ಮೇ-ದಿನದ ವಿಶೇಷ

ಡಾ.ದಾನಮ್ಮ ಝಳಕಿ

ಸಮಸಮಾಜ ಕಟ್ಟುವ ಮೂಲಕ

ಕಾರ್ಮಿಕರ ಸ್ಥಾನಮಾನ ಎತ್ತರಿಸಿದ ಶರಣರು

ಬಂಡವಾಳಶಾಹಿಗಳ ಅಮಾನವೀಯ ನಡೆ, ಅಮಾನುಷ ವರ್ತನೆಯ ವಿರುದ್ಧ ಜಗತ್ತಿನಾದ್ಯಂತ ಅನೇಕ ಕಡೆ ಕಾರ್ಮಿಕ ಸಂಘಟನೆಗಳು ರೂಪುತಳೆದಿವೆ. ಕಾರ್ಮಿಕನೊಬ್ಬನ ರಕ್ತದಲ್ಲಿ ತೊಯ್ದ ಅಂಗಿಯನ್ನೇ ಕೆಂಪು ಬಾವುಟವಾಗಿಸಿ ಮುನ್ನಡೆದ ಕಾರ್ಮಿಕರ ಹೋರಾಟ, ಚಳವಳಿಗೆ ಅಮೆರಿಕ ಸಾಕ್ಷಿಯಾದದ್ದು 19ನೇ ಶತಮಾನದಲ್ಲಿ. ಜಗತ್ತಿನ ಮೊದಲ ಸಮಾಜವಾದಿ ದೇಶ ಸೋವಿಯತ್ ಒಕ್ಕೂಟವು he who does not work neither shall he eat (‘ದುಡಿಯಲಾರದವ ತಿನ್ನಲಿಕ್ಕೂ ಅರ್ಹನಲ್ಲ’) ಎಂಬ ಧ್ಯೇಯ ವಾಕ್ಯವನ್ನಿಟ್ಟುಕೊಂಡು ಸಂವಿಧಾನ ರಚಿಸಿತು. ಕಮ್ಯೂನಿಸ್ಟ್ ರಾಷ್ಟ್ರಗಳಿಂದ ಹಿಡಿದು ಎಲ್ಲಾ ಸಿದ್ಧಾಂತಗಳ ರಾಜ್ಯಾಡಳಿತಗಳು ಕಾರ್ಮಿಕರ ಹಿತಾಸಕ್ತಿಗಾಗಿ ಅನೇಕ ಕಾನೂನುಗಳನ್ನು ರಚಿಸಿವೆ. ಹೊಸ ನಿಯಮಗಳನ್ನು ಹುಟ್ಟುಹಾಕಿವೆ.
ಹೀಗೆ ಕಾರ್ಮಿಕರ ಹಿತಾಸಕ್ತಿ ಕಾಪಾಡಲು ಪ್ರಾರಂಭವಾದ ಹೋರಾಟ ಇಂದು ಇದರ ಇತಿಹಾಸವನ್ನು ಇಣುಕಿ ನೋಡಿದಾಗ, 1886 ರ ವರ್ಷದ ಮೇ 4ರಂದು ಚಿಕಾಗೋದ, ಇಲಿನಾಯ್ಸ್ ಪ್ರದೇಶದ ಹೇ ಮಾರ್ಕೆಟ್ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯನ್ನು ಈ ಆಚರಣೆಗೆ ಹಿನ್ನೆಲೆಯಾಗಿರುವುದನ್ನು ಇತಿಹಾಸದ ಪುಟಗಳಲ್ಲಿ ಕಾಣಬಹುದು. ಹೀಗೆ ಕಾರ್ಮಿಕ ಪ್ರಭುತ್ವದ ಶುಭಯುಗದ ಉದಯದ ಕುರುಹಾಗಿ ಮೇ 1ರಂದು ಉತ್ಸವಾಚರಣೆ ಮಾಡಬೇಕೆಂದು ರಾಬರ್ಟ್ ಓವೆನ್ ಸೂಚಿಸಿದ್ದ. ಹೀಗೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಮೇ ೧ನೇ ತಾರೀಖಿನಂದು ‘ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಪ್ರತಿ ವರ್ಷ  ಪ್ರಪಂಚದ ಹಲವು ದೇಶಗಳಲ್ಲಿ ಆಚರಿಸಲಾಗುತ್ತದೆ.
