ಮೇ-ದಿನದ ವಿಶೇಷ

ಸುಜಾತಾ ರವೀಶ್

ಮನೆಕೆಲಸದವರ ಕಥೆ

: 19 ಮತ್ತು 20ನೆಯ ಶತಮಾನದಲ್ಲಿ ಮಹಿಳೆ ಸಂಪನ್ಮೂಲ ವ್ಯಕ್ತಿಯಾಗಿ ಹೊರಹೊಮ್ಮಿ ಹೊರಗಡೆ ದುಡಿದು ತನ್ನ ದುಡಿಮೆಗೆ ಸೂಕ್ತ ಪ್ರತಿಫಲ ಪಡೆಯುವಂತಹ ಉದ್ಯೋಗಸ್ಥೆ ಎನಿಸಿದಳು. ಆದರೆ ಈ ಹೋರಾಟದ ಹಾದಿ ಅಷ್ಟೇನೂ ಸುಗಮವಾಗಿರಲಿಲ್ಲ . ಅವಳಿಗೇ ವಿಶೇಷವಾದ ಕೆಲವೊಂದು ಶಾರೀರಿಕ ಅನಾನುಕೂಲತೆಗಳಿಗಾಗಲಿ ಅಥವಾ ಸಮಾನ ಅವಕಾಶಗಳಿಗಾಗಲೀ ಸೂಕ್ತ ಪರಿಹಾರಗಳು ಇರಲಿಲ್ಲ. ವೇತನವು ಅಷ್ಟೇ ಪುರುಷ ಕಾರ್ಮಿಕರಿಗಿಂತ ಕಡಿಮೆಯೇ ಇರುತ್ತಿತ್ತು .ಇಷ್ಟೆಲ್ಲ ಅಡೆತಡೆಗಳನ್ನು ಮೀರಿ ಇಂದಿನ ಶತಮಾನದಲ್ಲಿ ಸಮಾನತೆಯನ್ನು ಸಾಧಿಸಿದ್ದಾರೆ ಎಂದರೆ ಅದು ಒಂದು ಹೋರಾಟದ ವಿಜಯ. ಆದರೆ ಅದು ಪರಿಪೂರ್ಣವಾಗಿದೆಯೇ? ಎಲ್ಲರಿಗೂ ಸಿಕ್ಕಿದೆಯೇ ಎಂಬ ಪ್ರಶ್ನೆ ಕೇಳಿಕೊಂಡಾಗ ಮಾತ್ರ ಉತ್ತರ ನಕಾರಾತ್ಮಕವೇ?

