ಮೇ-ದಿನದ ವಿಶೇಷ
ಅಭಿಜ್ಞಾ ಪಿ.ಎಮ್ ಗೌಡ
ಕಾರ್ಮಿಕರು
ಕಾರ್ಮಿಕರೆ ದೇಶದ ಸಂಪತ್ತು, ಆಸ್ತಿ ,ಬೆನ್ನೆಲುಬು, ಜಗದ ಕಣ್ಣುಗಳೆಂದರೂ ತಪ್ಪಾಗಲಾರದು. “ಕಾರ್ಮಿಕರಿಲ್ಲದ ದೇಶವಿಲ್ಲ
ಪ್ರೀತಿಯಿಲ್ಲದ ಜೀವಿಗಳಿಲ್ಲ”. ಕಾರ್ಮಿಕರಿಂದಲೆ ದೇಶದ ಅಭಿವೃದ್ಧಿ, ಪ್ರೀತಿ ವಿಶ್ವಾಸಗಳಿಂದಲೆ ಜನಮಾಸದೊಳಗೆ ಸಮೃದ್ಧಿ. ಹಾಗಾಗಿ
ಕಾರ್ಮಿಕರಿಗೆ ಜೈಕಾರವಿರಲಿ ,ಅವರನ್ನು ಶೋಷಣೆ ಮಾಡುತಿರುವರಿಗೆ ಧಿಕ್ಕಾರ ಕೂಗುತಿರಲಿ.ಬನ್ನಿ ಎಲ್ಲರೂ ಒಕ್ಕೊರಲಿನ ಕರೆ ನೀಡೋಣ ದೇಶದ ಸಂಪತ್ತನ್ನು ಉಳಿಸಿಕೊಳ್ಳೋಣ.
ಕಾರ್ಮಿಕ ಎಂದರೆ ಯಾರು.? ಯಾರನ್ನೆಲ್ಲ ಕಾರ್ಮಿಕರೆಂದು ಕರೆಯಬಹುದು. ಎಂಬುದನ್ನು ಹೇಳುವುದಾದರೆ;ಸಾಮಾನ್ಯವಾಗಿ ಮಾಡುವ ಕೆಲಸಗಳು ಸುಲಭವಾಗಿರಬಹುದು ಅಥವ ಕಠಿಣವಾಗಿರಬಹುದು ಹೆಚ್ಚೆಚ್ಚು ಶ್ರಮದಾಯಕವಾದ ಕೆಲಸಗಳನ್ನು ಹಗಲಿರುಳು ಬೆವರರಿಸಿ ದಣಿದು ,ದುಡಿದು ಕಡಿಮೆ ಸಂಬಳ ಪಡೆಯುವ ದೀನ ದಯಾಳುಗಳು ,ಯಾವುದೆ ಸುರಕ್ಷತೆಯಿಲ್ಲದೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಅವಕಾಶಗಳಿಂದ ವಂಚಿತರಾಗಿದ್ದು ಮಾಲಿಕರ ಅಭಿಪ್ರಾಯಗಳನ್ನು ಚಾಚು ತಪ್ಪದೆ ಪಾಲಿಸುವವರು,ಹಾಗೆಯೆ ಮಾಲಿಕರಿಗೆ ಅನುಗುಣವಾಗಿಯೇ ದುಡಿಯುತ್ತ ತಮ್ಮ ಜೀವನದುದ್ದಕ್ಕೂ ಶೋಷಣೆಗಳಿಗೆ ಒಳಗುತ್ತ ಬದುಕುತ್ತಿರುವವರೆ ಈ ಕಾರ್ಮಿಕರು.
ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿಯು ಆ ದೇಶದ ಕಾರ್ಮಿಕರ ಮೇಲೆಯೇ ಅವಲಂಬಿತವಾಗಿರುತ್ತದೆ. ದಕ್ಷತೆಯಿಂದ ಕೂಡಿದ ಕಾರ್ಮಿಕರ ವರ್ಗದಿಂದ ಮಾತ್ರ ಆ ದೇಶ ಆರ್ಥಿಕ ಪ್ರಗತಿಯನ್ನು ಸಾಧಿಸುವುದು.ಕಾರ್ಮಿಕ ಎಂದರೆ ಸಾಮಾನ್ಯ ಅರ್ಥದಲ್ಲಿ ದೈಹಿಕ ಇಲ್ಲವೇ ಬೌದ್ಧಿಕ ಶ್ರಮವನ್ನು ಮಾರಟ ಮಾಡಿ ಹಣ ಗಳಸುತ್ತಿರುವ ವ್ಯಕ್ತಿಗೆ ಕಾರ್ಮಿಕ ಎನ್ನುತ್ತೇವೆ.ಮಾಲೀಕರ ಸಂಪತ್ತು ವೃದ್ಧಿಸುವದರಲ್ಲಿ ಕಾರ್ಮಿಕರ ಪಾತ್ರ ಬಹಳ ಹಿರಿದಾಗಿದೆ. ಆದರೆ ಕಾರ್ಮಿಕರಿಗೆ ನೀಡೊ ಕೂಲಿ ಅವರ ಜೀವನಕ್ಕೆ ಸಾಕಾಗುವದಿಲ್ಲ. ಗುಡಿಸಲು ವಾಸ, ಹರಕಲು ಬಟ್ಟೆ,”ಹಸಿದ ಹೊಟ್ಟಿಗೆ ಅರೆಕಾಸಿನ ಮಜ್ಜಿಗೆ” ಇದೇ ಕಾರ್ಮಿಕರ ಜೀವನ. ಕೆಳ ದರ್ಜೆಯ ಕೆಲಸ ಮಾಡುವ ಇವರಿಗೆ ಸಮಾಜದಲ್ಲಿ ಯೋಗ್ಯ ಸ್ಥಾನ ದೊರಕುವದಿಲ್ಲ.
ಹೋಟೇಲ್ಗಳಲ್ಲಿ ದುಡಿಯುವವರು, ಕಟ್ಟಡ ಕಾರ್ಮಿಕರು ˌದೇಶ ಕಾಯುವ ದೀನರು, ಹೊಲಸು ತೆಗೆದು ಹಸನು ಮಾಡಿ ಕೆಲಸ ಹುಡುಕುವ ಬಡವರು, ದೇಶಕಾಯುವ ಚೌಕಿದಾರರು, ಬೆಳೆಯನ್ನು ಬೆಳೆವ ರೈತರು, ಗಣಿಗಾರಿಕೆಗಳಲ್ಲಿ ದುಡಿಯುವವರು,ಹೊಲಗದ್ದೆಗಳಲ್ಲಿ ಕೂಲಿ ಮಾಡುವವರು,ಮನೆ ಕೆಲಮಾಡುವವರು , ಕಾರ್ಖಾನೆಗಳಲ್ಲಿ, ಕಂಪನಿಗಳಲ್ಲಿ ದುಡಿಯುವವರು ಹೀಗೆ ಹೇಳುತ್ತ ಹೋದರೆ ಅಪಾರ.ಒಟ್ಟಾರೆ ನಾವೆಲ್ಲರೂ ಕೂಡ ಕೂಲಿಗಳೆ ದೇವರ ಅಡಿಯೊಳಗೆ. ಕೆಲವರಿಗೆ ತೃಪ್ತಿ ಇರುವುದು ,ಮತ್ತೊಬ್ಬರಿಗೆ ದುಃಖ ಹೆಚ್ಚಾಗುವುದು.
ಮಾಲಿಕರ ಕೈ ಕೆಳಗೆ ದುಡಿಯುವ ಅಪ್ಪಟ ಸೇವಕ ಕೂಲಿ ಕಾರ್ಮಿಕ ಅವರಿಂದಲೆ ತೀವ್ರತರ ತೊಂದರೆಗಳಿಗೆ ಭಾರಿ ಸಂಕಟಗಳಿಗೆ ಒಳಗಾಗುವರು.ಇಲ್ಲಿ ಮಾಲಿಕರು ತಮ್ಮ ಸ್ವಾರ್ಥ ಸಾಧನೆಗಾಗಿ ,ತಮ್ಮ ಆರ್ಥಿಕತೆಯ ಲಾಭವನ್ನು ಹೆಚ್ಚಿಸಿಕೊಳ್ಳಲು ಕಾರ್ಮಿಕರನ್ನು ಮೂಕಪ್ರಾಣಿಗಳಂತೆ ,ಗುಲಾಮರಂತೆ ಬಳಸಿಕೊಳ್ಳುತಿರುವರು.ಕಾರ್ಮಿಕರಿಗೆ ಯಾವುದೆ ರೀತಿಯ ಸುರಕ್ಷತಾ ಕ್ರಮಗಳನ್ನು ಒದಗಿಸಿ ಕೊಡದೆ ಅಸಹಾಯಕರಾಗಿ ದುಡಿಸಿಕೊಳ್ಳುತಿರುವರು, ಕೆಲಸ ಮುಗಿದ ತಕ್ಷಣ ದೊರೆಯದ ಹಣ ,ಮಾಡಿದ ಕೆಲಸಕೆ ತಕ್ಕ ಬೆಲೆಯಿಲ್ಲದೆ ಕೀಳಾಗಿ ನೋಡುವ ಅವರ ಪಾರುಪತ್ಯ ವಿಪರೀತವಾಗಿರುತ್ತದೆ.