ಭಾರತದಲ್ಲಿ 20 ನೇ ಶತಮಾನದ ಎರಡನೆಯ ದಶಕದ ದ್ವಿತೀಯಾರ್ಧದಲ್ಲಿ ಕಾರ್ಮಿಕ ಸಂಘ ಚಳುವಳಿಯ ಪ್ರಭಾವ ಹೆಚ್ಚಿಸಿದಾಗಿನಿಂದ ಇದರ ಆಚರಣೆ ಆರಂಭವಾಯಿತು. ಆದ್ದರಿಂದ ಭಾರತದಲ್ಲಿಯೂ ಮೇ ದಿನವೇ ಕಾರ್ಮಿಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಮೇ ದಿನಾಚರಣೆಯಲ್ಲಿ ಭಾಗವಹಿಸಿದ ಮೊಟ್ಟಮೊದಲಿನ ಭಾರತೀಯ ಕಾರ್ಮಿಕರು ಇಂಗ್ಲೆಂಡಿನಲ್ಲಿದ್ದ ಭಾರತೀಯ ನಾವಿಕರು. ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂದು ಘೋಷಣೆಯನ್ನೊಳಗೊಂಡ ಪ್ರದರ್ಶನ ಚಿತ್ರಗಳನ್ನು ಹಿಡಿದು ಮೆರವಣಿಗೆಯಲ್ಲಿ ಅವರು ಹೈಡ್ ಪಾರ್ಕಿನ ಮೇ ದಿನದ ಉತ್ಸವ ಸಭೆಗೆ ಹೋದರು (1925). ಭಾರತದಲ್ಲಿ 1927 ರಿಂದೀಚೆಗೆ ಪ್ರತಿವರ್ಷವೂ ಕಾರ್ಮಿಕರು ಈ ದಿನವನ್ನಾಚರಿಸುತ್ತಿದ್ದಾರೆ.
ಕಾರ್ಮಿಕ ದಿನಾಚರಣೆಯ ವಿವಿಧ ಮೂಲಗಳ ಹೊರತಾಗಿಯೂ, ಅರ್ಥ ಮತ್ತು ಆಚರಣೆಯು ಒಂದೇ ಆಗಿರುತ್ತದೆ ಮತ್ತು ಅದು ಸಮಾಜದ ಅಭಿವೃದ್ಧಿಗೆ ಕಾರ್ಮಿಕರು ನೀಡಿದ ಕೊಡುಗೆಯನ್ನು ಸ್ಮರಿಸುವುದೇ ಆಗಿದೆ.
ಆದರೆ ಕಾರ್ಮಿಕರ ಹಕ್ಕುಗಳ ಉಲ್ಲಂಘನೆ, ಕಳಪೆ ಕೆಲಸದ ಪರಿಸ್ಥಿತಿಗಳು, ವಿಸ್ತರಿಸಿದ ಕೆಲಸದ ಸಮಯ, ಕಡಿಮೆ ವೇತನ ಮತ್ತು ಅನೇಕ ಸಮಸ್ಯೆಗಳು ಇನ್ನೂ ಹಾಗೆಯೇ ಉಳಿದಿವೆ ಮತ್ತು ನಮ್ಮ ಸುತ್ತಲಿನ ಕಾರ್ಮಿಕರು ಇವುಗಳಿಂದ ಪ್ರಭಾವಿತರಾಗುತ್ತಿದ್ದಾರೆ. ಮೇ ದಿನವು ಕಾರ್ಮಿಕರನ್ನು ಗೌರವಿಸುವುದು ಮಾತ್ರವಲ್ಲದೆ ಅವರ ಪರಿಸ್ಥಿತಿಗಳ ಸುಧಾರಣೆಗಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಆದರೆ ದುಡಿವ ಜನರಿಗೆ ಆರ್ಥಿಕ ನ್ಯಾಯ ಒದಗಿಸಲು, ಸಾಮಾಜಿಕ ಗೌರವ ತಂದುಕೊಡಲು ಗಣನೀಯವಾಗಿ ವಿಫಲವಾಗಿರುವುದನ್ನು  ಸಹ ಇಲ್ಲಿ ಗುರುತಿಸಬಹುದಾಗಿದೆ.
