ಪ್ರಮೀಳಾ ರಾಜ್ ಕವಿತೆ-ಬದುಕ ಯಾನ

ಕಾವ್ಯ ಸಂಗಾತಿ

ಪ್ರಮೀಳಾ ರಾಜ್

ಬದುಕ ಯಾನ

ಅದೆಷ್ಟು ತಿರುವುಗಳು
ಬದುಕ ಪಯಣದಲ್ಲಿ!!
ಯಾರೋ ಬಂದು ಸನಿಹ ಕೂತದ್ದು
ಜೊತೆಗೊಂದಿಷ್ಟು ದೂರ ಪಯಣಿಸಿದ್ದು
ನಿಲ್ದಾಣ ಬರುತ್ತಲೇ ಹೇಳದೇ ಕೇಳದೇ ಇಳಿದು ಹೋದದ್ದು
ಹಳೆಯ ನೆನಪುಗಳು!!

ಎಲ್ಲಿಗೋ ಹೊರಟವಳು
ಮತ್ತೆಲ್ಲಿಗೋ ತಲುಪಿದ್ದು
ಏನನ್ನೂ ಹುಡುಕುತ್ತ ಹೊರಟವಳು
ಮತ್ಯಾರನ್ನೂ ಸಂಧಿಸಿದ್ದು
ಒಂದಷ್ಟು ಮಾತು ಹರಟೆ ಗಳ ನಡುವೆ ಕಳೆದು ಹೋದದ್ದು
ತಿರುಗಿ ಗುರಿ ತಲುಪಲು ಪೇಚಾಡಿದ್ದು
ಒಟ್ಟಾರೆ ಸಿಕ್ಕು ಸಿಕ್ಕಾದ ಗೋಜಲು ಬದುಕು!!

ಒಲವು ಭರವಸೆಗಳ ನಡುವೆ
ಬರಿಯ ಕತೆಯಾದವರು
ಸ್ನೇಹದ ಮಹಲಿನ ಮೇಲೆ
ಸ್ವಾರ್ಥದ ಸಮಾಧಿ ಕಟ್ಟಿದವರು
ಪ್ರೀತಿಯ ಮುಷ್ಟಿಯಲ್ಲಿ
ದ್ವೇಷದ ಕಿಡಿ ಕಾರಿದವರು
ಓಹ್…
ಅರಿವಿನ ಅಂಗಳದಲ್ಲಿ ನಡೆದಂತೆಲ್ಲ
ಮೈ ನಡುಕ!!

ಯಾರದೋ ಜೊತೆಗೆ
ಬಹುದೂರ ಪಯಣಿಸಬೇಕು ಎನಿಸುತ್ತಿಲ್ಲ
ಎಲ್ಲಿಗೋ ಹೊರಟ ದಾರಿಯಲ್ಲಿ
ಮುಂದುವರಿಯಬೇಕು ಅನಿಸುತ್ತಲೂ ಇಲ್ಲ
ನನ್ನ ಭಾವದೊಲ್ಮೆಯ ಬದುಕಲ್ಲಿ
ನಿತ್ಯ ಸುಖಿ ನಾನು
ಒಂಟಿ ಪಯಣ ಅದೇನೋ ಭಂಡ ಧೈರ್ಯ ಕೂಡ!!


ಕವಿ ಪರಿಚಯ:

ಪ್ರಮೀಳಾ ರಾಜ್ ಅವರು ಭಾವಯಾನಿ ಎಂಬ ಕಾವ್ಯನಾಮ ದಿಂದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಇವರು ಬಂಟ್ವಾಳ ತಾಲೂಕಿನ ವಾಮದಪದವಿನವರು. 15ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಮೊದಲ ಕೃತಿ ಸಂಗೀತಾ ನನ್ನೆದೆಯ ಭಾವಗಳ ಯಾನ ಎಂಬ ಕವನ ಸಂಕಲನವು 2018ರಲ್ಲಿ ಪ್ರಕಟಕೊಂಡಿದೆ. ಸಂಗೀತ ಮತ್ತು ಸಾಹಿತ್ಯ ಇವರ ನೆಚ್ಚಿನ ಕ್ಷೇತ್ರಗಳು

2 thoughts on “ಪ್ರಮೀಳಾ ರಾಜ್ ಕವಿತೆ-ಬದುಕ ಯಾನ

  1. ಚೆನ್ನಾಗಿದೆ ಕವಿತೆ. ಅವ್ಯಕ್ತ ಭಾವನೆಗಳು ವ್ಯಕ್ತವಾಗಿವೆ!

Leave a Reply

Back To Top