ದಿನಕ್ಕೊಂದು ವಚನ ಅನುಸಂಧಾನ ಗಜೇಶ ಮಸಣಯ್ಯ ಡಾ. ಆಶಾ ಗುಡಿ

ವಚನ ಸಂಗಾತಿ

ಡಾ. ಆಶಾ ಗುಡಿ

ದಿನಕ್ಕೊಂದು ವಚನ ಅನುಸಂಧಾನ

ಗಜೇಶ ಮಸಣಯ್ಯ

ಅಕ್ಕಲಕೋಟಿ ಸಂಸ್ಥಾನದ ಕರ್ಜಗಿ ಗ್ರಾಮಕ್ಕೆ ಸೇರಿದವ ಶರಣ ಗಣೇಶ ಮಸಣಯ್ಯ ನಾಗಿದ್ದಾನೆ. ಶರಣಸತಿ ಲಿಂಗಪತಿ ಭಾವದ ಶ್ರೇಷ್ಠ ವಚನಕಾರ. ಕಲ್ಯಾಣದ ಶರಣರ ಜೊತೆ ಅನುಭಾವ ಗೋಷ್ಠಿಗಳಲ್ಲಿ ಪಾಲ್ಗೊಂಡು ತನ್ನ ಕೊನೆಗಾಲದಲ್ಲಿ ಗುಲ್ಬರ್ಗ ಜಿಲ್ಲೆಯ ಆಳಂದ ತಾಲೂಕಿನ ಮನಹಳ್ಳಿ ಎಂಬ ಗ್ರಾಮದಲ್ಲಿದ್ದು ಅಲ್ಲಿಯೇ ಐಕ್ಯನಾದನೆಂದು ತಿಳಿಯುತ್ತದೆ. ಅಲ್ಲಿ ಈತನ ಹೆಸರಿನ ದೇವಾಲಯವಿದೆ. ಕರಜಿಗೆಯ ಗಜೇಶ್ವರ ಈತನ ಇಷ್ಟದೈವ. ಅದನ್ನೇ ತನ್ನ ಅಂಕಿತವಾಗಿಸಿಕೊಂಡಿದ್ದಾನೆ. ಈತನ ಹೆಂಡತಿ ಮಸಣಮ್ಮ ಎಂದು ತಿಳಿದು ಬರುತ್ತದೆ, ಇವರ ಕಾಲ 1160. ಸುಮಾರು 70 ವಚನಗಳು ಲಭ್ಯವಿವೆ. ಮಹಾಲಿಂಗ ಗಜೇಶ್ವರ ಇವನ ಅಂಕಿತನಾಮ. ಸರಳ ಭಾಷೆ ಮಧುರ ಭಾವ ಕಾವ್ಯಾತ್ಮಕ ಶೈಲಿಯಲ್ಲಿ ಸತಿಪತಿ ಭಾವದ ಉತ್ಕಟತೆಯು ಆಕರ್ಷಕವಾಗಿ ವಚನಗಳಲ್ಲಿ ಮೂಡಿಬಂದಿದೆ.
ಪಾಲ್ಕುರಿಕೆ ಸೋಮನಾಥ ಬರೆದ ಗಣ ಸಹಸ್ರ ನಾಮಾವಳಿ ಯಲ್ಲಿ ಇವನ ಹೆಸರಿನ ಉಲ್ಲೇಖವಿದೆ. ಬಿಜಾಪುರದಿಂದ ಸುಮಾರು 60 ಮೈಲಿ ದೂರದಲ್ಲಿ ಅಕ್ಕಲಕೋಟೆಗೆ ಸಮೀಪದಲ್ಲಿ ಕರಜಿಗೆ ಎಂಬ ಒಂದು ಗ್ರಾಮವಿದೆ. ಇವನ ಇಷ್ಟದೈವವಾದ ಗಜೇಶ್ವರ ದೇವಾಲಯವು ಇಲ್ಲಿ ಇದ್ದುದಾಗಿ ಒಂದು ಶಿಲಾಹಾರರ ಶಾಸನದಿಂದ ತಿಳಿದು ಬರುತ್ತದೆ. ಇದರ ಬಳಿಯಲ್ಲಿರುವ ಮನಹಳ್ಳಿಯಲ್ಲಿ ಮಸಣಯ್ಯನ ದೇವಾಲಯ ವಿದ್ದು ಅಲ್ಲಿ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಈ ಮನಹಳ್ಳಿಯಿಂದ ಆರು ಮೈಲು ದೂರದಲ್ಲಿ ಬೆಣ್ಣೆ ತೊರೆ ಎಂಬ ಹಳ್ಳ ಹರಿಯುತ್ತದೆ. ಮಸಣಯ್ಯನು ಪೂಜೆಗೆ ಕುಳಿತಿದ್ದ ಸ್ಥಳವು ಬಹುಶಃ ಇದೇ ಆಗಿರಬಹುದೆಂದು ಈ ಕರಜಿಗೆ ಮಸಣಯ್ಯನ ಊರಾಗಿರಬಹುದೆಂದು ಫ.ಗು. ಹಳಕಟ್ಟಿಯವರು ಊಹಿಸುತ್ತಾರೆ.