ಈ ಹಿನ್ನೆಲೆಯಲ್ಲಿ ಕಾರ್ಮಿಕ ದಿನಾಚರಣೆಯು ವಿಶ್ವದಲ್ಲಿ 1886 ರ ಹೋರಾಟದ ನಂತರ ಎಂದು ವಿದ್ಯುಕ್ತವಾಗಿ ಹೇಳುತ್ತಿದ್ದರೂ ವಾಸ್ತವವಾಗಿ 1889ಕ್ಕಿಂತ ಮುಂಚೆ ಭಾರತದಲ್ಲಿ ಕಾರ್ಮಿಕರಿಗೆ ಸಮಸಮಾಜವನ್ನು ಕಟ್ಟಿ, ಅವರ ಶ್ರಮವನ್ನು ದೈವತ್ವಕ್ಕೇರಿಸಿದ ಕೀರ್ತಿ 12 ನೇ ಕಾಲದ ಶರಣರಿಗೆ ಸಲ್ಲುತ್ತದೆ. ಜಗತ್ತಿನಲ್ಲಿಯೇ ಕಾರ್ಮಿಕರ ಶ್ರಮಗೌರವವನ್ನು ಅಭಿಮಾನದಿಂದ ಅಪ್ಪಿಕೊಂಡ ಸಮಾಜ ಎಂದರೆ ಅದು ಶರಣರ ಕಾಲದ್ದು ಎಂದು ಗಟ್ಟಿಯಾಗಿ ಎದೆತಟ್ಟಿ ಹೇಳಬಹುದು. ಕಾರ್ಮಿಕರ ಶ್ರಮ ಅಥವಾ ಉದ್ಯೋಗಕ್ಕೆ ಕಾಯಕ ಎಂಬ ಸಮಷ್ಠಿ ಭಾವವನ್ನು ತುಂಬಿದವರು 12 ನೇ ಶತಮಾನದ ಶರಣರು.


ವಚನಕಾರರ ದೃಷ್ಠಿಯಿಂದ ಕಾಯಕ ಮತ್ತು ಕರ್ಮಗಳಲ್ಲಿ ಅಪಾರ ವ್ಯತ್ಯಾಸವಿದೆ. ಕಾಯಕ ಸಿದ್ಧಾಂತ ಚೈತನ್ಯದ ಪ್ರತೀಕವಾದರೆ ಕರ್ಮವು ಜಡತ್ವದ ಪ್ರತೀಕವಾಗಿದೆ. ಕಾಯಕ ಜನಸಂಸ್ಕೃತಿಯ ಪರವಾದರೆ ಕರ್ಮಶಾಸ್ತ್ರ ದಾಸ್ಯದ ಪರವಾಗಿದೆ. ಕಾಯಕಸಿದ್ಧಾಂತಕ್ಕೆ ದೇಹ ಮತ್ತು ಮನಸ್ಸಿನ ಸಮತೋಲನ ಕಾಪಾಡುವ ಶಕ್ತಿ ಇದೆ. ಈ ಪೃಥ್ವಿಯನ್ನು ಬದುಕಲು ಹೆಚ್ಚು ಹೆಚ್ಚು ಯೋಗ್ಯಗೊಳಿಸುವ ಆಶಯವಿದೆ. ಕಾಯಕದ ಮೂಲಕ ಸ್ವತಂತ್ರನಾಗುತ್ತಾನೆ. ಪರಾವಲಂಬಿ ಜೀವನದಿಂದ ವ್ಯಕ್ತಿತ್ವವೇ ಕುಬ್ಜವಾಗುತ್ತದೆ. ಕಾಯಕವು ಆತ್ಮಗೌರವವನ್ನು ರಕ್ಷಿಸುತ್ತದೆ. ಆದ್ದರಿಂದ ವಚನಗಳು ಸಾರಿ ಸಾರಿ ಹೇಳುತ್ತಿವೆ ಕಾಯವೇ ಕೈಲಾಸ, ಕಾಯಕವೇ ಕೈಲಾಸ ಎಂದು. ಹೀಗೆ ಶರಣ ಪರಂಪರೆಯು ಜಗತ್ತಿನಲ್ಲಿಯೇ ಶ್ರಮ ಸಂಸ್ಕೃತಿಗೆ ಹೆಚ್ಚಿಗೆ ಮಹತ್ವ ಜಗತ್ತಿನ ಮೊಟ್ಟ ಮೊದಲ  ವ್ಯವಸ್ಥೆಯಾಗಿದೆ.