ಕಾರ್ಮಿಕರಿಲ್ಲದಿದ್ದರೆ ಇಡೀ ವಿಶ್ವಕೆ ಕಂಟಕ. ಇದನ್ನು ತಿಳಿದಿದ್ದರು ಕೂಡ ಅವರನ್ನು ಕೇವಲವಾಗಿ ಕಾಣುತಿರುವುದು ಮಾತ್ರ ವಿಚಿತ್ರವಾಗಿ ಪರಿಣಮಿಸಿವೆ.ಕಾರ್ಮಿಕರ ಮೂಲಕವೆ ಎಲ್ಲಾ ಕಾರ್ಯಗಳಿಗೂ ಜಾತಕಗಳಂತೆ ಮುನ್ನುಡಿ ಬರಯಬೇಕಿದೆ. ಅವನಿಲ್ಲದಿದ್ದರೆ ಇಡೀ ದೇಶವೆ ಸೂತಕದ ಛಾಯೆಯಂತೆ ಭಣಗುಡುವ ಸಂಭವವನ್ನು ಎದುರಿಸಬೇಕಾಗುವುದನ್ನು ಮಾಲಿಕ ವರ್ಗ ಮರೆತಂತಿದೆ.ಇಂತಹ ಅಮಾಯಕರಾದ ಕಾರ್ಮಿಕರಿಗಿಲ್ಲ ಅನುಕಂಪ ,ಕರುಣೆ ,ದುಡಿತದ ದುಡಿಮೆಗೆ ಸರಿಯಾದ ಪಗಾರವಿಲ್ಲದೆ ನೊಂದು ಬೇಯುತಿವೆ ಕೋಟ್ಯಾಂತರ ಮಂದಿ ಕಾರ್ಮಿಕ ವಲಯ..
ನಾಟಕವಾಡುವ ಮಾಲಿಕರ ಗುಳ್ಳೆನರಿ ಬುದ್ದಿಗೆ ಬೇಸತ್ತು ಕೂಗುತಿರುವ ದೀನ ಕಾರ್ಮಿಕರ ಅಳಲು ವಿಪರೀತ ಆದರೂ ನಿಷ್ಟಾವಂತ ಕಾಯಕನಿವ ಇಡಿ ಜಗದ ದಿವ್ಯ ಪ್ರಚೋದಕ ಶಕ್ತಿ ದ್ಯೋತಕನಾಗಿ ನಿಂತಿರುವನು.ತನ್ನ ಬದುಕು ಬವಣೆಗಳ ದಾರುಣ ಚಿತ್ರಣದೊಳು ನೊಂದು ಬೆಂದಿರುವ ಶ್ರಮಿಕನಿವ.ದೈನಿಕ ನಿತ್ಯಕಾಯಕದಿಂದಲೆ ದೇಶದ ಬೆಳಕಾಗಿ ಪ್ರಜ್ವಲಿಸುತ್ತಿರುವನು.ಮಾಲಿಕನ ದುರುಳತನಕೆ ಬೇಸತ್ತು ರೊಕ್ಕವಿಲ್ಲದೆ ನಿತ್ಯ ನರಳುತಿಹ ಕಾರ್ಮಿಕರೆಷ್ಟೋ…
ಹೀಗಾಗಿ ಅವರ ಜೀವನಮಟ್ಟ ತೀರ ಕುಸಿಯುತಿದೆ. ಅಸಹಾಯಕರಾಗಿ ಕೈಚಲ್ಲಿ ಕುಳಿತಿಹರು ಕಾರ್ಮಿಕರು.ಸಮಾಜದೊಳಗೆ ಕಾರ್ಮಿಕರು ,ಬಂಡವಾಳ ಶಾಹಿಗಳು, ವ್ಯಾಪಾರೋದ್ಯಮಗಳ ಮಧ್ಯೆ ಉತ್ತಮ ಬಾಂಧವ್ಯವಿದ್ದರೆ ಕಾರ್ಮಿಕರಿಗೆ ಯಾವುದೆ ರೀತಿಯ ತೊಂದರೆಯಾಗುವುದಿಲ್ಲ. ಆದರೆ ಹೊಂದಾಣಿಕೆಯೆ ಇಲ್ಲದಿದ್ದರೆ ಕಾರ್ಮಿಕರ ಮತ್ತು ಮಾಲಿಕರ ನಡುವೆ ಹೋರಾಟಗಳು ಚಳುವಳಿಗಳು ಆಗಾಗೆ ನಡೆಯುತಿರುತ್ತವೆ.