ಭೈರವೇಶ್ವರ ಕಾವ್ಯದ ಕಥಾಮಣಿ ಸೂತ್ರ ರತ್ನಾಕರದಲ್ಲಿ ಒಂದು ಕಥೆ ಇದೆ. ಕರಜಿಗೆ ಗ್ರಾಮದಲ್ಲಿ ಇವನು ಜಂಗಮ ದಾಸೋಹ ಮಾಡುತ್ತಾ ಲಿಂಗ ಪೂಜೆ ಮಾಡುವಲ್ಲಿ, ಇತರೆ ತರವ ಮರೆತು ಹುಲಿ, ಕರಡಿ, ಸರ್ಪ, ಶರಭ, ಶರಧಿ, ವೃಶ್ಚಿಕ, ಆನೆ, ಭೂತ ವೇತಾಳ, ಬಿರುಗಾಳಿ, ಅನಲ, ಸಿಡಿಲು, ಮಿಂಚು, ಮಳೆ, ಹೊಳೆ, ಇದರ ಭಯ ಬಂದಡೆಯೂ ಲಿಂಗ ಪೂಜೆಯ ಬಿಟ್ಟು ತೊಲಗಬಾರದೆಂಬ ಭಾವನೆಯಿಂದ ಪೂಜೆಗೈಯುತ್ತಿದ್ದನು. ಒಂದು ದಿನ ಗುರು ದರ್ಶನಕ್ಕೆ ಹೋಗುವಾಗ ದಾರಿಯಲ್ಲಿ ಒಂದು ನದಿಯನ್ನು ಕಂಡು ಅಲ್ಲಿ ಶಿವ ಪೂಜೆಗೆ ಕುಳಿತನು. ಶಿವನು ಇವನನ್ನು ಪರೀಕ್ಷಿಸಬೇಕೆಂದು ಗಗನವು ಇಬ್ಬಾಗುವಂತೆ ಮಳೆಯ ಕರೆಯಲು ಆತ ಅದಕ್ಕೆ ಅಂಜದೆ ತದೇಕಚಿತ್ತನಾಗಿ ಚಳಿಯನ್ನು ತಾಳೆಯ ಮರದ ಎತ್ತರಕ್ಕೆ ಉಕ್ಕಿ ಹರಿದು ಬರುವ ಹೊಳೆಯನ್ನು ಲೆಕ್ಕಿಸದೆ ಪೂಜಾ ನಿರತನಾಗಿದ್ದನಂತೆ. ಇವನ ಭಕ್ತಿಗೆ ಬೆರಗಾದ ಹೊಳೆ ಇವನ ಮೇಲೆ ಹರಿಯದೆ ಇಬ್ಭಾಗವಾಗಿ ಹರಿದು ಇವನನ್ನು ಮಧ್ಯ ಬಿಟ್ಟು ಮತ್ತೆ ಒಂದಾಗಿ ಹರಿಯ ತೊಡಗಿತು. ಮಸಣಯ್ಯ ಲಿಂಗವನುತಿಸುವ ವಿಕಳಾವಸ್ಥೆಯಲ್ಲಿ ನಿರ್ವಯಲಾದನು ಎಂಬ ಮಾತಿದೆ.
ಕನ್ನಡದ ಅತ್ಯಂತ ಶ್ರೇಷ್ಠ ಮಧುರ ಭಾವದ ವಚನಗಳನ್ನು ಬರೆದವರಲ್ಲಿ ಗಜೇಶ ಮಸಣಯ್ಯನು ಪ್ರಮುಖನಾಗಿರುವನು. ಈತ ಭಾಷೆಯನ್ನೂ ಕೂಡ ಶಕ್ತಿ ಪೂರ್ಣವಾಗಿ ಬಳಸಿಕೊಂಡಿದ್ದಾನೆ. ಸತಿ ಪತಿ ಭಾವ ಇವನ ವಚನಗಳ ಕೇಂದ್ರಬಿಂದು.