ಶ್ರಮಜೀವನದ ಶ್ರೇಷ್ಠತೆಯನ್ನು ಸಂಸ್ಥಾಪಿಸುವ ಸಲುವಾಗಿ, ವೃತ್ತಿ ಗೌರವವನ್ನು ಕಾಪಾಡುವ ಸಲುವಾಗಿ, ಸಮಾಜದ ಐಕ್ಯವನ್ನು ಸುಭದ್ರಗೊಳಿಸುವ ಸಲುವಾಗಿ, ಸಂಪತ್ತನ್ನು ವೃದ್ಧಿಗೊಳಿಸಲು ಸಂಪನ್ಮೂಲಗಳ ಸಮರ್ಥ ಬಳಕೆಗಾಗಿ ಕಾಯಕ ಸಿದ್ಧಾಂತಕ್ಕೆ ಒತ್ತುಕೊಟ್ಟರು
ಕಾಯಕ ತತ್ವವನ್ನು ವ್ಯಾಖ್ಯಾನಿಸಿದ ಈ ಕೆಳಗಿನ ವಚನದಲ್ಲಿ ಮಾರಯ್ಯನ ವಿಚಾರಶ್ರೇಣೆಯನ್ನು ಅರ್ಥಗರ್ಭಿತವಾಗಿ ನಿರೂಪಿಸಲಾಗಿದೆ.
“ಕಾಯಕದಲ್ಲಿ ನಿರತನಾದಡೆ
ಗುರುದರ್ಶನವಾದಡೂ ಮರೆಯಬೇಕು
ಲಿಂಗಪೂಜೆಯಾದಡೂ ಮರೆಯಬೇಕು
ಜಂಗಮ ಮುಂದೆ ನಿಂದಿದ್ದಡೂ ಹಂಗ ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು.”

ಎಂದು ಆಯ್ದಕ್ಕಿ ಮಾರಯ್ಯ ಹೇಳುವಲ್ಲಿ ಕಾಯಕದ ಮಹತ್ವ ಪರಾಕಾಷ್ಠೆಯನ್ನು ತಲುಪುತ್ತದೆ.
ಜಗತ್ತಿನ ಪ್ರಗತಿಪರ ರಾಷ್ಟ್ರಗಳಾದ ಜಪಾನ, ಜರ್ಮನಿ ಮೊದಲಾದ ದೇಶಗಳು ಈ ತತ್ವವನ್ನು ಎತ್ತಿಕೊಂಡು ಕೃತಿಗಿಳಿಸಿರುತ್ತವೆ. ದಾರುಣ ದುರಂತವೆಂದರೆ ಯಾವ ನೆಲದಲ್ಲಿ ಈ ಸಿದ್ಧಾಂತವು ವ್ಯಕ್ತಗೊಂಡಿದೆಯೋ ಅಲ್ಲಿಯೇ ಇಂದು ನಿರುದ್ಯೋಗದ ತಾಂಡವ ನೃತ್ಯ ನಡೆದಿದೆ. ಇದಕ್ಕಿಂತ ವಿಪರೀತ ವಿಪರ್ಯಾಸ ಇನ್ನೊಂದುಂಟೇ? ರಾಷ್ಟ್ರದ ಪ್ರಗತಿಗೆ ಸಂಪನ್ಮೂಲಗಳೇ ಕಾರಣ ಈ ಸಂಪನ್ಮೂಲಗಳು ಹೆಚ್ಚಾಗಬೇಕಾದರೆ ಪ್ರತಿಯೊಬ್ಬರು ದುಡಿಯಲೇಬೇಕು. ಈ ದುಡಿತದಿಂದ ಜಡತ್ವ ತೊಲಗಿ, ಚೈತನ್ಯ ಹೊರಹೊಮ್ಮುತ್ತದೆ.