ಕತ್ತೆಗಳಂತೆ ಮುಂಜಾನೆಯಿಂದ ಮುಸ್ಸಂಜೆವರೆಗೂ ದುಡಿದರು ಅವರಿಗೆ ವಿಶ್ರಾಂತಿಯಿಲ್ಲ, ವಾಸಿಸಲು ಸೂರಿಲ್ಲ, ತಿನ್ನಲು ಕೂಳಿಲ್ಲ.ವಿದ್ಯೆಯಿಲ್ಲ ,ಬುದ್ಧಿಯಿದೆ ಆದರೂ ಶ್ರಮಿಕಜೀವಿಗಳಿವರು.ಕಾರ್ಮಿಕರ ದುಡಿತದಿಂದಲೆ ಮಹಡಿ ಮೇಲೆ ಮಹಡಿ ಕಟ್ಟಿ ಮೆರೆಯುತಿಹರು ಈ ಮಾಲಿಕರು. ಶ್ರಮದಾಯಕ ಕೆಲಸಗಳಲ್ಲಿ ಜೀವದ ಹಂಗು ತೊರೆದು ನಿತ್ಯ ದುಡಿಯುತ್ತಿದ್ದರೂ ಜೀವನದ ಭದ್ರತೆಯಿಲ್ಲ.ಜೀವಮಾನ ಪೂರ್ತಿ ಬರೀ ಅತಂತ್ರದಿಂದ ಬದುಕುವರು.ಹೀಗಾಗಿ ಎಲ್ಲಾ ಕಡೆಯಿಂದಲೂ ಶೋಷಣೆಗೆ ಒಳಗಾಗುತಿರುವ ನತದೃಷ್ಟರು.ಇದರೊಳಗೆ ಬಾಲ ಕಾರ್ಮಿಕರು , ಮಹಿಳಾ ಕಾರ್ಮಿಕರು ಲೈಂಗಿಕ ಶೋಷಣೆಗಳಿಗೆ ಒಳಗಾಗಿದ್ದಾರೆ.
ತಾಂತ್ರಿಕವಾಗಿ ,ವೈಜ್ಞಾನಿಕವಾಗಿ ಆಧುನಿಕತೆಯಲ್ಲಿ ದೇಶ ಮುಂದುವರಿಯಲು ಕಾರಣ ಈ ಕಾರ್ಮಿಕ ವಲಯ.ಈ ಕಾರ್ಮಿಕವಲಯವಿಲ್ಲದಿದ್ದರೆ ಯಾವುದೆ ವಲಯವೂ ಮುಂದೆ ಸಾಗಲಾಗುವುದಿಲ್ಲ.
ಎಲ್ಲದಕ್ಕೂ ಕಾರ್ಮಿಕರು ಅತ್ಯಾವಶ್ಯಕವಾಗಿದ್ದಾರೆ.