*ಆತನ ನೋಡಿದೊಂದು ದೆಸೆಗಳ ಮೆರೆದೆನಿನ್ನೆಂತವ್ವಾ ಅವ್ವಾ ಅವ್ವಾ ಆತನ ನುಡಿಸಿದಡೆ ಮೈಯೆಲ್ಲಾ ಬೆವತುದಿನ್ನೆಂತವ್ವಾ
ಅವ್ವಾ ಅವ್ವಾ ಆತನ ಕೈಯ ಹಿಡಿದಡೆ
 ಎನ್ನ ನಿರಿಗಳು ಸಡಿಲಿದವಿನ್ನೆಂತವ್ವಾ
ಇಂದೆಮ್ಮ ಮಹಾಲಿಂಗ ಗಜೇಶ್ವರನನಪ್ಪಿದೆನೆಂದಡೆ
ನಾನಪ್ಪ ಮೆರೆದನಿನ್ನೆಂತವ್ವಾ*

ಅಕ್ಕಮಹಾದೇವಿ ವಚನಗಳಲ್ಲಿ  ಸತಿಪತಿ ಭಾವದ ಭಾವನೆಗಳು ಕಂಡುಬರುವುದು ಸಹಜ. ಆದರೆ ಇಲ್ಲಿ ಶರಣ ಗಜೇಶ ಮಸಣಯ್ಯನ ವಚನಗಳಲ್ಲೂ ಈ ರೀತಿಯ ಭಾವನೆಗಳು ಮೂಡಿ ಬಂದಿರುವುದು ವಿಶೇಷವಾಗಿದೆ. ಇಲ್ಲಿ ತಾವು ಸತಿಯಾಗಿ ತನ್ನ ಆರಾಧ್ಯ ದೈವ ಮಹಾಲಿಂಗನ ನೋಡಿದರೆ ದೆಸೆ/ದಿಕ್ಕು ಅಂದರೆ ವಾಸ್ತವದಲ್ಲಿ ನಾವು ಬದುಕುತ್ತಿರುವ ಲೋಕವನ್ನೇ ಮರೆಯುವ ಹಾಗೆ ಆತನು ಮಾತನಾಡಿಸಿದರೆ ಮೈಯೆಲ್ಲಾ ಬೆವೆತು ಹೋದಂತೆ. ಆತ ಕೈ ಹಿಡಿದರೆ ಸಾಕು ನಿರಿಗೆಗಳು ಕೂಡಾ ಸಡಿಲಾದಂತೆ. ಗಜೇಶ್ವರ ಅಪ್ಪಿದರೆ ಸಾಕು ನನ್ನನ್ನೇ ನಾನು ಮರೆತಂತೆ. ಹೀಗೆ ಸತಿಪತಿ ಭಾವದ ಭಾವನೆಗಳು ಮಸಣಯ್ಯನ ವಚನಗಳಲ್ಲಿ ಹಾಸು ಹೊಕ್ಕಾಗಿರುವುದನ್ನು ಕಾಣಬಹುದು.

