ಭಯವೇ ಅಪಾಯಕಾರಿ

ಕೊರೋನಾ ಮತ್ತು ಭಯ

All India Congress Committee calls for Bharat Bandh on Monday ...

ಗಣೇಶಭಟ್,ಶಿರಸಿ

ಕೊರೊನಾಕ್ಕಿಂತ ಅದರ ಕುರಿತಾದ ಭಯವೇ ಅಪಾಯಕಾರಿ


ಕೊರೊನಾ ವೈರಸ್ ಸೋಂಕಿನ ಅಪಾಯದಿಂದ ಪಾರಾಗುವ ಅತ್ಯುತ್ತಮ ವಿಧಾನವೆಂದರೆ ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿ ಬೆಳೆಸುವುದು. ಅನಾರೋಗ್ಯದಿಂದ ಬಳಲುತ್ತಿರುವವರು ಈ ಸೋಂಕಿಗೆ ಬಹುಬೇಗ ಬಲಿಯಾಗುತ್ತಾರೆ. ಕೊರೊನಾದಿಂದಾಗಿ ಮೃತಪಟ್ಟವರಲ್ಲಿ ಹೆಚ್ಚಿನವರಿಗೆ ಒಂದಿಲ್ಲೊಂದು ವಿಧದ ಅನಾರೋಗ್ಯ ಇದ್ದುದು ಕಂಡು ಬಂದಿದೆ ಹಾಗೂ ಅವರಲ್ಲಿ ಹೆಚ್ಚಿನವರು ಅರವತ್ತಕ್ಕಿಂತ ಹೆಚ್ಚಿನ ವಯಸ್ಸಾದವರು.
ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲು ಪೌಷ್ಠಿಕ ಆಹಾರ, ವ್ಯಾಯಾಮ, ಕಾಲಕಾಲಕ್ಕೆ ನೀರು ಸೇವನೆ, ಒಳ್ಳೆಯ ನಿದ್ದೆ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಒತ್ತಡರಹಿತವಾಗಿರಬೇಕು. ಸಸ್ಯಾಹಾರಿಗಳಲ್ಲಿ ಮಾಂಸಾಹಾರಿಗಳಿಗಿಂತ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆಂದು ವೈದ್ಯ ವಿಜ್ಞಾನ ಹೇಳುತ್ತದೆ.
ಭಯ, ಆತಂಕಗಳಿಂದ ಬಳಲುತ್ತಿರುವ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ವಿವಿಧ ಗ್ರಂಥಿರಸ ( ಹಾರ್ಮೋನ್) ಗಳ ಸ್ರವಿಸುವಿಕೆಯ ಪ್ರಮಾಣ ಹೆಚ್ಚುತ್ತದೆ. ಇದರಿಂದಾಗಿ ಜೀರ್ಣಾಂಗ ವ್ಯವಸ್ಥೆಯ ಮೇಲೂ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ. ಉದ್ದಿಗ್ನತೆಯಿಂದಾಗಿ ಉಸಿರಾಟದ ವೇಗ ಹೆಚ್ಚಿ ಆಳವಾದ ಶ್ವಾಸೋಚ್ಛಾಸ ಕ್ರಿಯೆ ನಡೆಯದೇ ಪುಪ್ಪುಸದಲ್ಲಿ ತುಂಬಿಕೊಂಡ ಮಲಿನ ವಾಯು ಹೊರಹೋಗದೇ ಅಲ್ಲಿಯೇ ಉಳಿದು ವಿವಿಧ ಸೋಂಕುಗಳಿಗೆ ಅವಕಾಶ ಮಾಡಿಕೊಡುತ್ತದೆ.