ಇಡೀ ಪ್ರಪಂಚದೊಳಗೆ ಬಡವರ ,ಶ್ರಮಿಕರ ಬೆವರಿಗೆ ಸಮಾನವಾದ ಯಾವುದೆ ಅಮೂಲ್ಯ ವಸ್ತುಗಳಿಲ್ಲವೆಂದೆ ಹೇಳಬಹುದು. ಇದ್ದರು ಅವೆಲ್ಲವೂ ಇವರ ಪರಿಶ್ರಮದ ಮುಂದೆ ಗೌಣವೂ. ಕರೋನಾ ಪರಿಣಾಮದಿಂದಾಗಿ
ಕಾರ್ಮಿಕರ ಬಾಳಿನ ಬವಣೆ ಹೇಳ ತೀರದು.ಅಬ್ಬಾ.! ಆಗ ನೋಡಿ ಇಡೀ ವಿಶ್ವದಲ್ಲೆ ಎಲ್ಲರಿಗೂ ಕಣ್ಣಿಗೆ ಕಾಣುತ್ತಿರುವ ಕಾರ್ಮಿಕರ ಅತಂತ್ರ ಹಾಗು ದಾರುಣ ಚಿತ್ರಾವಳಿಗಳು ಸಮೂಹ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದನ್ನು ನಾವು ನೀವೆಲ್ಲ ನೋಡುತಿದ್ದೆವು. ಅವರಿಗೆ ಕೂಲಿಯಿಲ್ಲ, ಮಾಡಲು ಕೆಲಸವಿಲ್ಲ,ತಿನ್ನಲು ಕೂಳಿಲ್ಲ ಇರಲು ಸರಿಯಾದ ಸೂರಿಲ್ಲ ಪಾಪ! ಅವರ ಬದುಕಿನ ಚಿತ್ರಣ ನಿಜಕ್ಕೂ ಘೋರವಾಗಿತ್ತು. ಈಗಲೂ ಅಷ್ಟೆ.! ಅವರಿಗೆ ನೆರವಿನ ಹಸ್ತವಿಲ್ಲ. ಅವರ ಕುಂದು ಕೊರತೆಗಳು ವಿಪರೀತವಾಗಿ ದಿನೆ ದಿನೇ ಹೆಚ್ಚಾಗುತ್ತಿವೆ.
ಕಾರ್ಮಿಕನೆಂದರೆ ತನ್ನ ಶ್ರಮದಿಂದಲೇ ದುಡಿದು ಬದುಕಬೇಕೆಂಬ ಇಚ್ಛೆಯುಳ್ಳವನು ಯಾರದೊ ಹಂಗಿನಲ್ಲಿ ಬದುಕುವ ಬದಲು ತಾನೆ ಸ್ವಂತ ದೂಡಿದು ಹೆಂಡತಿ ಮಕ್ಕಳನ್ನು ತನ್ನ ದುಡಿಮೆಯಿಂದ ನೋಡಿಕೊಳ್ಳುವ ಹಾಗೂ ತನ್ನ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವವ,ತಾನು ಹಸಿವಿನಿಂದ ಬಳಲಿದರೂ ತನ್ನವರ ಹಿತ ಬಯಸುವವನು.
ಹಾಗೆಯೇ ದೇಶದ ಗಡಿ ಕಾಯುತ ಹಗಲು ರಾತ್ರಿ ಪರಿಶ್ರಮಿಸುವವ ಹಾಗೂ ಹಲವಾರು ರೋಗಿಗಳ ಪ್ರಾಣ ಉಳಿಸಿದ ವೈದ್ಯರು ಕೂಡ ಕಾರ್ಮಿಕರೇ.! ಹಾಗೆಯೇ ದೇಶದ ಒಳಿತಿಗಾಗಿ ಶ್ರಮಿಸುತ್ತಿರುವವರು ,ಒಪ್ಪೊತ್ತಿನ ಊಟಕ್ಕೂ ಕಷ್ಟ ಜೀವನ ನಡೆಸುವ ಕೂಲಿ ಕೆಲಸದವರು ಹಾಗು ತುತ್ತು ಅನ್ನ ತಿನ್ನಲು ತನ್ನ ಶ್ರಮದಿಂದಲೆ ಬೆಳೆಯ ಬೆಳೆವ ರೈತನೂ ಸಹ ಕಾರ್ಮೀಕನೆ. ಈ ಕಾರ್ಮಿಕನ ಬಗ್ಗೆ ಎಷ್ಟೇ ಹೇಳಿದ್ರೂ ಪದಗಳೆ ಸಾಲಲ್ಲ ಕಾರ್ಮಿಕನೆಂದರೆ ಅಂತಹ ಗೌರವ. ಎಂತಹ ಕಷ್ಟದ ಸ್ಥಿತಿಯಲ್ಲೂ ಗೌರವಯುತವಾಗಿ ಕಾರ್ಯ ನಿರ್ವಹಿಸುವರು.ಇಂತಹ ಕಾರ್ಮಿಕರು ವರ್ಷದ ಇಪ್ತನ್ನಾಲ್ಕು ಘಂಟೆಯೂ ತಮ್ಮ ಶ್ರಮವನ್ನು ವ್ಯಯಿಸುವರು.