*ಸರ್ವಜ್ಞನ ಸನುಮತವೆಂಬ ಮಾತು ಸಾಮಾನ್ಯವೇ ಅವ್ವಾ
 ತಾ ಮೆಚ್ಚ, ಕಲಿಯಾಗಿಪ್ಪವರ ಮೆಚ್ಚ, ಸುಖಿಯಾಗಿಪ್ಪವರ ನೊಬ್ಬರನಾರುವ ಕಾಣೆನವ್ವಾ!
ತಾ ಸುತ್ತು ಹೆದರಿ ಕೊಂದವ ಸ್ಥೆಯ ಚಂದವ ಚಂದ್ರಮತಿಯಲ್ಲಿ ಕಂಡೆನು. ಇಂದು ಕಂಡೆನು ಮಹಾಲಿಂಗ ಮಸಣಯ್ಯ ಗಳಲ್ಲಿ
ಮಹಾಲಿಂಗ ಗಜೇಶ್ವರ ದೇವರ ಮಾಡಿದ*

ಶರಣ ಗಜೇಶ ಮಸಣಯ್ಯನವರ ವಚನಗಳಲ್ಲಿ ಇಲ್ಲಿ ಸರ್ವಜ್ಞ ಎಂದರೆ ಎಲ್ಲವನ್ನು ಬಲ್ಲವ. ಈ ಬಲ್ಲವನ ಸಮ್ಮತ/ಸಿದ್ಧಾಂತದ ಮಾತುಗಳು ಸಾಮಾನ್ಯ ಅಲ್ಲವೇ ಅಲ್ಲ. ತಾನು ಮೆಚ್ಚದವ ಇನ್ನೊಬ್ಬರನ್ನು ಕೂಡಾ ಮೆಚ್ಚುವುದಿಲ್ಲ. ಯಾರು ಸುಖವಾಗಿ ಇರುವುದನ್ನು ಕಾಣಲು ಸಾಧ್ಯವಿಲ್ಲ. ಪ್ರತಿಯೊಬ್ಬರಿಗೂ ಅವರದೇ ಆದ ಸಮಸ್ಯೆ ತೊಂದರೆಗಳಿವೆ. ಯಾರೂ ಯಾರನ್ನೂ ಮೆಚ್ಚಿ, ಮೆಚ್ಚಿಸಿ ಬಾಳಲು ಸಾಧ್ಯವೇ ಇಲ್ಲದಂತ ಕಲಿಯುಗವಿದು. ಎಲ್ಲ ಬಲ್ಲವನಿಗೆ ಬಗೆ ಹರಿಸುವ ದಾರಿ ಇಲ್ಲಿ ಇಲ್ಲ. ಹಾಗೆಯೇ ಹರಿಶ್ಚಂದ್ರ  ಕಾವ್ಯದಲ್ಲಿ ಬರುವ ಚಂದ್ರಮತಿಗೆ ಬಂದೊದಗಿದ ಪರಿಸ್ಥಿತಿಯ ಅರಿವು ಈ ವಚನದಲ್ಲಿದೆ. ತಾನು ಸತ್ತು ಮತ್ತೊಬ್ಬರ/ ಹೆರವರ  ದಾಸ್ಯದ ಪರಿಸ್ಥಿತಿಯಲ್ಲಿದ್ದು, ಅಂತಹ ರಾಜ ಹರಿಶ್ಚಂದ್ರನ ಪತ್ನಿಯಾದರು ಕೂಡ ಭಗವಂತನ ಪರೀಕ್ಷೆಯಲ್ಲಿ ಕೈಕಟ್ಟಿ ಕೊಡಬೇಕಾದ ಪರಿಸ್ಥಿತಿ ಬಂದೊದಗಿತು. ಹೊಟ್ಟೆಯಲ್ಲಿ ಹುಟ್ಟಿದ ಮಗುವನ್ನು ಕಳೆದುಕೊಂಡು ಪಡಬಾರದ ಕಷ್ಟ ಕೋಟಲೆ ಗಳಲ್ಲಿ ತೊಳಲಿ, ಬಳಲಿ ಕೊನೆಗೆ ಶಿವ ಕಾರುಣ್ಯದಿಂದ ತೊಂದರೆಯಿಂದ ಹೊರಬರುವುದನ್ನು ತಿಳಿಸಿರುವರು.