ಆಹಾರಕ್ಕಾಗಿ ಕೊಲ್ಲಲ್ಪಡುವಾಗ ಪ್ರಾಣಿಗೆ ಆಗುವ ಆತಂಕ, ಭಯಗಳಿಂದ ಅದರ ದೇಹದಲ್ಲಾಗುವ ರಾಸಾಯನಿಕ ಬದಲಾವಣೆಯೇ ಮಾಂಸಾಹಾರಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವ ಪ್ರಮುಖ ಕಾರಣಗಳಲ್ಲಿ ಒಂದು. ಅದರ ದೇಹದಲ್ಲಿ ಕೂಡಾ ವಿವಿಧ ಗ್ರಂಥಿರಸ ಹಾಗೂ ರಾಸಾಯನಿಕಗಳ ಸ್ರವಿಸುವಿಕೆಯಾಗಿ ಅವು ರಕ್ತ ಮತ್ತು ಮಾಂಸದಲ್ಲಿ ಸೇರಿಕೊಳ್ಳುತ್ತವೆ. ಮನುಷ್ಯ ಇಂತಹ ಮಾಂಸವನ್ನು ತಿಂದಾಗ ಈ ರಾಸಾಯನಿಕಗಳು ಅವನ ದೇಹವನ್ನು ಸೇರಿ ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತವೆ. ಹಲ್ಲಿನ ರಚನೆ, ಬಾಯಿಯ ಲಾಲಾರಸ, ಜಠರದಲ್ಲಿ ಸ್ರವಿಸುವ ಆಮ್ಲ, ಕರುಳಿನ ಉದ್ದ ಮುಂತಾಗಿ ಮಾನವನ ಇಡೀ ಜೀರ್ಣಾಂಗ ವ್ಯವಸ್ಥೆ ಸಸ್ಯಾಹಾರ ಅದರಲ್ಲೂ ವಿಶೇಷವಾಗಿ ಹಣ್ಣು- ಹಂಪಲು – ತರಕಾರಿಗಳ ಸೇವನೆ ಮತ್ತು ಜೀರ್ಣಿಸಿಕೊಳ್ಳುವ ಸಲುವಾಗಿ ರೂಪುಗೊಂಡಿವೆ. ಇವ್ಯಾವವೂ ಮಾಂಸಾಹಾರವನ್ನು ಜೀರ್ಣಿಸಿಕೊಳ್ಳಲು ಪೂರಕವಾಗಿಲ್ಲ. ಆದರೂ ನಾಲಿಗೆಯ ಚಪಲದಿಂದ ಮಾಂಸಾಹಾರ ಸೇವಿಸುವ ಮಾನವರ ನಿಸರ್ಗ ವಿರೋಧಿ ಕ್ರಮವು ರೋಗನಿರೋಧಕ ಶಕ್ತಿ ಕುಗ್ಗಲು ಇನ್ನೊಂದು ಪ್ರಮುಖ ಕಾರಣ.


ಜನರ ನಡುವೆ ಅಂತರವಿದ್ದಾಗ ಕೊರೊನಾ ವೈರಸ್ ಹರಡುವಿಕೆಗೆ ತಡೆ ಉಂಟಾಗುತ್ತದೆಂಬ ಕಾರಣದಿಂದಾಗಿ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಇದೊಂದು ಕ್ರಮದಿಂದಲೇ ಕೊರೊನಾ ಪ್ರಸರಣ ತಡೆಗಟ್ಟಲು ಸಾಧ್ಯವಾಗದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಹೇಳುತ್ತಿದ್ದಾರೆ. ಆದರೂ ಪಾಶ್ವಾತ್ಯ ದೇಶಗಳಲ್ಲಿ ಈ ರೀತಿ ಮಾಡುತ್ತಿದ್ದಾರೆಂಬ ಕಾರಣಕ್ಕಾಗಿ ಭಾರತದಲ್ಲೂ ಸಾಮಾಜಿಕ ಅಂತರ ಕಾಪಾಡುವದಕ್ಕಾಗಿ ಸಾರ್ವಜನಿಕ ಬದುಕನ್ನು ಸ್ಥಬ್ಧಗೊಳಿಸುವ ಯತ್ನ ನಡೆದಿದೆ.


ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ವಿಮಾನ, ರೈಲು, ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಂಗಡಿ, ಮುಂಗಟ್ಟುಗಳನ್ನು ಮುಚ್ಚಲಾಗಿದೆ. ವ್ಯಾಪಾರ- ವಹಿವಾಟು , ಉದ್ಯಮ ಕಾರ್ಖಾನೆಗಳನ್ನು ಮುಚ್ಚಿಸಲಾಗಿದೆ. ಸಮೂಹ ಮತ್ತು ದೃಶ್ಯ ಮಾಧ್ಯಮಗಳು ಸುದ್ದಿ ಬಿತ್ತರಿಸುತ್ತಿರುವ ವಿಧಾನಗಳಿಂದಾಗಿ ಸಾಮಾಜಿಕ ಅಂತರವನ್ನು ಕಾದುಕೊಳ್ಳಲು ಕೈಗೊಂಡ ಕ್ರಮಗಳಿಂದ ಸಿಗಬಹುದಾದ ಅಲ್ಪಸ್ವಲ್ಪ ಪ್ರಯೋಜನವೂ ನಿರರ್ಥಕವಾಗುತ್ತಿದೆ. ಯಾಕೆಂದರೆ ಕನ್ನಡದ ಸುದ್ದಿ ವಾಹಿನಿಗಳು ಜನರಲ್ಲಿ ಭಯಭೀತಿ ಬಿತ್ತುವ ಕಾರ್ಯ ಮಾಡುತ್ತಿವೆ.


