ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಡಾ.ಸುರೇಖಾ ರಾಠೋಡ್

ಸಸ್ಯ ಮತ್ತು ಜೀವವಿಜ್ಞಾನಿ

ಅರ್ಚನಾ ಶರ್ಮಾ(1932-2008)

ಅರ್ಚನಾ ಶರ್ಮಾ ಖ್ಯಾತ ಭಾರತೀಯ ಸಸ್ಯವಿಜ್ಞಾನಿ, ಸೈಟೊಜೆನಟಿಸ್ಟ್, ಕೋಶ ಜೀವಶಾಸ್ತ್ರಜ್ಞೆ ಮತ್ತು ಸೈಟೊಟಾಕ್ಸಿಲಾಜಿಸ್ಟ್ ಆಗಿದ್ದರು. ಅರ್ಚನಾ ಅವರು ಫೆಬ್ರುವರಿ 16, 1932ರಂದು ಪುಣೆಯಲ್ಲಿ ಜನಿಸಿದರು. ಇವರ ಮನೆಯಲ್ಲಿ ಎಲ್ಲರು ಸುಶಿಕ್ಷಿತರಾಗಿದ್ದರು. ಅರ್ಚನಾ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ರಾಜಸ್ಥಾನದಲ್ಲಿ ಪಡೆದರು. ಬಿಕನೇ್ರ್ ಗೆ ಹೋಗಿ ಬಿಎಸ್ಸಿ ಮತ್ತು ಎಂ.ಎಸ್.ಸಿ ಯನ್ನು ಮುಗಿಸಿದರು. 1951ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದಲ್ಲಿ ಪಿಎಚ್.ಡಿ ಪದವಿಯನ್ನು ಪಡೆದರು. 1955ರಲ್ಲಿ ಡಿ.ಎಸ್ಸಿ. 1960ರಲ್ಲಿ ಸೈಟೊಜೆನೆಟಿಕ್ಸ್, ಹ್ಯೂಮನ್ ಜೆನೆಟಿಕ್ಸ್ ಮತ್ತು ಎನ್ವಿರಾನ್‍ಮೆಂಟಲ್ ಮ್ಯುಟಜೆನೆಸಿಸ್ಸ್‍ನಲ್ಲಿ ಪರಿಣಿತಿಯನ್ನು ಹೊಂದಿದ ಇವರು ಕಲ್ಕತ್ತಾ ವಿಶ್ವವಿದ್ಯಾಲಯದಿಂದ ಡಿ.ಎಸ್ಸಿ ಪಡೆದ ಎರಡನೆಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1967ರಲ್ಲಿ ಅರ್ಚನಾ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಸೇರಿಕೊಂಡರು. ನಂತರ 1972ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ಸೆಂಟರ್ ಆಫ್ ಅಡ್ವಾನ್ಸ್ ಸ್ಟಡಿಸ್ ಇನ್ ಸೆಲ್ ಆಂಡ್ ಕ್ರೊಮೋಸೊಮ್ ರಿಸರ್ಚ್‍ನಲ್ಲಿ ಪ್ರಾಧ್ಯಾಪಕರಾದರು. ನಂತರ 1981ರಲ್ಲಿ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಬಡ್ತಿ ಹೊಂದಿದರು.

ಅರ್ಚನಾ ಅವರು 70ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಿಎಚ್.ಡಿಗೆ ಮಾರ್ಗದರ್ಶನವನ್ನು ಮಾಡಿದ್ದಾರೆ. ಸೈಟೊಜೆನೆಟಿಕ್ಸ್, ಹ್ಯೂಮನ್ ಜೆನೆಟಿಕ್ಸ್ ಮತ್ತು ಎನ್ವಿರಾನೆಮೆಂಟ್ ಮ್ಯುಟಾಜೆನೆಸಿಸ್ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಅರ್ಚನಾ ಅವರು ಸಸ್ಯಶಾಸ್ತ್ರದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಿದ್ದಾರೆ, ಸಸ್ಯಗಳಲ್ಲಿನ ವಿಭಿನ್ನ ಅಂಗಾಶಗಳು, ಹೂಬಿಡುವ ಸಸ್ಯಗಳ ಕುರಿತಾದ ವರ್ಣತಂತುಗಳ ಕುರಿತು ಕೆಲಸವನ್ನು ಮಾಡಿರುವರು.