ದೊಡ್ಡ ದೊಡ್ಡ ಕೈಗಾರಿಕಾ ಕ್ಷೇತ್ರ ಅಥವಾ ಸರಕಾರಿ ಉದ್ಯೋಗ, ಬ್ಯಾಂಕ್ ವಿಮಾಕ್ಷೇತ್ರಗಳಲ್ಲಿ ದುಡಿಯುವವರು ಸಂಘಟಿತ ವರ್ಗದ ಕಾರ್ಮಿಕರು. ಅಲ್ಲಿ ಬೇರೆಯವರ ಹಾಗೆ ಸಮಾನ ಅವಕಾಶ ವೇತನ ಸೌಲಭ್ಯಗಳು ಮಹಿಳೆಯರಿಗೂ ದೊರೆಯುತ್ತವೆ. ಆದರೆ ಸಮಸ್ಯೆ ಇರುವುದೇ ಅಸಂಘಟಿತ ವಲಯದ ಕಾರ್ಮಿಕರಲ್ಲಿ ಅದಕ್ಕೆ ಅದರಲ್ಲೂ ಮಹಿಳಾ ಕಾರ್ಮಿಕರಿಗೆ ಮಾತ್ರ.
ಯಾವುದೇ ವರ್ಗ ಅಥವಾ ಕ್ಷೇತ್ರದ ಕಾರ್ಮಿಕರು ಒಂದು ಸಂಘದ ಅಡಿ ಸೇರಿ ಸಂಘಟಿತರಾಗದೆ ತಮ್ಮ ಹಕ್ಕು ಬಾಧ್ಯತೆಗಳಿಗೆ ವೈಯುಕ್ತಿಕವಾಗಿ ಜವಾಬ್ದಾರರಾದಾಗ ಅಂಥವರನ್ನು ಅಸಂಘಟಿತ ಕಾರ್ಮಿಕರು ಎಂದು ಗುರುತಿಸಲಾಗುತ್ತದೆ. ಈ ಅಸಂಘಟಿತ ವಲಯವು ಸಣ್ಣ ಮತ್ತು ಚದುರಿದ ಘಟಕಗಳಿಂದ ನಿರೂಪಿಸಲ್ಪಟ್ಟಿದೆ ಮತ್ತು ಹೆಚ್ಚಾಗಿ ಸರ್ಕಾರದ ನಿಯಂತ್ರಣದಿಂದ ಹೊರಗಿರುತ್ತದೆ ಇಲ್ಲಿನ ಅನಾನುಕೂಲಗಳೆಂದರೆ ಅಸುರಕ್ಷಿತ ಉದ್ಯೋಗ, ನಿರ್ದಿಷ್ಟವಲ್ಲದ ವೇತನಗಳು ಹಾಗೂ ಭವಿಷ್ಯ ನಿಧಿ ಆರೋಗ್ಯ ಸೌಲಭ್ಯಗಳು ಇಲ್ಲದಿರುವುದು ನಿರ್ದಿಷ್ಟ ರಜೆಯ ಸೌಲಭ್ಯಗಳು ಇಲ್ಲದಿರುವುದು,, ಉದ್ಯೋಗದ ವೇಳೆ ಅಪಘಾತವಾದರೂ ಸುರಕ್ಷೆ ಅಥವಾ ಪರಿಹಾರ ಸಿಗದಿರುವುದು, ಇತ್ಯಾದಿ. ಈ ರೀತಿ ಆದಾಗ ಕಾರ್ಮಿಕರು ಉದ್ಯೋಗದಾತರಿಂದ ಹೆಚ್ಚಿನ ದೌರ್ಜನ್ಯ ಹಾಗೂ ಶೋಷಣೆಗೆ ಒಳಗಾಗುತ್ತಾರೆ ಹಾಗೂ ಅದನ್ನು ಎದುರಾಡಲು ದನಿ ಇಲ್ಲದಂತಾಗುತ್ತಾರೆ.
೨೦೧೭_೧೮ ನೇ ಸಾಲಿನಲ್ಲಿ ರಾಷ್ಟ್ರೀಯ ಅಂಕಿ ಅಂಶಗಳ ಕಚೇರಿಯ ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ ಅತ್ಯಂತ ಸುಮಾರು 38 ಕೋಟಿ ಕಾರ್ಮಿಕರು ಅಸಂಘಟಿತ ವರ್ಗಗಳಲ್ಲಿ ತೊಡಗಿಕೊಂಡಿರುತ್ತಾರೆ. ಒಟ್ಟು ೩೭೯ ಬಗೆಯ ಉದ್ಯೋಗದಲ್ಲಿ ತೊಡಗಿದವರನ್ನು
ಅಸಂಘಟಿತ ಕಾರ್ಮಿಕರೆಂದು ವರ್ಗೀಕರಣ ಮಾಡಲಾಗಿದೆ.