ಇಂತಹ ಸಂದರ್ಭಗಳಲ್ಲಿ ಧನಾತ್ಮಕವಾದ ಸುದ್ದಿಗಳಿಗೆ ಮಹತ್ವ ನೀಡುವ ಬದಲು ನಕಾರಾತ್ಮಕ ಸುದ್ದಿಗಳಿಗೇ ಮಹತ್ವ ನೀಡಲಾಗುತ್ತಿದೆ. ಲಾಕ್‍ಡೌನ್ ಮಾಡುವುದರಿಂದಲೇ ಕೊರೊನಾ ವೈರಸ್‍ನ್ನು ನಿಯಂತ್ರಿಸಲು ಸಾಧ್ಯವೆಂಬುದಾಗಿ ಕನ್ನಡ ಸುದ್ದಿ ವಾಹಿನಿಗಳು ಎರಡು ದಿನಗಳಿಡೀ ಪ್ರಚಾರ ಮಾಡಿದವು. ಸರ್ಕಾರಕ್ಕೆ ಸಲಹೆ ನೀಡಲು ಪೈಪೋಟಿ ನಡೆಸಿ, ಬೆಳಿಗ್ಗೆಯಿಂದ ಸಂಜೆಯವರೆಗೂ ಕೂಗಾಡಿ ಮುಖ್ಯಮಂತ್ರಿಯವರು ಅನಿವಾರ್ಯವಾಗಿ ಲಾಕ್‍ಡೌನ್ ಘೋಷಿಸುವಂತೆ ಮಾಡಲಾಗಿದೆ.


ಈ ಸುದ್ದಿವಾಹಿನಿಗಳು ನಡೆಸಿದ ಚರ್ಚೆಗಳಲ್ಲಿ ನಿರ್ವಹಣಾಕಾರರು ತಮ್ಮ ಅಭಿಪ್ರಾಯಗಳನ್ನು ಹೇರುತ್ತಿದ್ದ ರೀತಿ, ಅವರು ಕೂಗಾಡುತ್ತಿದ್ದ ಪರಿ ಅಸಹ್ಯ ಹುಟ್ಟಿಸುತ್ತಿದ್ದವು. ಇವರೆಲ್ಲರೂ ಹಿಂದಿ ವಾಹಿನಿಯ ನಿರ್ವಹಣಾಕಾರರೊಬ್ಬರಿಂದ ಪ್ರೇರಿತವಾಗಿದ್ದುದು ಸ್ಪಷ್ಟವಾಗಿ ಗೋಚÀರಿಸುತ್ತಿತ್ತು. ತಮ್ಮ ಟಿಆರ್‍ಪಿ ಹೆಚ್ಚಿಸಿಕೊಳ್ಳುವ ಭರದಲ್ಲಿ ಹಲವು ಸಕಾರಾತ್ಮಕ ಸಂಗತಿಗಳನ್ನು ಇವರು ಉಪೇಕ್ಷಿಸಿದ್ದು ಎದ್ದು ಕಾಣುತ್ತಿತ್ತು.


ಕನ್ನಡ ಸುದ್ದಿವಾಹಿನಿಗಳ ಅಧ್ವಾನದಿಂದಾಗಿ ತಾವು ಮನೆಯಲ್ಲೇ ಕೂಡಿ ಹಾಕಿಕೊಂಡಿರಬೇಕಾಗುತ್ತದೆ. ಅಗತ್ಯದ ವಸ್ತುಗಳು ಸಿಗುವಂತೆ ಇಲ್ಲವೇನೋ ಎಂಬ ಆತಂಕ ಜನರಲ್ಲಿ ಸೃಷ್ಟಿಯಾಗಿ 23 ರ ಸಾಯಂಕಾಲ ದಿನಸಿ, ತರಕಾರಿ ಮುಂತಾದ ಅಗತ್ಯ ವಸ್ತುಗಳ ಖರೀದಿಗಾಗಿ ಜನರು ಅಂಗಡಿಗಳೆದುರು ಮುಗಿ ಬೀಳುವ ಪರಿಸ್ಥಿತಿ ಕರ್ನಾಟಕದ ತುಂಬ ಕಂಡು ಬಂದಿತು. ಅನಗತ್ಯವಾಗಿ ಸೃಷ್ಟಿಯಾದ, ತಪ್ಪಿಸಬಹುದಾಗಿದ್ದ ಇಂತಹ ಜನದಟ್ಟಣೆಯಿಂದಾಗಿ ಸಾಮಾಜಿಕ ಅಂತರ ಕಾದುಕೊಳ್ಳುವ ಉದ್ದೇಶವೇ ವಿಫಲಗೊಂಡಿತ್ತು.


