್ನ ಈ ಕಥೆಗೆ ಪ್ರಪ್ರಥಮವಾಗಿ ಬಂದಿದೆ. ಇನ್ನು ಮುಂದೆ ತಾವು ನನ್ನ ಕಥೆಗಳನ್ನು ಓದಿ ಪ್ರೋತ್ಸಾಹಿಸುತ್ತೀರೆಂದು ನನಗೆ ಭರವಸೆ ಮೂಡುತ್ತಿದೆ. ಧನ್ಯವಾದಗಳು ಸರ್.

  5. ಉತ್ತಮ ಕತೆ. ಅಭಿನಂದನೆಗಳು

  6. ವಿಶಯ ಸಣ್ಣದೆ ಆಗಿದ್ದರೂ, ಮನೆಯಲ್ಲಿ ಮನಸುಗಳ ಮನಸ್ಥಾಪಕ್ಕೆ ಕಡಿಮೆ ಇಲ್ಲ.
    ಸಣ್ಣ ಕಥೆ ಚೆನ್ನಾಗಿದೆ ಸಾರ್.

    1. ಶ್ರೀಯುತ ಜಯರಾಮನ್ ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

Leave a Reply

Back To Top