ಮೇಲ್ಮಧ್ಯಮ ಮತ್ತು ಸಿರಿವಂತ ಕುಟುಂಬಗಳಲ್ಲಿ ಮನೆಕೆಲಸದವರಿಲ್ಲದೆ ಮನೆವಾರ್ತೆ ಸಾಗಲು ಸಾದ್ಯವೇ ಇಲ್ಲ. ಅಡಿಗೆ ಮಾಡಲು, ಸುತ್ತು ಕೆಲಸಗಳಲ್ಲಿ ನೆರವಾಗಲು,ಪಾತ್ರೆ ತೊಳೆಯಲು,ಬಟ್ಟೆ ಒಗೆಯಲು, ಕಸ ಗುಡಿಸಿ ಮನೆ ಒರೆಸಲು,
ಮಕ್ಕಳನ್ನು ವೃದ್ಧರನ್ನು ನೋಡಿಕೊಳ್ಳಲು ಹೀಗೆ ಅನೇಕ ಕೆಲಸಗಳಿಗೆ ಸಹಾಯಕರಾಗಿ ನೇಮಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಪೂರಾ ದಿನ ಇವರಲ್ಲೇ ಉಳಿಯುವಂತದ್ದು ಕೆಲವೊಮ್ಮೆ ಕೆಲವು ಗಂಟೆಗಳ ಕಾಲ ಬಂದು ಕೆಲಸ ಮುಗಿಸುವುದು. ವೇತನಕ್ಕೆ ಯಾವೊಂದೂ ನಿರ್ದಿಷ್ಟ ಮಾನದಂಡವಿಲ್ಲ. ಆಯಾ ಸಮಯದಲ್ಲಿ ಎರಡೂ ಕಡೆಯವರ ಅನಿವಾರ್ಯತೆ ಮತ್ತು ಚೌಕಾಶಿ ಮಾಡುವ ದಕ್ಷತೆಯ ಮೇಲೆ ಅವಲಂಬಿಸಿರುತ್ತದೆ. ವಾರದ ರಜೆ ಪ್ರಸಕ್ತಿಯೇ ಇಲ್ಲ. ಬಾರದ ದಿನಗಳಿಗೆ ಸಂಬಳ ಮುರಿದುಕೊಳ್ಳುವುದು ಸಾಮಾನ್ಯ. ಸಂಬಳ ಏರಿಕೆ ಸಹ ಸಂಧರ್ಭಾನುಸಾರ. ಉದ್ಯೋಗ ಖಾತ್ರಿ ಪ್ರಶ್ನೆಯೇ ಇಲ್ಲ. ಇಷ್ಟೆಲ್ಲಾ ಅನಾನುಕೂಲತೆಗಳ ನಡುವೆಯೂ ದುಡಿಯ ಬೇಕಾದ ತನ್ನ ಹಾಗೂ ನಂಬಿದವರ ಹೊಟ್ಟೆಪಾಡಿನ ಅನಿವಾರ್ಯತೆ ಹೆಣ್ಣುಮಕ್ಕಳಿಗಿರುತ್ತೆ. ಮರ್ಯಾದೆಯಿಂದ ಜೀವನ ನಡೆಸುವ ಇಚ್ಛೆಯಿಂದ ದುಡಿಯ ಹೊರಟ ಇವರಿಗೆ ವಿವಿಧ ರೀತಿಯ ಶೋಷಣೆಗಳ ಸರಮಾಲೆ ಕಾದಿರುತ್ತದೆ. ಇದೇ ಪಾಡು ಗಾರ್ಮೆಂಟ್ಸನಲ್ಲಿ ಕೆಲಸ ಮಾಡುವ ಹೆಂಗೆಳೆಯರದಾದರೂ ಪರಿಸ್ಥಿತಿ ಇವರಿಗಿಂತ ಸ್ವಲ್ಪ ಉತ್ತಮ ಅಷ್ಟೇ.

ಇದಕ್ಕೆಲ್ಲಾ ಉತ್ತಮ ಪರಿಹಾರವೆಂದರೆ ಮನೆ ಕೆಲಸ ಮಾಡುವವರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವುದು. ಆಗ ಕೆಲಸ ಮಾಡುವ ಸ್ಥಳದಲ್ಲಿ ದೊರಕುವ ದೌರ್ಜನ್ಯ ಮತ್ತು ಅನ್ಯಾಯಕ್ಕೆ ನ್ಯಾಯ ಕೇಳಬಹುದು.ಇವರನ್ನೂ ಕಾರ್ಮಿಕರೆಂದು ಪರಿಗಣಿಸಿ ಸಾಮಾಜಿಕ ಭದ್ರತೆ ಹಾಗೂ ಇನ್ನಿತರ ಸೌಲಭ್ಯಗಳನ್ನು ನೀಡಲು ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಶಿಫಾರಸ್ಸು ಮಾಡಿದ್ದು ಭಾರತ ಸೇರಿದಂತೆ ಒಟ್ಟು ೪೩ ರಾಷ್ಟ್ರಗಳು ಇದನ್ನು ಒಪ್ಪಿವೆ.

ಉದ್ಯೋಗದಾತರೂ ಹೆಚ್ಚಾಗಿ ಮಹಿಳೆಯರೇ ಆಗಿರುವುದೂ ವಿಶೇಷ. ಮನೆಕೆಲಸದವರನ್ನು ಸೌಜನ್ಯ ಪರಾನುಭೂತಿಯಿಂದ ನಡೆಸಿಕೊಂಡರೆ ಅವರಿಗೂ ಹೆಚ್ಚಿನ ಗುಣಮಟ್ಟದ ಸೇವೆ ನೀಡಲು ಅನುವು ಮಾಡಿಕೊಟ್ಟಂತಾಗುತ್ತದೆ ಅಲ್ಲವೇ?


ಸುಜಾತಾ ರವೀಶ್


Leave a Reply

Back To Top