ಕೊರೊನಾ ಸೋಂಕಿತರೆಲ್ಲರೂ ಸತ್ತೇ ಹೋಗುತ್ತಾರೆಂಬ ರೀತಿಯಲ್ಲಿ ಕನ್ನಡ ಸುದ್ದಿವಾಹಿನಿಗಳು ಪ್ರಸ್ತುತಪಡಿಸುತ್ತಿದ್ದಾರೆ. ಅತಿ ಹೆಚ್ಚು ಸಾವು ಸಂಭವಿಸಿದ ಇಟಲಿ ಮತ್ತು ಚೀನಾಗಳಲ್ಲಿ ಕೂಡಾ ಮರಣ ಹೊಂದಿದ ಸೋಂಕಿತರ ಪ್ರಮಾಣ ಶೇಕಡಾ 4 ನ್ನು ಮೀರಿಲ್ಲ. ಭಾರತದಲ್ಲಿ ಕೊರೊನಾದಿಂದ ಸಂಭವಿಸಿದ ಮರಣಗಳ ಸಂಖ್ಯೆಯನ್ನು ಬಿತ್ತರಿಸುವುದರ ಜೊತೆಗೇ ಗುಣಮುಖರಾದವರ ಸಂಖ್ಯೆ ಎಷ್ಟೊ ಪಟ್ಟು ಹೆಚ್ಚಿಗೆ ಇದ್ದರೂ ಕೂಡಾ ಅದನ್ನು ಹೇಳುವುದಿಲ್ಲ. ಮರಣ ಹೊಂದಿದವರಿಗೆ ತೀವ್ರ ಸ್ವರೂಪದ ಬೇರೆ ಯಾವುದಾದರೂ ಕಾಯಿಲೆ ಇತ್ತೇ ಎಂಬ ಕುರಿತಾಗಿ ಕೂಡಾ ಇವರು ಮಾಹಿತಿ ನೀಡದೇ ಜನರಲ್ಲಿ ಅನಗತ್ಯ ಭಯ ಹುಟ್ಟಿಸುತ್ತಿದ್ದಾರೆ. ವೈರಸ್ ಸೋಂಕಿತ ದೇಶಗಳ ಮಾಹಿತಿ ನೀಡುವಾಗ ಈ ಪೀಡೆ ನಿಯಂತ್ರಿಸಿರುವ ರಷಿಯಾ, ಉತ್ತರಕೋರಿಯಾ ಮುಂತಾದ ದೇಶಗಳ ಸಕಾರಾತ್ಮಕ ವಿಷಯಗಳನ್ನು ಉಲ್ಲೇಖಿಸುವ ಬದ್ಧತೆ ಈ ವಾಹಿನಿಗಳಿಗೆ ಇಲ್ಲವಾಗಿದೆ.


ಇಡೀ ರಾಜ್ಯದ ಲಾಕ್‍ಡೌನ್‍ಗಾಗಿ ಪ್ರತಿಪಾದಿಸುವ ಟಿವಿ ವಾಹಿನಿಗಳಿಗೆ, ದಿನನಿತ್ಯ ದುಡಿದು ಉಣ್ಣ ಬೇಕಾದವರ ಸಂಕಷ್ಟದ ಕುರಿತು ಯೋಚಿಸಲೂ ಪುರುಷೊತ್ತಿಲ್ಲ. ಬೆಳೆದ ತರಕಾರಿ, ಹಣ್ಣು- ಹಂಪಲು, ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗದೇ ಹಾನಿ ಅನುಭವಿಸುತ್ತಿರುವ ರೈತರ ಭವಣೆ ಕಾಣುವುದಿಲ್ಲ. ಅನಿವಾರ್ಯವಾಗಿ ವ್ಯವಹಾರ– ವಹಿವಾಟುಗಳನ್ನು ಬಂದ್ ಮಾಡುವ ಚಿಕ್ಕಪುಟ್ಟ ವ್ಯಾಪಾರಿಗಳು, ರಸ್ತೆ ಬದಿ ವ್ಯಾಪಾರಿಗಳು, ಚಿಲ್ಲರೆ ಮಾರುಕಟ್ಟೆಯ ವರ್ತಕರು, ಸಣ್ಣ ಉದ್ದಿಮೆಗಳ ಮಾಲೀಕರ ಸಂಕಷ್ಟ ಇವರಿಗೆ ಅರ್ಥವಾಗುವುದಿಲ್ಲ. ಪ್ರತಿ ತಿಂಗಳು ಸಂಬಳ ಪಡೆಯುವ ಅಥವಾ ನಿಶ್ಚಿತ ಆದಾಯವಿರುವ ವರ್ಗದವರನ್ನು ಮನೆಯಲ್ಲೇ ಕೂಡಿ ಹಾಕುವುದರಿಂದ ಅವರಿಗೆ ಆರ್ಥಿಕ ತಲೆಬಿಸಿ ಇರದು.. ಈ ಸೌಲಭ್ಯ ಭಾರತದ 80% ಗೂ ಹೆಚ್ಚಿನ ಜನರಿಗೆ ಇಲ್ಲ.


