ಕಾವ್ಯ ಸಂಗಾತಿ
ಗಜಲ್
ಅನಸೂಯ ಜಹಗೀರದಾರ
ದುಡುಕುವ ಮುನ್ನ ಆ ಆರ್ದ್ರತೆಯ ಮಾತುಗಳನು ಕೇಳಬೇಕಿತ್ತು ಮನಸೇ
ಬಾಳು ಮುಳುಗುವ ಮುನ್ನ ರವಿಯ ರಶ್ಮಿಗಳನು ನೆನೆಪಿಸಬೇಕಿತ್ತು ಮನಸೇ
ಅಹಂಕಾರದಿ ಕೈ ಬಿಡುವ ಮುನ್ನ ಕಳೆದ ದಿನಗಳನು ಸ್ಮರಿಸಬೇಕಿತ್ತು ಮನಸೇ
ತಿರುವು ಪಡೆವ ಮುನ್ನ ಗತದ ದಾರಿಗಳನು ಗಮನಿಸಬೇಕಿತ್ತು ಮನಸೇ
ನುಡಿವ ಮುನ್ನ ಆ ಕಟು ಪದಗಳನು ನಿನ್ನಲ್ಲೇ ಹೇಳಿಕೊಳ್ಳಬೇಕಿತ್ತು ಮನಸೇ
ಬೆನ್ನು ತಿರುಗಿಸುವ ಮುನ್ನ ಆ ಭಾರದ ಹೆಜ್ಜೆಗಳನು ತಡೆಯಬೇಕಿತ್ತು ಮನಸೇ
ಕಾಲ ಮೀರುವ ಮುನ್ನ ಸಂದೇಹಗಳನು ವಿಶ್ಲೇಷಿಸಬೇಕಿತ್ತು ಮನಸೇ
ಮರವ ಕತ್ತರಿಸುವ ಮುನ್ನ ಚಿಗುರುಗಳನು ನೋಡಬೇಕಿತ್ತು ಮನಸೇ
ನಿರ್ಣಯಿಸುವ ಮುನ್ನ ವಿಚಾರಗಳನು ಹಂಚಿಕೊಳ್ಳಬೇಕಿತ್ತು ಮನಸೇ
ಅನು ಹೊಸೆದ ಬತ್ತಿಯಲಿ ಪ್ರೇಮ ಜ್ಯೋತಿಗಳನು ಬೆಳಗಿಸಬೇಕಿತ್ತು ಮನಸೇ
ಅನಸೂಯ ಜಹಗೀರದಾರ