ಕಾಯಕವೇ ಪ್ರತಿಯೊಬ್ಬರ ಜೀವನದ ಕರ್ತವ್ಯವಾಗಬೇಕು ಈ ಕಾಯಕದಲ್ಲಿ ಮೇಲು ಕೀಳುಗಳಿರುವುದಿಲ್ಲ. ಮಾನವನಲ್ಲಿ ಸುಪ್ತವಾಗಿರುವ ವಿವಿಧ ಕ್ರಿಯಾಶಕ್ತಿಯನ್ನು ಉತ್ತಮಗೊಳಿಸಿ, ಅದರಿಂದ ತನಗೂ ಉಳಿದವರಿಗೂ ಸೊಗಸುಂಟಾಗುವಂತೆ ಮಾಡುವ ಕಲೆಯೇ ಕಾಯಕ. ಮಾನವನ ಭವಿಷ್ಯತ್ತಿಗೆ “ಜ್ಞಾನೋದಯದ ಕಣ್ಣು ಕಾಯಕದ ಕೈ” ಇದ್ದಂತೆ.
ಶ್ರಮಜೀವನದ ಶ್ರೇಷ್ಠತೆಯನ್ನು ಸಂಸ್ಥಾಪಿಸುವ ಸಲುವಾಗಿ, ವೃತ್ತಿ ಗೌರವವನ್ನು ಕಾಪಾಡುವ ಸಲುವಾಗಿ, ಸಮಾಜದ ಐಕ್ಯವನ್ನು ಸುಭದ್ರಗೊಳಿಸುವ ಸಲುವಾಗಿ, ಸಂಪತ್ತನ್ನು ವೃದ್ಧಿಗೊಳಿಸಲು ಸಂಪನ್ಮೂಲಗಳ ಸಮರ್ಥ ಬಳಕೆಗಾಗಿ ಕಾಯಕ ಸಿದ್ಧಾಂತಕ್ಕೆ ಒತ್ತುಕೊಟ್ಟರು. ಹೀಗೆ ಕಾಯಕದ ಮಹತ್ವ ಸಾರುವ ಕೆಲವು ವಚನಗಳನ್ನು ಉದಾಹರಣೆ ನೀಡಬಹುದು.
ಕೃತ್ಯ ಕಾಯಕವಿಲ್ಲದವರು ಭಕ್ತರಲ್ಲ,
ಸತ್ಯಶುದ್ಧವಿಲ್ಲದುದು ಕಾಯಕವಲ್ಲ,
ಆಸೆಯೆಂಬುದು ಭವದ ಬೀಜ,
ನಿರಾಸೆಯೆಂಬುದು ನಿತ್ಯಮುಕ್ತಿ
ಉರಿಲಿಂಗ ಪೆದ್ದಿಗಳರಸನಲ್ಲಿ ಸದರವಲ್ಲ ಕಾಣವ್ವಾ.
— ಕಾಳವ್ವೆ

ಕಾಳವ್ವೆ ಮತ್ತು ಉರಿಲಿಂಗಪೆದ್ದಿ ಶರಣ ದಂಪತಿಗಳು ಮತ್ತು ಪ್ರತಿಭಾವಂತ ಮತ್ತು ವೈಚಾರಿಕ ವಚನಕಾರರಲ್ಲಿ ಪ್ರಮುಖ ಶಿವಶರಣರು.