ಆದರೆ ಸಾಲದ ಕಂತು ಕಟ್ಟಲೇಬೇಕಾದ ರಿಕ್ಷಾ, ಟ್ಯಾಕ್ಸಿ ಮಾಲಿಕರಿಗೆ ದುಡಿಮೆಯ ಅವಕಾಶವನ್ನೇ ರದ್ದುಪಡಿಸಿದರೆ ಅವರ ಸಂಕಷ್ಟಕ್ಕೆ ಯಾವ ರೀತಿಯ ಪರಿಹಾರ ಸಿಗುವಂತೆ ಮಾಡಬಹುದೆಂಬ ಕುರಿತು ಈ ಸುದ್ದಿವಾಹಿನಿಗಳು ಚಿಂತನೆ ನಡೆಸುವುದಿಲ್ಲ. ಮಾರ್ಚ್ 31 ರೊಳಗೆ ಸಾಲದ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುತ್ತೇವೆಂಬ ಸರ್ಕಾರದ ಘೋಷಣೆಯ ಲಾಭ ಕೃಷಿಕರಿಗೆ ದೊರಕಬೇಕೆಂದರೆ, ಅವರು ಬೆಳೆದ ಮಹಸೂಲು ಮಾರಾಟವಾಗಬೇಕು. ಇಡೀ ದೇಶದಲ್ಲಿ ಲಾಕ್‍ಡೌನ್ ಇರುವ ಇಂದಿನ ಪರಿಸ್ಥಿತಿಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕೃತ್ರಿಮವಾಗಿ ಇಳಿಕೆ ಕಾಣುತ್ತಿರುವಾಗ ಸಾಲ ಮರುಪಾವತಿಯ ದಿನಾಂಕವನ್ನು ಮುಂದೂಡುವುದು ಅನಿವಾರ್ಯ. ಈ ಕುರಿತಾಗಿ ಈ ಸುದ್ದಿವಾಹಿನಿಗಳು ಅಭಿಯಾನವನ್ನೇಕೆ ನಡೆಸುತ್ತಿಲ್ಲ ?


ಜನತಾ ಕಫ್ರ್ಯೂ ಹೆಸರಿನಲ್ಲಿ ನಡೆದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ರಾಜ್ಯಗಳು ಅಧಿಕಾರದ ದುರ್ಬಳಕೆ ಮಾಡಿದ್ದನ್ನು ಎತ್ತಿ ಹೇಳುವ ಬದಲಿಗೆ ಪೋಲೀಸರ ಹೇಳಿಕೆಗೆ ಮಹತ್ವ ನೀಡಲಾಯಿತು. ಸ್ವಯಂ ಪ್ರೇರಿತರಾಗಿ ಬಂದ್‍ನಲ್ಲಿ ಪಾಲ್ಗೊಳ್ಳಿ, ಇಲ್ಲವಾದಲ್ಲಿ ನಿಮ್ಮ ಮೇಲೆ ಕೇಸ್ ಹಾಕಲಾಗುವುದು ಎಂಬ ರಾಜ್ಯ ಪೋಲೀಸ್ ಮುಖ್ಯಸ್ಥರು, ಜಿಲ್ಲಾಪೋಲೀಸ್ ವರಿಷ್ಠಾಧಿಕಾರಿಗಳ ಹೇಳಿಕೆಗಳೇ ಮಹತ್ವ ಪಡೆದವು. ಇದೇ ರೀತಿಯ ಹೇಳಿಕೆಗಳನ್ನು ಕೆಲವೆಡೆ ಪೋಲೀಸರು ಮೈಕ್ ಮೂಲಕ ಪ್ರಚಾರ ನಡೆಸಿದರು. ಒಂದೆಡೆ ಸುದ್ದಿ ವಾಹಿನಿಗಳಿಂದ ಬಿತ್ತರವಾಗುವ, ಭಯ ಹುಟ್ಟಿಸುವ ಅರ್ಧಂಬದ್ಧ ಮಾಹಿತಿಗಳು, ಇನ್ನೊಂದೆಡೆ ಅಧಿಕಾರಿಗಳ ದಬಾವಣೆಯಿಂದಾಗಿ ಕಳೆದ ರವಿವಾರದ ಜನತಾ ಕಫ್ರ್ಯೂ ಯಶಸ್ವಿಯಾದಂತೆ ಕಂಡೀತೇ ಹೊರತೂ ನೈಜವಾದ ಸ್ವಪ್ರೇರಣೆಯಿಂದಲ್ಲ.


ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿರುವ ವೈದ್ಯರು, ಪೋಲೀಸರು, ಮಾಧ್ಯಮದವರು, ಸೈನಿಕರು, ಸ್ವಯಂ ಸೇವಕರು, ಮುಂತಾದವರಿಗಾಗಿ ಕೃತಜ್ಞತೆ ಸಲ್ಲಿಸಲು ರವಿವಾರ ಸಂಜೆ 5 ಗಂಟೆಗೆ ನಡೆಸಿದ ಚಪ್ಪಾಳೆ ಮತ್ತು ಘಂಟನಾದ ಅಭಿಯಾನದ ಭಾವುಕತೆಗೆ ಒಳಗಾದ ಜನತೆ ವಾಸ್ತವವನ್ನು ಗಮನಿಸಲೇ ಇಲ್ಲ. ಮದ್ಯಪ್ರದೇಶದ ಸರ್ಕಾರವನ್ನು ಪತನಗೊಳಿಸಲು ಸಾವಿರಾರು ಕೋಟಿ ರೂಪಾಯಿ ಖರ್ಚುಮಾಡಿ ಅನೈತಿಕ ವಿಧಾನದಿಂದ ತಮ್ಮ ಪಕ್ಷದ ಸರ್ಕಾರ ಸ್ಥಾಪಿಸಲು ಶ್ರಮಿಸಿದ ಪ್ರಧಾನಿಯವರ ಸ್ವಾರ್ಥ ಜನರಿಗೆ ಕಾಣಲೇ ಇಲ್ಲ. ದೇಶೀಯ ಪರಿಸ್ಥಿತಿಗೆ ಅನುಗುಣವಾಗಿ ಕೊರೊನಾ ವಿರುದ್ಧದ ಹೋರಾಟ ಕೈಗೊಳ್ಳದೇ, ಪಾಶ್ಚಾತ್ಯ ದೇಶಗಳ ಪದ್ಧತಿಯನ್ನು ಇಲ್ಲಿಯೂ ಅಳವಡಿಸಿ ಅಂತರಾಷ್ಟ್ರೀಯ ಮನ್ನಣೆಗಾಗಿ ನಡೆಸುವ ಪ್ರಯತ್ನವನ್ನು ಜನರು ಗಮನಿಸಲೇ ಇಲ್ಲ.