*ಹೊಸ ಮದುವೆ ಹಸೆ ಉಡುಗದ ಮುನ್ನ
ಹೂಸಿದರಿಸಿನ ಬಿಸಿಲಿಂಗೆ ಹರಿಯದ ಮುನ್ನ
ನೀರ ತಾಳ್ಮೆ ಹರಿಯದ ಮುನ್ನ
ತನು ಸಂಚಳವಾಗಿ, ಮನ ಗುರು ಕಾರುಣ್ಯವ  ಪಡೆದು ಹುಸಿ ಇಲ್ಲದಿದ್ದಡೆ ಭಕ್ತನೆಂಬೆ ಪಿಡಿಯಲಿಲ್ಲದಿದ್ದಡೆ ಮಾಹೇಶ್ವರನೆಂಬೆ ತನುವಿಲ್ಲದಿದ್ದಡೆ ಪ್ರಸಾದಿ ಎಂಬೆ
 ಭೇದವಿಲ್ಲದಿದ್ದಡೆ ಪ್ರಾಣ ಲಿಂಗಿ ಎಂಬೆ
ಆಸೆ ಇಲ್ಲದಿದ್ದಡೆ ಶರಣನೆಂಬೆ
ಐವರ ಸಂಪರ್ಕ ಭೋಗವಾದಡೆ ಐಕ್ಯನೆಂಬೆ
ಐಕ್ಯದ ಸಂತೋಷ ಹಿಂಗಿದಡೆ ಜ್ಯೋತಿರ್ಮಯವೆಂಬೆ ಇಂತಾಗಬೇಕೆಂಬ ಮನದ ದೇಹ
ಇರಿದಡಿಯದು, ಸ್ತುತಿಸಿ ದಡರಿಯದು, ಸುಖವನರಿಯದು, ದುಃಖವನರಿಯದು ಈ ಚತುರ್ವಿಧ ತಾಗು ನಿರೋಧವನರಿಯದಿರ್ದಡೆ
ಅದೇ ಮಹಾಲಿಂಗ ಗಜೇಶ್ವರನೆಂಬೆ*