ಅರ್ಚನಾ ಅವರು ವಿಶ್ವವಿದ್ಯಾಲಯ ಧನಸಹಾಯ ಆಯೋಗ, ರಾಷ್ಟ್ರೀಯ ಮಹಿಳಾ ಆಯೋಗ, ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿ, ಪರಿಸರ ಇಲಾಖೆ, ಸಾಗರೋತ್ತರ ವೈಜ್ಞಾನಿಕ ಸಲಹಾ ಸಮಿತಿ ಮುಂತಾದ ಸಂಸ್ಥೆಗಳಲ್ಲಿ ಸದಸ್ಯರಾಗಿದ್ದರು. ಜೈವಿಕ ತಂತ್ರಜ್ಞಾನ ವಿಭಾಗದ ಸಮಗ್ರ ಮಾನವಶಕ್ತಿ ಅಭಿವೃದ್ಧಿ ಕಾರ್ಯಪಡೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.

ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗ, ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿ ಸೇರಿದಂತೆ ಪ್ರಮುಖ ನೀತಿ ನಿರೂಪಣಾ ಸಂಸ್ಥೆಗಳೊಂದಿಗೆ ಅರ್ಚನಾ ಅವರು ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಅರ್ಚನಾ ಅವರು ತಮ್ಮ ವೃತ್ತಿ ಜೀವನದಲ್ಲಿ 10 ಪುಸ್ತಕಗಳನ್ನು ಮತ್ತು ಸುಮಾರು 300 ರಿಂದ 400 ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದರು. ಪತಿ ಅರುಣ್ ಶರ್ಮಾ ಅವರೊಂದಿಗೆ “ಕ್ರೋಮೋಸೋಮ್ ಟೆಕ್ನಿಕ್ಸ್-ಥಿಯರಿ ಅಂಡ್ ಪ್ರಾಕ್ಟಿಸ್” ಪುಸ್ತಕವನ್ನು ಪ್ರಕಟಿಸಿದರು. ಜರ್ನಲ್ ಆಫ್ ನ್ಯೂಕ್ಲಿಯಸ್‍ನ ಸಂಪಾದಕರಾಗಿದ್ದರು. ಈ ಜರ್ನಲ್‍ನಲ್ಲಿ ಅಂತಾರಾಷ್ಟ್ರೀಯ ಸೈಟಾಲಾಜಿ ಸಂಬಂಧಿತ ವಿಷಯಗಳ ಕುರಿತು ಲೇಖನಗಳನ್ನು ಪ್ರಕಟಿಸುತ್ತಿದ್ದರು. ಹಾಗೇಯೆ ಇಂಡಿಯನ್ ಜರ್ನಲ್ ಆಫ್ ಎಕ್ಸಪೆರಿಮೆಂಟಲ್ ಬಯಾಲಾಜಿ ಪ್ರೊಸಿಡಿಂಗ್ಸ್ ಆಫ್ ದಿ ಇಂಡಿಯನ್ ನ್ಯಾಷನಲ್‍ನ ಸಂಪಾದಕೀಯ ಮಂಡಳಿಯಲ್ಲಿ ಸೇವೆ ಸಲ್ಲಿಸಿದ ಅರ್ಚನಾ ಅವರು 2008 ರಲ್ಲಿ ವಿಧಿವಶರಾದರು.

ಅರ್ಚನಾ ಅವರಿಗೆ ಹಲವು ಪ್ರಶಸ್ತಿಗಳು ದೊರೆತಿವೆ.

  1. 1995 ರಲ್ಲಿ ಜೆಪಿ ಚಟರ್ಚಿ ಪ್ರಶಸ್ತಿ
  2. 1995 ರಲ್ಲಿ ಎಸ್‍ಜಿ ಸಿನ್ಹಾ ಪ್ರಶಸ್ತಿ
  3. 1984 ರಲ್ಲಿ, ಪದ್ಮಭೂಷಣ್
  4. 1984 ರಲ್ಲಿ ಬಿರ್ಬಲ್ ಸಾಹಿನ್ ಪದಕ
  5. 1983 ರಲ್ಲಿ ಎಫ್‍ಐಸಿಸಿಐ ಪ್ರಶಸ್ತಿ
  6. 1977 ರಲ್ಲಿ ಇಂಡಿಯನ್ ಅಕಾಡಮಿ ಆಫ್ ಸೈನ್ಸ್‍ಸ್ ಫೆಲೋಶಿಫ್
  7. 1975 ರಲ್ಲಿ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ
  8. 1972 ರಲ್ಲಿ ಜೆಸಿ ಬೋಸ್ ಪ್ರಶಸ್ತಿ
    ……—————————————
  9. ಡಾ.ಸುರೇಖಾ ರಾಠೋಡ್.

ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ

Leave a Reply

Back To Top