ಕೇಂದ್ರ ಸರ್ಕಾರದ ಆಪ್ತವಲಯದವರು ಸಾಲಮರುಪಾವತಿ, ಮಾಡದಿರುವ ಕಾರಣಕ್ಕಾಗಿ ಸಮಸ್ಯೆಗೊಳಗಾದ ಯಸ್ ಬ್ಯಾಂಕ್‍ನ ಪುನಶ್ಚೇತನಕ್ಕಾಗಿ ಸರ್ಕಾರಿ ಸ್ವಾಮ್ಯದ ಎಸ್ ಬಿಐನ ನಿಧಿಯನ್ನು ಬಳಸಿದ್ದು ಜನರಿಗೆ ಅರ್ಥವೇ ಆಗಲಿಲ್ಲ. ಖಾಸಗಿ ಬ್ಯಾಂಕ್ ರಕ್ಷಣೆಗಾಗಿ ಒಂದೇ ವಾರದಲ್ಲಿ ಧಾವಿಸಿ ಬಂದ ಕೇಂದ್ರ ಸರ್ಕಾರಕ್ಕೆ ಆರು ತಿಂಗಳಿನಿಂದಲೂ ಪರಿತಪಿಸುತ್ತಿರುವ ಸಹಕಾರಿ ರಂಗದ ಪಿ.ಎಮ್.ಸಿ ಬ್ಯಾಂಕ್‍ನ ಗ್ರಾಹಕರು ಕಾಣುವುದೇ ಇಲ್ಲ. ಕುಸಿಯುತ್ತಿರುವ ಅರ್ಥವ್ಯವಸ್ಥೆಯಿಂದ ಸಂಕಷ್ಠಕ್ಕೊಳಗಾಗಿರುವ ಜನಸಾಮಾನ್ಯರ ಮನಸ್ಸನ್ನು ಬೇರೆಡೆ ತಿರುಗಿಸುವ ಕ್ರಮವಾಗಿ ನಡೆಸುವ ಚಪ್ಪಾಳೆ ಅಭಿಯಾನದಂತಹ ಜನಪ್ರಿಯ ಕಾರ್ಯಕ್ರಮಗಳಿಗೆ ಸುದ್ದಿ ಮಾದ್ಯಮಗಳೂ ಬೆಂಬಲ ನೀಡುತ್ತಿವೆ. ಯಾಕೆಂದರೆ ಅದರ ಮಾಲೀಕರುಗಳು ಮೊದಲ ಗುಂಪಿಗೆ ಸೇರಿದವರು.


ಜನರು ಗುಂಪುಗುಂಪಾಗಿ ಸೇರಿ ಚಪ್ಪಾಳೆ, ಜಾಗಟೆ ಬಡಿಯುತ್ತಾ ಮೆರವಣಿಗೆ ಹೋಗಲು ಮಾಧ್ಯಮಗಳ ಕ್ಯಾಮರಾಗಳು ಪ್ರೇರಣೆ ನೀಡಿ, ಸಾಮಾಜಿಕ ಅಂತರ ಕಾಪಾಡುವ ಮೂಲ ಉದ್ದೇಶವನ್ನೇ ಮರೆಸಿವೆ.
ವ್ಯಕ್ತಿ ಪೂಜೆ ಮತ್ತು ನಾಯಕರ ಕುರಿತು ಅಂಧಾಭಿಮಾನ , ಚಮಾಚಾಗಿರಿ ಮತ್ತು ನಾಯಕರ ಕುರಿತು ಚಪ್ಪಾಳೆ, ಶಂಖ ಧ್ವನಿ ಮುಂತಾದವುಗಳಿಂದ ಕೊರೊನಾ ಭೂತವನ್ನು (?) ದೂರ ಓಡಿಸಲು ಸಾಧ್ಯ. ಅಂಥವರಿಗೆ ಮಾರ್ಚ್ 22 ಅಮವಾಸ್ಯೆಯಾಗಿ ಕಾಣುತ್ತದೆ. (ಇನ್ನೂ 2 ದಿನ ತಡವಿದ್ದರೂ ಸಹ)