 ೧೨ನೇ ಶತಮಾನದ ವಚನಕಾರರು ಕಾಯಕಕ್ಕೆ ಅಂದರೆ ದುಡಿಮೆಗೆ ಬಹಳ ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ. ಶ್ರಮದ ದುಡಿಮೆಯೇ ದುಡಿಮೆ, ಶ್ರಮದ ದುಡಿಮೆ ಮಾಡದವ ಭಕ್ತನೇ ಅಲ್ಲ, ಮೋಸದ, ಅನ್ಯಾಯದ ಅಪ್ರಮಾಣಿಕ ಮಾರ್ಗದಲ್ಲಿ ಮಾಡುವ ಕಾಯಕ ಕಾಯಕವೇ ಅಲ್ಲ, ವಿಪರೀತ ಆಸೆಗಳು ನಿರೀಕ್ಷೆಗಳು ಕಷ್ಟ ಮತ್ತು ಸಂಕಷ್ಟಕ್ಕೆ ದಾರಿಯಾಗುತ್ತದೆ. ಅದರಿಂದ ನಿರೀಕ್ಷಿತ ಸಾಧನೆ ಸಾಧ್ಯವಿಲ್ಲ,ಕಾಯಕದಲ್ಲೇ ಮುಕ್ತಿಯನ್ನು ಪಡೆಯಬಹುದು ಎಂಬುದು ಉರಿಲಿಂಗಪೆದ್ದಿಗಳ ಪುಣ್ಯಸ್ತ್ರಿ ಕಾಳವ್ವೆಯವರ ಅಭಿಮತ.  
ಆವ ಕಾಯಕವಾದಡೂ ಸ್ವಕಾಯಕವ ಮಾಡಿ
ಗುರು ಲಿಂಗ ಜಂಗಮದ ಮುಂದಿಟ್ಟು,
ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು
ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು,
ಜೀವ ಹೋದಡೆ ಸಾಯಿ, ಇದಕ್ಕಾ ದೇವರ ಹಂಗೇಕೆ,
ಭಾಪು ಲದ್ದೆಯ ಸೋಮ.
-ಲದ್ದೆಯ ಸೋಮಣ್ಣ


ಬಸವಣ್ಣನವರ ಸಮಕಾಲೀನ ಶರಣ. ಯಾವುದೇ ಕಾಯಕವಾದರೂ ತಲ್ಲೀನವಾಗಿ ಮಾಡು. ಕಾಯಕದಿಂದ ಬಂದದ್ದನ್ನು ದಾಸೋಹಂ ಭಾವದಿಂದ ಶರಣಸಂಕುಲ (ಗುರು ಲಿಂಗ ಜಂಗಮ)ಕ್ಕೆ ಅರ್ಪಿಸು. ಪ್ರಸಾದವನ್ನು ಬಯಸು. ಅರ್ಪಿಸಿದ ನಂತರ ಉಳಿದದ್ದನ್ನು ಪ್ರಸಾದವಾಗಿ ಸ್ವೀಕರಿಸು. ರೋಗ ಬಂದರೆ ನರಳು, ನೋವಾದರೆ ಅರಚು, ಸಾವು ಬಂದರೆ ಸಾಯಿ, ಇದಕ್ಕೆ ಆ ದೇವರ ಹಂಗೇಕೆ? ಎಂದು ಲದ್ದೆಯ ಸೋಮಣ್ಣ ಪ್ರಶ್ನಿಸುತ್ತಾನೆ. ಆತ್ಮಗೌರವ, ಕಾಯಕನಿಷ್ಠೆ, ಶರಣಸಂಕುಲಕ್ಕೆ ನಿಷ್ಠೆ, ದೇವರ ಹಂಗಿನಲ್ಲಿ ಕೂಡ ಇರಬಾರದೆಂಬ ಛಲ ಮತ್ತು ಜನನದಂತೆ ಮರಣ ಕೂಡ ಜೈವಿಕ ಪ್ರಕ್ರಿಯೆಯಗಿರುವುದರಿಂದ ಆ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಎಂಬ ಮಹತ್ವದ ನಿಲುವುಗಳನ್ನು ಲದ್ದೆಯ ಸೋಮಣ್ಣ ಈ ವಚನದಲ್ಲಿ ತಾಳಿದ್ದಾನೆ.
