ಕಾವ್ಯ ಸಂಗಾತಿ
ಗಝಲ್
ಶಂಕರಾನಂದ ಹೆಬ್ಬಾಳ
ಗೆಜ್ಜಿ ಕಟಕೊಂಡ ನವಾಬನ ಮುಂದ ಕುಣಿತೀವಿ
ಅವಕಾಶ ಕೊಡ್ರಿ ನಮಗ
ಜಾತಕ ಹಿಡಕೊಂಡ ಗಿಣಿಶಾಸ್ತ್ರ ಹೇಳತೀವಿ
ಅವಕಾಶ ಕೊಡ್ರಿ ನಮಗ
ಇರಲಾರದ್ದು ಬಣ್ಣಹಚ್ಚಿ ಹೊಗಳಂತ ಮಂದಿ
ನಾವಲ್ಲ ದೊರಿಗಳ
ಮುಶೈರಾದಾಗ ಸ್ವಂತ ರುಬಾಯಿ ಓದತೀವಿ
ಅವಕಾಶ ಕೊಡ್ರಿ ನಮಗ
ಅನುಭವ ಹಂಚಗೋತ ಅನುಭಾವಿಗಳ ಸಂಗ
ಸೇರಿವೆಲ್ಲ ಯಾಕ
ಟೋಪಿ ಹಾಕವ್ರನ್ನ ಬಯಲಿಗೆಳದ ಒಗಿತೀವಿ
ಅವಕಾಶ ಕೊಡ್ರಿ ನಮಗ
ಮನಸ ತಣಿಸಿದ್ದಕ್ಕ ಇನಾಮು ಗಿನಾಮು
ಏನು ಕೊಡುದುಬ್ಯಾಡ
ಊರೂರು ದೇವರ ಲೀಲಾ ಸಾರತೀವಿ
ಅವಕಾಶ ಕೊಡ್ರಿ ನಮಗ
ಉಪಾಸಿದ್ರು ಚಿಂತಿಲ್ಲ ಮೋಸ ದಗಲ್ಬಾಜಿ
ಗೊತ್ತಿಲ್ಲ ಕೇಳಿನೋಡ್ರಿ
ನಮ್ಮಾಟ ಮುಗಿಸಿ ಜಲ್ದಿ ಹೋಗತೀವಿ
ಅವಕಾಶ ಕೊಡ್ರಿ ನಮಗ
ನಮ್ಮ ವೇಷಭೂಷಣ ಕಂಡ ಹೌಹಾರಬ್ಯಾಡ್ರಿ
ನಾವಿರೂದ ಹಿಂಗ
ತಿಳದಿದ್ದ ನಾಕಮಂದಿಗೆ ಮನಾಮುಟ್ಟಂಗ ತಿಳಸ್ತೀವಿ
ಅವಕಾಶ ಕೊಡ್ರಿ ನಮಗ
ಹಗಲುರಾತ್ರಿ ಭಗವಂತನ ಧ್ಯಾನ ಮಾಡಕೋತ
ಬದುಕತೀವಿ ಇಲ್ಲೆ
ತಪ್ಪಡಿ ಬಡಕೋತ ಅಭಿನವನಪದ ಹಾಡತೀವಿ
ಅವಕಾಶ ಕೊಡ್ರಿ ನಮಗ
ಶಂಕರಾನಂದ ಹೆಬ್ಬಾಳ