ಸೋಂಕು ತಡೆಗಾಗಿ ಮುಖಕ್ಕೆ ಗವಸು ಧರಿಸಲು ಮಾಧ್ಯಮಗಳ ಪ್ರೇರಣೆಯೂ ಕಾರಣ. ಸೋಂಕಿತ ವ್ಯಕ್ತಿಯು ಸೀನಿದಾಗ, ಕೆಮ್ಮಿದಾಗ ವೈರಸ್ ಗಾಳಿಯಲ್ಲಿ ಸೇರಬಾರದೆಂಬ ಕಾರಣಕ್ಕೆ ಮುಖಕ್ಕೆ ಗೌಸ್ ಧರಿಸಬೇಕು. ಆದರೆ, ಆರೋಗ್ಯವಂತರು ಮುಖದ ಗವಸು ಧರಿಸಿ ಓಡಾಡುತ್ತಾರೆ. ಇದು ಗೊಡ್ಡು ಕಂದಾಚಾರಿಗಳ ಮಡಿಧಾರಣೆಯಂತಿದೆ. ಪೂಜೆ ಮತ್ತು ಊಟದ ಸಮಯದಲ್ಲಿ ರೇಷ್ಮೆ ಬಟ್ಟೆ ಧಾರಣೆ ಒಳಿತೆಂಬ ಕಾರಣಕ್ಕೆ , ತಿಂಗಳುಗಟ್ಟಲೇ ತೊಳೆಯದೇ ಇದ್ದರೂ ಅದೇ ವಸ್ತ್ರವನ್ನು ಮಡಿ ಎಂದು ಭಾವಿಸಿ ಬಳಸುವ ರೀತಿಯಿದು. ಸೋಂಕು ತಡೆಯಲು ಮೂಗು, ಬಾಯಿ ಕಣ್ಣನ್ನು ಪದೇ ಪದೇ ಕೈ ತೊಳೆಯದೇ ಮುಟ್ಟಬಾರದು ಎಂಬುದು ಸರಿ. ಮುಖಕ್ಕೆ ಗವಸು ಧರಿಸಿದಾಗ ಆಗುವ ಅಲವರಿಕೆಯಿಂದ ಅಥವಾ ಅದನ್ನು ಸರಿಪಡಿಸಲು ಕೈ ಪದೇಪದೇ ಅಲ್ಲಿಗೇ ಹೋಗುತ್ತದೆ. ಮುಖಗೌಸನ್ನು ಪ್ರತಿಬಾರಿ ಧರಿಸುವಾಗಲೂ ಅದನ್ನು ಶುಚಿಗೊಳಿಸಲು ಸಾಧ್ಯವೇ?


ಭಾರತೀಯರಲ್ಲಿ ರೋಗನಿರೋಧಕ ಶಕ್ತಿ ಪಾಶ್ಚಾತ್ಯರಿಗೆ ಹೋಲಿಸಿದರೆ ತುಂಬಾ ಹೆಚ್ಚು. ನಮ್ಮ ಜೀವನದ ರೀತಿ, ನೀತಿಗಳು, ವಿಧಿ- ವಿಧಾನಗಳು ಆರೋಗ್ಯ ರಕ್ಷಣೆಗೆ ಪೂರಕ. ಉದಾಹರಣೆಗಾಗಿ ಕೈ ಕುಲುಕುವ ಬದಲಿಗೆ ನಮಸ್ಕಾರ. ಊಟಕ್ಕೂ ಮೊದಲು ಕೈಕಾಲು ತೊಳೆಯುವುದು, ಹೊರಗಿನಿಂದ ಬಂದು ಮನೆ ಸೇರಿದೊಡನೆ ಬಟ್ಟೆ ಬದಲಾಯಿಸುವುದು . ಪ್ರಾರ್ಥನೆ, ಪೂಜೆ ಇತ್ಯಾದಿ.