ಕಾರ್ಮಿಕರೆಂದರೆ ಮೇ ಒಂದನ್ನೆ ಮಾತ್ರ ನೆನೆಯುವರೇಕೊ.? ಈ ಮನುಷ್ಯರು. ಅಹೋರಾತ್ರಿ ದುಡಿಯುವಾಗ ಯಾರು ಬಂದು ಕೇಳರು ಅವರು ಗೋಳಾಡುವ ಆರ್ತನಾದವನು.ಅದೆಲ್ಲಿಂದ ಉಕ್ಕಿ ಬರುವುದೋ ಕರುಣಭಾವ .ಎಂದೆಂದೂ ಇಲ್ಲದ್ದು ಈ ಮೇ ಒಂದರಂದೆ ನೆನಪು ಬರುವುದೇಕೆ.?
ಎಲ್ಲಿಂದರಲ್ಲಿ ಕಾರ್ಮಿಕರ ಕಾಯಕವೆ ಮೇಲು ಹೀಗಿರುವಾಗ; ಅವರನ್ನು ಕೀಳಾಗಿ ನೋಡುವವರ ಪ್ರವೃತ್ತಿಯೇ ಕೀಳಾಗಿದೆ. ಅವರಿಲ್ಲದಿದ್ದರೆ
ದೇಶದ ಅಭ್ಯುದಯಕೆ ಕಂಟಕವೆಂಬುದನ್ನೆ ಮರೆತಿಹ ದುಡ್ಡಿರುವ ಧುರೀಣರ ಅಟ್ಟಹಾಸದ ಪಾರುಪತ್ಯ ದಿನೆ ದಿನೇ ಹೆಚ್ಚುತ್ತ ತಮ್ಮ ಸ್ವಾರ್ಥಕ್ಕಾಗಿ ದುಡಿಸಿಕೊಳ್ಳುತ್ತಿರುವರು.ಅವರ
“ನೋವಿನ ಕರೆ ,ಹಸಿವಿನ ಬರೆ”ಯ ಗೋಳಂತು ಕರುಣಾಜನಕವಾದುದ್ದು.ಇದು ಮಾಲಿಕರಿಗೆ ಕೇಳಿಸದೆ ಇರುವುದಂತು ವಿಪರ್ಯಾಸವಾಗಿದೆ….!
ಚಳಿಯಿರಲಿ ,ಮಳೆಯಿರಲಿ, ಬಿಸಿಲಿರಲಿ ಗಾಳಿಯಿರಲಿ,ಯಾವುದ್ದಕ್ಕೂ ಜಗ್ಗದೆ ,ಬಗ್ಗದೆ ದುಡಿದರು ಕೂಡ ನ್ಯಾಯಯುತ ಕೂಲಿಯಿಲ್ಲದೆ ಕುಗ್ಗುತ್ತಿರುವರು. ಆದರೂ ಕಾರ್ಮಿಕರು
ಎಲ್ಲದಕ್ಕೂ ಎದೆಯೊಡ್ಡಿ ಸೆಟೆದು ನಿಂತು ದುಡಿವರು.ದುಃಖ ದುಮ್ಮಾನಗಳನ್ನು ನುಂಗುತಲೆ ತಮ್ಮ ಕೆಲಸದಲಿ ನಿರತನಾಗಿ ಹಸಿವು ಮರೆತು ಮೆರೆಯುವರು.ಒಮ್ಮೊಮ್ಮೆ ತಮ್ಮ ನೋವಿನಲ್ಲೂ ಕೂಡ ತೃಪ್ತಿಕಂಡು ಬದುಕು ಸಾಗುತಿಹರು.! ಹೊಲ
ಗದ್ದೆಗಳನು ಹಸನು ಮಾಡುತ ಮೈ ಮುರಿದು ದುಡಿವ ಈ ಕಾರ್ಮಿಕರಿಗೆ ಯಾವುದೆ ಪ್ರೀತಿ ತೋರದೆ ಕೇವಲ ವ್ಯಾಪಾರ ಮನೋಭಾವದ ದೃಷ್ಟಿಯಿಂದಲೆ ಕಾಣುತ್ತಿರುವುದು ಒಂಥರ ಖೇದವೆನಿಸಿದೆ. ದಿನಗೂಲಿ ಲೆಕ್ಕದಲ್ಲಿ ನಡೆಯುವ ವ್ಯವಹಾರಗಳ ಕಡೆ ಕಾರ್ಮಿಕರಿಗೆ ಸಿಗಬೇಕಾದ ಕನಿಷ್ಠ ಸೌಲಭ್ಯಗಳು ಕೂಡ ಮರೀಚಿಕೆಯಾಗಿವೆ.