ವೃತ್ತಿ ಎಂಬ ಸಾಮಾನ್ಯ ಅರ್ಥ ಕಾಯಕಕ್ಕಿದ್ದರೂ ಅದನ್ನೊಂದು ಜೀವನ ಮೌಲ್ಯವನ್ನಾಗಿ ಮಾಡಿದವರು 12 ನೇ ಶತಮಾನದ ಶರಣರು ಎಲ್ಲರೂ ದುಡಿಯಬೇಕು ಜೀವನದ ನಿರ್ವಹಣೆಗೆ ಸತ್ಯಶುದ್ಧವಾದ ಕಾಯಕವೊಂದಿರಲೇಬೇಕು. ನಡೆಸುವ ಕಾಯಕದಲ್ಲಿ ಮೋಸ ವಂಚನೆಗಳಿರಕೂಡದು ಕಾಯಕತತ್ವದಲ್ಲಿ ಸರ್ವರೂ ಸಮಾನರು. ಯಾರ ಹಂಗೂ ಇಲ್ಲದೇ, ಯಾರೊಡನೆ ಹೋರಾಟವೂ ಇಲ್ಲದೇ ಜೀವನವನ್ನೇ ಕೈಲಾಸವನ್ನಾಗಿ ಮಾಡುವ ಕ್ರಿಯಾತ್ಮಕ ತಪಸ್ಸೆ ಕಾಯಕ. ಕಾಯಕದಲ್ಲಿಯ ಶ್ರಮವಿಭಜನೆಯನ್ನು ದೈವತ್ವಕ್ಕೇರಿಸಿ, ಕಾಯಕಯೋಗಿಗಳೆಲ್ಲರೂ ಶರಣಸಮಾಜದಲ್ಲಿ ಸಮಾನವಾದ ಉನ್ನತ ಗೌರವವಕ್ಕೆ ಅರ್ಹರು ಎಂಬ ಸ್ಪಷ್ಟವಾದ ನಿಲುವಿನ ಮೂಲಕ ಸಮಸಮಾಜವನ್ನು ಕಟ್ಟಿದ ಶರಣರು, ಕಾರ್ಮಿಕರಿಗೆ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಸಮಾನತೆಯನ್ನು ತಂದುಕೊಟ್ಟರು. ಹೀಗೆ ಕಾರ್ಮಿಕ ದಿನಾಚರಣೆಯನ್ನು ಜಗತ್ತಿನಲ್ಲಿಯೇ ಮೊಟ್ಟ ಮೊದಲು ಆಚರಿಸಿದವರೆಂದರೇ 12 ನೇ ಕಾಲದ ಶರಣರೇ ಎಂದು ಬಲವಾಗಿ ಹೇಳಬಹುದು.
ಒಟ್ಟಾರೆ ಶರಣರು ಕಾಯಕಕ್ಕೆ ಅತ್ಯಂತ ಪ್ರಾಮುಖ್ಯತೆಯ ನೀಡಿ, ಸಮಸಮಾಜವನ್ನು ಕಟ್ಟುವ ಮೂಲಕ ಶ್ರಮಗೌರವವನ್ನು ತಂದುಕೊಟ್ಟರು . ಅಲ್ಲದೇ ಸಾಮಾಜಿಕ, ಸಾಂಸ್ಕೃತಿಕ,  ಮತ್ತು ಆರ್ಥಿಕ ಸಮಾನತೆಯನ್ನು  ತಂದುಕೊಟ್ಟು ಪ್ರತಿದಿನ ಕಾರ್ಮಿಕ ದಿನಾಚರಣೆಯನ್ನು ಜೀವನದಲ್ಲಿ ಹಾಸುಹೊಕ್ಕಗಿಸಿದ್ದಾರೆ ಎಂಬುದನ್ನು ಅವರು ಬದುಕಿದ ರೀತಿಯಿಂದಲೇ ಅರ್ಥೈಸಿಕೊಳ್ಳಬಹುದು.


ಡಾ.ದಾನಮ್ಮ ಝಳಕಿ

Leave a Reply

Back To Top