ಕೊರೊನಾ ವೈರಾಣುವಿಗೆ ನೀಡುತ್ತಿರುವ ಪ್ರಚಾರದಷ್ಟು ಅದು ಪ್ರಬಲವಲ್ಲ. ಈ ಸೋಂಕನ್ನು ಸಮರ್ಥವಾಗಿ ಎದುರಿಸುವ ಸಾಮಥ್ರ್ಯ ಸಾಮಾನ್ಯ ಭಾರತೀಯರ ದೇಹದಲ್ಲಿ, ಬದುಕಿನ ರೀತಿಯಲ್ಲಿ ಅಂತರ್ಗತವಾಗಿದೆ. ಸರ್ಕಾರ ಮತ್ತು ಮಾಧ್ಯಮಗಳು ಮಾಡಬೇಕಾದ ಮೊದಲ ಕ್ರಮವೆಂದರೆ ಜನರಲ್ಲಿ ಅನಗತ್ಯವಾದ ಭಯ ಮೂಡಿಸದಿರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರ್ಕಾರ ಕೈಗೊಳ್ಳುತ್ತಿರುವ ಪಾಶ್ಚಾತ್ಯ ದೇಶಗಳ ಅಂಧಾನುಕರಣೆಯ ಕ್ರಮಗಳು ಹಾಗೂ ಇವು ಮಾಧ್ಯಮಗಳಲ್ಲಿ ಅತಿಯಾಗಿ ವಿಜೃಂಭಿತವಾಗಿರುವುದರಿಂದ ಜನರು ಭಯಭೀತರಾಗಿದ್ದಾರೆ, ಆತಂಕಗೊಂಡಿದ್ದಾರೆ. ಆದ್ದರಿಂದಲೇ ಬೆಂಗಳೂರಿನಿಂದ ತಮ್ಮ ಊರುಗಳಿಗೆ ವಾಪಸ್ಸು ಧಾವಿಸುತ್ತಿದ್ದಾರೆ.
ಸರ್ಕಾರದ ಕ್ರಮಗಳಿಂದ ಆರ್ಥಿಕ ನಷ್ಟ ಪೀಡಿತರಿಗಾಗಿ ವಿದೇಶದ ಸರ್ಕಾರಗಳು ಲಕ್ಷ ಕೋಟಿಗಳಲ್ಲಿ ಪರಿಹಾರ ನೀಡುವ ಘೋಷಣೆ ಮಾಡಿ ಆರ್ಥಿಕ ಭದ್ರತೆಯ ಭಾವ ಮೂಡಿಸುತ್ತಿದ್ದಾರೆ. ರಾಜಕೀಯ ಲಾಭವನ್ನೇ ಗುರಿಯಾಗಿಟ್ಟುಕೊಂಡು ನಿರ್ಣಯ ಕೈಗೊಳ್ಳುವ ನಮ್ಮ ದೇಶದ ನೇತಾರರಿಂದ ಘೋಷಿಸಲ್ಪಟ್ಟಿರುವ ಕ್ರಮಗಳಸಕಾರಾತ್ಮಕ ಅನುಷ್ಠಾನಕ್ಕಾಗಿ ಜನರು ಕಾಯುತ್ತಿದ್ದಾರೆ.


ಪ್ಲೇಗ್, ಪ್ಲೂ, ಸಾರ್ಸ್, ಹಂದಿಜ್ವರ ಮುಂತಾದ ಹಲವಾರು ಖಾಯಿಲೆಗಳಿಂದ ಮಾನವ ಸಮಾಜ ಪೀಡಿತವಾಗಿ ಗೆದ್ದು ಬಂದಿತ್ತು. ಆದರೆ ಈಗಿನಂತೆ ಭಯಭೀತವಾಗಿರಲಿಲ್ಲ. ಯಾಕೆಂದರೆ ಆಗ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳು ಇಷ್ಟೊಂದು ಪ್ರಭಾವಿಯಾಗಿರಲಿಲ್ಲ.


ಪ್ರಕೃತಿ ದಯಾಮಯಿ. ದಾರಿ ತಪ್ಪಿ ನಡೆಯುವ ಮನುಕುಲವನ್ನು ನೈಜ ಪ್ರಗತಿಯ ಪಥದಲ್ಲಿ ನಡೆಸಲು ಕೊರೊನಾದಂತಹ ಸ್ಥಿತಿ ನಿರ್ಮಾಣ ಮಾಡಿ ಪಾಠ ಕಲಿಸುತ್ತದೆ. ಇಂದಿನ ಸ್ಥಿತಿ ಜಾಗತಿಕವಾಗಿ ಮಾತ್ರ ಆರ್ಥಿಕ ಹಾಗೂ ರಾಜಕೀಯ ಸ್ಥಿತ್ಯಂತರ ಮೂಡಿಸಲಿದೆ. ದೀರ್ಘಕಾಲದಲ್ಲಿ ಇದರಿಂದ ಮನುಕುಲಕ್ಕೆ ಒಳಿತೇ ಆಗಲಿದೆ.

One thought on “ಭಯವೇ ಅಪಾಯಕಾರಿ

  1. ಚಂದದ ಲೇಖನ. ಅರಿವು ಬೆಳಸದ ಲಾಕ್ ಡೌನ್ ಬರಿಯ ಬಂಧನದಂತೆ ಕಾಣುತ್ತದೆ. ಸೋಷಿಯಲ್ ಡಿಸ್ಟೆನ್ಸಿಂಗ್ ಅನ್ನೋದನ್ನೇ ಮಡಿ ಮೈಲಿಗೆ ಎಂದರೆ ವೈಚಾರಿಕರು ಸಿಟ್ಟಿಗೇಳುತ್ತಾರೆ. ತಿಳುವಳಿಕೆ ಹೇಳಬೇಕಿದ್ದ ಮಾಧ್ಯಮಗಳೇ ಭಯಂಕರ ಪುಕಾರನ್ನೇ ಸತ್ಯ ಎನ್ನುತ್ತಿರುವ ವರ್ತಮಾನದಲ್ಲಿ ದುರಿತವೊಂದೇ ಕಾಣುತ್ತಿದೆ.

Leave a Reply

Back To Top