ಪುಷ್ಪಾ ಮಾಳಕೊಪ್ಪ ಕವಿತೆ-ಕರ್ಮ

pushpa malakoppa

ಕಾವ್ಯ ಸಂಗಾತಿ

ಕರ್ಮ

ಪುಷ್ಪಾ ಮಾಳಕೊಪ್ಪ

ಸತ್ಯಧರ್ಮಕ್ಕಿಂತ ಅನ್ಯಕಾಯಗಳಿಲ್ಲ
ನಿತ್ಯಸೇವಿಸು ನಿರ್ಗುಣಪ್ರಸಾದವನು|
ಸ್ತುತ್ಯವಾಗಿರಲಿ ಈ ಬಾಳಿನಲಿ ಕರ್ಮಗಳು
ಪಥ್ಯವಾಗಲು ಮಿಥ್ಯ ವೇದ್ಯ ಜೀವನವು||

ಜೀವಕೆಲ್ಲಕು ನೇಮದೊಳಗಿತ್ತ ಕಾಯಕವ
ದೇವನಾಣತಿಯನ್ನು ಮೀರಿ ನಡೆವುದುಂಟೆ|
ನಾವವನ ಸೂತ್ರದಲಿ ಪಾತ್ರವಾಗಿರುತಿರಲು
ಆವ ಕೃತ್ಯಕ್ಕಿಲ್ಲಿ ಭೇದವುಂಟೆ||

ಆಳುವರಸಗೆ ಮಾಡಲವರವರವರ ಪಾಲು
ಕೀಳೆಂಬ ಭಾವ ತೊರೆ ಯಾರಿಲ್ಲಿ ಮೇಲು|
ಮೇಳೈಸೆ ಒಪ್ಪದಲಿ ಜೀವಜೀವಕು ಬಲವು
ತಾಳಿ ಸಾಗಲು ಬದುಕು ರಾಗರಸದೊಲವು||

ರಾಮಕೃಷ್ಣರು ನಡೆದ ಪಥದಲ್ಲಿ ಜಯವಿರಲು
ರಾವಣನ ಕಾಯವೇ ಅನ್ಯವಿಲ್ಲಿ|
ವಾಮಮಾರ್ಗವ ತೊರೆದು ಬಾಳಬಂಡಿಯು ಸಾಗೆ
ಪಾಮರರು ನಾವಾಗಿ ಸುಖಿಪ ಹಾಗೆ||


ಪುಷ್ಪಾ ಮಾಳಕೊಪ್ಪ

ಕವಿ ಪರಿಚಯ:

ಪುಷ್ಪಾ ಮಾಳಕೊಪ್ಪತಾಲೂಕು:ಯಲ್ಲಾಪುರಉತ್ತರ ಕನ್ನಡ ಜಿಲ್ಲೆಯವರಾಗಿದ್ದು
ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಪದವಿಯನ್ನು ಪಡೆದುಕೊಂಡಿದ್ದು ಪ್ರಸ್ತುತ ಶಿರಸಿಯ ಚಂದನ ಆಂಗ್ಲಮಾಧ್ಯಮ ಶಾಲೆಯಲ್ಲಿ ಮತ್ತು ಯಲ್ಲಾಪುರದ ವಿಶ್ವದರ್ಶನ ಕೇಂದ್ರೀಯ ವಿದ್ಯಾಲಯದಲ್ಲಿ ಸಂಗೀತ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕವನ , ಲೇಖನ , ಕಥೆಗಳನ್ನು ಬರೆಯುವುದು , ಪುಸ್ತಕಗಳನ್ನು ಓದುವುದು ಇವರ ಹವ್ಯಾಸ. ಮುನ್ನೂರಕ್ಕೂ ಹೆಚ್ಚು ಕವನಗಳನ್ನು , ಅನೇಕ ಕಥೆಗಳನ್ನೂ , ಲೇಖನಗಳನ್ನು ಬರೆದಿದ್ದೇನೆ . ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ತಾಲೂಕಾ ಸಂಘಟನಾ ಕಾರ್ಯದರ್ಶಿ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮಂಚೀಕೇರಿ ಘಟಕದ ಸಂಚಾಲಕಿಯಾಗಿದ್ದು ಅನೇಕ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ

Leave a Reply

Back To Top