ನಿಸ್ವಾರ್ಥದಲ್ಲಿರುವ ಕಾರ್ಮಿಕರಿಗೆ ಯಾವುದೆ ರೀತಿಯ ಕಿಮ್ಮತ್ತಿಲ್ಲ.ಆದರೆ ಮಾಲಿಕರ ಪಾರುಪತ್ಯ ಮಾತ್ರ ಅಧಿಕವಾಗಿದೆ.ಕನಿಷ್ಠ ಕೂಲಿ, ದುಡಿಯುವ ಅವಧಿ, ವಾರಕ್ಕೊಂದು ರಜೆ ಮುಂತಾದ ನಿಯಮಗಳು ಇದ್ದರೂ ಕೂಡ ಅಸಂಘಟಿತ ವಲಯದಲ್ಲಿ ಅದು ಇನ್ನೂ ಪರಿಣಾಮಕಾರಿಯಾಗಿ ಜಾರಿಗೆ ಬಂದಿಲ್ಲ ಎನ್ನುವುದು ಕಾರ್ಮಿಕರ ಬೇಸರದ ನುಡಿಗಳಾಗಿವೆ….
ಕಾರ್ಮಿಕರ ಸಮಸ್ಯೆಗಳಂತೀ ಹೇಳ ತೀರದು…
*ಸರಿಯಾದ ಸೇವಾ ಭದ್ರತೆಯಿಲ್ಲ.
*ಕಾರ್ಖಾನೆಗಳಲ್ಲಿ ಕಂಪನಿಗಳಲ್ಲಿ ಎಷ್ಟು ದುಡಿದರು ಪರಿಶ್ರಮಕೆ ತಕ್ಕುದಾದ ಸಂಬಳವಿಲ್ಲ.ಎಂತ ಕಷ್ಟದ ಕೆಲಸ ಮಾಡಿದರು ರೊಕ್ಕವಂತು ಪಕ್ಕವಿಲ್ಲ..
*ಈ ಆಧುನಿಕತೆಯಲ್ಲಿ ಜೀವಂತವಾಗಿರುವ ಜೀತಪದ್ಧತಿಗಳು, ಗುತ್ತಿಗೆ ಪದ್ದತಿಗಳಿಂದ ನ್ಯಾಯ ಸಮ್ಮತವಾದ ಸೌಲಭ್ಯಗಳಿಲ್ಲದೆ ಬಳಲುತ್ತಿರುವರು.
*ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯಗಳು, ಹಿಂಸೆಗಳು ಗೊತ್ತಿದ್ದರು ಏನೂ ತಿಳಿಯದಂತೆ ದಿವ್ಯ ಮೌನವಹಿಸಿರುವ ಆಡಳಿತ ವರ್ಗದವರು ಒಂದು ಕಡೆಯಾದರೆ !ಈ ಮಾಲಿಕರು ಕಾರ್ಮಿಕರೊಂದಿಗೆ ತಾಳ್ಮೆಯಿಂದ ನಡೆದುಕೊಳ್ಳದೆ ಸರಿಯಾದ ಶ್ರಮಕೆ ತಕ್ಕಂತೆ ಸಂಬಳ ಕೊಡದೆ ಆಟವಾಡಿಸುತ್ತಿರುವ ಇವರ ದರ್ಬಾರುಗಳು ಮತ್ತೊಂದೆಡೆಯಾಗಿದೆ.
* “ತುತ್ತು ಕೂಳಿಗಾಗಿ ಕೂಲಿ” ಅದೆಂತಹ ಕಷ್ಟವಾದರು ತಮ್ಮ ಜೀವದೊಂದಿಗೆ ಜೂಜಾಟವಾಡಿಕೊಂಡು ಬದುಕುವ ಕಾರ್ಮಿಕರ ದಾರುಣತೆ ನಿಜಕ್ಕೂ ದುಃಖಕರವಾಗಿದೆ.
*ಯಾವುದೆ ರಕ್ಷಣ ಸಾಮಾಗ್ರಿಗಳನ್ನು ಒದಗಿಸಿರುವುದಿಲ್ಲ.ಆದರು ಮೂಕ ಪ್ರಾಣಿಗಳಂತೆ ಮುಂಜಾನೆಯಿಂದ ಸಂಜೆವರೆಗೂ ದುಡಿವರು.
