ಗಝಲ್
ಡಾ.ಗೋವಿಂದ ಹೆಗಡೆ
ನಮ್ಮ ಪೇಲವ ನಗುವ ಕಂಡು ನಗುತಿರುವನೇ ದಿನಕರ
ನಿಸ್ತೇಜ ಬದುಕನು ಕಂಡು ಮರುಗಿರುವನೇ ದಿನಕರ
ವಸಂತ ಬಂದಿದ್ದಾನೆ ನಿಜ, ಎಂದಿನಂತಿಲ್ಲ ದಿನ
ನಮ್ಮ ಗೋಳನು ಕಂಡು ಕರಗಿರುವನೇ ದಿನಕರ
ಅವನೋ ಧಗಧಗಿಸಿದ್ದಾನೆ ಎಂದಿನ ಉಗ್ರತೆಯಲ್ಲಿ
ಹೂಕರಗಳಿಂದ ಎತ್ತಿ ನಮ್ಮ ಮುದ್ದಿಸುವನೇ ದಿನಕರ
ಅವನಿಂದಲೇ ನಳನಳಿಸಿದೆ ಇಳೆ, ಎಲ್ಲರ ಬಾಳು
ಬಂದಿರುವ ಸಂಕಟಕೆ ಮದ್ದರೆಯುವನೇ ದಿನಕರ
ಹೆಣ ಬಣಬೆ ಬಿದ್ದಿದೆ ಜಗದ ಬೀದಿಬೀದಿಗಳಲ್ಲಿ
ಭರವಸೆಯ ಕಿರಣ ಸುರಿದು ಪೊರೆಯುವನೇ ದಿನಕರ
ಕತ್ತಲು ಸರಿದು ಬೆಳಕು, ಲೋಕದ ನಡೆ ‘ಜಂಗಮ’
ಆಪದಗಳ ಕಳೆದು ನಲವ ಎರೆಯುವನೇ ದಿನಕರ
********
ಕತ್ತಲು ಕಳೆದು ಬೆಳಕಿನ ನಿರೀಕ್ಷೆಯ ಕವಿತೆ, ಚೆನ್ನಾಗಿದೆ.