ಹೊಸದಾಗಿ ವಿವಾಹವಾದಾಗ ಮದುವೆಯ ಕಾರ್ಯಕ್ರಮದಲ್ಲಿ ಮೊದಲು ಹಾಸುವುದು ಹಸೆ. ಅಂದರೆ ಮಂಗಳ ಕಾರ್ಯದಲ್ಲಿ ಹಾಕುವ ಪೀಠ. ಇದು ಕಾರ್ಯಕ್ರಮದ ಪ್ರಾರಂಭವು. ಯಾವುದೇ ರೀತಿಯ ತೊಂದರೆ ಯಾಗುವ ಮುನ್ನ ಒಳಿತಾಗಲಿ ಎಂದು. ಲೇಪಿಸಿದಂತ ಅರಿಶಿಣ ಬಿಸಿಲಿಗೆ ಆರುವ ಮುನ್ನ, ದೇಹದ ಸಂಚಲನ ನಿಲ್ಲುವ ಮೊದಲು ಗುರುವಿನ ಕಾರುಣ್ಯವನ್ನು ಪಡೆಯಬೇಕು. ಶರಣರ ಷಟ್ ಸ್ಥಲಗಳನ್ನು ಈ ವಚನದಲ್ಲಿ ಕಾಣಬಹುದು. ಮೊದಲನೆಯದಾಗಿ ಭಕ್ತಸ್ಥಲ. ಭಕ್ತನಾಗುವವನು ಅಹಂಕಾರ ಮಮಕಾರಗಳನ್ನು ತ್ಯಾಗ ಮಾಡಿ ವಿನಯವಂತಿಕೆಯನ್ನು ರೂಡಿಸಿಕೊಳ್ಳಬೇಕು ಎಂದಿದೆ. ಇಲ್ಲಿ ಸುಳ್ಳು ‌‌ಹೇಳದಿದ್ದರೆ ಅವನಿಗೆ ಭಕ್ತ ಎನ್ನುವರು. ಮಹೇಶ್ವರ ಸ್ಥಲದಲ್ಲಿ ಸಾಧಕನ ಭಕ್ತಿ ಶ್ರದ್ಧೆಗಳು ನಿಷ್ಠೆಯಲ್ಲಿ ಪರಿವರ್ತನೆಯಾಗಬೇಕು. ಇಲ್ಲಿ ಹಿಡಿಕೆ ಅಂದರೆ ಬೇರೊಬ್ಬರ ಲಗಾಮು ಎಂದರ್ಥ. ಇದು ತೊಲಗದಿದ್ದರೆ ಅದು ಮಾಹೇಶ್ವರ. ಪ್ರಸಾದಿ ಸ್ಥಲದಲ್ಲಿ ಪ್ರಪಂಚದ ಎಲ್ಲಾ ವಸ್ತುಗಳು ಶಿವನ ಪ್ರಸಾದ ಎನ್ನುವರು. ಇಲ್ಲಿ ದೇಹದ ಆಸೆ ತೊರೆದವ ಪ್ರಸಾದಿ. ಪ್ರಾಣಲಿಂಗಿಸ್ಥಲವು ಅಂತರಂಗದ ಅರಿವು ಮೂಡಿಸುತ್ತದೆ. ಜೀವವಿಲ್ಲದಿದ್ದರೆ ಪ್ರಾಣ ಲಿಂಗಿ ಎನ್ನುವೆ. ಶರಣ ಸ್ಥಲದಲ್ಲಿ ಶರಣನಿಗೆ ಜ್ಞಾನವನ್ನು ನೀಡಿ ಶಿವನೊಂದಿಗೆ ನೇರ ಸಂವಾದ ಆರಂಭವಾಗುತ್ತದೆ. ಆಸೆ ಇಲ್ಲದವನೇ ಶರಣ. ಐಕ್ಯಸ್ಥಲ ಅಂತಿಮ ಅಂತ. ಪರಾಕಾಷ್ಠೆಯ ಹಂತ. ಇಲ್ಲಿ ಹುಸಿ, ಹಿಡಿಕೆ, ದೇಹದ ಆಸೆ, ಜೀವ, ಆಸೆ ಈ ಐದರ ಸಂಪರ್ಕವನ್ನು ತೊರೆದದ್ದೆ ಆದರೆ ಅಂತವನು ಐಕ್ಯ/ ಮೋಕ್ಷ ಹೊಂದಬಲ್ಲ. ಈ ಐಕ್ಯದ ಸಂತೋಷ ತೊಲಗಿದರೆ ಅಂತವನು ಈ ರೀತಿಯಾಗಿ ದೇಹವನ್ನು ಇರಿದರೆ, ತರಿದರೆ, ಬೈದರೆ, ಸ್ತುತಿಸದೆ, ಸುಖವನ್ನ ಅರಿಯರು. ದುಃಖವನ್ನು ಅರಿಯರು. ಇಂಥವರ ಜೊತೆ ತಾನಿದ್ದರೆ, ಇವುಗಳನ್ನು ಅರಿತದ್ದೆ ಆದರೆ ಅವನು ಗಜೇಶ ಮಸಣಯ್ಯನ ಮಹಾಲಿಂಗದಲ್ಲಿ ಐಕ್ಯ ಹೊಂದುವನು. ಇವೆಲ್ಲ ಅಂಶಗಳು ಈ ವಚನದಲ್ಲಿ ಇವೆ. ಈ ಆರು ಸ್ಥಲಗಳನ್ನು ದಾಟಿದ ಭಕ್ತನ ಆತ್ಮವೂ ಭೌತಿಕ ದೇಹವನ್ನು ತೊರೆದು ಪರಮಾತ್ಮನೊಂದಿಗೆ ವಿಲೀನವಾಗುವದಾಗಿದೆ. ಲಿಂಗಾಯತ ಧರ್ಮದಲ್ಲಿ ಷಟ್ ಸ್ಥಲಕ್ಕೆ ಮಹತ್ವದ ಸ್ಥಾನವಿದೆ. ಇವುಗಳೇ ಆತ್ಮವಾಗಿವೆ.  ಹೀಗೆ ಗಜೇಶ ಮಸಣಯ್ಯನವರ ವಚನಗಳು ಸತಿಪತಿ ಭಾವದ ಭಾವನೆಗಳನ್ನು ಹಾಗೂ ಷಟ್ ಸ್ಥಲದ ಮಹತ್ವವನ್ನು ಅರಿಯಬಹುದಾಗಿದೆ.


ಡಾ. ಆಶಾ ಗುಡಿ

Leave a Reply

Back To Top