*ಯಾವುದೆ ರೀತಿಯ ಆರ್ಥಿಕ ಭದ್ರತೆಗಳಿಲ್ಲದೆ, ರಜೆಯಿಲ್ಲದೆ ವರ್ಷ ಪೂರ್ತಿ ದುಡಿವ ದೀನರು ಈ ಕಾರ್ಮಿಕರು.
ಇಂತಹವರನ್ನು ವರ್ಷಕ್ಕೊಮ್ಮೆ ನೆನೆಯಲು ಆಚರಣೆಗಳ ಸೋಗು ಬೇರೆ.ಅವರಿಗೆ ಅವಶ್ಯಕವಾಗಿ ಬೇಕಾಗಿರುವುದನ್ನ ಒದಗಿಸದೆ ವರ್ಷಕ್ಕೊಮ್ಮೆ ರಜೆ ಕೊಟ್ಟು ಅವರ ಬಗ್ಗೆ ಗುಣಗಾನ ಮಾಡಿದರೆ ಬಂದೀತೆನು ಫಲ.? ಅವರ ಒಡನಾಟವಿದ್ದು ಅವರ ಬೇಕು ಬೇಡಗಳನ್ನು ಕೇಳುತ್ತ ಅವರಿಗೆ ಆಸರೆಯಾಗಿದ್ದು ಕರುಣೆ, ಅನುಕಂಪ ಜೊತೆಗೆ ಧೈರ್ಯ ,ಇವೆಲ್ಲದರ ಜೊತೆಗೆ ದುಡಿಮೆಗೆ ತಕ್ಕ ಪ್ರತಿಫಲ ನೀಡಿ ಅವರಿಗೆ ಜೀವನ ಭದ್ರತೆಯನ್ನು ಒದಗಿಸಿದರೆ ಅದೆ ನಾವು ಅವರಿಗೆ ನೀಡುವ ಇನಾಮು.ಆಚರಣೆಗಳೇಕೆ ಬೇಕು.? ಅವರಿಗೆ ಧೈರ್ಯ ತುಂಬುವ ಇನಾಮುಗಳಿದ್ದರೆ ಸಾಲದೆ.? ಒಮ್ಮೆ ಯೋಚಿಸಿ..
ನೋಡಿ ದೇಶ ಬಾಂಧವರೆ ಮಾಲಿಕರೆ ಆಡಳಿತ ವರ್ಗದವರೆ. ಕಾರ್ಮಿಕರಿಗೆ ಅನುಕಂಪದ ಅಗತ್ಯತೆಗಿಂತಲೂ; ಅವರು ನಮ್ಮ ನಿಮ್ಮೆಲ್ಲರಂತೆ ಮನುಷ್ಯರು. ಅದಕ್ಕೂ ಮೀರಿ ಭಾರಿ ಶ್ರಮಿಕರು. ಅವರ ಪರಿಶ್ರಮಕ್ಕೆ ಸರಿಯಾದ ಪ್ರತಿಫಲ ನೀಡಿ ಅವರಿಗೆ ಸಮಾಜದಲ್ಲಿ ಸಮಾನತೆ ಕಲ್ಪಸಿಕೊಡಿ. ಸಾಮಾಜಿಕ ಭದ್ರತೆಯನ್ನು ನೀಡಿ.
ಸಂಘರ್ಷಣೆಗಳಿಗಿಂತಲೂ ಸಮನ್ವಯತೆಗೆ ಹೆಚ್ಚು ಒಲವನ್ನು ಹರಿಸಿ.ಬನ್ನೀ ಎಲ್ಲರೂ ಜೊತೆಗೂಡೋಣ ಕಾರ್ಮಿಕರ ಬದುಕು ಬವಣೆಗಳನ್ನು ಅರಿಯೋಣ .ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸೂಚಿಸೋಣ.ಕೇವಲ ಮೇ ಒಂದರಂದೆ ನೆನೆಯದೆ ಅವರ ಅಭೂತ ಪೂರ್ವ ಕಾರ್ಯಗಳನ್ನು ಅನವರತ ಕೊಂಡಾಡುತ್ತ ಅವರಿಗೆ ಪ್ರೋತ್ಸಾಹ ನೀಡೋಣ..
ಅಭಿಜ್ಞಾ ಪಿ.ಎಮ್ ಗೌಡ